ಬದುಕು ಬಯಲಾಗ ಹೊರಟಾಗೆಲ್ಲ ಅದೆಷ್ಟೋ ಪರಿಚಯಗಳಾಗುತ್ತವೆ. ಕೆಲವೊಬ್ಬರು ತುಂಬಾ ಅಲ್ಪ ಕಾಲದಲ್ಲಿಯೇ ಇಷ್ಟವಾಗುತ್ತಾರೆ. ಪರಿಚಯಗಳ ಆರಂಭದಲ್ಲಿ ತುಂಬಾ ಮಾತನಾಡಬೇಕು ಎಂಬ ಬಯಕೆಯಾಗುತ್ತದೆ. ಬಯಕೆಯ ಕಾರಣ ವ್ಯಕ್ತಿಯೆಡೆಗಿನ ಕುತೂಹಲವೂ ಇರುತ್ತದೆ ಕೂಡ. ಹಾಗಂತ ಪರಿಚಯಗಳೆಲ್ಲವೂ ಸಂಬಂಧಗಳಾಗಬೇಕು ಎಂಬ ಭಾವವೇ ಇದ್ದೀತು ಅಂತಲೂ ಅಲ್ಲ. ಬದುಕ ಪೂರ್ತಿ ಇರದಿದ್ದರೂ ಬದುಕಿಗೆ ಬೇಕು. ಒಂದಷ್ಟು ಕ್ಷಣಗಳ ಖುಷಿಯ ಕಾರಣಕ್ಕಾದರೂ.
ಹೊಸದು ಎಂಬುದರ ಆಕರ್ಷಣೆಯೇ ಹಾಗೆ ಅನ್ನಿಸುತ್ತೆ. ಅದು ವ್ಯಕ್ತಿಯಾಗಲಿ ವಸ್ತುವಾಗಲಿ. ಹೊಸದಾಗಿ ಮೊಬೈಲ್ ಕೈಗೆ ಬಂದಾಗ ನಿದ್ದೆಯೂ ಬರುವುದಿಲ್ಲ. ಎಲ್ಲವನ್ನೂ ಹುಡುಕಬೇಕು ತಿಳಿದುಕೊಳ್ಳಬೇಕು. ಎಲ್ಲೆಲ್ಲೊ ಇಡವುದಕ್ಕೂ ಭಯವೇ ಕಳೆದೊಗುತ್ತದೆ ಎಂದು. ಇದೆಷ್ಟು ಕಾಲ ಇರುತ್ತದೆ ? ಇರುವುದೆಲ್ಲವನ್ನೂ ಹುಡುಕಿ ತಿಳಿದುಕೊಳ್ಳುವಷ್ಟು ದಿನ ಮಾತ್ರ.
ಕೆಲವೊಂದು ಸಂಬಂಧಗಳಲ್ಲೂ ಹೀಗೆಯೇ ವರ್ತಿಸುತ್ತೇವಾ ನಾವುಗಳು? ಇರಬಹುದೇನೋ ಗೊತ್ತಿಲ್ಲ . ಅದ್ಯಾರೋ ಪರಿಚಯವಾಗುತ್ತಾರೆ. ತೀರಾ ಆಪ್ತರಾದ ಭಾವನೆ ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ನಾವೂ ಒಳ್ಳೆಯವರೆಂಬಂತೆ ಒಂದಷ್ಟು ಮುಖವಾಡ ಹಾಕಿಕೊಳ್ಳಬೇಕು. ಅವರು ನಮಗೆ ತೀರ ಆಪ್ತ ಎಂದು ನಮ್ಮನ್ನು ನಾವೇ ನಂಬಿಸಿಕೊಳ್ಳಬೇಕು. ಕಳೆದೊದರೆ ಎಂಬ ಭಯಕ್ಕೆ ಉಸಿರುಕಟ್ಟುವಷ್ಟು ಬಚ್ಚಿಡಬೇಕು.
ಬದುಕಿಗೆ ಬಂದ ಸಾವಿರ ಸಂಬಂಧಗಳಿಗಿಂತ ಇದೇ ಶ್ರೇಷ್ಠ ಎಂದುಕೊಳ್ಳಬೇಕು. ನಿಜವೆಷ್ಟಿರುತ್ತದೆಯೊ ಆದರೆ ಎಲ್ಲವನ್ನೂ ಭಾವಿಸಿಕೊಳ್ಳುಬೇಕು.
ಸಣ್ಣ ಪುಟ್ಟ ಬೇಸರಗಳನ್ನೂ ಖುಷಿಗಳನ್ನೂ ಹೇಳಿಕೊಳ್ಳಬೇಕು. ಒಂದಷ್ಟು ಸಮಾಧಾನ ಹೇಳಬೇಕು, ನಮ್ಮ ಖುಷಿಗಳಿಗೆ ಅವರೂ ನಗಬೇಕು. ನಮ್ಮೊಳಗಿನ ಅಹಂನ ಹಸಿವಿಗೊಂದಷ್ಟು ಆಹಾರಬೇಕು. ಮಾಡಿದ್ದೆಲ್ಲವೂ ಸರಿ ಎನ್ನಬೇಕು. ತಪ್ಪು ಎಂದರೊ ಮುಗಿದಂತೆ. ಯಾಕೆ ಹೀಗೆಲ್ಲ ಆಗುತ್ತದೆ ನಮ್ಮ ಅವಶ್ಯಕತೆಗಳಿಗಾಗಿ ಸಂಬಂಧಗಳನ್ನು ಕಟ್ಟಿಕೊಂಡಿರುತ್ತೇವಾ? ಅಥವಾ ನಮ್ಮೊಡನಿರುವ ವ್ಯಕ್ತಿಗಳೆಂದರೆ ಹೀಗೆ ಇರಬೇಕು ಎಂಬ ಗಡಿ ರೇಖೆ ಎಳೆದುಕೊಂಡು ವಾಸ್ತವದ ಚಿಂತನೆಯನ್ನೇ ಮಾಡದೆ ಬದುಕುತ್ತೇವಾ?
ತಪ್ಪಾ ಸರಿಯಾ? ಒಳ್ಳೆಯವರಾ ಕೆಟ್ಟವರಾ? ಎಷ್ಟು ಬೇಕು ? ಬದುಕಿಗೆ ಆಯ್ಕೆಯಾ ಅವಶ್ಯಕತೆಯಾ? ಎಷ್ಟೋ ಪರಿಚಯಗಳು ಬಂಧವಾಗುವ ಕಾಲಕ್ಕೆ ಇದ್ಯಾವುದರ ಪರಿವೆಯೂ ಇಲ್ಲದೆಯೇ ಎಷ್ಟೆಲ್ಲ ಹತ್ತಿರಕ್ಕೆ ಹೋಗಿಬಿಡುತ್ತೇವೆ. ಒಟ್ಟಿನಲ್ಲಿ ಅದು ಆ ಕ್ಷಣದ ತೀವ್ರತೆ. ಮೋಸವಾಯಿತಾ? ಬೇಡಬಿಟ್ಟುಬಿಡಬೇಕು ಎನಿಸಿತಾ? ಬಿಟ್ಟುಬಿಡಬಹುದು, ಯಾವುದೂ ಕಷ್ಟವಲ್ಲ ಯೋಚಿಸಿದರೆ. ಆದರೆ, ಅಲ್ಲಿ ನಿಜಕ್ಕೂ ನೋವಾಗುವುದು ಮೋಸವಾಯಿತು ಎಂಬ ಭಾವ, ಎಷ್ಟೊಂದು ಹಚ್ಚಿಕೊಂಡಿದ್ದೆ ಈಗ ಬಿಡಬೇಕಲ್ಲ ಎಂಬ ಭಾವ. ಅಲ್ಲಿಗೆ ಬದುಕ ವಾಸ್ತವವನ್ನ ಒಪ್ಪಿಕೊಳ್ಳಲಾಗುತ್ತಿಲ್ಲ, ಭವಿಷ್ಯಬೇಕಾಗಿಲ್ಲ. ಇತಿಹಾಸ ನೆನಪಾಗಿ ಕಾಡುತ್ತದೆ. ಮತ್ತದೇ ಗೊಂದಲ ಇನ್ನೊಂದಿಷ್ಟು ನೋವು.
ಯಾರದೊ ನೆನಪು ಕಾಡುತ್ತೆ, ಮರೆಯಲು ಸಾಧ್ಯವೇ ಇಲ್ಲ ಎಂದು ಕೊರಗುತ್ತೇವೆ. ಆದರೆ ನಿಜವಾದ ಕಾರಣ ನಾವು ಮತ್ತು ನಾವು ಯೋಚಿಸುವ ರೀತಿ ಮಾತ್ರವೇನೋ. ಮರೆತರೆ ಹಚ್ಚಿಕೊಂಡದ್ದೆ ಸುಳ್ಳೆಂದು ನಮ್ಮೊಳಗೆ ಯಾರೋ ಕೇಳಿದಂಥದ್ದೊಂದು ಭಯ. ಮತ್ತಲ್ಲಿಗೆ ಮರೆತಿಲ್ಲ ಮರೆಯಲಾಗುತ್ತಿಲ್ಲ ಎಂಬ ಕಾರಣ ಕಟ್ಟಿಕೊಂಡು ಬದುಕಬೇಕು.
ನಿಜ, ತೀವ್ರತೆ ಕಡಿಮೆಯಾಯಿತೆಂದರೆ ಬಂಧ ಹಳಸಿತೆಂದಲ್ಲ. ಒಡನಾಟದ ಅವಶ್ಯಕತೆಗಳನ್ನೂ ಮೀರಿ ಸಲಹಿಕೊಳ್ಳುವ ಶಕ್ತಿಬಂದಿದೆ ಎಂದೊ ಒಂದಷ್ಟು ಪ್ರಬುದ್ಧತೆಯೂ ಬಂದಿದೆ ಎಂದೊ ಇರಬಹುದು. ಎಷ್ಟೋ ಸಲ ಇದೂ ಕೂಡ ನಮಗೆ ನಾವೇ ಮಾಡಿಕೊಳ್ಳುವ ಸಮಾಧಾನ. ಅಥವಾ ವ್ಯಕ್ತಿ ಬೇಡ ನೆನಪುಗಳಲ್ಲಿಯೆ ಬದುಕುತ್ತೇನೆ ಎಂದರೆ ಆಪ್ತತೆಯಿರುವುದು ಸಂಬಂಧದ ಒಡನಾಟದಲಲ್ಲ, ಅದರ ಸುತ್ತ ಹೆಣೆದಿರುವ ಕಲ್ಪನೆಯದ್ದು ಎಂದು. ಅಲ್ಲಿಗೆ ಹಚ್ಚಿಕೊಂಡಿರುವುದು ವ್ಯಕ್ತಿಯನ್ನಲ್ಲ ಅವನೆಡೆಗೆ ಆಪ್ತತೆ ಇದೆ ಎಂಬ ಭಾವವನ್ನು ಮಾತ್ರ.
ಬೆಳಕಿದ್ದಷ್ಟೆ ಕಾಣುವುದು ಕತ್ತಲಲ್ಲೂ ಬೆಳಕಲ್ಲಿ ಕಂಡಷ್ಟೇ ಸ್ಪಷ್ಟವಾಗಿ ಕಾಣುತ್ತದೆ ಎನ್ನುವುದು ಭ್ರಮೆಯಷ್ಟೆ. ಬಂಧಗಳೂ ಅಷ್ಟೇ ಭಾವಿಸಿಕೊಂಡಷ್ಟೆ ದಕ್ಕುವುದು. ಎಷ್ಟು ಭಾವಿಸಿಕೊಳ್ಳಬೇಕು ಎನ್ನುವುದು ನಮ್ಮ ನಮ್ಮ ಮನಸ್ಥಿತಿಗೆ ಬಿಟ್ಟದ್ದು. ಯಾರು ಯಾರನ್ನೂ ಬಿಟ್ಟೋಗುವುದಿಲ್ಲ, ಯಾರೂ ಯಾರ ಜೊತೆಯಿರುವುದೂ ಇಲ್ಲ. ಎಲ್ಲ ನಮ್ಮ ನಮ್ಮ ಭಾವನೆ ಆಕ್ಷಣದ ನಮ್ಮ ಅವಶ್ಯಕತೆ ಮತ್ತು ಅಭಿವ್ಯಕ್ತಿ ಅಷ್ಟೇ.
ನಿಜ ಸಂಧ್ಯಾ, ಆಪ್ತ ಬರಹ!
ReplyDeleteಏನಂತ ಬರೆಯಲಿ?ಮನಸಿನ ಮಾತಿಗೆ ದನಿಕೊಟ್ಟಿದ್ದೀ.ಬರೆಯುತ್ತಿರು ಹೀಗೆ.
ReplyDeleteಸಂಧ್ಯಾ -
ReplyDeleteನಿಜಕ್ಕೂ ಓದಿ ತುಂಬಾ ಖುಷಿ ಅನ್ನಿಸಿತು... ಬರವಣಿಗೆಯ ಭಾವ ಮತ್ತು ಓಘ ಎರಡೂ ಇಷ್ಟವಾಯಿತು...
ಹೌದು - ಮನದ ಮನೆಯಲ್ಲೇನಿದ್ದರೂ ಭಾವಗಳದ್ದೇ ಕಾರುಬಾರು... ಈ ಮಾತನ್ನ ತುಂಬ ಚಂದಗೆ ಹೇಳಿದ್ದೀಯಾ...
ಬರೆಯುತ್ತಿರು - ಬೆಳೆಯುತ್ತಿರು - ನಿರಂತರ...
chennagide :)
ReplyDelete