Friday, 20 June 2014

ನಿನ್ನ ರಕ್ಷೆ ಗೂಡಲ್ಲಿ ಅಡಗಲಿ ಎಷ್ಟು ದಿನ...ನೂಕು ಹೊರಗೆ ನನ್ನ .....

     ಪುಟ್ಟ ಕಂದ ಯಾಕೋ ಸಪ್ಪಗಿತ್ತು... ಅಮ್ಮನ ಬಳಿ  ಅದ್ಕಿವತ್ತು ಸಾವಿರ ಸಾವಿರ ಪ್ರಶ್ನೆಗಳು... ಅವಳ  ಎದುರು ತನ್ನೆಲ್ಲ ಪ್ರಶ್ನೆಗಳನ್ನೂ ಹರವಿ ಕುಳಿತುಕೊಂಡಿತು ಪುಟ್ಟ ಮರಿ ಹಕ್ಕಿ...  ನಾನು ಪಕ್ಕದ ಮನೆಯ ಪಾಪು ಒಂದೇ ದಿನ ತಾನೇ ಹುಟ್ಟಿದ್ದು ? ಹೌದು ಕಂದ.... ಆದರೆ ಅಮ್ಮ ಅವನು ಮುಗಿಲೆತ್ತರಕ್ಕೆ ಹಾರುತ್ತಾನಂತೆ ಎಷ್ಟೊಂದು  ಮಜವಾಗಿರುತ್ತಂತೆ!!  ಹೌದೆನಮ್ಮ? ಹಾರುವುದು ಅಷ್ಟೊಂದು ಮಜವಾ  ? ಅವನು  ಕೇಳಿದ ನೀ  ಹಾರಲಾರೆಯ ಎಂದು...?  ಹಾರುವುದು ಅಂದ್ರೆ ನೋಡಿದ್ದೇನೆ  ಆದ್ರೆ ಹೇಗೆ  ಅಂತ  ಗೊತ್ತಿಲ್ಲ ಅಂದೇ...  ಅದ್ಕೆ ಅವನು  ನಿನ್ನ ರೆಕ್ಕೆಗಳಿಗೆ ಹಾರುವ ಶಕ್ತಿನೇ ಇಲ್ವ? ಅಂತ  ಕೇಳಿ ನಕ್ಕಾಗ ಎಷ್ಟು ಬೇಸರ ಆಯಿತು ಗೊತ್ತ ? ನಂಗ್ ಗೊತ್ತಿಲ್ಲ ಅಂದ್ಬಿಟ್ಟೆ.  ಹೌದ ಅಮ್ಮ ನನ್ನ ರೆಕ್ಕೆಗೆ ಶಕ್ತಿನೇ ಇಲ್ವಾ? ನನಗೆ ಪ್ರಪಂಚ ಜ್ಞಾನ ಇಲ್ವಂತೆ...

 ಅಮ್ಮ ಹೇಳಿತು ಇಲ್ಲ ಕಂದ  ನೀನು ಶಕ್ತಿವಂತನೆ.... ನೀನು ಅವನಿಗಿಂತ  ಚೆನ್ನಾಗಿ ಹಾರಬಲ್ಲೆ  ಆದ್ರೆ ಕೆಳಗಿನ  ಪ್ರಪಂಚ ತುಂಬಾ ಕೆಟ್ಟದ್ದು ಅದ್ಕೆ ನಿನ್ನನ್ನ ನಾನೆಂದು ಹಾರಾಡಲು  ಹೊರಗೆ ಕಳಿಸಿಲ್ಲ ಅಷ್ಟೇ... ಯಾರೆಲ್ಲಿ ನನ್ನಿಂದ ನಿನ್ನ ಕಿತ್ಕೊಂಡು ಬಿಡ್ತಾರೋ ಅಂತ ಭಯ ಕಂದ ನಂಗೆ...

ಆದ್ರೆ ಅಮ್ಮ ಕೆಟ್ಟದ್ದು ಅಂದ್ರೆ ಏನು? ಕೆಟ್ಟವರು ಅಂದ್ರೆ ಹೇಗಿರ್ತಾರೆ?  ದಪ್ಪಗಿರ್ತಾರಾ ? ಕೆಟ್ಟದ್ದು ಮಾಡೋದು ಅಂದ್ರೆ ಏನು? ಬೈತಾರಾ?

ಅಮ್ಮ ನಿಜಕ್ಕೂ ಮೂಕಳಾದಳು... 
ಮಾತಾಡಮ್ಮ  ......
ಕೆಟ್ಟದ್ದು ಅಂದ್ರೆ  ಕೆಟ್ಟದ್ದು ಅಷ್ಟೇ ಮತ್ತೆನು ಕೇಳಬೇಡ...

ಆದ್ರೆ  ಅಮ್ಮ, ನನ್ನನು ಒಂದು ಸಲ  ಹೊರಗೆ ಬಿಡು ಕೆಟ್ಟದ್ದು ಅಂದ್ರೆ ಏನು ಅಂತ ನೋಡ್ತೀನಿ..  ನಿನ್ನ ಕಂದ ನಾನು ಎಚ್ಚರಿಕೆ ಇಂದಾನೆ  ಇರ್ತೀನಿ...  ನನ್ನ ಹಿಂದೆ ನೀ  ಇರ್ತಿಯ ಅಲ್ವಾ? ಪ್ರಪಂಚ ಚಂದವಿದ್ಯಂತೆ ನಾನು ಒಂದ್ಸಲ  ನೋಡ್ಬೇಕು   ಬಿದ್ದು ಪೆಟ್ಟಾದರು ಅಳಲ್ಲ ನಾನು...  ಸೂಕ್ಷ್ಮವಾಗಿ ಪ್ರಪಂಚದ ಆಳವನ್ನ ಅರ್ಥ ಮಾಡ್ಕೊತೀನಿ...
 

       ನೀನು ಹೇಳಿದ್ದೆ ಯಾವತ್ತೋ  ನಂಗೆ ಬೆಂಕಿ ಹತ್ರ ಹೋಗಬೇಡ ಅದು ಸುಡತ್ತೆ ಅಂತ ಆದ್ರೆ ಬೆಂಕಿ ಅಂದ್ರೆ ಏನು ಅಂತಾನೆ ನೋಡಿರಲಿಲ್ಲ ನಾನು...  ಅವತ್  ಒಂದಿನ ಕೈ ಸ್ವಲ್ಪ ಸುಟ್ಟೋಯ್ತು ಅವಾಗ ಅಂದ್ಕೊಂಡೆ ಅಮ್ಮ ಹೇಳ್ತಿದ್ದ ಬೆಂಕಿ ಅಂದ್ರೆ  ಇದೆ ಇರಬೋದು  ಅಂತ ಅವತ್ತಿನ್ ನಂತರ ನಿಜವಾಗ್ಲೂ  ಯಾವತ್ತು ಅದ್ರ ಹತ್ರ ಹೋಗಿಲ್ಲ ನಾನು.. 
ಅರ್ಥ ಆಗತ್ತೆ,  ಅಮ್ಮ ನೀನು...  ನಿಂಗೆ  ಭಯ  ಎಲ್ಲಿ ಹಾರುವಾಗ ಬಿದ್ದು ರೆಕ್ಕೆ ಮುರಿದರೆ ಅಥವಾ ಯಾವ್ದೋ ಕ್ರೂರ ಪ್ರಾಣಿ ನನ್ನ ತಿಂದು ಬಿಟ್ರೆ ಅಂತ ಅಲ್ವಾ?  ರೆಕ್ಕೆ ಮುರಿಯದ ಹಾಗೆ ಹಾರುವುದನ್ನ ನೀನೇ ಜೊತೆ ಇದ್ದು ಕಲಿಸು...   ಕೆಟ್ಟದ್ದು ಅಂದ್ರೆ ಇದು ಅಂತ ತೋರಿಸು ಒಮ್ಮೆ ಗೊತ್ತಾದರೆ ಮತ್ತೆ ಕೆಟ್ಟದರ ಹತ್ರ ಹೋಗಲ್ಲ ನಾನು... ಹೇಳು ನೀನು ಅರ್ಥ ಮಾಡ್ಕೊತೀನಿ...

 ಈ ಪುಟ್ಟ ಗೂಡಿಂದ  ನನ್ನನ್ನು ಹೊರಗೆ ಕಳಿಸಮ್ಮಾ ....
 ಮೊದಲ ಹೆಜ್ಜೆ ಇಡುವಾಗ  ಕೈ ಹಿಡಿದು ನಡೆಸೋಕೆ ಹೇಗೂ ನೀ  ಇರ್ತಿಯಲ್ಲ ಆಮೇಲೆ ಮತ್ತೆ ಬೀಳಲ್ಲ  ನಾನು ಎತ್ತರಕ್ಕೆ ಮತ್ತು ಎತ್ತರಕ್ಕೆ ಹಾರ್ತೀನಿ.. ನಿನ್ನ ಬಿಟ್ಟು ಹೊಗಲ್ಲ..   ಮತ್ತೆ ನಿನ್ನ ಮಡಿಲಿಗೆ ಬರ್ತೀನಿ. 
ಪ್ರಪಂಚ ನನ್ನನ್ನು ಅಸಹಾಯಕ ಅನ್ನೋಕೆ ಬಿಡಬೇಡ, ನಾನು ಹಾರಬಲ್ಲೆನ? ಎಂಬ ನನ್ನದೇ  ಪ್ರಶ್ನೆಗೆ ನಾನೂ..   ಹಾರಬಲ್ಲೆ ಎಂದು ನನಗೆ  ನಾನೇ  ಉತ್ತರ ಕಂಡುಕೊಳ್ಳುವ ಸ್ವಾತಂತ್ರ  ಕೊಡಮ್ಮ ... ನೀನು ಹೇಳಿದ್ದನ್ನೆಲ್ಲ  ನೆನಪಿಟ್ಟುಕೊಂಡು  ಜಾಣ ಆಗ್ತೀನಿ ಆದ್ರೆ ಹೇಳು  ನಂಗು ಎಲ್ಲವನ್ನ.... 
ಪಕ್ಕದ ಮನೆ ಪಾಪು ಥರ ನಾನು ಹಾರಬೇಕು... ನಿನ್ನ ರಕ್ಷಣೆಯಲ್ಲಿ ಇರೋ ನಂಗೆ ನೀ  ಹಾರಿ ಹೋದಾಗ, ಒಂಟಿಯಾಗಿದ್ದಾಗ ಭಯ ಆಗತ್ತೆ ನನ್ನನ್ನೂ  ಹಾರಾಡೋಕೆ  ಕರ್ಕೊಂಡು ಹೋಗು ಹಾರೋದನ್ನ  ನಂಗೂ ಕಲಿಸು....ನಾನು ಮುಗಿಲೆತ್ತರಕ್ಕೆ  ಹಾರುತ್ತೇನೆ.....  ಅಂತ ಹೇಳ್ತಾ ಹೇಳ್ತಾ ನಿದ್ದೆಗೆ ಜಾರಿತ್ತು ಪುಟ್ಟ ಮರಿ... ಅಮ್ಮ ಯೋಚನೆಗೆ  ಬಿದ್ದಳು.... ಹೌದು ಗೂಡಲ್ಲಿ  ಬಚ್ಚಿಡೋದಕ್ಕಿಂತ  ಒಂದಷ್ಟು ತಿಳುವಳಿಕೆ ಕೊಟ್ಟು ಹಾರಲು ಕಲಿಸುವುದು  ಒಳಿತು....  ಅಮ್ಮ ನಾನು ತಿದ್ದಬಹುದು...  ಕೆಟ್ಟ ಅನುಭವದಿಂದ ಕಲಿಯುವ ಪಾಠಕ್ಕಿಂತ ನಾನು ಕೈ ಹಿಡಿದು, ಜೊತೆ ನಡೆದು..  ಕಲಿಸುವುದೇ  ಒಳಿತೆಂದು........ ರೆಕ್ಕೆಗಳು ಬಲಿಷ್ಟವಾಗಲಿ ಲೀಲಾಜಾಲವಾಗಿ  ಹಾರುವುದ ಕಳಿಸುವುದು ಒಳಿತು ಹಾರುವ ಪ್ರತಿ ಕ್ಷಣವು ಜೊತೆಗಿದ್ದು ಕೆಟ್ಟ ಹದ್ದನ್ನು ತೋರಿಸುತ್ತೇನೆ... ಆಗಲೇ ತಿಳಿಯುವುದು ಕೆಟ್ಟದ್ದು ಮತ್ತು ಅದರಿಂದ ರಕ್ಷಿಸಿಕೊಳ್ಳುವುದು... ಕೆಡುಕನ್ನು ಮೀರಿ ಕನಸನ್ನು ಗೆಲ್ಲುವುದನ್ನು ಅವಳ ಬದುಕೇ ಕಲಿಸಲಿ...  ಬುತ್ತಿ ಕಟ್ಟಿಕೊಡುವುದಕ್ಕಿಂತ  ಬುತ್ತಿ ಕಟ್ಟುವುದನ್ನೇ ಕಲಿಸುವುದು ನಾಳೆಗಳಿಗೂ  ಒಳ್ಳೆಯದು...  

ಮರಿ ಹಕ್ಕಿಯ ಬಾಳಲ್ಲಿ ಹೊಸ ಸೂರ್ಯ ಮೂಡಿದ್ದಾನೆ...  ಆ ಬೆಳಗಲ್ಲಿ ಮರಿಯ ರೆಕ್ಕೆಗೆ ಗಗನವೇ ಗಡಿಯಾಗಿತ್ತು..... 


                                                                                                           
**ಚಿತ್ರಗಳು ಗೂಗಲ್ ನಲ್ಲಿ ಇದ್ದದ್ದು 

Saturday, 14 June 2014

ಒಲವ ಮೇಘಕ್ಕೊಂದು ಪತ್ರ....

ಒಲವ ಗೆಳೆಯ ...... 

        ಈ ಬಾರಿ ಯಾಕೋ ಈ ಪರಿ ಮುನಿಸಿಕೊಂಡಿದ್ದೀಯಾ? ಎಷ್ಟು ದಿನವಾದರೂ ನನ್ನ ನೋಡಲು ಬರಲೇ ಇಲ್ಲ! ಕಾಯಿಸುವವನಿಗೆನು  ಗೊತ್ತು ಕಾಯುವವಳ ನೋವು? ಆದರೂ ನೀ ಇರದೇ ನಾನಿಲ್ಲ ಬಿಡು... ಗೆಳೆಯ, ಕೆಲ ಭಾವಗಳನ್ನು ಹೇಳಲೇಬೇಕು... ಎಷ್ಟು ಕಾಯುತ್ತಿದ್ದೆ  ಗೊತ್ತ ನೀ ಬರುವ ದಾರಿಯನ್ನು.. ಅಂತು ಬಂದೆಯಲ್ಲ... 

        ಆಹ್! ಮೈ ಮನವೆಲ್ಲ ಘಮ್ ಎನಿಸುತ್ತಿದೆ.. ಹುಚ್ಚು ಹಿಡಿಸುವಷ್ಟು ಸಂತೋಷವಾಗಿದೆ. ಎಲ್ಲೆಲ್ಲೂ ಹೊಸ  ಹಸಿರ ಚಿಗುರು.. ನಿನ್ನ ವಿರಹದಿಂದ ಬಿರುಸಾದ ನಾನು ನೀ ಬಂದೊಡನೆಯೇ ಮೃದುವಾಗಿಬಿಡುತ್ತೇನೆ... ಹೀಗೆ ಬಿರುಸಾದಾಗ ಅದೆಷ್ಟೋ ಬಾರಿ ಯೋಚಿಸಿದ್ದೇನೆ, ಮುನಿಸುಕೊಂಡು ಬಿಡಬೇಕು ಎಂದು. ಕಾರಣ ನೀ ಮತ್ತೆ ನನ್ನ ಬಿಟ್ಟು ಹೋಗುತ್ತಿಯಲ್ಲ ಎಂದು ಆದರೂ ನೀ ಬಂದಾಗ ಎಲ್ಲವನ್ನೂ ಮರೆತು ಮೃದುವಾಗಿ ಬಿಡುತ್ತೇನೆ ಅದಕ್ಕೆಂದೇ ನೀನು ಕಾಡುವುದು ಕಾಯಿಸುವುದು ಗೊತ್ತು ನನಗೆ... ಹಾಗಿದ್ದು ಕಾಡುವ ಗೆಳೆಯ ಯಾರಿಗೆ ಬೇಡ ಹೇಳು? ಮತ್ತೂ ಇಷ್ಟವಾಗಿ ಬಿಡುತ್ತಿಯ... ಇದು ನಮ್ಮ ಬದುಕಿನ ನಿಯಮ ನೀ ಬರುವುದೂ ಹೋಗುವುದೂ..... ನಡೆಯಲೇ ಬೇಕು ನನಗೂ ಇದು  ಅಭ್ಯಾಸವಾಗಿಬಿಟ್ಟಿದೆ ಬಿಡು... 

    ಆದರೆ ಕೆಲವೊಮ್ಮೆ ಭಯವೂ ಆಗುತ್ತದೆ... ನಿನ್ನ ಈ ಹುಚ್ಚು ಪ್ರೀತಿಯನ್ನು ಕಂಡಾಗ, ಮುನಿಸುಕೊಂಡು ದೂರ  ಹೋದರೂ ಕರೆದುತರಬಹುದೇನೊ ಆದರೆ ನಿನ್ನೆಲ್ಲಾ  ಪ್ರೀತಿಯನ್ನು ಒಟ್ಟಿಗೆ ನನ್ನ ಮೇಲೆ ಸುರಿದಾಗ ಮಾತ್ರ ಭಯಂಕರ ಭಯವಾಗಿ ಬಿಡುತ್ತದೆ ನಾನಂತು ಅದೆಷ್ಟೋ ಬಾರಿ ಅಸಹಾಯಕಳಾಗಿ ಕುಳಿತು ಬಿಟ್ಟಿದ್ದೇನೆ.. ಮುಂದಿನ ದಾರಿಯೇ ಕಾಣದಂತಾಗಿ  ಬಿಡುತ್ತದೆ ಎಲ್ಲೋ ಅನಿಸುತ್ತದೆ ಒಂದು ದಿನ ನಿನ್ನೀ  ಹುಚ್ಚು ಪ್ರೀತಿ ಹೆಚ್ಚಾದರೆ ನಾನೆ ಎಲ್ಲೋ ಕಳೆದು ಹೋಗಿ ಬಿಡುತ್ತೆನೇನೋ ಎಂದು..... ಏಕೋ ಕೆಲವೊಮ್ಮೆ ನನ್ನ ಮೇಲೆ ಈ ಪರಿಯ ಹುಚ್ಚು ಪ್ರೀತಿ ನಿನಗೆ? ನಿನ್ನ ಮುನಿಸು ಮತ್ತು  ಅತೀ ಎಂಬಂಥ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ನಂಗೆ ಕಷ್ಟವಾಗುತ್ತಿದೆ.. ಅದರಲ್ಲೂ ಇಲ್ಲಿ ನಾನೊಬ್ಬಳೆ ಅಲ್ಲ ನನ್ನನ್ನು ನಂಬಿ, ನೆಚ್ಚಿದ ನೂರಾರು ಕನಸುಗಳಿವೆ...

   ನೀನು ಕೆಲ ಬಾರಿ ಎಷ್ಟು ಕರೆದರೂ ಕೇಳದವನಂತೆ ದೂರ ಹೋಗಿ ಬಿಡುತ್ತಿಯ ಕೆಲ ಬಾರಿ ಹತ್ತಿರಕ್ಕೆ ಬಂದು ಅತೀ ಎಂಬಂತೆ ಪ್ರೀತಿ ತೋರುತ್ತಿಯ.. ಈ ಎರಡನ್ನು ಸಹಿಸಿಕೊಳ್ಳುವುದು ನಿಜಕ್ಕೂ ಕಷ್ಟವೇ ನನಗೆ... ನೀನು ನಾನು ಹದವಾಗಿ ಬೆರೆತರೆ ಒಂದು ಹೊಸ ಸೃಷ್ಠಿಯೇ ಆಗುತ್ತದೆ ಎಂದೂ ನಿನಗೂ ಗೊತ್ತು 

       ದಿನವು ಬೇಡಿಕೊಳ್ಳುತ್ತೇನೆ ಈ ಬಾರಿಯಾದರು  ನೀನು ಸಮಾಧಾನದಿಂದ ಪ್ರೀತಿಯ ಸುಧೆ ಹರಿಸಲಿ ಎಂದು... ನಿನ್ನೊಲವ ಮುಂಗಾರಿಗೆ ಕಾಯುತ್ತಿದ್ದೇನೆ. ನೀ ಇಲ್ಲದೆ ನನಗೆ ಉಸಿರಿಲ್ಲ ಹಸಿರಿಲ್ಲ ನೀ ಇರದ ಈ ಬದುಕಿಗೆ ಬಣ್ಣವಿಲ್ಲ.. ನಿಜಕ್ಕೂ ಗೆಳೆಯ  ನೀ ನನ್ನೊಲವಿಗೆ   ಮಳೆಗಾಲದ ಹಸಿರು ಈ ಬದುಕಲ್ಲಿ ಒಲವಿನ ಮಳೆ ತರುವ ಮೇಘ ನೀನು.. ನಾ ನಿನ್ನೊಲವ ಪೃಥ್ವಿ .. ನೀ ಕೊಟ್ಟ ಹಸಿರನ್ನು ಸೂರ್ಯ ರಶ್ಮಿಗೆ ಕೊಟ್ಟು ನಿನ್ನೊಲವಿಗೆ ನನ್ನೊಡಲನ್ನು ಬರಿದಾಗಿಸಿಕೊಂಡು ಕಾಯುತ್ತಿದ್ದೇನೆ.... 


ನಿನ್ನೊಲವ ನಿರೀಕ್ಷೆಯಲ್ಲಿ
      ಭುವಿ