Wednesday, 11 January 2017

ಹೊಸ ಪಥದ ಜಾಡು....

ಏನೆಲ್ಲಾ ಇದೆ ಈ ಬದುಕಿನ ಗರ್ಭದಲ್ಲಿ. ಅದೆಂತಹ ಹುಚ್ಚು ನಗು ಮತ್ತು ಕ್ಷುಲ್ಲಕ ಅಳು. ಬದುಕಿನ ಹಸಿವ ಹೆಚ್ಚಿಸುವ ಬಂಧಗಳು, ಬಂಧನವಾಗುವ ಸಂಬಂಧಗಳು, ಕೈಗೆಟುಕದ ಕನಸಿನಂಥ ಆಸೆಗಳು.

ಮನಸೇ,
ಅದೆಷ್ಟು ದಿನವಾಯ್ತು ಮಾತಾಗದೇ, ಎದೆ ಬಿರಿಯೆ ನಗುವಾಗದೆ. ಇನ್ನಾದರೂ ಬದುಕಿನ ಆಳಕ್ಕಿಳಿಯಬೇಕು, ಸಿಗುವ ಚಿಕ್ಕ -ಪುಟ್ಟ ನೋವು - ನಲಿವುಗಳನ್ನ ನನ್ನೊಳಗೆ ಹರಿಯಬಿಡಬೇಕು. ನಿಜ, ನಡೆಯುವ ಹಾದಿಯಲ್ಲಿ ಕಲ್ಲು ಸಿಕ್ಕರೆ ದಾಟಬಹುದು ಕಿತ್ತು ಬಿಸಾಡಬಹುದು ಆದರೆ ಒಲವ ಹೂಗಳು‌ ಸಿಕ್ಕರೆ ನೋಡದೆ ದಾಟುವುದಾದರೂ ಹೇಗೆ? ಕಲ್ಲನ್ನ ಕಿತ್ತಷ್ಟು ಸುಲಭವೂ ಅಲ್ಲ ಒಲವ ಹೂವ ಕಿತ್ತೆಸೆಯುವುದು‌. ಹಾಗಂತ ದಾರಿಯಲ್ಲಿ ಸಿಕ್ಕೆಲ್ಲ ಹೂವುಗಳನ್ನ ಜೊಪಾನ ಮಾಡಲು ಸಾಧ್ಯವಿಲ್ಲ. ಆದರೂ, ಬದುಕೆಂದರೆ ದೇವರಂತಲ್ಲವ; ಕರಗದ ಕಲ್ಲಿನ ಅಡಿ ಮುಡಿಯೆಲ್ಲ ಹೂವೇ ಹೂವು.

ಬದುಕಿಗೆ ಯಾವುದೋ ದೊಡ್ಡ ಅರ್ಥವನ್ನೇ ಕೊಡಬೇಕು ಅಂತೇನಿಲ್ಲ. ಹಾಗೆಯೇ ಬದುಕಲ್ಲಿ ಬರುವ ಬಂಧಗಳಿಗೂ.. ಗಂಡು ಹೆಣ್ಣಿನ ಸಂಬಂಧಗಳೆಲ್ಲವೂ ಪ್ರೇಮವೇ ಆಗಬೇಕು ಮತ್ತು ಕಾಮದಲ್ಲೇ ಕೊನೆಯಾಗಬೇಕು ಎಂದ್ಯಾವ ನಿಯಮಗಳೂ ಇಲ್ಲ. ಸ್ನೇಹವು ಸದಾಕಾಲ ಸ್ನೇಹವಾಗಿಯೇ ಉಳಿಯಬಹುದು. ಯಾರದೋ ಕಣ್ಣಲ್ಲಿ ಬದುಕ ನೋಡುವ ಭಯಪಡುವ ಅಗತ್ಯಗಳಿಲ್ಲ. ಬದುಕು ನಿನ್ನದು ಎಂದಾದ ಮೇಲೆ ಭಾವಗಳು ನಿನ್ನದೊಂದೆ ಆಗಬೇಕು. ಯಾರನ್ನೋ ನಂಬಿಸುವ, ಬದಲಾಯಿಸುವ ಅಗತ್ಯಗಳಿಲ್ಲ.

ನಿನ್ನನ್ನ ಯಾರೋ ಅರ್ಥ ಮಾಡಿಕೊಳ್ಳಲಿ, ನಂಬಲಿ ಎಂದುಕೊಳ್ಳಬೇಡ. ಯಾಕೆಂದರೆ ನಿನ್ನ ನೀ ನಂಬಬೇಕು ನಿನ್ನ ನೀ ಪ್ರೀತಿಸಬೇಕು. ಬದುಕ ಕೊನೆಯವರೆಗೂ ನಿನ್ನೊಡನಿರುವವಳು ನೀ ಮಾತ್ರ. ಏನನ್ನ ಪಡೆದುಕೊಂಡರೂ- ಕಳೆದುಕೊಂಡರೂ ಅದು ನಿನ್ನ ಪಾಲು ಮಾತ್ರ. ಇಲ್ಲಿ ನೋವಿಗೂ- ನಲಿವಿಗೂ ಯಾರೂ ಪಾಲುದಾರರಿಲ್ಲ. ಹೋರಾಟವನ್ನು  ಎಲ್ಲಿಯೂ ನಿಲ್ಲಿಸಬೇಡ. ನಿನ್ನದೇ ಮನಸಿಗೂ ಸೊಲನ್ನು ಒಪ್ಪಿಕೊಳ್ಳುವುದ ಕಲಿಸಬೇಡ. ಸೋಲನ್ನು ಒಪ್ಪಿಕೊಂಡರೆ ಗೆಲುವು ಮರೆಯಾದಂತೆ.

ಆದರೂ ಈಗೀಗ ಚಲನೆಯೆಲ್ಲೋ ನಿಂತುಬಿಟ್ಟಿದೆ. ಸೂರ್ಯ ಚಂದ್ರರ ಮುಖದಲ್ಲೂ ಮೊದಲಿನ‌ ಖುಷಿಯೇ ಇಲ್ಲ. ಮತ್ತೊಮ್ಮೆ ಇದೇ ಪಥದಲ್ಲಿ ಚಲಿಸಬೇಕು. ಹೊಸದಾರಿಯಲ್ಲಿ ಹೊಸ ನಗುವೊಂದನ್ನ ಹುಡುಕುತ್ತಾ.... ಬದುಕ ಬಯಲಾಗಿಸುವತ್ತ... ಬಯಲಾದಷ್ಟೂ ಬೆಳಕು ಸ್ವಂತ...

1 comment:

  1. Introspection is the best way to a writer to maintain originality. Unless one introspect, the influence of hundreds of things will portray him/her in a totally different manner.

    Newer ways may not emerge all the times, but newer approach and newer goals indeed occur often. Catch them and move on.

    ReplyDelete