Saturday, 14 June 2014

ಒಲವ ಮೇಘಕ್ಕೊಂದು ಪತ್ರ....

ಒಲವ ಗೆಳೆಯ ...... 

        ಈ ಬಾರಿ ಯಾಕೋ ಈ ಪರಿ ಮುನಿಸಿಕೊಂಡಿದ್ದೀಯಾ? ಎಷ್ಟು ದಿನವಾದರೂ ನನ್ನ ನೋಡಲು ಬರಲೇ ಇಲ್ಲ! ಕಾಯಿಸುವವನಿಗೆನು  ಗೊತ್ತು ಕಾಯುವವಳ ನೋವು? ಆದರೂ ನೀ ಇರದೇ ನಾನಿಲ್ಲ ಬಿಡು... ಗೆಳೆಯ, ಕೆಲ ಭಾವಗಳನ್ನು ಹೇಳಲೇಬೇಕು... ಎಷ್ಟು ಕಾಯುತ್ತಿದ್ದೆ  ಗೊತ್ತ ನೀ ಬರುವ ದಾರಿಯನ್ನು.. ಅಂತು ಬಂದೆಯಲ್ಲ... 

        ಆಹ್! ಮೈ ಮನವೆಲ್ಲ ಘಮ್ ಎನಿಸುತ್ತಿದೆ.. ಹುಚ್ಚು ಹಿಡಿಸುವಷ್ಟು ಸಂತೋಷವಾಗಿದೆ. ಎಲ್ಲೆಲ್ಲೂ ಹೊಸ  ಹಸಿರ ಚಿಗುರು.. ನಿನ್ನ ವಿರಹದಿಂದ ಬಿರುಸಾದ ನಾನು ನೀ ಬಂದೊಡನೆಯೇ ಮೃದುವಾಗಿಬಿಡುತ್ತೇನೆ... ಹೀಗೆ ಬಿರುಸಾದಾಗ ಅದೆಷ್ಟೋ ಬಾರಿ ಯೋಚಿಸಿದ್ದೇನೆ, ಮುನಿಸುಕೊಂಡು ಬಿಡಬೇಕು ಎಂದು. ಕಾರಣ ನೀ ಮತ್ತೆ ನನ್ನ ಬಿಟ್ಟು ಹೋಗುತ್ತಿಯಲ್ಲ ಎಂದು ಆದರೂ ನೀ ಬಂದಾಗ ಎಲ್ಲವನ್ನೂ ಮರೆತು ಮೃದುವಾಗಿ ಬಿಡುತ್ತೇನೆ ಅದಕ್ಕೆಂದೇ ನೀನು ಕಾಡುವುದು ಕಾಯಿಸುವುದು ಗೊತ್ತು ನನಗೆ... ಹಾಗಿದ್ದು ಕಾಡುವ ಗೆಳೆಯ ಯಾರಿಗೆ ಬೇಡ ಹೇಳು? ಮತ್ತೂ ಇಷ್ಟವಾಗಿ ಬಿಡುತ್ತಿಯ... ಇದು ನಮ್ಮ ಬದುಕಿನ ನಿಯಮ ನೀ ಬರುವುದೂ ಹೋಗುವುದೂ..... ನಡೆಯಲೇ ಬೇಕು ನನಗೂ ಇದು  ಅಭ್ಯಾಸವಾಗಿಬಿಟ್ಟಿದೆ ಬಿಡು... 

    ಆದರೆ ಕೆಲವೊಮ್ಮೆ ಭಯವೂ ಆಗುತ್ತದೆ... ನಿನ್ನ ಈ ಹುಚ್ಚು ಪ್ರೀತಿಯನ್ನು ಕಂಡಾಗ, ಮುನಿಸುಕೊಂಡು ದೂರ  ಹೋದರೂ ಕರೆದುತರಬಹುದೇನೊ ಆದರೆ ನಿನ್ನೆಲ್ಲಾ  ಪ್ರೀತಿಯನ್ನು ಒಟ್ಟಿಗೆ ನನ್ನ ಮೇಲೆ ಸುರಿದಾಗ ಮಾತ್ರ ಭಯಂಕರ ಭಯವಾಗಿ ಬಿಡುತ್ತದೆ ನಾನಂತು ಅದೆಷ್ಟೋ ಬಾರಿ ಅಸಹಾಯಕಳಾಗಿ ಕುಳಿತು ಬಿಟ್ಟಿದ್ದೇನೆ.. ಮುಂದಿನ ದಾರಿಯೇ ಕಾಣದಂತಾಗಿ  ಬಿಡುತ್ತದೆ ಎಲ್ಲೋ ಅನಿಸುತ್ತದೆ ಒಂದು ದಿನ ನಿನ್ನೀ  ಹುಚ್ಚು ಪ್ರೀತಿ ಹೆಚ್ಚಾದರೆ ನಾನೆ ಎಲ್ಲೋ ಕಳೆದು ಹೋಗಿ ಬಿಡುತ್ತೆನೇನೋ ಎಂದು..... ಏಕೋ ಕೆಲವೊಮ್ಮೆ ನನ್ನ ಮೇಲೆ ಈ ಪರಿಯ ಹುಚ್ಚು ಪ್ರೀತಿ ನಿನಗೆ? ನಿನ್ನ ಮುನಿಸು ಮತ್ತು  ಅತೀ ಎಂಬಂಥ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ನಂಗೆ ಕಷ್ಟವಾಗುತ್ತಿದೆ.. ಅದರಲ್ಲೂ ಇಲ್ಲಿ ನಾನೊಬ್ಬಳೆ ಅಲ್ಲ ನನ್ನನ್ನು ನಂಬಿ, ನೆಚ್ಚಿದ ನೂರಾರು ಕನಸುಗಳಿವೆ...

   ನೀನು ಕೆಲ ಬಾರಿ ಎಷ್ಟು ಕರೆದರೂ ಕೇಳದವನಂತೆ ದೂರ ಹೋಗಿ ಬಿಡುತ್ತಿಯ ಕೆಲ ಬಾರಿ ಹತ್ತಿರಕ್ಕೆ ಬಂದು ಅತೀ ಎಂಬಂತೆ ಪ್ರೀತಿ ತೋರುತ್ತಿಯ.. ಈ ಎರಡನ್ನು ಸಹಿಸಿಕೊಳ್ಳುವುದು ನಿಜಕ್ಕೂ ಕಷ್ಟವೇ ನನಗೆ... ನೀನು ನಾನು ಹದವಾಗಿ ಬೆರೆತರೆ ಒಂದು ಹೊಸ ಸೃಷ್ಠಿಯೇ ಆಗುತ್ತದೆ ಎಂದೂ ನಿನಗೂ ಗೊತ್ತು 

       ದಿನವು ಬೇಡಿಕೊಳ್ಳುತ್ತೇನೆ ಈ ಬಾರಿಯಾದರು  ನೀನು ಸಮಾಧಾನದಿಂದ ಪ್ರೀತಿಯ ಸುಧೆ ಹರಿಸಲಿ ಎಂದು... ನಿನ್ನೊಲವ ಮುಂಗಾರಿಗೆ ಕಾಯುತ್ತಿದ್ದೇನೆ. ನೀ ಇಲ್ಲದೆ ನನಗೆ ಉಸಿರಿಲ್ಲ ಹಸಿರಿಲ್ಲ ನೀ ಇರದ ಈ ಬದುಕಿಗೆ ಬಣ್ಣವಿಲ್ಲ.. ನಿಜಕ್ಕೂ ಗೆಳೆಯ  ನೀ ನನ್ನೊಲವಿಗೆ   ಮಳೆಗಾಲದ ಹಸಿರು ಈ ಬದುಕಲ್ಲಿ ಒಲವಿನ ಮಳೆ ತರುವ ಮೇಘ ನೀನು.. ನಾ ನಿನ್ನೊಲವ ಪೃಥ್ವಿ .. ನೀ ಕೊಟ್ಟ ಹಸಿರನ್ನು ಸೂರ್ಯ ರಶ್ಮಿಗೆ ಕೊಟ್ಟು ನಿನ್ನೊಲವಿಗೆ ನನ್ನೊಡಲನ್ನು ಬರಿದಾಗಿಸಿಕೊಂಡು ಕಾಯುತ್ತಿದ್ದೇನೆ.... 


ನಿನ್ನೊಲವ ನಿರೀಕ್ಷೆಯಲ್ಲಿ
      ಭುವಿ 




4 comments:

  1. ಸಂಧ್ಯಾ -
    ಚಂದವಿದೆ ಭಾವಗಳು.... ಮುಂದುವರೆಸು....
    ಮಳೆಯಾಗಲಿ ಮಧುರ ಭಾವಗಳದ್ದು ಮನ ತುಂಬಿ ಹರಿವಂತೆ.....

    ReplyDelete
  2. ಸಂಧ್ಯಾ...ಚಂದ ಮತ್ತು ಚಂದ..
    ಕಡೆಯ ಸಾಲುಗಳು ಮತ್ತೂ ಚಂದವಿದೆ... ತನ್ನನ್ನು ತಾನು ಬರಿದಾಗಿಸಿಕೊಂಡು ಕಾಯೋ ಭಾವ...

    ಬರಿತಿರು..

    ReplyDelete
  3. Sooper Sandhya... Olava maleyaagali dhaariniya madilige...

    ReplyDelete
  4. ಅಭಿಸಾರಿಕೆ...ವಾಹ್ ತುಂಬಾ ಕಾಡೋ ಹೆಸರಿದು...
    ಕಾದಿರಳು ಅಭಿಸಾರಿಕೆ ಅಂತನ್ನೋ ಕನಸ ಭಾವ ನನ್ನೊಳಗಿರೋ ನನ್ನಲ್ಲಿಷ್ಟು ಪುಳಕ ಹುಟ್ಟಿಸೋದು ಯಾವಾಗಲೂ.
    ಭಾವ,ಬರಹ ಎಲ್ಲವೂ ಚಂದವೇ ಹುಡುಗಿ ನಿನ್ನ ಅಭಿಸಾರಿಕೆಯಷ್ಟೇ.
    ಮೊದಲ ಬರಹ ಅಂತನಿಸದಷ್ಟು ಇಷ್ಟವಾಯ್ತು ನಿನ್ನೀ ಪತ್ರದ ಮಾತು.
    ಮುಂದುವರೆಸು..

    ReplyDelete