ಅಭಿಸಾರಿಕೆ......
ಹೂ ನಗೆಯ ಹುಡುಕಾಟ........
Monday, 11 November 2024
ಸುಮ್ಮನೆ ನಿಂತು ಬದುಕಿನೊಡುತ್ತ....
Monday, 22 July 2024
ಬದುಕನ್ನು ಬದುಕಿ ನೋಡುವ ಸಮಯ
ಹೇ,
ತುಂಬಾ ದಿನಗಳ ಮೇಲೆ ಮತ್ತೆ ಬರೆಯುವ ಆಸೆಯಾಗಿದೆ. ಮೊದಲೆಲ್ಲ ಅಭಿಸಾರಿಕೆ ಎಂದರೆ ನನ್ನ ನೋವಿಗೆ ನಲಿವಿಗೆ ನನ್ನ ಒಂಟಿತನಕ್ಕೆ ನನ್ನ ಮನಸಿನ ಯಾವುದೇ ಭಾವಕ್ಕೂ ಕೇಳುವ ಕಿವಿ ಮತ್ತು ಸಮಾಧಾನದ ಮಡಿಲಾಗಿತ್ತು. ಒಂದಷ್ಟು ಕಾಲಗಳ ಕಾಲ ಇಲ್ಲಿ ಬರೆದು ನನ್ನೆಲ್ಲ ಭಾವಕ್ಕೆ ದಾರಿ ಮಾಡಿಕೊಟ್ಟೆ. ಒಂದಷ್ಟು ಕಾಲ ನಂಗ್ಯಾವ ಭಾವವು ಕಾಡುತ್ತಿಲ್ಲ ಎಂದು ಸುಳ್ಳು ಸಮಾಧಾನ ಮಾಡಿಕೊಂಡು ಮುಖವಾಡದ ಬದುಕ ಹೊತ್ತೆ, ಈ ಕ್ಷಣಕ್ಕೆ ಭಾವಗಳನ್ನ ಇದ್ದಂತೆಯೇ ಹೇಳಬಲ್ಲ ಮತ್ತು ಹೇಳಿದ್ದನ್ನು ಹೇಳಿದಂತೆಯೇ ಅರ್ಥೈಸಿಕೊಳ್ಳಬಲ್ಲ ಜಾಗ ಒಂದು ಸಿಕ್ಕಿದೆ ಅದೇ ನನ್ನ ಥೆರಪಿ ರೂಮ್.
ಇಲ್ಲಿ ಹೇಳುವ ಮಾತನಾಡುವ ಯಾವುದು ನನ್ನ ಕಿವಿ ಥೆರಪಿಸ್ಟ್ ಕಿವಿ ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ ಅದಕ್ಕೆ ಅದು ಸುರಕ್ಷಿತ ಜಾಗ.
ಸುಮಾರು ವರ್ಷಗಳ ಹಿಂದೆ ಮನಸು ಇಲ್ಲದ ಮಾರ್ಗ ಎನ್ನುವ ಒಂದು ಪುಸ್ತಕ ಒಂದಿದ್ದೆ, ಅದನ್ನು ಓದಿ ಒಂದಷ್ಟು ದಿನಗಳ ಕಾಲ ಸಿಟ್ಟೇ ಮಾಡಿಕೊಳ್ಳದೆ ಬದುಕಿದ್ದೇ. ಆದರೆ ನಿಜವಾದ ಥೆರಪಿ ಸಿಟ್ಟೇ ಬರದಂತೆ ತಡೆಯುವುದಿಲ್ಲ ನಾನು ನಾನಾಗಿ ಬದುಕಲು ಕಲಿಸುತ್ತದೆ. ಥೆರಪಿಗೆ ಹೋಗಲು ಮಾನಸಿಕ ಸಮಸ್ಯೆಯೆ ಬೇಕೆಂದಿಲ್ಲ. ಹಾಗೆ ನೋಡಿದರೆ ಎಲ್ಲರಿಗು ಒಂದಲ್ಲ ಒಂದು ಮಾನಸಿಕ ಸಮಸ್ಯೆ ಇದ್ದೆ ಇರುತ್ತದೆ. ಸ್ಥಿತ ಪ್ರಜ್ಞನಾಗಿರುವುದು ಎಂದರೆ ಅವರು ಮಾನಸಿಕ ಸಮಸ್ಯೆ ಇಂದ ಹೊರಬಂದವರು ಎಂದಲ್ಲ. ಬೇರೆಯವರು ಅಳುತ್ತಾರೆ ಮತ್ತು ಅಳುವದು ತಪ್ಪು ಎಂದು ಹೇಳುವವರಿಗೆ ಅಳುವುದು ಕಷ್ಟಸಾಧ್ಯ. ನಾವು ನಾವಾಗಿ ಬದುಕಬೇಕು ಆದರೆ ಎಷ್ಟೋ ಸಲ ನಮ್ಮ ಬದುಕು ಬೇರೆಯವರ ಬರಹವೇ ಆಗಿರುತ್ತದೆ.
ಥೆರಪಿಯಲ್ಲಿ ಪ್ರತಿ ಮಾತು ನನ್ನದಲ್ಲದ ಯಾರ ಮಾತು ಎಂದು ಗೊತ್ತಾಗುತ್ತದೆ, ಯಾರೋ ಹೇಳಬಹುದು ನೀನು ಬದುಕಿನ ಹಿಂದಿನದನ್ನು ಹುಡುಕಹೊರಟಿದ್ದೀಯ ಅದಕ್ಕೆ ಎಲ್ಲವು ಅಸಮಂಜಸವಾಗಿದ್ದೆ ಕಾಣಿಸುತ್ತದೆ, ನಾವು ಮುಂದೆ ನೋಡಬೇಕು ಹಳೆಯದನ್ನು ಮರೆಯಬೇಕು ಎಂದು. ಆದರೆ ನಮ್ಮ ಬದುಕು ಏನೆಂದು ಮೊದಲ ೬-೭ ವರುಷದಲ್ಲಿಯೇ ನಿರ್ಧಾರವಾಗಿರುತ್ತದೆ. ಸ್ಕ್ರಿಪ್ಟ್ ತಯಾರಾಗುವುದು ಈ ಕಾಲದಲ್ಲಿಯೇ ಅಮೇಲಿನದೆಲ್ಲ ನಮ್ಮ ಅಭಿನಯ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ವ್ಯಕ್ತಿ ಜೊತೆಯಲ್ಲಿ ಮೊದಲಾಗಿರುವುದೇ ನಂತರವೂ ಆಗುವುದು. ಎಷ್ಟೋ ಬಾರಿ ನಾವು ಹೇಳುತ್ತೇವೆ ಯಾಕೆ ನನಗೆ ಯಾವಾಗಲೂ ಹೀಗೆ ಆಗುತ್ತದೆ ಎಂದು. ಯಾಕೆಂದರೆ ಅದು ನಮ್ಮ ಬದುಕಿನ ನಿರ್ಧಾರದ ದಿನಗಳಲ್ಲಿ ನಾವು ಅರ್ಥೈಸಿಕೊಂಡ ಬದುಕಿನ ಕಥೆ ಆಗಿರುತ್ತದೆ.
ಮನಸು, ಮನಸಿನ ಸಮಸ್ಯೆ ಮಾನಸಿಕತೆ ಎಲ್ಲರಿಗು ಇದೆ ಅದನ್ನು ನೋಡುವ ಮತ್ತು ಗುಣಪಡಿಸಿಕೊಳ್ಳುವ ಧೈರ್ಯ ಬೇಕು. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಖುಷಿಯನ್ನು ಖುಷಿಯಾಗಿ ನೋವನ್ನು ನೋವನ್ನಾಗಿ ನೋಡುವ ಈ ಹಾದಿ ಚಂದವಿದೆ.
Thursday, 6 April 2023
ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...
Sunday, 30 October 2022
ಮಗಳಿಗೆ...
Thursday, 5 May 2022
ಜೀವ ನಿನ್ನಾಸರೆಗೆ ಕಾಯುತಿಹುದು...
Sunday, 13 June 2021
'ಅಭಿಸಾರಿಕೆ'ಯ ಹುಟ್ಟುಹಬ್ಬ..
Friday, 15 May 2020
ನಿನ್ನ ನಾಳೆಗಳಿಗೆ....
ನೀ ಹುಟ್ಟಿ ಇಂದಿಗೆ ಒಂದು ವರುಷ ಒಂಭತ್ತು ತಿಂಗಳು ಕಳೆದು ಹೋದವು. ಆದರೆ ಇಂದಿನ ಪರಿಸ್ಥಿತಿ ಇದೆಯಲ್ಲ ನಾನುಬರೆಯಲೇಬೇಕು.
ನಿಂಗೆ ಇದೆಲ್ಲ ಇಂದು ಅರ್ಥವಾಗದು. ಗೊತ್ತು ನಂಗೆ, ಆದರೆ ನಿನ್ನ ಸುತ್ತಲಿರುವ ನಮ್ಮಗಳ ಇಂದಿನ ಬದುಕು ಇದುವೇ.
ಇವತ್ತಿಗೆ ನಾವೆಲ್ಲ ಮನೆಯಲ್ಲೇ ಬಂಧಿತರಾಗಿ ಸರಿ ಸುಮಾರು ೬೦ ದಿನಗಳಾದವು. ಹಕ್ಕಿಗಳಂತೆ ಹಾರಡಿಕೊಂಡು ಯಾವ ಮಿತಿಗಳಿಲ್ಲದೆ ಬದುಕುತ್ತಿದ್ದ ನಮ್ಮಗಳಿಗೆ ನಿಜಕ್ಕೂ ಈ ಬಂಧನ ಒಂಥರಾ ಕಷ್ಟವೇ ಸರಿ.
ಈ ವರುಷ, ಪ್ರಾರಂಭದಿಂದಲೂ ಒಂದಷ್ಟು ಭಯ, ನೋವು-ನಿರಾಸೆಯನ್ನೇ, ಹೊತ್ತು ಬಂದಿದೆ. ಈ ಸಂವತ್ಸರಕ್ಕೆ ಹೆಸರು ಶಾರ್ವರಿ ಅಂತ. ಅಂದರೆ ಕತ್ತಲೆ ಎಂದರ್ಥವಂತೆ. ಹೆಸರು ಚಂದವೇ, ಆದರೆ ಈ ಯುಗಾದಿಯ ಆಚೀಚೆಯ ಕ್ಷಣಗಳಿವೆಯಲ್ಲ, ಅದು ಭಯಂಕರ. ವಿಕಾರಿ ಸಂವತ್ಸರ ಕಳೆದು ಶಾರ್ವರಿ ಬಂದಿದೆ. ವಿಕಾರಿಯ ಹೋಗುವ ದಿನಗಳು ಹುಟ್ಟಿಸಿದ್ದು ಸಾವಿನ ಭಯಗಳನ್ನ.
ನಿನ್ನ ಮುದ್ದು ಭಾಷೆಯಲ್ಲಿ ಹೇಳುವುದಾದರೆ ಇದೊಂದು ಕಣ್ಣಿಗೆ ಕಾಣದ ಗುಮ್ಮಾ. ಅದರ ಹೆಸರು ಕೊರೊನ, ಭಯ ಭೀಕರವಾದದ್ದು. ಇದು ಚೀನಾ ದೇಶದಿಂದ ಬಂದ ಸಾವಿನ ಬುತ್ತಿ. ಕಣ್ಣಿಗೆ ಕಾಣದ, ಆದರೆ ಅದೆಷ್ಟೋ ಜೀವವನ್ನೇ ತಿನ್ನುತ್ತಿರುವ ಸಧ್ಯದ ನರಭಕ್ಷಕ. ಚಿಕಿತ್ಸೆ ಇಲ್ಲದ, ಇದಕ್ಕೆ ನಾವುಗಳು ಹೆದರಿ ಕುಳಿತಿದ್ದೇವೆ.
ದಿನ ನಿತ್ಯ ನಿಲ್ಲಲೂ, ಜಾಗವಿಲ್ಲದಂತೆ ಇರುವೆಗಳಂತೆಯೇ ಗಿಜಿಗುಡುತ್ತ ಇದ್ದ ಈ ಮಹಾನಗರಿ ಇಂದು ಅಕ್ಷರಶಃ ಖಾಲಿಯಾಗಿದೆ. ಹೊಗೆ, ಗಾಳಿ, ವಾಹನಗಳ ಶಬ್ದಕ್ಕೆ ನಿರ್ಜೀವವಾಗಿದೆ. ಒಂಥರಾ ಭೂಮಿ ನಿಲ್ಲುವುದನ್ನೇ ಮರೆತಂತೆ ಭಾಸವಾಗುತ್ತಿದೆ. ಈ ನಗರಿ ಇಂದು ಕಂಡಕಂಡಲ್ಲಿ ಹೂ ಬಿಟ್ಟು ಚಂದಗೆ ನಿಂತಿದೆ, ಆದರೆ ಈ ಸೌಂದರ್ಯವ ಸವಿಯುವವರು ಯಾರು. ಸಾವಿನ ಭಯ ಯಾವ ಸುಖವನ್ನು ಆಸ್ವಾದಿಸಲು ಬಿಡುವುದಿಲ್ಲ ಅಲ್ಲವಾ?
ಮೌನ ಮತ್ತು ಖಾಲಿತನವಿದೆಯಲ್ಲ, ಅದು ನಮ್ಮನ್ನು ತೀರಾ ಆಂತರಿಕವಾಗಿ ಸುಟ್ಟು ಬಿಡುತ್ತದೆ. ಅರ್ಥವಾಗಿದ್ದು ಏನು ಗೊತ್ತ?ಮನುಷ್ಯ ಬದುಕುವ ಖಾಯಿಲೆಗೆ ಬಿದ್ದು ತನ್ನ ತನವನ್ನೇ ಮರೆತುಬಿಟ್ಟಿದ್ದ. ಆದರೆ ಈ ಕ್ಷಣವಿದೆಯಲ್ಲ, ನಾವು ಯಾರು? ನಮ್ಮ ಮೂಲ ಬಯಕೆ ಏನು? ಎಂದು ಜ್ಞಾಪಿಸುತ್ತಿದೆ. ದುಡ್ಡು,ಕೆಲಸ ಅಂತೆಲ್ಲ ಯಾವುದರ ಹಿಂದೆ ಎಂದೇ ಗೊತ್ತಿಲ್ಲದೆ ಓಡುತ್ತಲೇ ಇದ್ದೇವೋ, ಒಂದೇ ಸಮನೆ ನಿಂತಲ್ಲೇ ನಿಂತು ಬಿಟ್ಟಂತಾಗಿದೆ. ಆದರೆ ವಿಚಿತ್ರವೆಂದರೆ ಈ ಜ್ಞಾನೋದಯಕ್ಕೆ ಕಾರಣ ಜೀವ ಭಯ. ನಗರ ನಮ್ಮನ್ನು ಸೆಳೆಯುವುದೇ ಈ ಜೀವಂತಿಕೆಯ ಮುಖವಾಡದಿಂದ. ಆದರೆ ಇಂದು ಮುಖವಾಡಗಳಿಲ್ಲದೇ ತಲೆ ತಗ್ಗಿಸಿ ನಿಂತಿದೆ.
ಮನುಷ್ಯನ ಬದುಕಿಗೆ ನೆಮ್ಮದಿ,ಪ್ರೀತಿ, ಸಹಬಾಳ್ವೆಯೇ ಮುಖ್ಯ. ದ್ವೇಷದಿಂದ, ಅಸೂಯೆಯಿಂದ ಕಲಿಸಲಾಗದನ್ನು, ಈ ಕಾಲವೇ ಕಲಿಸಿದೆ. ಆದರೆ ನಾವುಗಳು ಎಷ್ಟು ಕಲಿಯುತ್ತೇವೆ? ಯಾರಿಗೆ ಗೊತ್ತು!!!
ಒಂದು ಕಡೆ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಇನ್ನೊಂದು ಕಡೆ ಸಾವಿನ ಸಂಖ್ಯೆಯೂ... ಆದರೆ ಮತ್ತೊಂದು ಕಡೆ ಜನ ಸಾವನ್ನು ಗೆದ್ದ ಮೃತ್ಯುಂಜಯರಂತೆ ಓಡಾಡಿಯುತ್ತ, ಮೈ ಮರೆಯುತ್ತಿದ್ದಾರೆ. ಸರ್ಕಾರ ಯೋಜನೆಯ ಹೆಸರಲ್ಲಿ, ಕಾನೂನಿನ ಹೆಸರಲ್ಲಿ, ನಮ್ಮ ರಕ್ಷಣೆಗೆ ನಿಂತರೆ ನಾವಿಲ್ಲಿ ಜೀವದ ಹಂಗು ಇಲ್ಲದೆ ತಿರುಗುತ್ತಿದ್ದೇವೆ.
ಕಂದಾ..
ಇದನಂತೂ ಹೇಳಲೇಬೇಕು. ಪೊಲೀಸರು, ಡಾಕ್ಟರ್, ಸ್ವಚ್ಛಮಾಡುವವರು, ಇಂದಿನ ನಿಜವಾದ ದೇವರು. ನಮ್ಮಗಳ ಬದುಕಿಗಾಗಿ, ನಮ್ಮ ನಾಳೆಗಳಿಗಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನ ನಾವು ನೆನೆಯಲೇಬೇಕು.
ನಾವಿಲ್ಲಿ ಮನೆಯಲ್ಲೇ ಬಂಧಿತರಾಗಿದ್ದೇವೆ. ನಿಂಗೆ ಬೇಸರ ನಾಲ್ಕು ಗೋಡೆಯ ಮಧ್ಯೆ ಇದ್ದು ನಮಗೂ ಬೇಸರವೇ. ಹೇಳಿಕೊಳ್ಳಲು ಬಾರದ ನೀನು, ಮತ್ತೆ ಹೇಳುತ್ತಲೇ ಒಪ್ಪಿಕೊಂಡು ಬದುಕಬೇಕಾದ ನಾವುಗಳು.
ಸತ್ತೇ ಹೋಗಿಬಿಡುತ್ತೇವೆ ಅಂತಲ್ಲ... ಆದರೆ ನಮ್ಮ ನಾವು ಕಾಯ್ದುಕೊಳ್ಳದಿದ್ದರೆ ಇಲ್ಲೇ ಎಲ್ಲೋ ಸುಳಿದಾಡುತ್ತಿರುವ ಸಾವು ಬಂದು ತಬ್ಬಿಯೇ ಬಿಡುತ್ತದೆ.
ಯುದ್ಧದ ದಿನಗಳ ಕಾಣದ ನಾವು ಇದೊಂದು ಹೊಸ ದಿಗ್ಬಂಧನಕ್ಕೆ ಸಿಕ್ಕಿಕೊಂಡಿದ್ದೇವೆ.
ನೀನು ದೊಡ್ಡವನಾದ ಮೇಲೆ ಇದನೆಲ್ಲ ಓದಲಿ ಮತ್ತು ನಿನ್ನ ತಲೆಮಾರಿಗೆ ಇದು ಇತಿಹಾಸದಲ್ಲಿ ಮಾತ್ರ ಇರಲಿ, ಎಂಬ ಆಶಯ ಅಷ್ಟೆ. ಈ ಜೀವಭಯ ನಮ್ಮಗಳಿಗೇ ಮುಗಿದು ಹೋಗಲಿ ಮತ್ತು ಇಂದಿನ ನಮ್ಮ ಬದುಕಿನ ಪಾಠಗಳು ನಿನಗೆ ಕಲಿಕೆಯಾಗಲಿ ಅಂತಷ್ಟೇ.