Monday, 3 November 2014

ಕೈ ಜಗ್ಗುವ ಬಂಧ ಹಾಗೂ ಕಣ್ಣನಿಲುಕಿನಾಚೆಯ ಗೆಲುವು...

ಪ್ರತಿ ಕತ್ತಲಿನ ಗರ್ಭದಲ್ಲೂ ಹಗಲೆಂಬ ಹಸುಗೂಸು ಹುಟ್ಟಿಬೆಳಗುವಂತೆ, ಕಳೆದುಕೊಂಡ ಪ್ರತಿ ಸಂಬಂಧದ ಜೊತೆಗೆ, ಪ್ರತಿ ಕನಸಿನ ಜೊತೆಗೆ ಮತ್ತೊಂದು ಹೊಸ ಭರವಸೆ ನಗುತ್ತದೆ. 

ದೇವರಿಗೂ ಬೇರೆ ಮಾಡಲಾಗದ ಸಂಬಂಧ ಎಂದು ನೀ ತಿಳಿದಿದ್ದ ಸಂಬಂಧವೊಂದು ನೆಲ ಕಚ್ಚಿದೆ ಎಂದಾದರೆ ದೇವರಿಗೆಲ್ಲೋ ಬೇರೆಮಾಡಲು ಸರಿಯಾದ ಕಾರಣ ಸಿಕ್ಕಿರಬಹುದು. ನೀನ್ಯಾಕೆ ಆ ಕಾರಣ ನೀನೇ ಎಂದು ತಿಳಿದುಕೊಳ್ಳುತ್ತೀಯ?? ಸರಪಳಿಯೊಂದು ಭದ್ರವಾಗಿರಬೇಕು ಎಂದಾದರೆ ಎರಡು ಕೊಂಡಿಗಳೂ ಮುಖ್ಯ ತಾನೇ? ನೀ ಬಲಿಷ್ಠನಾದರೂ ಮತ್ತೊಂದು ಬಲಹೀನನಾಗಿರಬಹುದು. ಅಲ್ಲದೇ, ಅದ್ಯಾವುದೋ ಬಿಟ್ಟು ಹೋದ ಸಂಬಂಧದ ಬೆನ್ನ ಹಿಂದೆ ನಿನಗೆ ಒಳಿತಾಗಲಿ ಎಂಬ ಹಾರೈಕೆಯಿರಬಹುದು. ಅದೆಲ್ಲೋ ದೂರದಿಂದಲೇ, ನಿನ್ನ ಕಣ್ಣೊಳಗಿನ ಕನಸಿಗೆ ರೆಪ್ಪೆ ಕೊಟ್ಟು ರಕ್ಷಣೆ ನೀಡುತ್ತಿರಬಹುದು. ಜೊತೆಯಿದ್ದು ಹೆಜ್ಜೆಯೊಡನೆ ಹೆಜ್ಜೆಯಿಟ್ಟರೆ ಮಾತ್ರ ಸಂಬಂಧವಾ ? ಪ್ರೇಮವಾ?? ನಂಬಿಕೆ ಎನ್ನುವ ಶಬ್ದವನ್ನೂ  ನಂಬದಂಥ  ಸ್ಥಿತಿ ಬಂದಿದೆ ಎಂದಾದರೆ ನಿನ್ನ ನೀ ನಂಬುವ ಕಾಲ ಬಂದಿದೆ ಎಂದಲ್ಲವಾ? ನಿನ್ನನ್ನೇ ನಂಬದವ ಪರರ ನಂಬುತ್ತೇನೆ ಎನ್ನುವುದು ಮೂರ್ಖತನವೇ  ಅಲ್ಲವಾ??

ಮುದ್ದು ಮನಸೇ,

ಯಾರಿಲ್ಲದೆಯೂ ಬದುಕಬಹುದು. ಬದುಕೇ ಶಾಶ್ವತವಲ್ಲ ಸಂಬಂಧಗಳು ಶಾಶ್ವತವಿರಲಿ ಎಂದು ಬಯಸುವುದು ಎಷ್ಟು ಸರಿ? ಹೀಗೂ ಇರಬಹುದು; ಬದುಕಿನ ಗೆಲವು ಮತ್ತು ವ್ಯಕ್ತಿಯೊಡನೆಯ ಪ್ರೇಮ ಯುದ್ಧದಲ್ಲಿ ಬದುಕಿನ ಗೆಲುವೇ ಗೆದ್ದಿರಬಹುದು.  ಬದುಕಿನ ಗೆಲುವಿನೆಡೆಗಿನ ನಿನ್ನ ಅಪರಿಮಿತ ಪ್ರೀತಿಯೆದುರು ವ್ಯಕ್ತಿಯೊಡನೆಯ ಪ್ರೇಮದ ಗೆಲುವು ಮರೆಯಾಗಿರಬಹುದು, ಹಾಗಂತ ವ್ಯಕ್ತಿ ಪ್ರೇಮದಿಂದ ದೂರಾಗುವುದು ಅಂತೇನೂ ಅಲ್ಲ. ಆದರೆ, ಬದುಕನ್ನು ಗೆದ್ದರೆ ನಿನ್ನ ನೀ ಗೆದ್ದಂತೆ, ನಿನ್ನ ನೀ ಗೆಲ್ಲುವುದು ಎಂಬುದು ಎಲ್ಲವನ್ನೂ ನೀಡುವಂತದ್ದು. ಆದ್ದರಿಂದ ವ್ಯಕ್ತಿ ಪ್ರೇಮವೇ ಬದುಕು ಎನ್ನುವುದಕ್ಕಿಂತ ಬದುಕ ಗೆಲುವಿನ ಭಾಗವಾಗಿ ವ್ಯಕ್ತಿ ಪ್ರೇಮವಿರುವುದು ಹೆಚ್ಚು ಶ್ರೇಷ್ಠ ಎನಿಸುತ್ತದೆ.  

ಬದುಕನ್ನು ಪ್ರೀತಿಸಿ ಗೆಲ್ಲುವುದು ಸುಲಭವಲ್ಲ ನಿಜ. ಆದರೆ,  ಪ್ರಾಮಾಣಿಕವಾಗಿ ಪ್ರೀತಿಸಿದರೆ ಯಾರಿಗೂ ನಿನ್ನಾಸೆಯ ಬದುಕನ್ನು ನಿನ್ನಿಂದ ದೂರಮಾಡಲು ಸಾಧ್ಯವಿಲ್ಲ. ನಿನ್ನೊಳಗನ್ನು ನೀ ಗೆಲ್ಲುವ ಆತ್ಮಧ್ಯಾನಕ್ಕೆ ವ್ಯಕ್ತಿ ಪ್ರೇಮ ಶಕ್ತಿ ಮಂತ್ರವಾಗಲಿ. ಪ್ರೇಮಿ ಅಥವಾ ಪ್ರೇಮಿಯ ನೆನಪು ಬದುಕ ಗೆಲುವಿನ ಹರಿವಿಗೆ ಸೇತುವೆ ಆಗಬೇಕೇ ಹೊರತಾಗಿ ದಿಬ್ಬವಾಗಬಾರದು.  

ಇನ್ನೆಂದೋ ತಿರುಗಿ ನೋಡಿದಾಗ ಸವೆಸಿದ ಹಾದಿಯ ತುಂಬಾ ನಿನ್ನೊಳಗನ್ನು ನೀ ಗೆಲ್ಲಲು ನೀ ಎತ್ತಿಟ್ಟ ಪರಿಶ್ರಮದ ಸಾರ್ಥಕ ಹೆಜ್ಜೆ ಗುರುತುಗಳಿರಬೇಕು. ಕಳೆದುಕೊಂಡ ಕಣ್ಣೀರಿನ ಹಸ್ತಾಕ್ಷರವಲ್ಲ.
ಕಳೆದು ಬಿಡು ನೋವುಗಳ ಖಾತೆಯಲ್ಲಿನ ಉಳಿತಾಯವನ್ನು; ನಿನ್ನೊಳಗಿನ ಗೆಲುವಿನ ಹಸಿವಿಗೆ. 

ಸಾವಿರ ಸೋಲುಗಳನ್ನು ಸೋಲಿಸಿ ಒಮ್ಮೆ ಗೆದ್ದು ಬಿಡು ಗೆದ್ದ ದಿನ ನಿನ್ನ ಪ್ರತಿ ಸೋಲು, ಪ್ರತಿ ಕಣ್ಣಿರೂ ಇತಿಹಾಸದ ಪುಟದ ದೊಡ್ಡ ದೊಡ್ಡ ಅಕ್ಷರದಲ್ಲಿ ಉಳಿಯುತ್ತವೆ. ಕಳೆದುಕೊಂಡ ಸಂಬಂಧಗಳು ಬೆನ್ನ ಹಿಂದಿನ ಮೆಟ್ಟಿಲಾಗಲಿ.  ಬದುಕಿನ ಗೆಲುವ ಪರ್ವತ ಏರಿದ ದಿನ ತಿರುಗಿ ನೋಡು ಮತ್ತೆಲ್ಲವೂ ನಿನ್ನದೇ.....   

ಗೆಲುವಿನ ಬೆಳಕಲ್ಲಿ ಬೆಳಗಿಬಿಡು ಒಮ್ಮೆ, ಬದುಕೂ ಬೆಳಗೀತು......  ಖುಷಿಯ ಕಣ್ಣಹನಿಯಲ್ಲಿ ಕಾಮನ ಬಿಲ್ಲಿನ ರಂಗು ಚಿಗುರೀತು.... 



Monday, 29 September 2014

ಎಲ್ಲ ಬರೀ ಪ್ರಶ್ನೆಗಳು.....

ಚಿತ್ರಿಸಿದಂತೆ ಚಿತ್ರಣವಾ.?
ಬೆಳಕು ಬಿದ್ದಷ್ಟೇ ಕಾಣುವುದಾ.?
ವಿವರಿಸಿದಂತೆ ವ್ಯಕ್ತಿತ್ವದ ಪರಿಚಯವಾಗುತ್ತದೆಯಾ.? 

ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತೆಗೆ ಪರಿಚಯಿಸಿದ ವ್ಯಕ್ತಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಅಲ್ಲವಾ...?
ಆ ಪರಿಣಾಮದ ಮೇಲೆಯೇ ಸಂಭಂದಗಳ ತೀವ್ರತೆ ನಿರ್ಧಾರವಾಗುವುದೇನೋ ಅಲ್ಲವಾ...? 
ಇಷ್ಟವಾದ ವ್ಯಕ್ತಿಯೊಬ್ಬ ತಪ್ಪನ್ನೇ ಮಾಡಿದರೂ ಅವನನ್ನು ದ್ವೇಷಿಸಲಾಗದೇ ಸದಾ ಕಾಲ ಮನದೊಳಗೆ ಯುದ್ದ ಮಾಡುವುದಕ್ಕೆ ಕಾರಣ - ವ್ಯಕ್ತಿ ನಮ್ಮೊಳಗೆ ಚಿತ್ರವಾದದ್ದು ತುಂಬಾ ಸುಂದರವಾಗಿ ಅನ್ನುವುದಾಗಿರಬಹುದಾ.?     

ವೈದ್ಯರು ನಮ್ಮೊಳಗೆ ಹೇಗೆ ಚಿತ್ರಿಸಲ್ಪಟ್ಟಿದ್ದಾರೆ ಎನ್ನುವುದರ ಮೇಲೆ ರೋಗವನೆದುರಿಸೋ ನಮ್ಮ ಶಕ್ತಿ ನಿರ್ಧಾರವಾಗುತ್ತದೆಯೇನೋ..?  
ನನಗೆ ನಾರಾಯಣನಂತೆ ಕಂಡವ ಇನ್ಯಾರಿಗೋ ಯಮದೂತನಂತೆ ಕಾಣಬಹುದು ಇದೇ ಕಾರಣಕ್ಕಾ ಒಂದೇ ರೋಗವಾದರೂ ಒಂದೇ ವೈದ್ಯ ಕಡಿಮೆ ಮಾಡುವಲ್ಲಿ ಅಸಮರ್ಥನಾಗುವುದು..?
  
ನನಗೆ ಆಗದ ಮನುಷ್ಯನನ್ನು ಯಾರೂ ಪ್ರೀತಿಸಬಾರದು ಎಂಬ ಕಾರಣಕ್ಕೋ ಅಥವಾ ನನ್ನ ಜೊತೆ ಒಳ್ಳೆಯವನಾಗದವ ಇನ್ಯಾರಿಗೂ ಒಳ್ಳೆಯವನಾಗಲು ಸಾಧ್ಯವೇ ಇಲ್ಲ ಎಂಬ ನಮ್ಮ ಮನದ ಪೂರ್ವಾಗ್ರಹಕ್ಕೋ ಎಲ್ಲೆಡೆ ಅವನನ್ನು ಕೆಟ್ಟವನನ್ನಾಗಿ ಬಿಂಬಿಸುತ್ತೇವಾ..?    
ಅಥವಾ ನನಗೆ ಒಳ್ಳೆಯವನಾದವ, ನನಗೆ ಆಪ್ತನಾದವ ಎಲ್ಲರಿಗೂ ಒಳ್ಳೆಯವನಾಗುತ್ತಾನೆ ಎಂದು ಖಡಾಖಂಡಿತ ನಿರ್ಧರಿಸಿಬಿಡುತ್ತೇವಾ.? 
ಎರಡೂ  ಒಂದು ರೀತಿಯಲ್ಲಿ ತಪ್ಪೇ ಅಲ್ಲವಾ.? 
ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ಇಲ್ಲೇ  ಬಾ ಎಂದು ಹೇಳಲು ಸಾಧ್ಯವಾ.?
ಅದು ಸಮಂಜಸವಾ.? 
ನನಗೆ ಸರಿ ಆದದ್ದು ಎಲ್ಲರಿಗೂ ಸರಿಯಾಗುತ್ತದೆ ಎಂದು ಊಹಿಸುವುದು ಅರ್ಧ ಸತ್ಯವಲ್ಲವಾ.?
ಅರ್ಧ ಸತ್ಯವನ್ನೇ ಬದುಕಿನ ಮಹಾ ಸತ್ಯ ಎಂಬಂತೆ ವರ್ತಿಸೊದು ನಮ್ಮ ಮನಸಿನ ಹೊಣೆಗೇಡಿತನವಲ್ಲವಾ.?
ನಮಗೆ ಕಾಣೋದು ನಮ್ಮ ಮೂಗಿನ ನೇರ ಮಾತ್ರ.. ಎದುರಿನವರ ಕಾಣುವಿಕೆ ಬೇರೆಯೇ ಇದ್ದೀತು ಮತ್ತದು ಹೆಚ್ಚಿನ ಸಲ ಬೇರೆಯೇ ಇರುತ್ತೆ ಕೂಡಾ ಅಲ್ಲವಾ..? 

ಕೇವಲ ಒಂದು ಪಾರ್ಶ್ವವನ್ನು ನೋಡಿ ಅಭಿಪ್ರಾಯವನ್ನು ಕೊಟ್ಟುಬಿಡುವುದು ಸುಲಭವೇ ಆದರೆ ಅದರ ಪರಿಣಾಮ..? 

ಒಬ್ಬ ವ್ಯಕ್ತಿಯ ಬಳಿ ಮಾತನಾಡದೆ ಸ್ವಭಾವಗಳ ಪರಿಚಯ ಮಾಡಿಕೊಳ್ಳದೇ ಮನುಷ್ಯ ಒಳ್ಳೆಯವ ಅಥವಾ ಕೆಟ್ಟವನು ಎಂದು ನಿರ್ಧರಿಸುವುದರಿಂದ ಆಗುವ ಉಪಯೋಗವೆಷ್ಟು ಹಾಗೆಯೇ ಅನಾಹುತಗಳೆಷ್ಟು..? 
“ಕುಂತಿ ಕೌರವರನ್ನು ಚಿತ್ರಿಸಿದಂತೆ ಪಾಂಡವರು  ಬೆಳೆದರು, ಗಾಂಧಾರಿ ಪಾಂಡವರನ್ನು ಹೇಗೆ ಚಿತ್ರಿಸಿದಳೋ ಹಾಗೆಯೇ  ಕೌರವರು ಬೆಳೆದದ್ದು...  ಅದಕ್ಕೇ ಅಲ್ಲವಾ ಕುರುಕ್ಷೇತ್ರದಲ್ಲಿ  ಯುದ್ಧವಾದದ್ದು..?” 

ವ್ಯಕ್ತಿ  ನನಗೆ ಏನು ಮತ್ತು ವ್ಯಕ್ತಿ ನಿಜವಾಗಿ ಏನು ಎನ್ನುವುದರ ಮಧ್ಯೆ ಇರುವ ವ್ಯತ್ಯಾಸವನ್ನು ಯೋಚಿಸಿಕೊಳ್ಳದೆ ದ್ವೇಷವನ್ನು ಮಾಡುವುದರಿಂದ ದ್ವೇಷ ಮನೋಭಾವಗಳು ತಲೆಮಾರುಗಳನ್ನು ದಾಟಿದರೂ ಜೀವಂತವಾಗಿರುತ್ತವೆ... ಅಂತೆಯೇ ಪ್ರೀತಿ ಕೂಡ... ಹಾಗನ್ನಿಸಲ್ಲವಾ..?

ಪ್ರೀತಿಗೆ ಕಾರಣ ಬೇಕಿಲ್ಲ ನಿಜ; ಕೆಲವೊಂದು ಕಾರಣಗಳನ್ನು ಬಿಟ್ಟು...
ಪ್ರೀತಿಯಿಂದ ಅನಾಹುತಗಳು ಕಡಿಮೆ...(?)
ಆದರೆ ದ್ವೇಷ.....?
ನಮ್ಮ ಕಲ್ಪನೆಯಲ್ಲೇ ಚಿತ್ರಿಸಿಕೊಂಡಿದ್ದಾದರೆ,  ಕಾಲ ಕ್ರಮೇಣ ಅಳಿಸಿ ಹಾಕಬಹುದೇನೋ...
ಅದೇ ತೀರ ಆತ್ಮೀಯರು ಮೂಡಿಸಿದ ಚಿತ್ರ ಅಳಿಸುವುದು ಸುಲಭವಲ್ಲ ಅಲ್ಲಿ ವ್ಯಕ್ತಿಯ ಪರಿಣಾಮ ತೀವ್ರತರದಲ್ಲಿರುತ್ತದೆ ಅಂತನ್ನಿಸಲ್ಲವಾ...? 

ಅದಕ್ಕೆಂದೇ  ಯಾವುದೇ ವ್ಯಕ್ತಿಯನ್ನು ಇನ್ನಾರಿಗೋ ಪರಿಚಯಿಸುವಾಗ ನನಗೆ ಏನು ಹಾಗೂ ನನ್ನೊಡನೆ ಹೇಗೆ ಎಂಬ ವೈಯಕ್ತಿಕ ಭಾವದಲ್ಲಿ ಆತನನ್ನು ಚಿತ್ರಿಸಿ ಕೊಡುವುದಕ್ಕಿಂತ  ಅಥವಾ ಕೇವಲ ನಮ್ಮ ಅಭಿಪ್ರಾಯವನ್ನು ಅಷ್ಟು ಪರಿಣಾಮಕಾರಿಯಾಗಿ ಹೇಳುವ ಬದಲು ಸಾಮಾಜಿಕವಾಗಿ ಮತ್ತು ನನ್ನಿಂದಾಚೆ ವ್ಯಕ್ತಿ ಹೇಗೆ ಎಂಬುದನ್ನೂ ಪ್ರಾಮಾಣಿಕವಾಗಿ ವಿವರಿಸಿ ಹೇಳಿದರೆ ಇನ್ಯಾರದ್ದೋ ಮನದಲ್ಲಿ ವ್ಯಕ್ತಿಯೊಬ್ಬನ ಬಗ್ಗೆ ಮೂಡುವ ಅಭಿಪ್ರಾಯದಲ್ಲಿ ನಮ್ಮ ಪಾತ್ರ ಕಡಿಮೆ ಇದ್ದೀತು ಅಲ್ಲವಾ...? 

ಯಾಕೋ ಹೀಗೆಲ್ಲ ಅನ್ನಿಸಿತು... ನನ್ನ ಮಾತುಗಳು ಕೂಡ ತಪ್ಪು ಅಥವಾ ಅರ್ಧ ಸತ್ಯವೇ ಇದ್ದೀತು ಅಲ್ಲವಾ....???

ಈಗ ನಿಮ್ಮ ಮಾತನ್ನು ಹೇಳಿ...

Monday, 8 September 2014

ಅಂತಃ ಶಕ್ತಿಯ ಬೆಳಗು.......


ಯಾರೋ ನಿನ್ನನ್ನು ನೋಯಿಸಿದರೆಂದು ನೀನು ನಿನ್ನ ಬದುಕನ್ನು ನೋಯಿಸುವುದು ಮೂರ್ಖತನವಲ್ಲವಾ? ನಿಜಕ್ಕೂ ಬದುಕನ್ನು ನೋಯಿಸುವಂತಹ ಕಾರಣಗಳಿವೆಯಾ? ಘನ ಕಾರಣೆಗಳೇನೂ ಇಲ್ಲ ಎನ್ನುವುದಾದರೆ ಬದುಕನ್ನು ನೋಯಿಸುವುದು ತಪ್ಪಲ್ಲವಾ?

ಕಣ್ಣಿರಿಗೂ ಒಂದು ಬೆಲೆಯಿದೆ, ಅದು ಬರಲೂ ಒಂದು ಕಾರಣವಿದೆ. ಹಾಗೆ ಯಾರಿಗೆಂದರೆ ಅವರಿಗೆ, ಎಲ್ಲೆಂದರಲ್ಲಿ ಅಳುವುದು ನಿನ್ನ ಅಸಹಾಯಕತೆ ಅಲ್ಲವಾ? ರಾತ್ರಿ ಕಳೆದ ಮೇಲೂ ನೀ ಮಲಗಿರುವೆ ಎಂದಾದರೆ ನಿನಗೂ ಸೋಲಿನ ಭಯವಾ? ನೋವು ಕೊಟ್ಟವರ ಎದುರು ಸೆಟೆದು ನಿಲ್ಲಬೇಕು ತಾನೇ? ನೀ ಅತ್ತರೆ ನೋವು ನಿನ್ನ ಕಣ್ಣಿಗೆ, ನಿನ್ನ ನಾಳೆಗಳಿಗೆ ತಾನೇ?

ಬದುಕು ನೋವು ನಲಿವುಗಳ ಸಾಗರವೇ. ಎಲ್ಲೋ ಮಳೆಯಾದಾಗ ಮಣ್ಣು ನೀರು ಬರುವುದು ನಿಜವೇ! ಆದರೆ, ಸಾಗರವೆಂದೂ ತನ್ನ ತನವನ್ನು ಕಳೆದುಕೊಳ್ಳುವುದಿಲ್ಲ. ನಿರಂತರ ಮಂಥನದಿಂದ ತನ್ನನ್ನು ತಾನು ಸದಾ ಉಳಿಸಿಕೊಂಡಿದೆ. ಪ್ರೀತಿ ಕೊಡು ಎಂದು ಯಾರ ಬಳಿಯೂ ಹೋಗುವುದಿಲ್ಲ ಆದರೆ, ತನ್ನೊಳಗಿನ ಪ್ರೀತಿಯನ್ನೆಂದು ಕಳೆದುಕೊಂಡಿಲ್ಲ.

ತುಂಬಾ ದಿನ ಚಲಿಸದೆ ಇರಬಾರದು. ನಿಂತ ನೀರಾಗಿ ಕೊಳೆತದ್ದು ಸಾಕು. ನೀರು ಹರಿದರೆನೇ ಚಂದ. ಗಿರಿಯ ನೆತ್ತಿಯಿಂದ ಕಣಿವೆಗೆ ಜಿಗಿದೋ ಅಥವಾ ಏರಲಾಗದ ಗಿರಿಯ ಮಗ್ಗಲನ್ನು ಬಳಸಿಯೋ. ಒಟ್ಟಿನಲ್ಲಿ ಚಲನೆ ನಿರಂತರವಾಗಬೇಕು. ನಿಂತರೆ ನಿಂತ ಜಾಗದಲ್ಲಷ್ಟೇ ಹಸಿರು – ಹರಿದರೆ ಹರಿವಿನ ವಿಸ್ತಾರಕೆಲ್ಲ ಹಸಿರು. ಬಾವಿ ಒಂದೂರಿನ ದಾಹ ತೀರಿದರೆ, ನದಿ ಹತ್ತೂರಿನ ಉಸಿರು. ಹಾಗೆಯೇ ಬದುಕೂ. ಯಾರಿಲ್ಲದಿದ್ದರೂ ನಡೆಯಬಲ್ಲವನಾಗು ನೀ ನಿನ್ನ ಜೊತೆ. ನಿನಗಾಗಿಯೇ ಇರುವ ನಿನ್ನೆಲ್ಲ ಖುಷಿಗಳ ಜೊತೆಗೆ. ನೀನೇ ಕಟ್ಟಿಕೊಂಡ ನಿನ್ನ ನಾಳೆಗಳ ಕನಸ ಬುತ್ತಿಯ ಜೊತೆಗೆ. ನಡೆಯುತ್ತಲಿರು – ದಾರಿ ಬದಿಯಲೆಲ್ಲ ನಿನ್ನ ನಗೆಯದೇ ಮಾತು. 

ಸದಾ ಎಡವಿ ಬಿದ್ದು ರಕ್ತ ಬಂದ ಕಾಲುಗಳೂ ಗಟ್ಟಿಯಾಗಿವೆ...
ಉಪ್ಪು ನೀರಿನಿಂದ ತೊಳೆದ ಕಂಗಳು ಶುದ್ಧವಾಗಿವೆ. 
ಸಾಕಿನ್ನು....... 
ಮೋಡ ಮುಸುಕಿದ ಬಾನು, ಪರದೆ ಕಟ್ಟಿದ ರಂಗಸ್ಥಳ...
ಮಳೆ ಸುರಿದಾಗಿದೆ.. 
ಪರದೆ ಸರಿದಾಗಿದೆ...
ನಾಟಕವೋ, ಬದುಕಿನಾಟವೋ ಇನ್ನು ಪ್ರಾರಂಭವಾಗಬೇಕು...

ಕನ್ನಡಿಯ ಎದುರು ಕಾಣಬೇಕಾದದ್ದು ನಿನ್ನದೇ ತೇಜಸ್ಸು. ನಿನ್ನ ಅಳುವಲ್ಲ. ನಮ್ಮೊಳಗನ್ನು ಬೆಳೆಸಲಾರದ, ಬೆಳಗಲಾರದ ಯಾವುದಕ್ಕೂ ತುಂಬಾ ದಿನ ಅಂಟಿಕೊಂಡಿರಬಾರದು. ನೋವುಗಳಿಂದ, ಸೋಲುಗಳಿಂದ ಒಂದಷ್ಟು ಪಾಠ ಕಲಿಯದ ಹೊರತು ಬದುಕು ಬದಲಾಗುವುದಿಲ್ಲ. ಸೋಲಿನ ಸಾರ್ಥಕತೆ ಇರುವುದೇ ನಿನ್ನೊಳಗಣ ಬೆಳವಣಿಗೆಯಲ್ಲಿ, ನಿನ್ನ ಹೊಸ ಗೆಲುವಿನಲ್ಲಿ. ಕಣಿವೆಯ ಆಳಕ್ಕೆ ಹೆದರುವಾತ ಗಿರಿಯ ನೆತ್ತಿಯ ಮೇಲೆ ನಗಲಾರ. 

ನೀನು ಕಲಿಯದ ಹೊರತು ಬದುಕು ಏನ್ನನ್ನು ಕಲಿಸದು. ಅನುಭವದಿಂದ ಕಲಿಯಬೇಕೇ ಹೊರತು ಕೊರಗಬಾರದು. 

ಇನ್ನು ಮರುಗಿದ್ದು ಸಾಕು - 
ಮತ್ತೊಂದು ಬೆಳಗಾಗಿದೆ. 
ಕವಿದ ಕಗ್ಗತ್ತಲೆಯ ಮಬ್ಬು ಹರಿದು ಭರವಸೆಯ ಬೆಳಕೊಂದು ಮೂಡಿದೆ. 
ಎಚ್ಚರವಾಗು ಅಂತಃ ಶಕ್ತಿಯೇ ನಿನ್ನದೀ ಬದುಕು.
ಆಳು - ಸೋಲುಗಳು ಬರದಂತೆ, ಬಂದ ಸೋಲುಗಳು ಬದುಕ ಆಳದಂತೆ...


ಚಿತ್ರ : ನನ್ನ ಕಲ್ಪನೆಯಿಂದ ನಾನೇ ಬಿಡಿಸಿದ್ದು.  



Wednesday, 6 August 2014

ಏನೂ ಆಗದೇ ಎಲ್ಲವೂ ಆಗಬಲ್ಲ ಗೆಳತನಕ್ಕೊಂದು.............

  
ಅದ್ಯಾವತ್ತೋ ಸ್ನೇಹಿತರ ದಿನ... ಹಬ್ಬಗಳ ಸಂತೆಯಲ್ಲಿ ಇದಕೊಂದಷ್ಟು ಜಾಗ... 
ಯಾಕೋ ನಕ್ಕುಬಿಟ್ಟಿದ್ದೆವು ನಾವು...

ಆ ನಗುವಲ್ಲೂ ಅರ್ಥವಿತ್ತು, ನಮ್ಮ ಸ್ನೇಹ ದಿನಕ್ಕೆ, ಆಚರಣೆಗೆ ಸೀಮಿತವಾಗಲು ಸಾಧ್ಯವಿಲ್ಲ...

ನಾವಿಬ್ಬರೂ ನಕ್ಕಾಗಲೆಲ್ಲ ಹಬ್ಬವೇ ಒಬ್ಬರನ್ನೊಬ್ಬರು ನೆನಪಿಸಿಕೊಂಡಾಗಲೆಲ್ಲ ಉತ್ಸವವೇ... ಅಂದರೆ ಕನಿಷ್ಠ ದಿನಕ್ಕೊಂದು ಹತ್ತು ಸಲವಾದರೂ ನನ್ನೊಳಗೆ ನಿನ್ನ ನೆನಪ ಮೆರವಣಿಗೆ, ನಿನ್ನ ಸ್ನೇಹದ ಜಾತ್ರೆ...

ನೀನೋ ಮಹಾನ್ ವಾಸ್ತವವಾದಿ, ನೇರವಾದಿ, ನಿನ್ನ ಅತೀ ನಿಷ್ಟುರವಾದಿ ಮಾತುಗಳು ತುಂಬಾನೇ ನೋವನ್ನು ತಂದದ್ದು ಕೆಲವೊಮ್ಮೆ ನಿಜವೇ, ಆದರೂ ಒಂದು ಸಲ ಜಗಳವಾಡಿ ನೀನು ಸಮಾಧಾನ ಮಾಡಿದ ಮೇಲೆ ಇಬ್ಬರಲ್ಲೂ ಮತ್ತದೇ ಸಮಾಧಾನ... 

ನಾವಿಬ್ಬರು ಜೊತೆ ಇದ್ದದ್ದು ಬೆರಳೆಣಿಕೆಯಷ್ಟು ದಿನ ಮಾತ್ರ... ಅದು ಬದುಕಿನ ಅತೀ ದೊಡ್ಡ ಖುಷಿಯ ಕ್ಷಣಗಳು... 
ನಾನು ಆ ಕ್ಷಣಗಳನ್ನು ಕಳೆದದ್ದೂ ನನ್ನ ಅದೇ ಹಠ, ಸಿಟ್ಟು, ಜಗಳಗಳಿಂದಲೇ ನೀ ಮಾತ್ರ ಎಂದೂ ಜಗಳ ಆಡಿದವನಲ್ಲ ಬಿಟ್ಟು ದೂರ ಹೋಗು ಎಂದಾಗಲೂ ನನ್ನ ಗೆಳತಿ ನಂಗೆ ಬೇಕು ಎಂದು ರಾಜಿ ಆಗಿಬಿಡುತ್ತಿದ್ದ ಜೀವದ ಗೆಳೆಯ ನೀನು...

ಜೊತೆ ಇರುವಾಗ ನೀನೊಂದು ದಿನ ಅದ್ಯಾಕೋ ಹೇಳಿದ್ದೆ... ಬಿಡು ಸ್ನೇಹಿತರೆಂದರೆ ಜೊತೆ ಇರುವುದಷ್ಟೇ ಅಲ್ಲಾ ಎಲ್ಲೇ ಎಷ್ಟೇ ದೂರವಿದ್ದರೂ ನನ್ನದೊಂದು ಪುಟ್ಟ ನೆನಪಾಗಿ ನೀ ನಕ್ಕರೆ ಸಾಕು ಈ ಸ್ನೇಹಿ ಮನ ಸುಖಿ ಎಂದು...

ಜೊತೆ ಇರುವಾಗ ಇಂಥ ಮಾತುಗಳು ಚಂದವೇ ಆದರೆ ನಿಜಕ್ಕೂ ದೂರವಾದಾಗಲೇ ಆ ಮಾತಿನ ಆಚರಣೆ ಎಷ್ಟು ಕಷ್ಟ ಎಂದು ಅರಿವಾಗುವುದು... ಅದು ಎಷ್ಟೇ ಪೂರ್ವ ನಿರ್ಧರಿತವಾದರೂ ಅಳುವಾಗ ನಿನ್ನ ನೆನಪಾಗದ ದಿನವಿಲ್ಲ - ನಿನ್ನ ಮಡಿಲ ನೆನಪಾದಾಗ ಅಳದ ದಿನವಿಲ್ಲ...

ನಾನೂ ಎಷ್ಟು ದಿನ ಅಂತ ಅತ್ತೇನು? ರಾತ್ರಿ ಕಳೆದು ಬೆಳಕು ಹರಿವಂತೆ ನಿನ್ನ ಕಳೆದುಕೊಂಡ ನೆನಪ ನೋವಿನಿಂದ ಹೊರಬಂದು ದೇವರೆದುರು ಹೋಗಿ ಸ್ಪರ್ಧೆಗೆ ನಿಂತಿದ್ದೆ... ನನ್ನ ಸ್ನೇಹ ನಿಜವಾದರೆ, ನಾವಿಬ್ಬರೂ ಸ್ನೇಹಕ್ಕೆ ಯೋಗ್ಯರಾದರೆ, ಕೊಟ್ಟುಬಿಡು ನನ್ನ ಸ್ನೇಹವನ್ನು ಇಲ್ಲ ನಾನೇ ಸ್ನೇಹಕ್ಕೆ ಅಸಮರ್ಥ ಎಂದು ತಿಳಿದು ಇನ್ಯಾವತ್ತು ಏನನ್ನೂ  ಕೇಳಲಾರೆ ಎಂದು...

ಇದಾಗಿ  ಸುಮಾರು ಎರಡು ವರುಷಗಳ ನಂತರ ಅನಿರೀಕ್ಷಿತವಾಗಿ, ನಂಬಲು ಅಸಾಧ್ಯವಾದ ರೀತಿಯಲ್ಲಿ ನೀ ನನಗೆ ಮತ್ತೆ ಸಿಕ್ಕಿದ್ದೆ... ಆಗಲೇ “ಪ್ರೀತಿಸುವುದಾದರೆ ಪ್ರೀತಿಸಿಬಿಡು ದೇವರಿಗೂ ದೂರಾಗಿಸಲು ಕಾರಣ ಸಿಗದಂತೆ” ಎಂಬ ನನ್ನದೇ ಮನದ ಮಾತಿನೆಡೆಗೆ ನಂಗೆ ಮತ್ತೆ ನಂಬಿಕೆ ಮೂಡಿದ್ದು... ನಿಜಕ್ಕೂ ಆ ಕ್ಷಣ ನಮ್ಮ ಸ್ನೇಹದೆದುರು ದೇವರೂ ಸೋತಿದ್ದ... ಅಂದಿನ ಹತ್ತೇ ನಿಮಿಷದ ನಮ್ಮ ಭೇಟಿಯಲ್ಲಿ ಹಂಚಿಕೊಳ್ಳಲು ಇಬ್ಬರಲ್ಲೂ ಮಾತಿರಲಿಲ್ಲ ಖುಷಿಯನ್ನು ಬಿಟ್ಟು... ಅವತ್ತು ಹಿಂತಿರುಗಿ ಹೋಗುವಾಗ ಇಬ್ಬರ ಕಣ್ಣಲ್ಲೂ ಸಣ್ಣ ನೀರಿತ್ತು... ಇನ್ನೀಗ ಈ ಸ್ನೇಹ ಚಿರಂತನ - ನಿನ್ನ ಸ್ಥಾನ ನನ್ನ ಮನದರಮನೆಯಲ್ಲಿ ಶಾಶ್ವತ ಎಂಬ ಸಂದೇಶವಿತ್ತು....

ಈಗಲೂ ನೀನು ನನ್ನ ಜೊತೆಗಿಲ್ಲ, ಅತ್ತಾಗೆಲ್ಲ ನಿನ್ನ ಮಡಿಲು ಸಿಗುವುದೂ ಇಲ್ಲ...  
ಆದರೆ ನಾನೀಗ ಅಳುವುದೇ ಇಲ್ಲ... ಕಾರಣ ಅತ್ತಾಗ ನೀ ಇರದಿದ್ದರೂ ನಿನ್ನದೊಂದು ಕೈ ನನ್ನ ಕಣ್ಣಿರು ಒರೆಸಲಿದೆ ಎಂಬ ಭರವಸೆಯ ಭಾವ ನನ್ನ ಕಣ್ಣಿರನ್ನೇ ಒಣಗಿಸಿಬಿಡುತ್ತದೆ...

ನೀನು ನನಗೆ ಅತೀ ಆತ್ಮಿಯ ಯಾಕೆ ಎನ್ನಲು ಕಾರಣವಿಲ್ಲ, ಕಾರಣಗಳ ಹುಡುಕಿ ಹೋಗುವ ಮನಸ್ಸೂ ಇಲ್ಲ, ಅವಶ್ಯಕತೆಯೂ ಇಲ್ಲ... ನಿನ್ನನ್ನು ಕಳೆದುಕೊಳ್ಳುವ ಭಯವಿಲ್ಲ, ನಮ್ಮ ಸ್ನೇಹದಲ್ಲಿ ಕಳ್ಳಾಟವಿಲ್ಲ, ಒಡನಾಟದ ಹುಚ್ಚು ಬಯಕೆಗಳಿಲ್ಲ, ಹೊಟ್ಟೆಕಿಚ್ಚಿಲ್ಲ, ಪ್ರಪಂಚಕ್ಕೆ ಕೂಗಿ ಹೇಳಿ ಸಮರ್ಥಿಸಿಕೊಳ್ಳುವ ಅಗತ್ಯವೇನೂ ಇಲ್ಲ... 
ಮಾತಿಲ್ಲದಿದ್ದರೆ ಸತ್ತು ಹೋದೀತು ಎಂಬ ಭಾವಕ್ಕಿಲ್ಲಿ ಅವಕಾಶವೇ ಇಲ್ಲ... 

ಗೊತ್ತು ನನಗೆ, ನಿನ್ನ ನೇರ ಮಾತುಗಳಲ್ಲೊಂದಷ್ಟು ಪ್ರೀತಿ ಇದೆ, ಅತೀ ವಾಸ್ತವಿಕತೆಯಲ್ಲಿ ನನಗೊಂದಷ್ಟು ಬದುಕನ್ನು ಕಲಿಸುವ ತವಕವಿದೆ, ನಿಷ್ಟುರವಾಗಿ ತಪ್ಪುನ್ನು ಹೇಳಿದರೂ ಅದನ್ನು ತಿದ್ದುವ ಮನಸ್ಸಿದೆ, ಕ್ಷಮಿಸುವಷ್ಟು ಮಮತೆಯಿದೆ... 

ಮರಳಿನ ಮೂರ್ತಿಯಷ್ಟೇ ಸ್ನೇಹ ಅಂದುಕೊಂಡವಳಿಗೆ ಮರಳು ಭೂಮಿಯನ್ನೇ ತೋರಿಸಿ ಇದು ಸ್ನೇಹ ಎಂದವನು ನೀನು... 

ಜೊತೆ ಇಲ್ಲದಿದ್ದಾಗಲೂ ಒಂಟಿಯಾಗಿಸದವ ಮತ್ತು ಮಾತಿಲ್ಲದಾಗಲೂ ನನ್ನನ್ನು ಮೌನಿಯಾಗಿಸದವ ನೀನು.. 

ನನ್ನೆಲ್ಲ ನೋವ ತಗ್ಗಿಸಿ, ನಲಿವ ಹಿಗ್ಗಿಸಿ, ಏನೂ ಆಗದೆಯೇ ಎಲ್ಲವೂ ಆಗಬಲ್ಲ ನಿನಗೆ ಏನ ಹೇಳಲಿ.... ಒಂದಷ್ಟು ಪ್ರೀತಿಯನ್ನು ಬಿಟ್ಟು ಮತ್ತೇನ ನೀಡಲಿ?

ನಂದಾದೀಪದ ಬೆಳಕಲ್ಲಿ 
ನಗಿಸುವ ಸ್ನೇಹದ ನೆನಪಲ್ಲಿ 
ಗೆಳೆತನದ ಸಾರ್ಥಕತೆ ನೀಡಿದ ಎಲ್ಲರ ಬದುಕೂ ಬಂಗಾರವಾಗಲಿ ಎಂಬ ಸದಾಶಯದೊಂದಿಗೆ......... 


ಚಿತ್ರ : ನನ್ನ ಕಲ್ಪನೆಯಿಂದ ನಾನೇ ಬಿಡಿಸಿದ್ದು.  

Thursday, 24 July 2014

ಏನೆಲ್ಲಾ ಆದಳಾಕೆ ಅದಕ್ಕೇ ಹೆಣ್ಣಾಕೆ.....



ಸೃಷ್ಟಿಯೇ  ಯಾಕೆ ಮೋಸ ಮಾಡಿತೋ  ಕಾಣೆ... ಗಂಡಿಗೆ ಸಂಪೂರ್ಣ ದೈಹಿಕ ಶಕ್ತಿಯನ್ನು ಕೊಟ್ಟು ಹೆಣ್ಣಿಗೆ ಅದಕ್ಕೂ, ನಾಲ್ಕು ಪಟ್ಟು ಹೆಚ್ಚು ತಾಳ್ಮೆ, ಕ್ಷಮೆ ಮತ್ತು ಮಾನಸಿಕ ಸ್ತೈರ್ಯವನ್ನು ಕೊಟ್ಟತೋ.. ಅದ್ಯಾಕೋ ಕಾಣೆ ಅವಳಿಗೂ, ಮುದವಾಗುವಂತ ವಿಶಿಷ್ಟವಾದ  ದೈಹಿಕ ಮತ್ತು ಅಂತರಿಕ ಚೆಲುವನ್ನು ಕೊಟ್ಟದ್ದೂ  ಪ್ರಕೃತಿಯೇ...  

ಸಣ್ಣ ಕಂದ ಆಗತಾನೇ ಕಣ್ಬಿಟ್ಟಿರುತ್ತದೆ.  ಚಂದ ಕಾಣುವ ಪ್ರಪಂಚವನ್ನು ನೋಡ ಹೊರಟಿರುತ್ತದೆ.  ಅದ್ಯಾರೋ ಮುತ್ತು ಕೊಡುತ್ತಾರೆ ಅಸಹ್ಯವಾಗುತ್ತದೆ ಕೇಳಿದರೆ ಅಮ್ಮ,  ನೀನು ಪಾಪು ಅಲ್ವಾ ಅದಕ್ಕೆ ಅನ್ನುತ್ತಾಳೆ.  ಒಳಗಿನ ಮಗಳು ಜಾಗ್ರತಳಾಗುತ್ತಾಳೆ  ಕ್ಷಮಿಸಿಬಿಡುತ್ತಾಳೆ.  ಕಾರಣ ತನ್ನ ಪ್ರಯತ್ನವಿಲ್ಲದೆಯೇ ತಾನೇ ತಾನಗಿ ಅರಳುತ್ತಿರುವ ಹೂವಂತ ಚಂದದ ಮಗುವಾಕೆ.. 

 ತನ್ನದೇ ರಕ್ತ ಸಂಭಂದಿಯೊಬ್ಬ ಆಗತಾನೇ ಬದಲಾವಣೆಯಾದ ದೇಹವನೆಲ್ಲೋ ಮುಟ್ಟುತ್ತಾನೆ, ತಡಕಾಡುತ್ತಾನೆ.  ಮತ್ತದೇ ಅಸಹ್ಯ ಭಾವ ಆದರೆ ಏನು ಮಾಡಿಯಾಳು  ಕ್ಷಮಿಸಿಬಿಡುತ್ತಾಳೆ ಕಾರಣ ತಂಗಿಯಾಕೆ ... 

ತನ್ನದೇ ಲೋಕದಲ್ಲಿ ಒಳಗೊಳಗೆ ನಗುತ್ತ ಬೆಳಿಗ್ಗೆ ಖುಷಿಯಿಂದ  ಕಾಲೇಜಿಗೆ ಹೋಗುತ್ತಿರುತ್ತಾಳೆ, ದಾರಿಹೋಕನೊಬ್ಬ ಸುಮ್ಮನೆ ದಾಟಿ ಹೋಗುವಾಗ ಅದೆಲ್ಲೋ ಮುಟ್ಟಿ  ಹೋಗುತ್ತಾನೆ.  ಏನು ಮಾಡಲು ಸಾಧ್ಯ ಉಹೂ,  ಕ್ಷಮಿಸಿಬಿಡುತ್ತಾಳೆ.  ಕಾರಣ ಅಸಹಾಯಕ ಹುಡುಗಿಯಾಕೆ.... 

ಕಾಲ ಕಳೆಯುತ್ತಲೇ ಇರುತ್ತದೆ.  ಅದೊಂದು ದಿನ ರಾತ್ರಿಯ ನಿದ್ದೆಯಲ್ಲಿ ಅದ್ಯಾರೋ ತಬ್ಬಿದಂತ ಕೆಟ್ಟ ಕನಸು. ಮರುದಿನ ಯೋಚಿಸುತ್ತಾಳೆ,  ಹಾಗಾಗಲಿಕ್ಕಿಲ್ಲ ಅವನು ಅಪ್ಪನ ವಯಸ್ಸಿನವನು ಹುಚ್ಚು ಕನಸು ಎಂದು ನಗುತ್ತಾಳೆ. ಅದೇ ಹುಚ್ಚು ಕನಸು ಎರಡೇ ದಿನಕ್ಕೆ ನಿಜವಾದಾಗಲೂ ಆಕೆ ಕಿರುಚಲಾರಳು.  ಆ ಕ್ಷಣವೂ ಅದು ಕನಸೋ ನನಸೋ ತಿಳಿಯುವುದಿಲ್ಲ.  ತಿಳಿದ ಮೇಲೂ  ಕ್ಷಮಿಸಿಬಿಡುತ್ತಾಳೆ,  ಕಾರಣ ಮಗಳಾಕೆ ... 

ಅವಳ ಪ್ರೀತಿಯ ಗುರುಗಳು ಎಷ್ಟೋ ವರುಷಗಳಿಂದ ಕಲಿಯಲಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಳಿಸಿಕೊಟ್ಟವನಾತ ಅದೊಂದು ದಿನ ಅಸಭ್ಯವಾಗಿ ವರ್ತಿಸ ಬಯಸುತ್ತಾನೆ.  ಗೊತ್ತು, ಅವನದು ತಪ್ಪು ಎಂದು.  ಆದರೆ ಆಕೆ ಏನು ಮಾಡಲಾರಳು ಅವನನ್ನೂ ಕ್ಷಮಿಸಿಬಿಡುತ್ತಾಳೆ, ಕಾರಣ ವಿದ್ಯೆಯ ಋಣದಲ್ಲಿರುವ ವಿದ್ಯಾರ್ಥಿನಿ ಆಕೆ... 

ಅವನು ಒಳ್ಳೆಯ ಗೆಳೆಯ, ಕಷ್ಟಕ್ಕೆ ಸ್ಪಂದಿಸುವವ, ನಂಬಿಕೆ ಬೆಳೆಸಿಕೊಂಡವ ಅದ್ಯಾವುದೋ ಕ್ಷಣಕ್ಕೆ ಗೆಳತಿ ಎಂಬುದನ್ನೂ ಮರೆತು ಬರಿಯ ಹೆಣ್ಣಿನ ದೇಹವಾಗಿ ನೋಡುತ್ತಾನೆ- ಹೀರ ಬಯಸುತ್ತಾನೆ.  ಇಲ್ಲ ಅವಳು ಶಿಕ್ಷಿಸುವುದಿಲ್ಲ ಕ್ಷಮಿಸಿಬಿಡುತ್ತಾಳೆ, ಕಾರಣ ಗೆಳತಿ ಆಕೆ.... 

ಎಂತಹದೇ ಅಸಾಧ್ಯ ನೋವಾದಾಗಲೂ  ಮೌನದಿಂದ ಎಲ್ಲಾ ನೋವನ್ನು ನುಂಗುತ್ತಾಳೆ, ಎಲ್ಲರನ್ನೂ ಕ್ಷಮಿಸಿಬಿಡುತ್ತಾಳೆ.  ಕಾರಣ ನೋವ ನುಂಗುವಲ್ಲಿನ ಕಾಠಿಣ್ಯವನ್ನು, ನೋವ ವಿರೋಧಿಸುವಲ್ಲಿ ತೋರಲಾರಳಾದ ಮಮತೆಯ, ಮೃದು ಮನಸ್ಸಿನ, ಶ್ರೇಷ್ಠ ತಾಯಿ ಆಕೆ. 


ಪ್ರತಿ ನೋವಿನ ಹಿಂದೆ ಪ್ರತಿ ಹೆಣ್ಣಿನಲ್ಲೊಬ್ಬ ತಾಯಿ, ತಂಗಿ, ಗೆಳತಿ, ವಿದ್ಯಾರ್ಥಿನಿ, ಮಗಳು ಎಲ್ಲರೂ  ಜಾಗ್ರತರಾಗುತ್ತಾರೆ. 

ಅದಕ್ಕೇ,    

ಎಷ್ಟು ಸಲವಾದರೂ ಆಕೆ ಕ್ಷಮಿಸುತ್ತಾಳೆ ಕಾರಣ ಕ್ಷಮೆಯಾಧರಿತ್ರಿ ಆಕೆ... 

ನಂಬಿಕೆಯೇ ಸತ್ತು ಹೋಗುವ ಪರಿಸ್ಥಿತಿಯಲ್ಲೂ ಮತ್ತೆ ನಂಬುತ್ತಾಳೆ ಕಾರಣ ನಂಬಿಕೆಯನ್ನೇ ಉಸಿರಾಗಿಸಿಕೊಂಡು ಹುಟ್ಟಿದವಳಾಕೆ ... 

ಎಷ್ಟೇ ಹರಿತವಾದ ಚಾಣದಿಂದ ಕೆತ್ತಿದರೂ  ಕಣ್ಣಿಗೆ ಸಿಡಿಯಲಾರಳಾಕೆ-  ಅದಕ್ಕೆ ಚಂದದ  ಪ್ರತಿಮೆ ಆಕೆ ಮತ್ತು ಚಂದಕ್ಕೇ ಉಪಮೆ ಆಕೆ ...  
ಎಲ್ಲವನ್ನೂ ಕ್ಷಮಿಸುವವಳಾಕೆ... ಮತ್ತೆ ಮತ್ತೆ ನಂಬುವವಳಾಕೆ...ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವಳಾಕೆ...   

ಕಾರಣ, ಗಂಡಿಗಿಂತ ಅದಮ್ಯ ಮನೋಸ್ತೈರ್ಯವಿರುವ, ತಾಳ್ಮೆಯ ಜೀವಂತಿಕೆಯಾದ  ಹೆಣ್ಣಾಕೆ......  





ಚಿತ್ರ : ನನ್ನ ಕಲ್ಪನೆಯಿಂದ  ನಾನೇ ಬಿಡಿಸಿದ್ದು.   

Friday, 18 July 2014

ಧರ್ಮ ಜ್ಯೋತಿ ಬೆಳಗಿದವನ ಎದುರು ಕುಳಿತು...





ಶಿವನೇ  ಮಗುವಾಗಿ
ಬಾಲ ಸೂರ್ಯನನ್ನೇ ಕಣ್ಣಾಗಿಸಿ
ದಾರಿಯನ್ನು ಹುಡುಕುತ್ತ ಭಾರತಾಂಬೆಯ ಮಡಿಲಿಗೆ ಬಂದನಂತೆ...

ಭಾರತಿಯೇ ತಾಯಿಯಾಗಿ
ದೇಶಪ್ರೇಮವನ್ನೇ ಜೀವವಾಗಿಸಿ
ಧರ್ಮ ಜ್ಯೋತಿಯ ಪ್ರಭೆಯಾಗಿ ಬೆಳಗು ಎಂದಳಂತೆ..

ನರೇಂದ್ರ ಬೆಳೆದು ಸಾವಿರಾರು ಮೈಲಿ ದೂರ ಸಾಗಿ
ಧರ್ಮದ ವಾಹಕ ಶಕ್ತಿಯಾಗಿ - ವಿವೇಕದ ಆನಂದವಾಗಿ
ಜಗತ್ತಿಗೇ ಧರ್ಮವನ್ನು ಬೆಳಗಿಸಿದನಂತೆ...







ಧರ್ಮವನ್ನು ಬೆಳಗಿಸಿದವನ ದಿವ್ಯ ಪ್ರತಿಮೆಯ ಎದುರು ಕುಳಿತು ಆ ದಿವ್ಯ ತೇಜಸ್ವಿಯನ್ನು ದಿಟ್ಟಿಸಿದಾಗ ಯಾಕೆ
ಮತ್ತೊಬ್ಬ ವಿವೇಕಾನಂದ ಹುಟ್ಟಲಿಲ್ಲ ಎನಿಸಿತು. ಮರುಘಳಿಗೆ ವಿವೇಕಾನಂದ ಹುಟ್ಟಿದ್ದಲ್ಲ, ಬೆಳೆದದ್ದು, ಬೆಳೆಸಿಕೊಂಡಿದ್ದು ಎನಿಸಿತು.

ನಿನ್ನೆದುರು ಕುಳಿತು ಏನು ಕೇಳಲಿ ನಿನ್ನ ಬಳಿ ಇರುವುದನ್ನು ತಾನೇ ಕೇಳಬೇಕು?

ನಿನ್ನ ದಿವ್ಯ ತೇಜಸ್ಸನ್ನು ಕೇಳಲೇ?

ನಿನ್ನೊಳಗಿನ ದೇಶ ಭಕ್ತಿಯನ್ನು ಕೇಳಲೇ?

ನೀನೇನೋ ಕೊಡುಗೈ ದಾನಿಯೇ.. ಕೊಟ್ಟೂಬಿಟ್ಟಿಯ....!

ಆದರೆ ನೀ ಕೊಟ್ಟಿದ್ದನ್ನು ನನ್ನೊಳಗೆ ಬಿಟ್ಟುಕೊಳ್ಳುವ ಶಕ್ತಿ ನನಗೆಷ್ಟಿದೆ?

ನಿನ್ನ ಆ ಶುದ್ದ ಕಣ್ಣುಗಳನ್ನು ನೋಡಿದರೆ ಸಾಕು ಅದ್ಯಾವುದೋ ದಿವ್ಯ ತೇಜಸ್ಸು ದೇಹವನ್ನಾವರಿಸುತ್ತದೆ ನಿಜ...

ಆದರೆ ಅದು ನಿನ್ನೆದುರು ಇರುವಾಗ ಮಾತ್ರ...

ನಿನ್ನೆದುರಿಂದ ಎದ್ದ ಮರುಕ್ಷಣ ಅದನ್ನು ದೇಹದಲ್ಲಿಟ್ಟುಕೊಳ್ಳುವ ಶಕ್ತಿ ನನಗಿಲ್ಲದಿರುವುದು ನನ್ನ ಬಲಹೀನತೆ...

ನಾನೋ ಸಾಮಾನ್ಯರಲ್ಲಿ ಸಾಮಾನ್ಯ...

ನಿನ್ನ ಸುತ್ತ ಹತ್ತು ಪ್ರದಕ್ಷಣೆ ಹಾಕಿ ಇಪ್ಪತ್ತು ಬಾರಿ ನಮಸ್ಕಾರ ಮಾಡಿ ಅಡ್ಡಬಿದ್ದೇನು...

ಅಷ್ಟೇ.........

ಮತ್ತೇನು ಮಾಡಲು ಸಾಧ್ಯ ನನ್ನಿಂದ?

ನೀನು ಕೊಡುವುದು ಪರಿಪೂರ್ಣ ದೇಶಭಕ್ತಿಯನ್ನ, ಧರ್ಮದ ಆತ್ಮ ಶಕ್ತಿಯನ್ನ - ಆದರೆ ನನಗೆ ಬೇಕಿರುವುದು...?

ಈಗ ಉಳಿದಿರುವುದು ಒಂದೇ ದಾರಿ ನನಗೆ ಬೇಕಿರುವುದನ್ನೇ ಬದಲಾಯಿಸಿಕೊಳ್ಳಬೇಕು...

ಆ ಶಕ್ತಿಯಾದರೂ ಇದೆಯಾ ನನ್ನಲ್ಲಿ..?

ಇದ್ದಂತಿಲ್ಲ...

ಓ ದಿವ್ಯ ತೇಜಸ್ವಿಯೇ....!

ನೀ ಕೊಡುವುದನ್ನು ನನ್ನೊಳಗೆ ಇಟ್ಟುಕೊಳ್ಳುವ ಬುದ್ಧಿ ಕೊಡು ಎಂದು ಕೇಳಬೇಕೆನಿಸಿತು....
ಆದರೆ ಬುದ್ಧಿ ಇರುವುದು ನನ್ನ ಹತೋಟಿಯಲ್ಲೇ ಅಲ್ವಾ... ನಾನೇನು ಕೇಳಲಾರೆ ಸುಮ್ಮನೆ ದಿಟ್ಟಿಸುವೆ
ನಿನ್ನ ಅದೇ ಪ್ರಜ್ವಲಿಸುವ ಕಣ್ಣುಗಳನ್ನು ನನ್ನೊಳಗೂ ಒಂದು ಅವ್ಯಕ್ತ ಶಕ್ತಿ ಬರುವುದಾದರೆ ಬರಲಿ
ಕಡೆಯ ಪಕ್ಷ ನನ್ನಂತರಾತ್ಮವಾದರೂ ಬೆಳಗಲಿ ಜ್ಞಾನವೆಂಬ ಬೆಳಕಿನಿಂದ..

Tuesday, 1 July 2014

ನಾನೆಂಬ ಮಹಾನ್ ಸ್ವಾರ್ಥಿಯ ಕನಸು..

ತೊನೆಯಬೇಕು ನಾನು ಶುಭ್ರ ಸಾಗರವಾಗಿ...
ನಕ್ಕು ಹೊಳೆಯಬೇಕು ಕಡಲ ಮುತ್ತಾಗಿ...
ಸಲಿಲದ ಆಳ ಅಗಲವ ಅಳೆಯಬೇಕು ಮೀನಾಗಿ... 
ಯಾರಿಗಾಗಿಯೂ ಅಲ್ಲ... 
ಕೇವಲ ನನಗಾಗಿ ಮತ್ತು ನಾನು ನಾನಾಗಿ .....

ಒಮ್ಮೆ ಹಾರಬೇಕು ಮುಗಿಲೆತ್ತರಕ್ಕೆ...
ಹಕ್ಕಿಗೆ ಸ್ಪರ್ಧೆ ಕೊಡಲಲ್ಲ... 
ಯಾವ ದಾಖಲೆಗೂ ಅಲ್ಲ...
ಸ್ವಾತಂತ್ರ‍್ಯದ ಸಾಕ್ಷಿಯಾಗಿ...
ಹಕ್ಕಿ ಮನಸಿನ ಖುಷಿಗಾಗಿ.....

ಅರಳಬೇಕು ನಾನು ಪರಿಮಳದ ಹೂವಾಗಿ.. 
ಯಾವುದೋ ಗುಡಿ ಶಿಲೆಯ ಅಲಂಕರಿಸಲಲ್ಲಾ...
ಯಾರದೋ ಮುಡಿಯಲ್ಲಿ ಬಾಡಲಲ್ಲಾ... 
ಇನ್ಯಾರದೋ ಸಂದೇಶ ಭಾಷಾಂತರಿಸಲಲ್ಲ... 
ನನ್ನಾತ್ಮ ಸುಮದ ಚೆಂದವ ಕಾಣುವುದಕ್ಕಾಗಿ... 

ಒಮ್ಮೆ ಅಲೆಮಾರಿಯಂತೆ ಅಲೆಯಬೇಕು... 
ಯಾರನ್ನೂ ಹುಡುಕುವುದಕ್ಕಲ್ಲ... 
ನನ್ನನ್ನು ಯಾರಿಗೋ ಪರಿಚಯಿಸುವುದಕ್ಕೂ ಅಲ್ಲ... 
ನನ್ನೊಳಗಿನ ನನ್ನನ್ನು ಕಂಡುಕೊಳ್ಳುವುದಕ್ಕಾಗಿ...
ಅರಿವಿನ ಜೇನನ್ನು ಸವಿಯುವುದಕ್ಕಾಗಿ.....

Friday, 20 June 2014

ನಿನ್ನ ರಕ್ಷೆ ಗೂಡಲ್ಲಿ ಅಡಗಲಿ ಎಷ್ಟು ದಿನ...ನೂಕು ಹೊರಗೆ ನನ್ನ .....

     ಪುಟ್ಟ ಕಂದ ಯಾಕೋ ಸಪ್ಪಗಿತ್ತು... ಅಮ್ಮನ ಬಳಿ  ಅದ್ಕಿವತ್ತು ಸಾವಿರ ಸಾವಿರ ಪ್ರಶ್ನೆಗಳು... ಅವಳ  ಎದುರು ತನ್ನೆಲ್ಲ ಪ್ರಶ್ನೆಗಳನ್ನೂ ಹರವಿ ಕುಳಿತುಕೊಂಡಿತು ಪುಟ್ಟ ಮರಿ ಹಕ್ಕಿ...  ನಾನು ಪಕ್ಕದ ಮನೆಯ ಪಾಪು ಒಂದೇ ದಿನ ತಾನೇ ಹುಟ್ಟಿದ್ದು ? ಹೌದು ಕಂದ.... ಆದರೆ ಅಮ್ಮ ಅವನು ಮುಗಿಲೆತ್ತರಕ್ಕೆ ಹಾರುತ್ತಾನಂತೆ ಎಷ್ಟೊಂದು  ಮಜವಾಗಿರುತ್ತಂತೆ!!  ಹೌದೆನಮ್ಮ? ಹಾರುವುದು ಅಷ್ಟೊಂದು ಮಜವಾ  ? ಅವನು  ಕೇಳಿದ ನೀ  ಹಾರಲಾರೆಯ ಎಂದು...?  ಹಾರುವುದು ಅಂದ್ರೆ ನೋಡಿದ್ದೇನೆ  ಆದ್ರೆ ಹೇಗೆ  ಅಂತ  ಗೊತ್ತಿಲ್ಲ ಅಂದೇ...  ಅದ್ಕೆ ಅವನು  ನಿನ್ನ ರೆಕ್ಕೆಗಳಿಗೆ ಹಾರುವ ಶಕ್ತಿನೇ ಇಲ್ವ? ಅಂತ  ಕೇಳಿ ನಕ್ಕಾಗ ಎಷ್ಟು ಬೇಸರ ಆಯಿತು ಗೊತ್ತ ? ನಂಗ್ ಗೊತ್ತಿಲ್ಲ ಅಂದ್ಬಿಟ್ಟೆ.  ಹೌದ ಅಮ್ಮ ನನ್ನ ರೆಕ್ಕೆಗೆ ಶಕ್ತಿನೇ ಇಲ್ವಾ? ನನಗೆ ಪ್ರಪಂಚ ಜ್ಞಾನ ಇಲ್ವಂತೆ...

 ಅಮ್ಮ ಹೇಳಿತು ಇಲ್ಲ ಕಂದ  ನೀನು ಶಕ್ತಿವಂತನೆ.... ನೀನು ಅವನಿಗಿಂತ  ಚೆನ್ನಾಗಿ ಹಾರಬಲ್ಲೆ  ಆದ್ರೆ ಕೆಳಗಿನ  ಪ್ರಪಂಚ ತುಂಬಾ ಕೆಟ್ಟದ್ದು ಅದ್ಕೆ ನಿನ್ನನ್ನ ನಾನೆಂದು ಹಾರಾಡಲು  ಹೊರಗೆ ಕಳಿಸಿಲ್ಲ ಅಷ್ಟೇ... ಯಾರೆಲ್ಲಿ ನನ್ನಿಂದ ನಿನ್ನ ಕಿತ್ಕೊಂಡು ಬಿಡ್ತಾರೋ ಅಂತ ಭಯ ಕಂದ ನಂಗೆ...

ಆದ್ರೆ ಅಮ್ಮ ಕೆಟ್ಟದ್ದು ಅಂದ್ರೆ ಏನು? ಕೆಟ್ಟವರು ಅಂದ್ರೆ ಹೇಗಿರ್ತಾರೆ?  ದಪ್ಪಗಿರ್ತಾರಾ ? ಕೆಟ್ಟದ್ದು ಮಾಡೋದು ಅಂದ್ರೆ ಏನು? ಬೈತಾರಾ?

ಅಮ್ಮ ನಿಜಕ್ಕೂ ಮೂಕಳಾದಳು... 
ಮಾತಾಡಮ್ಮ  ......
ಕೆಟ್ಟದ್ದು ಅಂದ್ರೆ  ಕೆಟ್ಟದ್ದು ಅಷ್ಟೇ ಮತ್ತೆನು ಕೇಳಬೇಡ...

ಆದ್ರೆ  ಅಮ್ಮ, ನನ್ನನು ಒಂದು ಸಲ  ಹೊರಗೆ ಬಿಡು ಕೆಟ್ಟದ್ದು ಅಂದ್ರೆ ಏನು ಅಂತ ನೋಡ್ತೀನಿ..  ನಿನ್ನ ಕಂದ ನಾನು ಎಚ್ಚರಿಕೆ ಇಂದಾನೆ  ಇರ್ತೀನಿ...  ನನ್ನ ಹಿಂದೆ ನೀ  ಇರ್ತಿಯ ಅಲ್ವಾ? ಪ್ರಪಂಚ ಚಂದವಿದ್ಯಂತೆ ನಾನು ಒಂದ್ಸಲ  ನೋಡ್ಬೇಕು   ಬಿದ್ದು ಪೆಟ್ಟಾದರು ಅಳಲ್ಲ ನಾನು...  ಸೂಕ್ಷ್ಮವಾಗಿ ಪ್ರಪಂಚದ ಆಳವನ್ನ ಅರ್ಥ ಮಾಡ್ಕೊತೀನಿ...
 





       ನೀನು ಹೇಳಿದ್ದೆ ಯಾವತ್ತೋ  ನಂಗೆ ಬೆಂಕಿ ಹತ್ರ ಹೋಗಬೇಡ ಅದು ಸುಡತ್ತೆ ಅಂತ ಆದ್ರೆ ಬೆಂಕಿ ಅಂದ್ರೆ ಏನು ಅಂತಾನೆ ನೋಡಿರಲಿಲ್ಲ ನಾನು...  ಅವತ್  ಒಂದಿನ ಕೈ ಸ್ವಲ್ಪ ಸುಟ್ಟೋಯ್ತು ಅವಾಗ ಅಂದ್ಕೊಂಡೆ ಅಮ್ಮ ಹೇಳ್ತಿದ್ದ ಬೆಂಕಿ ಅಂದ್ರೆ  ಇದೆ ಇರಬೋದು  ಅಂತ ಅವತ್ತಿನ್ ನಂತರ ನಿಜವಾಗ್ಲೂ  ಯಾವತ್ತು ಅದ್ರ ಹತ್ರ ಹೋಗಿಲ್ಲ ನಾನು.. 
ಅರ್ಥ ಆಗತ್ತೆ,  ಅಮ್ಮ ನೀನು...  ನಿಂಗೆ  ಭಯ  ಎಲ್ಲಿ ಹಾರುವಾಗ ಬಿದ್ದು ರೆಕ್ಕೆ ಮುರಿದರೆ ಅಥವಾ ಯಾವ್ದೋ ಕ್ರೂರ ಪ್ರಾಣಿ ನನ್ನ ತಿಂದು ಬಿಟ್ರೆ ಅಂತ ಅಲ್ವಾ?  ರೆಕ್ಕೆ ಮುರಿಯದ ಹಾಗೆ ಹಾರುವುದನ್ನ ನೀನೇ ಜೊತೆ ಇದ್ದು ಕಲಿಸು...   ಕೆಟ್ಟದ್ದು ಅಂದ್ರೆ ಇದು ಅಂತ ತೋರಿಸು ಒಮ್ಮೆ ಗೊತ್ತಾದರೆ ಮತ್ತೆ ಕೆಟ್ಟದರ ಹತ್ರ ಹೋಗಲ್ಲ ನಾನು... ಹೇಳು ನೀನು ಅರ್ಥ ಮಾಡ್ಕೊತೀನಿ...

 ಈ ಪುಟ್ಟ ಗೂಡಿಂದ  ನನ್ನನ್ನು ಹೊರಗೆ ಕಳಿಸಮ್ಮಾ ....
 ಮೊದಲ ಹೆಜ್ಜೆ ಇಡುವಾಗ  ಕೈ ಹಿಡಿದು ನಡೆಸೋಕೆ ಹೇಗೂ ನೀ  ಇರ್ತಿಯಲ್ಲ ಆಮೇಲೆ ಮತ್ತೆ ಬೀಳಲ್ಲ  ನಾನು ಎತ್ತರಕ್ಕೆ ಮತ್ತು ಎತ್ತರಕ್ಕೆ ಹಾರ್ತೀನಿ.. ನಿನ್ನ ಬಿಟ್ಟು ಹೊಗಲ್ಲ..   ಮತ್ತೆ ನಿನ್ನ ಮಡಿಲಿಗೆ ಬರ್ತೀನಿ. 
ಪ್ರಪಂಚ ನನ್ನನ್ನು ಅಸಹಾಯಕ ಅನ್ನೋಕೆ ಬಿಡಬೇಡ, ನಾನು ಹಾರಬಲ್ಲೆನ? ಎಂಬ ನನ್ನದೇ  ಪ್ರಶ್ನೆಗೆ ನಾನೂ..   ಹಾರಬಲ್ಲೆ ಎಂದು ನನಗೆ  ನಾನೇ  ಉತ್ತರ ಕಂಡುಕೊಳ್ಳುವ ಸ್ವಾತಂತ್ರ  ಕೊಡಮ್ಮ ... ನೀನು ಹೇಳಿದ್ದನ್ನೆಲ್ಲ  ನೆನಪಿಟ್ಟುಕೊಂಡು  ಜಾಣ ಆಗ್ತೀನಿ ಆದ್ರೆ ಹೇಳು  ನಂಗು ಎಲ್ಲವನ್ನ.... 
ಪಕ್ಕದ ಮನೆ ಪಾಪು ಥರ ನಾನು ಹಾರಬೇಕು... ನಿನ್ನ ರಕ್ಷಣೆಯಲ್ಲಿ ಇರೋ ನಂಗೆ ನೀ  ಹಾರಿ ಹೋದಾಗ, ಒಂಟಿಯಾಗಿದ್ದಾಗ ಭಯ ಆಗತ್ತೆ ನನ್ನನ್ನೂ  ಹಾರಾಡೋಕೆ  ಕರ್ಕೊಂಡು ಹೋಗು ಹಾರೋದನ್ನ  ನಂಗೂ ಕಲಿಸು....ನಾನು ಮುಗಿಲೆತ್ತರಕ್ಕೆ  ಹಾರುತ್ತೇನೆ.....  ಅಂತ ಹೇಳ್ತಾ ಹೇಳ್ತಾ ನಿದ್ದೆಗೆ ಜಾರಿತ್ತು ಪುಟ್ಟ ಮರಿ... 



ಅಮ್ಮ ಯೋಚನೆಗೆ  ಬಿದ್ದಳು.... ಹೌದು ಗೂಡಲ್ಲಿ  ಬಚ್ಚಿಡೋದಕ್ಕಿಂತ  ಒಂದಷ್ಟು ತಿಳುವಳಿಕೆ ಕೊಟ್ಟು ಹಾರಲು ಕಲಿಸುವುದು  ಒಳಿತು....  ಅಮ್ಮ ನಾನು ತಿದ್ದಬಹುದು...  ಕೆಟ್ಟ ಅನುಭವದಿಂದ ಕಲಿಯುವ ಪಾಠಕ್ಕಿಂತ ನಾನು ಕೈ ಹಿಡಿದು, ಜೊತೆ ನಡೆದು..  ಕಲಿಸುವುದೇ  ಒಳಿತೆಂದು........ ರೆಕ್ಕೆಗಳು ಬಲಿಷ್ಟವಾಗಲಿ ಲೀಲಾಜಾಲವಾಗಿ  ಹಾರುವುದ ಕಳಿಸುವುದು ಒಳಿತು ಹಾರುವ ಪ್ರತಿ ಕ್ಷಣವು ಜೊತೆಗಿದ್ದು ಕೆಟ್ಟ ಹದ್ದನ್ನು ತೋರಿಸುತ್ತೇನೆ... ಆಗಲೇ ತಿಳಿಯುವುದು ಕೆಟ್ಟದ್ದು ಮತ್ತು ಅದರಿಂದ ರಕ್ಷಿಸಿಕೊಳ್ಳುವುದು... ಕೆಡುಕನ್ನು ಮೀರಿ ಕನಸನ್ನು ಗೆಲ್ಲುವುದನ್ನು ಅವಳ ಬದುಕೇ ಕಲಿಸಲಿ...  ಬುತ್ತಿ ಕಟ್ಟಿಕೊಡುವುದಕ್ಕಿಂತ  ಬುತ್ತಿ ಕಟ್ಟುವುದನ್ನೇ ಕಲಿಸುವುದು ನಾಳೆಗಳಿಗೂ  ಒಳ್ಳೆಯದು...  

ಮರಿ ಹಕ್ಕಿಯ ಬಾಳಲ್ಲಿ ಹೊಸ ಸೂರ್ಯ ಮೂಡಿದ್ದಾನೆ...  ಆ ಬೆಳಗಲ್ಲಿ ಮರಿಯ ರೆಕ್ಕೆಗೆ ಗಗನವೇ ಗಡಿಯಾಗಿತ್ತು..... 






                                                                                                           
**ಚಿತ್ರಗಳು ಗೂಗಲ್ ನಲ್ಲಿ ಇದ್ದದ್ದು 

Saturday, 14 June 2014

ಒಲವ ಮೇಘಕ್ಕೊಂದು ಪತ್ರ....

ಒಲವ ಗೆಳೆಯ ...... 

        ಈ ಬಾರಿ ಯಾಕೋ ಈ ಪರಿ ಮುನಿಸಿಕೊಂಡಿದ್ದೀಯಾ? ಎಷ್ಟು ದಿನವಾದರೂ ನನ್ನ ನೋಡಲು ಬರಲೇ ಇಲ್ಲ! ಕಾಯಿಸುವವನಿಗೆನು  ಗೊತ್ತು ಕಾಯುವವಳ ನೋವು? ಆದರೂ ನೀ ಇರದೇ ನಾನಿಲ್ಲ ಬಿಡು... ಗೆಳೆಯ, ಕೆಲ ಭಾವಗಳನ್ನು ಹೇಳಲೇಬೇಕು... ಎಷ್ಟು ಕಾಯುತ್ತಿದ್ದೆ  ಗೊತ್ತ ನೀ ಬರುವ ದಾರಿಯನ್ನು.. ಅಂತು ಬಂದೆಯಲ್ಲ... 

        ಆಹ್! ಮೈ ಮನವೆಲ್ಲ ಘಮ್ ಎನಿಸುತ್ತಿದೆ.. ಹುಚ್ಚು ಹಿಡಿಸುವಷ್ಟು ಸಂತೋಷವಾಗಿದೆ. ಎಲ್ಲೆಲ್ಲೂ ಹೊಸ  ಹಸಿರ ಚಿಗುರು.. ನಿನ್ನ ವಿರಹದಿಂದ ಬಿರುಸಾದ ನಾನು ನೀ ಬಂದೊಡನೆಯೇ ಮೃದುವಾಗಿಬಿಡುತ್ತೇನೆ... ಹೀಗೆ ಬಿರುಸಾದಾಗ ಅದೆಷ್ಟೋ ಬಾರಿ ಯೋಚಿಸಿದ್ದೇನೆ, ಮುನಿಸುಕೊಂಡು ಬಿಡಬೇಕು ಎಂದು. ಕಾರಣ ನೀ ಮತ್ತೆ ನನ್ನ ಬಿಟ್ಟು ಹೋಗುತ್ತಿಯಲ್ಲ ಎಂದು ಆದರೂ ನೀ ಬಂದಾಗ ಎಲ್ಲವನ್ನೂ ಮರೆತು ಮೃದುವಾಗಿ ಬಿಡುತ್ತೇನೆ ಅದಕ್ಕೆಂದೇ ನೀನು ಕಾಡುವುದು ಕಾಯಿಸುವುದು ಗೊತ್ತು ನನಗೆ... ಹಾಗಿದ್ದು ಕಾಡುವ ಗೆಳೆಯ ಯಾರಿಗೆ ಬೇಡ ಹೇಳು? ಮತ್ತೂ ಇಷ್ಟವಾಗಿ ಬಿಡುತ್ತಿಯ... ಇದು ನಮ್ಮ ಬದುಕಿನ ನಿಯಮ ನೀ ಬರುವುದೂ ಹೋಗುವುದೂ..... ನಡೆಯಲೇ ಬೇಕು ನನಗೂ ಇದು  ಅಭ್ಯಾಸವಾಗಿಬಿಟ್ಟಿದೆ ಬಿಡು... 

    ಆದರೆ ಕೆಲವೊಮ್ಮೆ ಭಯವೂ ಆಗುತ್ತದೆ... ನಿನ್ನ ಈ ಹುಚ್ಚು ಪ್ರೀತಿಯನ್ನು ಕಂಡಾಗ, ಮುನಿಸುಕೊಂಡು ದೂರ  ಹೋದರೂ ಕರೆದುತರಬಹುದೇನೊ ಆದರೆ ನಿನ್ನೆಲ್ಲಾ  ಪ್ರೀತಿಯನ್ನು ಒಟ್ಟಿಗೆ ನನ್ನ ಮೇಲೆ ಸುರಿದಾಗ ಮಾತ್ರ ಭಯಂಕರ ಭಯವಾಗಿ ಬಿಡುತ್ತದೆ ನಾನಂತು ಅದೆಷ್ಟೋ ಬಾರಿ ಅಸಹಾಯಕಳಾಗಿ ಕುಳಿತು ಬಿಟ್ಟಿದ್ದೇನೆ.. ಮುಂದಿನ ದಾರಿಯೇ ಕಾಣದಂತಾಗಿ  ಬಿಡುತ್ತದೆ ಎಲ್ಲೋ ಅನಿಸುತ್ತದೆ ಒಂದು ದಿನ ನಿನ್ನೀ  ಹುಚ್ಚು ಪ್ರೀತಿ ಹೆಚ್ಚಾದರೆ ನಾನೆ ಎಲ್ಲೋ ಕಳೆದು ಹೋಗಿ ಬಿಡುತ್ತೆನೇನೋ ಎಂದು..... ಏಕೋ ಕೆಲವೊಮ್ಮೆ ನನ್ನ ಮೇಲೆ ಈ ಪರಿಯ ಹುಚ್ಚು ಪ್ರೀತಿ ನಿನಗೆ? ನಿನ್ನ ಮುನಿಸು ಮತ್ತು  ಅತೀ ಎಂಬಂಥ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ನಂಗೆ ಕಷ್ಟವಾಗುತ್ತಿದೆ.. ಅದರಲ್ಲೂ ಇಲ್ಲಿ ನಾನೊಬ್ಬಳೆ ಅಲ್ಲ ನನ್ನನ್ನು ನಂಬಿ, ನೆಚ್ಚಿದ ನೂರಾರು ಕನಸುಗಳಿವೆ...

   ನೀನು ಕೆಲ ಬಾರಿ ಎಷ್ಟು ಕರೆದರೂ ಕೇಳದವನಂತೆ ದೂರ ಹೋಗಿ ಬಿಡುತ್ತಿಯ ಕೆಲ ಬಾರಿ ಹತ್ತಿರಕ್ಕೆ ಬಂದು ಅತೀ ಎಂಬಂತೆ ಪ್ರೀತಿ ತೋರುತ್ತಿಯ.. ಈ ಎರಡನ್ನು ಸಹಿಸಿಕೊಳ್ಳುವುದು ನಿಜಕ್ಕೂ ಕಷ್ಟವೇ ನನಗೆ... ನೀನು ನಾನು ಹದವಾಗಿ ಬೆರೆತರೆ ಒಂದು ಹೊಸ ಸೃಷ್ಠಿಯೇ ಆಗುತ್ತದೆ ಎಂದೂ ನಿನಗೂ ಗೊತ್ತು 

       ದಿನವು ಬೇಡಿಕೊಳ್ಳುತ್ತೇನೆ ಈ ಬಾರಿಯಾದರು  ನೀನು ಸಮಾಧಾನದಿಂದ ಪ್ರೀತಿಯ ಸುಧೆ ಹರಿಸಲಿ ಎಂದು... ನಿನ್ನೊಲವ ಮುಂಗಾರಿಗೆ ಕಾಯುತ್ತಿದ್ದೇನೆ. ನೀ ಇಲ್ಲದೆ ನನಗೆ ಉಸಿರಿಲ್ಲ ಹಸಿರಿಲ್ಲ ನೀ ಇರದ ಈ ಬದುಕಿಗೆ ಬಣ್ಣವಿಲ್ಲ.. ನಿಜಕ್ಕೂ ಗೆಳೆಯ  ನೀ ನನ್ನೊಲವಿಗೆ   ಮಳೆಗಾಲದ ಹಸಿರು ಈ ಬದುಕಲ್ಲಿ ಒಲವಿನ ಮಳೆ ತರುವ ಮೇಘ ನೀನು.. ನಾ ನಿನ್ನೊಲವ ಪೃಥ್ವಿ .. ನೀ ಕೊಟ್ಟ ಹಸಿರನ್ನು ಸೂರ್ಯ ರಶ್ಮಿಗೆ ಕೊಟ್ಟು ನಿನ್ನೊಲವಿಗೆ ನನ್ನೊಡಲನ್ನು ಬರಿದಾಗಿಸಿಕೊಂಡು ಕಾಯುತ್ತಿದ್ದೇನೆ.... 


ನಿನ್ನೊಲವ ನಿರೀಕ್ಷೆಯಲ್ಲಿ
      ಭುವಿ