Tuesday 13 March 2018

ಸುಮ್ಮನೆ‌ ನನ್ನೊಳಗಿನ ನಂಗೆ....

ಮನಸೇ,

ಎಷ್ಟೊಂದು ಹೊರಳುಗಳು ಬದುಕೆಂಬ ನಡಿಗೆಗೆ. ಎಷ್ಟೊಂದು ಕತ್ತಲು, ಎಷ್ಟೊಂದು ಭಯಗಳು ಎಷ್ಟೊಂದು ಖುಷಿಗಳು. ಪಡೆದುಕೊಂಡೆನೆಂದು ಮೆರೆಯುವ ಕಾಲಕ್ಕೆ ಕಳೆದುಕೊಳ್ಳಬಹುದೆಂಬ ಭಯ. ಇನ್ನೇನು ಬದುಕು ಮುಗಿದೇ ಹೋಯಿತೆಂಬ ಭಯಕ್ಕೆ ಬಿದ್ದಾಗ ಯಾವುದೋ ಭರವಸೆಯ ಬೆಳಕು....

ನೀನೆಂದರೆ ನನ್ನೊಳಗೆ ಒಂಥರಾ ಮುಗಿಯದ ಗೊಂದಲ, ಹೋರಾಟ. ಈ ನಡುವೆ ನನ್ನೊಳಗೆ ಮಾತಿಗಿಂತ ಮೌನ ಕಾಡಿದ್ದೆ ಹೆಚ್ಚು. ಅದೆಷ್ಟು ಹೂವುಗಳು ಬದುಕ ಬಯಲಲ್ಲಿ. ಆದರೆ ಅಸಹಾಯಕ ನಾನು ಯಾವುದನ್ನು ನೋಡಲಾರೆ. ಆದರೂ ಒಂಥರಾ ಭಯ, ಮುಳ್ಳುಗಳ ತಿರಸ್ಕರಿಸಬಹುದು ಆದರೆ ಹೂವುಗಳ ನೋಡದೆ ನಡೆಯಲಿ ಹೇಗೆ?

ಒಪ್ಪುತ್ತೇನೆ, ಎಲ್ಲ ಹೂವುಗಳು ಬದುಕ ಪೂರ್ತಿ ಬರಲಾರವು ಯಾಕೆಂದರೆ ಸಿಕ್ಕಿದ್ದು ಪ್ಲಾಸ್ಟಿಕ್ ಹೂವುಗಳಲ್ಲ ನಿಜದ ಭಾವದ ಪರಿಮಳ ತುಂಬಿದ ಒಲವ ಹೂವುಗಳು. ಅದೆಷ್ಟೋ ಕಾಲ ಮನಸು ಎಂಬುದೊಂದು ಇದೆ ಎಂಬ ನಂಬಿಕೆಯೇ ಇಲ್ಲದೆಯೇ ಬದುಕಿದ್ದೇನೆ ಹಾಗಂತ ಭಾವತೀವ್ರತೆ ಇರಲಿಲ್ಲ ಎಂತಲ್ಲ ಆದರೆ ವಾಸ್ತವದ ಪರಿಕಲ್ಪನೆ ಇತ್ತು.

ಆದರೆ ಈ ನಡುವೆ ಮನಸಿನ ಗೊಂದಲಗಳ ಪ್ರಶ್ನಿಸಲಾಗದೆ, ನಿಭಾಯಿಸಲಾಗದೆ  ನಂಗೆ ನಾನು ಅರ್ಥವಾಗದೆ ಒಂಥರಾ ಕಳೆದು ಹೋಗಿದ್ದೇನೆ.

ಅದೆಷ್ಟು ಸಲ ಹೇಳುವುದು ನಿಂಗೆ, ತಿರುವುಗಳು ಸಾವಿರ ಬರಬಹುದು ಆದರೆ ಪಯಣ ಮುಗಿಯುವುದಿಲ್ಲ. ಪ್ರತಿ ತಿರುವು ಹೊಸ ದಾರಿಯ ಪ್ರಾರಂಭ. ಈ ನಡುವೆ ನೀನು ನೀನಾಗಿಲ್ಲ, ಒಳಗೊಳಗೇ  ಕಳೆದುಹೋಗುತ್ತಿದ್ದಿಯ. ಭಾವಸ್ರಾವಕ್ಕೆ ಹೆದರಿ ಮರುಭೂಮಿಯಾಗುತ್ತಿದ್ದೀಯ. ಆದರೆ ನೆನಪಿಡು,  ಇಲ್ಲಿ ಪ್ರತಿ ದಿನಕ್ಕೂ ನಿಂಗಾಗೆ  ಅರಳುವ ನಿತ್ಯ ಮಲ್ಲಿಗೆಯಿದೆ. ದಿನವೂ ಸಾವಿರ ನಗೆಯ ಮಲ್ಲಿಗೆಯೇ ಅರಳದಿರಬಹುದು. ಆದರೆ ಯಾವಾಗಲಾದರೂ ಒಂದೋ ಎರಡೋ ಅರಳಬಹುದು.

ನೆನಪಿಡು, ಬದುಕು ಅರಿತಷ್ಟೂ ವಿಸ್ಮಯದ ಸಿರಿ. ಖಾಲಿಯಾಗದ ಬೊಗಸೆ ಪ್ರೀತಿ ಮತ್ತು ಬಿದ್ದರೂ ಪ್ರಯತ್ನ ಬಿಡದ ಮಗುವಿನ ತೊದಲು ನುಡಿ ಮತ್ತು ಮೆದು ನಡಿಗೆ.

ನೋವುಗಳು, ಗೊಂದಲಗಳು, ಭಯಗಳು ಎಲ್ಲರ ದಿನನಿತ್ಯದ ಕಾಯಕಗಳು. ಆದರೆ ಯಾವ ಭಾವವೂ ತುಂಬಾ ಕಾಲ ನಮ್ಮ ಕಾಡಬಾರದು.
ಮನಸೇ, ನೀನು ಅತೀ ಭಾವುಕ. ಅದೇ ನಿನ್ನ ಬದುಕಿನ ದುರಂತಕ್ಕೆ ಕಾರಣವಾಗುತ್ತಿದೆ. ಈ ನಡುವೆ ಬದುಕುವ ಪ್ರಕ್ರಿಯೆಯೇ ಬದಲಾಗಿದೆ. ಬದಲಾಯಿಸಿಕೊಳ್ಳುವುದು ತುಂಬಾ ಇದೆ. ಕೆಲವೊಮ್ಮೆ ಅದೆಷ್ಟು ಬೇಸರವಾಗುತ್ತೆ ಎಂದರೆ ಕಣ್ಣ ಮುಂದೆ  ಬರಿಯ ಕತ್ತಲೆ ಕಾಣಿಸಿಬಿಡುತ್ತದೆ. ಯಾಕೋ ಬೆಳಕಿನ ಛಾಯೆಯನ್ನೇ,ಮರೆಯದಂತ ಭಯ ಕಾಡುತ್ತದೆ. ಗೊತ್ತು, ಕತ್ತಲ ಹಿಂದೆ ಬೆಳಕಿದೆ ಕತ್ತಲ ಭಾವವಿಲ್ಲದಿರೆ ಬೆಳಕಿಗೆ ಹೆಸರಿಲ್ಲ ಎಂದು. ಆದರೆ, ಸಾಮಾನ್ಯ ಮನುಷ್ಯ ಜನ್ಮ ನನ್ನದು, ಹಗಲು-ರಾತ್ರಿಗಳಿಗೆ ಸಮ ಪಾಲು ಇಲ್ಲಿ. ಆದರೂ, ಕತ್ತಲೆಂದರೆ ಭಯ. ಯಾಕೆಂದರೆ ಬೆಳಕು ಹುಚ್ಚು ಭರವಸೆಗಳ ಸೃಷ್ಟಿಸಿದೆ ಮತ್ತು ಹಗಲ ಕನಸುಗಳು ನನ್ನ ಸೃಷ್ಟಿ, ಮತ್ತದರ ಸಾಕ್ಷಾತ್ಕಾರ ಕೂಡ ನನ್ನದೇ ಆಯ್ಕೆ. ಆದರೆ ರಾತ್ರಿಯ ಕನಸುಗಳು ನನ್ನ ಆಯ್ಕೆ ಅಲ್ಲ. ನಂಗೆ ಕನಸೆಂದರೆ ಭಯ, ಅದು ನಿಜವಾದರೆ ಪಾಪ ಪ್ರಜ್ಞೆ.

ಮನವೇ, 

ಸುಮ್ಮನೆ ನನ್ನೊಳಗೆ ನನ್ನ ಮುಳುಗಿಸಿಬಿಡು, ನಡೆಸು, ಹಾರುವ  ಶಕ್ತಿ ನೀಡು  ಮತ್ತು ಸುಮ್ಮನೆ ಮಲಗುಕೊಳ್ಳುವ ನೆಮ್ಮದಿಕೊಡು,  ಅದೆಷ್ಟೊ  ದಿನದಿಂದ ಮನಸೆಂಬುದು ಒಂಥರಾ ಗೊಂದಲಗಳ ಗೂಡಾಗಿದೆ, ನಗುವೆಂಬುದು ಅಶಕ್ತವಾಗಿದೆ. ಸಾಕಿನ್ನು ಈ ಕ್ಷಣವೇ ಹೊಸ  ಬದುಕಿನ  ಯುದ್ಧಕ್ಕೆ ಮುನ್ನುಡಿ ನೀಡು ಮತ್ತು ಹಿನ್ನುಡಿಯಲ್ಲಿ ಬರೆದಿಡು "ಈ ಬದುಕಿನ್ನೂ ಮುಗಿದಿಲ್ಲ ಈಗಿನ್ನು ಶುರುವಾಗಿದೆ".

1 comment:

  1. ಕೊಟ್ಟ ಕೊನೇಯ ಸಾಲಿಗೆ ನ್ಯಾಯ ಒದಗಿಸಬಲ್ಲೆವಾದರೆ............... 🙂

    ಚಂದ ಭಾವ ಬರಹ...💕

    ReplyDelete