Wednesday 1 April 2015

ಮೌನ ಮಾತಿನ ಶಕ್ತಿ - ಮಾತು ಮೌನದ ಅಭಿವ್ಯಕ್ತಿ

ಮಾತು ಮತ್ತು ಮೌನ ಒಂದೇ ನಾಣ್ಯದ ಎರಡು ಮುಖದಂತೆ. ಒಂದರ ಬೆನ್ನ ಹಿಂದೆ ಒಂದಿರುವುದು ಎಷ್ಟು ಸತ್ಯವೋ.. ಹಾಗೆಯೇ ಎರಡೂ ಒಂದೇ ಕಾಲದಲ್ಲಿ ಒಂದೇ ವ್ಯಕ್ತಿಯಲ್ಲಿ ಹೊರನೋಟಕ್ಕೆ ಒಟ್ಟಿಗಿರಲು ಸಾಧ್ಯವೇ ಇಲ್ಲ ಎಂಬುದು ಅಷ್ಟೇ ಸತ್ಯವೇ ಅಲ್ಲವಾ? ಹಾಗಾದರೆ ಮಾತು ಮತ್ತು ಮೌನ ಮನುಷ್ಯನ ಬಲಹೀನತೆಗಳಾ? 
ತೀರಾ ಮೌನಿಗಳೆಲ್ಲ ಒಳ್ಳೆಯವರು ಮಾತನಾಡುವವರೆಲ್ಲ ಕೆಟ್ಟವರು ಅಂತಲಾ? ಅಥವಾ ಮೌನ ಎಂಬುದು ಅಸಹಾಯಕತೆಯಾ? ಮಾತು ಚಪಲವಾ? ಈ ಪ್ರಶ್ನೆಗಳ ಉತ್ತರ ಸಂದರ್ಭಾನುಸಾರ ಹೌದು ಮತ್ತು ಅಲ್ಲ ಎರಡೂ ಆಗಬಹುದೇನೋ...!

ನಿಜ ಎಲ್ಲರೂ ಒಂದೆರೀತಿ ಇರುವುದಿಲ್ಲ ಕೆಲವರಿಗೆ ಮೌನವೇ  ಭಾವದ ಮಾಧ್ಯಮ ಅಲ್ಲಿ ಮಾತು ಶಬ್ದವಾಗುವುದಿಲ್ಲ. ಓಂಕಾರವ ಬಿಟ್ಟು ಮತ್ಯಾವ ಸ್ವರವೂ ಇರುವುದಿಲ್ಲ. ಮೌನವಾಗಿರುವವರೆಲ್ಲ ಬೇಸರದಿಂದಲೇ ಇರುತ್ತಾರೆ ಎಂತಲೂ ಅಲ್ಲ. ಮೌನದಲ್ಲೆ ತಮ್ಮೊಳಗೊಂದು ನಗೆಯ ಬುಗ್ಗೆ ಚಿಮ್ಮಿಸಿಕೊಳ್ಳುವುದ ಕಲಿತವರೂ ಇರಬಹುದು. ಹಾಗೆಯೇ ಮೌನವಾಗಿರುತ್ತೇನೆ ಎಂಬುದರ ಅರ್ಥ ಎಲ್ಲವನ್ನೂ ಸಹಿಸಿಕೊಂಡಿರುತ್ತೇನೆ ಅಂತಾಗಬಾರದಲ್ಲ. ಯಾರೋ ನಿಷ್ಠುರವಾಗಿ ಏನಾದರೂ ಹೇಳಿದರೆ ಬೇಸರವಾಗುತ್ತದೆ ಎಂದರೆ ಹೇಳಿಬಿಡಬೇಕು ನಾನೆಂದರೆ ಹೀಗೆ ಎಂದು ಯಾರಿಗೂ ಎನ್ನನ್ನೂ ಹೇಳಲಾರೆ ನನ್ನೊಳಗೆ ನೋವು ಪಡುವುದನ್ನೂ ಬಿಡಲಾರೆ ; ಹಂಚಿಕೊಂಡು ಮುಗಿಲಂತೆ ಹಗುರಾಗಲಾರೆ ಹಿಡಿದಿಟ್ಟುಕೊಂಡು ಕತ್ತಲ ಭಾರವ ಸಹಿಸಲಾರೆ ಎಂದಾದರೆ  ಸಾಧಿಸಿಕೊಂಡ ಮೌನದಿಂದ ಪ್ರಯೋಜನವೇನು?

ಯಾರಿಗೋ ಏನೋ ಹೇಳಬೇಕು ಎಂಬ ಕಾರಣಕ್ಕೆ ನನ್ನ ಬದುಕಿನ ದಿಕ್ಕನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ ನಿಜ, ನನ್ನ ಮನದ ಮುಖ ನನ್ನ ಮನದ ಕನ್ನಡಿಯಲ್ಲಿ ಸ್ಪಷ್ಟವಾಗಿ ಕಂಡರೆ ಸಾಕು. ಆದರೆ ತೀರ ನಮ್ಮದೊಂದು ಆತ್ಮಾಭಿಮಾನವೇ ಕೊಂದವರೆದುರೂ ನಮ್ಮ ಬಗ್ಗೆ ಹೇಳಿಕೊಳ್ಳದಿದ್ದರೆ ನಮಗೆ ನಮ್ಮನ್ನು ಸಮರ್ಥಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಕಲೆತಿಳಿಯದಿದ್ದರೆ ಏನು ಕಲಿತು ಏನು ಉಪಯೋಗ? 
ಕ್ರಮೇಣ ನಮ್ಮ ಮೇಲಿನ ನಮ್ಮ ಪ್ರೀತಿ ಕಡಿಮೆಯಾಗುತ್ತದೆ.

 ಹಾಗಂತ ತೀರ ವೈಯಕ್ತಿಕ ವಿಷಯಗಳನ್ನು ಕಂಡ ಕಂಡವರಲ್ಲಿ ಹೇಳಿಕೊಂಡು ಬಯಲಲ್ಲಿ ಬೆತ್ತಲಾಗಬೇಕು ಅಂತಲ್ಲ ಅಂತಹ ಮಾತಿಗಿಂತ ಅಲ್ಲಿ ಮೌನವೇ ಅರ್ಥಪೂರ್ಣವೇನೋ... ಅಥವಾ ಮಾತಾಡಲು ಬರುತ್ತದೆ ಅನ್ನುವ ಕಾರಣಕ್ಕೆ ಮಾತಾಡಲೂಬಾರದು. ಮಾತಿಗೆ ಅದರದೇ ಆದ ತೂಕವಿರಬೇಕು, ಅರ್ಥವಿರಬೇಕು.

ಆದರೆ ಆತ್ಮೀಯರ ವಿಷಯದಲ್ಲಿ,  ಸಂಬಂಧಗಳ ವಿಷಯದಲ್ಲಿ ಮೌನ ಕೊಡುವ ಸಾವಿರ ಅರ್ಥಗಳಿಗಿಂತ ಮಾತು ಕೊಡುವ ಒಂದು ಸಮರ್ಪಕ ಕಾರಣ ಸಂಬಂಧಗಳನ್ನು ಹೆಚ್ಚು ಕಾಲ ಬಾಳಿಸುತ್ತದೆಯೇನೋ... ಸಾವಿರ ಮಾತನ್ನು ಮನದಲ್ಲೇ ಬಚ್ಚಿಟ್ಟುಕೊಂಡು ಕನಸ ಸಾಯಕೊಡಲಾರದೆ, ಜೀವ ಕೊಡಲೂ ಆಗದೆ ಕಾರಣಗಳನ್ನೂ ಮೀರಿ ವಹಿಸುವ ಮೌನಕ್ಕಿಂತ ಕಾರಣವಿಲ್ಲದೆಯೂ ಆಡುವ ಜಗಳಕ್ಕೆ ವಿಶಿಷ್ಟ ಭಾವವಿರುತ್ತದೆ. ಮಾತು ಭಾವಗಳ ಕದಡುತ್ತೆ ನಿಜ ಆದರೆ ಮೌನ ಸಂಬಂಧಗಳ ಅಂತರ ಹೆಚ್ಚಿಸುತ್ತದೆ.

ಮೌನ ಮುಗ್ಧತೆಯೂ ಅಲ್ಲ, ತುಂಬಾ ಮಾತನಾಡುವವರೆಲ್ಲ ಚೆಲ್ಲು ಚೆಲ್ಲು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವವರೂ ಅಲ್ಲ ಮೌನ ಬಂಗಾರ ಎಂದವರೇ ಮಾತು ಬಲ್ಲವನಿಗೆ ರೋಗವಿಲ್ಲ ಎಂದಿದ್ದಾರೆ. ಮಾತು ಅಭಿವ್ಯಕ್ತಿಯ ಮಾಧ್ಯಮವಾದರೆ ಮೌನ ವ್ಯಕ್ತಪಡಿಸಲಾಗದ ಹಲವು ಭಾವಗಳ ಸಂಗಮ. ಮಾತನ್ನು ಅರ್ಥೈಸಿಕೊಳ್ಳುವುದು ಸುಲಭ. ಮೌನವನ್ನು ಊಹಿಸಬಹುದಷ್ಟೆ.  ಇಷ್ಟಕ್ಕು ಮಾತು ಮತ್ತು ಮೌನ ಎರಡೂ ಮನುಷ್ಯ ತಾನು ಸಂತೋಷದಿಂದಿರಲು  ಸೃಷ್ಟಿಸಿಕೊಂಡದ್ದು ತಾನೆ?

ಮೌನ ನಮ್ಮೊಳಗನ್ನು ಬೆಳೆಸುವ ಅಸ್ತ್ರವಾಗಿ ಮತ್ತು ಮಾತು ನಮ್ಮನ್ನು ಉಳಿಸುವ ಶಸ್ತ್ರವಾಗಿ,  ಎರಡೂ ನಮ್ಮೊಳಗೆ ಹದವಾಗಿ ಬೆರೆತು ಬದುಕ ಯುದ್ಧವ ಗೆಲ್ಲುವ ಸಾಧನವಾದರೆ ಎಷ್ಟು ಚೆಂದ ಅಲ್ಲವಾ..?

3 comments:

  1. ಮಾತು ಚೆನ್ನ yes. ಆದರೆ ಮೌನ ಅಡಕಿಂತಲೂ ಚೆನ್ನ... ಕರೆಕ್ಟ್...

    ReplyDelete
  2. ಅದೆಷ್ಟು ಚಂದದಿ ಭಾವಗಳ ಹೊರಹಾಕಿ ಬಿಡ್ತೀಯ ...
    ಈಗೀಗ ನಂಗೂ ಹಾಗೇ ,ಮೌನವೂ ಒಮ್ಮೊಮ್ಮೆ ಗದ್ದಲ ಮೂಡಿಸಿಬಿಡುತ್ತೆ. ಆಗೆಲ್ಲಾ ನಂಗೂ ಅನಿಸಿಬಿಡುತ್ತೆ .
    ರವಾನಿಸೋ ಪರಿ ಇಷ್ಟವಾಯ್ತು..ಜ಼ೊತೆಗೆ ಮಾತು ಮೌನದ ಸದ್ದು ಗದ್ದಲ ಕೂಡಾ

    ReplyDelete
  3. "ಇಷ್ಟಕ್ಕೂ ಮಾತು ಮತ್ತು ಮೌನ ಎರಡೂ ಮನುಷ್ಯ ತಾನು ಸಂತೋಷದಿಂದಿರಲು ಸೃಷ್ಟಿಸಿಕೊಂಡದ್ದು ತಾನೆ..."
    ಇದೊಂದು ಮಾತು ಸರಿಯಾಗಿ ಅರ್ಥವಾಗಿ, ಮಾತು ಮತ್ತು ಮೌನ ಎರಡನ್ನೂ ಸಂತೋಷವನ್ನು ಉಂಡು - ಹಂಚಲು ಬಳಸಿಕೊಳ್ಳುವುದ ಕಲಿತುಬಿಟ್ಟರೆ......."ರೆ"......... ಆಹಾ...............
    ಇಷ್ಟವಾಯ್ತು ಕಣೇ ನೀನು ಮಾತು ಮೌನಗಳ ಬಗೆಯನ್ನು ನಿರೂಪಿಸಿದ ರೀತಿ...... :)

    ReplyDelete