Thursday 24 July 2014

ಏನೆಲ್ಲಾ ಆದಳಾಕೆ ಅದಕ್ಕೇ ಹೆಣ್ಣಾಕೆ.....



ಸೃಷ್ಟಿಯೇ  ಯಾಕೆ ಮೋಸ ಮಾಡಿತೋ  ಕಾಣೆ... ಗಂಡಿಗೆ ಸಂಪೂರ್ಣ ದೈಹಿಕ ಶಕ್ತಿಯನ್ನು ಕೊಟ್ಟು ಹೆಣ್ಣಿಗೆ ಅದಕ್ಕೂ, ನಾಲ್ಕು ಪಟ್ಟು ಹೆಚ್ಚು ತಾಳ್ಮೆ, ಕ್ಷಮೆ ಮತ್ತು ಮಾನಸಿಕ ಸ್ತೈರ್ಯವನ್ನು ಕೊಟ್ಟತೋ.. ಅದ್ಯಾಕೋ ಕಾಣೆ ಅವಳಿಗೂ, ಮುದವಾಗುವಂತ ವಿಶಿಷ್ಟವಾದ  ದೈಹಿಕ ಮತ್ತು ಅಂತರಿಕ ಚೆಲುವನ್ನು ಕೊಟ್ಟದ್ದೂ  ಪ್ರಕೃತಿಯೇ...  

ಸಣ್ಣ ಕಂದ ಆಗತಾನೇ ಕಣ್ಬಿಟ್ಟಿರುತ್ತದೆ.  ಚಂದ ಕಾಣುವ ಪ್ರಪಂಚವನ್ನು ನೋಡ ಹೊರಟಿರುತ್ತದೆ.  ಅದ್ಯಾರೋ ಮುತ್ತು ಕೊಡುತ್ತಾರೆ ಅಸಹ್ಯವಾಗುತ್ತದೆ ಕೇಳಿದರೆ ಅಮ್ಮ,  ನೀನು ಪಾಪು ಅಲ್ವಾ ಅದಕ್ಕೆ ಅನ್ನುತ್ತಾಳೆ.  ಒಳಗಿನ ಮಗಳು ಜಾಗ್ರತಳಾಗುತ್ತಾಳೆ  ಕ್ಷಮಿಸಿಬಿಡುತ್ತಾಳೆ.  ಕಾರಣ ತನ್ನ ಪ್ರಯತ್ನವಿಲ್ಲದೆಯೇ ತಾನೇ ತಾನಗಿ ಅರಳುತ್ತಿರುವ ಹೂವಂತ ಚಂದದ ಮಗುವಾಕೆ.. 

 ತನ್ನದೇ ರಕ್ತ ಸಂಭಂದಿಯೊಬ್ಬ ಆಗತಾನೇ ಬದಲಾವಣೆಯಾದ ದೇಹವನೆಲ್ಲೋ ಮುಟ್ಟುತ್ತಾನೆ, ತಡಕಾಡುತ್ತಾನೆ.  ಮತ್ತದೇ ಅಸಹ್ಯ ಭಾವ ಆದರೆ ಏನು ಮಾಡಿಯಾಳು  ಕ್ಷಮಿಸಿಬಿಡುತ್ತಾಳೆ ಕಾರಣ ತಂಗಿಯಾಕೆ ... 

ತನ್ನದೇ ಲೋಕದಲ್ಲಿ ಒಳಗೊಳಗೆ ನಗುತ್ತ ಬೆಳಿಗ್ಗೆ ಖುಷಿಯಿಂದ  ಕಾಲೇಜಿಗೆ ಹೋಗುತ್ತಿರುತ್ತಾಳೆ, ದಾರಿಹೋಕನೊಬ್ಬ ಸುಮ್ಮನೆ ದಾಟಿ ಹೋಗುವಾಗ ಅದೆಲ್ಲೋ ಮುಟ್ಟಿ  ಹೋಗುತ್ತಾನೆ.  ಏನು ಮಾಡಲು ಸಾಧ್ಯ ಉಹೂ,  ಕ್ಷಮಿಸಿಬಿಡುತ್ತಾಳೆ.  ಕಾರಣ ಅಸಹಾಯಕ ಹುಡುಗಿಯಾಕೆ.... 

ಕಾಲ ಕಳೆಯುತ್ತಲೇ ಇರುತ್ತದೆ.  ಅದೊಂದು ದಿನ ರಾತ್ರಿಯ ನಿದ್ದೆಯಲ್ಲಿ ಅದ್ಯಾರೋ ತಬ್ಬಿದಂತ ಕೆಟ್ಟ ಕನಸು. ಮರುದಿನ ಯೋಚಿಸುತ್ತಾಳೆ,  ಹಾಗಾಗಲಿಕ್ಕಿಲ್ಲ ಅವನು ಅಪ್ಪನ ವಯಸ್ಸಿನವನು ಹುಚ್ಚು ಕನಸು ಎಂದು ನಗುತ್ತಾಳೆ. ಅದೇ ಹುಚ್ಚು ಕನಸು ಎರಡೇ ದಿನಕ್ಕೆ ನಿಜವಾದಾಗಲೂ ಆಕೆ ಕಿರುಚಲಾರಳು.  ಆ ಕ್ಷಣವೂ ಅದು ಕನಸೋ ನನಸೋ ತಿಳಿಯುವುದಿಲ್ಲ.  ತಿಳಿದ ಮೇಲೂ  ಕ್ಷಮಿಸಿಬಿಡುತ್ತಾಳೆ,  ಕಾರಣ ಮಗಳಾಕೆ ... 

ಅವಳ ಪ್ರೀತಿಯ ಗುರುಗಳು ಎಷ್ಟೋ ವರುಷಗಳಿಂದ ಕಲಿಯಲಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಳಿಸಿಕೊಟ್ಟವನಾತ ಅದೊಂದು ದಿನ ಅಸಭ್ಯವಾಗಿ ವರ್ತಿಸ ಬಯಸುತ್ತಾನೆ.  ಗೊತ್ತು, ಅವನದು ತಪ್ಪು ಎಂದು.  ಆದರೆ ಆಕೆ ಏನು ಮಾಡಲಾರಳು ಅವನನ್ನೂ ಕ್ಷಮಿಸಿಬಿಡುತ್ತಾಳೆ, ಕಾರಣ ವಿದ್ಯೆಯ ಋಣದಲ್ಲಿರುವ ವಿದ್ಯಾರ್ಥಿನಿ ಆಕೆ... 

ಅವನು ಒಳ್ಳೆಯ ಗೆಳೆಯ, ಕಷ್ಟಕ್ಕೆ ಸ್ಪಂದಿಸುವವ, ನಂಬಿಕೆ ಬೆಳೆಸಿಕೊಂಡವ ಅದ್ಯಾವುದೋ ಕ್ಷಣಕ್ಕೆ ಗೆಳತಿ ಎಂಬುದನ್ನೂ ಮರೆತು ಬರಿಯ ಹೆಣ್ಣಿನ ದೇಹವಾಗಿ ನೋಡುತ್ತಾನೆ- ಹೀರ ಬಯಸುತ್ತಾನೆ.  ಇಲ್ಲ ಅವಳು ಶಿಕ್ಷಿಸುವುದಿಲ್ಲ ಕ್ಷಮಿಸಿಬಿಡುತ್ತಾಳೆ, ಕಾರಣ ಗೆಳತಿ ಆಕೆ.... 

ಎಂತಹದೇ ಅಸಾಧ್ಯ ನೋವಾದಾಗಲೂ  ಮೌನದಿಂದ ಎಲ್ಲಾ ನೋವನ್ನು ನುಂಗುತ್ತಾಳೆ, ಎಲ್ಲರನ್ನೂ ಕ್ಷಮಿಸಿಬಿಡುತ್ತಾಳೆ.  ಕಾರಣ ನೋವ ನುಂಗುವಲ್ಲಿನ ಕಾಠಿಣ್ಯವನ್ನು, ನೋವ ವಿರೋಧಿಸುವಲ್ಲಿ ತೋರಲಾರಳಾದ ಮಮತೆಯ, ಮೃದು ಮನಸ್ಸಿನ, ಶ್ರೇಷ್ಠ ತಾಯಿ ಆಕೆ. 


ಪ್ರತಿ ನೋವಿನ ಹಿಂದೆ ಪ್ರತಿ ಹೆಣ್ಣಿನಲ್ಲೊಬ್ಬ ತಾಯಿ, ತಂಗಿ, ಗೆಳತಿ, ವಿದ್ಯಾರ್ಥಿನಿ, ಮಗಳು ಎಲ್ಲರೂ  ಜಾಗ್ರತರಾಗುತ್ತಾರೆ. 

ಅದಕ್ಕೇ,    

ಎಷ್ಟು ಸಲವಾದರೂ ಆಕೆ ಕ್ಷಮಿಸುತ್ತಾಳೆ ಕಾರಣ ಕ್ಷಮೆಯಾಧರಿತ್ರಿ ಆಕೆ... 

ನಂಬಿಕೆಯೇ ಸತ್ತು ಹೋಗುವ ಪರಿಸ್ಥಿತಿಯಲ್ಲೂ ಮತ್ತೆ ನಂಬುತ್ತಾಳೆ ಕಾರಣ ನಂಬಿಕೆಯನ್ನೇ ಉಸಿರಾಗಿಸಿಕೊಂಡು ಹುಟ್ಟಿದವಳಾಕೆ ... 

ಎಷ್ಟೇ ಹರಿತವಾದ ಚಾಣದಿಂದ ಕೆತ್ತಿದರೂ  ಕಣ್ಣಿಗೆ ಸಿಡಿಯಲಾರಳಾಕೆ-  ಅದಕ್ಕೆ ಚಂದದ  ಪ್ರತಿಮೆ ಆಕೆ ಮತ್ತು ಚಂದಕ್ಕೇ ಉಪಮೆ ಆಕೆ ...  
ಎಲ್ಲವನ್ನೂ ಕ್ಷಮಿಸುವವಳಾಕೆ... ಮತ್ತೆ ಮತ್ತೆ ನಂಬುವವಳಾಕೆ...ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವಳಾಕೆ...   

ಕಾರಣ, ಗಂಡಿಗಿಂತ ಅದಮ್ಯ ಮನೋಸ್ತೈರ್ಯವಿರುವ, ತಾಳ್ಮೆಯ ಜೀವಂತಿಕೆಯಾದ  ಹೆಣ್ಣಾಕೆ......  





ಚಿತ್ರ : ನನ್ನ ಕಲ್ಪನೆಯಿಂದ  ನಾನೇ ಬಿಡಿಸಿದ್ದು.   

6 comments:

  1. ಸಂಧ್ಯಾ -
    ಬರಹ ಚಂದ ಅಂತ ಹೇಳಲೂ ಕೂಡ ಹಿಂಸೆಯಾಗುವಂಥ ವಿಷಯ ವಸ್ತು...
    ಶಬ್ದಗಳ ಚೌಕಟ್ಟಿನಲ್ಲಿ ಹಿಡಿದಿಟ್ಟ ರೀತಿಗೆ ಶರಣು ಕಣೇ...
    ಉಳಿದಂತೆ ನನ್ನಲ್ಲಿ ಹೇಳಲೇನೂ ಶಬ್ದಗಳಿಲ್ಲ...

    ReplyDelete
  2. ಯಾಕೋ ಮನಸ್ಸು ವಿಹ್ವಲವಾಯಿತು.
    ವಿಷಯ ಪ್ರಸ್ತುತಿ ಮನ ಮುಟ್ಟಿತು.

    ReplyDelete
  3. ವಾಸ್ತವಿಕ ಪರಿಸ್ಥಿತಿಗೆ ಇದು ಸೂಕ್ತ ಮತ್ತು ಸಮಂಜಸ ಬರಹ..
    ಎಲ್ಲ ವಿಷಯಗಳೂ ಕೂಡಾ ಸಂಪೂರ್ಣವಾಗಿ ಹಾಗಿರಲ್ಲ.. Mature Mind ಅನ್ನೋ ಪುಸ್ತಕದಲ್ಲಿ ಥಾಮಸ್ ರಿಚರ್ಡ ಅವರು ಹೇಳೋ ಪ್ರಕಾರ ಇಂತಹ ನಡುವಳಿಕೆಗಳು ಒಂದು ಕ್ಷಣದ ಮನಸ್ಥಿತಿಗೆ ಕಾರಣ..ಆ ಒಂದು ವೇಳೆ ತಪ್ಪಿ ಹೋದರೆ ಜೀವನ ಪರ್ಯಂತ ಆತ ಆ ತಪ್ಪು ಮಾಡದೇ ಹೋಗಬಹುದಂತೆ.... So ತಪ್ಪು ನಡುತ್ತದೆಂದಾದರೆ ತಕ್ಷಣ ಪ್ರತಿಕ್ರಿಯಿಸುವುದೇ ಸರಿ. "ಕ್ಷಮಯಾ ಧರಿತ್ರಿ ನಾರಿ" ಒಪ್ಪಿಕೊಳ್ಳೋಣ.... ಆದರೆ ಎಲ್ಲದಕ್ಕೂ ಒಂದು ಮಿತಿಯಿರಬೇಕಲ್ಲ... ನಾವು ಹುಡುಗರಿರಲೀ ಹುಡುಗಿಯರರಲೀ ಯಾವುದೇ ಒಂದು ವಿಷಯಕ್ಕೆ ಅಸಹ್ಯಿಸಿಕೊಳ್ಳುತ್ತೇವೆಯೆಂದಾದರೆ ಅದನ್ನು ತಕ್ಷಣ ವಿರೋಧಿಸಬೇಕು.... ಪರಿಸ್ಥಿತಿಯನ್ನು ನಿಭಾಯಿಸುವುದೂ ಒಂದು ಕಲೆ...

    ಬರಹ ತುಂಬಾ ಅಚ್ಚುಕಟ್ಟಾಗಿದೆ... ಶೈಲಿಯಂತೂ ತುಂಬಾ ಅಂದವಾಗಿದೆ.
    ಸುಮ್ನೇ ಚುರುಕಿಗೆ ಹೇಳ್ತೀನಿ-
    ಹೆಣ್ಣು ತಾನು ಅಬಲೇ ಅನ್ನೋದನ್ನೂ ಬಿಂಬಿಸಿಕೊಳ್ತಾಳೆ...
    ತಾನು ಅಬಲೆಯಲ್ಲ ಸಬಲೆ ಅನ್ನೋದನ್ನೂ ಬಿಂಬಿಸಿಕೊಳ್ತಾಳೆ...
    ಆದರೆ ಇದು ಪರಿಸ್ಥಿತಿಯ ಮೇಲೆ ಡಿಪೆಂಡಾಗಿರುತ್ತೆ.... ;)

    ಸಂದ್ಯಾ ಮೇಡಂ.... ನಾನು ವಿಷಯ ವಿರೋಧಿ ಅಲ್ಲಾ ಕಣ್ರೀ....

    ReplyDelete
  4. ಬರವಣಿಗೆಯ ಶೈಲಿ ಮತ್ತೊಮ್ಮೆ ಮೆಚ್ಚುಗೆಯಾಯಿತು. (ವಿಷಯವು ನೈಜವೆನಿಸಿ ಪ್ರತಿಯೊಬ್ಬ ಭಾರತೀಯನ ಥರ, "ಬೇಸರ ಹುಟ್ಟಿ-ಕುಪಿತನಾಗಿ-ಹಲ್ಲು ಕಡಿದು" ನಂತರ ಶಾಂತನಾಗಿಬಿಟ್ಟೆ ಇನ್ನೊಬ್ರ ವಿಷ್ಯ ನಂಗ್ಯಾಕೆ ಅಂತ)

    ReplyDelete
  5. ಸಂಧ್ಯಾ ಎಂಬ ಪುಟ್ಟ ಹುಡುಗಿ ಅದೆಷ್ಟು ಚಂದವಾಗಿ ಬರೆಯತೊಡಗಿದ್ದೀಯೇ!! ಹೆಮ್ಮೆ ಯಾಗ್ತಿದೆ ನಂಗೆ. ನಮ್ಮನೆ ಕೂಸಿನ ಪ್ರಬುದ್ಧ ಬರಹಕ್ಕೆ.

    ReplyDelete