ಹೇ ಆತ್ಮಸಖನೇ..
ಒಂದಷ್ಟು ಪ್ರಶ್ನೆಗಳಿವೆ ನಂಗೆ....
ಹುಟ್ಟಿದೊಡನೆಯೇ ಸಾವೂ ನಿಶ್ಚಯ, ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೂ ಯಾಕೆ ಈ ನೋವು ನಲಿವಿನ ಹುಡುಕಾಟದ ಹುಚ್ಚು. ಯಾಕೆ ಉಸಿರಿರುವ ತನಕ ಸುಮ್ಮನೆ ಬದುಕಲಾಗದು. ಅಮೃತವನ್ನ ಕುಡಿದು ಬಂದವರಂತೆ ಬದುಕುವ ಆಸೆ ಯಾಕೆ? ಆತ್ಮಕ್ಕೆ ಸಾವಿಲ್ಲವಂತೆ ಅಂದರೆ ದೇಹದ ಕಾಳಜಿ ಏಕೆ? ಆತ್ಮ ಅಶುದ್ಧವಾಗದಂತಲ್ಲವಾ ಕಾಯ್ದುಕೊಳ್ಳಬೇಕಾಗಿರುವುದು. ಉಸಿರು ಹೋದಮೇಲೆ ಸುಟ್ಟು ಬಿಡುವ ದೇಹದ ಬಗ್ಗೆ ಈ ಪರಿಯ ಕಾಳಜಿ ಯಾಕೆ?
ನಾವುಗಳು ಇಷ್ಟೊಂದು ಪ್ರೀತಿಸುತ್ತೇವೆ ಎಂದಾದರೆ ಅತ್ಮಕ್ಕಿಂತ ದೇಹವೇ ಮುಖ್ಯವಾ? ಇಲ್ಲವೆಂದಾದರೆ ಯಾಕೆ ವ್ಯಕ್ತಿಯನ್ನು ಆತ್ಮಶುದ್ಧಿಯಿಂದ ಅಳೆಯದೇ ಬರಿಯ ದೇಹದ ಸೌಂದರ್ಯದಿಂದ ಮೆಚ್ಚಿಕೊಳ್ಳುವುದು.
ಒಂದಿನ ಹಿಂಗೊಂದು ಪ್ರಶ್ನೆ ಕೇಳಿದ್ದೆ ಗುರುಗಳಲ್ಲಿ, ಧರ್ಮರಾಜ ಸತ್ಯವಂತ,ನೀತಿವಂತ ಮಾತಿಗೆ ತಪ್ಪದವ, ತಪ್ಪನ್ನೇ ಮಾಡದವ ಆದರೆ ಕೃಷ್ಣನ ಆಪ್ತ ಗೆಳೆಯ ಪಾರ್ಥ. ಕೃಷ್ಣ ಹೇಳಿದಂತೆ ಕೃಷ್ಣ ತನ್ನನ್ನು ಕಂಡುಕೊಂಡಿದ್ದು ಒಬ್ಬ ಸಾಮಾನ್ಯ ಕೋಪ-ತಾಪಗಳಿರುವ, ಅತೀ ಸಾಮಾನ್ಯ ಮನುಷ್ಯನಾದ ಅರ್ಜುನನಲ್ಲಿ. ಅಂದರೆ ದೈವತ್ವವಿರಿದು ಧರ್ಮಜನಲ್ಲೋ ಅಥವಾ ಅರ್ಜುನನಲ್ಲೋ?
ಒಬ್ಬ ಮನುಷ್ಯನ ಸಾಮಾನ್ಯ ಗುಣಗಳು ಎಂದರೆ ಏನು? ಧರ್ಮಜನಂತೆ ಸಮಚಿತ್ತದ ಮನಸಾ? ತಪ್ಪೇ ಮಾಡದ ಯಾವುದಕ್ಕೂ ಭಾವನಾತ್ಮಕವಾಗಿ ಅಭಿವ್ಯಕ್ತಿಯೇ ಇಲ್ಲದ ಯುಧಿಷ್ಠಿರನ? ಇಲ್ಲ ಅರ್ಜುನನಂತೆ ಸಿಟ್ಟು ಸೆಡವು ಪ್ರೀತಿಯ ಸಾಮಾನ್ಯ ಗುಣಗಳ?
ಇನ್ನು ಅರ್ಜುನನಂತೆ ಭಾವಗಳ ಜೊತೆ ಬದುಕುವುದೇ ದೇವರ ಸ್ವರೂಪ ಎಂದಾದರೆ ನಾವುಗಳು ಸತ್ಯ ಧರ್ಮದ ಹುಡುಕಾಟ ಮಾಡುತ್ತ ಅದರ ಪರಿಮಿತಿಯಲ್ಲಿ ಮನುಷ್ಯನನ್ನು ಒಳ್ಳೆಯವನು ಕೆಟ್ಟವನು ಎಂದು ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ?
ಕೃಷ್ಣ ರಾಧೆಯನ್ನು ಮದುವೆ ಆಗಬೇಕು ಎಂದಾಗ ಅವನ ಗುರುಗಳು ಹೇಳಿದ್ದರಂತೆ, ನಿನ್ನ ಹುಟ್ಟಿನ ಕಾರಣ ಬೇರೆಯೇ ಇದೆ. ನೀನು ಪ್ರಪಂಚದ ಪ್ರೇಮವಾಗಬೇಕು ಬರಿಯ ರಾಧೆಗೆ ಸೀಮಿತವಾಗಬಾರದು ಎಂದು. ಬರಿಯ ಕೃಷ್ಣನ ಹುಟ್ಟಿಗೊಂದೇ ಕಾರಣಗಳಿರಲಾರದು ನಮ್ಮಂತ ಸಾಮಾನ್ಯ ಜೀವಿಯ ಸೃಷ್ಟಿಗೂ ಕಾರಣಗಳಿರಬಹುದು ಅಲ್ಲವಾ? ತಪ್ಪು ಸರಿಗಳೆರಡನ್ನೂ ನಮ್ಮಿಂದಲೇ ನಡೆಯುತ್ತವೆ ಎಂದಾದರೆ ಇದೂ ಸೃಷ್ಟಿಯ ಕಾರಣಗಳೇ ಇರಬಹುದಾ?
ದೈವವೇ...
ಪ್ರಶ್ನೆಗಳು ಸಾವಿರ ನನ್ನೊಳಗೆ ಆದರೆ ನಿನ್ನೆಡೆಗಿನ ನಂಬಿಕೆ ನನ್ನನ್ನು ಮಡಿಲಲ್ಲಿ ಮಲಗಿಸಿ ಸಮಾಧಾನ ಮಾಡಿಬಿಡುತ್ತದೆ.ಬಹುಶಃ ದ್ವಂದ್ವಗಳಿಗೆಲ್ಲ ಉತ್ತರ ನಿನ್ನ ಸ್ಮರಣೆ ಮಾತ್ರ ಇರಬಹುದು.
ಈ ಸರಿ ತಪ್ಪುಗಳ ಪ್ರಪಂಚದಲ್ಲಿ ಮನುಷ್ಯನನ್ನು ಇದ್ದಂತೆ ಒಪ್ಪಿಕ್ಕೊಳ್ಳದೇ ಒಳ್ಳೆಯವನು ಕೆಟ್ಟವನು ಎಂದೆಲ್ಲ ಯೋಚಿಸುತ್ತ ನಿಜ ಸ್ವಭಾವನ್ನೇ ಮರೆತು ಬದುಕುವುದು ಎಷ್ಟು ಸರಿ?
No comments:
Post a Comment