Monday 13 August 2018

ಗೆಲುವಿನ‌ ಹಸಿವಿಗೆ ಒಂದಷ್ಟು...

ಎಲ್ಲ ದಿನಗಳು ಒಂದೇ ರೀತಿ ಇರುವುದಿಲ್ಲ ಈ ನಡುವೆ ಪ್ರತಿ ಕ್ಷಣಕ್ಕೂ ಒಂದೊಂದು ಬಣ್ಣ. ಸ್ವಂತಿಕೆ ಇದೆ ಆದರೆ  ಸ್ವಂತಕ್ಕೆ ಸಮಯವಿಲ್ಲ ಹಾಗಂತ ಸಮಯ ಪರಾವಲಂಬಿಯಲ್ಲ ಸಂಪೂರ್ಣ ಸ್ವಂತಂತ್ರ. ತೀರಾ ತಿರುಗುವ ಬಣ್ಣದ ಕಮಾನಿನಂತಾಗಿದ್ದೇನೆ ಇಂತದೇ  ಬಣ್ಣವ....  ಹೇಳಲಾರೆ ಆದರೆ ಬರಿಯ ತಿರುಗಾಟ, ಗಟ್ಟಿ ನೆಲೆಯಿಲ್ಲ. ನೆಲೆಯ ದಕ್ಕಿಸಿಕೊಳ್ಳುವ ಬಯಕೆ ಇದೆಯಾ ಇದ್ದಂತಿಲ್ಲ. ಇದು ಗೊಂದಲವಾ? ಆನಂದವಾ? ಗೊತ್ತಿಲ್ಲ. ಸುಮ್ಮನೆ ಕಾಲಕ್ಕೆ ಉತ್ತರಿಸಲು ಬಿಡಬೇಕು. ಹೂವಿಗೆ ಹಣ್ಣಾಗುವ ಯೋಗ್ಯತೆ ಇದ್ದರೆ  ಆಗದೆ ಇದ್ದಿತಾ? ಯಾವ ಭ್ರಮರದ ಹಂಗಿಲ್ಲ.

ಕೆಲವೊಮ್ಮೆ ಸುನಾಮಿಯ ಭಯ ಕೆಲವೊಮ್ಮೆ ಬರಗಾಲದ ಬರ. ಯಾವುದಕ್ಕೂ ಹೊಂದಿಕೊಳ್ಳಲಾರೆ ಹಾಗಂತ ವಿಮುಖತೆಯೂ ಇಲ್ಲ. ಸುಮ್ಮನೆ ಕೂರಬೇಕು ಮನವೆಂಬ   ಕಡಲ ಮಧ್ಯದಲ್ಲಿ. ಯಾಕೋ ಮನಸು ಕಡಲ ದಡವಾಗುವುದು ಇಷ್ಟವಿಲ್ಲ. ದಡವೆಂದರೆ ಅಲೆಯೆಸೆದ ಕಸದ ಬಯಲು. ನಾನು ಕಡಲ ಮಧ್ಯ ಕೂರಬೇಕು ಯಾವ ಕಸದ ವಾಸನೆಯೂ ತಾಗಬಾರದು ಆದರೆ ಅಲೆಯ ಭಾವ ಕಾಡಬೇಕು.

ಮನಸೇ....

ನಕಾರಾತ್ಮಕತೆ ಎಂಬುದು ಕೀಟಾಣುವಿನಂತೆ. ಕಾಣದಂತೆ ನಿನ್ನ ಕೊಲ್ಲುತ್ತಲೇ ಇರುತ್ತದೆ. ಯಾರಿಗೂ ನಿನ್ನ ಮೇಲೆ ನಕಾರಾತ್ಮಕತೆಯ ದಾಳಿ ಮಾಡಲು ಬಿಡಬೇಡ. ಬದುಕು ಒಂದೇ ಅದಕ್ಕೆ ನೀನೇ ದೊರೆ. ದೊರೆಯ ಮಾತೇ  ಅಂತಿಮ ರಾಜ್ಯದಲ್ಲಿ, ನಿನ್ನ ನಿರ್ಧಾರಗಳಿಗೆ-ಕನಸುಗಳಿಗೆ ಯಾರದೂ ಒಪ್ಪಿಗೆಯ ಹಸ್ತಾಕ್ಷರ ಬೇಕಿಲ್ಲ. ಬದುಕ ಬರೆಯ ಹೊರಟ ನಿಂಗೆ ಕೊನೆಯ ಸಹಿಯನ್ನು ಮಾಡುವ ಅಧಿಕಾರ ಮತ್ತು ಹಕ್ಕು ಎರಡೂ ಇದೆ. ಮನಸನ್ನು ನ್ಯಾಯಾಲದಲ್ಲಿ ನಿಲ್ಲಿಸಿ ಪ್ರಶ್ನಿಸೋ ಹಕ್ಕು ನ್ಯಾಯಾಧೀಶನಿಗೆ ಮಾತ್ರ ಮತ್ತು ನೀನೆ ಬರೆದ ಈ ಕಾನೂನಿನಲ್ಲಿ ನಿನ್ನದೇ ಕಾಯ್ದೆ ಕೂಡ. ಹುಳವೊಂದು ಹೂವ ತಿಂದು ಬಿಡುತ್ತದೆ ಎಂದು ತಿಳಿದ ದಿನ ಹುಳವನ್ನು ಹುಡುಕಿ ಕೊಲ್ಲಬೇಕು. ಹೂವನ್ನಲ್ಲ. ನಗುವ ಹೂವಿಗೆ ಇನ್ನೂ ಕನಸಿದೆ ಆದರೆ ಹೂವ ನಗುವ ಕೊಲ್ಲುವ ಹುಳುವಿಗಲ್ಲ.
ಹಾಗೆಯೇ ನಕಾರಾತ್ಮಕತೆಗೂ... ಮತ್ತದನ್ನ ಹುಟ್ಟು ಹಾಕುವ ಮನಸುಗಳಿಗೂ.

ಗೆಲುವಿನ ಕನಸು ಎಲ್ಲರಿಗೂ ಇದೆ. ಎಲ್ಲರಿಗೂ ಗೆಲುವುಬೇಕು, ಗೆಲುವನ್ನು ನೀರಿನಂತೆ ಕುಡಿದುಬಿಡುವ ಹಂಬಲ  ಮತ್ತು ಹಸಿವು. ಆದರೆ  ಮನವೇ, ಅರ್ಥೈಸಿಕೊ ಗೆಲುವೆಂಬುದು ಸಾಗರ ಅದೂ ಸಿಹಿನೀರ ಸಾಗರ ಇದ ಸೇರಲು ತುಂಬಾ ದೂರ ಚಲಿಸಬೇಕು. ಮಳೆಯ ನೀರಿನೊಂದಿಗೆ ಸೇರಿ ತುಂಬಾ ಅಬ್ಬರಿಸಿ ಕಡಲ ಸೇರುವ ತವಕಬೇಡ ನಿಂಗೆ. ಸುಡು ಬೇಸಿಗೆಯ ಬಿಸಿ ಧರೆಯ ಹಸಿವ  ಇಂಗಿಸಿ ನಿನ್ನದೇ ಆತ್ಮಶಕ್ತಿಯೊಟ್ಟಿಗೆ ನಿಲ್ಲದೆ ಹರಿದು ಸಾಗರವ ಅಪ್ಪಿಕೋ. ಯಾರ ಕರುಣೆಯ ಕಾಲುವೆಯೂ ಬೇಡ ಹಾಗೆಯೇ ಯಾರ ಕಿಚ್ಚಿನ ತಡೆ ಗೋಡೆಯೂ.

 ನೀರೆಂದರೆ ಹಂಬಲಿಸುವ ಭುವಿಯೂ ಒಂದು ಮಟ್ಟಿಗೆ ದಾಹ ತೀರಿದ ದಿನ ನೀರನ್ನು  ಹರಿಯಲು  ಬಿಟ್ಟು ಸುಮ್ಮನೆ ಬೆತ್ತಲಾಗಿ ನಿಂತು ಬಿಡುತ್ತದೆ. ಹಾಗೆಯೇ ನಿನ್ನ ಹಿಡಿಯ ಬಂದ ಬಂಧಗಳೂ. ಒಂದು ಸಮಯದ ನಂತರ ಎಲ್ಲ ತೀವ್ರತೆಯೂ ಕಡಿಮೆಯಾಗುತ್ತದೆ ಮತ್ತು ಅಂದು ನಿನ್ನ ಹರಿವಿನ ದಾರಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಸುಮ್ಮನೇ ನಗುತ್ತ ಎಲ್ಲವನ್ನೂ ನೋಡುತ್ತಿರು ನಿನ್ನ ಬದುಕ ದಾರಿ ಅದಾಗೇ ಸೃಷ್ಟಿಯಾದೀತು.


ಬದುಕು ಎಲ್ಲರ ಬಯಕೆ ಮತ್ತು ಬಯಕೆಗಳು ಎಲ್ಲರ ಬದುಕು, ನದಿಯ ಕನಸು ಸಾಗರವ ಸೇರುವುದೇ ಹೊರತು ಸಾಗರವೆಂದು ನದಿಯಾಗ ಬಯಸುವುದಿಲ್ಲ. ಎಲ್ಲವನ್ನೂ ನನ್ನ ಕಣ್ಣುಗಳಲ್ಲಿ ನೋಡುವುದು ಸುಖ ಬೇರೆಯವರ ಕಣ್ಣಾಗಿ ಇರುವುದೇ ಕಷ್ಟ. ಅದಕ್ಕೆ ನದಿ ಹರಿಯುತ್ತದೆ ಮತ್ತು ಅಲೆ  ಜಿಗಿಯುತ್ತದೆ. 


Sunday 17 June 2018

ಕನಸಿನ ಹುಟ್ಟುಹಬ್ಬಕ್ಕೆ......

ನಾಲ್ಕು ವರುಷಗಳು ಸಂಪೂರ್ಣಗೊಂಡವು ಅಭಿಸಾರಿಕೆ ಎನ್ನುವ ನನ್ನ ಬದುಕಿನ ಕನಸಿಗೆ. ಪ್ರಾರಂಭಿಸಿದ ಹುರುಪು ಇಂದಿಲ್ಲವಾದರೂ ಖುಷಿಗಳಂತೂ ಹಾಗೆಯೇ ಇದೆ. 

ಕಾಲವೆಂಬುದು ಹಾಗೆಯೇ ಯಾರನ್ನೂ ಕೇಳದೆ ಸುಮ್ಮನೆ ಸರಿದುಬಿಡುತ್ತದೆ. ನಾವುಗಳು ಬದಲಾಗಬೇಕು ಅಷ್ಟೇ . ಆದರೆ, ಎಷ್ಟೋ ಸಲ ಅದೇ ಸೂರ್ಯ,ಅದೇ ಚಂದ್ರ, ಅದೇ ಭೂಮಿ ಬದಲಾವಣೆ ಹೇಗೆ ಸಾಧ್ಯ? ಎನಿಸಿಬಿಡುತ್ತದೆ. ಸತ್ಯವೆಂದರೆ, ಬದಲಾವಣೆಗೆ ಸಾವಿರ ಅರ್ಥ, ಹುಡುಕಬೇಕಷ್ಟೆ.  ಮೊದ ಮೊದಲು ನನ್ನ ಖಾಸಗಿ ಪಟ್ಟಿಯಲ್ಲಿ ಬರೆಯುತ್ತಿದೆ ಜೊತೆಗೆ ಯಾವುದೊ ಪುಟದ ಹಿಂಭಾಗದಲ್ಲಿ ಅನ್ನಿಸಿದ್ದನ್ನ ಸುಮ್ಮನೆ ಬರೆದೆಸೆಯುತ್ತಿದೆ. ಅದೆಲ್ಲಿಂದ ಹುಟ್ಟಿತೋ ಅಭಿಸಾರಿಕೆಯ ಕನಸು ಗೊತ್ತಿಲ್ಲ. ತಿಂಗಳಿಗೊಂದಾದರೂ ಬರೆಯಬೇಕು ಅಂತ ಅಂದುಕೊಂಡಿದ್ದೆ ಕೂಡ. 

ಇಲ್ಲಿ ನನ್ನದೇ ಬುದ್ಧಿಯೊಂದಿಗೆ,  ಭಾವದೊಂದಿಗೆ ಮಾತನಾಡಿದ ಮಾತುಗಳಿವೆ, ನನ್ನ ಮಡಿಲಿನಲ್ಲಿ ನಾನು ಮಲಗಿ ನಂಗೆ ಮಾಡಿಕೊಂಡ ಸಮಾಧಾನವಿದೆ.  ನನ್ನ ಗೊಂದಲಗಳು, ಬೇಸರಗಳು, ಅಪರಾಧಿ ಭಾವಗಳಿಗೆ ನಾನೆೇ  ಕಟ್ಟಿಕೊಂಡ ಸಮರ್ಥನೆಗಳಿವೆ  ಅಷ್ಟೇ. 

ಹೇಳಿಕೊಳ್ಳುವಷ್ಟೇನೂ ಬರೆದುಕೊಂಡಿಲ್ಲ,  ಬರಿ ಇಪ್ಪತ್ತ ಮೂರು ಬರಹಗಳು ಮಾತ್ರ ಈ ನಾಲ್ಕು  ವರುಷಗಳಲ್ಲಿ. ಇನ್ನೆಷ್ಟು ಬರೆಯುತ್ತೇನೆ ಎಂದರೆ ಗೊತ್ತಿಲ್ಲ. ನಂಗೇ ನನ್ನ ಬರಹಗಳು ಒಂದೇ ಸಾಮ್ಯತೆಯ ಬರಹಗಳಾಗಿ ಅನ್ನಿಸುತ್ತಿವೆ. ಹೊಸ ಬರಹಗಳು ನನ್ನನ್ನೇ ಸಮಾಧಾನಿಸುವಲ್ಲಿ ಸೋಲುತ್ತಿವೆ. 

ಆದರೆ , ಇಂದಿಗೂ ನನ್ನೊಳಗೆ ಅಭಿಸಾರಿಕೆ ಎಂಬ ಧ್ವನಿಯೇ ಒಂದು ಉತ್ಸಾಹವನ್ನ ಕೊಡುತ್ತದೆ. ಅವಳಿಗೆ ನಿರಂತರ ಚಲನೆ ಇದೆ ಮತ್ತು ಎಂದಿಗೂ ಸಾವಿಲ್ಲದ ಕನಸುಗಳಿವೆ ಎಂಬ ಪ್ರತಿಧ್ವನಿಯೇ ಹೊಸದೊಂದು ಕನಸಕಟ್ಟಿಬಿಡುತ್ತವೆ. ಅಭಿಸಾರಿಕೆ ಮಹಾನ್ ಸ್ವಾರ್ಥಿ ಮತ್ತವಳಿಗೆ ಆ ಸ್ವಾರ್ಥವೆಂದರೆ ತುಂಬಾ ಇಷ್ಟ. 


ನನ್ನದೆಷ್ಟಿವೆಯೋ ಗೊತ್ತಿಲ್ಲ ಆದರೆ ಒಂದಷ್ಟು ಜನ ಓದಿದ್ದಾರೆ. ಯಾರ ಭಾವವೇನೂ ಗೊತ್ತಿಲ್ಲ. 

ಖುಷಿಗಳಿಗಿಂತ ನೀರಿಕ್ಷೆಗಳಿಲ್ಲ ಬದುಕಿಗೆ.  ಮತ್ತೆ ಮತ್ತೆ ಹುಟ್ಟಲಿ ನನ್ನೊಳಗೆ ಅಭಿಸಾರಿಕೆ ಮುಗಿಯದ ದಾರಿ ನಿಲ್ಲದ ಪಯಣದಲ್ಲಿ. 

ಹುಟ್ಟುಹಬ್ಬದ ಶುಭಾಶಯಗಳು.... 

Tuesday 13 March 2018

ಸುಮ್ಮನೆ‌ ನನ್ನೊಳಗಿನ ನಂಗೆ....

ಮನಸೇ,

ಎಷ್ಟೊಂದು ಹೊರಳುಗಳು ಬದುಕೆಂಬ ನಡಿಗೆಗೆ. ಎಷ್ಟೊಂದು ಕತ್ತಲು, ಎಷ್ಟೊಂದು ಭಯಗಳು ಎಷ್ಟೊಂದು ಖುಷಿಗಳು. ಪಡೆದುಕೊಂಡೆನೆಂದು ಮೆರೆಯುವ ಕಾಲಕ್ಕೆ ಕಳೆದುಕೊಳ್ಳಬಹುದೆಂಬ ಭಯ. ಇನ್ನೇನು ಬದುಕು ಮುಗಿದೇ ಹೋಯಿತೆಂಬ ಭಯಕ್ಕೆ ಬಿದ್ದಾಗ ಯಾವುದೋ ಭರವಸೆಯ ಬೆಳಕು....

ನೀನೆಂದರೆ ನನ್ನೊಳಗೆ ಒಂಥರಾ ಮುಗಿಯದ ಗೊಂದಲ, ಹೋರಾಟ. ಈ ನಡುವೆ ನನ್ನೊಳಗೆ ಮಾತಿಗಿಂತ ಮೌನ ಕಾಡಿದ್ದೆ ಹೆಚ್ಚು. ಅದೆಷ್ಟು ಹೂವುಗಳು ಬದುಕ ಬಯಲಲ್ಲಿ. ಆದರೆ ಅಸಹಾಯಕ ನಾನು ಯಾವುದನ್ನು ನೋಡಲಾರೆ. ಆದರೂ ಒಂಥರಾ ಭಯ, ಮುಳ್ಳುಗಳ ತಿರಸ್ಕರಿಸಬಹುದು ಆದರೆ ಹೂವುಗಳ ನೋಡದೆ ನಡೆಯಲಿ ಹೇಗೆ?

ಒಪ್ಪುತ್ತೇನೆ, ಎಲ್ಲ ಹೂವುಗಳು ಬದುಕ ಪೂರ್ತಿ ಬರಲಾರವು ಯಾಕೆಂದರೆ ಸಿಕ್ಕಿದ್ದು ಪ್ಲಾಸ್ಟಿಕ್ ಹೂವುಗಳಲ್ಲ ನಿಜದ ಭಾವದ ಪರಿಮಳ ತುಂಬಿದ ಒಲವ ಹೂವುಗಳು. ಅದೆಷ್ಟೋ ಕಾಲ ಮನಸು ಎಂಬುದೊಂದು ಇದೆ ಎಂಬ ನಂಬಿಕೆಯೇ ಇಲ್ಲದೆಯೇ ಬದುಕಿದ್ದೇನೆ ಹಾಗಂತ ಭಾವತೀವ್ರತೆ ಇರಲಿಲ್ಲ ಎಂತಲ್ಲ ಆದರೆ ವಾಸ್ತವದ ಪರಿಕಲ್ಪನೆ ಇತ್ತು.

ಆದರೆ ಈ ನಡುವೆ ಮನಸಿನ ಗೊಂದಲಗಳ ಪ್ರಶ್ನಿಸಲಾಗದೆ, ನಿಭಾಯಿಸಲಾಗದೆ  ನಂಗೆ ನಾನು ಅರ್ಥವಾಗದೆ ಒಂಥರಾ ಕಳೆದು ಹೋಗಿದ್ದೇನೆ.

ಅದೆಷ್ಟು ಸಲ ಹೇಳುವುದು ನಿಂಗೆ, ತಿರುವುಗಳು ಸಾವಿರ ಬರಬಹುದು ಆದರೆ ಪಯಣ ಮುಗಿಯುವುದಿಲ್ಲ. ಪ್ರತಿ ತಿರುವು ಹೊಸ ದಾರಿಯ ಪ್ರಾರಂಭ. ಈ ನಡುವೆ ನೀನು ನೀನಾಗಿಲ್ಲ, ಒಳಗೊಳಗೇ  ಕಳೆದುಹೋಗುತ್ತಿದ್ದಿಯ. ಭಾವಸ್ರಾವಕ್ಕೆ ಹೆದರಿ ಮರುಭೂಮಿಯಾಗುತ್ತಿದ್ದೀಯ. ಆದರೆ ನೆನಪಿಡು,  ಇಲ್ಲಿ ಪ್ರತಿ ದಿನಕ್ಕೂ ನಿಂಗಾಗೆ  ಅರಳುವ ನಿತ್ಯ ಮಲ್ಲಿಗೆಯಿದೆ. ದಿನವೂ ಸಾವಿರ ನಗೆಯ ಮಲ್ಲಿಗೆಯೇ ಅರಳದಿರಬಹುದು. ಆದರೆ ಯಾವಾಗಲಾದರೂ ಒಂದೋ ಎರಡೋ ಅರಳಬಹುದು.

ನೆನಪಿಡು, ಬದುಕು ಅರಿತಷ್ಟೂ ವಿಸ್ಮಯದ ಸಿರಿ. ಖಾಲಿಯಾಗದ ಬೊಗಸೆ ಪ್ರೀತಿ ಮತ್ತು ಬಿದ್ದರೂ ಪ್ರಯತ್ನ ಬಿಡದ ಮಗುವಿನ ತೊದಲು ನುಡಿ ಮತ್ತು ಮೆದು ನಡಿಗೆ.

ನೋವುಗಳು, ಗೊಂದಲಗಳು, ಭಯಗಳು ಎಲ್ಲರ ದಿನನಿತ್ಯದ ಕಾಯಕಗಳು. ಆದರೆ ಯಾವ ಭಾವವೂ ತುಂಬಾ ಕಾಲ ನಮ್ಮ ಕಾಡಬಾರದು.
ಮನಸೇ, ನೀನು ಅತೀ ಭಾವುಕ. ಅದೇ ನಿನ್ನ ಬದುಕಿನ ದುರಂತಕ್ಕೆ ಕಾರಣವಾಗುತ್ತಿದೆ. ಈ ನಡುವೆ ಬದುಕುವ ಪ್ರಕ್ರಿಯೆಯೇ ಬದಲಾಗಿದೆ. ಬದಲಾಯಿಸಿಕೊಳ್ಳುವುದು ತುಂಬಾ ಇದೆ. ಕೆಲವೊಮ್ಮೆ ಅದೆಷ್ಟು ಬೇಸರವಾಗುತ್ತೆ ಎಂದರೆ ಕಣ್ಣ ಮುಂದೆ  ಬರಿಯ ಕತ್ತಲೆ ಕಾಣಿಸಿಬಿಡುತ್ತದೆ. ಯಾಕೋ ಬೆಳಕಿನ ಛಾಯೆಯನ್ನೇ,ಮರೆಯದಂತ ಭಯ ಕಾಡುತ್ತದೆ. ಗೊತ್ತು, ಕತ್ತಲ ಹಿಂದೆ ಬೆಳಕಿದೆ ಕತ್ತಲ ಭಾವವಿಲ್ಲದಿರೆ ಬೆಳಕಿಗೆ ಹೆಸರಿಲ್ಲ ಎಂದು. ಆದರೆ, ಸಾಮಾನ್ಯ ಮನುಷ್ಯ ಜನ್ಮ ನನ್ನದು, ಹಗಲು-ರಾತ್ರಿಗಳಿಗೆ ಸಮ ಪಾಲು ಇಲ್ಲಿ. ಆದರೂ, ಕತ್ತಲೆಂದರೆ ಭಯ. ಯಾಕೆಂದರೆ ಬೆಳಕು ಹುಚ್ಚು ಭರವಸೆಗಳ ಸೃಷ್ಟಿಸಿದೆ ಮತ್ತು ಹಗಲ ಕನಸುಗಳು ನನ್ನ ಸೃಷ್ಟಿ, ಮತ್ತದರ ಸಾಕ್ಷಾತ್ಕಾರ ಕೂಡ ನನ್ನದೇ ಆಯ್ಕೆ. ಆದರೆ ರಾತ್ರಿಯ ಕನಸುಗಳು ನನ್ನ ಆಯ್ಕೆ ಅಲ್ಲ. ನಂಗೆ ಕನಸೆಂದರೆ ಭಯ, ಅದು ನಿಜವಾದರೆ ಪಾಪ ಪ್ರಜ್ಞೆ.

ಮನವೇ, 

ಸುಮ್ಮನೆ ನನ್ನೊಳಗೆ ನನ್ನ ಮುಳುಗಿಸಿಬಿಡು, ನಡೆಸು, ಹಾರುವ  ಶಕ್ತಿ ನೀಡು  ಮತ್ತು ಸುಮ್ಮನೆ ಮಲಗುಕೊಳ್ಳುವ ನೆಮ್ಮದಿಕೊಡು,  ಅದೆಷ್ಟೊ  ದಿನದಿಂದ ಮನಸೆಂಬುದು ಒಂಥರಾ ಗೊಂದಲಗಳ ಗೂಡಾಗಿದೆ, ನಗುವೆಂಬುದು ಅಶಕ್ತವಾಗಿದೆ. ಸಾಕಿನ್ನು ಈ ಕ್ಷಣವೇ ಹೊಸ  ಬದುಕಿನ  ಯುದ್ಧಕ್ಕೆ ಮುನ್ನುಡಿ ನೀಡು ಮತ್ತು ಹಿನ್ನುಡಿಯಲ್ಲಿ ಬರೆದಿಡು "ಈ ಬದುಕಿನ್ನೂ ಮುಗಿದಿಲ್ಲ ಈಗಿನ್ನು ಶುರುವಾಗಿದೆ".