Wednesday 22 April 2020

ಒಳಗಿನ ಕಿವಿಗೊಂದು ಕಿವಿಮಾತು

ಮನಸೇ... 

ಇದು ಅಂತ್ಯಂತ ಕಷ್ಟ ಕಾಲ ಮನುಷ್ಯ ಮನುಷ್ಯನ ಮುಖ ನೋಡಲು, ಪ್ರೀತಿಯ ಹಸ್ತ ನೀಡಲೂ ಭಯ ಪಡುತ್ತಿರುವ ಭಯಾನಕ ಕ್ಷಣಗಳು. ಎಲ್ಲವನ್ನೂ ಗೆದ್ದೇ ಎಂದು ಬೀಗುತ್ತಿದ್ದವನಿಗೆ ಸಾವನ್ನು ಗೆದ್ದಿಲ್ಲ ಎಂಬ ಆತ್ಮ ವಿಮರ್ಶೆಯ ಕಾಲ. 

ನಾವುಗಳು ಅದೆಷ್ಟು ಬೀಗುತ್ತಿದೆವು. ಎಲ್ಲವನ್ನೂ ಮುಷ್ಟಿಯಲ್ಲಿ ಬಿಗಿಹಿಡಿಯಬಲ್ಲೆವು ಎಂಬ ಭ್ರಮೆಯಲ್ಲಿ. ಯಾರೂ ಇಲ್ಲದೆಯೂ ಬದುಕಬಲ್ಲೆವು ಎಂಬ ಹುಚ್ಚು ಧೈರ್ಯದಲ್ಲಿ. ಗಗನಕ್ಕೆ ಹಾರುತ್ತೇವೆ ಎಂದು ಭುವಿಯೆಡೆಗೆ ನಿರ್ಲಕ್ಷ ತೋರುವಷ್ಟು, ಅದೆಷ್ಟು ಬ್ಯುಸಿ ಆಗಿದ್ದೆವು ಸಂಬಂಧಗಳ ಮರೆವಷ್ಟು, ಅದೆಷ್ಟು ಅಹಂ ಭಾವ. ಅಹಂ ಸರ್ವಂ. 


ಆದರೆ ಈ ಕ್ಷಣ, ನಾಳೆಗಳ ಕಲ್ಪನೆಯೇ ಇಲ್ಲ ಕನಸುಗಳ ಕಾಣಲೂ ಭಯ, ಕನಸ ಕಟ್ಟಿಕೊಂಡು ಮಾಡುವುದೇನಿದೆ. ಇಂದು ಈ ಕ್ಷಣ ಅಂತ ಬದುಕಬೇಕು. ಯಾವ ಕ್ಷಣದಲ್ಲಿ ಯಾವ ರೋಗ ಬಂದು ಯಾರ ಬಲಿಪಡೆಯುತ್ತದೋ, ಕಂಡವರು ಯಾರು? ನಾವು ಬೀಗಿದ, ಖುಷಿಯಿಂದ ಓಡಾಡಿದ ರಸ್ತೆಗಳಲ್ಲಿಇಂದು  ನಡೆಯಲೂ ಹಿಂಜರಿಯಬೇಕು. ಇಷ್ಟೊಂದು ಜನಗಳ ಕಂಡು ಅಚ್ಚರಿ ಪಟ್ಟ ನನ್ನದೇ ಕಣ್ಣುಗಳೂ, ಇಂದಿನ ರಸ್ತೆಗಳ ಖಾಲಿತನಕ್ಕೆ, ಮೌನಕ್ಕೆ ಹೆದರಿ ನಡುಗಿ ಹೋಗಿದೆ. ಇದು ಇನ್ನೆಷ್ಟು ದಿನ ಎಂಬ ಉತ್ತರವಿಲ್ಲದ ಪ್ರಶ್ನೆಯ ಮತ್ತೆ ಮತ್ತೆ ಕೇಳಿಕೊಂಡು ಸೋತು ಹೋಗಿದೆ.ಎಷ್ಟೊಂದು ಮುಖವಾಡಗಳ ಹೊತ್ತು ಬದುಕುತ್ತಿದ್ದೆವು ನಾವು, ಇಂದು ಯಾವುದೂ ಇಲ್ಲ ಮನುಷ್ಯ ತನ್ನವರನ್ನು ಕಾಪಾಡಿಕೊಳ್ಳಲು ಅದೆಷ್ಟು ಹೋರಾಡುತಿದ್ದಾನೆ. ಯುಧ್ಧ, ಭಯೋತ್ಪಾದನೆಯಲ್ಲಿ ಇರದ ಜೀವ ಭಯವನ್ನು ಈ ರೋಗ ಹುಟ್ಟುಹಾಕಿದೆ. 

ಹೇ ನನ್ನೊಳಗಿನ ಕಿವಿಯೇ... 

ಇದರಿಂದ ಒಂದಷ್ಟು ಬದುಕ ಪಾಠ ಕಲಿಯಬೇಕು ನೀನು. 

ನೆನಪಿಟ್ಟುಕೋ ನೀನು ಒಂದು ಪುಟ್ಟ ಜೀವ ಇಲ್ಲಿ ನಿನಗಿಂತ ಅವಶ್ಯಕವಾಗಿದ್ದು ಸಾವಿರವಿದೆ.  ಅಷ್ಟಕ್ಕೂ, ನೀನು ಭುವಿಗೆ ಅವಶ್ಯಕತೆಯೇ ಅಲ್ಲ. ಇಲ್ಲಿ ಇರುವಷ್ಟೂ ದಿನ ಪ್ರೀತಿ ಸ್ನೇಹಗಳ ನೀಡುಕೈಯಾಗಿರು ನಾನೇನು ಪಡೆದೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ, ಯಾಕೆಂದರೆ ನಿನ್ನ ಹುಟ್ಟು ಪಡೆಯಲಲ್ಲ, ಕೊಡಲು. ನಿನ್ನ ಕೈಲಾದ ಸಹಾಯ ಮಾಡು.  ಹಾ,! ಸಹಾಯವೆಂದರೆ ಬರಿಯ ದುಡ್ಡಿನದಲ್ಲ. ನೊಂದವನಿಗೆ ಬರಿಯ ದುಡ್ಡಿನ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದಿತು. ಮರು ಪ್ರೀತಿಯ ಹಂಬಲವಿಲ್ಲದೇ ಪ್ರೀತಿ ಕೊಡು, ಇಲ್ಲಿ ಕೊಟ್ಟ ಪ್ರೀತಿ ಇನ್ನೆಲ್ಲಿಂದಲೋ ನಿನ್ನೆಡೆಗೆ ಅನಾಯಾಸ ಹರಿದು ಬಂದೀತು, ಬರುತ್ತೆ.  ಎಲ್ಲೋ ಸಿಗುವ ಯಾರನ್ನೋ ಪ್ರೀತಿಸಬೇಕಂತಲ್ಲ, ಕಡೆಗೆ ನಿನ್ನವರನ್ನ ನಿನ್ನ ಸುತ್ತಲಿರುವವರನ್ನು ಪ್ರೀತಿಸುವ ಶ್ರೀಮಂತಿಕೆ  ಬರಲಿ.

ಹೊರಗೆ ಕಾಲಿಟ್ಟರೆ ರೋಗ ಅಂಟುವ ಈ ದಿನಗಳಲ್ಲಿ ಮನೆಯಲ್ಲೇ ಕುಳಿತು ದಿನಗಳ ಲೆಕ್ಕಹಾಕುತ್ತಿರುವ ನಿಂಗೆ ಮನಸಿನ ರೋಗ ಅಂಟದಿರಲಿ ನಿನ್ನೊಳಗಿನ ಭಾವ ಗಂಗೆ ಪ್ರೇಮದ ರೂಪ ಪಡೆದು ಧುಮ್ಮಿಕ್ಕಲಿ.