Thursday, 6 April 2017

ಅಂಕದ ಪ್ರೇರಕನಿಗೆ.......

ಬದುಕೆಂಬೋ ನಾಟಕದ ರಂಗಸ್ಥಳದಲ್ಲಿ ಜಾರಿದ್ದು ಇನ್ನೊಂದು ಅಂಕ. ಒಂದೆರಡು ಅಂಕ ಮುಗಿದರೆ ಮುಗಿಯುವ ನಾಟಕವಲ್ಲ ಇದು. ಯಾಕೆಂದರೆ ಇದು ಬದುಕಿನಾಟ. ಒಂದು ಅಂಕ ಮುಗಿದೊಡನೆ ಇನ್ನೊಂದು ಅಂಕಕ್ಕೆ ಸಿದ್ಧತೆ ನಡೆಸಬೇಕು. ಅದೇ  ಪಾತ್ರಧಾರಿಗಳೇ ಎಲ್ಲೊ ಒಂದೋ ಎರಡೋ ಹೊಸ ಪಾತ್ರಗಳು ಬಂದೀತು ಆದರೆ ಆಡುವ ಮಾತು ಮತ್ತು ಮುಖವಾಡಗಳು ಎಲ್ಲರದ್ದು ಒಂದೇ ನನ್ನನ್ನೂ ಒಳಗೊಂಡು.

ಹೇಳಿದ್ದೆ ಮಾತನ್ನೇ ಹೇಳಿದರೂ, ಅದೇ ಮುಖವಾಡಗಳನ್ನ ಹಾಕಿಕೊಂಡರೂ ಪ್ರೇಕ್ಷಕ ಇಷ್ಟಪಡುವುದಿಲ್ಲ. ಯಾಕೆಂದರೆ ಪ್ರೇಕ್ಷಕ ಎದುರುಗಡೆ ಇಲ್ಲ. ಇಲ್ಲೇ ನನ್ನೊಳಗೆ ಇದ್ದಾನೆ. ಮತ್ತು ಈ ಪ್ರೇಕ್ಷಕ ಬೇಸರ ಬಂತೆಂದು ಎದ್ದು ಹೋಗುವುದೂ ಇಲ್ಲ. ಹಾಗಂತ ಮಾಡಿದ್ದೆಲ್ಲವನ್ನು ಮೆಚ್ಚಿ ಬಹುಮಾನವನ್ನೂ ಕೊಡುವುದಿಲ್ಲ. ಅವ ಒಂಥರ  ವಿಮರ್ಶಕ, ಸರಿ ಮಾಡಿದ್ದನ್ನೂ ವಿಮರ್ಶಿಸುತ್ತಾನೆ ಮತ್ತು ತಪ್ಪು ಮಾಡಿದರೂ ಪ್ರಶಿಸುತ್ತಾನೆ, ಸಮರ್ಥಿಸುತ್ತಾನೆ.

ಒಟ್ಟಿನಲ್ಲಿ ನನ್ನೊಳಗಿನ ಈ ಪ್ರೇಕ್ಷಕನಿಗಾಗಿ ಮಾತ್ರ  ಈ ಮುಂದಿನ ಅಂಕ ಕೂಡ. ನಾ ಬಣ್ಣದ ಮೋಡಿಗೆ ಬಿದ್ದಾಗ ಅವ ಕೆಲವೊಮ್ಮೆ ಹೇಳುತ್ತಾನೆ ನಿಂಗೆ ಯಾವ ಬಣ್ಣದ  ಅವಶ್ಯಕತೆಯೂ ಇಲ್ಲ ನೀನು ಹೀಗೇ ಚಂದ ಎಂದು ಆಗೆಲ್ಲ ನಾ ವಾದಿಸುತ್ತೇನೆ ಬಣ್ಣಬೇಡ ಎನ್ನುತ್ತೀಯಲ್ಲ ನಾಟಕವೂ ಬೇಡ ಎಂದುಬಿಡು ಎಂದು. ಅದಕ್ಕವ ನಗುತ್ತಾ ವಿವರಿಸುತ್ತಾನೆ, ನಾಟಕವೆಂದರೆ ಬರಿಯ ಸುಳ್ಳು ಎಂತಲೇ ಅಲ್ಲ ಮುಖವಾಡದ ಹಿಂದೂ ಮುಖಗಳಿವೆ ಮತ್ತು ಪ್ರತಿ ಮುಖಕ್ಕೂ ಹತ್ತಾರು ಭಾವಗಳಿವೆ. ಎಲ್ಲೋ ನಿನ್ನೊಳಗೆ ಇಳಿದ ಭಾವ ತೀವ್ರತೆಯ  ಪ್ರಸ್ತುತಿಯೇ ನಾಟಕ ಎಂದು. 
ಯಾರದೋ ಬಳಿ  ಪ್ರೀತಿಯನ್ನೇ ವ್ಯಕ್ತಪಡಿಸಿದೆ ಎಂದಾದರೆ ಅದರ ಹಿಂದೊಂದು ಭಾವ ಇರಲೇಬೇಕಲ್ಲ.

ಕಲೆಯಿಲ್ಲದ ಯಾವ ಕಲಾವಿದನೂ ರಂಗಸ್ಥಳ ಹತ್ತಲಾರ. ಹತ್ತಲು ನಾನೂ ಬಿಡಲಾರೆ ಎಂದು ನಕ್ಕುಬಿಟ್ಟ ನನ್ನೊಳಗಿನ‌ ಪ್ರೇಕ್ಷಕ. ನಾನು ಅವನನ್ನ ನಂಬುತ್ತೇನೆ ನನ್ನೋಳಗಿನ ಪ್ರೇಕ್ಷಕನೇ ನನ್ನ ನಿಜ ಪ್ರೋತ್ಸಾಹಕ. ಅವನಿಲ್ಲದೇ ಯಾವ ನಾಟಕವೂ ಇಲ್ಲ. ಅವನೊಬ್ಬ ಸಂತೃಪ್ತನಾದರೆ ಸಾಕು ಅದೆಷ್ಟು ಬೇಕಾದರೂ ಅಂಕಗಳ ಎಳೆಯಬಹುದು. ಅದೆಲ್ಲದಕ್ಕೂ ಬೇಕಾದ ಹೊಸ ಹುರುಪು ನನ್ನೊಳಗೆ ಹುಟ್ಟೀತು.

ನನ್ನೊಳಗೇ ಇದ್ದೂ ನಂಗೆ ಪ್ರತಿ  ಕ್ಷಣಕ್ಕೂ ಅಪರಿಚಿತನಾಗುತ್ತಾ, ಅರಿತಷ್ಟೂ ಅತಿ ಹೆಚ್ಚು ಆತ್ಮೀಯನಾಗುತ್ತಾ , ನನ್ನೊಳಗೆ ವಿಮರ್ಶಕನಾಗಿ ತಪ್ಪುಗಳ ತಿದ್ದುತ್ತಾ ನನ್ನ ನಿಜ ಸತ್ವವನ್ನು ಪರದೆ ಕಟ್ಟದ ಬದುಕೆಂಬೋ ರಂಗಸ್ಥಳದಲ್ಲಿ ನಿರೂಪಿಸಲು ಸದಾ ಅವಕಾಶವನ್ನು ಮತ್ತೆ ಮತ್ತೆ ಕಟ್ಟಿಕೊಡುತ್ತಿರುವ ನನ್ನೊಳಗಿನ ಪ್ರೇಕ್ಷಕನಿಗೆ ನನ್ನ ಕಳಚಿದ ಮತ್ತು ಬರಲಿರುವ ಅಂಕಗಳು ಸಮರ್ಪಣೆ.

5 comments:

  1. ಬದುಕಿದು ನಿನ್ನದು ಹೆಜ್ಜೆಯಿಂದ ಹೆಜ್ಜೆಗೆ ಇನ್ನಷ್ಟು ದೃಢವಾಗುತ್ತಲೇ ಸಾಗಲಿ... ಹುಟ್ಟಿನ ಗುಟ್ಟುಗಳೆಲ್ಲ ರಟ್ಟಾಗಲಿ...ಬದುಕು ನಗೆಯ ಹಬ್ಬವಾಗಲಿ... ಹೊಸ ಅಂಕಕೆ ತೆರೆದುಕೊಳ್ಳುವ ಜನುಮ ದಿನದ ಈ ಹೊಸ ಬೆಳಗಿಗೆ ಆತ್ಮೀಯ ಶುಭಾಶಯಗಳು....💓💐

    ReplyDelete
  2. ನಮ್ಮೊಳಗಿನ ಪ್ರೇಕ್ಷಕನೆದುರು ಬಣ್ಣದಾಚೆಯ ನೈಜ ಭಾವಗಳ ದರ್ಶಿಸುವ ಶಕ್ತಿ ಬರಲಿ, ಬದುಕು ನೈಜತೆಯ ಸಂಭ್ರಮವಾಗಲಿ ಎನ್ನುವ ಹಾರೈಕೆಗಳೊಂದಿಗೆ ಜನ್ಮ ದಿನದ ಶುಭಾಶಯಗಳು.

    Nice Write up.

    ReplyDelete
  3. ಸಂಕಲನ ವ್ಯವಕಲನಗಳ ಮೊತ್ತದ ಗುರುತೇ ಈ ಬದುಕು. ಪ್ರತಿಯೊಬ್ಬರಲ್ಲೂ ಇರುವ ಆ ಪ್ರೇಕ್ಷಕನಿಗೆ ಜೀವ ಬೀಡುವ ಕೆಲಸ ಅವರವರ ಪ್ರಯತ್ನದಿಂದಷ್ಟೇ ಸಾಧ್ಯ. ಚಂದದ ಬರಹ ಎಂದಿನಂತೆ..ಮುಂದುವರೆಯಲಿ.

    ReplyDelete
  4. ಬರಹ ಚಂದ. ಬಣ್ಣ ತುಂಬಲಿ ಬದುಕ ರಂಗೋಲಿಯಲಿ..

    ReplyDelete
  5. ಬರಹ ಚಂದ. ಬಣ್ಣ ತುಂಬಲಿ ಬದುಕ ರಂಗೋಲಿಯಲಿ..

    ReplyDelete