Sunday, 8 November 2015

ಆತ್ಮದೆಚ್ಚರದ ಪಣತೆಯ ಮಿಣುಕು.....!!

ಬದುಕೆಂಬುದು ಬೆಳಗಂತೆ ಪ್ರತಿ ದಿನವೂ ಹೊಸತು ಹೊಸತೇ. ಈ ಮಧ್ಯ ಬೇಸರ,ಬೇಜಾರುಗಳೆಂಬ ಭ್ರಮೆಗಳಿವೆಯಲ್ಲ ಅದು ಸುಡುವ ಸೂರ್ಯನ ಅಡ್ಡಗಟ್ಟಿ ಕತ್ತಲ ಭಯ ಹುಟ್ಟಿಸುವ ಗ್ರಹಣದಂತೆಯೇ. ಗ್ರಹಣದ ಕಾಲ ಮಿತಿ ಮಾತ್ರ ನಮ್ಮಾಯ್ಕೆ.  ಇದೇ ಬೇಸರವೆಂಬ ಭೂತದ ಬೆನ್ನತ್ತಿ ಹೋದರೆ ಅದಕ್ಕೆ ಅರ್ಥವಿರುವುದಿಲ್ಲ, ಅದು ಬಂದಿದಕ್ಕೆ ಕಾರಣಗಳೇ ಇರುವುದಿಲ್ಲ.

ನಿಜಕ್ಕೂ ನಂಗೆ ಈ ಭೂತಗಳು ನನ್ನನ್ನಾಳಬಿಡಲು ಇಷ್ಟವಿಲ್ಲ. ಅದಕ್ಕೆ ದೇವರೆಂದು ಹೆಸರಿಟ್ಟುಕೊಂಡು ಕಣ್ಣಿಗೆ ಕಾಣದ ಆದರೆ ಸದಾ ಅಂತರಂಗದಲ್ಲಿ ನಗುವ ಬೆಳಗಿಸುವ ನೀನೆಂಬ ದೀಪ ಹಚ್ಚಿಟ್ಟು ಮಾತಿಗಿಳಿದೆ...

ನನ್ನ ನಾ ಗೆಲ್ಲುವುದೇ ಗೆಲುವೆಂದು ನಂಬಿ ಬದುಕಿಗೆ ಮಿತಿಗಳೇ ಬೇಡ ಎಂದು ನಡೆಯ ಹೊರಟ ಈ ಅಭಿಸಾರಿಕೆಗೆ ತನ್ನ ಬದುಕಿನಿಂದಲೇ ಒಂದಷ್ಟು ಯೋಗ್ಯತೆಯ ದಕ್ಕಿಸಿಕೊಳ್ಳುವುದ ಕಲಿಸಿಬಿಡು. ನನ್ನಂತರಂಗದ ಕನ್ನಡಿಯಲ್ಲಿ ಯಾವುದೇ ವ್ಯತ್ಯಯಗಳಿಲ್ಲದಂತೆ,ಕಲೆಗಳಿಲ್ಲದಂತೆ ನನ್ನ ನಾ ಪರಿಪೂರ್ಣವಾಗಿ ಕಾಣುವಂತಹ ಸೌಂದರ್ಯವನ್ನು ಕೊಡು. ಯಾರದೋ ತಪ್ಪು ಒಪ್ಪುಗಳ ಠೀಕಿಸದ, ನಾನೆಂದರೆ ನನ್ನ ಬದುಕು ಮಾತ್ರ ಎಂಬುದ ಕಲಿಸಿಕೊಡು. ಸಾವಿರ ತಪ್ಪುಗಳ ಮಾಡಿಯೂ ಗೆಲುವೊಂದು ಸಿಕ್ಕಿದ್ದೇ ಆದರೆ ಅಂತಹ ಗೆಲುವನ್ನು ತಿರಸ್ಕರಿಸಿ ತಪ್ಪುಗಳನ್ನು ತಿದ್ದಿಕೊಳ್ಳುವ, ಆ ತಪ್ಪುಗಳಿಂದಲೇ ಒಂದಷ್ಟು ಪಾಠ ಕಲಿಯುವ ಒಳ್ಳೆಯ ಶಿಷ್ಯನೊಬ್ಬನನ್ನು ನನ್ನೊಳಗೆ ಸದಾ ಬದುಕಿಸಿಬಿಡು.

ನನ್ನಿಂದಲೇ ಉತ್ತರ ಕಂಡುಕೊಳ್ಳುಬಹುದಾದ,  ನಾನೇ ಸೃಷ್ಟಿಸಿಕೊಂಡಿರುವ ನನ್ನದೇ ಬದುಕಿನ ದ್ವಂದ್ವಗಳಿಗೆ ವಿನಾಕಾರಣ ನಿನ್ನ ಸಹಾಯ ಕೇಳಬಂದರೆ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಡು. ನಿನ್ನ ಮೇಲೆ ಒಂದು ಕ್ಷಣ ಬೇಸರಿಸಿಕೊಂಡೇನು ಆದರೆ, ಬೆಂಕಿ ಹೊತ್ತಿಸಿದವಗೆ ಅದರಲ್ಲಿ ಅನ್ನ ಬೇಯಿಸುವುದೂ ತಿಳಿದಿರಬೇಕು, ಜೊತೆಗೆ ಅದೇ ಬೆಂಕಿಯನ್ನು ನಂದಿಸುವುದೂ ತಿಳಿದಿರಬೇಕು  ಎಂಬುದನ್ನು ಕಲಿಸಿಕೊಡು. ಯಾವ ಪ್ರಯೊಜನವಿಲ್ಲದೇ ಬೆಂಕಿ ಹೊತ್ತಿಸಿದ್ದೇ ಆದರೆ ಅದು ತಪ್ಪು ಎಂಬುದನ್ನು ನಾನೇ ಅರಿತುಕೊಳ್ಳುವಂತೆ ಮಾಡು.

ನನ್ನ ಪ್ರೀತಿ ಗೆಲ್ಲುವ ಸಲುವಾಗಿ ಸದಾ ನಗೆಯ ಬುತ್ತಿಯನ್ನ ನೀನೇ ಕಟ್ಟಿಡಬೇಡ. ಎಂದಾದರೂ ಒಂದು ದಿನ ನಿನ್ನನ್ನೇ ಪ್ರಶ್ನಿಸಿಬಿಟ್ಟೇನು. ಬುತ್ತಿ ಕಟ್ಟಿಕೊಳ್ಳುವ ವಿದ್ಯೆಯನ್ನು ಕಲಿಸಿಕೊಡು. ಜೊತೆಗೆ ಗುರುವಾಗಿ ನಿರಂತರ ನನ್ನ ಬದುಕನ್ನು ಪ್ರಶ್ನಿಸುತ್ತಲೇ ಇರು. ನಿನ್ನ ಪ್ರಶ್ನೆಗೆ ಉತ್ತರ ಹುಡುಕುವ ಭರದಲ್ಲಿ ನನ್ನನ್ನೇ ನಾ ಮತ್ತೂ ಸ್ಪಷ್ಟವಾಗಿ ಕಂಡುಕೊಂಡೆನು ಬಿಟ್ಟುಬಿಡು.

ಯಾರದೋ ನೋವಿಗೆ ದನಿಯಾಗಿ ಇನ್ಯಾರದೋ ಕನಸಿಗೆ ಕಣ್ಣಾಗಿ ಆದರೆ ನನ್ನದೇ ನೋವು ನಲಿವುಗಳಿಗೆ ಕಲ್ಲಾಗಿರುವ ಶಕ್ತಿ ನೀಡು. ನನ್ನ ನೋವಿಗೆ ನಾನೇ ದನಿಯಾದರೆ ಸ್ವಾನುಕಂಪದಿಂದ ಸುಟ್ಟುಹೋದೆನು, ಅಥವಾ ಬಯಲಲ್ಲಿ ಬೆತ್ತಲಾದೇನು. ಇನ್ನು ಸದಾ ಕನಸಿಗೆ ಕಣ್ಣಾಗಿ ಕುಳಿತುಬಿಟ್ಟರೆ ವಾಸ್ತವದ ಲೆಕ್ಕ ತಪ್ಪೋಗಿ ಕಲ್ಪನೆಯ ಜಾತ್ರೆಯಲ್ಲಿ ಕಳೆದುಹೋದೆನು.

ಇನ್ನು ಎಲ್ಲವನ್ನೂ ನಿನ್ನೆದುರು ತೆರೆದಿಡುವ ಕಾರಣ ಗುಟ್ಟುಗಳಿಗೆ ರೆಕ್ಕೆ ಬರುವುದಿಲ್ಲ ಎಂಬ ನಂಬಿಕೆ ಮತ್ತು ನಿನ್ನೊಡನೆ ನನ್ನ ನಾ ವಿಮರ್ಶಿಸಿಕೊಂಡರೆ ನನ್ನೊಳಗೆ ಹೆಚ್ಚು ಸ್ಪಷ್ಟವಾದೇನು ಎಂಬ ಹುಚ್ಚು. ನೀನೆಂದರೆ ನಂಗೆ ಬೆಳಗುವ ದೀಪ ಮಾತ್ರ. ನಿಂಗಾವ ಕಟ್ಟಳೆಗಳೂ ಇಲ್ಲ, ಮಿತಿ, ಬಂಧನ, ನಿಯಮಗಳೂ ಇಲ್ಲ. ಕಣ್ಮುಚ್ಚದೇ ನಾ ನಿನ್ನ ನೋಡಬೇಕು ಆ ಕ್ಷಣ ನನ್ನಲ್ಲೊಂದು ಅರಿವಿನ ಸಂಚಾರವಾಗಬೇಕು. ನಿನ್ನ ನಾ ದೀಪವಾಗಿಸಿದಾಗೆಲ್ಲ ನೀ ನನ್ನೊಳಗೆ ಬೆಳಕಾಗಿ, ನಗುವಾಗಿ, ಅರಿವಾಗಿ, ಗುರುವಾಗಿ ಕಾಣಬೇಕು.
ಗೆಲ್ಲುವ ಶಕ್ತಿಯನ್ನು ತುಂಬಿಬಿಡು, ಇಷ್ಟಕ್ಕೂ ನನ್ನ ಗೆಲುವೆಂದರೆ ನಿನ್ನದೂ ಅಲ್ಲವಾ?

No comments:

Post a Comment