ನಾನು ಎಂಬುದು ನನ್ನ ಸದಾಕಾಲಕ್ಕೂ ಬದುಕಿಸುವ ಜೀವ ಗಂಗೆ.. ಬದುಕಿನ ಎಲ್ಲದರಾಚೆಗೆ ನಂಗೆ ಕಾಡುವುದು ಮಡಿಲಾಗುವುದು ನೀ ಮಾತ್ರ. ನನ್ನ ಅಭಿಸಾರಿಕೆ ನನ್ನ ಭಾವದ ಬಯಲು.
ತುಂಬಾ ಬರೆಯಬೇಕು ಎಂತಲೇ ನೀನೆಂಬ ಕನಸಿಗೆ ಹೆಸರು ಕೊಟ್ಟಿದ್ದು. ಬರೆದದ್ದು ತುಂಬಾ ಕಡಿಮೆ. ಆದರೆ ಬರೆದಷ್ಟೂ ನಿನ್ನ ಮಡಿಲಲ್ಲಿ ಬಂದು ಹೇಳಿಕೊಂಡಂತಹ ನನ್ನ ಬದುಕಿನ ಶುಧ್ಧ ಭಾವಗಳೇ...
ನಿಂಗೆ ಗೊತ್ತಾ, ತುಂಬಾ ನೋವಿರುವ ಜಾಗದಿಂದಾಗಲಿ ಇಲ್ಲ ತುಂಬಾ ಖುಷಿಯಿರುವ ಜಾಗದಿಂದಾಗಲಿ ಅಷ್ಟು ಸುಲಭಕ್ಕೆ ಎದ್ದು ಬರಬಾರದು. ಭಾವವೊಂದು ಮನದಲ್ಲಿ ಹೊಕ್ಕು ತೀವ್ರವಾಗಿ ಕಾಡಲೇಬೇಕು, ಅಷ್ಟು ಕಾಲ ಕೊಡದಿದ್ದರೆನೇ, ಮನಸ್ಸು ಪಾಪಪ್ರಜ್ಞೆಗೆ
ಬೀಳುವುದು.
ಪ್ರತಿ ದಿನವೂ ಬೆಳಕು ಮೂಡುತ್ತದೆ ಆದರೆ, ಕತ್ತಲೆಯೂ ಬೆಳಕ ಬೆನ್ನಲ್ಲೇ ಅಂಟಿರುತ್ತದೆ ಎನ್ನುವುದ ಮರೆಯಬೇಡ. ಯಾರು ಹೇಳಿದ್ದು ಮನುಷ್ಯನ ಸಾವು ಒಂದೇ ಸಲ ಎಂದು ಭಾವ ಸತ್ತಾಗಲೆಲ್ಲ ಮನುಷ್ಯ ಸಾಯುತ್ತಾನೆ ಆದರೆ ಸತ್ತು ಮತ್ತೆ ಹೊಸದಾಗಿ ಹುಟ್ಟುತ್ತಾನೆ. ನೋವಿರದ ದೇಹದ ಸಾವಿಗಿಂತ ಭಾವಗಳ ಸಾವು ಹೆಚ್ಚು ನೋವಲ್ಲವಾ?
ನೋವು,ನಲಿವು ಪಾಪಪ್ರಜ್ಞೆ,ಭಯ, ನನ್ನೊಳಗಿನ ತರ್ಕ ಎಲ್ಲವೂ ಇಲ್ಲಿವೆ. ತುಂಬಾ ಬರೆಯಲಿಲ್ಲವೆಂದರೆ ಮನಸ್ಸು ಸ್ಥಿತ ಪ್ರಜ್ಞವಾಗಿದೆ ಎಂದಲ್ಲ. ಯಾಕೊ ನಿನ್ನೊಡಲಲ್ಲಿ ಹೇಳಿಕೊಳ್ಳಲು ಪದಗಳು ಇರಲೇ ಇಲ್ಲ. ಮೌನ ಮಾತಿಗಿಂತ ಖುಷಿಕೊಡುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇನೆ ಎಂದರ್ಥವಾ? ಗೊತ್ತಿಲ್ಲ.
ನಿಜವೆಂದರೆ ನನ್ನೊಳಗಿನ ಗದ್ದಲವನ್ನು ಇಲ್ಲಿ ನಿನ್ನೊಡಲಿಗೆ ಇಳಿಸಿಬಿಟ್ಟರೆ ದೀರ್ಘ ಉಸಿರೊಂದನ್ನು ಬಿಟ್ಟಂತಹ ಸಮಾಧಾನ ನಂಗೆ.
ಅಭಿಸಾರಿಕೆ ಕೇವಲ ನನ್ನ ಭಾವ ಟಿಪ್ಪಣಿಯಾಗಲಿಲ್ಲ ನನ್ನ ನೋವಿಗೆ ಮಡಿಲಾಗಿ ಖುಷಿಗೆ ಪ್ರತಿಬಿಂಬವಾಗಿ ಬದುಕ ನೆನಪಿನ ಹೆಜ್ಜೆ ಗುರುತಾಗಿ ನನ್ನೊಂದಿಗಿದೆ.
ನೀನೆಂದರೆ ತುಂಬಾ ಪ್ರೀತಿ ನಂಗೆ.
ಹುಟ್ಟಿದ ಹಬ್ಬದ ಶುಭಾಶಯಗಳು ಕಣೇ... ನಮ್ಮಿಬ್ಬ ಬೆಸುಗೆ ಗಾಢವಾಗಲಿ...ನಮ್ಮ ಹೂ ನಗೆಯ ಹುಡುಕಾಟ ನಿರಂತರವಿರಲಿ.
ಅಭಿಸಾರಿಕೆ ನಿಮ್ಮೊಳಗಿನ ಭಾವನೆಗಳ ಹಂಚಿಕೊಳ್ಳೋ ವೇದಿಕೆಯಾಗಿದೆ.. ನಿಮ್ಮ ಅಭಿಸಾರಿಕೆಯ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
ReplyDeleteಕೇವಲ ಹುಟ್ದಬ್ಬಕ್ಕಷ್ಟೇ ಅಲ್ಲದೇ ನಿರಂತರವಾಗಿ ಭಾವ ಬರಹಗಳು ಮೂಡಿ ಬರುತ್ತಿರಲಿ... ಶುಭಾಶಯ... 🍬💐
ReplyDelete