Wednesday, 16 March 2016

ಬದುಕೇ ಬದುಕಿಗೊಂದಿನಿತು ಬೆಳಕ ತುಂಬು...

ಬದುಕು ಒಂದು ವಿಜ್ಞಾನವೇ ಇರಬಹುದು. ಏನೇ ಮಾಡಿದರೂ ಮಾಡದಿದ್ದರೂ ಅದಕ್ಕೊಂದು ಕಾರಣ ಬೇಕು. ಅದನ್ನು ಅಳೆದು ತೂಗಿ ವಿವರಿಸಲು ಸಮರ್ಥನೆಬೇಕು. ಸೃಷ್ಟಿಯಿಂದ ಲಯದವರೆಗೆ ಎಲ್ಲಕ್ಕೂ ಇಂಥದ್ದೇ ಒಂದು ಸಮರ್ಥನೆಯಿದೆ. ಮನುಷ್ಯನಾದರೂ ಏನೇ ತಪ್ಪು ಮಾಡಿದರೂ ದೇವರೇ ಅಲ್ಲವಾ ಬುದ್ಧಿ ಕೊಟ್ಟದ್ದು ಎಂಬ ಉತ್ತರ ಕೊಟ್ಟರೆ, ದೇವರಾದರೂ ಮನುಷ್ಯನಿಗೆ ಸರಿ ತಪ್ಪುಗಳ ತಿಳುವಳಿಕೆ ಕೊಟ್ಟಿದ್ದೇನೆ ಎಂಬ ಉತ್ತರವನ್ನೇ ಕೊಡಬಹುದು.

ಬದುಕು ಮತ್ತು ಬದುಕುವ ರೀತಿ ಕುರುಡನಿಗೆ ಕಂಡ ಆನೆಯಂತೆ. ನನ್ನ ಮನೆಯೆದುರು ಕಂಡ ಸೂರ್ಯೋದಯದ ಬಣ್ಣದಂತೆ. ಕಷ್ಟಗಳು, ಸಂದಿಗ್ಧತೆಗಳು, ದುಃಖ, ಪರಿಸ್ಥಿತಿಗಳೂ ಹಾಗೆಯೇ. ಎಲ್ಲರಿಗೂ ಎಲ್ಲವೂ ಒಂದೇ ರೀತಿಯಲ್ಲಿ ಕಾಣಲಾಗದು. ಸಮಸ್ಯೆ ಒಂದೇ ಆದರೂ ಅದಕ್ಕೆ ಹುಡುಕುವ ಪರಿಹಾರದ ಮಾರ್ಗ ಒಂದೇ ರೀತಿ ಆಗಬೇಕೆಂದೇನಿಲ್ಲ. ಆದರೆ ಒಂದೇ ಸಮಸ್ಯೆಯನ್ನ ಸಮಸ್ಯೆಯ ಪೀಡಕನಾಗಿ ನೋಡುವುದಕ್ಕೂ, ಸಲಹಗಾರನಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಇದು ತಪ್ಪು ಎಂತಲೂ ಅಲ್ಲ. ಆದರೆ ಸಲಹೆಗಾರನಾಗಿ ಕೊಟ್ಟ ಸಲಹೆಯನ್ನು ತನ್ನ ಬದುಕಿಗೆ ಅಳವಡಿಸಿಕೊಳ್ಳಲಾರದವ ಬೇರೆಯವರ ಬದುಕಿನ ನಿರ್ಧಾರಗಳನ್ನು ಬದಲಿಸುವ ಅಧಿಕಾರವನ್ನು ಕಳೆದುಕೊಂಡಿರುತ್ತಾನೆ ಅಲ್ಲವಾ?

ಹಿರಿಯ ಸಂನ್ಯಾಸಿಯೊಬ್ಬರಿಂದ ಬಿರು-ಬೇಸಿಗೆಯಲ್ಲಿ ಮಳೆಗಾಗಿ ಉಪವಾಸ ವೃತವನ್ನಾಚರಿಸಬೇಕು ಎಂದು ಉಪದೇಶವಾಗುತ್ತದೆ. ಅದು ಒಂದು ದಿನವಲ್ಲ ಬರೋಬ್ಬರಿ ಹದಿನೈದು ದಿನ. ಯಾವುದರದ್ದೇ ಇರಲಿ ಸಂಕಲ್ಪ ಸುಲಭ ಆಚರಣೆಯೇ ಕಷ್ಟ. ಬಿಸಿಲಿಗೆ ಜೀವಂತ ಸುಡುವ ಶರೀರ ಜೊತೆಗೆ ಹಸಿವು ಬಾಯಾರಿಕೆ. ಸುಲಭವಾ ಉಪವಾಸ? ಆದರೆ ಉಪದೇಶವಾಗಿದೆ, ಉಪವಾಸ ಮಾಡಬೇಕು ನೀರನ್ನೂ ಸೇವಿಸಬಾರದು. ದಿನದಿಂದ ದಿನಕ್ಕೆ ಶಿಷ್ಯಂದಿರೆಲ್ಲ ಹಾಸಿಗೆ ಹಿಡಿದರು. ಆದರೆ ಗುರು ಮಾತ್ರ ಆರೋಗ್ಯವಾಗಿ ಇದ್ದ. ಒಂದೇ ರೀತಿ ಜೀವನ ಕ್ರಮವಿದ್ದ ಎಲ್ಲರೂ ಹಸಿದಿರುವಾಗ ಗುರುವೊಬ್ಬ ಆರೋಗ್ಯವಾಗಿರಲು ಹೇಗೆ ಸಾಧ್ಯ ಎಂಬುದು ಶಿಷ್ಯರ ಮುಂದಿರುವ ಪ್ರಶ್ನೆ ಮತ್ತು ಕುತೂಹಲ. ಹುಚ್ಚು ಕುತೂಹಲಗಳೇ ಮನುಷ್ಯನನ್ನ ಎಂತಹ ಕೆಲಸಕ್ಕೂ ಪ್ರೇರೆಪಿಸುತ್ತದೆ.

ಎಲ್ಲರೂ ಸೇರಿ ಪ್ರಶ್ನೆಗೆ ಉತ್ತರ ಹುಡುಕ ಹೊರಟರು. ದೇವರ ಪೂಜೆಯ ನಂತರ ಗುರುಗಳು ನೀರು ಕುಡಿಯುವುದು ಮತ್ತು ಹಣ್ಣು ತಿನ್ನುವುದನ್ನು ಕಂಡ ಶಿಷ್ಯಂದಿರಿಗೆ ಕೋಪ ತಡೆಯಲಾರದೆ ಹೋಗಿ ಕೇಳಿದರೆ ಗುರುಗಳದ್ದು ಅದೇ ಶಾಂತ ಸ್ವರದಲ್ಲಿ ಒಂದೇ ಉತ್ತರ " ನಾ ಸೇವಿಸಿದ್ದು ಬರಿ ನೀರು ಹಣ್ಣು ಅಲ್ಲ ಅದು ತೀರ್ಥ ಪ್ರಸಾದ ದೇವರ ಪ್ರಸಾದವನ್ನು ತಿರಸ್ಕರಿಸಬಾರದು" ಎಂದು. ಶಿಷ್ಯಂದಿರಿಗೋ ಮಾತೇ ಬರುತ್ತಿಲ್ಲ. ಏನು ಹೇಳುವುದು ಇತ್ತ ಎಲ್ಲರೂ ಗುರುವಿನ ಉಪದೇಶ ಕೇಳಿ ಉಪವಾಸದಿಂದ ಆರೋಗ್ಯ ಕೆಡಿಸಿಕೊಂಡರೆ ಅತ್ತ ಗುರು ಮಾತ್ರ ತಿಂದುಂಡು ಹಾಯಾಗಿದ್ದಾರೆ ಅದಕ್ಕೆ ಸಮರ್ಥನೆಯ ಸೋಗು ಬೇರೆ ಎಂದು.

ನಿಜ ಪ್ರತಿ ಬದುಕೂ ವಿಭಿನ್ನವೇ ಎಂದಾದ ಮೇಲೆ ನಮ್ಮ ಬದುಕಿಗೆ ಅಳವಡಿಸಿಕೊಳ್ಳಲಾಗದ ಸಲಹೆಗಳನ್ನು ಬೇರೆಯವರಿಗೆ ನೀಡಿ, ಯಾರದ್ದೋ ಬಾಳ ಪಥ ಬದಲಿಸುವ ಯೋಗ್ಯತೆಯಾದರೂ ಇದ್ದೀತಾ? ನಮ್ಮ ದಾರಿಯನ್ನೇ ಗುರುತಿಸಲಾಗದ ನಾವು ಬೇರೆ ಯಾರಿಗೋ ದಾರಿ ತೋರಿಸುತ್ತೇವೆ ಎಂದರೆ ಅದು ಮೂರ್ಖತನವೇ ಅಲ್ಲವಾ?

ನಮ್ಮನ್ನ ಮೊದಲು ನಾವು ಮೆಚ್ಚಬೇಕು. ನಮ್ಮ ನಾವು ಸಲಹಬೇಕು. ಯಾರದೋ ಕಲೆಯ ಎತ್ತಿ ತೋರಿಸಹೋಗುವ ಮುನ್ನ ಅಂತರಂಗದರಮನೆಯಲ್ಲಿ ಪ್ರಾಮಾಣಿಕತೆಯಿರಬೇಕು.  ನಮ್ಮದೇ ಮಾತೂ ನಮಗೆ ಕೇಳದು, ಅನುಸರಿಸಲಾಗದು ಎಂದ ಮೇಲೆ ಆ ಮಾತನ್ನು ಇನ್ಯಾರೋ ಕೇಳಲಿ ಎಂದುಕೊಳ್ಳುವುದೂ ತಪ್ಪೇ ಅಲ್ಲವಾ? ಅಂತರಂಗವೇ ಬದುಕಿನಿಂದಲೇ ಬದುಕಿಗೊಂದಷ್ಟು ಯೋಗ್ಯತೆಯ ದಕ್ಕಿಸಿಕೊಡು.

Monday, 25 January 2016

ಯುದ್ಧ.....


ಇವತ್ತು ನಾನು ಮತ್ತು ಸುಜಯ್ ಅಪರೂಪಕ್ಕೆಂಬಂತೆ ತುಂಬಾ ಹೊತ್ತು ಮಾತಾಡ್ತಾ ಕೂತಿದ್ವಿ. ಅವನನ್ನು ನೋಡಿದರೆ ಯಾಕೋ ಆಪ್ತ ಜೀವ ಎನಿಸುತ್ತದೆ. ಹಾಗೆ ಮಾತಾಡುತ್ತ ಅವನು ಅವನ ಅಮ್ಮ ಅಪ್ಪ ಎಂದೆಲ್ಲ ನೆನಪಿಸಿಕೊಳ್ಳುತ್ತಾ ಮನೆಯ ಪ್ರಪಂಚದ ಕನಸಿಗೆ ಜಾರಿದ್ದ.

  ನಾನು ಮೌನವಾಗಿ ಅವನು ಹೇಳುವುದನ್ನೇ ಕೇಳುತ್ತ ಕುಳಿತುಬಿಟ್ಟೆ. ಸಾಮಾನ್ಯವಾಗಿ ನನ್ನದು ಎದುರು ಮಾತು ಕಡಿಮೆಯೇ. ಆದರೆ ನನ್ನಲೊಳಗೆ ಮಾತು ಕಡಿಮೆಯೇನಲ್ಲ. ಮಾತಾಡ ಹತ್ತಿದರೆ ಮತ್ತದೇ ಕಾಡುವ ಗೊಂದಲಗಳು. ಇಂದ್ಯಾಕೋ ಅವನ ಮಾತು ಕೇಳುತ್ತ ಸುಮ್ಮನೆ ಯೋಚನೆಗೆ ಬಿದ್ದೆ. 

ಸಾಮಾನ್ಯವಾಗಿ ನಾವುಗಳು ಮೈ ಮರೆತು ಕನಸಿಗೆ ಜಾರುವುದು ತುಂಬಾ ಕಡಿಮೆಯೇ. ಆದರೂ ನಾವೂ ಮನುಷ್ಯರೇ ತಾನೇ? ನಮ್ಮೊಳಗಿರುವುದೂ ಸಾಮಾನ್ಯ ಮನುಷ್ಯರಂತದ್ದೆ ಹೃದಯ ತಾನೇ? 

ಮೈಮರೆತಿದ್ದ ನನ್ನ ಎಚ್ಚರಿಸಿದ ಸುಜಯ್ ಒಮ್ಮೆ ತೀಕ್ಷ್ಣವಾಗಿ ನನ್ನ ಮುಖ ನೋಡಿ ಕೇಳಿದ, ಸೂರ್ಯ ಯಾಕೋ ಸಪ್ಪಗಾದೆ ಏನಾದರೂ ನೆನಪಾಯಿತಾ.? ಒಂದು ಕ್ಷಣ ನಾನು ಬೆಚ್ಚಿಬಿದ್ದೆ ಮತ್ತು ಅವನೆದುರು ಸುಳ್ಳು ಹೇಳಲಾಗದೆ ತಲೆ ತಗ್ಗಿಸಿದ್ದೆ.

ಹೌದು, ನನ್ನೊಳಗೆ ಯಾವತ್ತಿಗೂ ಕಾಡುತ್ತಿರುವ ಮುಗಿಯದ ಗೊಂದಲವೊಂದಿದೆ. ಸರಿ ತಪ್ಪುಗಳ ಮಂಥನವಿದೆ. ನನ್ನನ್ನೇ ಕೊಲ್ಲುವ ಅಪರಾಧಿಪ್ರಜ್ಞೆಯಿದೆ. ನನ್ನನ್ನು ಇಂದಿಗೂ ಬದುಕಿಸುತ್ತಿರುವ ಸಮರ್ಥನೆಯೊಂದಿದೆ.

ನನ್ನನ್ನೇ ದಿಟ್ಟಿಸುತ್ತಿದ್ದ ಅವನಲ್ಲಿ ಏನೊಂದೂ ಅರ್ಥವಾಗಿಲ್ಲ ಸರಿಯಾಗಿ ಹೇಳು ಎನ್ನುವ ಪ್ರಶ್ನಾರ್ಥಕ ಭಾವವಿತ್ತು. 

ಸುಮಾರು ಹತ್ತು ವರುಷಗಳ ಹಿಂದೆ ವರುಷಕ್ಕೊಮ್ಮೆ ಕೊಡುವ ರಜೆಯಲ್ಲಿ ಅಮ್ಮನನ್ನು ನೋಡಲು ಹೋಗಿದ್ದೆ. ಅವಳಿಗೋ ಅಂದು ಹಬ್ಬ. ಆದರೆ ಈ ಹಬ್ಬದ ಖುಷಿಯ ಜೊತೆಗೆ ಒಂದು ಹಠಕ್ಕೆ ಕೂತಿದ್ದಳು. ಅದೇ ಎಲ್ಲ ಅಮ್ಮಂದಿರು ಮಾಡುವ ಸಾಮಾನ್ಯ ಹಠ ಮದುವೆ ಆಗು ಎಂದು. 

ನಾನಾಗ ನಿರಾಕರಿಸಿದ್ದೆ ನನ್ನ ಬದುಕಿಗೇ ನಿಶ್ಚಿತತೆ ಇಲ್ಲ ಎಂದು. ಹಟದಲ್ಲಿ ಅವಳು ಅಮ್ಮ. ನಾನು ದೇಶ ಸೇವಕ; ಜತೆಗೆ ಅವಳಿಗೆ ಮಗ ತಾನೇ. ನಾನು ಸೋತಿದ್ದೆ ಮತ್ತು ಒಪ್ಪಿಕೊಂಡಿದ್ದೆ ಕೂಡ.
ನನ್ನಲ್ಲೊಂದು ಅನಿಸಿಕೆ ಇತ್ತು ಯಾರು ಒಪ್ಪಿಕೊಂಡಾರು ನನ್ನ, ಅಮ್ಮನ ಸಮಾಧಾನಕ್ಕೆ ಒಪ್ಪಿಕೊಂಡರಾಯಿತು ಎಂದು ನನ್ನನ್ನೇ ನಾನು ನಂಬಿಸಿಕೊಂಡಿದ್ದೆ . 
ಆದರೆ ಅಮ್ಮ ಮೊದಲೇ ಎಲ್ಲವನ್ನು ನಿಶ್ಚಯಿಸಿದ್ದಳು. ನಾ ಒಪ್ಪಿಕೊಂಡ ತಕ್ಷಣ ಹುಡುಗಿಯ ಮನೆಗೆ ಕರೆದುಕೊಂಡು ಹೋಗಿದ್ದಳು. ನನ್ನ ಅನಿಸಿಕೆ ಸುಳ್ಳಾಗಿತ್ತು. ಅವಳು ತುಂಬಾ ಹೆಮ್ಮೆ, ಪ್ರೀತಿ, ಗೌರವದಿಂದ ಒಪ್ಪಿಕೊಂಡಿದ್ದಳು. ದೇಶವನ್ನು ಕಾಯುವವ ತನ್ನನ್ನು ಪ್ರೀತಿ ಇಂದ ನೋಡಿಕೊಂಡಾನು ಎಂಬ ನಂಬಿಕೆ ಇತ್ತು ಅವಳಲ್ಲಿ. 

ಸುಜಯ್ ಸುಮ್ಮನೆ ನಕ್ಕು ಹೇಳಿದ್ದ. ದೇಶಪ್ರೇಮ, ಸೈನಿಕನೆಡೆಗೆ ಪ್ರೀತಿ, ಹೆಮ್ಮೆ, ಗೌರವ ಮತ್ತು ವಿರಹ, ವಿಯೋಗಗಳ ತಾಳುವ ಶಕ್ತಿ ಇಲ್ಲದವರಾರು ಒಪ್ಪಿಕೊಂಡಾರು ದೇಶ ಕಾಯುವ ನಮ್ಮಂತವರನ್ನ. ನಾವಾದರೋ ಇಲ್ಲಿಗೆ ಬರುವಾಗಲೇ ಹಸಿವು, ನಿದ್ದೆ, ಪಾಪ, ಪುಣ್ಯ ಕಡೆಗೆ ತೀರ ನಮ್ಮದೇ ಆದ ರಕ್ತ ಸಂಬಂಧಗಳೆಡೆಗಿನ ತುಡಿತವನ್ನೂ ಅಲ್ಲೇ ಬಿಟ್ಟು ಬಂದಿರುತ್ತೇವೆ. 

ನಿಜ, ಸಂಬಂಧಗಳನಷ್ಟೇ ಅಲ್ಲ ಅವುಗಳ ನೆನಪನ್ನೂ ಮಾಡಿಕೊಳ್ಳದಷ್ಟು ಕಠಿಣರಾಗಿರುತ್ತೇವೆ ಎಂದು ನೆನಪಾದಾಗ ಆ ಕಾರ್ಗತ್ತಲಲ್ಲೂ ವಿಶಾದದ ನಗುವೊಂದು ಮಿಂಚಿತು. 

ನಮಗೇನು ಇದು ಹೊಸದಲ್ಲ ಎಲ್ಲ ಬಂಧಗಳನ್ನು ಬಿಟ್ಟೆ ಹೊರಟು ಬಂದಿರುತ್ತೇವೆ. ಆದರೆ ಅದನ್ನು ಒಪ್ಪಿಕೊಂಡು ಮತ್ತು ನಮ್ಮನ್ನು ನೆಚ್ಚಿಕೊಂಡು ಬದುಕುವ ನಮ್ಮವರಿಗೆ ನಮಗಿಂತ ಹೆಚ್ಚು ಮನೋಧೈರ್ಯ ಬೇಕೇನೋ. ಅಂತಹದೇ ಧೈರ್ಯವಂತ ಹುಡುಗಿಯನ್ನೇ ಅಮ್ಮ ಆಯ್ಕೆ ಮಾಡಿದ್ದಳು. ಅವಳೂ ಖುಷಿಯಿಂದ ಒಪ್ಪಿಕೊಂಡಳು. ಇನ್ನೇನು ಬೇಕು ನಾನೂ ಒಪ್ಪಿಕೊಂಡೆ. 

ಏಳು ದಿನವೂ ಜೊತೆ ಬದುಕುವ ಭರವಸೆ ನೀಡಲಾರದ ನನ್ನೊಡನೆ ಏಳು ಹೆಜ್ಜೆಯನ್ನಿಟ್ಟು ಏಳು ಜನ್ಮ ಜೊತೆ ನಡೆವ ಕನಸು ಕಟ್ಟಿ ಭಾರತಾಂಬೆಯ ವೀರ ಸೈನಿಕನ ಪ್ರೇಮದ ನಾಯಕಿಯಾದಳು.
ಅದು ಬದುಕಿನ ಖುಷಿಯ ಉತ್ತುಂಗದ ಕ್ಷಣಗಳು. ಅವಳೊಡನಿರುವಾಗ ಸಂಬಂಧಗಳ ಆರ್ದ್ರತೆ ಅರ್ಥವಾಗಿತ್ತು. ಪ್ರೀತಿ ಎಂದರೆ ಬರೀ ರಕ್ಷಣೆ ಕೊಡುವುದು ಎಂದು ತಿಳಿದಿದ್ದ ನನಗೆ ಪ್ರೀತಿ ಎಂದರೆ ಇನ್ನೂ ಎಷ್ಟೆಷ್ಟೋ ಇದೆ ಎಂದಾಕೆ ತೋರಿಸಿದ್ದಳು. ಈ ಕಲ್ಲು ಹೃದಯದಲ್ಲೂ ಒಲವ ಹೂವೊಂದು ಅರಳಿ ಸಂಭ್ರಮಿಸಿತ್ತು. 
ಆದರಿದು ತುಂಬಾ ಕಾಲದ ಖುಷಿ ಅಲ್ಲ. ಮೊದಲೇ ತಿಳಿದಂತೆ ಹೊರಡುವ ಕಾಲ ಬಂದಿತ್ತು. ದೇಶದ ಗಡಿ ನನ್ನ ಕರೆಯುತಿತ್ತು. ತೀವ್ರ ಬೇಸರದಿಂದ ಹೊರಟು ಬಂದಿದ್ದೆ ನಾನು ಮೊದಲ ಬಾರಿಗೆ. 
ಅವಳು ಮಾತ್ರ ಅದೇ ನಗು ಮುಖದಿಂದ ಬಿಳ್ಕೋಟ್ಟಿದ್ದಳು. 

ಇಲ್ಲಿ ಬಂದ ಮೇಲೆ ನೆನಪಾಗಿ ಅವಳು ಕಾಡದ ದಿನವಿಲ್ಲ. ಮಾತು ಮಾತ್ರ ಅಪರೂಪಕ್ಕೊಮ್ಮೆ. ಇಲ್ಲಿ ಮಾತಿಗೂ ಜಾಸ್ತಿ ಅವಕಾಶ ಕೊಡುವುದಿಲ್ಲ, ಕಾರಣ ಅಲ್ಲಿಯ ಸೆಳೆತ ಜಾಸ್ತಿ ಆಗಿ ಬಂದೂಕನೆತ್ತಿದ ಕೈ ನಡುಗಬಾರದಲ್ಲ. 

ಮತ್ತೆ ವರುಷದ ನಂತರ ಹೋಗಿದ್ದೆ. ಈ ಬಾರಿ ಅವಳೊಡನೆ ಸ್ವಲ್ಪ ಜಾಸ್ತಿ ದಿನವೇ ಇದ್ದೆ. ಈ ಮಧ್ಯ ನಮ್ಮ ಖುಷಿಗೆ ಮತ್ತೊಂದು ಕಾರಣ ಸಿಕ್ಕಿತ್ತು. ಮರಿ ಸಿಂಹವೊಂದು ನಮ್ಮ ಗುಹೆ ಸೇರಿಕೊಳ್ಳುವುದಿತ್ತು.

ಹಗಲು ಮುಗಿದ ಮೇಲೆ ಸಂಜೆ ಆಗುವಂತೆ ಮತ್ತೆ ನಾನು ಹೊರಟು ನಿಂತಿದ್ದೆ. ಐದಾರು ತಿಂಗಳಿಗೆ ಮತ್ತೆ ಬರುತ್ತೇನೆ ಎಂಬ ಭರವಸೆಯನಿತ್ತು. ಇಲ್ಲಿ ಬಂದು ಕೆಲವೇ ದಿನಕ್ಕೆ ಯುದ್ದ ಆರಂಭವಾಗಿತ್ತು. ನನ್ನಲ್ಲಿನ ಪ್ರೇಮಾರ್ದ್ರತೆ ಸಂಪೂರ್ಣ ಒಣಗಿ ದೇಶ ಪ್ರೇಮದಿಂದ ಎದೆ ಉಬ್ಬಿತ್ತು. ನಾನು ಮತ್ತೆ ಕಲ್ಲಾಗಿದ್ದೆ. ಹಣೆಯ ಮೇಲೆ ಮಾತ್ರ ಅವಳ ಅದೇ ಪ್ರೀತಿಯ ಮುತ್ತಿನ ನೆನಪಿತ್ತು. ಕಣ್ಣಲ್ಲಿ ಅವಳನ್ನು ಮತ್ತೆ ಕಾಣುವ ಕಾತುರವಿತ್ತು. ಎಲ್ಲಕ್ಕಿಂತ ಹೆಚ್ಚು ಎದೆಯಲ್ಲಿ ಅವಳ ಒಲವ ಹೀರಿ ಇಮ್ಮಡಿಯಾದ ಗೆಲ್ಲುವ ಛಲವಿತ್ತು.
ಯುದ್ದಕ್ಕೆ ಕಾಲ ಮಿತಿ ಇಲ್ಲವಲ್ಲ. ಯುದ್ದಕಾಲ ದೀರ್ಘವಾಗುತ್ತ ಸಾಗಿತ್ತು. ಅಲ್ಲಿ ಅವಳಿಗೆ ದಿನ ತುಂಬಿತ್ತು. ಇಲ್ಲಿ ಭಾರತ ಮಾತೆ ತಾ ಹೊತ್ತ ಮಕ್ಕಳನ್ನು ಕಾಪಾಡಿಕೊಳ್ಳಲು ಹೋರಾಟ ನಡೆಸುತ್ತಿದ್ದಳು. ಅಲ್ಲಿ ನನ್ನಾಕೆ ಮಗುವಿಗೆ ಜೀವ ನೀಡಲು ವೇದನೆ ಅನುಭವಿಸುತ್ತಿದ್ದಳು. 

ದೇಶವನ್ನು ಬೆಳಗಲು ನನ್ನ ಕಂದ ಹುಟ್ಟಿತ್ತು. ಆ ಎಳೆಯ ಕಂಗಳ ಬೆಳಕ ನೋಡಲು, ತಾಯಾಗುವ ಕ್ಷಣದ ಅವಳ ನೋವಿಗೆ ಮತ್ತು ಖುಷಿಗೆ ಸಂಗಾತಿಯಾಗಿ ನಾನವಳ ಜೊತೆ ಇರಬೇಕಿತ್ತು. ಆದರಿಲ್ಲಿ ಭಾರತ ಮಾತೆ ಜೀವ ಬಿಗಿ ಹಿಡಿದು ಕುಳಿತಿದ್ದಳು. ನನ್ನಂತ ಒಬ್ಬ ಯೋಧ ಒಂದು ಕ್ಷಣ ಮೈ ಮರೆತಿದ್ದರೂ ತಾಯಿ ನಡುಗಿಹೊಗುತ್ತಿದ್ದಳು. ಬೆಳ್ಳನೆ ಹಿಮದಿಂದ ಹೊಳೆಯುತಿದ್ದ ತಾಯಿಯ ಶಿಖರ ರಕ್ತದ ಹನಿಗಳಿಂದ ಕೆಂಪಾಗಿತ್ತು. ತಾಯಿಯ ದೇಹವೇ ಛಿದ್ರವಾಗೋ ಆತಂಕವಿತ್ತು. 

ಹುಟ್ಟುವ ಕಾಲದ ನೋವು ಕ್ಷಣಿಕ ಅದೇ ಸಾವಿನ ನೋವು ಶಾಶ್ವತ ಎಂದೆನಿಸಿತು ನನಗಾಗ. ನಾನು ಶಾಶ್ವತ ನೋವನ್ನು ತಡೆಯ ಹೊರಟೆ ಅದಕ್ಕೆ ನಾ ಜೀವದ ಹಂಗು ತೊರೆದು ಇಲ್ಲೇ ಹೋರಾಟಕ್ಕೆ ನಿಂತೆ. ಅಲ್ಲಿಗೆ ಹೋಗಲೇ ಇಲ್ಲ. ನನ್ನದೇ ಕಂದ ಹುಟ್ಟಿದ ವಿಷಯವೂ ಕೂಡ ಎಷ್ಟೋ ದಿನದ ಮೇಲೆ ತಿಳಿದಿತ್ತು. ಆ ಕ್ಷಣ ನನ್ನ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬಂದಿತ್ತು.
ಸ್ವಲ್ಪ ದಿನಕ್ಕೆ ತಾಯಿ ಗೆದ್ದು ನಗುತ್ತಿದ್ದಳು. ಆಗ ಅವಳನ್ನು ನೋಡುವ ಕಾತರ ಜಾಸ್ತಿ ಆಯಿತು. ಈ ಗೆಲುವಿನೊಡನೆ ನಾನು ಕಂದ ಹುಟ್ಟಿ ಸುಮಾರು ಐದು ತಿಂಗಳಿನ ನಂತರ ಹೋಗಿದ್ದೆ. ನಾನೇನೋ ನನ್ನ ದೇವತೆಯನ್ನು ನೋಡಲು ಖುಷಿಯಿಂದಲೇ ಹೋಗಿದ್ದೆ. ಆದರೆ ಅವಳಲ್ಲಿ ಯಾವ ಖುಷಿಯನ್ನು ಅನುಭವಿಸುವ ಶಕ್ತಿ ಇರಲಿಲ್ಲ. ಅಷ್ಟೊತ್ತಿಗಾಗಲೇ ಅವಳು ಕಾದು ಹಣ್ಣಾಗಿದ್ದಳು. ಮಗು ಹುಟ್ಟಿದ ಮೇಲೆ ಅವಳು ಮೊದಲಿನಂತೆ ಇರಲಿಲ್ಲ. ಆಗವಳಿಗೆ ಅಮ್ಮನ ಆರೈಕೆ ಮಾತ್ರ ಸಾಕಾಗಿರಲಿಲ್ಲ. ನನ್ನ ಪ್ರೀತಿಯ ಅವಶ್ಯಕತೆ ಅಲ್ಲಿ ತುಂಬಾ ಇತ್ತು. ಅವಶ್ಯಕತೆಗೂ ಸ್ಪಂದಿಸಲಾರದ ಅಸಹಾಯಕ ನಾನಾಗಿದ್ದೆ.  

ಬಾಯಿ ತುಂಬಾ ಮಾತಾಡುವ, ಘಲ ಘಲ ನಗುವ ನನ್ನವಳು ಮೌನಿ ಆಗಿದ್ದಳು. ನನ್ನನ್ನೂ ಗುರುತಿಸಲಾರದ ಸ್ಥಿತಿ ತಲುಪಿದ್ದಳು. ಕಣ್ಣುಗಳ ಕಾಂತಿ ಮಸುಕಾಗಿತ್ತು. ಇನ್ನೊಂದು ಕಡೆ ತಾಯಿ ಇದ್ದು ಹಾಲಿಲ್ಲದೆ ನನ್ನ ಕಂದ ಅಶಕ್ತವಾಗಿತ್ತು. ಅದೆಷ್ಟೇ ವೈದ್ಯರ ಬಳಿ ಅಲೆದರೂ ಅದೆಲ್ಲ ವ್ಯರ್ಥವಾಯಿತು. ಆಮೇಲೆ ತಿಳಿಯಿತು ಇದೊಂದು ಮಾನಸಿಕ ರೋಗ, ಸಾಮಾನ್ಯವಾಗಿ ಮಗು ಹುಟ್ಟಿದ ನಂತರ ಪ್ರೀತಿಯ ಅಭಾವ ಕಾಡಿದಾಗ ಹುಟ್ಟಿಕೊಳ್ಳುವ ರೋಗ. ಇದಕ್ಕೆ ಹಳ್ಳಿಗಳಲ್ಲಿ "ಬಾಳಂತಿ ಸನ್ನು" ಎಂದು ಹೇಳುತ್ತಾರೆ ಎಂಬುದು. ದಿನ ಕಳೆದಂತೆ ಇದು ಅತಿಯಾಯಿತು. ಮಗು ಅತ್ತಾಗಲೆಲ್ಲ ಹೊಡೆಯಲು ಪ್ರಾರಂಭಿಸಿದಳು. ಒಂದು ಥರ ಹುಚ್ಚಿಯಂತಾದಳು. ಇದರ ಜೊತೆಗೆ ಮಗುವಿಗೆ ಹಾಲು ಕೊಡದೆ ಎದೆಯಲ್ಲೇ ಹಾಲು ಸಿಕ್ಕಿ ಒದ್ದಾಡುತ್ತಿದ್ದಳು. ಆ ನೋವಿನ ಜೊತೆಗೆ ಎದೆಯಲ್ಲೊಂದು ಗಡ್ಡೆಯೂ ಆಯಿತು. ಮಗುವಿನ ಪಾಲಿನ ಹಾಲು ಅಲ್ಲಿ ಗಟ್ಟಿ ಆಗಿತ್ತು. ಚಿಕಿತ್ಸೆ ಕೊಡಿಸಲಾರದೆ ನಾನು ಮಂಡಿಯೂರಿದ್ದೆ. ಯುದ್ದದಲ್ಲಿ ಗೆದ್ದ ವೀರ ಸೈನಿಕ ಬದುಕಲ್ಲಿ ಸಂಪೂರ್ಣ ಸೋತಿದ್ದ. ನನ್ನಾಕೆ ಬಾರದೂರಿಗೆ ಸಾಗಿಯಾಗಿತ್ತು ನೋವ ಅನುಭವಿಸುತ್ತಲೇ. ಪ್ರೀತಿಯಿಂದ ಬದುಕಿಗೆ ಜತೆ ಬಂದವಳನ್ನು ಕನಿಷ್ಠ ಪ್ರೀತಿಯನ್ನೂ ಕೊಡಲಾಗದೇ ಕಳಕೊಂಡಿದ್ದೆ. ಬದುಕು ಬರಡಾಗಿತ್ತು.
ಇದಾಗಿ ಸ್ವಲ್ಪದಿನಕ್ಕೆ ಅಮ್ಮನೂ ಸೊಸೆಯನ್ನು ಹುಡುಕಿ ನಡೆದಳು.

ಈಗ ನಾನು ಮತ್ತು ನನ್ನ ಮಗುವಿಗೆ ತಾಯಿ ಭಾರತಿಯೇ ಅಮ್ಮನಾದಳು.

ತಕ್ಷಣ ಸುಜಯ್ ಕೇಳಿದ್ದ ಮತ್ತೀಗ ಮಗು.?

ವಿದ್ಯಾರ್ಥಿನಿಲಯದಲ್ಲಿದ್ದು ಓದುತ್ತಿದ್ದಾನೆ ಉಸಿರು ಕೊಟ್ಟು ಬದುಕಿಸಿದ ತಾಯಿಯ ಋಣ ತೀರಿಸಲು.
ಅವನಿಗೂ ನನ್ನ ಪ್ರೀತಿಯೆಂದರೆ, ನಾ ಬರೆವ ಪತ್ರಗಳಲ್ಲಿನ ದೇಶ ಪ್ರೇಮದ ಪಾಠ ಮತ್ತು ಬಂದೂಕಿನ ಕಥೆಗಳು ಅಷ್ಟೇ.

ಗಟ್ಟಿ ಉಸಿರನ್ನೂ ಆಡದೆ ಕೇಳುತ್ತಿದ್ದ ಸುಜಯ್ ಒಮ್ಮೆಲೇ ನನ್ನ ತಬ್ಬಿ ಜೋರಾಗಿ ಅತ್ತು ಬಿಟ್ಟ. ಏನನಿಸಿತೋ ಅವನಿಗೆ. ಸೂರ್ಯ ನೀನೊಂದು ಕಲ್ಲು ಬಂಡೆ ಎಂದುಕೊಂಡಿದ್ದೆ. ಕ್ಷಮಿಸು ಅಂತಂದ.

ನಾನು ಕಲ್ಲೇ. ಆದರಿದು ನೀರನ್ನು ಶೂನ್ಯಕ್ಕಿಳಿಸಿ ಕಲ್ಲಾಗಿಸಿದ್ದು ಎಂದೆ. 

ಮಾತೆನೋ ಮುಗಿದಿತ್ತು ನಿಜ ಆದರೆ ನನ್ನೊಳಗೆ ಮತ್ತದೇ ಪ್ರಶ್ನೆ..... ??!!

ಸಾವಿರಾರು ಜನರ ಸುಖನಿದ್ರೆಗೆ ಕಾರಣನಾದೆ ಎಂದು ನಗಬೇಕೋ;
ನನ್ನೊಲವ ಚಿರನಿದ್ರೆಗೆ ಕಾರಣನಾದೆ ಎಂದು ಅಳಬೇಕೋ ತಿಳಿಯುತ್ತಿಲ್ಲ. 
ಅಳಲಾಗದ ನಗಲಾರದ ಸ್ಥಿತಿ ಇಂದೀಗ ನನ್ನದು.