ಯಾರೋ ನಿನ್ನನ್ನು ನೋಯಿಸಿದರೆಂದು ನೀನು ನಿನ್ನ ಬದುಕನ್ನು ನೋಯಿಸುವುದು ಮೂರ್ಖತನವಲ್ಲವಾ? ನಿಜಕ್ಕೂ ಬದುಕನ್ನು ನೋಯಿಸುವಂತಹ ಕಾರಣಗಳಿವೆಯಾ? ಘನ ಕಾರಣೆಗಳೇನೂ ಇಲ್ಲ ಎನ್ನುವುದಾದರೆ ಬದುಕನ್ನು ನೋಯಿಸುವುದು ತಪ್ಪಲ್ಲವಾ?
ಕಣ್ಣಿರಿಗೂ ಒಂದು ಬೆಲೆಯಿದೆ, ಅದು ಬರಲೂ ಒಂದು ಕಾರಣವಿದೆ. ಹಾಗೆ ಯಾರಿಗೆಂದರೆ ಅವರಿಗೆ, ಎಲ್ಲೆಂದರಲ್ಲಿ ಅಳುವುದು ನಿನ್ನ ಅಸಹಾಯಕತೆ ಅಲ್ಲವಾ? ರಾತ್ರಿ ಕಳೆದ ಮೇಲೂ ನೀ ಮಲಗಿರುವೆ ಎಂದಾದರೆ ನಿನಗೂ ಸೋಲಿನ ಭಯವಾ? ನೋವು ಕೊಟ್ಟವರ ಎದುರು ಸೆಟೆದು ನಿಲ್ಲಬೇಕು ತಾನೇ? ನೀ ಅತ್ತರೆ ನೋವು ನಿನ್ನ ಕಣ್ಣಿಗೆ, ನಿನ್ನ ನಾಳೆಗಳಿಗೆ ತಾನೇ?
ಬದುಕು ನೋವು ನಲಿವುಗಳ ಸಾಗರವೇ. ಎಲ್ಲೋ ಮಳೆಯಾದಾಗ ಮಣ್ಣು ನೀರು ಬರುವುದು ನಿಜವೇ! ಆದರೆ, ಸಾಗರವೆಂದೂ ತನ್ನ ತನವನ್ನು ಕಳೆದುಕೊಳ್ಳುವುದಿಲ್ಲ. ನಿರಂತರ ಮಂಥನದಿಂದ ತನ್ನನ್ನು ತಾನು ಸದಾ ಉಳಿಸಿಕೊಂಡಿದೆ. ಪ್ರೀತಿ ಕೊಡು ಎಂದು ಯಾರ ಬಳಿಯೂ ಹೋಗುವುದಿಲ್ಲ ಆದರೆ, ತನ್ನೊಳಗಿನ ಪ್ರೀತಿಯನ್ನೆಂದು ಕಳೆದುಕೊಂಡಿಲ್ಲ.
ತುಂಬಾ ದಿನ ಚಲಿಸದೆ ಇರಬಾರದು. ನಿಂತ ನೀರಾಗಿ ಕೊಳೆತದ್ದು ಸಾಕು. ನೀರು ಹರಿದರೆನೇ ಚಂದ. ಗಿರಿಯ ನೆತ್ತಿಯಿಂದ ಕಣಿವೆಗೆ ಜಿಗಿದೋ ಅಥವಾ ಏರಲಾಗದ ಗಿರಿಯ ಮಗ್ಗಲನ್ನು ಬಳಸಿಯೋ. ಒಟ್ಟಿನಲ್ಲಿ ಚಲನೆ ನಿರಂತರವಾಗಬೇಕು. ನಿಂತರೆ ನಿಂತ ಜಾಗದಲ್ಲಷ್ಟೇ ಹಸಿರು – ಹರಿದರೆ ಹರಿವಿನ ವಿಸ್ತಾರಕೆಲ್ಲ ಹಸಿರು. ಬಾವಿ ಒಂದೂರಿನ ದಾಹ ತೀರಿದರೆ, ನದಿ ಹತ್ತೂರಿನ ಉಸಿರು. ಹಾಗೆಯೇ ಬದುಕೂ. ಯಾರಿಲ್ಲದಿದ್ದರೂ ನಡೆಯಬಲ್ಲವನಾಗು ನೀ ನಿನ್ನ ಜೊತೆ. ನಿನಗಾಗಿಯೇ ಇರುವ ನಿನ್ನೆಲ್ಲ ಖುಷಿಗಳ ಜೊತೆಗೆ. ನೀನೇ ಕಟ್ಟಿಕೊಂಡ ನಿನ್ನ ನಾಳೆಗಳ ಕನಸ ಬುತ್ತಿಯ ಜೊತೆಗೆ. ನಡೆಯುತ್ತಲಿರು – ದಾರಿ ಬದಿಯಲೆಲ್ಲ ನಿನ್ನ ನಗೆಯದೇ ಮಾತು.
ಸದಾ ಎಡವಿ ಬಿದ್ದು ರಕ್ತ ಬಂದ ಕಾಲುಗಳೂ ಗಟ್ಟಿಯಾಗಿವೆ...
ಉಪ್ಪು ನೀರಿನಿಂದ ತೊಳೆದ ಕಂಗಳು ಶುದ್ಧವಾಗಿವೆ.
ಸಾಕಿನ್ನು.......
ಮೋಡ ಮುಸುಕಿದ ಬಾನು, ಪರದೆ ಕಟ್ಟಿದ ರಂಗಸ್ಥಳ...
ಮಳೆ ಸುರಿದಾಗಿದೆ..
ಪರದೆ ಸರಿದಾಗಿದೆ...
ನಾಟಕವೋ, ಬದುಕಿನಾಟವೋ ಇನ್ನು ಪ್ರಾರಂಭವಾಗಬೇಕು...
ಕನ್ನಡಿಯ ಎದುರು ಕಾಣಬೇಕಾದದ್ದು ನಿನ್ನದೇ ತೇಜಸ್ಸು. ನಿನ್ನ ಅಳುವಲ್ಲ. ನಮ್ಮೊಳಗನ್ನು ಬೆಳೆಸಲಾರದ, ಬೆಳಗಲಾರದ ಯಾವುದಕ್ಕೂ ತುಂಬಾ ದಿನ ಅಂಟಿಕೊಂಡಿರಬಾರದು. ನೋವುಗಳಿಂದ, ಸೋಲುಗಳಿಂದ ಒಂದಷ್ಟು ಪಾಠ ಕಲಿಯದ ಹೊರತು ಬದುಕು ಬದಲಾಗುವುದಿಲ್ಲ. ಸೋಲಿನ ಸಾರ್ಥಕತೆ ಇರುವುದೇ ನಿನ್ನೊಳಗಣ ಬೆಳವಣಿಗೆಯಲ್ಲಿ, ನಿನ್ನ ಹೊಸ ಗೆಲುವಿನಲ್ಲಿ. ಕಣಿವೆಯ ಆಳಕ್ಕೆ ಹೆದರುವಾತ ಗಿರಿಯ ನೆತ್ತಿಯ ಮೇಲೆ ನಗಲಾರ.
ನೀನು ಕಲಿಯದ ಹೊರತು ಬದುಕು ಏನ್ನನ್ನು ಕಲಿಸದು. ಅನುಭವದಿಂದ ಕಲಿಯಬೇಕೇ ಹೊರತು ಕೊರಗಬಾರದು.
ಇನ್ನು ಮರುಗಿದ್ದು ಸಾಕು -
ಮತ್ತೊಂದು ಬೆಳಗಾಗಿದೆ.
ಕವಿದ ಕಗ್ಗತ್ತಲೆಯ ಮಬ್ಬು ಹರಿದು ಭರವಸೆಯ ಬೆಳಕೊಂದು ಮೂಡಿದೆ.
ಎಚ್ಚರವಾಗು ಅಂತಃ ಶಕ್ತಿಯೇ ನಿನ್ನದೀ ಬದುಕು.
ಆಳು - ಸೋಲುಗಳು ಬರದಂತೆ, ಬಂದ ಸೋಲುಗಳು ಬದುಕ ಆಳದಂತೆ...
ಚಿತ್ರ : ನನ್ನ ಕಲ್ಪನೆಯಿಂದ ನಾನೇ ಬಿಡಿಸಿದ್ದು.
ಮರೀ -
ReplyDeleteಭಾವ ಒಳಗಿಳಿದ ವೇಗದಿಂದಾಗಿ ಬರಹಕ್ಕೆ ಪ್ರತಿಕ್ರಿಯಿಸಲಾಗುತ್ತಿಲ್ಲ...
ಬದುಕಿಬಿಡು ಬರೆದಂತೆ - ಆ ಎತ್ತರದಲ್ಲಿನ ನಗುವಿನಂತೆ...
ತುಂಬ ಹಿಡಿಸಿತು ಶ್ರೀ..
ReplyDeleteನನಗೆ ಕಿವಿಮಾತು ಹೇಳಿದಂತೆಿದೆ..
ರುಕ್ಮಿಣಿ.
ಅಕಸ್ಮಾತ್ ಹೇಗೋ ಇಲ್ಲಿಗೆ ಬಂದೆ, ಅಬ್ಬಾ!! ಅವತ್ತು ಯಾವುದೋ ಕಾರ್ಯಕ್ರಮದಲ್ಲಿ ಕಂಡ ಮೌನ ಮೌನದ ಹುಡುಗಿಯಲ್ಲಿ ಅದೆಂಥ ಪ್ರಜ್ಞೆಯಿದೆ ಎನ್ನುವುದು ಅಂದಿಗೆ ತಿಳಿಯಲೇ ಇಲ್ಲವಲ್ಲ! ಬದುಕಿನ ಕಡೆಗಿನ ಈ ನೋಟ, ಜೀವನ ಪ್ರೀತಿ... ಖುಶಿಯಾಯಿತಪ್ಪಾ ಓದಿ. ಮುಂದುವರಿಯಲಿ.
ReplyDeleteಮನಸನ್ನು ಗಟ್ಟಿ ಮಾಡಿಕೊಳ್ಳದ ಹೊರತು ಶತ ಒರಟ ಬಾಳುಮೆಯನ್ನು ಎದುರಿಸಲಾಗದು. ಉತ್ತಮ ಮನೋಧೈರ್ಯ ತುಂಬ ಬಲ್ಲ ಬರಹ.
ReplyDeleteನನ್ನ ಪ್ರೀತಿಯ ಕೂಸೆ, ಯಾವಾಗ ಕಲಿತೆ ಇದನ್ನೆಲ್ಲ ಕೇಳುವುದಿಲ್ಲ ನಾನು. ನೀ ಹೀಗೆ ಅಂತ ನಂಗೊತ್ತು. ಅಭಿವ್ಯಕ್ತಿಗೆ ಮಾತ್ರ ಹ್ಯಾಟ್ಸಪ್. ಸುಮ್ಮನೆ ಪ್ರೀತಿ ಪ್ರೀತಿನೆ...
ReplyDeleteಈ ಬ್ಲಾಗ್ ಚೆನ್ನಾಗಿದೆ... ಚಂದದ ಬರವಣಿಗೆ....
ReplyDeleteLovely,...<3
ReplyDeleteಚಂದದ ಹೋಲಿಕೆಗಳೊಡನೆ ಹುರಿದುಂಬಿಸಿದ್ದಿರಿ.
ReplyDeleteನಿಮ್ಮ ಶೈಲಿ ಸೊಗಸಾಗಿದೆ , ಚಿತ್ರವೂ.
ಮುಂದುವರೆಸಿ ಚಲನೆಯನ್ನೂ ಬರವಣಿಗೆಯನ್ನೂ
ಗುಡ್ ಲಕ್
hamm.. ಯಾಕೋ .. ನೋಡಿರಲಿಲ್ಲ ನಿನ್ನ ಬ್ಲಾಗ್ ಬರಹವನ್ನಾ ... ಅಬ್ಬಾ ಮೌನಿಯಲು ಇಸ್ಟೆಲ್ಲಾ ಶಬ್ದ ಬಂಡಾರವಿದೆಯೇ ... ಆಳು - ಸೋಲುಗಳು ಬರದಂತೆ, ಬಂದ ಸೋಲುಗಳು ಬದುಕ ಆಳದಂತೆ... ನಿನ್ನ ಬದುಕು ಉಜ್ವಲವಾಗಿರಲಿ ... ಚಂದದ ನಿನ್ನ ಇ ಅಂತ: ಶಕ್ತಿಯ ಬರಹ ಎಲ್ಲರಲ್ಲೂ ಚೈತನ್ಯ ಶಕ್ತಿ ತುಂಬಿದೆ
ReplyDeleteಅಭಿಸಾರಿಕೆ ಪಯಣದಲ್ಲಿ ಬರಿಯ ನಿನ್ನ ಅಂತಃ ಶಕ್ತಿಯಲ್ಲ ಎಲ್ಲರಿಗೂ ಒಂದು ಪ್ರೀತಿಯ ಇರುವಿಕೆಯ ಸಲೀಸಾಗಿ ರವಾನಿಸಿಬಿಡ್ತೀಯ ನೀನು.
ReplyDeleteಇಂತಹುದ್ದೊಂದು ಭಾವದ ಜೊತೆ ಬೇಕಿದೆ ಅಂತನಿಸೋವಾಗ ಓದಿದ್ದೆ ಮೊನ್ನೆ.
ನೀ ಕಲಿಯದ ಹೊರತು ಬದುಕು ಏನನ್ನೂ ಕಲಿಸದು..ಖಂಡಿತ ಬಿದ್ದ ಮೇಲೆ ಎದ್ದು ನಿಲ್ಲಬೇಕಷ್ಟೇ.ಆನಂತರದ ನಡಿಗೆಯ ಸಂಪೂರ್ಣ ಖುಷಿ ಮಾತ್ರ ನಮ್ಮದೇ.
ಬೆಳಕಾಯ್ತು ನನ್ನೊಳಗೂ...
Thank you and I mean it.