ನನ್ನ ಬದುಕಿನ ದೊಡ್ಡ ಕನಸು ನೀನು, ನನ್ನೊಳಗೆ ನಿನ್ನ ಹೃದಯ, ನಿನ್ನ ಉಸಿರಾಟ, ನಿನ್ನ ಪುಟ್ಟ ಪಾದಗಳ ಸ್ಪರ್ಶ ಸುಖ. ನೀನು ನನ್ನ ಪುಟ್ಟ ಕಂದ.
ಇನ್ನೊಂದು ಸ್ವಲ್ಪ ದಿನವಾದರೆ ನಿನ್ನ ಅಳು ನಗುವಿನ ಮೆರವಣಿಗೆ ನನ್ನ ಬದುಕಿನ ಹಬ್ಬದ ದಿನಗಳು ಪ್ರಾರಂಭ.
ಇಷ್ಟು ದಿನ ಬದುಕಿದ ಬದುಕಿಗೆ ಖುಷಿ, ಸಾರ್ಥಕತೆ ಎಂದರೆ ಅದು ನೀನು ಬರುತ್ತೀಯ ಎಂದಾದ ಮೇಲಿನ ಈ ದಿನಗಳು. ಬದುಕ ಗೆಲುವಿನ ಹಠಕ್ಕೆ ಬಿದ್ದ ತೀರಾ ಭಾವುಕ ಮನಕ್ಕೀಗ, ಬದುಕುವ ನಿಜ ಕಾರಣ ಸಿಕ್ಕದ ಖುಷಿ. ಈ ಕಾರಣಕ್ಕಿಂತ, ಇನ್ಯಾವ ಕಾರಣವೂ ಬೇಕಿಲ್ಲ ಬದುಕಲು ನಂಗೆ.
ಏನೆಂದು ಬರೆದಿಡಲಿ ಇಲ್ಲಿ? ಆದರೆ ಬರೆಯಲೇ ಬೇಕು ನನ್ನ ಬದುಕಿನ ಎಲ್ಲ ದ್ವಂದ್ವಗಳಿಗೆ, ಕನಸುಗಳಿಗೆ, ಕಿವಿಯಾದ ಈ ಅಭಿಸಾರಿಕೆಯ ಮಡಿಲಲ್ಲಿ ನಿನ್ನ ಬಗ್ಗೆ ಹೇಳದಿದ್ದರೆ ತಪ್ಪಾದೀತು.
ನಿನ್ನ ಹೃದಯ ಬಡಿತ ಕೇಳಿದ ದಿನಗಳಿಂದ ನಿನ್ನ ಪುಟ್ಟ ಪಾದ ಸ್ಪರ್ಶವಾಗುತ್ತಿರುವ ಈ ಘಳಿಗೆಗಳು ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಅಕ್ಷರಸಹ ಜೀವಿಸುತ್ತಿದ್ದೇನೆ ಈ ದಿನಗಳನ್ನು.
ನಿನ್ನ ಬೆಳವಣಿಗೆಯಲ್ಲಿ ನಿನ್ನ ಕಲಿಕೆಯಲ್ಲಿ ನಾನು ಬದುಕುವ ಕಲಿಯುವ ಬಯಕೆ ಮನದ ತುಂಬಾ. ಆರೋಗ್ಯವಾಗಿರು ನನ್ನೊಳಗಿರುವ ಆ ಹೃದಯಲ್ಲಿ ನನ್ನ ಜೀವವೇ ಇದೆ.
ಕಾಯುತ್ತಿರುವೆ ನಿನಗಾಗಿ....
No comments:
Post a Comment