Sunday, 8 November 2015

ಆತ್ಮದೆಚ್ಚರದ ಪಣತೆಯ ಮಿಣುಕು.....!!

ಬದುಕೆಂಬುದು ಬೆಳಗಂತೆ ಪ್ರತಿ ದಿನವೂ ಹೊಸತು ಹೊಸತೇ. ಈ ಮಧ್ಯ ಬೇಸರ,ಬೇಜಾರುಗಳೆಂಬ ಭ್ರಮೆಗಳಿವೆಯಲ್ಲ ಅದು ಸುಡುವ ಸೂರ್ಯನ ಅಡ್ಡಗಟ್ಟಿ ಕತ್ತಲ ಭಯ ಹುಟ್ಟಿಸುವ ಗ್ರಹಣದಂತೆಯೇ. ಗ್ರಹಣದ ಕಾಲ ಮಿತಿ ಮಾತ್ರ ನಮ್ಮಾಯ್ಕೆ.  ಇದೇ ಬೇಸರವೆಂಬ ಭೂತದ ಬೆನ್ನತ್ತಿ ಹೋದರೆ ಅದಕ್ಕೆ ಅರ್ಥವಿರುವುದಿಲ್ಲ, ಅದು ಬಂದಿದಕ್ಕೆ ಕಾರಣಗಳೇ ಇರುವುದಿಲ್ಲ.

ನಿಜಕ್ಕೂ ನಂಗೆ ಈ ಭೂತಗಳು ನನ್ನನ್ನಾಳಬಿಡಲು ಇಷ್ಟವಿಲ್ಲ. ಅದಕ್ಕೆ ದೇವರೆಂದು ಹೆಸರಿಟ್ಟುಕೊಂಡು ಕಣ್ಣಿಗೆ ಕಾಣದ ಆದರೆ ಸದಾ ಅಂತರಂಗದಲ್ಲಿ ನಗುವ ಬೆಳಗಿಸುವ ನೀನೆಂಬ ದೀಪ ಹಚ್ಚಿಟ್ಟು ಮಾತಿಗಿಳಿದೆ...

ನನ್ನ ನಾ ಗೆಲ್ಲುವುದೇ ಗೆಲುವೆಂದು ನಂಬಿ ಬದುಕಿಗೆ ಮಿತಿಗಳೇ ಬೇಡ ಎಂದು ನಡೆಯ ಹೊರಟ ಈ ಅಭಿಸಾರಿಕೆಗೆ ತನ್ನ ಬದುಕಿನಿಂದಲೇ ಒಂದಷ್ಟು ಯೋಗ್ಯತೆಯ ದಕ್ಕಿಸಿಕೊಳ್ಳುವುದ ಕಲಿಸಿಬಿಡು. ನನ್ನಂತರಂಗದ ಕನ್ನಡಿಯಲ್ಲಿ ಯಾವುದೇ ವ್ಯತ್ಯಯಗಳಿಲ್ಲದಂತೆ,ಕಲೆಗಳಿಲ್ಲದಂತೆ ನನ್ನ ನಾ ಪರಿಪೂರ್ಣವಾಗಿ ಕಾಣುವಂತಹ ಸೌಂದರ್ಯವನ್ನು ಕೊಡು. ಯಾರದೋ ತಪ್ಪು ಒಪ್ಪುಗಳ ಠೀಕಿಸದ, ನಾನೆಂದರೆ ನನ್ನ ಬದುಕು ಮಾತ್ರ ಎಂಬುದ ಕಲಿಸಿಕೊಡು. ಸಾವಿರ ತಪ್ಪುಗಳ ಮಾಡಿಯೂ ಗೆಲುವೊಂದು ಸಿಕ್ಕಿದ್ದೇ ಆದರೆ ಅಂತಹ ಗೆಲುವನ್ನು ತಿರಸ್ಕರಿಸಿ ತಪ್ಪುಗಳನ್ನು ತಿದ್ದಿಕೊಳ್ಳುವ, ಆ ತಪ್ಪುಗಳಿಂದಲೇ ಒಂದಷ್ಟು ಪಾಠ ಕಲಿಯುವ ಒಳ್ಳೆಯ ಶಿಷ್ಯನೊಬ್ಬನನ್ನು ನನ್ನೊಳಗೆ ಸದಾ ಬದುಕಿಸಿಬಿಡು.

ನನ್ನಿಂದಲೇ ಉತ್ತರ ಕಂಡುಕೊಳ್ಳುಬಹುದಾದ,  ನಾನೇ ಸೃಷ್ಟಿಸಿಕೊಂಡಿರುವ ನನ್ನದೇ ಬದುಕಿನ ದ್ವಂದ್ವಗಳಿಗೆ ವಿನಾಕಾರಣ ನಿನ್ನ ಸಹಾಯ ಕೇಳಬಂದರೆ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಡು. ನಿನ್ನ ಮೇಲೆ ಒಂದು ಕ್ಷಣ ಬೇಸರಿಸಿಕೊಂಡೇನು ಆದರೆ, ಬೆಂಕಿ ಹೊತ್ತಿಸಿದವಗೆ ಅದರಲ್ಲಿ ಅನ್ನ ಬೇಯಿಸುವುದೂ ತಿಳಿದಿರಬೇಕು, ಜೊತೆಗೆ ಅದೇ ಬೆಂಕಿಯನ್ನು ನಂದಿಸುವುದೂ ತಿಳಿದಿರಬೇಕು  ಎಂಬುದನ್ನು ಕಲಿಸಿಕೊಡು. ಯಾವ ಪ್ರಯೊಜನವಿಲ್ಲದೇ ಬೆಂಕಿ ಹೊತ್ತಿಸಿದ್ದೇ ಆದರೆ ಅದು ತಪ್ಪು ಎಂಬುದನ್ನು ನಾನೇ ಅರಿತುಕೊಳ್ಳುವಂತೆ ಮಾಡು.

ನನ್ನ ಪ್ರೀತಿ ಗೆಲ್ಲುವ ಸಲುವಾಗಿ ಸದಾ ನಗೆಯ ಬುತ್ತಿಯನ್ನ ನೀನೇ ಕಟ್ಟಿಡಬೇಡ. ಎಂದಾದರೂ ಒಂದು ದಿನ ನಿನ್ನನ್ನೇ ಪ್ರಶ್ನಿಸಿಬಿಟ್ಟೇನು. ಬುತ್ತಿ ಕಟ್ಟಿಕೊಳ್ಳುವ ವಿದ್ಯೆಯನ್ನು ಕಲಿಸಿಕೊಡು. ಜೊತೆಗೆ ಗುರುವಾಗಿ ನಿರಂತರ ನನ್ನ ಬದುಕನ್ನು ಪ್ರಶ್ನಿಸುತ್ತಲೇ ಇರು. ನಿನ್ನ ಪ್ರಶ್ನೆಗೆ ಉತ್ತರ ಹುಡುಕುವ ಭರದಲ್ಲಿ ನನ್ನನ್ನೇ ನಾ ಮತ್ತೂ ಸ್ಪಷ್ಟವಾಗಿ ಕಂಡುಕೊಂಡೆನು ಬಿಟ್ಟುಬಿಡು.

ಯಾರದೋ ನೋವಿಗೆ ದನಿಯಾಗಿ ಇನ್ಯಾರದೋ ಕನಸಿಗೆ ಕಣ್ಣಾಗಿ ಆದರೆ ನನ್ನದೇ ನೋವು ನಲಿವುಗಳಿಗೆ ಕಲ್ಲಾಗಿರುವ ಶಕ್ತಿ ನೀಡು. ನನ್ನ ನೋವಿಗೆ ನಾನೇ ದನಿಯಾದರೆ ಸ್ವಾನುಕಂಪದಿಂದ ಸುಟ್ಟುಹೋದೆನು, ಅಥವಾ ಬಯಲಲ್ಲಿ ಬೆತ್ತಲಾದೇನು. ಇನ್ನು ಸದಾ ಕನಸಿಗೆ ಕಣ್ಣಾಗಿ ಕುಳಿತುಬಿಟ್ಟರೆ ವಾಸ್ತವದ ಲೆಕ್ಕ ತಪ್ಪೋಗಿ ಕಲ್ಪನೆಯ ಜಾತ್ರೆಯಲ್ಲಿ ಕಳೆದುಹೋದೆನು.

ಇನ್ನು ಎಲ್ಲವನ್ನೂ ನಿನ್ನೆದುರು ತೆರೆದಿಡುವ ಕಾರಣ ಗುಟ್ಟುಗಳಿಗೆ ರೆಕ್ಕೆ ಬರುವುದಿಲ್ಲ ಎಂಬ ನಂಬಿಕೆ ಮತ್ತು ನಿನ್ನೊಡನೆ ನನ್ನ ನಾ ವಿಮರ್ಶಿಸಿಕೊಂಡರೆ ನನ್ನೊಳಗೆ ಹೆಚ್ಚು ಸ್ಪಷ್ಟವಾದೇನು ಎಂಬ ಹುಚ್ಚು. ನೀನೆಂದರೆ ನಂಗೆ ಬೆಳಗುವ ದೀಪ ಮಾತ್ರ. ನಿಂಗಾವ ಕಟ್ಟಳೆಗಳೂ ಇಲ್ಲ, ಮಿತಿ, ಬಂಧನ, ನಿಯಮಗಳೂ ಇಲ್ಲ. ಕಣ್ಮುಚ್ಚದೇ ನಾ ನಿನ್ನ ನೋಡಬೇಕು ಆ ಕ್ಷಣ ನನ್ನಲ್ಲೊಂದು ಅರಿವಿನ ಸಂಚಾರವಾಗಬೇಕು. ನಿನ್ನ ನಾ ದೀಪವಾಗಿಸಿದಾಗೆಲ್ಲ ನೀ ನನ್ನೊಳಗೆ ಬೆಳಕಾಗಿ, ನಗುವಾಗಿ, ಅರಿವಾಗಿ, ಗುರುವಾಗಿ ಕಾಣಬೇಕು.
ಗೆಲ್ಲುವ ಶಕ್ತಿಯನ್ನು ತುಂಬಿಬಿಡು, ಇಷ್ಟಕ್ಕೂ ನನ್ನ ಗೆಲುವೆಂದರೆ ನಿನ್ನದೂ ಅಲ್ಲವಾ?

Thursday, 27 August 2015

ಒಲವೇ ನಿನಗೆ......

ಕದ್ದು ಮುಚ್ಚಿ ಬದಲಾದಂತೆ ನಾಟಕವಾಡುವ ಸತ್ತರೂ ಜೀವವಿರುವಂತೆ ತೋರುವ ಬದುಕೆಂಬ ಮಹಾನ್ ಸೂತ್ರಧಾರನ ಹೊಸ ಕಥೆಗೊಂದು ಹೊಸ ಪುಟ ತೆರೆದುಕೊಳ್ಳುವುದರಲ್ಲಿದೆ.  ಬದುಕು, ಸಾವಿರದ ಪಾಪಪ್ರಜ್ಞೆ ಅದಕ್ಕೂ ಆಳಕ್ಕಿಳಿದು ನನ್ನೊಳಗೆ ಅವಿತು ಕುಳಿತ ನಗು ಯಾವುದಕ್ಕೂ ಅರ್ಥ ಹುಡುಕಲಾರೆ,ಭಾಷ್ಯ ಬರೆಯಲಾರೆ. ಆದರೆ ಅರ್ಥ ಕಟ್ಟಿಕೊಳ್ಳಬಲ್ಲೆ ನನ್ನೊಳಗಿನ ಕನಸು ಮನಸುಗಳೊಟ್ಟಿಗಿನ ದ್ವಂದ್ವಗಳಿಗೆ ಎಲ್ಲಕ್ಕಿಂತ ನನ್ನೊಳಗಿನ ನಿನಗೆ.

ಯಾರಿಗಾಗಿಯೋ ಹೆಗಲಾಗಬೇಕು, ಒಡಲಾಗಬೇಕು ಎಂಬಂಥ ಬಯಕೆಗಳೇ ಇಲ್ಲದವಳು ನಾನು ನನ್ನೊಳಗೆ ನೋವ ಭಾವ ಕಾಡಿತೆಂದು ನಾ ಭಾವಿಸಿದಾಗ ನನ್ನ ಮಡಿಲೊಳಗೆ ನಾ ಮಲಗಿ ಸಮಾಧಾನ ಹೊಂದಿಬಿಡಬೇಕು ಎಂದುಕೊಂಡವಳು. ನನ್ನೊಳಗಿರುವುದೂ ನಾನೇ ಎಂಬ ಹುಚ್ಚುತನವೊಂದಿಂತ್ತು. ಆದರೆ ಅದ್ಯಾವಾಗ ನನ್ನ ಅವಶ್ಯಕತೆಗಳನ್ನೂ ಮೀರಿದ ಅವಲಂಬನೆಯನ್ನ ಕಲಿತುಬಿಟ್ಟಿತೋ ಅದಕ್ಕೆ ನಾನು ನೀನೆಂದು ಹೆಸರಿಟ್ಟೆ, ನಂಗೆ ನಾ ಮಾತ್ರ ಅವಶ್ಯಕತೆ ಎಂದರಿತವಳಿಗೆ ನೀ ನನ್ನೊಳಗೆ ಬಂದಿದ್ದು  ಯಾಕೋ ಇಷ್ಟವಾಗಲೇ ಇಲ್ಲ. ಅದಕ್ಕೆ  ಕೊನೆಗೊಂದು ದಿನ ನೀನೆಂದರೆ ನಾನೇ ಎಂದುಬಿಟ್ಟೆ.

ಆರೋಹ ಅವರೋಹಗಳಿಂದಲೇ ತಾನೇ ರಾಗವಾದದ್ದು ಬದುಕೂ ಸಂಗೀತವೇ ತಾನೆ.  ಕರುಳು ಕಿತ್ತು ಬರುವಂಥ ನೋವು, ಹೃದಯ ಒಡೆದುಹೋಗುವಂತ ನಗುವು. ಸಮತೆಯನ್ನ ಗೆದ್ದಷ್ಟು ಸುಲಭವಲ್ಲ ಏರಿಳಿತಗಳ ನಿಭಾಯಿಸುವುದು. ನಡೆದುಬಿದ್ದಷ್ಟು ಸುಲಭವಲ್ಲ ಬಿದ್ದೂ ನಡೆಯುವುದು.

ಮುದ್ದು,
ನಡೆಯುವುದಾದರೆ ನಡೆದುಬಿಡಬೇಕು ಒಲವ ಜೊತೆ ಕತ್ತಲಲ್ಲೂ ಪ್ರೇಮವೇ ಬೆಳಕಾದೀತು ಎಂದು ನಂಬಿದವ ನೀನು. ಆದರೆ ನಡೆಯುವುದೆಂದರೆ ಗೆಲುವೆಂಬ ನೆಂಟನ ಜೊತೆಗೊ ಅಥವಾ ನಂಟನ್ನು ಅರಸಿಯೇ ಇರಬೇಕೆಂದು ನಡೆದವಳು ನಾನಾದೆ.
ಗೆಲುವೆಷ್ಟು ದಕ್ಕಿತ್ತು ಲೆಕ್ಕದ ಅಂಕಿಗಳೆಲ್ಲ ಕಳೆದೊಗಿದ್ದವು. ಸರಿ ಒಲವಾದರೂ ದಕ್ಕಿತ್ತಾ? ಗೊತ್ತಿಲ್ಲ ಹುಡುಕುವ ಗೋಜಲಿಗೆ ಬಿದ್ದವಳಲ್ಲ.
ಆದರೆ ಅದೆಲ್ಲೊ ನಡುರಾತ್ರಿ ನೀ ಬಿಕ್ಕಳಿಸಿದರಲ್ಲಿ ನಂಗಿಲ್ಲಿ ಉಸಿರು ಕಟ್ಟಿದಂಥ ತೀವ್ರಭಾವ.
ನೀ ಅಲ್ಲೆಲ್ಲೋ ಒಂದು ಕ್ಷಣ ನಕ್ಕಿದ್ದು ಕಂಡರೂ ಖುಷಿಗೆ ಗಂಟಲುಬ್ಬುತ್ತದೆ.

ಜೊತೆ ಕೂತು ಅಳುವ ತಡೆಯದವಗೆ ನಗುವ ಸಲಹುವ ಹಕ್ಕು ಇಲ್ಲವಂತೆ. ನನ್ನದೇ ಮನದ ಮಾತು ಸೋಲು ಎಲ್ಲರನ್ನೂ ಕಸಿದುಕೊಳ್ಳುತ್ತದೆ ಆದರೆ ಗೆಲುವಿಗೆ ಯಾರ ಅವಶ್ಯಕತೆಗಳೂ ಇಲ್ಲ. ಯಾಕೆಂದರೆ ಗೆಲುವಿನ ತಾಕತ್ತೆ ಹಾಗೆ ಅದೊಂದು ಪರಿಪೂರ್ಣ ಖುಷಿಯಷ್ಟೆ. ಗೆಲುವಿಗೆ ಯಾರನ್ನೂ ಅವಲಂಬಿಸುವುದು ಗೊತ್ತಿಲ್ಲವೆನೋ. ಗೆಲುವೆಂಬುದು ಒಂಟಿ ಭಾವವನ್ನು ಮರೆಸಿಬಿಡುವಂಥದ್ದೊಂದು ಔಷಧವೇ ಇರಬಹುದೆನೊ.?!
ಯಾರೊ ಕೈ ಹಿಡಿದು ಕತ್ತಲಲ್ಲೂ ಜೊತೆ ನಡೆಯುತ್ತಾರೆ ಎಂಬ ಕಾರಣಕ್ಕೆ ಬೆಳಕೆಂಬುದ ಮರೆಯಬಾರದು ಅಲ್ಲವಾ?

ಈ ದಿನ ನಿನ್ನ ಜೊತೆಗಿದ್ದು ಖುಷಿಯ ಸಾಗರದಲ್ಲಿ ಅಲೆಯನ್ನೊಂದು ಎಬ್ಬಿಸಿಬಿಡಬೇಕಿತ್ತು. ಎಲ್ಲರಿಗಿಂತ ಮೊದಲ ಹಾರೈಕೆ ನನ್ನದೇ ಇರಬೇಕಿತ್ತು.
ಆದರೆ ಜೊತೆಯಿದ್ದು ಹಾರೈಸಲಾರೆ ಇಲ್ಲಿಂದಲೇ ಎಲ್ಲವನ್ನೂ ಕನಸು ಕಾಣುತ್ತೇನೆ. ನಗುವೊಂದೆ ತುಂಬಿರಲಿ ಎಂದು. ನೆನಪಾಗದಿದ್ದರೂ ಗೆದ್ದೊಮ್ಮೆ ನಕ್ಕುಬಿಡು. ನಾನಿಲ್ಲಿ ಹಗುರಾದೇನು. ಬದುಕು  ಬಂಗಾರವಾಗಲಿ. ಗೆಲುವಿನ ನಗುವು ಪ್ರತಿಧ್ವನಿಸಲಿ.

Monday, 3 August 2015

ಭಾವಿಸಿಕೊಂಡಷ್ಟೆ ಬಂಧ.....

ಬದುಕು ಬಯಲಾಗ ಹೊರಟಾಗೆಲ್ಲ ಅದೆಷ್ಟೋ ಪರಿಚಯಗಳಾಗುತ್ತವೆ. ಕೆಲವೊಬ್ಬರು ತುಂಬಾ ಅಲ್ಪ ಕಾಲದಲ್ಲಿಯೇ ಇಷ್ಟವಾಗುತ್ತಾರೆ. ಪರಿಚಯಗಳ ಆರಂಭದಲ್ಲಿ ತುಂಬಾ ಮಾತನಾಡಬೇಕು ಎಂಬ ಬಯಕೆಯಾಗುತ್ತದೆ. ಬಯಕೆಯ ಕಾರಣ ವ್ಯಕ್ತಿಯೆಡೆಗಿನ ಕುತೂಹಲವೂ ಇರುತ್ತದೆ ಕೂಡ.  ಹಾಗಂತ ಪರಿಚಯಗಳೆಲ್ಲವೂ ಸಂಬಂಧಗಳಾಗಬೇಕು ಎಂಬ ಭಾವವೇ ಇದ್ದೀತು ಅಂತಲೂ ಅಲ್ಲ. ಬದುಕ ಪೂರ್ತಿ ಇರದಿದ್ದರೂ ಬದುಕಿಗೆ ಬೇಕು. ಒಂದಷ್ಟು ಕ್ಷಣಗಳ ಖುಷಿಯ ಕಾರಣಕ್ಕಾದರೂ.

ಹೊಸದು ಎಂಬುದರ ಆಕರ್ಷಣೆಯೇ ಹಾಗೆ ಅನ್ನಿಸುತ್ತೆ. ಅದು ವ್ಯಕ್ತಿಯಾಗಲಿ ವಸ್ತುವಾಗಲಿ. ಹೊಸದಾಗಿ ಮೊಬೈಲ್ ಕೈಗೆ ಬಂದಾಗ ನಿದ್ದೆಯೂ ಬರುವುದಿಲ್ಲ. ಎಲ್ಲವನ್ನೂ ಹುಡುಕಬೇಕು ತಿಳಿದುಕೊಳ್ಳಬೇಕು. ಎಲ್ಲೆಲ್ಲೊ ಇಡವುದಕ್ಕೂ ಭಯವೇ ಕಳೆದೊಗುತ್ತದೆ ಎಂದು. ಇದೆಷ್ಟು ಕಾಲ ಇರುತ್ತದೆ ? ಇರುವುದೆಲ್ಲವನ್ನೂ ಹುಡುಕಿ ತಿಳಿದುಕೊಳ್ಳುವಷ್ಟು ದಿನ ಮಾತ್ರ.
ಕೆಲವೊಂದು ಸಂಬಂಧಗಳಲ್ಲೂ ಹೀಗೆಯೇ ವರ್ತಿಸುತ್ತೇವಾ ನಾವುಗಳು? ಇರಬಹುದೇನೋ ಗೊತ್ತಿಲ್ಲ . ಅದ್ಯಾರೋ ಪರಿಚಯವಾಗುತ್ತಾರೆ. ತೀರಾ ಆಪ್ತರಾದ ಭಾವನೆ ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ನಾವೂ ಒಳ್ಳೆಯವರೆಂಬಂತೆ ಒಂದಷ್ಟು ಮುಖವಾಡ ಹಾಕಿಕೊಳ್ಳಬೇಕು. ಅವರು ನಮಗೆ ತೀರ ಆಪ್ತ ಎಂದು ನಮ್ಮನ್ನು ನಾವೇ ನಂಬಿಸಿಕೊಳ್ಳಬೇಕು. ಕಳೆದೊದರೆ ಎಂಬ ಭಯಕ್ಕೆ ಉಸಿರುಕಟ್ಟುವಷ್ಟು ಬಚ್ಚಿಡಬೇಕು.
ಬದುಕಿಗೆ ಬಂದ ಸಾವಿರ ಸಂಬಂಧಗಳಿಗಿಂತ ಇದೇ ಶ್ರೇಷ್ಠ ಎಂದುಕೊಳ್ಳಬೇಕು. ನಿಜವೆಷ್ಟಿರುತ್ತದೆಯೊ ಆದರೆ ಎಲ್ಲವನ್ನೂ  ಭಾವಿಸಿಕೊಳ್ಳುಬೇಕು.

ಸಣ್ಣ ಪುಟ್ಟ ಬೇಸರಗಳನ್ನೂ ಖುಷಿಗಳನ್ನೂ ಹೇಳಿಕೊಳ್ಳಬೇಕು. ಒಂದಷ್ಟು ಸಮಾಧಾನ ಹೇಳಬೇಕು, ನಮ್ಮ ಖುಷಿಗಳಿಗೆ ಅವರೂ ನಗಬೇಕು. ನಮ್ಮೊಳಗಿನ ಅಹಂನ ಹಸಿವಿಗೊಂದಷ್ಟು ಆಹಾರಬೇಕು. ಮಾಡಿದ್ದೆಲ್ಲವೂ ಸರಿ ಎನ್ನಬೇಕು. ತಪ್ಪು ಎಂದರೊ ಮುಗಿದಂತೆ. ಯಾಕೆ ಹೀಗೆಲ್ಲ ಆಗುತ್ತದೆ ನಮ್ಮ ಅವಶ್ಯಕತೆಗಳಿಗಾಗಿ ಸಂಬಂಧಗಳನ್ನು ಕಟ್ಟಿಕೊಂಡಿರುತ್ತೇವಾ? ಅಥವಾ ನಮ್ಮೊಡನಿರುವ ವ್ಯಕ್ತಿಗಳೆಂದರೆ ಹೀಗೆ ಇರಬೇಕು ಎಂಬ ಗಡಿ ರೇಖೆ ಎಳೆದುಕೊಂಡು ವಾಸ್ತವದ ಚಿಂತನೆಯನ್ನೇ ಮಾಡದೆ ಬದುಕುತ್ತೇವಾ?

ತಪ್ಪಾ ಸರಿಯಾ? ಒಳ್ಳೆಯವರಾ ಕೆಟ್ಟವರಾ? ಎಷ್ಟು ಬೇಕು ? ಬದುಕಿಗೆ ಆಯ್ಕೆಯಾ ಅವಶ್ಯಕತೆಯಾ? ಎಷ್ಟೋ ಪರಿಚಯಗಳು ಬಂಧವಾಗುವ ಕಾಲಕ್ಕೆ ಇದ್ಯಾವುದರ ಪರಿವೆಯೂ ಇಲ್ಲದೆಯೇ ಎಷ್ಟೆಲ್ಲ ಹತ್ತಿರಕ್ಕೆ ಹೋಗಿಬಿಡುತ್ತೇವೆ. ಒಟ್ಟಿನಲ್ಲಿ ಅದು ಆ ಕ್ಷಣದ ತೀವ್ರತೆ. ಮೋಸವಾಯಿತಾ? ಬೇಡಬಿಟ್ಟುಬಿಡಬೇಕು ಎನಿಸಿತಾ?  ಬಿಟ್ಟುಬಿಡಬಹುದು, ಯಾವುದೂ ಕಷ್ಟವಲ್ಲ ಯೋಚಿಸಿದರೆ. ಆದರೆ, ಅಲ್ಲಿ ನಿಜಕ್ಕೂ ನೋವಾಗುವುದು ಮೋಸವಾಯಿತು ಎಂಬ ಭಾವ, ಎಷ್ಟೊಂದು ಹಚ್ಚಿಕೊಂಡಿದ್ದೆ ಈಗ ಬಿಡಬೇಕಲ್ಲ ಎಂಬ ಭಾವ. ಅಲ್ಲಿಗೆ ಬದುಕ ವಾಸ್ತವವನ್ನ ಒಪ್ಪಿಕೊಳ್ಳಲಾಗುತ್ತಿಲ್ಲ, ಭವಿಷ್ಯಬೇಕಾಗಿಲ್ಲ. ಇತಿಹಾಸ ನೆನಪಾಗಿ ಕಾಡುತ್ತದೆ. ಮತ್ತದೇ ಗೊಂದಲ ಇನ್ನೊಂದಿಷ್ಟು ನೋವು.

ಯಾರದೊ ನೆನಪು ಕಾಡುತ್ತೆ, ಮರೆಯಲು ಸಾಧ್ಯವೇ ಇಲ್ಲ ಎಂದು ಕೊರಗುತ್ತೇವೆ. ಆದರೆ ನಿಜವಾದ ಕಾರಣ ನಾವು ಮತ್ತು ನಾವು ಯೋಚಿಸುವ ರೀತಿ ಮಾತ್ರವೇನೋ. ಮರೆತರೆ ಹಚ್ಚಿಕೊಂಡದ್ದೆ ಸುಳ್ಳೆಂದು ನಮ್ಮೊಳಗೆ ಯಾರೋ ಕೇಳಿದಂಥದ್ದೊಂದು ಭಯ. ಮತ್ತಲ್ಲಿಗೆ ಮರೆತಿಲ್ಲ ಮರೆಯಲಾಗುತ್ತಿಲ್ಲ ಎಂಬ ಕಾರಣ ಕಟ್ಟಿಕೊಂಡು ಬದುಕಬೇಕು.

ನಿಜ, ತೀವ್ರತೆ ಕಡಿಮೆಯಾಯಿತೆಂದರೆ ಬಂಧ ಹಳಸಿತೆಂದಲ್ಲ. ಒಡನಾಟದ ಅವಶ್ಯಕತೆಗಳನ್ನೂ ಮೀರಿ ಸಲಹಿಕೊಳ್ಳುವ ಶಕ್ತಿಬಂದಿದೆ ಎಂದೊ ಒಂದಷ್ಟು ಪ್ರಬುದ್ಧತೆಯೂ ಬಂದಿದೆ ಎಂದೊ ಇರಬಹುದು. ಎಷ್ಟೋ ಸಲ ಇದೂ ಕೂಡ ನಮಗೆ ನಾವೇ ಮಾಡಿಕೊಳ್ಳುವ ಸಮಾಧಾನ. ಅಥವಾ ವ್ಯಕ್ತಿ ಬೇಡ ನೆನಪುಗಳಲ್ಲಿಯೆ ಬದುಕುತ್ತೇನೆ ಎಂದರೆ ಆಪ್ತತೆಯಿರುವುದು ಸಂಬಂಧದ ಒಡನಾಟದಲಲ್ಲ, ಅದರ ಸುತ್ತ ಹೆಣೆದಿರುವ ಕಲ್ಪನೆಯದ್ದು ಎಂದು. ಅಲ್ಲಿಗೆ ಹಚ್ಚಿಕೊಂಡಿರುವುದು ವ್ಯಕ್ತಿಯನ್ನಲ್ಲ ಅವನೆಡೆಗೆ ಆಪ್ತತೆ ಇದೆ ಎಂಬ ಭಾವವನ್ನು ಮಾತ್ರ.

ಬೆಳಕಿದ್ದಷ್ಟೆ ಕಾಣುವುದು ಕತ್ತಲಲ್ಲೂ ಬೆಳಕಲ್ಲಿ ಕಂಡಷ್ಟೇ ಸ್ಪಷ್ಟವಾಗಿ ಕಾಣುತ್ತದೆ ಎನ್ನುವುದು ಭ್ರಮೆಯಷ್ಟೆ. ಬಂಧಗಳೂ ಅಷ್ಟೇ  ಭಾವಿಸಿಕೊಂಡಷ್ಟೆ ದಕ್ಕುವುದು. ಎಷ್ಟು ಭಾವಿಸಿಕೊಳ್ಳಬೇಕು ಎನ್ನುವುದು ನಮ್ಮ ನಮ್ಮ ಮನಸ್ಥಿತಿಗೆ ಬಿಟ್ಟದ್ದು. ಯಾರು ಯಾರನ್ನೂ ಬಿಟ್ಟೋಗುವುದಿಲ್ಲ, ಯಾರೂ ಯಾರ ಜೊತೆಯಿರುವುದೂ ಇಲ್ಲ. ಎಲ್ಲ ನಮ್ಮ ನಮ್ಮ ಭಾವನೆ ಆಕ್ಷಣದ ನಮ್ಮ ಅವಶ್ಯಕತೆ ಮತ್ತು ಅಭಿವ್ಯಕ್ತಿ ಅಷ್ಟೇ.

Monday, 13 July 2015

ದಾರಿ ಹಲವಾದರೂ ಆಯ್ಕೆಯ ಅವಕಾಶ ಒಂದೇ....

ನನ್ನೊಳಗೆ ಯಾವಾಗಲೂ ಮತ್ತೆ ಮತ್ತೆ ಕೇಳುವ, ಪ್ರತಿಧ್ವನಿಸುತ್ತಲೇ ಇರುವ ಯಾರೋ ಹೇಳಿದ ಮಾತೊಂದಿದೆ. "ಸಾಧ್ಯತೆಗಳ ಬಗ್ಗೆ ಯೋಚಿಸುವುದು ಸಾಧ್ಯತೆಗಳೇ ಇಲ್ಲದಿದ್ದಾಗ ಇರುವ ಬದುಕನ್ನು ಒಪ್ಪಿಕೊಳ್ಳುವುದು" ಎಂದು. ಸೋತಾಗ ಸೋಲನ್ನು ಒಪ್ಪಿಕೊಳ್ಳುವ ಕಾಲ ಬಂದಾಗ ಸಾಧ್ಯತೆಗಳ ಬಗ್ಗೆ ಯೋಚಿಸಲೂಬಾರದು ಒಪ್ಪಿಕೊಂಡುಬಿಡಬೇಕು. ಆದರೆ ಅಷ್ಟೇ ವೇಗವಾಗಿ ಮುಂದಿನ ಗೆಲುವಿನ ಸಾಧ್ಯತೆಗಳ ಬಗ್ಗೆ, ಆ ದಾರಿಯೆಡೆಗಿನ ಆಯ್ಕೆಗಳ ಬಗ್ಗೆ ಯೋಚಿಸಬೇಕು.

ನನ್ನೊಳಗೆ  ಹೀಗೆಲ್ಲ ಯೋಚನೆಗಳು ಬಂದಾಗ ಇದ್ದಕ್ಕಿದ್ದಂತೆ ಎರಡು ಪಾತ್ರಗಳು ಹುಟ್ಟಿಕೊಂಡವು. ಒಂದು ಕಾಡಿನ ರಾಜ ಹುಲಿ ಮತ್ತೊಂದು ನಂಬಿಕೆಯ ರಾಜ ನಾಯಿ.  ಇಬ್ಬರೂ ಮಿತ್ರರು. ಇಬ್ಬರೂ ಒಂದು ಗುಡ್ಡ ಹತ್ತಿ ಎಲ್ಲಿಯೋ ದೂರದೂರಿಗೆ ಬೇಟೆಗೆ ಹೊರಟಿರುತ್ತಾರೆ. ತುಂಬಾ ಸುಸ್ತಾಗಿ, ಹಸಿವಾಗಿ,  ಬಳಲಿಬೆಂಡಾದ ಅವಕೆ ದೂರದಲ್ಲೊಂದು ಮನೆ ಕಾಣುತ್ತದೆ. ಅದೊಂದು ಬಡ ಭಿಕ್ಷುವಿನ ಮನೆ. ಇಬ್ಬರೂ ಮನೆಯೊಳಗೆ ಹೋಗಿ ಊಟ ಕೇಳುತ್ತಾರೆ. ಅಲ್ಲೇನಿರಲು ಸಾಧ್ಯ? ಬಡಭಿಕ್ಷು ಒಂದು ಮುಷ್ಟಿ ಅನ್ನ ಒಂದಷ್ಟು ಹಾಲು ನೀಡುತ್ತಾನೆ.  ನಾಯಿಗೆ ಇನ್ನು ಊಟವೇ ಸಿಗುವುದಿಲ್ಲ ಎಂದೆನಿಸಿಬಿಟ್ಟಿತು.  ಆ ಕ್ಷಣಕ್ಕೆ ಯಾವುದಾದರೂ ಸರಿಯೇ ಅದಕ್ಕೆ ಸಾಧ್ಯತೆಗಳ ಬಗ್ಗೆ, ಆಯ್ಕೆಯ ಬಗ್ಗೆ ಯೋಚಿಸಲು ಬರುವುದೂ ಇಲ್ಲ. ಆದರೆ,  ಹುಲಿ ಅದಕ್ಕೆ ಹಸಿ ಮಾಂಸವೇಬೇಕು. ಮಾಂಸ ಸಿಗುವುದಿಲ್ಲ ಎಂದು ಅನ್ನ ತಿನ್ನುವುದದಕ್ಕೆ ಗೊತ್ತೆ ಇಲ್ಲ. ಹುಲಿಯ ಗಮ್ಯ ಮಾಂಸದೂಟವೇ, ಆದರೆ ಅದಕ್ಕಿಲ್ಲಿ ಆಯ್ಕೆಯೆ ಇಲ್ಲ ಇರುವುದನ್ನ ಒಪ್ಪಿಕೊಳ್ಳುವುದೊಂದೆ ಉಳಿದಿರುವುದು,  ಅಂದರೆ ನಾಯಿಯೊಡನೆ ತಾನೂ ಅನ್ನ ತಿನ್ನಬೇಕು, ಅದು ಅದರಿಂದ ಸಾಧ್ಯವಿಲ್ಲ. ಸಾಧ್ಯತೆಗಳೇನು ಹಸಿದು ಮಲಗಬೇಕು ಇಲ್ಲ ಅಲೆಯಬೇಕು, ಹುಡುಕಬೇಕು  ಅಷ್ಟೇ.  ಸುಮ್ಮನೆ ಕುಳಿತುಕೊಂಡು ಯೋಚಿಸಿತು ಹಸಿವು ಮಲಗ ಕೊಡಲಿಲ್ಲ. ಹುಡುಕಬೇಕು, ತಿಂದುಂಡು ಬದುಕಬೇಕು ಎನಿಸಿತು. ಇದ್ಯಾವುದನ್ನೂ ಯೋಚನೆಯೇ ಮಾಡದ ನಾಯಿ ಭಿಕ್ಷು ಕೊಟ್ಟ ಅನ್ನ ಮತ್ತು ಹಾಲನ್ನು ಸ್ವಲ್ಪವೂ ಬಿಡದೆ ತಿಂದು  ಒಳಗೊಳಗೆ ಬಿಗಿತ್ತು ತಾನೇ ರಾಜನಂತೆ ಗೆದ್ದ ಭಾವದಿಂದ. ಹಸಿದ ಹುಲಿ ಅಲ್ಲಿಂದ ನಿಧಾನಕ್ಕೆ ಹೊರಬಂದಿತು.  ಹಸಿವು ಹಿರಿದಾಗುವುದು ಊಟ ಮಾಡುವವರ ಕಂಡು ನಮಗಿಲ್ಲದಿರುವಾಗಲ್ಲವೇ? ಮಾಂಸವನ್ನೇ ತಿನ್ನುವುದು ಹುಲಿಯ ಬದುಕಿನ ನಿಯಮ.  ಗೆಲುವಿನ ದಾರಿ ಎದುರೇ ಇದ್ದರೂ ಸೋತಂತೆ, ಏನೂ ಇಲ್ಲವೆಂಬಂತೆ ಮಲಗುವುದದಕ್ಕೆ ತಿಳಿದಿಲ್ಲ.  ಯಾವ ದಿಕ್ಕಿನಲ್ಲಿ ಊಟ ಸಿಗಬಹುದು ಎಂಬುದು ಸಾಧ್ಯತೆಯ ಹುಡುಕಾಟ.  ಹುಡುಕುತ್ತಾ ಹೋದ ಹುಲಿಗೆ ಕೊಬ್ಬಿದ ಜಿಂಕೆಯೊಂದು ಆ ದಿನಕ್ಕೆ ಆಹಾರವಾಯಿತು.

ಈ ಕಡೆ ಹಾಲನ್ನ ತಿಂದು ಅರ್ಧಂಬರ್ಧ ಹೊಟ್ಟೆ ತುಂಬಿಸಿಕೊಂಡ ನಾಯಿ ಮತ್ತೆ ಅಲ್ಲೆ ಅಲೆಯುತ್ತಿರುವಾಗ ಭಿಕ್ಷು ಕೋಲಲ್ಲಿ ಹೊಡೆದು ಹೊರ ಅಟ್ಟುತ್ತಾನೆ. ಅಲ್ಲಿಂದ ಹೊರಬಂದ ನಾಯಿ ಒಂದು ಬೂದಿ ರಾಶಿಯ ಮೇಲೆ ಮಲಗಿದಾಗ ಅದಕ್ಕೊಂದು ಕನಸು, ಹುಲಿಗೆ ಮಾಂಸದ ಭೊಜನ ಸಿಕ್ಕಂತೆ ತಾನು ಅಳುತ್ತಿರುವಂತೆ, ಇನ್ನೆಂದು ಬೇಟೆಯಾಡದೆ ಹೀಗೆ ಬರಿ ಅನ್ನ ತಿಂದು ಅರ್ಧ ಹೊಟ್ಟೆ ತುಂಬಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದಂತೆ,  ಛೇ! ಕಡೆಗೂ ಮಾಂಸ ಸಿಗಲೇ ಇಲ್ಲವಲ್ಲ ಎಂದು ಕೊಳ್ಳುತ್ತಿರುವಷ್ಟರಲ್ಲೇ ಎಚ್ಚರವಾಯ್ತು ,  ಅದರೊಡನೆ ಮುಂದಿನ ಮನೆಯ ಅನ್ನದ ನೆನಪೂ.....

ಸಮಸ್ಯೆಯೊಂದು ಬಂದಾಗಲೂ ಹೀಗೆ ಪರಿಹಾರದ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು ನಿಜ ಆದರೆ ಗೆಲುವಿನ ಬಗ್ಗೆ ಯೋಚಿಸದೆ ಇರುವುದನ್ನೆ ಒಪ್ಪಿಕೊಳ್ಳಬೇಕು ಎಂದೇನೂ ಇಲ್ಲ. ಒಂದು ಉತ್ಕಷ್ಟ ಗೆಲುವಿನ ಹೋರಾಟ ಮಾಡಬೇಕು. ಮುಂದಿನ ದಾರಿ ಏನು?  ಅದರಲ್ಲಿ ಬರುವ ಆಯ್ಕೆ ಅಲ್ಲಿರುವ ಕಲ್ಲು, ಮುಳ್ಳು ಹೀಗೆ ಎಲ್ಲದರ ಬಗ್ಗೆಯೂ ಯೋಚಿಸಬೇಕು.ಆಯ್ಕೆಗಳೆಷ್ಟು ಯಾವುದು ಉತ್ತಮ,  ಸೋತರೆ ಅದನ್ನು ಒಪ್ಪಿಕೊಳ್ಳುಲುಬೇಕಾದ,  ಕಟ್ಟಿಕೊಳ್ಳಬಹುದಾದ ಮನಸ್ಥಿತಿ ಏನು ಹೀಗೇ ಎಲ್ಲವನ್ನೂ ಚಿಂತನೆ ಮಾಡಬೇಕು.  ಇನ್ನು ಆಯ್ಕೆಯ ಸಾಧ್ಯತೆಗಳೇ ಇಲ್ಲವೆಂಬುದೇ ನಿಜವಾದರೆ ಒಪ್ಪಿಕೊಳ್ಳಬೇಕು.  ಒಮ್ಮೆ ಒಪ್ಪಿಕೊಂಡೆಯೊ ಹಳಸಿದ ಅನ್ನವನ್ನೇ ಚಿತ್ರಾನ್ನ ಮಾಡಿ ಹೊಸ ರುಚಿ ಎಂದು ತಿಂದಂತೆ ಬದುಕಿಬಿಡಬೇಕು.  ಸೋಲನ್ನು ಒಪ್ಪಿಕೊಳ್ಳುವುದು ಜೀವನ ನಿಜ ಆದರೆ ಗೆಲುವಿನ ಹಾದಿಯೇ ಇಲ್ಲವೆಂದು  ಸೋಲನ್ನೇ ಅಪ್ಪಿಕೊಂಡು ಕನಸುಕಾಣುವುದೊಂದೆ ಆಗಬಾರದಲ್ಲವಾ?

Tuesday, 19 May 2015

ಮನಸುಖರಾಯನಿಗೆ.....

ಓ ಅರಿವೆಂಬ ಕಡಲೇ ನಿನ್ನೊಡಲಲ್ಲಿ ಮುಳುಗುವ ಬಯಕೆಯ ನದಿ ನಾನು... 

ಸುಲಭವಲ್ಲ ಅರಿವಲ್ಲಿ ಮುಳುಗುವುದು. ಆದರೆ ಅಸಾಧ್ಯವೆಂಬುದು ನಿಜವೊ ಸುಳ್ಳೊ  ನಿರ್ಧರಿಸುವವನೂ ನಾನೆ ತಾನೆ. ಶುದ್ಧ ನದಿಯಾಗಿ ಕಡಲ ಸೇರುವುದೆಂದರೆ ಹಾದಿಕಂಡಂತೆ ಹರಿವುದಲ್ಲ ದಾರಿ ಸೃಷ್ಟಿಸಿಕೊಂಡು ಹರಿಯಬೇಕು. ಅಂದರೆ ನನ್ನಲ್ಲಿ ನಿರಂತರ ಹರಿವಿರಬೇಕು - ನಿಲ್ಲದ ಸೊಲದ ಸಾಯದ ಹರಿವಿನ ಹಸಿವಿರಬೇಕು.... 

ಮನವೇ ,

ನಿನ್ನ ನಗುವಿನ ದಿನಗಳ ಉತ್ಪಾದಕ ನೀನೇ ಎಂಬುದು ನಿಜವಾದರೆ ನೀನೊಬ್ಬ ಅಪ್ಪಟ ಕಿವುಡನಾಗಬೇಕು - ನಿನ್ನೊಳಗಣ ಹಸಿವ ಕೊಲ್ಲುವ ಹೊರಗಿನ ಹಾಳು ಗದ್ದಲಗಳಿಗೆ. ನೀನೊಬ್ಬ ಮೂಗನಾಗಬೇಕು - ದಾರಿ ಬದಿಯ ಕುಹಕದ ಪ್ರಶ್ನೆಗಳಿಗೆ. ಕುರುಡನಾಗಿಬಿಡಬೇಕು - ತಡೆಗೋಡೆಯಾಗಬಲ್ಲ ದಾರಿಗಡ್ಡ ನಿಂತು ಸೆಳೆಯುವ ಬಣ್ಣದ ಆಟಗಳಿಗೆ. ಯಾರಿಗೂ ನಿನ್ನನ್ನ ನಿನ್ನ ನಡೆಯನ್ನು ವಿವರಿಸುವ ಅಗತ್ಯವಿಲ್ಲ - ನಿನ್ನ ಹರಿವಿನೆಡೆಗೆ ನಿಂಗೆ ಸ್ಪಷ್ಟ ನೋಟವಿರುವವರೆಗೆ. ಕಣ್ಣಿರುವುದು ಇಂದನ್ನು ಈ ಕ್ಷಣವನ್ನು ಅರಿಯಲು, ಬರುವ ಭವ್ಯ ಭವಿಷ್ಯದ ಕನಸ ಕಟ್ಟಲು. ಹೊರತು ಸತ್ತ ನಿನ್ನೆಗಳಿಗೆ ಅತ್ತು ಕೊರಗಲಲ್ಲ. ಬಾಗಿಲಿಲ್ಲದ ಭದ್ರ ಗೊಡೆ ಕಟ್ಟು - ಎಂಥಹ ನೋವಿನ ಬಿರುಗಾಳಿಯೂ ನಿನ್ನ ಸೋಕದಂತೆ. ನೀನೇ ಒಡೆದು ಕರೆಯದ ಹೊರತು ಯಾವ ನೋವೂ ನಿನ್ನ ಸೋಕದು ಎಂಬ ಸತ್ಯ ನಿನಗೆ ಅರಿವಾಗುವಂತೆ. ಯಾವುದು ನಿನ್ನೊಳಗೆ ಗೆಲುವ ಕಟ್ಟಲು ಯೋಗ್ಯವೋ ಅದನ್ನು ಉಪಯೋಗಿಸು. ನಿರುಪಯೋಗವಾದದನ್ನ ನಿನ್ನಿಂದ ಕಿತ್ತು ಹಾಕು. ಆಗ ನೀನೂ ಹಗುರಾಗಲು ಸಾಧ್ಯ. ಭಾರ ಹೊತ್ತು ನಡೆಯಲಾರದೆ ಬೀಳುವ ಹುಚ್ಚುತನವೇಕೆ?

ಬಿದ್ದು ಬಿದ್ದು ಬುದ್ಧಿ ಬೆಳೆಯುತ್ತದೆ ಎಂಬುದು ಮಾತಿಗಷ್ಟೇ. ಬೀಳದೆಯೂ ಬುದ್ದಿ ಕಲಿಯಬಹುದು. ಯಾವುದೂ ಅಭ್ಯಾಸವಾಗಬಾರದು. ಬೀಳುವುದು, ಸೋಲುವುದು ಯಾವುದೂ. ಜಾರದೆಯೇ ಬೆಳೆಯುವುದೂ ಬೆಳವಣಿಗೆಯೇ. ಇನ್ನೂ ಚಂದದ ಬೆಳವಣಿಗೆ ಅದು. ಕಡಿದರೆ ಮರ ಹೊಸದಾಗಿ ಚಿಗುರುತ್ತದೆ ನಿಜ. ಹೊಸತನವೂ ಒಂದು ದಿನ ಹಳೆಯದಾಗುತ್ತದೆ. ಹೊಸ ಚಿಗುರಾಗಿ ಬೆಳೆಯುವುದಕಿಂತ ಬಲಿಷ್ಟವಾಗಿ ಬೆಳೆಯುವುದು ಮುಖ್ಯವಾಗಲಿ. ಅಂತೆಯೂ ಕೈಮೀರಿದ ಘಳಿಗೆಯಲಿ ಮುರಿದದ್ದೇ ಆದರೆ ಆಗ ಹೊಸದಾಗಿ ಚಿಗುರುವ ಬಗ್ಗೆ ಯೋಚಿಸಬಹುದು. ಆಗಲೂ ಇಂದಿನ ಬಲಿಷ್ಠ ಬೇರಿನ ಬೆಂಬಲ ಇದ್ದೇ ಇರುತ್ತೆ. ಯಾವುದಕ್ಕೇ ಇರಲಿ ಅಂಟಿಕೊಳ್ಳಬೇಡ, ಅಂಟಿಕೊಂಡರೆ ಅಂಟಿಕೊಂಡಷ್ಟು ದಿನ ಬಿಡಿಸಿಕೊಳ್ಳುವ ಬಯಕೆ. ಬಿಡಿಸಿಕೊಂಡರೆ  ಬಿಡಿಸಿಕೊಂಡ ಅಂಟಿನದೆ ಕನವರಿಕೆ. ಆಮೆಯಂತೆ ಬದುಕಿಬಿಡು ನೀರಲ್ಲಿದ್ದರೂ ಒದ್ದೆಯಾಗದೆ ಬಿಸಿಲಲ್ಲಿದ್ದರೂ ಬೇಯದೆ ಯಾವುದಕ್ಕೂ ಅಂಟದೆ ನಡೆಯುತ್ತಲೇ ಇರು ಬದುಕು ಬಯಲಾಗಲಿ.

ಬೆಟ್ಟಕ್ಕಿಂತ ಬಯಲಲ್ಲಿ ಆಯ್ಕೆ ಜಾಸ್ತಿ ಎತ್ತನೊಡಿದರೂ ದಾರಿಯೇ. ಯಾವ ದಿಕ್ಕಿಗೆ ನಡೆಯಬೇಕು ಎಂಬುದ ನಡೆಯಲು ಪ್ರಾರಂಭಿಸುವ ಮೊದಲು ಯೋಚಿಸು ಒಮ್ಮೆ. ಒಮ್ಮೆ ಆಯ್ದುಕೊಂಡೆಯೋ ಆಮೇಲೆ ದಾಟಿದ ತಿರುವುಗಳ ನೆನಪೂ ಬೇಡ. ಆಯಾಸ ಎಂಬುದು  ದೇಹದ ಅನಿಸಿಕೆ ಮಾತ್ರ. ಮನೊವೇಗಕ್ಕೆ ಮಾಪಕವಿಲ್ಲ. ನಿಲ್ಲದೇ ನಡೆಯುತ್ತಿರು ನಿನ್ನಿಷ್ಟದ ದಾರಿ ಸೃಷ್ಟಿಯಾದೀತು.

ನಿಂತವರ ನೋಡಲೂಬೇಡ, ನೀ ನಿಂತಲ್ಲೇ ನಿಂತು ಇಂಗಿಬಿಡುತ್ತೀಯ. ಬೆಳೆವಣಿಗೆ ಎಂದರೆ ಇಂಗುವುದಲ್ಲ ಹರಿಯುವುದು. ಹಾಗಂತ ಹರಿಯುವ ಹುಚ್ಚಿಗೆ ಬಿದ್ದು ಆತ್ಮ ಶುದ್ಧಿಯ ಜೊತೆ ರಾಜಿಯಾಗಬೇಡ - ರಾಡಿಯಾಗಿಬಿಡುತ್ತೀಯ. ನಿನ್ನ ಬದಲಾಯಿಸುವ ಅವಕಾಶವನ್ನು ಯಾರಿಗೂ ಕೊಡಬೇಡ. ಅದು ನಿನ್ನ ಹಕ್ಕು ಮಾತ್ರ. ಅವರಿವರ ತಪ್ಪು ಒಪ್ಪುಗಳು ನಿನ್ನ ದಾರಿಗೆ ಇನ್ನಷ್ಟು ಸ್ಪಷ್ಟತೆ ತರುವುದೆನಿಸಿದರೆ ಆಗ ಒಂದು ಕಡೆಗಣ್ಣ ನೋಟ ಸಾಕು ಆ ಕಡೆಗೆ. ಆದರೆ ಅವರಿವರ ದಾರಿಯೇ ನಿನ್ನದೂ ಆಗದಿರಲಿ. ನಡೆಯಲ್ಲಿ ಸಮತೆಯಿರಲಿ, ನಿರಂತರತೆಯಿರಲಿ, ನಿನಗೆ ಸಂತೃಪ್ತಿಯಿರಲಿ. ಸಾವಿರದ ನಡೆ ನಿನ್ನದಾಗಲಿ. ಸೋಲೂ ನಿನಗೆ ಸೋತೀತು. ಬೆಟ್ಟವೂ ಬಯಲಾದೀತು. ತನ್ನೊಳಗೆ ಸೇರಲು ಸಮುದ್ರವೂ ಮತ್ತೆ ಮತ್ತೆ ಕರೆತಂದೀತು.

ನಿನಗಿಂತ ವಿಶಾಲವಾದದ್ದೇನನ್ನೋ ಸೇರಿಕೊಂಡೆ ಎಂದರೆ ಅದೇ ಸಮುದ್ರವೆಂದು ಭ್ರಮಿಸಿ ನಿಂತುಬಿಡಬೇಡ. ಗೆಲುವಿನ ವೈರಿ ಒಂದಿದೆ ಅದೇ ಸಂತೃಪ್ತಿ. ಹೊಟ್ಟೆ ತುಂಬಿದವ ಹೊದ್ದು ಮಲಗುತ್ತಾನೆ. ಹಸಿವಿನ ಖಾಯಿಲೆಗೆ ಬಿದ್ದವ ನಡೆಯುತ್ತಲೇ ಇರುತ್ತಾನೆ. ನಿಂತವಗೆ, ನಿಲ್ಲುವ ಬಯಕೆ ಇರುವವನಿಗೆ ಇದು ಸುಖ. ನಿಲ್ಲುವ ಅವಶ್ಯಕತೆಯೇ ಇಲ್ಲದ ನಿಂಗೆ ಈ ಸುಖದ ಅವಶ್ಯಕತೆಯೂ ಇಲ್ಲ.  ಕಾರಣ ನೀ ಸೇರಬೇಕಿರುವುದು ಕಡಲಿನ ಒಡಲನ್ನ - ದಡವನ್ನಲ್ಲ. ಕಡಲನ್ನು ಸೇರಿ ಆಳಕ್ಕಿಳಿಯಬೇಕು ಅರಿವಿನೊಡಲಲ್ಲಿ ನೀನೇ ಕಡಲಾಗಿ ಮಾರ್ಪಾಡಾಗಬೇಕು. ಇಷ್ಟಕ್ಕೆ ಪಯಣ ಮುಗಿಯುವುದಿಲ್ಲ. ಅಲ್ಲಿಂದಲೂ ಹೊಸ ಪಯಣ ಹುಟ್ಟುತ್ತದೆ. ಒಡಲ ಆಳಕಿಳಿಯುವ ದಾರಿ ಸೃಷ್ಟಿಸಿಕೊ. ನಡೆಯುತ್ತಲಿರು ಮತ್ತೂ ಆಳಕ್ಕೆ ಬದುಕೂ ಕಡಲಾಗಲಿ. ಅಶುದ್ದತೆಯನ್ನು ದಡಕ್ಕೆಸೆದು ಶುಭ್ರವಾಗಲಿ.

ಕೊನೆಯಿರದ ದಾರಿಯಿದು - ಇದಕ್ಕೆ ಆರಂಭ ಮಾತ್ರವಿದೆ. ಸಿಗಬಾರದ, ಸಿಗಲಾರದ ಕೊನೆಯನ್ನು ಹುಡುಕಿ ಹೊರಡು ಕಳೆದುಕೊಂಡವನಂತೆ. ಕಳೆದುಕೊಂಡವ  ಮಾತ್ರ ಹುಡುಕುವುದು - ಹುಡುಕಿದವಗೆ ಮಾತ್ರ ತನ್ನನ್ನು ತಾನು ಪಡೆದುಕೊಳ್ಳುವ ಅವಕಾಶ ಸಿಗುವುದು.  
ಅಲೆಯುತ್ತಲೇ ಇರು ನಿಂಗೆ ನೀ ಸಂಪೂರ್ಣ ಸಿಕ್ಕುವವರೆಗೆ ನಿಂಗೆ ನೀನಾಗಿ ದಕ್ಕುವವರೆಗೆ. ಸುಸ್ತೆನಿಸಿದಾಗಲೊಮ್ಮೆ ಸತ್ತಂತೆ ನಟಿಸುವ ಕನಸುಗಳಿಗೆ ಆತ್ಮ ಶಕ್ತಿಯ ನೀರು ಸುರಿದು ಎಚ್ಚರಿಸು. ಗೆಲ್ಲಲೇ ಬೇಕು ಬದುಕನ್ನು ಒಂದು ಬಾರಿಯಾದರೂ - ಒಂದೇ ಒಂದು ಕ್ಷಣದ ಮಟ್ಟಿಗಾದರೂ.

Wednesday, 1 April 2015

ಮೌನ ಮಾತಿನ ಶಕ್ತಿ - ಮಾತು ಮೌನದ ಅಭಿವ್ಯಕ್ತಿ

ಮಾತು ಮತ್ತು ಮೌನ ಒಂದೇ ನಾಣ್ಯದ ಎರಡು ಮುಖದಂತೆ. ಒಂದರ ಬೆನ್ನ ಹಿಂದೆ ಒಂದಿರುವುದು ಎಷ್ಟು ಸತ್ಯವೋ.. ಹಾಗೆಯೇ ಎರಡೂ ಒಂದೇ ಕಾಲದಲ್ಲಿ ಒಂದೇ ವ್ಯಕ್ತಿಯಲ್ಲಿ ಹೊರನೋಟಕ್ಕೆ ಒಟ್ಟಿಗಿರಲು ಸಾಧ್ಯವೇ ಇಲ್ಲ ಎಂಬುದು ಅಷ್ಟೇ ಸತ್ಯವೇ ಅಲ್ಲವಾ? ಹಾಗಾದರೆ ಮಾತು ಮತ್ತು ಮೌನ ಮನುಷ್ಯನ ಬಲಹೀನತೆಗಳಾ? 
ತೀರಾ ಮೌನಿಗಳೆಲ್ಲ ಒಳ್ಳೆಯವರು ಮಾತನಾಡುವವರೆಲ್ಲ ಕೆಟ್ಟವರು ಅಂತಲಾ? ಅಥವಾ ಮೌನ ಎಂಬುದು ಅಸಹಾಯಕತೆಯಾ? ಮಾತು ಚಪಲವಾ? ಈ ಪ್ರಶ್ನೆಗಳ ಉತ್ತರ ಸಂದರ್ಭಾನುಸಾರ ಹೌದು ಮತ್ತು ಅಲ್ಲ ಎರಡೂ ಆಗಬಹುದೇನೋ...!

ನಿಜ ಎಲ್ಲರೂ ಒಂದೆರೀತಿ ಇರುವುದಿಲ್ಲ ಕೆಲವರಿಗೆ ಮೌನವೇ  ಭಾವದ ಮಾಧ್ಯಮ ಅಲ್ಲಿ ಮಾತು ಶಬ್ದವಾಗುವುದಿಲ್ಲ. ಓಂಕಾರವ ಬಿಟ್ಟು ಮತ್ಯಾವ ಸ್ವರವೂ ಇರುವುದಿಲ್ಲ. ಮೌನವಾಗಿರುವವರೆಲ್ಲ ಬೇಸರದಿಂದಲೇ ಇರುತ್ತಾರೆ ಎಂತಲೂ ಅಲ್ಲ. ಮೌನದಲ್ಲೆ ತಮ್ಮೊಳಗೊಂದು ನಗೆಯ ಬುಗ್ಗೆ ಚಿಮ್ಮಿಸಿಕೊಳ್ಳುವುದ ಕಲಿತವರೂ ಇರಬಹುದು. ಹಾಗೆಯೇ ಮೌನವಾಗಿರುತ್ತೇನೆ ಎಂಬುದರ ಅರ್ಥ ಎಲ್ಲವನ್ನೂ ಸಹಿಸಿಕೊಂಡಿರುತ್ತೇನೆ ಅಂತಾಗಬಾರದಲ್ಲ. ಯಾರೋ ನಿಷ್ಠುರವಾಗಿ ಏನಾದರೂ ಹೇಳಿದರೆ ಬೇಸರವಾಗುತ್ತದೆ ಎಂದರೆ ಹೇಳಿಬಿಡಬೇಕು ನಾನೆಂದರೆ ಹೀಗೆ ಎಂದು ಯಾರಿಗೂ ಎನ್ನನ್ನೂ ಹೇಳಲಾರೆ ನನ್ನೊಳಗೆ ನೋವು ಪಡುವುದನ್ನೂ ಬಿಡಲಾರೆ ; ಹಂಚಿಕೊಂಡು ಮುಗಿಲಂತೆ ಹಗುರಾಗಲಾರೆ ಹಿಡಿದಿಟ್ಟುಕೊಂಡು ಕತ್ತಲ ಭಾರವ ಸಹಿಸಲಾರೆ ಎಂದಾದರೆ  ಸಾಧಿಸಿಕೊಂಡ ಮೌನದಿಂದ ಪ್ರಯೋಜನವೇನು?

ಯಾರಿಗೋ ಏನೋ ಹೇಳಬೇಕು ಎಂಬ ಕಾರಣಕ್ಕೆ ನನ್ನ ಬದುಕಿನ ದಿಕ್ಕನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ ನಿಜ, ನನ್ನ ಮನದ ಮುಖ ನನ್ನ ಮನದ ಕನ್ನಡಿಯಲ್ಲಿ ಸ್ಪಷ್ಟವಾಗಿ ಕಂಡರೆ ಸಾಕು. ಆದರೆ ತೀರ ನಮ್ಮದೊಂದು ಆತ್ಮಾಭಿಮಾನವೇ ಕೊಂದವರೆದುರೂ ನಮ್ಮ ಬಗ್ಗೆ ಹೇಳಿಕೊಳ್ಳದಿದ್ದರೆ ನಮಗೆ ನಮ್ಮನ್ನು ಸಮರ್ಥಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಕಲೆತಿಳಿಯದಿದ್ದರೆ ಏನು ಕಲಿತು ಏನು ಉಪಯೋಗ? 
ಕ್ರಮೇಣ ನಮ್ಮ ಮೇಲಿನ ನಮ್ಮ ಪ್ರೀತಿ ಕಡಿಮೆಯಾಗುತ್ತದೆ.

 ಹಾಗಂತ ತೀರ ವೈಯಕ್ತಿಕ ವಿಷಯಗಳನ್ನು ಕಂಡ ಕಂಡವರಲ್ಲಿ ಹೇಳಿಕೊಂಡು ಬಯಲಲ್ಲಿ ಬೆತ್ತಲಾಗಬೇಕು ಅಂತಲ್ಲ ಅಂತಹ ಮಾತಿಗಿಂತ ಅಲ್ಲಿ ಮೌನವೇ ಅರ್ಥಪೂರ್ಣವೇನೋ... ಅಥವಾ ಮಾತಾಡಲು ಬರುತ್ತದೆ ಅನ್ನುವ ಕಾರಣಕ್ಕೆ ಮಾತಾಡಲೂಬಾರದು. ಮಾತಿಗೆ ಅದರದೇ ಆದ ತೂಕವಿರಬೇಕು, ಅರ್ಥವಿರಬೇಕು.

ಆದರೆ ಆತ್ಮೀಯರ ವಿಷಯದಲ್ಲಿ,  ಸಂಬಂಧಗಳ ವಿಷಯದಲ್ಲಿ ಮೌನ ಕೊಡುವ ಸಾವಿರ ಅರ್ಥಗಳಿಗಿಂತ ಮಾತು ಕೊಡುವ ಒಂದು ಸಮರ್ಪಕ ಕಾರಣ ಸಂಬಂಧಗಳನ್ನು ಹೆಚ್ಚು ಕಾಲ ಬಾಳಿಸುತ್ತದೆಯೇನೋ... ಸಾವಿರ ಮಾತನ್ನು ಮನದಲ್ಲೇ ಬಚ್ಚಿಟ್ಟುಕೊಂಡು ಕನಸ ಸಾಯಕೊಡಲಾರದೆ, ಜೀವ ಕೊಡಲೂ ಆಗದೆ ಕಾರಣಗಳನ್ನೂ ಮೀರಿ ವಹಿಸುವ ಮೌನಕ್ಕಿಂತ ಕಾರಣವಿಲ್ಲದೆಯೂ ಆಡುವ ಜಗಳಕ್ಕೆ ವಿಶಿಷ್ಟ ಭಾವವಿರುತ್ತದೆ. ಮಾತು ಭಾವಗಳ ಕದಡುತ್ತೆ ನಿಜ ಆದರೆ ಮೌನ ಸಂಬಂಧಗಳ ಅಂತರ ಹೆಚ್ಚಿಸುತ್ತದೆ.

ಮೌನ ಮುಗ್ಧತೆಯೂ ಅಲ್ಲ, ತುಂಬಾ ಮಾತನಾಡುವವರೆಲ್ಲ ಚೆಲ್ಲು ಚೆಲ್ಲು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವವರೂ ಅಲ್ಲ ಮೌನ ಬಂಗಾರ ಎಂದವರೇ ಮಾತು ಬಲ್ಲವನಿಗೆ ರೋಗವಿಲ್ಲ ಎಂದಿದ್ದಾರೆ. ಮಾತು ಅಭಿವ್ಯಕ್ತಿಯ ಮಾಧ್ಯಮವಾದರೆ ಮೌನ ವ್ಯಕ್ತಪಡಿಸಲಾಗದ ಹಲವು ಭಾವಗಳ ಸಂಗಮ. ಮಾತನ್ನು ಅರ್ಥೈಸಿಕೊಳ್ಳುವುದು ಸುಲಭ. ಮೌನವನ್ನು ಊಹಿಸಬಹುದಷ್ಟೆ.  ಇಷ್ಟಕ್ಕು ಮಾತು ಮತ್ತು ಮೌನ ಎರಡೂ ಮನುಷ್ಯ ತಾನು ಸಂತೋಷದಿಂದಿರಲು  ಸೃಷ್ಟಿಸಿಕೊಂಡದ್ದು ತಾನೆ?

ಮೌನ ನಮ್ಮೊಳಗನ್ನು ಬೆಳೆಸುವ ಅಸ್ತ್ರವಾಗಿ ಮತ್ತು ಮಾತು ನಮ್ಮನ್ನು ಉಳಿಸುವ ಶಸ್ತ್ರವಾಗಿ,  ಎರಡೂ ನಮ್ಮೊಳಗೆ ಹದವಾಗಿ ಬೆರೆತು ಬದುಕ ಯುದ್ಧವ ಗೆಲ್ಲುವ ಸಾಧನವಾದರೆ ಎಷ್ಟು ಚೆಂದ ಅಲ್ಲವಾ..?

Tuesday, 10 February 2015

ನಿನ್ನೊಲವ ಕನವರಿಕೆಯಲ್ಲಿ....

ನಿನ್ನನ್ನೆಲ್ಲೋ ಕಳೆದುಕೊಂಡು ಬಿಟ್ಟೆನೇನೋ ಎಂಬ ಭಯ ಕಾಡುತ್ತಿದೆ ಕಾರಣವಿಲ್ಲದೆ ದೂರ ಮಾಡುತ್ತಿರುವ ನೀನು ಮತ್ತು ಹತ್ತಿರ ಬರಬೇಕೆಂದಿದ್ದರೂ ಬರಲಾರದೆ ನನ್ನನ್ನೇ ವಂಚಿಸಿಕೊಳ್ಳುತ್ತಿರುವ ನಾನು. ನಾನೆಂದು ನನಗೇ ನಾನು ಮೋಸ ಮಾಡಿಕೊಂಡವಳಲ್ಲ.  ನನಗೆ ಬೇಕಿರುವ ನನ್ನದು ಎಂದಾದ ಎಲ್ಲ ಮತ್ತು ಎಲ್ಲರ ಪ್ರೀತಿಯನ್ನು ಬಾಚಿ - ಬಳಿದುಕೊಳ್ಳಬಲ್ಲ ಮಹಾನ್ ಸ್ವಾರ್ಥಿ ನಾನು. ಆದರೂ, ನಿನ್ನೊಬ್ಬನ ಒಲವಲ್ಲಿ ಮಾತ್ರ ಮಟ್ಟಿನ ನಿಷ್ಟುರತೆ, ಸ್ವಾರ್ಥ ಮನೋಭಾವನೆ ಸಾಧ್ಯವಾಗುತ್ತಿಲ್ಲ.

     ನಿನ್ನ ಹೆಗಲ ಮೇಲೆ ತಲೆ ಇಟ್ಟು ಪ್ರಪಂಚದ ಪರಿವೆಯೇ ಇಲ್ಲದೆ ಮಲಗುವುದು ಬದುಕಿನ ದೊಡ್ಡ ಸಂಭ್ರಮ. ನಿನಗೆ ನಾನೇನು ಅಲ್ಲದೆ ಇರಬಹುದು ಆದರೂ ನಂಗೆ ನೀನೆಂದರೆ ಒಂದು ವಿಶಿಷ್ಟವಾದ ಮಧುರ ಭಾವ. ನನ್ನೀ ಪ್ರೀತಿನ ಹೇಳಬೇಕೆಂಬ ಬಯಕೆ ಸ್ವಲ್ಪವೂ ಇಲ್ಲ.ನನ್ನ ಪ್ರೀತಿ ನನ್ನದು ನನ್ನ ಹಾಡು ನನ್ನದು’ ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುವ ಹುಡುಗಿ ನಾನು. ಹಾಗಂತ, ನಿನ್ನ ಸಾಂಗತ್ಯವೇ ಇಲ್ಲದೆ ಬದುಕಿ ಬಿಡುತ್ತೇನೆ ಎಂಬ ಹುಚ್ಚು ಹೊರಟು ಹೋಗಿದೆ. ನನ್ನೊಳಗೆ ತುಂಬಾ ಸುಸ್ತಾಗಿ ನಿನ್ನೆಡೆಗೆ ಬಂದಾಗ ನಿನ್ನದೊಂದು ಪ್ರೀತಿಯ ಸ್ಪರ್ಶಬೇಕು ನಂಗೆ

      ನನ್ನೊಳಗಿನ ನೀ ಎಂದರೆ ಇಂದಿಗೂ, ತಿರುವುಗಳ ಕಲ್ಪನೆಯೂ ಇಲ್ಲದ ದಾರಿಯಲ್ಲಿ ಕಿರುಬೆರಳ ಹಿಡಿದು ಸುಮ್ಮನೆ ಅದೆಷ್ಟೋ ದೂರ ನಡೆಸಿದ ಬರಿಗೈ ಫಕೀರ, ಬೆಳ್ಳಂಬೆಳಗ್ಗೆ ನನ್ನೊಲವ ರಾಗದ ಆಲಾಪಕ್ಕೆ ಸಾಥಿಯಾಗುವ ಷಡ್ಜ ಭಾವ, ರಾತ್ರಿಗಳಲ್ಲಿ ಚಂದ್ರನಿಗೂ ಹೊಟ್ಟೆ ಕಿಚ್ಚಾಗುವಷ್ಟು ಗಟ್ಟಿ ಬಿಗಿದಪ್ಪಿ ಲಾಲಿ ಹಾಡ ಹಾಡಿ ಕನಸುಗಳ ಕಟ್ಟಿಕೊಟ್ಟ ಬೆಳದಿಂಗಳ ಚೆಲುವ, ನಿನ್ನೆಡೆಗಿನ ಹುಚ್ಚು ಕನಸುಗಳ ಜಾತ್ರೆಯಲ್ಲಿ ನನ್ನೊಳಗೆ ನಾ ಕಳೆದು ಹೋದಾಗ "ಮಿಂಚಿ ಮುಳುಗುತಿಹ ನಶ್ವರನೆದೆಯಲಿ ಶಾಶ್ವತನೆಂದರೆ ನೀನೆ " ಎಂದು ಪಿಸುಗುಟ್ಟಿ ಭರವಸೆಯ ಬೆಳಕತಂದ ಒಲವ ಧ್ರುವತಾರೆ, ಸುಮ್ಮನೆ ಪ್ರೀತಿ ಬಂದಿತೆಂದು ಮುದ್ದಿಸಿ ಹೋಗುತ್ತಿದ್ದ ಪ್ರೀತಿಯ ಬಕಾಸುರ, ಇನ್ನೂ ಏನೇನೋ........ 
ಅದೆಲ್ಲಿಂದ ತರುತ್ತಿಯೋ ಹಸಿರು ಹಸಿರು ನೆನಪುಗಳನ್ನು ಬದುಕ ಕಟ್ಟಿಕೊಡಲಾರದವನೇ...... 
       ನಿನ್ನ ಪ್ರೀತಿಯ ನೆನಪು ಅದೆಷ್ಟಿದ್ದರೂ ಸಂತೃಪ್ತಳಲ್ಲ ನಾನುನನ್ನೊಳಗಿನ ಪ್ರೀತಿಯ ದಾಹ ಸಮುದ್ರದಂಥ ದೊಡ್ಡ ಮಟ್ಟಿನದು, ಅದಷ್ಟು ಸುಲಭಕ್ಕೆ ಇಂಗುವುದಿಲ್ಲ. ಹಾಗೆಯೇ, ಇನ್ನೊಂದು ಕಡೆ ಸಮುದ್ರದಷ್ಟು ದೊಡ್ಡ ಪ್ರೀತಿಗೆ ಪರಿತಪಿಸಿದರೆ ಎಲ್ಲಿ ಪುಟ್ಟ ಕೊಳದ ನೀರಿನಷ್ಟು ಪ್ರೀತಿಯೂ ಇಲ್ಲದಂತಾಗಿ ಬಿಟ್ಟೀತು ಎಂಬ ಭಯ. ನಿನ್ನನ್ನೆಂದು ಸಮುದ್ರವಾಗು ಸಮುದ್ರದಂಥ ಪ್ರೀತಿ ನೀಡು ಎಂದು ಕೇಳಲಿಲ್ಲ ನಾನು. ಗೊತ್ತು, ಸಮುದ್ರ ಎಂದು ಯಾರ ದಾಹವನ್ನು ತಣಿಸದು ಎಂದು ಅದೂ ಪರಿಯ ದಾಹವನ್ನು. ಅದಕ್ಕೆ ಕೊಳವಾಗು, ಕೊಳದ ನೀರಿನಷ್ಟೇ ಪ್ರೀತಿಯನ್ನಾದರೂ ನೀಡು ಎಂದರೆ ಅದಕ್ಕೂ ಒಪ್ಪದ ನಿನ್ನೀ ಉತ್ತರದ ಮೇಲೆ ಯಾಕೋ ಮುನಿಸು......
     
    ನಾನೆಂತಹ ಮಳ್ಳು ಹುಡುಗಿ ಎಂದರೆ ನಾಳೆಗಳ ಪರಿವೆಯೇ ಇಲ್ಲದೆ ನನ್ನೆಲ್ಲ ನಾಳೆಗಳಿಗೆ ನೀನು ಬೇಕು ಎಂಬ ಸಣ್ಣ ಆಸೆಯ ತೀವ್ರತೆಯನ್ನೂ ನಿನಗೆ ತಿಳಿಯಕೊಡದೆ,  ನನ್ನ ನಾಳೆಗಳಿಗೆ ನಿನ್ನೊಡನೆಯ ನೆನಪ ಪೇರಿಸುತ್ತ  ಕ್ಷಣ ನಿನ್ನಾಸರೆಯ ನೆನಪಲ್ಲಿ, ನಿನ್ನ ಪ್ರೀತಿಯ ತಂಪಲ್ಲಿ ನಾನೇ ಪರಮ ಸುಖಿ  ಎಂದು ಬದುಕುತ್ತಿದ್ದೇನೆ. ನನ್ನ ಮಟ್ಟಿನ ಹುಚ್ಚು ಪ್ರೀತಿಯ ಸಣ್ಣ ಪರಿವೆಯೂ ಇಲ್ಲದೆ ನೀ ಕೊಟ್ಟ ಅಪರಿಮಿತ ಪ್ರೀತಿಯಲ್ಲಿ  ಮತ್ತೆ ಮತ್ತೆ ಪುಳಕಿತನಾಗುತ್ತಾ ನನ್ನೀ ಬಾಳನ್ನು ಧನ್ಯವಾಗಿಸಿಕೊಂಡಿದ್ದೇನೆ...

     ಬಹುಷಃ ನಿನ್ನಲ್ಲೂ ಎಲ್ಲೋ  ಭಯ ಕಾಡುತ್ತಿರಬಹುದು ಕೊಳದ ನೀರಿನಷ್ಟು ಪ್ರೀತಿ ಕೇಳುತ್ತಿರುವವಳೆಲ್ಲಿ ಸಮುದ್ರದ ಹಠಕ್ಕೆ ಬಿದ್ದುಬಿಟ್ಟರೆ ಎಂದು ಮೊದಲೇ ಸಮುದ್ರದಂಥ ಪ್ರೀತಿಯ ದಾಹವಿರುವ ಹುಡುಗಿ ಸುಲಭವೇನಲ್ಲ ಅಂತಹ ದಾಹ ತಣಿಸುವುದು. ಅದಕ್ಕೆ, ನನ್ನೊಳಗಿನ  ದಾಹಕ್ಕೆ ಕೊಳದ ನೀರಾಗಲೂ ಮನಸ್ಸುಮಾಡದೆ ಇದ್ದಾಂಗೆ ಇರಲಿ ಎಂದು ಸುಮ್ಮನಾದೆಯೇನೋ
   
 ಆಗೊಮ್ಮೆ ಈಗೊಮ್ಮೆ  ಜೊತೆ ನಡೆವ ನೀನು, ನನ್ನೊಲವ ಭಾವಗೀತೆ, ಜೊತೆಗೆ ನನ್ನೊಳಗೆ ನೀನೇ  ಮೀಟಿದ ಪ್ರೀತಿಯ ಆಲಾಪ ಇಷ್ಟೇ ಸಾಕು. ಇದರಿಂದ ಪೂರ್ಣ ಪ್ರಮಾಣದ ದಾಹ ತಣಿದೀತೆಂಬ ಭ್ರಮೆ ನನಗೂ ಇಲ್ಲ. ನಿನ್ನ ಪ್ರೀತಿಯಿಂದ  ನನ್ನಲ್ಲೊಂದು ಸಂತೃಪ್ತಿಯ ಭಾವ ಮೂಡಿದರೆ ಮಟ್ಟಿನ ಸಾರ್ಥಕತೆ ನನ್ನೀ ಬದುಕಿನದ್ದು. ಅದಕ್ಕೆ, ಬೊಗಸೆಯಷ್ಟಾದರೂ ನಿನ್ನೊಲವ ಸಿಹಿ ನೀರ ನೀಡಿ ಇಂಗಿಸೋ ಈ ಅಭಿಸಾರಿಕೆಯನ್ನ......