ಮಾತು ಮರೆತಿದ್ದೆನಾ? ಅಥವಾ ಏನು ಮಾತಾಡಬೇಕೂ ಎಂತಲೇ ಮರೆತಿದ್ದೆನಾ ಗೊತ್ತಿಲ್ಲ.
ಮಾತನಾಡಲು ಏನಿದೆ ಎಂಬುದಷ್ಟೇ ಕಾಡುತ್ತಿತ್ತು. ಈ ಮಹಾನಗರಿಯ ಮಾಯೆಯಲ್ಲಿ ಪದೇ ಪದೇ ಕಳೆದು ಹೋದಾಗ ನನ್ನನ್ನು ಮತ್ತೆ ಮತ್ತೆ ಹುಡುಕಿ, ಕಾಡಿ, ಕೈ ಹಿಡಿದು ಸಮಾಧಾನಿಸುವುದೆಂದರೆ ಕಡಲು, ನದಿ, ದಾರಿ ಮತ್ತು ಬಯಲು .
ಮಾತನಾಡಲು ಏನಿದೆ ಎಂಬುದಷ್ಟೇ ಕಾಡುತ್ತಿತ್ತು. ಈ ಮಹಾನಗರಿಯ ಮಾಯೆಯಲ್ಲಿ ಪದೇ ಪದೇ ಕಳೆದು ಹೋದಾಗ ನನ್ನನ್ನು ಮತ್ತೆ ಮತ್ತೆ ಹುಡುಕಿ, ಕಾಡಿ, ಕೈ ಹಿಡಿದು ಸಮಾಧಾನಿಸುವುದೆಂದರೆ ಕಡಲು, ನದಿ, ದಾರಿ ಮತ್ತು ಬಯಲು .
ಕಡಲು ತನ್ನೊಡಲಲ್ಲಿ ಒಳಿತು ಕೆಡಕುಗಳನ್ನೆಲ್ಲ ಬೇರ್ಪಡಿಸಿ ಒಳಿತನ್ನಷ್ಟೇ ಒಪ್ಪಿಕೊಂಡು ಕೆಡುಕನ್ನು ದೂರ ಎಸೆಯುವ ಹಾಗೆ. ಅದೆಲ್ಲೋ ಹುಟ್ಟಿ ಅದೆಷ್ಟೋ ಕಷ್ಟದ ಕಲ್ಲು ದಾರಿಯ ಹಾದು, ನಿಷ್ಕರುಣಿ ಬೆಟ್ಟವ ಜೀಕಿ ಭಯವಿಲ್ಲದೇ, ದಾರಿಹೋಕರ ದಾಹ ತೀರಿಸಿ ನದಿ ನಿಲ್ಲದೇ ಕಡಲು ಸೇರುವ ಪರಿ. ಯಾರು ಬೈಯದೂ, ನಿಂತರೂ, ಮಲಗಿದರೂ ಮಧ್ಯದಲ್ಲೇ ಮಾಯವಾದರೂ ಸದಾಕಾಲಕ್ಕೂ ಮುಗಿಯದೇ ನಿರಂತರವಾಗಿ ಸಾಗುತ್ತಲೇ ಇರುವ ಮತ್ತು ನಡೆಯುವ ಹಸಿವಿಗೆ ಸಾಥಿಯಾಗುವ ದಾರಿ. ಎಲ್ಲವನ್ನು ಕಂಡೂ, ಒಪ್ಪಿಕೊಂಡೂ, ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನೆ ನಿಂತುಬಿಡುವ ಬಯಲು, ಇವು ನನ್ನ ಬದುಕಿನ ಬಲು ದೊಡ್ಡ ಕೌತುಕಗಳು.
ನೆನಪುಗಳ ಜೋಳಿಗೆ ಸೇರಿಸಲು ಗೆಲುವಿನ ಅರ್ಥ ಹುಡುಕಲೆಂದೇ ಹೊರಟಿದ್ದು ಸ್ಕಂದಗಿರಿ ಎಂಬ ಬೋಳು ಬೆಟ್ಟದ ತುದಿಗೆ ಸೂರ್ಯನನ್ನು ನೋಡಲು. ಯಾರೋ ಕೇಳಬಹುದು ಸೂರ್ಯನನ್ನು ನೋಡಲು ಅಲ್ಲಿಗೇ ಹೋಗಬೇಕಾ ಎಂದು? ಆದರೆ ಕಷ್ಟದ ದಾರಿ ಹತ್ತಿ, ಕಾಣುವ ಬೆಳಕಿದೆಯಲ್ಲ..! ಅದು ಸುಲಭದಲ್ಲಿ ಸಿಕ್ಕಂತಲ್ಲ. ಅದಕ್ಕೆ ತೀವ್ರತರದ ಶಕ್ತಿ ಇದೆ.
ನಡುರಾತ್ರಿ ೩.೩೦ ಕ್ಕೆ ಆರಂಭವಾದ ನಮ್ಮ ಆರೋಹಣಕ್ಕೆ ಸಾಥಿಯಾಗಿದ್ದು ಪೂರ್ಣ ಚಂದಿರನ ಬೆಳಕು. ಒಂದು ಕಡೆ ಚಂದ್ರ ಎಂಬ ಬೆಳಕು ಇನ್ನೊಂದು ಕಡೆ ಮಾನವ ನಿರ್ಮಿತ ಬೆಳಕು. ಎಷ್ಟು ಹತ್ತಿದರೂ ಮುಗಿಯುತ್ತಲೇ ಇಲ್ಲವಲ್ಲ ಎಂಬ ಸಣ್ಣ ನಿರಾಸೆ. ದಾರಿಯ ತುಂಬೆಲ್ಲ ಯಾರದೋ ಹೆಜ್ಜೆ ಗುರುತು. ಎಷ್ಟೇ ಹೆಜ್ಜೆ ಗುರುತಾದರೂ ನಾನು ಕರಗಲಾರೆ ಎಂಬ ಕಲ್ಲಿನ ಒರಟು ಮನಸು. ನಡೆದಷ್ಟೂ ದಾರಿ ಹತ್ತಿದಷ್ಟೂ ಬೆಟ್ಟ. ನಿರಾಸೆಗೆ ತಂಪೆರೆದು ಸಾಥಿಯಾದ ಚಳಿಯ ಗಾಳಿ.
ಪ್ರಕೃತಿ ಎಲ್ಲವನ್ನೂ ನೀಡಿದೆ ಆದರೆ ನಾವೇ ಪ್ರಕೃತಿಗಾಗಿ ಏನನ್ನೂ ಮಾಡಿಲ್ಲ. ಏನೆಲ್ಲಾ ಮಾಡಿಕೊಂಡೆವೋ ನಮಗಾಗಿ ಮಾತ್ರ. ಒಮ್ಮೊಮ್ಮೆ ಮನುಷ್ಯ ಸೃಷ್ಟಿಯ ಬಗ್ಗೆ ಹೆಮ್ಮೆಯಾಗುವ ನಂಗೆ ಕೆಲವೊಮ್ಮೆ ಅಸಹ್ಯವೂ ಆಗುತ್ತದೆ. ಕೃತಕ ಬೆಳಕನ್ನು ಸೃಷ್ಟಿಸಿ ಕತ್ತಲೆಯ ಸೊಬಗನ್ನು ಮರೆತೆವು. ವಾಹನವ ಸೃಷ್ಟಿಸಿ ನಡಿಗೆಯ ಸುಖ ಮರೆತೆವು. ನಿಜ, ಕೆಲವೊಂದು ಅವಶ್ಯಕತೆಗಳು, ಆದರೂ.. ಹಗಲೂ-ರಾತ್ರಿ, ಸೋಲು-ಗೆಲುವು, ಕಷ್ಟ- ಸುಖಗಳ ಭೇದವಿಲ್ಲದ ಸ್ವರ್ಗಕ್ಕಿಂತ ಎಲ್ಲವೂ ಇರುವ ಭುವಿಯೇ ದೊಡ್ಡದಲ್ಲವಾ? ಉತ್ಸಾಹವೇ ಇಲ್ಲದ ಬದುಕಿನಿಂದ ಬಯಸುವುದಾರೂ ಏನನ್ನೂ?
ಇಷ್ಟೆಲ್ಲಾ ಪ್ರಶ್ನೆಗಳ ಜೊತೆಗೇ ... ೫. ೩೦ ಕ್ಕೆ ತುತ್ತತುದಿ ತಲುಪಿ ಸೂರ್ಯನಿಗಾಗಿ ಕಾಯುತ್ತಿದ್ದರೆ ಹೊಸ ಬದುಕೊಂದು ತೆರೆದುಕೊಂಡಂತಹ ಖುಷಿ. ಆಹಾ ಪ್ರತಿ ಸೂರ್ಯೋದಯಕ್ಕೂ ಹೀಗೆಯೇ ಕಾಯುವ ಬದುಕು ನನ್ನದಾಗಬಾರದಿತ್ತಾ ಎಂಬ ಭಾವ. ಅಂತೂ ೬. ೧೫ ರ ಸುಮಾರಿಗೆ ಬಂದನಪ್ಪ ಬಾಲ ಭಾಸ್ಕರ. ಅದೆಷ್ಟು ಬಣ್ಣ ಅವನಲ್ಲಿ ಜಗವ ಬೆಳಗುತ್ತೇನೆ ಎಂಬ ಅಹಂ ಕೂಡ ಇರಬಹುದು ಬೆಳೆದಂತೆ. ಮೋಡಗಳ ಮಧ್ಯದಿಂದ ಒಲವ ಸುರಿದಂತೆ ಹೊರಬಂದ ನೇಸರನಲ್ಲಿ ಮಗುವಿನ ನಗುವ ಕಂಡಂತಾಯಿತು. ಈ ನಡುವೇ ಚಳಿ ನಾನೇನೂ ಕಡಿಮೆ ಎನ್ನುವ ಹಾಗೆ ತಿಂದು ಬಿಡುತ್ತಿತ್ತು.
ಪ್ರಕೃತಿಯ ಮಡಿಲಿಗೆ ಹೋದಾಗ ಅದೇನೆಲ್ಲ ಹೇಳುತ್ತದೆ. ಒಂದು ದಿನವೂ ಸೂರ್ಯ ಸೋಮಾರಿಯಾಗುವುದಿಲ್ಲ ಒಂದು ನಿಮಿಷಕ್ಕೂ ಗಾಳಿ ಮಲಗುವುದಿಲ್ಲ. ಹರಿವ ನದಿ ಕಾಡುವ ಕಡಲು ಎಲ್ಲವು ಹಾಗೆಯೇ ಕರ್ತವ್ಯ ಲೋಪ ಎಂಬುದೇ ಇಲ್ಲ. ಅದೇನಿದ್ದರೂ ನಮಗೇ.... ಎಲ್ಲರಿಗೂ ಇಷ್ಟೊಂದು ಉತ್ಸಾಹ, ಕೆಲಸದೆಡೆಗೆ ನಿಯತ್ತನ್ನು ಕೊಟ್ಟ ಸೃಷ್ಟಿಕರ್ತ ಮನುಷನಿಗೇಕೆ ಇದನೆಲ್ಲ ಕೊಟ್ಟೆ ಇಲ್ಲವೇನೋ!! ಬಹುಶಃ ಮನುಷ್ಯನಿಗೆ ಸ್ವಯಂ ಸ್ಫೂರ್ತಿಯನ್ನು ಸೃಷ್ಟಿಸಿಕೊಂಡು ಪ್ರತಿ ದಿನವನ್ನೂ ಹೊಸದಾಗಿ ನೋಡುವ ಅವಕಾಶವನ್ನು ಕೊಟ್ಟಿರಬೇಕು.
ಅದೇ ಖುಷಿಯಲ್ಲಿ ಬೆಟ್ಟ ಇಳಿದರೆ, ನನ್ನೊಳಗೇ ಏನೋ ಗೆದ್ದಂತ ಖುಷಿ. ಇಂತಹ ಬೆಟ್ಟವನ್ನ ನಾನು ಹತ್ತಿ ಬಂದೇನ ಎಂಬ ಭಾವ, ಇನ್ನೊಂದಿಷ್ಟು ದಿನ ಬದುಕಲು ಮತ್ತು ಇನ್ನೊಂದು ಬೆಟ್ಟ ಹತ್ತಲು ಹೊಸ ಸ್ಫೂರ್ತಿ ನೀಡುತ್ತದೆ. .
ಚಾರಣದ ದೂರ : ೪ ಕಿ.ಮಿ.
ಸೂಕ್ತ ಸಮಯ : ಜನವರಿ ೧೪ ರ ಮೊದಲು.
ಮುಂಗಡ ಬುಕ್ಕಿಂಗ್ ಮಾಡಿಕೊಳ್ಳವುದು ಕಡ್ಡಾಯ.
ಸೂಕ್ತ ಸಮಯ : ಜನವರಿ ೧೪ ರ ಮೊದಲು.
ಮುಂಗಡ ಬುಕ್ಕಿಂಗ್ ಮಾಡಿಕೊಳ್ಳವುದು ಕಡ್ಡಾಯ.
ಫೋಟೋ ಕೃಪೆ : ಜಗನ್
No comments:
Post a Comment