Saturday 7 December 2019

ಬದುಕ ಹುಚ್ಚಿಗೆ....

ಮನಸೇ,

ತೀರಾ ಸಾಮಾನ್ಯ ದಿನಗಳು. ಹೊಸದು ಎಂಬುದು ಏನೂ ಇಲ್ಲ. ಬದುಕುವ ಹುಚ್ಚಿಗೆ ಅಂಟಿಕೊಂಡ ನನಸಾಗದ ಆದರೂ ಬದಲಾಗದ ಕೆಲ ಕನಸುಗಳು. ಸೂರ್ಯ ಚಂದ್ರರಿಗೆ ವ್ಯತ್ಯಾಸವೇ ತಿಳಿಯದ ದಿನಗಳು. ಮಹಾನಗರಿಯ ಮಾಯಾವಿ ಬದುಕು.

ಬದುಕು‌ ಓಡು ಎಂದು ಕಾಲಿನ‌ ಮೇಲೆ ಹೊಡೆದು ಓಡಿಸುತ್ತದೆ. ಗುರಿ ತಲುಪಿತೆಂದು ನಿಲ್ಲಬೇಕಾ? ಇಲ್ಲ ನಡೆಯುವುದು ಇನ್ನೂ ಇದೆ ಎಂದು ಓಡಬೇಕಾ?ಗೊತ್ತಿಲ್ಲ!! ಹೊಸ ಮೈಲಿಗಲ್ಲುಗಳ ತಲುಪಬೇಕು, ಪ್ರತೀದಿನ. ಹಾಗೆಂದು ದಾಟಿದ ಕಲ್ಲುಗಳ ಎಣಿಸಬಾರದು.ಯಾಕೆಂದರೆ, ನಿಂಗೆ ದಾಟಿದ ಪ್ರತಿ ಕಲ್ಲೂ ಒಂದು ಪುಟ್ಟ ಗೆಲುವು, ದಾಟಬೇಕಿರುವ ದಾರಿಗೆ ಸ್ಪೂರ್ತಿ. ಪ್ರಪಂಚಕ್ಕೆ ನಿನ್ನ ಲೆಕ್ಕ ನಿನ್ನ ಅಹಂನ ಪ್ರತಿರೂಪ. 

ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತದೆ‌ ನಂಗೆ. ಯಾವ ದ್ವಂದ್ವಗಳೂ ನನ್ನ ಕಾಡುತ್ತಿಲ್ಲ. ಇದು ಮನಸಿನ ಆಳಸಿತನವಾ ಇಲ್ಲ ಬದುಕು ಕಲಿಸಿದ ಪ್ರೌಢಿಮೆಯ ಗೊತ್ತಿಲ್ಲ. ಯಾರೋ ಏನನ್ನೂ ಯೋಚಿಸುತ್ತಿಲ್ಲ ಖಾಲಿಯಾಗಿದ್ದೇನೆ ಎಂದರೆ ನಂಬಿಕೆಯೇ ಇರಲಿಲ್ಲ. ನಾನು‌ ಅಂತದ್ದೊಂದು ಖಾಲಿತನ‌ವ ಅನುಭವಿಸದ ಹೊರತು. 

ನಂಗೆ ನನ್ನ ಬದುಕು ನನ್ನ ಕನಸುಗಳೇ ಇಂದಿಗೂ ಒಂದು ಜೀವಂತಿಕೆಯನ್ನ ತುಂಬುವುದು. ಯಾವಾಗಲೂ ಯಾರದೋ ಬದುಕೇ ಸ್ಪೂರ್ತಿಯಾಗಬೇಕು ಎಂದೇನು‌ ಇಲ್ಲ. ನಾನು‌ ನಿನ್ನೆಗಿಂತ ಇಂದು ಹೆಚ್ಚು ಸದೃಢವಾಗಿದ್ದೇನೆ ಎಂದಾದರೆ, ಅದೇ ನನ್ನ ನಾಳೆಗಳ ಬದುಕಿಸುತ್ತದೆ. 

ಯಾರದೋ ಎದುರು ನನ್ನ ನಾನು ಸಮರ್ಥಿಸಿಕೊಳ್ಳಲಾರದೇ ಅಸಹಾಯಕನಾದ ದಿನದಿಂದ ಅಲ್ಲೆ ಗೆದ್ದು ಹೇಳಿದವರಿಗೆ ಗೆಲುವನ್ನ ಉತ್ತರವಾಗಿಕೊಟ್ಟ ನನ್ನದೇ ಬದುಕು ನಂಗೆ ಯಾರದೋ ಬದುಕಿನ ಕಥೆ ಕಟ್ಟಿಕೊಡುವುದಕ್ಕಿಂತ ಹೆಚ್ಚು ಆತ್ಮವಿಶ್ವಾಸ ತುಂಬಿಕೊಡುತ್ತದೆ.

ಗೊತ್ತು, ಇದೇನು ನೊಬೆಲ್ ಪಾರಿತೋಷಕದ ಸಾಧನೆಯಲ್ಲ ಆದರೆ ನಿನ್ನ ನಿನ್ನೆಗಳ ಗೆಲ್ಲುವುದೇ ಗೆಲುವು ಅಲ್ಲವಾ?? ಕಳೆದ ದಿನಕ್ಕಿಂತ ಬರಲಿರುವ ದಿನಕ್ಕೆ ಪರಿಪೂರ್ಣನಾಗುವ ಪ್ರಯತ್ನವೇ ಅಲ್ಲವಾ  ಪ್ರಗತಿ ಎಂದರೆ.

ಹೇ,
ನಿನ್ನನ್ನು ಅಹಂಭಾವವೊಂದು ಬದುಕಿಸುತ್ತದೆ ಎಂದಾದರೆ ಅದರಿಂದ ಬೇರೆಯವರಿಗೆ ತೊಂದರೆ ಇಲ್ಲ ಎಂದಾದರೆ ಅದು ತಪ್ಪಲ್ಲ. ಅಹಂ ಎನ್ನುವುದು ನೋಡುವವರ ಭಾವ ಅಷ್ಟೇ. ನಿನ್ನ ಅಂತರಂಗವ ಶುದ್ಧಿಯಾಗಿಸುವ ನಿನ್ನಾತ್ಮದ ಬೆಳಕ ಬೆಳಗಿಸುವ ಎಲ್ಲವೂ ಸಮ್ಮತವೇ.

ಅಭಿಸಾರಿಕೆ ನೀನು ನಿನ್ನ ದಾರಿಗೆ ಕೊನೆಯಿಲ್ಲ. ಕೊನೆಯಿದೆ ಎಂದರೆ ನೀನು ದಾರಿಯ ಬದಲಿಸುವ ಕಾಲ ಬಂದಿದೆ ಎಂದೇ ಅರ್ಥ. ನಡೆಯುತ್ತಲೇ ಇರು ಬಯಲು ನಿನಗಾಗಿ ತೆರೆದುಕೊಂಡೀತು...

Wednesday 22 May 2019

ಅಸಂಬದ್ಧ ಯೋಚನೆಗಳು

ನನ್ನೊಳಗಿನ ಮನಸೇಂಬ ಭ್ರಮೆಗೆ. 

ಮನಸು ಎಂಬುದೊಂದು ಇದೆ ಎಂಬ ನಂಬಿಕೆಯೇ ಇಲ್ಲದೆ ಬದುಕಿದವಳು ನಾನು. ಬೇರೆಯವರಿಗೆ ಕಿವಿಯಾಗಿದ್ದಕ್ಕಿಂತ ನಾನು ನನ್ನನ್ನೇ ಕಂಡಿದ್ದು ಕೇಳಿದ್ದು ಜಾಸ್ತಿ. ಈ ಅಭಿಸಾರಿಕೆಯೂ ಅದರಲ್ಲೇ ಒಂದು. 

ಕಾಲು ಇಟ್ಟಲ್ಲೆಲ್ಲ ಬಣ್ಣದ ಹೂವುಗಳ ನಗುವೇ, ನಾನೆೇ...  ಎಷ್ಟೋ ಬಾರಿ ಯಾವುದನ್ನೂ ನೋಡಲಾರೆ.  ಸುಮ್ಮನೆ ನಿಂತಲ್ಲೇ ನಿಂತು ಕಣ್ಮುಚ್ಚಿ ಬಿಡುತ್ತೇನೆ. ಒಂದು ಕಡೆ ಧಾನ್ಯಸ್ತ ಸ್ಥಿತಿ ಇನ್ನೊಂದು ಕಡೆ ಬುಧವಾರದ ಸಂತೆಯ ಗಲಿಬಿಲಿ ಮನದಲ್ಲಿ. ಈ ಮಹಾನಗರಿಯಲ್ಲಿ ಸೋತೆನಾ ಗೆದ್ದೆನಾ? ಸೋತದ್ದಾದರೆ ಏನನ್ನು? ಗೆಲುವು ಎಂದರೇನು? ಜಾಸ್ತಿ ಸಿಕ್ಕಿದ್ದು ಈ ಪ್ರಶ್ನಾರ್ಥಕ ಚಿನ್ಹೆಗಳೇ.. !

ಬರೆದದ್ದು ಎಲ್ಲವು ಒಂದೇ ನನ್ನೊಳಗಿನ ಗೆಲುವ ಹುಡುಕುವ ಹುಂಬು ಮನಸಿಗೆ. ಅದಕ್ಕೆ ಎಲ್ಲವೂ ಒಂದೇ ರೀತಿ. ನನ್ನ ಸಮಾಧಾನಿಸುವ ಹೊಸ ತಂತ್ರ ಕಂಡೆ ಇಲ್ಲ ನಂಗೆ. ಹಳೆಯ ತಂತ್ರಗಳು ಮನಸಿಗೂ ಬೇಸರ ತಂದಿದೆ. ಆದರೂ ಇದು ನನಗಾಗಿಯೇ ತಾನೇ?  ನನ್ನ ಖುಷಿಯ ಖಜಾನೆಯ ಕೀಲಿ ಕೈ ನನ್ನ ಬಳಿಯೇ ಅಲ್ಲವಾ ಇರುವುದು. 

ಇನ್ನು ಕ್ಷಮೆ ಮತ್ತು ಸೋಲುವುದು ಎಂಬುದು, ಸ್ವಾಭಿಮಾನ ಮತ್ತು ದುರಭಿಮಾನ ಎರಡನ್ನೂ ಒಳಗೊಂಡ ತೀರಾ ಪರಿಚಿತ ಭಾವ. ಯಾರನ್ನು ಕ್ಷಮಿಸಬೇಕು. ಯಾರಿಗೆ ಸೋಲಬೇಕು? ಕ್ಷಮಿಸುವುದರಿಂದಲೇ ನಾನು ಸೋತದ್ದಾ? ಅಥವಾ ಸೋತಿದ್ದಕ್ಕೇ ಕಳೆದುಕೊಂಡಿದ್ದಾ? ಗೊತ್ತಿಲ್ಲ!! 
ಆದರೆ, ಎಷ್ಟು ದಿನ ಇದೆಲ್ಲ ನಾನೇನು ಅಮೃತವ ಕುಡಿದು ಬಂದಿಲ್ಲ.  ಸೋತರೂ, ಗೆಲುವು ಸಿಕ್ಕಿತೆಂದರೆ ಸೋಲನ್ನು ಒಮ್ಮೆ ತಬ್ಬಿಬಿಡುವ. ಅಷ್ಟಕ್ಕೂ ಸಂಬಂಧಗಳಲ್ಲಿನ ಸೋಲು ಸಾವಿಗಿಂತ ಶ್ರೇಷ್ಠವಾದದ್ದಲ್ಲವಾ? ಇರುವ ನಾಲ್ಕು ದಿನ ಎಲ್ಲರೂ ಪ್ರೀತಿಸುತ್ತಾರೆ ಎಂಬ ಅಹಂನ ಭ್ರಮೆಯಲ್ಲಿ ನಾನು ಬದುಕಿಬಿಡಲೇ? 

ಹೊಸದೊಂದು ದಾರಿ ಹುಡುಕಿ ಹೊರಟಿದ್ದೇನೆ. ಅಭಿಸಾರಿಕೆ ನಾನು ನನ್ನ ಕನಸಿಗೆ ಎಂದೂ ಕೊನೆಯಿಲ್ಲ ಏನೇ ಸಿಕ್ಕಿದರೂ ಅದು ಬರಿಯ ಒಂದು ದಾರಿಯ ತಿರುವು ಅಥವಾ ಒಂದು ಪುಟ್ಟ ಮೆಟ್ಟಿಲು ಅಷ್ಟೇ. ನಿರೀಕ್ಷೆಗಳಿರಬಾರದಂತೆ ಬದುಕಿನಿಂದ. ನಂಬಿಕೆ, ನಿರೀಕ್ಷೆಗಳಿಲ್ಲದೇ ನೀನೇನು ಆಗಲು ಹೊರಟಿದ್ದು? ಹುಚ್ಚಿಯಂತೆ ಕನಸಕಟ್ಟು ಹತ್ತರಲ್ಲಿ ಒಂದಲ್ಲದಿದ್ದರೂ ಸಾವಿರದಲ್ಲೊಂದು ನಿಜವಾದೀತು. 

ನಿಲ್ಲಬಾರದೆಂದೇ ನಡೆಯ ಹೊರಟವಳು ನೀನು ನಿಂಗ್ಯಾವ ದಾರಿಯ ಹಂಗು. ನಡೆಯುವುದಷ್ಟೇ ನಿನ್ನ ಕೆಲಸ, ಗಮ್ಯದ ಬಯಕೆಬೇಡ.  ಗೆಲುವಿನ ದಿನಗಳ ಲೆಕ್ಕಬೇಡ, ಸಂಖ್ಯೆ ಹೆಚ್ಚಾದರೆ ಅಹಂ ಭಾವ ನಿನ್ನ ಕಾಡೀತು.  

ಎಲ್ಲರ ಬದುಕೂ ಒಂದು ಪುಸ್ತಕವಾಗಬಹುದು ಆದರೆ ಬದುಕುವುದು ಹೇಗೆಂದು ಯಾರೂ ಪುಸ್ತಕ ಬರೆಯಲಾರರೆನೋ. ನೀನೇ ನಿನ್ನ ಬದುಕ ಹಾಳೆಯಲ್ಲಿ ಬರೆದುಕೊ ನಿನ್ನ ಬದುಕೆಂದರೆ ಹೀಗೆಂದು. ಯಾರೋ ಓದಲಿ ಎಂಬ ಹುಚ್ಚು ಬೇಡ. ಬರೆದಮೇಲೆ ನಿಂಗೆ ಆಗುವುದೇನಿದೆ? 

ಯಾರೋ ನೀನೆಂದರೆ ಹೀಗೆಂದು ವ್ಯಾಖ್ಯಾನಿಸಲು ಬಂದರೆ ಸುಮ್ಮನೆ ನಕ್ಕುಬಿಡು ಬೇರೆಯವರ ವ್ಯಾಖ್ಯಾನಿಸುವವ ನಾನೇನೆಂದು ಯಾವತ್ತೂ ಯೋಚಿಸುವುದಿಲ್ಲ. ತನ್ನನ್ನೇ ಅರಿಯದವನಿಗೆ ಬೇರೆಯವರ ಬಗ್ಗೆ ಯೋಚಿಸುವ ಯೋಗ್ಯತೆ ಎಲ್ಲಿಂದ ಬಂದೀತು. 

Monday 8 April 2019

ಮತ್ತೆ ಹುಟ್ಟಲಿ ಬದುಕು ಬಯಲಲ್ಲಿ

ಬಿತ್ತುವೆನು ಬೀಜವನು  ಬರಿದಾದ ಬದುಕಲ್ಲಿ
ಹುಟ್ಟಿಬಿಡಲಿ ಕನಸೊಂದು ನನ್ನೊಳಗೂ

ಪೊರೆಯುವೆನು ಬದುಕನ್ನು
ಕತ್ತಲ ದಾಟುವ ಹಾಗೆ
ಕಂಡ ಕತ್ತಲಿಗೆ ಹಸಿವಿಲ್ಲದ ಹಾಗೆ

ಬದುಕು ಬೆಳೆಯಲಿ ಹಸಿರಾಗಿ ಇನ್ನೊಮ್ಮೆ
ಬರಡಿಗೂ ಬಾಡದಿರಲಿ
ಛಲದ ಬಳ್ಳಿ

ಹಬ್ಬಿ ಬಿಡಲಿ ದೊಡ್ಡ ಮರವೊಂದಕ್ಕೆ
ಆಸರೆಯ ಬಯಸುವ ಬದಲು
ಕಾಯುವ ಕವಚವಾಗಿ

ಹುಟ್ಟಲಿ ನನ್ನೊಳಗೆ ನೋವಿರದ  ಹೂವೊಂದು
ಸತ್ತರೂ ಕಾಯಾಗುವ ತವಕದಲ್ಲಿ

ಹಣ್ಣಾಗುವೆ ನಾನು ಮತ್ತೆ ಮಣ್ಣ ಸೇರಲು
ಮತ್ತೊಮ್ಮೆ ಬದುಕ ಬಯಲಲ್ಲಿ ಹುಟ್ಟಲು.

-ಅಭಿಸಾರಿಕೆ







Sunday 27 January 2019

ಸ್ಕಂದಗಿರಿ ಎಂಬ ಬೆಳಕ ಬೆಟ್ಟ...

ಮಾತು ಮರೆತಿದ್ದೆನಾ? ಅಥವಾ ಏನು ಮಾತಾಡಬೇಕೂ ಎಂತಲೇ ಮರೆತಿದ್ದೆನಾ ಗೊತ್ತಿಲ್ಲ. 
ಮಾತನಾಡಲು  ಏನಿದೆ ಎಂಬುದಷ್ಟೇ ಕಾಡುತ್ತಿತ್ತು.  ಈ ಮಹಾನಗರಿಯ ಮಾಯೆಯಲ್ಲಿ ಪದೇ ಪದೇ ಕಳೆದು ಹೋದಾಗ  ನನ್ನನ್ನು ಮತ್ತೆ ಮತ್ತೆ ಹುಡುಕಿ, ಕಾಡಿ, ಕೈ ಹಿಡಿದು  ಸಮಾಧಾನಿಸುವುದೆಂದರೆ ಕಡಲು, ನದಿ, ದಾರಿ ಮತ್ತು ಬಯಲು . 

ಕಡಲು ತನ್ನೊಡಲಲ್ಲಿ  ಒಳಿತು ಕೆಡಕುಗಳನ್ನೆಲ್ಲ ಬೇರ್ಪಡಿಸಿ ಒಳಿತನ್ನಷ್ಟೇ ಒಪ್ಪಿಕೊಂಡು ಕೆಡುಕನ್ನು ದೂರ ಎಸೆಯುವ ಹಾಗೆ. ಅದೆಲ್ಲೋ ಹುಟ್ಟಿ ಅದೆಷ್ಟೋ  ಕಷ್ಟದ ಕಲ್ಲು ದಾರಿಯ ಹಾದು, ನಿಷ್ಕರುಣಿ ಬೆಟ್ಟವ ಜೀಕಿ ಭಯವಿಲ್ಲದೇ, ದಾರಿಹೋಕರ ದಾಹ ತೀರಿಸಿ  ನದಿ ನಿಲ್ಲದೇ ಕಡಲು ಸೇರುವ ಪರಿ.  ಯಾರು ಬೈಯದೂ, ನಿಂತರೂ, ಮಲಗಿದರೂ ಮಧ್ಯದಲ್ಲೇ ಮಾಯವಾದರೂ ಸದಾಕಾಲಕ್ಕೂ ಮುಗಿಯದೇ ನಿರಂತರವಾಗಿ ಸಾಗುತ್ತಲೇ ಇರುವ ಮತ್ತು ನಡೆಯುವ ಹಸಿವಿಗೆ ಸಾಥಿಯಾಗುವ ದಾರಿ.  ಎಲ್ಲವನ್ನು ಕಂಡೂ, ಒಪ್ಪಿಕೊಂಡೂ,  ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನೆ ನಿಂತುಬಿಡುವ ಬಯಲು, ಇವು ನನ್ನ ಬದುಕಿನ ಬಲು ದೊಡ್ಡ ಕೌತುಕಗಳು. 

 ನೆನಪುಗಳ ಜೋಳಿಗೆ ಸೇರಿಸಲು ಗೆಲುವಿನ ಅರ್ಥ ಹುಡುಕಲೆಂದೇ ಹೊರಟಿದ್ದು ಸ್ಕಂದಗಿರಿ ಎಂಬ ಬೋಳು ಬೆಟ್ಟದ ತುದಿಗೆ ಸೂರ್ಯನನ್ನು ನೋಡಲು. ಯಾರೋ ಕೇಳಬಹುದು ಸೂರ್ಯನನ್ನು ನೋಡಲು ಅಲ್ಲಿಗೇ ಹೋಗಬೇಕಾ ಎಂದು? ಆದರೆ ಕಷ್ಟದ ದಾರಿ ಹತ್ತಿ, ಕಾಣುವ ಬೆಳಕಿದೆಯಲ್ಲ..! ಅದು ಸುಲಭದಲ್ಲಿ ಸಿಕ್ಕಂತಲ್ಲ. ಅದಕ್ಕೆ ತೀವ್ರತರದ ಶಕ್ತಿ ಇದೆ. 

ನಡುರಾತ್ರಿ ೩.೩೦ ಕ್ಕೆ ಆರಂಭವಾದ ನಮ್ಮ ಆರೋಹಣಕ್ಕೆ ಸಾಥಿಯಾಗಿದ್ದು ಪೂರ್ಣ ಚಂದಿರನ ಬೆಳಕು. ಒಂದು ಕಡೆ ಚಂದ್ರ ಎಂಬ ಬೆಳಕು ಇನ್ನೊಂದು ಕಡೆ ಮಾನವ ನಿರ್ಮಿತ ಬೆಳಕು. ಎಷ್ಟು ಹತ್ತಿದರೂ ಮುಗಿಯುತ್ತಲೇ ಇಲ್ಲವಲ್ಲ ಎಂಬ ಸಣ್ಣ ನಿರಾಸೆ. ದಾರಿಯ ತುಂಬೆಲ್ಲ ಯಾರದೋ  ಹೆಜ್ಜೆ ಗುರುತು.  ಎಷ್ಟೇ ಹೆಜ್ಜೆ ಗುರುತಾದರೂ ನಾನು ಕರಗಲಾರೆ ಎಂಬ ಕಲ್ಲಿನ ಒರಟು  ಮನಸು. ನಡೆದಷ್ಟೂ ದಾರಿ ಹತ್ತಿದಷ್ಟೂ ಬೆಟ್ಟ. ನಿರಾಸೆಗೆ ತಂಪೆರೆದು ಸಾಥಿಯಾದ ಚಳಿಯ ಗಾಳಿ. 

ಪ್ರಕೃತಿ ಎಲ್ಲವನ್ನೂ ನೀಡಿದೆ ಆದರೆ ನಾವೇ ಪ್ರಕೃತಿಗಾಗಿ ಏನನ್ನೂ ಮಾಡಿಲ್ಲ. ಏನೆಲ್ಲಾ ಮಾಡಿಕೊಂಡೆವೋ ನಮಗಾಗಿ ಮಾತ್ರ. ಒಮ್ಮೊಮ್ಮೆ ಮನುಷ್ಯ ಸೃಷ್ಟಿಯ ಬಗ್ಗೆ ಹೆಮ್ಮೆಯಾಗುವ ನಂಗೆ  ಕೆಲವೊಮ್ಮೆ ಅಸಹ್ಯವೂ ಆಗುತ್ತದೆ. ಕೃತಕ ಬೆಳಕನ್ನು ಸೃಷ್ಟಿಸಿ ಕತ್ತಲೆಯ ಸೊಬಗನ್ನು ಮರೆತೆವು. ವಾಹನವ ಸೃಷ್ಟಿಸಿ ನಡಿಗೆಯ ಸುಖ ಮರೆತೆವು. ನಿಜ, ಕೆಲವೊಂದು ಅವಶ್ಯಕತೆಗಳು, ಆದರೂ..  ಹಗಲೂ-ರಾತ್ರಿ, ಸೋಲು-ಗೆಲುವು, ಕಷ್ಟ- ಸುಖಗಳ ಭೇದವಿಲ್ಲದ ಸ್ವರ್ಗಕ್ಕಿಂತ ಎಲ್ಲವೂ ಇರುವ ಭುವಿಯೇ ದೊಡ್ಡದಲ್ಲವಾ? ಉತ್ಸಾಹವೇ ಇಲ್ಲದ ಬದುಕಿನಿಂದ ಬಯಸುವುದಾರೂ ಏನನ್ನೂ? 

ಇಷ್ಟೆಲ್ಲಾ ಪ್ರಶ್ನೆಗಳ ಜೊತೆಗೇ ...  ೫. ೩೦ ಕ್ಕೆ ತುತ್ತತುದಿ ತಲುಪಿ ಸೂರ್ಯನಿಗಾಗಿ ಕಾಯುತ್ತಿದ್ದರೆ ಹೊಸ ಬದುಕೊಂದು ತೆರೆದುಕೊಂಡಂತಹ ಖುಷಿ. ಆಹಾ ಪ್ರತಿ ಸೂರ್ಯೋದಯಕ್ಕೂ ಹೀಗೆಯೇ ಕಾಯುವ ಬದುಕು ನನ್ನದಾಗಬಾರದಿತ್ತಾ ಎಂಬ ಭಾವ. ಅಂತೂ ೬. ೧೫ ರ ಸುಮಾರಿಗೆ ಬಂದನಪ್ಪ ಬಾಲ ಭಾಸ್ಕರ. ಅದೆಷ್ಟು ಬಣ್ಣ ಅವನಲ್ಲಿ ಜಗವ ಬೆಳಗುತ್ತೇನೆ ಎಂಬ ಅಹಂ ಕೂಡ ಇರಬಹುದು ಬೆಳೆದಂತೆ. ಮೋಡಗಳ ಮಧ್ಯದಿಂದ ಒಲವ ಸುರಿದಂತೆ ಹೊರಬಂದ ನೇಸರನಲ್ಲಿ ಮಗುವಿನ ನಗುವ ಕಂಡಂತಾಯಿತು.  ಈ ನಡುವೇ ಚಳಿ ನಾನೇನೂ ಕಡಿಮೆ ಎನ್ನುವ ಹಾಗೆ ತಿಂದು ಬಿಡುತ್ತಿತ್ತು. 

ಪ್ರಕೃತಿಯ ಮಡಿಲಿಗೆ ಹೋದಾಗ ಅದೇನೆಲ್ಲ ಹೇಳುತ್ತದೆ. ಒಂದು ದಿನವೂ ಸೂರ್ಯ ಸೋಮಾರಿಯಾಗುವುದಿಲ್ಲ ಒಂದು ನಿಮಿಷಕ್ಕೂ ಗಾಳಿ ಮಲಗುವುದಿಲ್ಲ. ಹರಿವ ನದಿ ಕಾಡುವ ಕಡಲು ಎಲ್ಲವು ಹಾಗೆಯೇ ಕರ್ತವ್ಯ ಲೋಪ ಎಂಬುದೇ ಇಲ್ಲ. ಅದೇನಿದ್ದರೂ ನಮಗೇ.... ಎಲ್ಲರಿಗೂ  ಇಷ್ಟೊಂದು ಉತ್ಸಾಹ, ಕೆಲಸದೆಡೆಗೆ ನಿಯತ್ತನ್ನು ಕೊಟ್ಟ ಸೃಷ್ಟಿಕರ್ತ ಮನುಷನಿಗೇಕೆ ಇದನೆಲ್ಲ ಕೊಟ್ಟೆ ಇಲ್ಲವೇನೋ!! ಬಹುಶಃ ಮನುಷ್ಯನಿಗೆ ಸ್ವಯಂ ಸ್ಫೂರ್ತಿಯನ್ನು ಸೃಷ್ಟಿಸಿಕೊಂಡು ಪ್ರತಿ ದಿನವನ್ನೂ ಹೊಸದಾಗಿ ನೋಡುವ ಅವಕಾಶವನ್ನು  ಕೊಟ್ಟಿರಬೇಕು. 

ಅದೇ ಖುಷಿಯಲ್ಲಿ ಬೆಟ್ಟ ಇಳಿದರೆ, ನನ್ನೊಳಗೇ  ಏನೋ  ಗೆದ್ದಂತ ಖುಷಿ. ಇಂತಹ ಬೆಟ್ಟವನ್ನ ನಾನು ಹತ್ತಿ ಬಂದೇನ ಎಂಬ ಭಾವ, ಇನ್ನೊಂದಿಷ್ಟು ದಿನ ಬದುಕಲು ಮತ್ತು ಇನ್ನೊಂದು ಬೆಟ್ಟ ಹತ್ತಲು ಹೊಸ ಸ್ಫೂರ್ತಿ ನೀಡುತ್ತದೆ. . 








ಚಾರಣದ ದೂರ : ೪ ಕಿ.ಮಿ.
ಸೂಕ್ತ ಸಮಯ : ಜನವರಿ ೧೪ ರ ಮೊದಲು.
ಮುಂಗಡ ಬುಕ್ಕಿಂಗ್ ಮಾಡಿಕೊಳ್ಳವುದು‌ ಕಡ್ಡಾಯ.

ಫೋಟೋ ಕೃಪೆ : ಜಗನ್