Monday, 29 September 2014

ಎಲ್ಲ ಬರೀ ಪ್ರಶ್ನೆಗಳು.....

ಚಿತ್ರಿಸಿದಂತೆ ಚಿತ್ರಣವಾ.?
ಬೆಳಕು ಬಿದ್ದಷ್ಟೇ ಕಾಣುವುದಾ.?
ವಿವರಿಸಿದಂತೆ ವ್ಯಕ್ತಿತ್ವದ ಪರಿಚಯವಾಗುತ್ತದೆಯಾ.? 

ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತೆಗೆ ಪರಿಚಯಿಸಿದ ವ್ಯಕ್ತಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಅಲ್ಲವಾ...?
ಆ ಪರಿಣಾಮದ ಮೇಲೆಯೇ ಸಂಭಂದಗಳ ತೀವ್ರತೆ ನಿರ್ಧಾರವಾಗುವುದೇನೋ ಅಲ್ಲವಾ...? 
ಇಷ್ಟವಾದ ವ್ಯಕ್ತಿಯೊಬ್ಬ ತಪ್ಪನ್ನೇ ಮಾಡಿದರೂ ಅವನನ್ನು ದ್ವೇಷಿಸಲಾಗದೇ ಸದಾ ಕಾಲ ಮನದೊಳಗೆ ಯುದ್ದ ಮಾಡುವುದಕ್ಕೆ ಕಾರಣ - ವ್ಯಕ್ತಿ ನಮ್ಮೊಳಗೆ ಚಿತ್ರವಾದದ್ದು ತುಂಬಾ ಸುಂದರವಾಗಿ ಅನ್ನುವುದಾಗಿರಬಹುದಾ.?     

ವೈದ್ಯರು ನಮ್ಮೊಳಗೆ ಹೇಗೆ ಚಿತ್ರಿಸಲ್ಪಟ್ಟಿದ್ದಾರೆ ಎನ್ನುವುದರ ಮೇಲೆ ರೋಗವನೆದುರಿಸೋ ನಮ್ಮ ಶಕ್ತಿ ನಿರ್ಧಾರವಾಗುತ್ತದೆಯೇನೋ..?  
ನನಗೆ ನಾರಾಯಣನಂತೆ ಕಂಡವ ಇನ್ಯಾರಿಗೋ ಯಮದೂತನಂತೆ ಕಾಣಬಹುದು ಇದೇ ಕಾರಣಕ್ಕಾ ಒಂದೇ ರೋಗವಾದರೂ ಒಂದೇ ವೈದ್ಯ ಕಡಿಮೆ ಮಾಡುವಲ್ಲಿ ಅಸಮರ್ಥನಾಗುವುದು..?
  
ನನಗೆ ಆಗದ ಮನುಷ್ಯನನ್ನು ಯಾರೂ ಪ್ರೀತಿಸಬಾರದು ಎಂಬ ಕಾರಣಕ್ಕೋ ಅಥವಾ ನನ್ನ ಜೊತೆ ಒಳ್ಳೆಯವನಾಗದವ ಇನ್ಯಾರಿಗೂ ಒಳ್ಳೆಯವನಾಗಲು ಸಾಧ್ಯವೇ ಇಲ್ಲ ಎಂಬ ನಮ್ಮ ಮನದ ಪೂರ್ವಾಗ್ರಹಕ್ಕೋ ಎಲ್ಲೆಡೆ ಅವನನ್ನು ಕೆಟ್ಟವನನ್ನಾಗಿ ಬಿಂಬಿಸುತ್ತೇವಾ..?    
ಅಥವಾ ನನಗೆ ಒಳ್ಳೆಯವನಾದವ, ನನಗೆ ಆಪ್ತನಾದವ ಎಲ್ಲರಿಗೂ ಒಳ್ಳೆಯವನಾಗುತ್ತಾನೆ ಎಂದು ಖಡಾಖಂಡಿತ ನಿರ್ಧರಿಸಿಬಿಡುತ್ತೇವಾ.? 
ಎರಡೂ  ಒಂದು ರೀತಿಯಲ್ಲಿ ತಪ್ಪೇ ಅಲ್ಲವಾ.? 
ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ಇಲ್ಲೇ  ಬಾ ಎಂದು ಹೇಳಲು ಸಾಧ್ಯವಾ.?
ಅದು ಸಮಂಜಸವಾ.? 
ನನಗೆ ಸರಿ ಆದದ್ದು ಎಲ್ಲರಿಗೂ ಸರಿಯಾಗುತ್ತದೆ ಎಂದು ಊಹಿಸುವುದು ಅರ್ಧ ಸತ್ಯವಲ್ಲವಾ.?
ಅರ್ಧ ಸತ್ಯವನ್ನೇ ಬದುಕಿನ ಮಹಾ ಸತ್ಯ ಎಂಬಂತೆ ವರ್ತಿಸೊದು ನಮ್ಮ ಮನಸಿನ ಹೊಣೆಗೇಡಿತನವಲ್ಲವಾ.?
ನಮಗೆ ಕಾಣೋದು ನಮ್ಮ ಮೂಗಿನ ನೇರ ಮಾತ್ರ.. ಎದುರಿನವರ ಕಾಣುವಿಕೆ ಬೇರೆಯೇ ಇದ್ದೀತು ಮತ್ತದು ಹೆಚ್ಚಿನ ಸಲ ಬೇರೆಯೇ ಇರುತ್ತೆ ಕೂಡಾ ಅಲ್ಲವಾ..? 

ಕೇವಲ ಒಂದು ಪಾರ್ಶ್ವವನ್ನು ನೋಡಿ ಅಭಿಪ್ರಾಯವನ್ನು ಕೊಟ್ಟುಬಿಡುವುದು ಸುಲಭವೇ ಆದರೆ ಅದರ ಪರಿಣಾಮ..? 

ಒಬ್ಬ ವ್ಯಕ್ತಿಯ ಬಳಿ ಮಾತನಾಡದೆ ಸ್ವಭಾವಗಳ ಪರಿಚಯ ಮಾಡಿಕೊಳ್ಳದೇ ಮನುಷ್ಯ ಒಳ್ಳೆಯವ ಅಥವಾ ಕೆಟ್ಟವನು ಎಂದು ನಿರ್ಧರಿಸುವುದರಿಂದ ಆಗುವ ಉಪಯೋಗವೆಷ್ಟು ಹಾಗೆಯೇ ಅನಾಹುತಗಳೆಷ್ಟು..? 
“ಕುಂತಿ ಕೌರವರನ್ನು ಚಿತ್ರಿಸಿದಂತೆ ಪಾಂಡವರು  ಬೆಳೆದರು, ಗಾಂಧಾರಿ ಪಾಂಡವರನ್ನು ಹೇಗೆ ಚಿತ್ರಿಸಿದಳೋ ಹಾಗೆಯೇ  ಕೌರವರು ಬೆಳೆದದ್ದು...  ಅದಕ್ಕೇ ಅಲ್ಲವಾ ಕುರುಕ್ಷೇತ್ರದಲ್ಲಿ  ಯುದ್ಧವಾದದ್ದು..?” 

ವ್ಯಕ್ತಿ  ನನಗೆ ಏನು ಮತ್ತು ವ್ಯಕ್ತಿ ನಿಜವಾಗಿ ಏನು ಎನ್ನುವುದರ ಮಧ್ಯೆ ಇರುವ ವ್ಯತ್ಯಾಸವನ್ನು ಯೋಚಿಸಿಕೊಳ್ಳದೆ ದ್ವೇಷವನ್ನು ಮಾಡುವುದರಿಂದ ದ್ವೇಷ ಮನೋಭಾವಗಳು ತಲೆಮಾರುಗಳನ್ನು ದಾಟಿದರೂ ಜೀವಂತವಾಗಿರುತ್ತವೆ... ಅಂತೆಯೇ ಪ್ರೀತಿ ಕೂಡ... ಹಾಗನ್ನಿಸಲ್ಲವಾ..?

ಪ್ರೀತಿಗೆ ಕಾರಣ ಬೇಕಿಲ್ಲ ನಿಜ; ಕೆಲವೊಂದು ಕಾರಣಗಳನ್ನು ಬಿಟ್ಟು...
ಪ್ರೀತಿಯಿಂದ ಅನಾಹುತಗಳು ಕಡಿಮೆ...(?)
ಆದರೆ ದ್ವೇಷ.....?
ನಮ್ಮ ಕಲ್ಪನೆಯಲ್ಲೇ ಚಿತ್ರಿಸಿಕೊಂಡಿದ್ದಾದರೆ,  ಕಾಲ ಕ್ರಮೇಣ ಅಳಿಸಿ ಹಾಕಬಹುದೇನೋ...
ಅದೇ ತೀರ ಆತ್ಮೀಯರು ಮೂಡಿಸಿದ ಚಿತ್ರ ಅಳಿಸುವುದು ಸುಲಭವಲ್ಲ ಅಲ್ಲಿ ವ್ಯಕ್ತಿಯ ಪರಿಣಾಮ ತೀವ್ರತರದಲ್ಲಿರುತ್ತದೆ ಅಂತನ್ನಿಸಲ್ಲವಾ...? 

ಅದಕ್ಕೆಂದೇ  ಯಾವುದೇ ವ್ಯಕ್ತಿಯನ್ನು ಇನ್ನಾರಿಗೋ ಪರಿಚಯಿಸುವಾಗ ನನಗೆ ಏನು ಹಾಗೂ ನನ್ನೊಡನೆ ಹೇಗೆ ಎಂಬ ವೈಯಕ್ತಿಕ ಭಾವದಲ್ಲಿ ಆತನನ್ನು ಚಿತ್ರಿಸಿ ಕೊಡುವುದಕ್ಕಿಂತ  ಅಥವಾ ಕೇವಲ ನಮ್ಮ ಅಭಿಪ್ರಾಯವನ್ನು ಅಷ್ಟು ಪರಿಣಾಮಕಾರಿಯಾಗಿ ಹೇಳುವ ಬದಲು ಸಾಮಾಜಿಕವಾಗಿ ಮತ್ತು ನನ್ನಿಂದಾಚೆ ವ್ಯಕ್ತಿ ಹೇಗೆ ಎಂಬುದನ್ನೂ ಪ್ರಾಮಾಣಿಕವಾಗಿ ವಿವರಿಸಿ ಹೇಳಿದರೆ ಇನ್ಯಾರದ್ದೋ ಮನದಲ್ಲಿ ವ್ಯಕ್ತಿಯೊಬ್ಬನ ಬಗ್ಗೆ ಮೂಡುವ ಅಭಿಪ್ರಾಯದಲ್ಲಿ ನಮ್ಮ ಪಾತ್ರ ಕಡಿಮೆ ಇದ್ದೀತು ಅಲ್ಲವಾ...? 

ಯಾಕೋ ಹೀಗೆಲ್ಲ ಅನ್ನಿಸಿತು... ನನ್ನ ಮಾತುಗಳು ಕೂಡ ತಪ್ಪು ಅಥವಾ ಅರ್ಧ ಸತ್ಯವೇ ಇದ್ದೀತು ಅಲ್ಲವಾ....???

ಈಗ ನಿಮ್ಮ ಮಾತನ್ನು ಹೇಳಿ...

Monday, 8 September 2014

ಅಂತಃ ಶಕ್ತಿಯ ಬೆಳಗು.......


ಯಾರೋ ನಿನ್ನನ್ನು ನೋಯಿಸಿದರೆಂದು ನೀನು ನಿನ್ನ ಬದುಕನ್ನು ನೋಯಿಸುವುದು ಮೂರ್ಖತನವಲ್ಲವಾ? ನಿಜಕ್ಕೂ ಬದುಕನ್ನು ನೋಯಿಸುವಂತಹ ಕಾರಣಗಳಿವೆಯಾ? ಘನ ಕಾರಣೆಗಳೇನೂ ಇಲ್ಲ ಎನ್ನುವುದಾದರೆ ಬದುಕನ್ನು ನೋಯಿಸುವುದು ತಪ್ಪಲ್ಲವಾ?

ಕಣ್ಣಿರಿಗೂ ಒಂದು ಬೆಲೆಯಿದೆ, ಅದು ಬರಲೂ ಒಂದು ಕಾರಣವಿದೆ. ಹಾಗೆ ಯಾರಿಗೆಂದರೆ ಅವರಿಗೆ, ಎಲ್ಲೆಂದರಲ್ಲಿ ಅಳುವುದು ನಿನ್ನ ಅಸಹಾಯಕತೆ ಅಲ್ಲವಾ? ರಾತ್ರಿ ಕಳೆದ ಮೇಲೂ ನೀ ಮಲಗಿರುವೆ ಎಂದಾದರೆ ನಿನಗೂ ಸೋಲಿನ ಭಯವಾ? ನೋವು ಕೊಟ್ಟವರ ಎದುರು ಸೆಟೆದು ನಿಲ್ಲಬೇಕು ತಾನೇ? ನೀ ಅತ್ತರೆ ನೋವು ನಿನ್ನ ಕಣ್ಣಿಗೆ, ನಿನ್ನ ನಾಳೆಗಳಿಗೆ ತಾನೇ?

ಬದುಕು ನೋವು ನಲಿವುಗಳ ಸಾಗರವೇ. ಎಲ್ಲೋ ಮಳೆಯಾದಾಗ ಮಣ್ಣು ನೀರು ಬರುವುದು ನಿಜವೇ! ಆದರೆ, ಸಾಗರವೆಂದೂ ತನ್ನ ತನವನ್ನು ಕಳೆದುಕೊಳ್ಳುವುದಿಲ್ಲ. ನಿರಂತರ ಮಂಥನದಿಂದ ತನ್ನನ್ನು ತಾನು ಸದಾ ಉಳಿಸಿಕೊಂಡಿದೆ. ಪ್ರೀತಿ ಕೊಡು ಎಂದು ಯಾರ ಬಳಿಯೂ ಹೋಗುವುದಿಲ್ಲ ಆದರೆ, ತನ್ನೊಳಗಿನ ಪ್ರೀತಿಯನ್ನೆಂದು ಕಳೆದುಕೊಂಡಿಲ್ಲ.

ತುಂಬಾ ದಿನ ಚಲಿಸದೆ ಇರಬಾರದು. ನಿಂತ ನೀರಾಗಿ ಕೊಳೆತದ್ದು ಸಾಕು. ನೀರು ಹರಿದರೆನೇ ಚಂದ. ಗಿರಿಯ ನೆತ್ತಿಯಿಂದ ಕಣಿವೆಗೆ ಜಿಗಿದೋ ಅಥವಾ ಏರಲಾಗದ ಗಿರಿಯ ಮಗ್ಗಲನ್ನು ಬಳಸಿಯೋ. ಒಟ್ಟಿನಲ್ಲಿ ಚಲನೆ ನಿರಂತರವಾಗಬೇಕು. ನಿಂತರೆ ನಿಂತ ಜಾಗದಲ್ಲಷ್ಟೇ ಹಸಿರು – ಹರಿದರೆ ಹರಿವಿನ ವಿಸ್ತಾರಕೆಲ್ಲ ಹಸಿರು. ಬಾವಿ ಒಂದೂರಿನ ದಾಹ ತೀರಿದರೆ, ನದಿ ಹತ್ತೂರಿನ ಉಸಿರು. ಹಾಗೆಯೇ ಬದುಕೂ. ಯಾರಿಲ್ಲದಿದ್ದರೂ ನಡೆಯಬಲ್ಲವನಾಗು ನೀ ನಿನ್ನ ಜೊತೆ. ನಿನಗಾಗಿಯೇ ಇರುವ ನಿನ್ನೆಲ್ಲ ಖುಷಿಗಳ ಜೊತೆಗೆ. ನೀನೇ ಕಟ್ಟಿಕೊಂಡ ನಿನ್ನ ನಾಳೆಗಳ ಕನಸ ಬುತ್ತಿಯ ಜೊತೆಗೆ. ನಡೆಯುತ್ತಲಿರು – ದಾರಿ ಬದಿಯಲೆಲ್ಲ ನಿನ್ನ ನಗೆಯದೇ ಮಾತು. 

ಸದಾ ಎಡವಿ ಬಿದ್ದು ರಕ್ತ ಬಂದ ಕಾಲುಗಳೂ ಗಟ್ಟಿಯಾಗಿವೆ...
ಉಪ್ಪು ನೀರಿನಿಂದ ತೊಳೆದ ಕಂಗಳು ಶುದ್ಧವಾಗಿವೆ. 
ಸಾಕಿನ್ನು....... 
ಮೋಡ ಮುಸುಕಿದ ಬಾನು, ಪರದೆ ಕಟ್ಟಿದ ರಂಗಸ್ಥಳ...
ಮಳೆ ಸುರಿದಾಗಿದೆ.. 
ಪರದೆ ಸರಿದಾಗಿದೆ...
ನಾಟಕವೋ, ಬದುಕಿನಾಟವೋ ಇನ್ನು ಪ್ರಾರಂಭವಾಗಬೇಕು...

ಕನ್ನಡಿಯ ಎದುರು ಕಾಣಬೇಕಾದದ್ದು ನಿನ್ನದೇ ತೇಜಸ್ಸು. ನಿನ್ನ ಅಳುವಲ್ಲ. ನಮ್ಮೊಳಗನ್ನು ಬೆಳೆಸಲಾರದ, ಬೆಳಗಲಾರದ ಯಾವುದಕ್ಕೂ ತುಂಬಾ ದಿನ ಅಂಟಿಕೊಂಡಿರಬಾರದು. ನೋವುಗಳಿಂದ, ಸೋಲುಗಳಿಂದ ಒಂದಷ್ಟು ಪಾಠ ಕಲಿಯದ ಹೊರತು ಬದುಕು ಬದಲಾಗುವುದಿಲ್ಲ. ಸೋಲಿನ ಸಾರ್ಥಕತೆ ಇರುವುದೇ ನಿನ್ನೊಳಗಣ ಬೆಳವಣಿಗೆಯಲ್ಲಿ, ನಿನ್ನ ಹೊಸ ಗೆಲುವಿನಲ್ಲಿ. ಕಣಿವೆಯ ಆಳಕ್ಕೆ ಹೆದರುವಾತ ಗಿರಿಯ ನೆತ್ತಿಯ ಮೇಲೆ ನಗಲಾರ. 

ನೀನು ಕಲಿಯದ ಹೊರತು ಬದುಕು ಏನ್ನನ್ನು ಕಲಿಸದು. ಅನುಭವದಿಂದ ಕಲಿಯಬೇಕೇ ಹೊರತು ಕೊರಗಬಾರದು. 

ಇನ್ನು ಮರುಗಿದ್ದು ಸಾಕು - 
ಮತ್ತೊಂದು ಬೆಳಗಾಗಿದೆ. 
ಕವಿದ ಕಗ್ಗತ್ತಲೆಯ ಮಬ್ಬು ಹರಿದು ಭರವಸೆಯ ಬೆಳಕೊಂದು ಮೂಡಿದೆ. 
ಎಚ್ಚರವಾಗು ಅಂತಃ ಶಕ್ತಿಯೇ ನಿನ್ನದೀ ಬದುಕು.
ಆಳು - ಸೋಲುಗಳು ಬರದಂತೆ, ಬಂದ ಸೋಲುಗಳು ಬದುಕ ಆಳದಂತೆ...


ಚಿತ್ರ : ನನ್ನ ಕಲ್ಪನೆಯಿಂದ ನಾನೇ ಬಿಡಿಸಿದ್ದು.