ನಾನು ಕಡಲಾಗಬೇಕಿತ್ತು
ನೋವುಗಳ ದಡಕೆಸೆದು ಶುಭ್ರವಾಗಬಹುದಿತ್ತು
ಹೊಸ ಹೊಸ ಅಲೆಯಾಗಿ ಮುನ್ನುಗ್ಗಬಹುದಿತ್ತು
ನನ್ನದೇ ಅಂತರಂಗವ ಮಂಥಿಸಿಕೊಂಡು ನಿರಾಳವಾಗಬಹುದಿತ್ತು.
ನಾನು ಮರವಾಗಬೇಕಿತ್ತು.
ದಿನ ದಿನವೂ ಹಸಿರ ಕನಸ ಚಿಗುರಿಸಬಹುದಿತ್ತು
ಕಳೆದ ನೋವುಗಳ ಎಲೆಗಳಾಗಿ ಉದುರಿಸಿಬಿಡಬಹುದಿತ್ತು.
ಎಲ್ಲವೂ ತಿಳಿದೂ ಯಾವುದಕ್ಕೂ ಸ್ಪಂದಿಸದೇ ನಿಂತುಬಿಡಬಹುದಾಗಿತ್ತು.
ಸುಮ್ಮನೆ ಬೇಕೆನಿಸಿದಾಗ ಓದುವ ಪತ್ರಿಕೆಯಾಗಬೇಕಿತ್ತು.
ಇಂದಿನದನ್ನ ಇಂದಿಗೆ ಅರ್ಥೈಸಿಕೊಳ್ಳಬಹುದಿತ್ತು.
ನಿನ್ನೆಗಳ ಹರಿದೆಸೆಯಬಹುದಿತ್ತು
ಯಾರದೋ ಭಾವಕ್ಕೆ ಅಕ್ಷರವಾಗಬಹುದಿತ್ತು.
ಆದರೆ ನಾನು ಕೇವಲ ನಾನಾದೆ ಮತ್ತು ನನ್ನೊಳಗಿನ ನನ್ನ ಹುಡುಕಿಕೊಳ್ಳುವ ಹಠಕ್ಕೆ ಶರಣಾದೆ.
ತುಂಬಾ ಚಂದದ ಭಾವ...
ReplyDelete"ನಾನು" ಕಳೆದೋದರೆ ನನ್ನಿಂದ ಎಲ್ಲವೂ ಆಗ್ಬಹುದಿತ್ತೇನೋ ಅಲ್ಪ ಸ್ವಲ್ಪ ಆದ್ರೂ ಅನ್ಸುತ್ತೆ ನನ್ ಬಗ್ಗೆ ನಂಗೆ...
ತುಂಬಾ ಕಾಲದ ನಂತರ ಮತ್ತೆ ಅಭಿಸಾರಿಕೆಯಲ್ಲಿ ಮಾತಾಗಿದೆ...❣️❣️
ಮುಂದುವರೆಯಲಿ...