Friday 15 May 2020

ನಿನ್ನ ನಾಳೆಗಳಿಗೆ....

ಅದ್ವಿತ್ ಕಂದಾ.......  




ನೀ ಹುಟ್ಟಿ ಇಂದಿಗೆ ಒಂದು ವರುಷ ಒಂಭತ್ತು ತಿಂಗಳು  ಕಳೆದು ಹೋದವು. ಆದರೆ ಇಂದಿನ ಪರಿಸ್ಥಿತಿ ಇದೆಯಲ್ಲ ನಾನುಬರೆಯಲೇಬೇಕು. 

ನಿಂಗೆ ಇದೆಲ್ಲ ಇಂದು  ಅರ್ಥವಾಗದು. ಗೊತ್ತು ನಂಗೆ, ಆದರೆ ನಿನ್ನ ಸುತ್ತಲಿರುವ ನಮ್ಮಗಳ ಇಂದಿನ ಬದುಕು ಇದುವೇ. 

ಇವತ್ತಿಗೆ ನಾವೆಲ್ಲ ಮನೆಯಲ್ಲೇ ಬಂಧಿತರಾಗಿ ಸರಿ ಸುಮಾರು ೬೦ ದಿನಗಳಾದವು. ಹಕ್ಕಿಗಳಂತೆ ಹಾರಡಿಕೊಂಡು ಯಾವ ಮಿತಿಗಳಿಲ್ಲದೆ ಬದುಕುತ್ತಿದ್ದ ನಮ್ಮಗಳಿಗೆ ನಿಜಕ್ಕೂ ಈ ಬಂಧನ ಒಂಥರಾ ಕಷ್ಟವೇ ಸರಿ. 

ಈ ವರುಷ, ಪ್ರಾರಂಭದಿಂದಲೂ ಒಂದಷ್ಟು ಭಯ, ನೋವು-ನಿರಾಸೆಯನ್ನೇ, ಹೊತ್ತು ಬಂದಿದೆ. ಈ ಸಂವತ್ಸರಕ್ಕೆ ಹೆಸರು ಶಾರ್ವರಿ ಅಂತ. ಅಂದರೆ ಕತ್ತಲೆ ಎಂದರ್ಥವಂತೆ. ಹೆಸರು ಚಂದವೇ, ಆದರೆ ಈ ಯುಗಾದಿಯ ಆಚೀಚೆಯ ಕ್ಷಣಗಳಿವೆಯಲ್ಲ, ಅದು ಭಯಂಕರ. ವಿಕಾರಿ ಸಂವತ್ಸರ ಕಳೆದು ಶಾರ್ವರಿ ಬಂದಿದೆ. ವಿಕಾರಿಯ ಹೋಗುವ  ದಿನಗಳು ಹುಟ್ಟಿಸಿದ್ದು ಸಾವಿನ ಭಯಗಳನ್ನ. 

ನಿನ್ನ ಮುದ್ದು ಭಾಷೆಯಲ್ಲಿ ಹೇಳುವುದಾದರೆ ಇದೊಂದು ಕಣ್ಣಿಗೆ ಕಾಣದ ಗುಮ್ಮಾ. ಅದರ ಹೆಸರು ಕೊರೊನ, ಭಯ ಭೀಕರವಾದದ್ದು. ಇದು ಚೀನಾ ದೇಶದಿಂದ ಬಂದ ಸಾವಿನ ಬುತ್ತಿ. ಕಣ್ಣಿಗೆ ಕಾಣದ, ಆದರೆ ಅದೆಷ್ಟೋ ಜೀವವನ್ನೇ ತಿನ್ನುತ್ತಿರುವ ಸಧ್ಯದ ನರಭಕ್ಷಕ. ಚಿಕಿತ್ಸೆ ಇಲ್ಲದ, ಇದಕ್ಕೆ ನಾವುಗಳು ಹೆದರಿ ಕುಳಿತಿದ್ದೇವೆ. 

ದಿನ ನಿತ್ಯ ನಿಲ್ಲಲೂ, ಜಾಗವಿಲ್ಲದಂತೆ ಇರುವೆಗಳಂತೆಯೇ ಗಿಜಿಗುಡುತ್ತ ಇದ್ದ ಈ ಮಹಾನಗರಿ ಇಂದು ಅಕ್ಷರಶಃ ಖಾಲಿಯಾಗಿದೆ. ಹೊಗೆ, ಗಾಳಿ, ವಾಹನಗಳ ಶಬ್ದಕ್ಕೆ ನಿರ್ಜೀವವಾಗಿದೆ. ಒಂಥರಾ ಭೂಮಿ ನಿಲ್ಲುವುದನ್ನೇ ಮರೆತಂತೆ ಭಾಸವಾಗುತ್ತಿದೆ.  ಈ ನಗರಿ ಇಂದು ಕಂಡಕಂಡಲ್ಲಿ ಹೂ ಬಿಟ್ಟು ಚಂದಗೆ ನಿಂತಿದೆ, ಆದರೆ ಈ ಸೌಂದರ್ಯವ ಸವಿಯುವವರು ಯಾರು. ಸಾವಿನ ಭಯ ಯಾವ ಸುಖವನ್ನು ಆಸ್ವಾದಿಸಲು ಬಿಡುವುದಿಲ್ಲ ಅಲ್ಲವಾ?

ಮೌನ ಮತ್ತು ಖಾಲಿತನವಿದೆಯಲ್ಲ, ಅದು ನಮ್ಮನ್ನು ತೀರಾ ಆಂತರಿಕವಾಗಿ ಸುಟ್ಟು  ಬಿಡುತ್ತದೆ.  ಅರ್ಥವಾಗಿದ್ದು ಏನು ಗೊತ್ತ?ಮನುಷ್ಯ ಬದುಕುವ ಖಾಯಿಲೆಗೆ ಬಿದ್ದು ತನ್ನ ತನವನ್ನೇ ಮರೆತುಬಿಟ್ಟಿದ್ದ. ಆದರೆ ಈ ಕ್ಷಣವಿದೆಯಲ್ಲ, ನಾವು ಯಾರು? ನಮ್ಮ ಮೂಲ ಬಯಕೆ ಏನು? ಎಂದು ಜ್ಞಾಪಿಸುತ್ತಿದೆ. ದುಡ್ಡು,ಕೆಲಸ ಅಂತೆಲ್ಲ ಯಾವುದರ ಹಿಂದೆ ಎಂದೇ ಗೊತ್ತಿಲ್ಲದೆ ಓಡುತ್ತಲೇ ಇದ್ದೇವೋ,  ಒಂದೇ ಸಮನೆ ನಿಂತಲ್ಲೇ ನಿಂತು ಬಿಟ್ಟಂತಾಗಿದೆ. ಆದರೆ ವಿಚಿತ್ರವೆಂದರೆ ಈ ಜ್ಞಾನೋದಯಕ್ಕೆ ಕಾರಣ ಜೀವ ಭಯ. ನಗರ ನಮ್ಮನ್ನು ಸೆಳೆಯುವುದೇ ಈ ಜೀವಂತಿಕೆಯ ಮುಖವಾಡದಿಂದ. ಆದರೆ ಇಂದು ಮುಖವಾಡಗಳಿಲ್ಲದೇ ತಲೆ ತಗ್ಗಿಸಿ ನಿಂತಿದೆ. 

ಮನುಷ್ಯನ ಬದುಕಿಗೆ ನೆಮ್ಮದಿ,ಪ್ರೀತಿ, ಸಹಬಾಳ್ವೆಯೇ ಮುಖ್ಯ. ದ್ವೇಷದಿಂದ,  ಅಸೂಯೆಯಿಂದ ಕಲಿಸಲಾಗದನ್ನು, ಈ ಕಾಲವೇ ಕಲಿಸಿದೆ. ಆದರೆ ನಾವುಗಳು ಎಷ್ಟು ಕಲಿಯುತ್ತೇವೆ? ಯಾರಿಗೆ ಗೊತ್ತು!!!

ಒಂದು ಕಡೆ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಇನ್ನೊಂದು ಕಡೆ ಸಾವಿನ ಸಂಖ್ಯೆಯೂ... ಆದರೆ ಮತ್ತೊಂದು ಕಡೆ ಜನ ಸಾವನ್ನು ಗೆದ್ದ ಮೃತ್ಯುಂಜಯರಂತೆ ಓಡಾಡಿಯುತ್ತ, ಮೈ ಮರೆಯುತ್ತಿದ್ದಾರೆ. ಸರ್ಕಾರ ಯೋಜನೆಯ ಹೆಸರಲ್ಲಿ, ಕಾನೂನಿನ ಹೆಸರಲ್ಲಿ,  ನಮ್ಮ ರಕ್ಷಣೆಗೆ ನಿಂತರೆ ನಾವಿಲ್ಲಿ ಜೀವದ ಹಂಗು ಇಲ್ಲದೆ ತಿರುಗುತ್ತಿದ್ದೇವೆ. 

ಕಂದಾ.. 

ಇದನಂತೂ ಹೇಳಲೇಬೇಕು. ಪೊಲೀಸರು, ಡಾಕ್ಟರ್, ಸ್ವಚ್ಛಮಾಡುವವರು, ಇಂದಿನ ನಿಜವಾದ ದೇವರು. ನಮ್ಮಗಳ ಬದುಕಿಗಾಗಿ, ನಮ್ಮ ನಾಳೆಗಳಿಗಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನ ನಾವು ನೆನೆಯಲೇಬೇಕು. 

ನಾವಿಲ್ಲಿ ಮನೆಯಲ್ಲೇ ಬಂಧಿತರಾಗಿದ್ದೇವೆ. ನಿಂಗೆ ಬೇಸರ ನಾಲ್ಕು ಗೋಡೆಯ ಮಧ್ಯೆ ಇದ್ದು ನಮಗೂ ಬೇಸರವೇ. ಹೇಳಿಕೊಳ್ಳಲು ಬಾರದ ನೀನು, ಮತ್ತೆ ಹೇಳುತ್ತಲೇ ಒಪ್ಪಿಕೊಂಡು ಬದುಕಬೇಕಾದ ನಾವುಗಳು. 

ಸತ್ತೇ ಹೋಗಿಬಿಡುತ್ತೇವೆ ಅಂತಲ್ಲ... ಆದರೆ ನಮ್ಮ ನಾವು ಕಾಯ್ದುಕೊಳ್ಳದಿದ್ದರೆ ಇಲ್ಲೇ ಎಲ್ಲೋ ಸುಳಿದಾಡುತ್ತಿರುವ ಸಾವು ಬಂದು ತಬ್ಬಿಯೇ ಬಿಡುತ್ತದೆ. 

ಯುದ್ಧದ ದಿನಗಳ ಕಾಣದ ನಾವು ಇದೊಂದು ಹೊಸ ದಿಗ್ಬಂಧನಕ್ಕೆ ಸಿಕ್ಕಿಕೊಂಡಿದ್ದೇವೆ.  

ನೀನು ದೊಡ್ಡವನಾದ ಮೇಲೆ ಇದನೆಲ್ಲ ಓದಲಿ ಮತ್ತು ನಿನ್ನ ತಲೆಮಾರಿಗೆ ಇದು ಇತಿಹಾಸದಲ್ಲಿ ಮಾತ್ರ ಇರಲಿ, ಎಂಬ ಆಶಯ ಅಷ್ಟೆ.  ಈ ಜೀವಭಯ ನಮ್ಮಗಳಿಗೇ ಮುಗಿದು ಹೋಗಲಿ ಮತ್ತು ಇಂದಿನ ನಮ್ಮ ಬದುಕಿನ ಪಾಠಗಳು ನಿನಗೆ ಕಲಿಕೆಯಾಗಲಿ ಅಂತಷ್ಟೇ. 




Wednesday 22 April 2020

ಒಳಗಿನ ಕಿವಿಗೊಂದು ಕಿವಿಮಾತು

ಮನಸೇ... 

ಇದು ಅಂತ್ಯಂತ ಕಷ್ಟ ಕಾಲ ಮನುಷ್ಯ ಮನುಷ್ಯನ ಮುಖ ನೋಡಲು, ಪ್ರೀತಿಯ ಹಸ್ತ ನೀಡಲೂ ಭಯ ಪಡುತ್ತಿರುವ ಭಯಾನಕ ಕ್ಷಣಗಳು. ಎಲ್ಲವನ್ನೂ ಗೆದ್ದೇ ಎಂದು ಬೀಗುತ್ತಿದ್ದವನಿಗೆ ಸಾವನ್ನು ಗೆದ್ದಿಲ್ಲ ಎಂಬ ಆತ್ಮ ವಿಮರ್ಶೆಯ ಕಾಲ. 

ನಾವುಗಳು ಅದೆಷ್ಟು ಬೀಗುತ್ತಿದೆವು. ಎಲ್ಲವನ್ನೂ ಮುಷ್ಟಿಯಲ್ಲಿ ಬಿಗಿಹಿಡಿಯಬಲ್ಲೆವು ಎಂಬ ಭ್ರಮೆಯಲ್ಲಿ. ಯಾರೂ ಇಲ್ಲದೆಯೂ ಬದುಕಬಲ್ಲೆವು ಎಂಬ ಹುಚ್ಚು ಧೈರ್ಯದಲ್ಲಿ. ಗಗನಕ್ಕೆ ಹಾರುತ್ತೇವೆ ಎಂದು ಭುವಿಯೆಡೆಗೆ ನಿರ್ಲಕ್ಷ ತೋರುವಷ್ಟು, ಅದೆಷ್ಟು ಬ್ಯುಸಿ ಆಗಿದ್ದೆವು ಸಂಬಂಧಗಳ ಮರೆವಷ್ಟು, ಅದೆಷ್ಟು ಅಹಂ ಭಾವ. ಅಹಂ ಸರ್ವಂ. 


ಆದರೆ ಈ ಕ್ಷಣ, ನಾಳೆಗಳ ಕಲ್ಪನೆಯೇ ಇಲ್ಲ ಕನಸುಗಳ ಕಾಣಲೂ ಭಯ, ಕನಸ ಕಟ್ಟಿಕೊಂಡು ಮಾಡುವುದೇನಿದೆ. ಇಂದು ಈ ಕ್ಷಣ ಅಂತ ಬದುಕಬೇಕು. ಯಾವ ಕ್ಷಣದಲ್ಲಿ ಯಾವ ರೋಗ ಬಂದು ಯಾರ ಬಲಿಪಡೆಯುತ್ತದೋ, ಕಂಡವರು ಯಾರು? ನಾವು ಬೀಗಿದ, ಖುಷಿಯಿಂದ ಓಡಾಡಿದ ರಸ್ತೆಗಳಲ್ಲಿಇಂದು  ನಡೆಯಲೂ ಹಿಂಜರಿಯಬೇಕು. ಇಷ್ಟೊಂದು ಜನಗಳ ಕಂಡು ಅಚ್ಚರಿ ಪಟ್ಟ ನನ್ನದೇ ಕಣ್ಣುಗಳೂ, ಇಂದಿನ ರಸ್ತೆಗಳ ಖಾಲಿತನಕ್ಕೆ, ಮೌನಕ್ಕೆ ಹೆದರಿ ನಡುಗಿ ಹೋಗಿದೆ. ಇದು ಇನ್ನೆಷ್ಟು ದಿನ ಎಂಬ ಉತ್ತರವಿಲ್ಲದ ಪ್ರಶ್ನೆಯ ಮತ್ತೆ ಮತ್ತೆ ಕೇಳಿಕೊಂಡು ಸೋತು ಹೋಗಿದೆ.ಎಷ್ಟೊಂದು ಮುಖವಾಡಗಳ ಹೊತ್ತು ಬದುಕುತ್ತಿದ್ದೆವು ನಾವು, ಇಂದು ಯಾವುದೂ ಇಲ್ಲ ಮನುಷ್ಯ ತನ್ನವರನ್ನು ಕಾಪಾಡಿಕೊಳ್ಳಲು ಅದೆಷ್ಟು ಹೋರಾಡುತಿದ್ದಾನೆ. ಯುಧ್ಧ, ಭಯೋತ್ಪಾದನೆಯಲ್ಲಿ ಇರದ ಜೀವ ಭಯವನ್ನು ಈ ರೋಗ ಹುಟ್ಟುಹಾಕಿದೆ. 

ಹೇ ನನ್ನೊಳಗಿನ ಕಿವಿಯೇ... 

ಇದರಿಂದ ಒಂದಷ್ಟು ಬದುಕ ಪಾಠ ಕಲಿಯಬೇಕು ನೀನು. 

ನೆನಪಿಟ್ಟುಕೋ ನೀನು ಒಂದು ಪುಟ್ಟ ಜೀವ ಇಲ್ಲಿ ನಿನಗಿಂತ ಅವಶ್ಯಕವಾಗಿದ್ದು ಸಾವಿರವಿದೆ.  ಅಷ್ಟಕ್ಕೂ, ನೀನು ಭುವಿಗೆ ಅವಶ್ಯಕತೆಯೇ ಅಲ್ಲ. ಇಲ್ಲಿ ಇರುವಷ್ಟೂ ದಿನ ಪ್ರೀತಿ ಸ್ನೇಹಗಳ ನೀಡುಕೈಯಾಗಿರು ನಾನೇನು ಪಡೆದೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ, ಯಾಕೆಂದರೆ ನಿನ್ನ ಹುಟ್ಟು ಪಡೆಯಲಲ್ಲ, ಕೊಡಲು. ನಿನ್ನ ಕೈಲಾದ ಸಹಾಯ ಮಾಡು.  ಹಾ,! ಸಹಾಯವೆಂದರೆ ಬರಿಯ ದುಡ್ಡಿನದಲ್ಲ. ನೊಂದವನಿಗೆ ಬರಿಯ ದುಡ್ಡಿನ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದಿತು. ಮರು ಪ್ರೀತಿಯ ಹಂಬಲವಿಲ್ಲದೇ ಪ್ರೀತಿ ಕೊಡು, ಇಲ್ಲಿ ಕೊಟ್ಟ ಪ್ರೀತಿ ಇನ್ನೆಲ್ಲಿಂದಲೋ ನಿನ್ನೆಡೆಗೆ ಅನಾಯಾಸ ಹರಿದು ಬಂದೀತು, ಬರುತ್ತೆ.  ಎಲ್ಲೋ ಸಿಗುವ ಯಾರನ್ನೋ ಪ್ರೀತಿಸಬೇಕಂತಲ್ಲ, ಕಡೆಗೆ ನಿನ್ನವರನ್ನ ನಿನ್ನ ಸುತ್ತಲಿರುವವರನ್ನು ಪ್ರೀತಿಸುವ ಶ್ರೀಮಂತಿಕೆ  ಬರಲಿ.

ಹೊರಗೆ ಕಾಲಿಟ್ಟರೆ ರೋಗ ಅಂಟುವ ಈ ದಿನಗಳಲ್ಲಿ ಮನೆಯಲ್ಲೇ ಕುಳಿತು ದಿನಗಳ ಲೆಕ್ಕಹಾಕುತ್ತಿರುವ ನಿಂಗೆ ಮನಸಿನ ರೋಗ ಅಂಟದಿರಲಿ ನಿನ್ನೊಳಗಿನ ಭಾವ ಗಂಗೆ ಪ್ರೇಮದ ರೂಪ ಪಡೆದು ಧುಮ್ಮಿಕ್ಕಲಿ. 

Sunday 22 March 2020

ಒಳಗಿನಲೆ.....

ಹೇ ಆತ್ಮಸಖನೇ.. 

ಒಂದಷ್ಟು ಪ್ರಶ್ನೆಗಳಿವೆ ನಂಗೆ....

ಹುಟ್ಟಿದೊಡನೆಯೇ ಸಾವೂ ನಿಶ್ಚಯ, ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೂ ಯಾಕೆ ಈ ನೋವು ನಲಿವಿನ ಹುಡುಕಾಟದ ಹುಚ್ಚು. ಯಾಕೆ ಉಸಿರಿರುವ ತನಕ ಸುಮ್ಮನೆ ಬದುಕಲಾಗದು.  ಅಮೃತವನ್ನ  ಕುಡಿದು ಬಂದವರಂತೆ  ಬದುಕುವ ಆಸೆ ಯಾಕೆ? ಆತ್ಮಕ್ಕೆ ಸಾವಿಲ್ಲವಂತೆ ಅಂದರೆ ದೇಹದ ಕಾಳಜಿ ಏಕೆ? ಆತ್ಮ ಅಶುದ್ಧವಾಗದಂತಲ್ಲವಾ ಕಾಯ್ದುಕೊಳ್ಳಬೇಕಾಗಿರುವುದು. ಉಸಿರು ಹೋದಮೇಲೆ ಸುಟ್ಟು  ಬಿಡುವ ದೇಹದ ಬಗ್ಗೆ ಈ ಪರಿಯ ಕಾಳಜಿ ಯಾಕೆ?  

ನಾವುಗಳು ಇಷ್ಟೊಂದು ಪ್ರೀತಿಸುತ್ತೇವೆ ಎಂದಾದರೆ ಅತ್ಮಕ್ಕಿಂತ ದೇಹವೇ ಮುಖ್ಯವಾ? ಇಲ್ಲವೆಂದಾದರೆ ಯಾಕೆ ವ್ಯಕ್ತಿಯನ್ನು ಆತ್ಮಶುದ್ಧಿಯಿಂದ ಅಳೆಯದೇ ಬರಿಯ ದೇಹದ ಸೌಂದರ್ಯದಿಂದ ಮೆಚ್ಚಿಕೊಳ್ಳುವುದು. 

ಒಂದಿನ ಹಿಂಗೊಂದು ಪ್ರಶ್ನೆ ಕೇಳಿದ್ದೆ ಗುರುಗಳಲ್ಲಿ, ಧರ್ಮರಾಜ ಸತ್ಯವಂತ,ನೀತಿವಂತ ಮಾತಿಗೆ ತಪ್ಪದವ, ತಪ್ಪನ್ನೇ ಮಾಡದವ ಆದರೆ ಕೃಷ್ಣನ ಆಪ್ತ ಗೆಳೆಯ ಪಾರ್ಥ. ಕೃಷ್ಣ ಹೇಳಿದಂತೆ ಕೃಷ್ಣ ತನ್ನನ್ನು ಕಂಡುಕೊಂಡಿದ್ದು ಒಬ್ಬ  ಸಾಮಾನ್ಯ ಕೋಪ-ತಾಪಗಳಿರುವ, ಅತೀ ಸಾಮಾನ್ಯ ಮನುಷ್ಯನಾದ ಅರ್ಜುನನಲ್ಲಿ. ಅಂದರೆ ದೈವತ್ವವಿರಿದು ಧರ್ಮಜನಲ್ಲೋ ಅಥವಾ ಅರ್ಜುನನಲ್ಲೋ? 

ಒಬ್ಬ ಮನುಷ್ಯನ ಸಾಮಾನ್ಯ ಗುಣಗಳು ಎಂದರೆ ಏನು?  ಧರ್ಮಜನಂತೆ ಸಮಚಿತ್ತದ ಮನಸಾ?  ತಪ್ಪೇ ಮಾಡದ ಯಾವುದಕ್ಕೂ ಭಾವನಾತ್ಮಕವಾಗಿ ಅಭಿವ್ಯಕ್ತಿಯೇ ಇಲ್ಲದ ಯುಧಿಷ್ಠಿರನ? ಇಲ್ಲ   ಅರ್ಜುನನಂತೆ ಸಿಟ್ಟು ಸೆಡವು ಪ್ರೀತಿಯ ಸಾಮಾನ್ಯ ಗುಣಗಳ? 

ಇನ್ನು ಅರ್ಜುನನಂತೆ ಭಾವಗಳ ಜೊತೆ ಬದುಕುವುದೇ ದೇವರ ಸ್ವರೂಪ ಎಂದಾದರೆ ನಾವುಗಳು ಸತ್ಯ ಧರ್ಮದ ಹುಡುಕಾಟ ಮಾಡುತ್ತ ಅದರ ಪರಿಮಿತಿಯಲ್ಲಿ ಮನುಷ್ಯನನ್ನು  ಒಳ್ಳೆಯವನು ಕೆಟ್ಟವನು ಎಂದು ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ?

ಕೃಷ್ಣ ರಾಧೆಯನ್ನು ಮದುವೆ ಆಗಬೇಕು‌ ಎಂದಾಗ ಅವನ‌‌ ಗುರುಗಳು ಹೇಳಿದ್ದರಂತೆ, ನಿನ್ನ ಹುಟ್ಟಿನ ಕಾರಣ ಬೇರೆಯೇ ಇದೆ. ನೀನು ಪ್ರಪಂಚದ ಪ್ರೇಮವಾಗಬೇಕು ಬರಿಯ ರಾಧೆಗೆ ಸೀಮಿತವಾಗಬಾರದು ಎಂದು. ಬರಿಯ ಕೃಷ್ಣನ‌ ಹುಟ್ಟಿಗೊಂದೇ ಕಾರಣಗಳಿರಲಾರದು ನಮ್ಮಂತ ಸಾಮಾನ್ಯ ಜೀವಿಯ ಸೃಷ್ಟಿಗೂ ಕಾರಣಗಳಿರಬಹುದು ಅಲ್ಲವಾ? ತಪ್ಪು ಸರಿಗಳೆರಡನ್ನೂ ನಮ್ಮಿಂದಲೇ ನಡೆಯುತ್ತವೆ ಎಂದಾದರೆ ಇದೂ ಸೃಷ್ಟಿಯ ಕಾರಣಗಳೇ ಇರಬಹುದಾ?

ದೈವವೇ...

ಪ್ರಶ್ನೆಗಳು ಸಾವಿರ ನನ್ನೊಳಗೆ ಆದರೆ ನಿನ್ನೆಡೆಗಿನ‌ ನಂಬಿಕೆ ನನ್ನನ್ನು ಮಡಿಲಲ್ಲಿ ಮಲಗಿಸಿ ಸಮಾಧಾನ‌ ಮಾಡಿಬಿಡುತ್ತದೆ.ಬಹುಶಃ ದ್ವಂದ್ವಗಳಿಗೆಲ್ಲ ಉತ್ತರ ನಿನ್ನ ಸ್ಮರಣೆ ಮಾತ್ರ‌ ಇರಬಹುದು.

ಈ ಸರಿ ತಪ್ಪುಗಳ ಪ್ರಪಂಚದಲ್ಲಿ ಮನುಷ್ಯನನ್ನು ಇದ್ದಂತೆ ಒಪ್ಪಿಕ್ಕೊಳ್ಳದೇ ಒಳ್ಳೆಯವನು ಕೆಟ್ಟವನು ಎಂದೆಲ್ಲ ಯೋಚಿಸುತ್ತ ನಿಜ ಸ್ವಭಾವನ್ನೇ ಮರೆತು ಬದುಕುವುದು ಎಷ್ಟು ಸರಿ?


Tuesday 18 February 2020

ಒಂದು ಭಿನ್ನಹ.......

ನನ್ನೊಳಗೆ ಸೋಜಿಗವಾಗಿ ಕುಳಿತ ಮನಸ್ಸೆಂಬ ನಿನಗೆ,

ಈ ಮಹಾನಗರದಲ್ಲಿ ನನ್ನನ್ನು ಹುಡುಕುತ್ತಲೇ ಪ್ರತಿ ಕ್ಷಣವೂ ಕಳೆದು ಹೋಗುತ್ತಿದ್ದೇನೆ. ಇಲ್ಲಿ ಬಂದು ಸುಮಾರು ೬ ವರುಷಗಳಾದರೂ ನಗರ ನನ್ನೊಳಗೆ  ಮಹಾ ಸೋಜಿಗವೊಂದನ್ನ ಪ್ರತಿ ದಿನವೂ ಸೃಷ್ಟಿಸುತ್ತಿದೆ. ನಾಲ್ಕೇ ಮನೆಗಳ ಪುಟ್ಟ ಹಳ್ಳಿ ಇಂದ ಬಂದ ಮಹಾನ್ ಹಠಮಾರಿ ನಾನು. ನಿಜಕ್ಕೂ ಒಂದು ಕನಸಿನಂತೆ ಕಾಣುತ್ತದೆ ನಗರ ನನ್ನೊಳಗೆ. 

ಜನಸಂಖ್ಯೆಯ ಪುಸ್ತಕದಲ್ಲಿ ಓದಿದ್ದೆನಾದರೂ ಇಲ್ಲಿ ಇರುವ ಜನಗಳನ್ನು ನೋಡಿದರೆ ಎಲ್ಲೋ ಭ್ರಮೆಯ ಸ್ಟಷ್ಟಿಯೇನೋ, ಎನಿಸಿಬಿಡುತ್ತದೆ. ನಂಗೆ ಯಾರು ಆಗದ, ಆದರೆ ದಾರಿಯ ಪ್ರತಿ ತಿರುವಿನಲ್ಲೂ ಸಿಗುವ ನನ್ನಂತಹುದೇ ಜೀವಿಯ ಬದುಕು ವಿಸ್ಮಯವಾಗುತ್ತದೆ ನಂಗೆ. 

ಯಾಕೆ? ದೇವರೆಂದು ಹೆಸರಿಟ್ಟುಕೊಂಡು, ಯಾರಿಗೂ ಕಾಣದ ಜಾಗದಲ್ಲಿ ಇದ್ದರೂ, ಇಲ್ಲದಂತೆ ಇಲ್ಲದೆಯೂ, ಇದ್ದಂತೆ ನಾಟಕವಾಡುವ ನೀನು ಮನುಷ್ಯನನ್ನು ವಿಶೇಷವಾಗಿ ಸೃಷ್ಟಿಸಿದ ಕಾರಣವಾದರೂ ಏನು? ನಿನ್ನ ಪೂಜಿಸುವ ಜೀವವೊಂದು ಬೇಕು ಎನ್ನುವ ಸ್ವಾರ್ಥವ? ಇಲ್ಲ, ನಿನ್ನ ಸೃಷ್ಟಿಯ ಗರ್ವದ ಸಂಕೇತವಾ? 

ಕೆಲವೊಮ್ಮೆ ಸೋಜಿಗವಾಗುತ್ತದೆ, ಕೆಲವೊಮ್ಮೆ ಅಸಹ್ಯವೂ....  ಏನೆಲ್ಲಾ ಮಾಡಿದ ಮನುಷ್ಯ ಜೀವಿ...  ನದಿಯ ಆಳಕ್ಕೆ ಇಳಿಯಬಲ್ಲ, ಮುಗಿಲೆತ್ತರಕ್ಕೆ ಹಾರಬಲ್ಲ, ಏನೇನೂ ಕಲ್ಪಿಸಿಕೊಳ್ಳಬಲ್ಲ, ತರಂಗಗಳಲ್ಲಿ ಮಾತನ್ನು ಹರಿಬಿಡಬಲ್ಲ, ಎಲ್ಲೋ ಇರುವುದನ್ನು ಇಲ್ಲೇ ಇರುವಂತೆ ತೋರಿಸಬಲ್ಲ. ತಂತ್ರಜ್ಞಾನದ ಸಾಧನೆಯ ನೆನೆದರೆ ನಾನೂ ಇದೇ ಜಾತಿಗೆ ಸೇರಿರುವ ಜೀವಿಯೇ ಎಂದು ಹೆಮ್ಮೆ ನಂಗೆ. 

ಹಾಗೆಯೆ, ಕೆಲವೊಂದು ಸೂಕ್ಷ್ಮತೆಯ ಅರಿಯದೇ ಕಂಡ ಕಂಡಲ್ಲಿ ಹೊಲಸು ಮಾಡುವ, ತನ್ನ ಇರುವಿಗೆಯ ಸಾರ್ಥಕತೆಯ, ಯೋಚನೆಯೇ ಇಲ್ಲದೆ, ಭಾವನೆಗಳ ಬೆಂಕಿಯಲ್ಲಿ ದಿನವೂ  ತನ್ನ ತಾನು ಸುಟ್ಟುಕೊಳ್ಳುತ್ತಾ ಬದುಕುವುದ ಕಂಡರೆ ಅಸಹ್ಯವೂ ಬರುತ್ತದೆ.

ದೇವರೇ.. 

ಮನುಷ್ಯನ ಸೃಷ್ಟಿಯ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಅದಕ್ಕೆ ಅವಶ್ಯಕತೆ ಎಂದಾಗಲಿ,ಮನೋರಂಜನೆ ಎಂದಾಗಲಿ ಏನೋ ನಾವು ಹೆಸರನ್ನೂ ಇಟ್ಟುಕೊಂಡಿದ್ದೇವೆ. ಆದರೆ, ನಿನ್ನ ಸೃಷ್ಟಿಯಾದ ನಮ್ಮ ಇರುವಿಕೆಗೆ ಕಾರಣವೇನು? ಸುಮ್ಮನೆ ಉಸಿರಾಡಿ, ತಿಂದುಂಡು ಬದುಕನ್ನು ರಾಡಿ ಮಾಡಿಕೊಂಡು, ಒಂದಷ್ಟು ಪ್ರೀತಿ-ಬೇಸರ, ಕಣ್ಣೀರು-ನಗು ಎಲ್ಲವನ್ನೂ ಅನುಭವಿಸಿ ಸತ್ತು ಪ್ರಕೃತಿಯ ಮಡಿಲ ಸೇರಲಿಯೆಂದ?

ನಿಂಗೆ ನಾವುಗಳೂ ಮನರಂಜನೆಯ ಅವಶ್ಯಕತೆಗಳ? ಗೊತ್ತಿಲ್ಲ ನಂಗೆ.... 


ಬಯಕೆಯೊಂದೇ... 
ಪ್ರತಿ ಉಸಿರಿಗೂ ಒಂದಷ್ಟು ಕಾರಣಗಳ ಸೃಷ್ಟಿಸು, ಕಾರಣಗಳಿಲ್ಲದೇಯೂ ಬದುಕುವ ಅವಶ್ಯಕತೆಗಳ ಸೃಷ್ಟಿಸು. ಇರುವೆ ಗೂಡಂತೆ ಕಾಣುವ ನನ್ನಂತಹುದೇ ಜೀವಿಯ ಇರುವಿಕೆಗೆ ಕಾರಣಗಳ ಕೊಡು. ಒಂದಷ್ಟು ಸೂಕ್ಷ್ಮ ಭಾವನೆಗಳ ಕೊಡು. ಎಲ್ಲರೆಡೆಗೆ ಪ್ರೀತಿ ಸ್ನೇಹವನ್ನು ಇನ್ನಷ್ಟು ಕೊಡು. 

ಮನುಷ್ಯರು ನಾವು ಪ್ರತಿ ವಸ್ತುವನ್ನು ಹೊಸ ಆವೃತ್ತಿಯಲ್ಲಿ ಹೊರತರುವಾಗ ಇನ್ನು ವಿಶೇಷವಾಗಿ ತಪ್ಪುಗಳನ್ನು  ತಿದ್ದಿ ಪರಿಚಯಿಸುತ್ತೇವೆ.ಹಾಗೆಯೇ ನಮ್ಮ ಹೊಸ ದಿನಗಳನ್ನು ಇನ್ನು ಪರಿಷ್ಕರಿಸಿ ಇನ್ನಷ್ಟು ಮಾನವೀಯತೆಯನ್ನು, ದೈವಿಕತೆಯನ್ನು,ಪ್ರೀತಿ ಸ್ನೇಹವನ್ನೂ ತುಂಬು ಎಂದು ಕತ್ತಲು ಮುಗಿದು ಇನ್ನೊಂದು ಬೆಳಕಿಗೆ ಕಾಯುತ್ತಿರುವ ಈ ಅಭಿಸಾರಿಕೆಯ ಪ್ರಾಥನೆ.....