Thursday, 27 August 2015

ಒಲವೇ ನಿನಗೆ......

ಕದ್ದು ಮುಚ್ಚಿ ಬದಲಾದಂತೆ ನಾಟಕವಾಡುವ ಸತ್ತರೂ ಜೀವವಿರುವಂತೆ ತೋರುವ ಬದುಕೆಂಬ ಮಹಾನ್ ಸೂತ್ರಧಾರನ ಹೊಸ ಕಥೆಗೊಂದು ಹೊಸ ಪುಟ ತೆರೆದುಕೊಳ್ಳುವುದರಲ್ಲಿದೆ.  ಬದುಕು, ಸಾವಿರದ ಪಾಪಪ್ರಜ್ಞೆ ಅದಕ್ಕೂ ಆಳಕ್ಕಿಳಿದು ನನ್ನೊಳಗೆ ಅವಿತು ಕುಳಿತ ನಗು ಯಾವುದಕ್ಕೂ ಅರ್ಥ ಹುಡುಕಲಾರೆ,ಭಾಷ್ಯ ಬರೆಯಲಾರೆ. ಆದರೆ ಅರ್ಥ ಕಟ್ಟಿಕೊಳ್ಳಬಲ್ಲೆ ನನ್ನೊಳಗಿನ ಕನಸು ಮನಸುಗಳೊಟ್ಟಿಗಿನ ದ್ವಂದ್ವಗಳಿಗೆ ಎಲ್ಲಕ್ಕಿಂತ ನನ್ನೊಳಗಿನ ನಿನಗೆ.

ಯಾರಿಗಾಗಿಯೋ ಹೆಗಲಾಗಬೇಕು, ಒಡಲಾಗಬೇಕು ಎಂಬಂಥ ಬಯಕೆಗಳೇ ಇಲ್ಲದವಳು ನಾನು ನನ್ನೊಳಗೆ ನೋವ ಭಾವ ಕಾಡಿತೆಂದು ನಾ ಭಾವಿಸಿದಾಗ ನನ್ನ ಮಡಿಲೊಳಗೆ ನಾ ಮಲಗಿ ಸಮಾಧಾನ ಹೊಂದಿಬಿಡಬೇಕು ಎಂದುಕೊಂಡವಳು. ನನ್ನೊಳಗಿರುವುದೂ ನಾನೇ ಎಂಬ ಹುಚ್ಚುತನವೊಂದಿಂತ್ತು. ಆದರೆ ಅದ್ಯಾವಾಗ ನನ್ನ ಅವಶ್ಯಕತೆಗಳನ್ನೂ ಮೀರಿದ ಅವಲಂಬನೆಯನ್ನ ಕಲಿತುಬಿಟ್ಟಿತೋ ಅದಕ್ಕೆ ನಾನು ನೀನೆಂದು ಹೆಸರಿಟ್ಟೆ, ನಂಗೆ ನಾ ಮಾತ್ರ ಅವಶ್ಯಕತೆ ಎಂದರಿತವಳಿಗೆ ನೀ ನನ್ನೊಳಗೆ ಬಂದಿದ್ದು  ಯಾಕೋ ಇಷ್ಟವಾಗಲೇ ಇಲ್ಲ. ಅದಕ್ಕೆ  ಕೊನೆಗೊಂದು ದಿನ ನೀನೆಂದರೆ ನಾನೇ ಎಂದುಬಿಟ್ಟೆ.

ಆರೋಹ ಅವರೋಹಗಳಿಂದಲೇ ತಾನೇ ರಾಗವಾದದ್ದು ಬದುಕೂ ಸಂಗೀತವೇ ತಾನೆ.  ಕರುಳು ಕಿತ್ತು ಬರುವಂಥ ನೋವು, ಹೃದಯ ಒಡೆದುಹೋಗುವಂತ ನಗುವು. ಸಮತೆಯನ್ನ ಗೆದ್ದಷ್ಟು ಸುಲಭವಲ್ಲ ಏರಿಳಿತಗಳ ನಿಭಾಯಿಸುವುದು. ನಡೆದುಬಿದ್ದಷ್ಟು ಸುಲಭವಲ್ಲ ಬಿದ್ದೂ ನಡೆಯುವುದು.

ಮುದ್ದು,
ನಡೆಯುವುದಾದರೆ ನಡೆದುಬಿಡಬೇಕು ಒಲವ ಜೊತೆ ಕತ್ತಲಲ್ಲೂ ಪ್ರೇಮವೇ ಬೆಳಕಾದೀತು ಎಂದು ನಂಬಿದವ ನೀನು. ಆದರೆ ನಡೆಯುವುದೆಂದರೆ ಗೆಲುವೆಂಬ ನೆಂಟನ ಜೊತೆಗೊ ಅಥವಾ ನಂಟನ್ನು ಅರಸಿಯೇ ಇರಬೇಕೆಂದು ನಡೆದವಳು ನಾನಾದೆ.
ಗೆಲುವೆಷ್ಟು ದಕ್ಕಿತ್ತು ಲೆಕ್ಕದ ಅಂಕಿಗಳೆಲ್ಲ ಕಳೆದೊಗಿದ್ದವು. ಸರಿ ಒಲವಾದರೂ ದಕ್ಕಿತ್ತಾ? ಗೊತ್ತಿಲ್ಲ ಹುಡುಕುವ ಗೋಜಲಿಗೆ ಬಿದ್ದವಳಲ್ಲ.
ಆದರೆ ಅದೆಲ್ಲೊ ನಡುರಾತ್ರಿ ನೀ ಬಿಕ್ಕಳಿಸಿದರಲ್ಲಿ ನಂಗಿಲ್ಲಿ ಉಸಿರು ಕಟ್ಟಿದಂಥ ತೀವ್ರಭಾವ.
ನೀ ಅಲ್ಲೆಲ್ಲೋ ಒಂದು ಕ್ಷಣ ನಕ್ಕಿದ್ದು ಕಂಡರೂ ಖುಷಿಗೆ ಗಂಟಲುಬ್ಬುತ್ತದೆ.

ಜೊತೆ ಕೂತು ಅಳುವ ತಡೆಯದವಗೆ ನಗುವ ಸಲಹುವ ಹಕ್ಕು ಇಲ್ಲವಂತೆ. ನನ್ನದೇ ಮನದ ಮಾತು ಸೋಲು ಎಲ್ಲರನ್ನೂ ಕಸಿದುಕೊಳ್ಳುತ್ತದೆ ಆದರೆ ಗೆಲುವಿಗೆ ಯಾರ ಅವಶ್ಯಕತೆಗಳೂ ಇಲ್ಲ. ಯಾಕೆಂದರೆ ಗೆಲುವಿನ ತಾಕತ್ತೆ ಹಾಗೆ ಅದೊಂದು ಪರಿಪೂರ್ಣ ಖುಷಿಯಷ್ಟೆ. ಗೆಲುವಿಗೆ ಯಾರನ್ನೂ ಅವಲಂಬಿಸುವುದು ಗೊತ್ತಿಲ್ಲವೆನೋ. ಗೆಲುವೆಂಬುದು ಒಂಟಿ ಭಾವವನ್ನು ಮರೆಸಿಬಿಡುವಂಥದ್ದೊಂದು ಔಷಧವೇ ಇರಬಹುದೆನೊ.?!
ಯಾರೊ ಕೈ ಹಿಡಿದು ಕತ್ತಲಲ್ಲೂ ಜೊತೆ ನಡೆಯುತ್ತಾರೆ ಎಂಬ ಕಾರಣಕ್ಕೆ ಬೆಳಕೆಂಬುದ ಮರೆಯಬಾರದು ಅಲ್ಲವಾ?

ಈ ದಿನ ನಿನ್ನ ಜೊತೆಗಿದ್ದು ಖುಷಿಯ ಸಾಗರದಲ್ಲಿ ಅಲೆಯನ್ನೊಂದು ಎಬ್ಬಿಸಿಬಿಡಬೇಕಿತ್ತು. ಎಲ್ಲರಿಗಿಂತ ಮೊದಲ ಹಾರೈಕೆ ನನ್ನದೇ ಇರಬೇಕಿತ್ತು.
ಆದರೆ ಜೊತೆಯಿದ್ದು ಹಾರೈಸಲಾರೆ ಇಲ್ಲಿಂದಲೇ ಎಲ್ಲವನ್ನೂ ಕನಸು ಕಾಣುತ್ತೇನೆ. ನಗುವೊಂದೆ ತುಂಬಿರಲಿ ಎಂದು. ನೆನಪಾಗದಿದ್ದರೂ ಗೆದ್ದೊಮ್ಮೆ ನಕ್ಕುಬಿಡು. ನಾನಿಲ್ಲಿ ಹಗುರಾದೇನು. ಬದುಕು  ಬಂಗಾರವಾಗಲಿ. ಗೆಲುವಿನ ನಗುವು ಪ್ರತಿಧ್ವನಿಸಲಿ.

4 comments:

 1. ಸಂಧ್ಯಾ ಮರೀ -
  ಕೆಲ ಸಾಲುಗಳು ನಿಜಕ್ಕೂ ಮನಸಿಗೆ ಕಚ್ಚಿಕೊಳ್ಳುತ್ತವೆ...
  ಬರಹದ ಹಿಂದಿನ ಭಾವಕ್ಕೆ ಭಾಷ್ಯ ಹುಡುಕಬೇಕಿಲ್ಲ...
  ಬರಹ ಚಂದ ಚಂದ - ಭಾವವೂ...

  ReplyDelete
 2. Beautiful..!! A journey within you..!

  ReplyDelete
 3. ಸಂಧ್ಯಾ...... ಯಾರಿಗಾಗಿ ಬರೆದದ್ದೋ ನಾ ಕಾಣೆ....
  ಭಾವ ಮಾತ್ರ ಪದೇ ಪದೇ ಮೆಲುಕು ಹಾಕುವಂತಿದೆ....
  "ನಡೆಯುವುದೆಂದರೆ ಗೆಲುವೆಂಬ ನೆಂಟನ ಜೊತೆಗೊ" ಇದು ತುಂಬಾ ಒಳ್ಳೆಯ ಶಬ್ಧ ಪ್ರಯೋಗ...
  ತುಂಬಾ ಖುಷಿಯಾಯ್ತು....
  ಒಳ್ಳೇದಾಗ್ಲಿ....

  ReplyDelete