Sunday 17 June 2018

ಕನಸಿನ ಹುಟ್ಟುಹಬ್ಬಕ್ಕೆ......

ನಾಲ್ಕು ವರುಷಗಳು ಸಂಪೂರ್ಣಗೊಂಡವು ಅಭಿಸಾರಿಕೆ ಎನ್ನುವ ನನ್ನ ಬದುಕಿನ ಕನಸಿಗೆ. ಪ್ರಾರಂಭಿಸಿದ ಹುರುಪು ಇಂದಿಲ್ಲವಾದರೂ ಖುಷಿಗಳಂತೂ ಹಾಗೆಯೇ ಇದೆ. 

ಕಾಲವೆಂಬುದು ಹಾಗೆಯೇ ಯಾರನ್ನೂ ಕೇಳದೆ ಸುಮ್ಮನೆ ಸರಿದುಬಿಡುತ್ತದೆ. ನಾವುಗಳು ಬದಲಾಗಬೇಕು ಅಷ್ಟೇ . ಆದರೆ, ಎಷ್ಟೋ ಸಲ ಅದೇ ಸೂರ್ಯ,ಅದೇ ಚಂದ್ರ, ಅದೇ ಭೂಮಿ ಬದಲಾವಣೆ ಹೇಗೆ ಸಾಧ್ಯ? ಎನಿಸಿಬಿಡುತ್ತದೆ. ಸತ್ಯವೆಂದರೆ, ಬದಲಾವಣೆಗೆ ಸಾವಿರ ಅರ್ಥ, ಹುಡುಕಬೇಕಷ್ಟೆ.  ಮೊದ ಮೊದಲು ನನ್ನ ಖಾಸಗಿ ಪಟ್ಟಿಯಲ್ಲಿ ಬರೆಯುತ್ತಿದೆ ಜೊತೆಗೆ ಯಾವುದೊ ಪುಟದ ಹಿಂಭಾಗದಲ್ಲಿ ಅನ್ನಿಸಿದ್ದನ್ನ ಸುಮ್ಮನೆ ಬರೆದೆಸೆಯುತ್ತಿದೆ. ಅದೆಲ್ಲಿಂದ ಹುಟ್ಟಿತೋ ಅಭಿಸಾರಿಕೆಯ ಕನಸು ಗೊತ್ತಿಲ್ಲ. ತಿಂಗಳಿಗೊಂದಾದರೂ ಬರೆಯಬೇಕು ಅಂತ ಅಂದುಕೊಂಡಿದ್ದೆ ಕೂಡ. 

ಇಲ್ಲಿ ನನ್ನದೇ ಬುದ್ಧಿಯೊಂದಿಗೆ,  ಭಾವದೊಂದಿಗೆ ಮಾತನಾಡಿದ ಮಾತುಗಳಿವೆ, ನನ್ನ ಮಡಿಲಿನಲ್ಲಿ ನಾನು ಮಲಗಿ ನಂಗೆ ಮಾಡಿಕೊಂಡ ಸಮಾಧಾನವಿದೆ.  ನನ್ನ ಗೊಂದಲಗಳು, ಬೇಸರಗಳು, ಅಪರಾಧಿ ಭಾವಗಳಿಗೆ ನಾನೆೇ  ಕಟ್ಟಿಕೊಂಡ ಸಮರ್ಥನೆಗಳಿವೆ  ಅಷ್ಟೇ. 

ಹೇಳಿಕೊಳ್ಳುವಷ್ಟೇನೂ ಬರೆದುಕೊಂಡಿಲ್ಲ,  ಬರಿ ಇಪ್ಪತ್ತ ಮೂರು ಬರಹಗಳು ಮಾತ್ರ ಈ ನಾಲ್ಕು  ವರುಷಗಳಲ್ಲಿ. ಇನ್ನೆಷ್ಟು ಬರೆಯುತ್ತೇನೆ ಎಂದರೆ ಗೊತ್ತಿಲ್ಲ. ನಂಗೇ ನನ್ನ ಬರಹಗಳು ಒಂದೇ ಸಾಮ್ಯತೆಯ ಬರಹಗಳಾಗಿ ಅನ್ನಿಸುತ್ತಿವೆ. ಹೊಸ ಬರಹಗಳು ನನ್ನನ್ನೇ ಸಮಾಧಾನಿಸುವಲ್ಲಿ ಸೋಲುತ್ತಿವೆ. 

ಆದರೆ , ಇಂದಿಗೂ ನನ್ನೊಳಗೆ ಅಭಿಸಾರಿಕೆ ಎಂಬ ಧ್ವನಿಯೇ ಒಂದು ಉತ್ಸಾಹವನ್ನ ಕೊಡುತ್ತದೆ. ಅವಳಿಗೆ ನಿರಂತರ ಚಲನೆ ಇದೆ ಮತ್ತು ಎಂದಿಗೂ ಸಾವಿಲ್ಲದ ಕನಸುಗಳಿವೆ ಎಂಬ ಪ್ರತಿಧ್ವನಿಯೇ ಹೊಸದೊಂದು ಕನಸಕಟ್ಟಿಬಿಡುತ್ತವೆ. ಅಭಿಸಾರಿಕೆ ಮಹಾನ್ ಸ್ವಾರ್ಥಿ ಮತ್ತವಳಿಗೆ ಆ ಸ್ವಾರ್ಥವೆಂದರೆ ತುಂಬಾ ಇಷ್ಟ. 


ನನ್ನದೆಷ್ಟಿವೆಯೋ ಗೊತ್ತಿಲ್ಲ ಆದರೆ ಒಂದಷ್ಟು ಜನ ಓದಿದ್ದಾರೆ. ಯಾರ ಭಾವವೇನೂ ಗೊತ್ತಿಲ್ಲ. 

ಖುಷಿಗಳಿಗಿಂತ ನೀರಿಕ್ಷೆಗಳಿಲ್ಲ ಬದುಕಿಗೆ.  ಮತ್ತೆ ಮತ್ತೆ ಹುಟ್ಟಲಿ ನನ್ನೊಳಗೆ ಅಭಿಸಾರಿಕೆ ಮುಗಿಯದ ದಾರಿ ನಿಲ್ಲದ ಪಯಣದಲ್ಲಿ. 

ಹುಟ್ಟುಹಬ್ಬದ ಶುಭಾಶಯಗಳು.... 

1 comment:

  1. ಒಬ್ಬ ಖಾಯಂ ಓದುಗನಾಗಿ, ಬರಹಗಳ ಅಭಿಮಾನಿಯಾಗಿ ಹೇಳೊಕಿರೋದು ಇಷ್ಟೇ -
    "ನಂಗೇ ನನ್ನ ಬರಹಗಳು ಒಂದೇ ಸಾಮ್ಯತೆಯ ಬರಹಗಳಾಗಿ ಅನ್ನಿಸುತ್ತಿವೆ. ಹೊಸ ಬರಹಗಳು ನನ್ನನ್ನೇ ಸಮಾಧಾನಿಸುವಲ್ಲಿ ಸೋಲುತ್ತಿವೆ." ಇಂಥಾ ವಿನಾಕಾರಣದ ವೈರಾಗ್ಯ ದೂರಾಗಲಿ...
    ಇನ್ನಷ್ಟು, ಮತ್ತಷ್ಟು, ಮಗದಷ್ಟು ಭಾವಗಳಿಗೆ ಅಕ್ಷರ ರೂಪ ದಕ್ಕಲಿ...

    ಹುಟ್ಟುಹಬ್ಬದ ಶುಭಾಶಯ....

    ReplyDelete