Monday 29 September 2014

ಎಲ್ಲ ಬರೀ ಪ್ರಶ್ನೆಗಳು.....

ಚಿತ್ರಿಸಿದಂತೆ ಚಿತ್ರಣವಾ.?
ಬೆಳಕು ಬಿದ್ದಷ್ಟೇ ಕಾಣುವುದಾ.?
ವಿವರಿಸಿದಂತೆ ವ್ಯಕ್ತಿತ್ವದ ಪರಿಚಯವಾಗುತ್ತದೆಯಾ.? 

ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತೆಗೆ ಪರಿಚಯಿಸಿದ ವ್ಯಕ್ತಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಅಲ್ಲವಾ...?
ಆ ಪರಿಣಾಮದ ಮೇಲೆಯೇ ಸಂಭಂದಗಳ ತೀವ್ರತೆ ನಿರ್ಧಾರವಾಗುವುದೇನೋ ಅಲ್ಲವಾ...? 
ಇಷ್ಟವಾದ ವ್ಯಕ್ತಿಯೊಬ್ಬ ತಪ್ಪನ್ನೇ ಮಾಡಿದರೂ ಅವನನ್ನು ದ್ವೇಷಿಸಲಾಗದೇ ಸದಾ ಕಾಲ ಮನದೊಳಗೆ ಯುದ್ದ ಮಾಡುವುದಕ್ಕೆ ಕಾರಣ - ವ್ಯಕ್ತಿ ನಮ್ಮೊಳಗೆ ಚಿತ್ರವಾದದ್ದು ತುಂಬಾ ಸುಂದರವಾಗಿ ಅನ್ನುವುದಾಗಿರಬಹುದಾ.?     

ವೈದ್ಯರು ನಮ್ಮೊಳಗೆ ಹೇಗೆ ಚಿತ್ರಿಸಲ್ಪಟ್ಟಿದ್ದಾರೆ ಎನ್ನುವುದರ ಮೇಲೆ ರೋಗವನೆದುರಿಸೋ ನಮ್ಮ ಶಕ್ತಿ ನಿರ್ಧಾರವಾಗುತ್ತದೆಯೇನೋ..?  
ನನಗೆ ನಾರಾಯಣನಂತೆ ಕಂಡವ ಇನ್ಯಾರಿಗೋ ಯಮದೂತನಂತೆ ಕಾಣಬಹುದು ಇದೇ ಕಾರಣಕ್ಕಾ ಒಂದೇ ರೋಗವಾದರೂ ಒಂದೇ ವೈದ್ಯ ಕಡಿಮೆ ಮಾಡುವಲ್ಲಿ ಅಸಮರ್ಥನಾಗುವುದು..?
  
ನನಗೆ ಆಗದ ಮನುಷ್ಯನನ್ನು ಯಾರೂ ಪ್ರೀತಿಸಬಾರದು ಎಂಬ ಕಾರಣಕ್ಕೋ ಅಥವಾ ನನ್ನ ಜೊತೆ ಒಳ್ಳೆಯವನಾಗದವ ಇನ್ಯಾರಿಗೂ ಒಳ್ಳೆಯವನಾಗಲು ಸಾಧ್ಯವೇ ಇಲ್ಲ ಎಂಬ ನಮ್ಮ ಮನದ ಪೂರ್ವಾಗ್ರಹಕ್ಕೋ ಎಲ್ಲೆಡೆ ಅವನನ್ನು ಕೆಟ್ಟವನನ್ನಾಗಿ ಬಿಂಬಿಸುತ್ತೇವಾ..?    
ಅಥವಾ ನನಗೆ ಒಳ್ಳೆಯವನಾದವ, ನನಗೆ ಆಪ್ತನಾದವ ಎಲ್ಲರಿಗೂ ಒಳ್ಳೆಯವನಾಗುತ್ತಾನೆ ಎಂದು ಖಡಾಖಂಡಿತ ನಿರ್ಧರಿಸಿಬಿಡುತ್ತೇವಾ.? 
ಎರಡೂ  ಒಂದು ರೀತಿಯಲ್ಲಿ ತಪ್ಪೇ ಅಲ್ಲವಾ.? 
ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ಇಲ್ಲೇ  ಬಾ ಎಂದು ಹೇಳಲು ಸಾಧ್ಯವಾ.?
ಅದು ಸಮಂಜಸವಾ.? 
ನನಗೆ ಸರಿ ಆದದ್ದು ಎಲ್ಲರಿಗೂ ಸರಿಯಾಗುತ್ತದೆ ಎಂದು ಊಹಿಸುವುದು ಅರ್ಧ ಸತ್ಯವಲ್ಲವಾ.?
ಅರ್ಧ ಸತ್ಯವನ್ನೇ ಬದುಕಿನ ಮಹಾ ಸತ್ಯ ಎಂಬಂತೆ ವರ್ತಿಸೊದು ನಮ್ಮ ಮನಸಿನ ಹೊಣೆಗೇಡಿತನವಲ್ಲವಾ.?
ನಮಗೆ ಕಾಣೋದು ನಮ್ಮ ಮೂಗಿನ ನೇರ ಮಾತ್ರ.. ಎದುರಿನವರ ಕಾಣುವಿಕೆ ಬೇರೆಯೇ ಇದ್ದೀತು ಮತ್ತದು ಹೆಚ್ಚಿನ ಸಲ ಬೇರೆಯೇ ಇರುತ್ತೆ ಕೂಡಾ ಅಲ್ಲವಾ..? 

ಕೇವಲ ಒಂದು ಪಾರ್ಶ್ವವನ್ನು ನೋಡಿ ಅಭಿಪ್ರಾಯವನ್ನು ಕೊಟ್ಟುಬಿಡುವುದು ಸುಲಭವೇ ಆದರೆ ಅದರ ಪರಿಣಾಮ..? 

ಒಬ್ಬ ವ್ಯಕ್ತಿಯ ಬಳಿ ಮಾತನಾಡದೆ ಸ್ವಭಾವಗಳ ಪರಿಚಯ ಮಾಡಿಕೊಳ್ಳದೇ ಮನುಷ್ಯ ಒಳ್ಳೆಯವ ಅಥವಾ ಕೆಟ್ಟವನು ಎಂದು ನಿರ್ಧರಿಸುವುದರಿಂದ ಆಗುವ ಉಪಯೋಗವೆಷ್ಟು ಹಾಗೆಯೇ ಅನಾಹುತಗಳೆಷ್ಟು..? 
“ಕುಂತಿ ಕೌರವರನ್ನು ಚಿತ್ರಿಸಿದಂತೆ ಪಾಂಡವರು  ಬೆಳೆದರು, ಗಾಂಧಾರಿ ಪಾಂಡವರನ್ನು ಹೇಗೆ ಚಿತ್ರಿಸಿದಳೋ ಹಾಗೆಯೇ  ಕೌರವರು ಬೆಳೆದದ್ದು...  ಅದಕ್ಕೇ ಅಲ್ಲವಾ ಕುರುಕ್ಷೇತ್ರದಲ್ಲಿ  ಯುದ್ಧವಾದದ್ದು..?” 

ವ್ಯಕ್ತಿ  ನನಗೆ ಏನು ಮತ್ತು ವ್ಯಕ್ತಿ ನಿಜವಾಗಿ ಏನು ಎನ್ನುವುದರ ಮಧ್ಯೆ ಇರುವ ವ್ಯತ್ಯಾಸವನ್ನು ಯೋಚಿಸಿಕೊಳ್ಳದೆ ದ್ವೇಷವನ್ನು ಮಾಡುವುದರಿಂದ ದ್ವೇಷ ಮನೋಭಾವಗಳು ತಲೆಮಾರುಗಳನ್ನು ದಾಟಿದರೂ ಜೀವಂತವಾಗಿರುತ್ತವೆ... ಅಂತೆಯೇ ಪ್ರೀತಿ ಕೂಡ... ಹಾಗನ್ನಿಸಲ್ಲವಾ..?

ಪ್ರೀತಿಗೆ ಕಾರಣ ಬೇಕಿಲ್ಲ ನಿಜ; ಕೆಲವೊಂದು ಕಾರಣಗಳನ್ನು ಬಿಟ್ಟು...
ಪ್ರೀತಿಯಿಂದ ಅನಾಹುತಗಳು ಕಡಿಮೆ...(?)
ಆದರೆ ದ್ವೇಷ.....?
ನಮ್ಮ ಕಲ್ಪನೆಯಲ್ಲೇ ಚಿತ್ರಿಸಿಕೊಂಡಿದ್ದಾದರೆ,  ಕಾಲ ಕ್ರಮೇಣ ಅಳಿಸಿ ಹಾಕಬಹುದೇನೋ...
ಅದೇ ತೀರ ಆತ್ಮೀಯರು ಮೂಡಿಸಿದ ಚಿತ್ರ ಅಳಿಸುವುದು ಸುಲಭವಲ್ಲ ಅಲ್ಲಿ ವ್ಯಕ್ತಿಯ ಪರಿಣಾಮ ತೀವ್ರತರದಲ್ಲಿರುತ್ತದೆ ಅಂತನ್ನಿಸಲ್ಲವಾ...? 

ಅದಕ್ಕೆಂದೇ  ಯಾವುದೇ ವ್ಯಕ್ತಿಯನ್ನು ಇನ್ನಾರಿಗೋ ಪರಿಚಯಿಸುವಾಗ ನನಗೆ ಏನು ಹಾಗೂ ನನ್ನೊಡನೆ ಹೇಗೆ ಎಂಬ ವೈಯಕ್ತಿಕ ಭಾವದಲ್ಲಿ ಆತನನ್ನು ಚಿತ್ರಿಸಿ ಕೊಡುವುದಕ್ಕಿಂತ  ಅಥವಾ ಕೇವಲ ನಮ್ಮ ಅಭಿಪ್ರಾಯವನ್ನು ಅಷ್ಟು ಪರಿಣಾಮಕಾರಿಯಾಗಿ ಹೇಳುವ ಬದಲು ಸಾಮಾಜಿಕವಾಗಿ ಮತ್ತು ನನ್ನಿಂದಾಚೆ ವ್ಯಕ್ತಿ ಹೇಗೆ ಎಂಬುದನ್ನೂ ಪ್ರಾಮಾಣಿಕವಾಗಿ ವಿವರಿಸಿ ಹೇಳಿದರೆ ಇನ್ಯಾರದ್ದೋ ಮನದಲ್ಲಿ ವ್ಯಕ್ತಿಯೊಬ್ಬನ ಬಗ್ಗೆ ಮೂಡುವ ಅಭಿಪ್ರಾಯದಲ್ಲಿ ನಮ್ಮ ಪಾತ್ರ ಕಡಿಮೆ ಇದ್ದೀತು ಅಲ್ಲವಾ...? 

ಯಾಕೋ ಹೀಗೆಲ್ಲ ಅನ್ನಿಸಿತು... ನನ್ನ ಮಾತುಗಳು ಕೂಡ ತಪ್ಪು ಅಥವಾ ಅರ್ಧ ಸತ್ಯವೇ ಇದ್ದೀತು ಅಲ್ಲವಾ....???

ಈಗ ನಿಮ್ಮ ಮಾತನ್ನು ಹೇಳಿ...

11 comments:

  1. ಸಂಧ್ಯಾ ಮರೀ -
    ಪ್ರಶ್ನೆಗಳು ನನ್ನದೂ ಹೌದು ಒಮ್ಮೊಮ್ಮೆ...
    ಚೆಂದಗೆ ಅಭಿವ್ಯಕ್ತಿಸಿದ್ದೀಯಾ...
    ಅಂತೆಯೇ ನಿನ್ನ ಕೊನೆಯ ಮಾತಂತೆ ಈ ಪ್ರಶ್ನೆಗಳು ಅರ್ಧ ಸತ್ಯಗಳು ಕೂಡ...
    ಪರಿಚಯಿಸಿದಾತನ ಪ್ರಭಾವದಿಂದಾಚೆ ನಿಂತು ಬದುಕನ್ನು ನೋಡುವಂಥ ಸ್ಥಿತಪ್ರಜ್ಞ ಕಣ್ಣು ನಮ್ಮೆಲ್ಲರಲ್ಲೂ ಮೂಡಲಿ...
    ಅಂದರೆ, ಪರಿಚಯವಾದವನನ್ನು ಪರಿಚಯಿಸಿದಾತನ ಕಣ್ಣಿಂದ ಮತ್ತು ನಾವು ಹೇಗೆ ಕಾಣಬೇಕೆಂದು ಬಯಸ್ತೀವೋ ಹಾಗೆ ಮಾತ್ರವಲ್ಲದೇ ನಿಜವಾಗಿ ಅವನೇನೋ ಅದನ್ನೂ (ಏನು ಇದೆಯೋ ಅದನ್ನು) ನೋಡಬಲ್ಲ ಶಕ್ತಿವಂತ ಒಳಗಣ್ಣನ್ನು ಮೂಡಲಿ ನಮ್ಮೆಲ್ಲರಲ್ಲೂ...
    ಅದು ನಾವೇ ಸಾಧಿಸಿಕೊಳ್ಳಬೇಕಾದದ್ದು - ನಮ್ಮ ಒಳಗಣ್ಣಿನ ದೃಷ್ಟಿಯನ್ನು ವಿಸ್ತರಿಸಿಕೊಳ್ಳೋ ಮೂಲಕ - ಹೊಸದೇ ಆದ ಕೋನದಲ್ಲಿ ಬದುಕ ನೋಡುವ ಮೂಲಕ...
    ಅದೇ ಕೌರವರ ಮಧ್ಯದಲ್ಲಿ ವಿದುರ ಬೆಳೆದು ನಿಂತಂತೆ - ರಾವಣನ ವಂಶದದಲ್ಲಿ ವಿಭೀಷಣ ವಿಭಿನ್ನವಾಗಿ ಬದುಕು ಕಟ್ಟಿಕೊಂಡಂತೆ...
    ನಂಗೆ ಹೀಗೆಲ್ಲ ಕೂಡ ಅನ್ನಿಸುತ್ತೆ...
    ಚಂದದ ಬರಹ ಕಣೇ...

    ReplyDelete
  2. ಮನವು ಪೂರ್ವಾಗ್ರಹ ಪೀಡಿತ ನಿರ್ಧಾರಕ್ಕೆ ಬಂದು ಬಿಡುತ್ತದೆ.
    ಮನೋ ವಿಶ್ಲೇಷಕ ಬರಹ.

    ReplyDelete
  3. Namma drushtiyannu meeriddu sumaride jagattinalli .
    Adaralli kelavannu anubhava annutteve...
    Anubhavakke hondikollade ghatisuvudannu kelavomme kaakataliya annutteve...
    inthahavannu kelavomme tale haki anveshane annutteve...
    adare anubhavakke baraddu kannige kaanaddu ghatisuvike arivige baraddu anveshaneya paridhige sigadiddudu suumaride...avugala sankramanave inthaha bhavanegala ugamakke vedikeyaguttade annodu nanna anisike :-) ..chenagide baraha...ishtavayitu...

    ReplyDelete
  4. ಈಗ ನಿಮ್ಮ ಮಾತನ್ನು ಕೇಳಿ ಎಂದು ಹೇಳಿ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗೆ ಉತ್ತರ ಅರಸುವಂತೆ ಮಾಡೂತ್ತಿದೆ ಈ ನಿಮ್ಮ ಬರಹ.

    ReplyDelete
  5. ಯೋಚನೆಗೆ ಹಚ್ಚಿಸೋ ಬರಹ..ಚನ್ನಾಗಿದೆ

    ReplyDelete
  6. ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ಇಲ್ಲೇ ಬಾ............ ಹಮ್ಮ ... ನಿಜಕ್ಕೂ ಕುಶಿಯಾಯಿತು ನಿನ್ ಬರಹ ಓದಿ ಹಾಗೇ ನನ್ನನ್ನು ಒಮ್ಮೆ ಹೌದಲ್ಲವೇ ?? ನಿಜವಲ್ಲವೆ ಅನ್ನಿಸಿತು .. ಅಭಿಸಾರಿಕೆ.ಯ ಪ್ರಶ್ನೆಗಳು ?? ಅವು ನನ ಗೂ ಹೀಗೇ ಕಾಡಿದ್ದಿದೆ ..... ಬದುಕುವ ಇ ನಾಲ್ಕು ದಿನಗಳ ಸಂತೆಯಲಿ ನಾವೂ ನಂಬಿಕೆ ಎಂಬುದು ಅತೀ ದೊಡ್ಡ ಪಾತ್ರ ... ಹಾಗೇ ನಾವೂ ಕಂಡವರನ್ನ ಅಥವಾ ಮೆಚ್ಚಿದವರನ್ನೇ ಆ ನಂಬಿಕೆ ಎಂಬುದರ ಮೇಲೆ ನಂಬಿ ಬದುಕುತ್ತೇವೆ ..

    ಇಲ್ಲದ ದೇವರನು ಕಲ್ಲು , ಮಣ್ಣುಗಳ ಗುಡಿಯಲಿ ಹುಡುಕಿದಂತೆ ... ಆ ನನ್ನಾ ಕೃಷ್ಣ ಹಾಗ ಇರಬಹುದು , ಹೀಗೆ ಇರಬಹುದು ಅಂತಾ ಚಿತ್ರಿಸಿಕೊಳ್ಳುತ್ತೇವೆ ... ಇ ನಿಮ್ಮ ಅಭಿಪ್ರಾಯ ಅಥವಾ ನಿಮ್ಮ ಇ ಪ್ರೀತಿ .. ವಿಶ್ವಾಸ ಅಥವಾ ನಂಬಿಕೆ ಎಂಬುದರ ಮೇಲೆ ಹುಟ್ಟುತ್ತದೆ ಅಥವಾ ತೀವ್ರ ಗೊಳ್ಳುತ್ತದೆ ಎಂಬುದು ನನ್ನ ಕಲ್ಪನೆ ... ಅದು ನಿಮಗೆ ಬಿಟ್ಟಿದ್ದು ... ನಾವು ನಾವಾಗಿಯೇ ಬದುಕಬೇಕು ಹಾಗೇ ಇನ್ನೋಬ್ಬರಿಗೆ ಮೆಚ್ಚಿಸಲಿಕ್ಕೆ ಅಥವಾ ಬೇರೆಯವರಿಗೆ ತೋರಿಸುವುದಕ್ಕೆ ಬದುಕಬಾರದು .. ನಾವು ಕಂಡಿದ್ದು ಇನ್ನೋಬ್ಬರಿಗೆ ತಿಳಿಸಿ ಹೇಳುವುದು ಅಥವಾ ಚಿತ್ರಿಸಿ ಮುಟ್ಟಿಸುವುದು ತಪ್ಪೇನಿಲ್ಲ ... ಹೇಳಿದಂತೆ ಇ ನಾಲ್ಕು ದಿನದ ಬದುಕಿನಲಿ ನಾವೂ ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ ... ಎಲ್ಲವನ್ನೂ ನೋಡಲು ಅನುಬವಿಸಳು ಸಾಧ್ಯವಿಲ್ಲ ..ಏನಂತೀರ ??

    ReplyDelete
  7. ಕೂಸೆ ಮತ್ತೊಮ್ಮೆ ಜೀವನ ದೃಷ್ಟಿಕೋನ ಇರುವ ಸಮರ್ಥ ಚಿತ್ರಣದ ಅಭಿವ್ಯಕ್ತಿ ಕಣೆ. ಹೀಗೆ ಬರಿತಾ ಇರು.
    ನನಗೂ ಆತ್ಮವಿಶ್ವಾಸ ಹುಟ್ಟಿಸುತ್ತದೆ ನಿನ್ನ ನುಡಿಮುತ್ತುಗಳು. ಪ್ರಶ್ನೆಯ ಜೊತೆ ಉತ್ತರ ನಾನೇ ಆಗುತ್ತೇನೆ ಎಂಬ ಅರಿವು ಹುಟ್ಟಿಕೊಂಡ ದಿನ ನಿನ್ನೆಲ್ಲ ಪ್ರಶ್ನೆಗೂ ಉತ್ತರ ಪ್ರಶ್ನೆಯೇ ಆಗಿದೆ.. ಸೂಪರ್ ಲೈಕ್ ಕಣೆ..:)

    ReplyDelete
  8. "ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತೆಗೆ ಪರಿಚಯಿಸಿದ ವ್ಯಕ್ತಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಅಲ್ಲವಾ...?
    ಆ ಪರಿಣಾಮದ ಮೇಲೆಯೇ ಸಂಭಂದಗಳ ತೀವ್ರತೆ ನಿರ್ಧಾರವಾಗುವುದೇನೋ ಅಲ್ಲವಾ...? "

    ..

    ಈ ವಿಷಯದಲ್ಲಿ ನಾನೂ ಎಷ್ಟೋ ಸಲ ವಿಚಾರಕ್ಕೀಡಾಗಿದ್ದುಂಟು.....
    ಪರಿಚಯಿಸುವ ವ್ಯಕ್ತಿ ಹೇಗೆ ಪರಿಚಯಿಸುತ್ತಾನೆ ಎನ್ನುವುದರ ಮೇಲೆಯೇ ನಮ್ಮ ಭಾವನೆ
    ಅವರ ಮೇಲೆ ಬರುವುದಂತೂ ನಿಜ.... ಪರಿಚಯವಾದ ವ್ಯಕ್ತಿ ಚನ್ನಾಗಿ ಪರಿಚಯವಾಗುವವರೆಗೂ ಅವನು ಏನು ಎಂಬುದು ಗೊತ್ತಾಗೋದಿಲ್ಲ....

    ಇರುವುದನ್ನು ಇರುವ ಹಾಗೆ ನಯವಾಗಿ ಹೇಳಿದರೆ ಕಲ್ಪನೆಯೂ ಕಡಿಮೆ ಅಡ್ಡ ಪರಿಣಾಮಗಳೂ ಕಡಿಮೆ..
    ಶುದ್ಧ ಮನಸ್ಸಿನ ಯಾವುದೇ ಕೆಲಸ ಸರಿಯಾದ ಪರಿಣಾಮವನ್ನೇ ನೀಡುತ್ತದೆ....

    ಒಳ್ಳೆಯ ಬರಹ....
    ಒಳ್ಳೆ ಒಳ್ಳೆ ಮಾತ್ರ...

    ReplyDelete
  9. ಹಿಡಿಸಿತು ಲೇಖನ. ಹೌದು ಎಲ್ಲವೂ ಅವರವರ ಭಾವಕ್ಕೆ. ಎಲ್ಲೋ ಓದುವ/ಕೇಳುವ ಕೆಲವು ಮಾತುಗಳು ನಮ್ಮ ಆಗಿನ ಮನಸ್ಥಿತಿಗೆ ತಕ್ಕಂತೆ ಅರ್ಥವಾಗುತ್ತವೆ. ನಮ್ಮ ಮನಸ್ಸು ನಿಮ್ಮದೇ ಧಾಟಿಯಲ್ಲಿದ್ದರೆ ಹೌದಲ್ಲವೇ ಎನಿಸುತ್ತದೆ, ಬೇರಾವುದೋ ಚಿಂತೆಯಲ್ಲಿದ್ದರೆ ಅರ್ಥವಿಲ್ಲದ ಮಾತುಗಳು ಎನಿಸುತ್ತವೆ. ಎಲ್ಲವೂ ಮನಸ್ಸು.

    ReplyDelete
  10. ಆಳಕ್ಕೆ ಇಳಿದ,,, ಇಳಿಸಿದ ಬರಹ,,,,,,, ತತ್ವಗಳ ರೀತಿಯಲ್ಲಿ ಗೊಂದಲಗಳು, ಚಿಂತನೆಗೆ ಹಚ್ಚಿತು,,,,, ಬರೆಯುತ್ತಿರಿ,

    ReplyDelete