Tuesday, 10 February 2015

ನಿನ್ನೊಲವ ಕನವರಿಕೆಯಲ್ಲಿ....

ನಿನ್ನನ್ನೆಲ್ಲೋ ಕಳೆದುಕೊಂಡು ಬಿಟ್ಟೆನೇನೋ ಎಂಬ ಭಯ ಕಾಡುತ್ತಿದೆ ಕಾರಣವಿಲ್ಲದೆ ದೂರ ಮಾಡುತ್ತಿರುವ ನೀನು ಮತ್ತು ಹತ್ತಿರ ಬರಬೇಕೆಂದಿದ್ದರೂ ಬರಲಾರದೆ ನನ್ನನ್ನೇ ವಂಚಿಸಿಕೊಳ್ಳುತ್ತಿರುವ ನಾನು. ನಾನೆಂದು ನನಗೇ ನಾನು ಮೋಸ ಮಾಡಿಕೊಂಡವಳಲ್ಲ.  ನನಗೆ ಬೇಕಿರುವ ನನ್ನದು ಎಂದಾದ ಎಲ್ಲ ಮತ್ತು ಎಲ್ಲರ ಪ್ರೀತಿಯನ್ನು ಬಾಚಿ - ಬಳಿದುಕೊಳ್ಳಬಲ್ಲ ಮಹಾನ್ ಸ್ವಾರ್ಥಿ ನಾನು. ಆದರೂ, ನಿನ್ನೊಬ್ಬನ ಒಲವಲ್ಲಿ ಮಾತ್ರ ಆ ಮಟ್ಟಿನ ನಿಷ್ಟುರತೆ, ಸ್ವಾರ್ಥ ಮನೋಭಾವನೆ ಸಾಧ್ಯವಾಗುತ್ತಿಲ್ಲ.

     ನಿನ್ನ ಹೆಗಲ ಮೇಲೆ ತಲೆ ಇಟ್ಟು ಪ್ರಪಂಚದ ಪರಿವೆಯೇ ಇಲ್ಲದೆ ಮಲಗುವುದು ಬದುಕಿನ ದೊಡ್ಡ ಸಂಭ್ರಮ. ನಿನಗೆ ನಾನೇನು ಅಲ್ಲದೆ ಇರಬಹುದು ಆದರೂ ನಂಗೆ ನೀನೆಂದರೆ ಒಂದು ವಿಶಿಷ್ಟವಾದ ಮಧುರ ಭಾವ. ನನ್ನೀ ಪ್ರೀತಿನ ಹೇಳಬೇಕೆಂಬ ಬಯಕೆ ಸ್ವಲ್ಪವೂ ಇಲ್ಲ. ‘ನನ್ನ ಪ್ರೀತಿ ನನ್ನದು ನನ್ನ ಹಾಡು ನನ್ನದು’ ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುವ ಹುಡುಗಿ ನಾನು. ಹಾಗಂತ, ನಿನ್ನ ಸಾಂಗತ್ಯವೇ ಇಲ್ಲದೆ ಬದುಕಿ ಬಿಡುತ್ತೇನೆ ಎಂಬ ಹುಚ್ಚು ಹೊರಟು ಹೋಗಿದೆ. ನನ್ನೊಳಗೆ ತುಂಬಾ ಸುಸ್ತಾಗಿ ನಿನ್ನೆಡೆಗೆ ಬಂದಾಗ ನಿನ್ನದೊಂದು ಪ್ರೀತಿಯ ಸ್ಪರ್ಶಬೇಕು ನಂಗೆ. 

      ನನ್ನೊಳಗಿನ ನೀ ಎಂದರೆ ಇಂದಿಗೂ, ತಿರುವುಗಳ ಕಲ್ಪನೆಯೂ ಇಲ್ಲದ ದಾರಿಯಲ್ಲಿ ಕಿರುಬೆರಳ ಹಿಡಿದು ಸುಮ್ಮನೆ ಅದೆಷ್ಟೋ ದೂರ ನಡೆಸಿದ ಬರಿಗೈ ಫಕೀರ, ಬೆಳ್ಳಂಬೆಳಗ್ಗೆ ನನ್ನೊಲವ ರಾಗದ ಆಲಾಪಕ್ಕೆ ಸಾಥಿಯಾಗುವ ಷಡ್ಜ ಭಾವ, ರಾತ್ರಿಗಳಲ್ಲಿ ಚಂದ್ರನಿಗೂ ಹೊಟ್ಟೆ ಕಿಚ್ಚಾಗುವಷ್ಟು ಗಟ್ಟಿ ಬಿಗಿದಪ್ಪಿ ಲಾಲಿ ಹಾಡ ಹಾಡಿ ಕನಸುಗಳ ಕಟ್ಟಿಕೊಟ್ಟ ಬೆಳದಿಂಗಳ ಚೆಲುವ, ನಿನ್ನೆಡೆಗಿನ ಹುಚ್ಚು ಕನಸುಗಳ ಜಾತ್ರೆಯಲ್ಲಿ ನನ್ನೊಳಗೆ ನಾ ಕಳೆದು ಹೋದಾಗ "ಮಿಂಚಿ ಮುಳುಗುತಿಹ ನಶ್ವರನೆದೆಯಲಿ ಶಾಶ್ವತನೆಂದರೆ ನೀನೆ " ಎಂದು ಪಿಸುಗುಟ್ಟಿ ಭರವಸೆಯ ಬೆಳಕತಂದ ಒಲವ ಧ್ರುವತಾರೆ, ಸುಮ್ಮನೆ ಪ್ರೀತಿ ಬಂದಿತೆಂದು ಮುದ್ದಿಸಿ ಹೋಗುತ್ತಿದ್ದ ಪ್ರೀತಿಯ ಬಕಾಸುರ, ಇನ್ನೂ ಏನೇನೋ........ 
ಅದೆಲ್ಲಿಂದ ತರುತ್ತಿಯೋ ಹಸಿರು ಹಸಿರು ನೆನಪುಗಳನ್ನು ಬದುಕ ಕಟ್ಟಿಕೊಡಲಾರದವನೇ...... 
       ನಿನ್ನ ಪ್ರೀತಿಯ ನೆನಪು ಅದೆಷ್ಟಿದ್ದರೂ ಸಂತೃಪ್ತಳಲ್ಲ ನಾನು. ನನ್ನೊಳಗಿನ ಪ್ರೀತಿಯ ದಾಹ ಸಮುದ್ರದಂಥ ದೊಡ್ಡ ಮಟ್ಟಿನದು, ಅದಷ್ಟು ಸುಲಭಕ್ಕೆ ಇಂಗುವುದಿಲ್ಲ. ಹಾಗೆಯೇ, ಇನ್ನೊಂದು ಕಡೆ ಸಮುದ್ರದಷ್ಟು ದೊಡ್ಡ ಪ್ರೀತಿಗೆ ಪರಿತಪಿಸಿದರೆ ಎಲ್ಲಿ ಪುಟ್ಟ ಕೊಳದ ನೀರಿನಷ್ಟು ಪ್ರೀತಿಯೂ ಇಲ್ಲದಂತಾಗಿ ಬಿಟ್ಟೀತು ಎಂಬ ಭಯ. ನಿನ್ನನ್ನೆಂದು ಸಮುದ್ರವಾಗು ಸಮುದ್ರದಂಥ ಪ್ರೀತಿ ನೀಡು ಎಂದು ಕೇಳಲಿಲ್ಲ ನಾನು. ಗೊತ್ತು, ಸಮುದ್ರ ಎಂದು ಯಾರ ದಾಹವನ್ನು ತಣಿಸದು ಎಂದು ಅದೂ ಈ ಪರಿಯ ದಾಹವನ್ನು. ಅದಕ್ಕೆ ಕೊಳವಾಗು, ಕೊಳದ ನೀರಿನಷ್ಟೇ ಪ್ರೀತಿಯನ್ನಾದರೂ ನೀಡು ಎಂದರೆ ಅದಕ್ಕೂ ಒಪ್ಪದ ನಿನ್ನೀ ಉತ್ತರದ ಮೇಲೆ ಯಾಕೋ ಮುನಿಸು......
     
    ನಾನೆಂತಹ ಮಳ್ಳು ಹುಡುಗಿ ಎಂದರೆ ನಾಳೆಗಳ ಪರಿವೆಯೇ ಇಲ್ಲದೆ ನನ್ನೆಲ್ಲ ನಾಳೆಗಳಿಗೆ ನೀನು ಬೇಕು ಎಂಬ ಸಣ್ಣ ಆಸೆಯ ತೀವ್ರತೆಯನ್ನೂ ನಿನಗೆ ತಿಳಿಯಕೊಡದೆ,  ನನ್ನ ನಾಳೆಗಳಿಗೆ ನಿನ್ನೊಡನೆಯ ನೆನಪ ಪೇರಿಸುತ್ತ, ಈ  ಕ್ಷಣ ನಿನ್ನಾಸರೆಯ ನೆನಪಲ್ಲಿ, ನಿನ್ನ ಪ್ರೀತಿಯ ತಂಪಲ್ಲಿ ನಾನೇ ಪರಮ ಸುಖಿ  ಎಂದು ಬದುಕುತ್ತಿದ್ದೇನೆ. ನನ್ನ ಈ ಮಟ್ಟಿನ ಹುಚ್ಚು ಪ್ರೀತಿಯ ಸಣ್ಣ ಪರಿವೆಯೂ ಇಲ್ಲದೆ ನೀ ಕೊಟ್ಟ ಆ ಅಪರಿಮಿತ ಪ್ರೀತಿಯಲ್ಲಿ  ಮತ್ತೆ ಮತ್ತೆ ಪುಳಕಿತನಾಗುತ್ತಾ ನನ್ನೀ ಬಾಳನ್ನು ಧನ್ಯವಾಗಿಸಿಕೊಂಡಿದ್ದೇನೆ...

     ಬಹುಷಃ ನಿನ್ನಲ್ಲೂ ಎಲ್ಲೋ  ಭಯ ಕಾಡುತ್ತಿರಬಹುದು ಕೊಳದ ನೀರಿನಷ್ಟು ಪ್ರೀತಿ ಕೇಳುತ್ತಿರುವವಳೆಲ್ಲಿ ಸಮುದ್ರದ ಹಠಕ್ಕೆ ಬಿದ್ದುಬಿಟ್ಟರೆ ಎಂದು ಮೊದಲೇ ಸಮುದ್ರದಂಥ ಪ್ರೀತಿಯ ದಾಹವಿರುವ ಹುಡುಗಿ ಸುಲಭವೇನಲ್ಲ ಅಂತಹ ದಾಹ ತಣಿಸುವುದು. ಅದಕ್ಕೆ, ನನ್ನೊಳಗಿನ  ದಾಹಕ್ಕೆ ಕೊಳದ ನೀರಾಗಲೂ ಮನಸ್ಸುಮಾಡದೆ ಇದ್ದಾಂಗೆ ಇರಲಿ ಎಂದು ಸುಮ್ಮನಾದೆಯೇನೋ? 
   
 ಆಗೊಮ್ಮೆ ಈಗೊಮ್ಮೆ  ಜೊತೆ ನಡೆವ ನೀನು, ನನ್ನೊಲವ ಭಾವಗೀತೆ, ಜೊತೆಗೆ ನನ್ನೊಳಗೆ ನೀನೇ  ಮೀಟಿದ ಪ್ರೀತಿಯ ಆಲಾಪ ಇಷ್ಟೇ ಸಾಕು. ಇದರಿಂದ ಪೂರ್ಣ ಪ್ರಮಾಣದ ದಾಹ ತಣಿದೀತೆಂಬ ಭ್ರಮೆ ನನಗೂ ಇಲ್ಲ. ನಿನ್ನ ಪ್ರೀತಿಯಿಂದ  ನನ್ನಲ್ಲೊಂದು ಸಂತೃಪ್ತಿಯ ಭಾವ ಮೂಡಿದರೆ ಆ ಮಟ್ಟಿನ ಸಾರ್ಥಕತೆ ನನ್ನೀ ಬದುಕಿನದ್ದು. ಅದಕ್ಕೆ, ಬೊಗಸೆಯಷ್ಟಾದರೂ ನಿನ್ನೊಲವ ಸಿಹಿ ನೀರ ನೀಡಿ ಇಂಗಿಸೋ ಈ ಅಭಿಸಾರಿಕೆಯನ್ನ......

Monday, 3 November 2014

ಕೈ ಜಗ್ಗುವ ಬಂಧ ಹಾಗೂ ಕಣ್ಣನಿಲುಕಿನಾಚೆಯ ಗೆಲುವು...

ಪ್ರತಿ ಕತ್ತಲಿನ ಗರ್ಭದಲ್ಲೂ ಹಗಲೆಂಬ ಹಸುಗೂಸು ಹುಟ್ಟಿಬೆಳಗುವಂತೆ, ಕಳೆದುಕೊಂಡ ಪ್ರತಿ ಸಂಬಂಧದ ಜೊತೆಗೆ, ಪ್ರತಿ ಕನಸಿನ ಜೊತೆಗೆ ಮತ್ತೊಂದು ಹೊಸ ಭರವಸೆ ನಗುತ್ತದೆ. 

ದೇವರಿಗೂ ಬೇರೆ ಮಾಡಲಾಗದ ಸಂಬಂಧ ಎಂದು ನೀ ತಿಳಿದಿದ್ದ ಸಂಬಂಧವೊಂದು ನೆಲ ಕಚ್ಚಿದೆ ಎಂದಾದರೆ ದೇವರಿಗೆಲ್ಲೋ ಬೇರೆಮಾಡಲು ಸರಿಯಾದ ಕಾರಣ ಸಿಕ್ಕಿರಬಹುದು. ನೀನ್ಯಾಕೆ ಆ ಕಾರಣ ನೀನೇ ಎಂದು ತಿಳಿದುಕೊಳ್ಳುತ್ತೀಯ?? ಸರಪಳಿಯೊಂದು ಭದ್ರವಾಗಿರಬೇಕು ಎಂದಾದರೆ ಎರಡು ಕೊಂಡಿಗಳೂ ಮುಖ್ಯ ತಾನೇ? ನೀ ಬಲಿಷ್ಠನಾದರೂ ಮತ್ತೊಂದು ಬಲಹೀನನಾಗಿರಬಹುದು. ಅಲ್ಲದೇ, ಅದ್ಯಾವುದೋ ಬಿಟ್ಟು ಹೋದ ಸಂಬಂಧದ ಬೆನ್ನ ಹಿಂದೆ ನಿನಗೆ ಒಳಿತಾಗಲಿ ಎಂಬ ಹಾರೈಕೆಯಿರಬಹುದು. ಅದೆಲ್ಲೋ ದೂರದಿಂದಲೇ, ನಿನ್ನ ಕಣ್ಣೊಳಗಿನ ಕನಸಿಗೆ ರೆಪ್ಪೆ ಕೊಟ್ಟು ರಕ್ಷಣೆ ನೀಡುತ್ತಿರಬಹುದು. ಜೊತೆಯಿದ್ದು ಹೆಜ್ಜೆಯೊಡನೆ ಹೆಜ್ಜೆಯಿಟ್ಟರೆ ಮಾತ್ರ ಸಂಬಂಧವಾ ? ಪ್ರೇಮವಾ?? ನಂಬಿಕೆ ಎನ್ನುವ ಶಬ್ದವನ್ನೂ  ನಂಬದಂಥ  ಸ್ಥಿತಿ ಬಂದಿದೆ ಎಂದಾದರೆ ನಿನ್ನ ನೀ ನಂಬುವ ಕಾಲ ಬಂದಿದೆ ಎಂದಲ್ಲವಾ? ನಿನ್ನನ್ನೇ ನಂಬದವ ಪರರ ನಂಬುತ್ತೇನೆ ಎನ್ನುವುದು ಮೂರ್ಖತನವೇ  ಅಲ್ಲವಾ??

ಮುದ್ದು ಮನಸೇ,

ಯಾರಿಲ್ಲದೆಯೂ ಬದುಕಬಹುದು. ಬದುಕೇ ಶಾಶ್ವತವಲ್ಲ ಸಂಬಂಧಗಳು ಶಾಶ್ವತವಿರಲಿ ಎಂದು ಬಯಸುವುದು ಎಷ್ಟು ಸರಿ? ಹೀಗೂ ಇರಬಹುದು; ಬದುಕಿನ ಗೆಲವು ಮತ್ತು ವ್ಯಕ್ತಿಯೊಡನೆಯ ಪ್ರೇಮ ಯುದ್ಧದಲ್ಲಿ ಬದುಕಿನ ಗೆಲುವೇ ಗೆದ್ದಿರಬಹುದು.  ಬದುಕಿನ ಗೆಲುವಿನೆಡೆಗಿನ ನಿನ್ನ ಅಪರಿಮಿತ ಪ್ರೀತಿಯೆದುರು ವ್ಯಕ್ತಿಯೊಡನೆಯ ಪ್ರೇಮದ ಗೆಲುವು ಮರೆಯಾಗಿರಬಹುದು, ಹಾಗಂತ ವ್ಯಕ್ತಿ ಪ್ರೇಮದಿಂದ ದೂರಾಗುವುದು ಅಂತೇನೂ ಅಲ್ಲ. ಆದರೆ, ಬದುಕನ್ನು ಗೆದ್ದರೆ ನಿನ್ನ ನೀ ಗೆದ್ದಂತೆ, ನಿನ್ನ ನೀ ಗೆಲ್ಲುವುದು ಎಂಬುದು ಎಲ್ಲವನ್ನೂ ನೀಡುವಂತದ್ದು. ಆದ್ದರಿಂದ ವ್ಯಕ್ತಿ ಪ್ರೇಮವೇ ಬದುಕು ಎನ್ನುವುದಕ್ಕಿಂತ ಬದುಕ ಗೆಲುವಿನ ಭಾಗವಾಗಿ ವ್ಯಕ್ತಿ ಪ್ರೇಮವಿರುವುದು ಹೆಚ್ಚು ಶ್ರೇಷ್ಠ ಎನಿಸುತ್ತದೆ.  

ಬದುಕನ್ನು ಪ್ರೀತಿಸಿ ಗೆಲ್ಲುವುದು ಸುಲಭವಲ್ಲ ನಿಜ. ಆದರೆ,  ಪ್ರಾಮಾಣಿಕವಾಗಿ ಪ್ರೀತಿಸಿದರೆ ಯಾರಿಗೂ ನಿನ್ನಾಸೆಯ ಬದುಕನ್ನು ನಿನ್ನಿಂದ ದೂರಮಾಡಲು ಸಾಧ್ಯವಿಲ್ಲ. ನಿನ್ನೊಳಗನ್ನು ನೀ ಗೆಲ್ಲುವ ಆತ್ಮಧ್ಯಾನಕ್ಕೆ ವ್ಯಕ್ತಿ ಪ್ರೇಮ ಶಕ್ತಿ ಮಂತ್ರವಾಗಲಿ. ಪ್ರೇಮಿ ಅಥವಾ ಪ್ರೇಮಿಯ ನೆನಪು ಬದುಕ ಗೆಲುವಿನ ಹರಿವಿಗೆ ಸೇತುವೆ ಆಗಬೇಕೇ ಹೊರತಾಗಿ ದಿಬ್ಬವಾಗಬಾರದು.  

ಇನ್ನೆಂದೋ ತಿರುಗಿ ನೋಡಿದಾಗ ಸವೆಸಿದ ಹಾದಿಯ ತುಂಬಾ ನಿನ್ನೊಳಗನ್ನು ನೀ ಗೆಲ್ಲಲು ನೀ ಎತ್ತಿಟ್ಟ ಪರಿಶ್ರಮದ ಸಾರ್ಥಕ ಹೆಜ್ಜೆ ಗುರುತುಗಳಿರಬೇಕು. ಕಳೆದುಕೊಂಡ ಕಣ್ಣೀರಿನ ಹಸ್ತಾಕ್ಷರವಲ್ಲ.
ಕಳೆದು ಬಿಡು ನೋವುಗಳ ಖಾತೆಯಲ್ಲಿನ ಉಳಿತಾಯವನ್ನು; ನಿನ್ನೊಳಗಿನ ಗೆಲುವಿನ ಹಸಿವಿಗೆ. 

ಸಾವಿರ ಸೋಲುಗಳನ್ನು ಸೋಲಿಸಿ ಒಮ್ಮೆ ಗೆದ್ದು ಬಿಡು ಗೆದ್ದ ದಿನ ನಿನ್ನ ಪ್ರತಿ ಸೋಲು, ಪ್ರತಿ ಕಣ್ಣಿರೂ ಇತಿಹಾಸದ ಪುಟದ ದೊಡ್ಡ ದೊಡ್ಡ ಅಕ್ಷರದಲ್ಲಿ ಉಳಿಯುತ್ತವೆ. ಕಳೆದುಕೊಂಡ ಸಂಬಂಧಗಳು ಬೆನ್ನ ಹಿಂದಿನ ಮೆಟ್ಟಿಲಾಗಲಿ.  ಬದುಕಿನ ಗೆಲುವ ಪರ್ವತ ಏರಿದ ದಿನ ತಿರುಗಿ ನೋಡು ಮತ್ತೆಲ್ಲವೂ ನಿನ್ನದೇ.....   

ಗೆಲುವಿನ ಬೆಳಕಲ್ಲಿ ಬೆಳಗಿಬಿಡು ಒಮ್ಮೆ, ಬದುಕೂ ಬೆಳಗೀತು......  ಖುಷಿಯ ಕಣ್ಣಹನಿಯಲ್ಲಿ ಕಾಮನ ಬಿಲ್ಲಿನ ರಂಗು ಚಿಗುರೀತು.... 



Monday, 29 September 2014

ಎಲ್ಲ ಬರೀ ಪ್ರಶ್ನೆಗಳು.....

ಚಿತ್ರಿಸಿದಂತೆ ಚಿತ್ರಣವಾ.?
ಬೆಳಕು ಬಿದ್ದಷ್ಟೇ ಕಾಣುವುದಾ.?
ವಿವರಿಸಿದಂತೆ ವ್ಯಕ್ತಿತ್ವದ ಪರಿಚಯವಾಗುತ್ತದೆಯಾ.? 

ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತೆಗೆ ಪರಿಚಯಿಸಿದ ವ್ಯಕ್ತಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಅಲ್ಲವಾ...?
ಆ ಪರಿಣಾಮದ ಮೇಲೆಯೇ ಸಂಭಂದಗಳ ತೀವ್ರತೆ ನಿರ್ಧಾರವಾಗುವುದೇನೋ ಅಲ್ಲವಾ...? 
ಇಷ್ಟವಾದ ವ್ಯಕ್ತಿಯೊಬ್ಬ ತಪ್ಪನ್ನೇ ಮಾಡಿದರೂ ಅವನನ್ನು ದ್ವೇಷಿಸಲಾಗದೇ ಸದಾ ಕಾಲ ಮನದೊಳಗೆ ಯುದ್ದ ಮಾಡುವುದಕ್ಕೆ ಕಾರಣ - ವ್ಯಕ್ತಿ ನಮ್ಮೊಳಗೆ ಚಿತ್ರವಾದದ್ದು ತುಂಬಾ ಸುಂದರವಾಗಿ ಅನ್ನುವುದಾಗಿರಬಹುದಾ.?     

ವೈದ್ಯರು ನಮ್ಮೊಳಗೆ ಹೇಗೆ ಚಿತ್ರಿಸಲ್ಪಟ್ಟಿದ್ದಾರೆ ಎನ್ನುವುದರ ಮೇಲೆ ರೋಗವನೆದುರಿಸೋ ನಮ್ಮ ಶಕ್ತಿ ನಿರ್ಧಾರವಾಗುತ್ತದೆಯೇನೋ..?  
ನನಗೆ ನಾರಾಯಣನಂತೆ ಕಂಡವ ಇನ್ಯಾರಿಗೋ ಯಮದೂತನಂತೆ ಕಾಣಬಹುದು ಇದೇ ಕಾರಣಕ್ಕಾ ಒಂದೇ ರೋಗವಾದರೂ ಒಂದೇ ವೈದ್ಯ ಕಡಿಮೆ ಮಾಡುವಲ್ಲಿ ಅಸಮರ್ಥನಾಗುವುದು..?
  
ನನಗೆ ಆಗದ ಮನುಷ್ಯನನ್ನು ಯಾರೂ ಪ್ರೀತಿಸಬಾರದು ಎಂಬ ಕಾರಣಕ್ಕೋ ಅಥವಾ ನನ್ನ ಜೊತೆ ಒಳ್ಳೆಯವನಾಗದವ ಇನ್ಯಾರಿಗೂ ಒಳ್ಳೆಯವನಾಗಲು ಸಾಧ್ಯವೇ ಇಲ್ಲ ಎಂಬ ನಮ್ಮ ಮನದ ಪೂರ್ವಾಗ್ರಹಕ್ಕೋ ಎಲ್ಲೆಡೆ ಅವನನ್ನು ಕೆಟ್ಟವನನ್ನಾಗಿ ಬಿಂಬಿಸುತ್ತೇವಾ..?    
ಅಥವಾ ನನಗೆ ಒಳ್ಳೆಯವನಾದವ, ನನಗೆ ಆಪ್ತನಾದವ ಎಲ್ಲರಿಗೂ ಒಳ್ಳೆಯವನಾಗುತ್ತಾನೆ ಎಂದು ಖಡಾಖಂಡಿತ ನಿರ್ಧರಿಸಿಬಿಡುತ್ತೇವಾ.? 
ಎರಡೂ  ಒಂದು ರೀತಿಯಲ್ಲಿ ತಪ್ಪೇ ಅಲ್ಲವಾ.? 
ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ಇಲ್ಲೇ  ಬಾ ಎಂದು ಹೇಳಲು ಸಾಧ್ಯವಾ.?
ಅದು ಸಮಂಜಸವಾ.? 
ನನಗೆ ಸರಿ ಆದದ್ದು ಎಲ್ಲರಿಗೂ ಸರಿಯಾಗುತ್ತದೆ ಎಂದು ಊಹಿಸುವುದು ಅರ್ಧ ಸತ್ಯವಲ್ಲವಾ.?
ಅರ್ಧ ಸತ್ಯವನ್ನೇ ಬದುಕಿನ ಮಹಾ ಸತ್ಯ ಎಂಬಂತೆ ವರ್ತಿಸೊದು ನಮ್ಮ ಮನಸಿನ ಹೊಣೆಗೇಡಿತನವಲ್ಲವಾ.?
ನಮಗೆ ಕಾಣೋದು ನಮ್ಮ ಮೂಗಿನ ನೇರ ಮಾತ್ರ.. ಎದುರಿನವರ ಕಾಣುವಿಕೆ ಬೇರೆಯೇ ಇದ್ದೀತು ಮತ್ತದು ಹೆಚ್ಚಿನ ಸಲ ಬೇರೆಯೇ ಇರುತ್ತೆ ಕೂಡಾ ಅಲ್ಲವಾ..? 

ಕೇವಲ ಒಂದು ಪಾರ್ಶ್ವವನ್ನು ನೋಡಿ ಅಭಿಪ್ರಾಯವನ್ನು ಕೊಟ್ಟುಬಿಡುವುದು ಸುಲಭವೇ ಆದರೆ ಅದರ ಪರಿಣಾಮ..? 

ಒಬ್ಬ ವ್ಯಕ್ತಿಯ ಬಳಿ ಮಾತನಾಡದೆ ಸ್ವಭಾವಗಳ ಪರಿಚಯ ಮಾಡಿಕೊಳ್ಳದೇ ಮನುಷ್ಯ ಒಳ್ಳೆಯವ ಅಥವಾ ಕೆಟ್ಟವನು ಎಂದು ನಿರ್ಧರಿಸುವುದರಿಂದ ಆಗುವ ಉಪಯೋಗವೆಷ್ಟು ಹಾಗೆಯೇ ಅನಾಹುತಗಳೆಷ್ಟು..? 
“ಕುಂತಿ ಕೌರವರನ್ನು ಚಿತ್ರಿಸಿದಂತೆ ಪಾಂಡವರು  ಬೆಳೆದರು, ಗಾಂಧಾರಿ ಪಾಂಡವರನ್ನು ಹೇಗೆ ಚಿತ್ರಿಸಿದಳೋ ಹಾಗೆಯೇ  ಕೌರವರು ಬೆಳೆದದ್ದು...  ಅದಕ್ಕೇ ಅಲ್ಲವಾ ಕುರುಕ್ಷೇತ್ರದಲ್ಲಿ  ಯುದ್ಧವಾದದ್ದು..?” 

ವ್ಯಕ್ತಿ  ನನಗೆ ಏನು ಮತ್ತು ವ್ಯಕ್ತಿ ನಿಜವಾಗಿ ಏನು ಎನ್ನುವುದರ ಮಧ್ಯೆ ಇರುವ ವ್ಯತ್ಯಾಸವನ್ನು ಯೋಚಿಸಿಕೊಳ್ಳದೆ ದ್ವೇಷವನ್ನು ಮಾಡುವುದರಿಂದ ದ್ವೇಷ ಮನೋಭಾವಗಳು ತಲೆಮಾರುಗಳನ್ನು ದಾಟಿದರೂ ಜೀವಂತವಾಗಿರುತ್ತವೆ... ಅಂತೆಯೇ ಪ್ರೀತಿ ಕೂಡ... ಹಾಗನ್ನಿಸಲ್ಲವಾ..?

ಪ್ರೀತಿಗೆ ಕಾರಣ ಬೇಕಿಲ್ಲ ನಿಜ; ಕೆಲವೊಂದು ಕಾರಣಗಳನ್ನು ಬಿಟ್ಟು...
ಪ್ರೀತಿಯಿಂದ ಅನಾಹುತಗಳು ಕಡಿಮೆ...(?)
ಆದರೆ ದ್ವೇಷ.....?
ನಮ್ಮ ಕಲ್ಪನೆಯಲ್ಲೇ ಚಿತ್ರಿಸಿಕೊಂಡಿದ್ದಾದರೆ,  ಕಾಲ ಕ್ರಮೇಣ ಅಳಿಸಿ ಹಾಕಬಹುದೇನೋ...
ಅದೇ ತೀರ ಆತ್ಮೀಯರು ಮೂಡಿಸಿದ ಚಿತ್ರ ಅಳಿಸುವುದು ಸುಲಭವಲ್ಲ ಅಲ್ಲಿ ವ್ಯಕ್ತಿಯ ಪರಿಣಾಮ ತೀವ್ರತರದಲ್ಲಿರುತ್ತದೆ ಅಂತನ್ನಿಸಲ್ಲವಾ...? 

ಅದಕ್ಕೆಂದೇ  ಯಾವುದೇ ವ್ಯಕ್ತಿಯನ್ನು ಇನ್ನಾರಿಗೋ ಪರಿಚಯಿಸುವಾಗ ನನಗೆ ಏನು ಹಾಗೂ ನನ್ನೊಡನೆ ಹೇಗೆ ಎಂಬ ವೈಯಕ್ತಿಕ ಭಾವದಲ್ಲಿ ಆತನನ್ನು ಚಿತ್ರಿಸಿ ಕೊಡುವುದಕ್ಕಿಂತ  ಅಥವಾ ಕೇವಲ ನಮ್ಮ ಅಭಿಪ್ರಾಯವನ್ನು ಅಷ್ಟು ಪರಿಣಾಮಕಾರಿಯಾಗಿ ಹೇಳುವ ಬದಲು ಸಾಮಾಜಿಕವಾಗಿ ಮತ್ತು ನನ್ನಿಂದಾಚೆ ವ್ಯಕ್ತಿ ಹೇಗೆ ಎಂಬುದನ್ನೂ ಪ್ರಾಮಾಣಿಕವಾಗಿ ವಿವರಿಸಿ ಹೇಳಿದರೆ ಇನ್ಯಾರದ್ದೋ ಮನದಲ್ಲಿ ವ್ಯಕ್ತಿಯೊಬ್ಬನ ಬಗ್ಗೆ ಮೂಡುವ ಅಭಿಪ್ರಾಯದಲ್ಲಿ ನಮ್ಮ ಪಾತ್ರ ಕಡಿಮೆ ಇದ್ದೀತು ಅಲ್ಲವಾ...? 

ಯಾಕೋ ಹೀಗೆಲ್ಲ ಅನ್ನಿಸಿತು... ನನ್ನ ಮಾತುಗಳು ಕೂಡ ತಪ್ಪು ಅಥವಾ ಅರ್ಧ ಸತ್ಯವೇ ಇದ್ದೀತು ಅಲ್ಲವಾ....???

ಈಗ ನಿಮ್ಮ ಮಾತನ್ನು ಹೇಳಿ...