Wednesday, 16 March 2016

ಬದುಕೇ ಬದುಕಿಗೊಂದಿನಿತು ಬೆಳಕ ತುಂಬು...

ಬದುಕು ಒಂದು ವಿಜ್ಞಾನವೇ ಇರಬಹುದು. ಏನೇ ಮಾಡಿದರೂ ಮಾಡದಿದ್ದರೂ ಅದಕ್ಕೊಂದು ಕಾರಣ ಬೇಕು. ಅದನ್ನು ಅಳೆದು ತೂಗಿ ವಿವರಿಸಲು ಸಮರ್ಥನೆಬೇಕು. ಸೃಷ್ಟಿಯಿಂದ ಲಯದವರೆಗೆ ಎಲ್ಲಕ್ಕೂ ಇಂಥದ್ದೇ ಒಂದು ಸಮರ್ಥನೆಯಿದೆ. ಮನುಷ್ಯನಾದರೂ ಏನೇ ತಪ್ಪು ಮಾಡಿದರೂ ದೇವರೇ ಅಲ್ಲವಾ ಬುದ್ಧಿ ಕೊಟ್ಟದ್ದು ಎಂಬ ಉತ್ತರ ಕೊಟ್ಟರೆ, ದೇವರಾದರೂ ಮನುಷ್ಯನಿಗೆ ಸರಿ ತಪ್ಪುಗಳ ತಿಳುವಳಿಕೆ ಕೊಟ್ಟಿದ್ದೇನೆ ಎಂಬ ಉತ್ತರವನ್ನೇ ಕೊಡಬಹುದು.

ಬದುಕು ಮತ್ತು ಬದುಕುವ ರೀತಿ ಕುರುಡನಿಗೆ ಕಂಡ ಆನೆಯಂತೆ. ನನ್ನ ಮನೆಯೆದುರು ಕಂಡ ಸೂರ್ಯೋದಯದ ಬಣ್ಣದಂತೆ. ಕಷ್ಟಗಳು, ಸಂದಿಗ್ಧತೆಗಳು, ದುಃಖ, ಪರಿಸ್ಥಿತಿಗಳೂ ಹಾಗೆಯೇ. ಎಲ್ಲರಿಗೂ ಎಲ್ಲವೂ ಒಂದೇ ರೀತಿಯಲ್ಲಿ ಕಾಣಲಾಗದು. ಸಮಸ್ಯೆ ಒಂದೇ ಆದರೂ ಅದಕ್ಕೆ ಹುಡುಕುವ ಪರಿಹಾರದ ಮಾರ್ಗ ಒಂದೇ ರೀತಿ ಆಗಬೇಕೆಂದೇನಿಲ್ಲ. ಆದರೆ ಒಂದೇ ಸಮಸ್ಯೆಯನ್ನ ಸಮಸ್ಯೆಯ ಪೀಡಕನಾಗಿ ನೋಡುವುದಕ್ಕೂ, ಸಲಹಗಾರನಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಇದು ತಪ್ಪು ಎಂತಲೂ ಅಲ್ಲ. ಆದರೆ ಸಲಹೆಗಾರನಾಗಿ ಕೊಟ್ಟ ಸಲಹೆಯನ್ನು ತನ್ನ ಬದುಕಿಗೆ ಅಳವಡಿಸಿಕೊಳ್ಳಲಾರದವ ಬೇರೆಯವರ ಬದುಕಿನ ನಿರ್ಧಾರಗಳನ್ನು ಬದಲಿಸುವ ಅಧಿಕಾರವನ್ನು ಕಳೆದುಕೊಂಡಿರುತ್ತಾನೆ ಅಲ್ಲವಾ?

ಹಿರಿಯ ಸಂನ್ಯಾಸಿಯೊಬ್ಬರಿಂದ ಬಿರು-ಬೇಸಿಗೆಯಲ್ಲಿ ಮಳೆಗಾಗಿ ಉಪವಾಸ ವೃತವನ್ನಾಚರಿಸಬೇಕು ಎಂದು ಉಪದೇಶವಾಗುತ್ತದೆ. ಅದು ಒಂದು ದಿನವಲ್ಲ ಬರೋಬ್ಬರಿ ಹದಿನೈದು ದಿನ. ಯಾವುದರದ್ದೇ ಇರಲಿ ಸಂಕಲ್ಪ ಸುಲಭ ಆಚರಣೆಯೇ ಕಷ್ಟ. ಬಿಸಿಲಿಗೆ ಜೀವಂತ ಸುಡುವ ಶರೀರ ಜೊತೆಗೆ ಹಸಿವು ಬಾಯಾರಿಕೆ. ಸುಲಭವಾ ಉಪವಾಸ? ಆದರೆ ಉಪದೇಶವಾಗಿದೆ, ಉಪವಾಸ ಮಾಡಬೇಕು ನೀರನ್ನೂ ಸೇವಿಸಬಾರದು. ದಿನದಿಂದ ದಿನಕ್ಕೆ ಶಿಷ್ಯಂದಿರೆಲ್ಲ ಹಾಸಿಗೆ ಹಿಡಿದರು. ಆದರೆ ಗುರು ಮಾತ್ರ ಆರೋಗ್ಯವಾಗಿ ಇದ್ದ. ಒಂದೇ ರೀತಿ ಜೀವನ ಕ್ರಮವಿದ್ದ ಎಲ್ಲರೂ ಹಸಿದಿರುವಾಗ ಗುರುವೊಬ್ಬ ಆರೋಗ್ಯವಾಗಿರಲು ಹೇಗೆ ಸಾಧ್ಯ ಎಂಬುದು ಶಿಷ್ಯರ ಮುಂದಿರುವ ಪ್ರಶ್ನೆ ಮತ್ತು ಕುತೂಹಲ. ಹುಚ್ಚು ಕುತೂಹಲಗಳೇ ಮನುಷ್ಯನನ್ನ ಎಂತಹ ಕೆಲಸಕ್ಕೂ ಪ್ರೇರೆಪಿಸುತ್ತದೆ.

ಎಲ್ಲರೂ ಸೇರಿ ಪ್ರಶ್ನೆಗೆ ಉತ್ತರ ಹುಡುಕ ಹೊರಟರು. ದೇವರ ಪೂಜೆಯ ನಂತರ ಗುರುಗಳು ನೀರು ಕುಡಿಯುವುದು ಮತ್ತು ಹಣ್ಣು ತಿನ್ನುವುದನ್ನು ಕಂಡ ಶಿಷ್ಯಂದಿರಿಗೆ ಕೋಪ ತಡೆಯಲಾರದೆ ಹೋಗಿ ಕೇಳಿದರೆ ಗುರುಗಳದ್ದು ಅದೇ ಶಾಂತ ಸ್ವರದಲ್ಲಿ ಒಂದೇ ಉತ್ತರ " ನಾ ಸೇವಿಸಿದ್ದು ಬರಿ ನೀರು ಹಣ್ಣು ಅಲ್ಲ ಅದು ತೀರ್ಥ ಪ್ರಸಾದ ದೇವರ ಪ್ರಸಾದವನ್ನು ತಿರಸ್ಕರಿಸಬಾರದು" ಎಂದು. ಶಿಷ್ಯಂದಿರಿಗೋ ಮಾತೇ ಬರುತ್ತಿಲ್ಲ. ಏನು ಹೇಳುವುದು ಇತ್ತ ಎಲ್ಲರೂ ಗುರುವಿನ ಉಪದೇಶ ಕೇಳಿ ಉಪವಾಸದಿಂದ ಆರೋಗ್ಯ ಕೆಡಿಸಿಕೊಂಡರೆ ಅತ್ತ ಗುರು ಮಾತ್ರ ತಿಂದುಂಡು ಹಾಯಾಗಿದ್ದಾರೆ ಅದಕ್ಕೆ ಸಮರ್ಥನೆಯ ಸೋಗು ಬೇರೆ ಎಂದು.

ನಿಜ ಪ್ರತಿ ಬದುಕೂ ವಿಭಿನ್ನವೇ ಎಂದಾದ ಮೇಲೆ ನಮ್ಮ ಬದುಕಿಗೆ ಅಳವಡಿಸಿಕೊಳ್ಳಲಾಗದ ಸಲಹೆಗಳನ್ನು ಬೇರೆಯವರಿಗೆ ನೀಡಿ, ಯಾರದ್ದೋ ಬಾಳ ಪಥ ಬದಲಿಸುವ ಯೋಗ್ಯತೆಯಾದರೂ ಇದ್ದೀತಾ? ನಮ್ಮ ದಾರಿಯನ್ನೇ ಗುರುತಿಸಲಾಗದ ನಾವು ಬೇರೆ ಯಾರಿಗೋ ದಾರಿ ತೋರಿಸುತ್ತೇವೆ ಎಂದರೆ ಅದು ಮೂರ್ಖತನವೇ ಅಲ್ಲವಾ?

ನಮ್ಮನ್ನ ಮೊದಲು ನಾವು ಮೆಚ್ಚಬೇಕು. ನಮ್ಮ ನಾವು ಸಲಹಬೇಕು. ಯಾರದೋ ಕಲೆಯ ಎತ್ತಿ ತೋರಿಸಹೋಗುವ ಮುನ್ನ ಅಂತರಂಗದರಮನೆಯಲ್ಲಿ ಪ್ರಾಮಾಣಿಕತೆಯಿರಬೇಕು.  ನಮ್ಮದೇ ಮಾತೂ ನಮಗೆ ಕೇಳದು, ಅನುಸರಿಸಲಾಗದು ಎಂದ ಮೇಲೆ ಆ ಮಾತನ್ನು ಇನ್ಯಾರೋ ಕೇಳಲಿ ಎಂದುಕೊಳ್ಳುವುದೂ ತಪ್ಪೇ ಅಲ್ಲವಾ? ಅಂತರಂಗವೇ ಬದುಕಿನಿಂದಲೇ ಬದುಕಿಗೊಂದಷ್ಟು ಯೋಗ್ಯತೆಯ ದಕ್ಕಿಸಿಕೊಡು.