Thursday 27 August 2015

ಒಲವೇ ನಿನಗೆ......

ಕದ್ದು ಮುಚ್ಚಿ ಬದಲಾದಂತೆ ನಾಟಕವಾಡುವ ಸತ್ತರೂ ಜೀವವಿರುವಂತೆ ತೋರುವ ಬದುಕೆಂಬ ಮಹಾನ್ ಸೂತ್ರಧಾರನ ಹೊಸ ಕಥೆಗೊಂದು ಹೊಸ ಪುಟ ತೆರೆದುಕೊಳ್ಳುವುದರಲ್ಲಿದೆ.  ಬದುಕು, ಸಾವಿರದ ಪಾಪಪ್ರಜ್ಞೆ ಅದಕ್ಕೂ ಆಳಕ್ಕಿಳಿದು ನನ್ನೊಳಗೆ ಅವಿತು ಕುಳಿತ ನಗು ಯಾವುದಕ್ಕೂ ಅರ್ಥ ಹುಡುಕಲಾರೆ,ಭಾಷ್ಯ ಬರೆಯಲಾರೆ. ಆದರೆ ಅರ್ಥ ಕಟ್ಟಿಕೊಳ್ಳಬಲ್ಲೆ ನನ್ನೊಳಗಿನ ಕನಸು ಮನಸುಗಳೊಟ್ಟಿಗಿನ ದ್ವಂದ್ವಗಳಿಗೆ ಎಲ್ಲಕ್ಕಿಂತ ನನ್ನೊಳಗಿನ ನಿನಗೆ.

ಯಾರಿಗಾಗಿಯೋ ಹೆಗಲಾಗಬೇಕು, ಒಡಲಾಗಬೇಕು ಎಂಬಂಥ ಬಯಕೆಗಳೇ ಇಲ್ಲದವಳು ನಾನು ನನ್ನೊಳಗೆ ನೋವ ಭಾವ ಕಾಡಿತೆಂದು ನಾ ಭಾವಿಸಿದಾಗ ನನ್ನ ಮಡಿಲೊಳಗೆ ನಾ ಮಲಗಿ ಸಮಾಧಾನ ಹೊಂದಿಬಿಡಬೇಕು ಎಂದುಕೊಂಡವಳು. ನನ್ನೊಳಗಿರುವುದೂ ನಾನೇ ಎಂಬ ಹುಚ್ಚುತನವೊಂದಿಂತ್ತು. ಆದರೆ ಅದ್ಯಾವಾಗ ನನ್ನ ಅವಶ್ಯಕತೆಗಳನ್ನೂ ಮೀರಿದ ಅವಲಂಬನೆಯನ್ನ ಕಲಿತುಬಿಟ್ಟಿತೋ ಅದಕ್ಕೆ ನಾನು ನೀನೆಂದು ಹೆಸರಿಟ್ಟೆ, ನಂಗೆ ನಾ ಮಾತ್ರ ಅವಶ್ಯಕತೆ ಎಂದರಿತವಳಿಗೆ ನೀ ನನ್ನೊಳಗೆ ಬಂದಿದ್ದು  ಯಾಕೋ ಇಷ್ಟವಾಗಲೇ ಇಲ್ಲ. ಅದಕ್ಕೆ  ಕೊನೆಗೊಂದು ದಿನ ನೀನೆಂದರೆ ನಾನೇ ಎಂದುಬಿಟ್ಟೆ.

ಆರೋಹ ಅವರೋಹಗಳಿಂದಲೇ ತಾನೇ ರಾಗವಾದದ್ದು ಬದುಕೂ ಸಂಗೀತವೇ ತಾನೆ.  ಕರುಳು ಕಿತ್ತು ಬರುವಂಥ ನೋವು, ಹೃದಯ ಒಡೆದುಹೋಗುವಂತ ನಗುವು. ಸಮತೆಯನ್ನ ಗೆದ್ದಷ್ಟು ಸುಲಭವಲ್ಲ ಏರಿಳಿತಗಳ ನಿಭಾಯಿಸುವುದು. ನಡೆದುಬಿದ್ದಷ್ಟು ಸುಲಭವಲ್ಲ ಬಿದ್ದೂ ನಡೆಯುವುದು.

ಮುದ್ದು,
ನಡೆಯುವುದಾದರೆ ನಡೆದುಬಿಡಬೇಕು ಒಲವ ಜೊತೆ ಕತ್ತಲಲ್ಲೂ ಪ್ರೇಮವೇ ಬೆಳಕಾದೀತು ಎಂದು ನಂಬಿದವ ನೀನು. ಆದರೆ ನಡೆಯುವುದೆಂದರೆ ಗೆಲುವೆಂಬ ನೆಂಟನ ಜೊತೆಗೊ ಅಥವಾ ನಂಟನ್ನು ಅರಸಿಯೇ ಇರಬೇಕೆಂದು ನಡೆದವಳು ನಾನಾದೆ.
ಗೆಲುವೆಷ್ಟು ದಕ್ಕಿತ್ತು ಲೆಕ್ಕದ ಅಂಕಿಗಳೆಲ್ಲ ಕಳೆದೊಗಿದ್ದವು. ಸರಿ ಒಲವಾದರೂ ದಕ್ಕಿತ್ತಾ? ಗೊತ್ತಿಲ್ಲ ಹುಡುಕುವ ಗೋಜಲಿಗೆ ಬಿದ್ದವಳಲ್ಲ.
ಆದರೆ ಅದೆಲ್ಲೊ ನಡುರಾತ್ರಿ ನೀ ಬಿಕ್ಕಳಿಸಿದರಲ್ಲಿ ನಂಗಿಲ್ಲಿ ಉಸಿರು ಕಟ್ಟಿದಂಥ ತೀವ್ರಭಾವ.
ನೀ ಅಲ್ಲೆಲ್ಲೋ ಒಂದು ಕ್ಷಣ ನಕ್ಕಿದ್ದು ಕಂಡರೂ ಖುಷಿಗೆ ಗಂಟಲುಬ್ಬುತ್ತದೆ.

ಜೊತೆ ಕೂತು ಅಳುವ ತಡೆಯದವಗೆ ನಗುವ ಸಲಹುವ ಹಕ್ಕು ಇಲ್ಲವಂತೆ. ನನ್ನದೇ ಮನದ ಮಾತು ಸೋಲು ಎಲ್ಲರನ್ನೂ ಕಸಿದುಕೊಳ್ಳುತ್ತದೆ ಆದರೆ ಗೆಲುವಿಗೆ ಯಾರ ಅವಶ್ಯಕತೆಗಳೂ ಇಲ್ಲ. ಯಾಕೆಂದರೆ ಗೆಲುವಿನ ತಾಕತ್ತೆ ಹಾಗೆ ಅದೊಂದು ಪರಿಪೂರ್ಣ ಖುಷಿಯಷ್ಟೆ. ಗೆಲುವಿಗೆ ಯಾರನ್ನೂ ಅವಲಂಬಿಸುವುದು ಗೊತ್ತಿಲ್ಲವೆನೋ. ಗೆಲುವೆಂಬುದು ಒಂಟಿ ಭಾವವನ್ನು ಮರೆಸಿಬಿಡುವಂಥದ್ದೊಂದು ಔಷಧವೇ ಇರಬಹುದೆನೊ.?!
ಯಾರೊ ಕೈ ಹಿಡಿದು ಕತ್ತಲಲ್ಲೂ ಜೊತೆ ನಡೆಯುತ್ತಾರೆ ಎಂಬ ಕಾರಣಕ್ಕೆ ಬೆಳಕೆಂಬುದ ಮರೆಯಬಾರದು ಅಲ್ಲವಾ?

ಈ ದಿನ ನಿನ್ನ ಜೊತೆಗಿದ್ದು ಖುಷಿಯ ಸಾಗರದಲ್ಲಿ ಅಲೆಯನ್ನೊಂದು ಎಬ್ಬಿಸಿಬಿಡಬೇಕಿತ್ತು. ಎಲ್ಲರಿಗಿಂತ ಮೊದಲ ಹಾರೈಕೆ ನನ್ನದೇ ಇರಬೇಕಿತ್ತು.
ಆದರೆ ಜೊತೆಯಿದ್ದು ಹಾರೈಸಲಾರೆ ಇಲ್ಲಿಂದಲೇ ಎಲ್ಲವನ್ನೂ ಕನಸು ಕಾಣುತ್ತೇನೆ. ನಗುವೊಂದೆ ತುಂಬಿರಲಿ ಎಂದು. ನೆನಪಾಗದಿದ್ದರೂ ಗೆದ್ದೊಮ್ಮೆ ನಕ್ಕುಬಿಡು. ನಾನಿಲ್ಲಿ ಹಗುರಾದೇನು. ಬದುಕು  ಬಂಗಾರವಾಗಲಿ. ಗೆಲುವಿನ ನಗುವು ಪ್ರತಿಧ್ವನಿಸಲಿ.

Monday 3 August 2015

ಭಾವಿಸಿಕೊಂಡಷ್ಟೆ ಬಂಧ.....

ಬದುಕು ಬಯಲಾಗ ಹೊರಟಾಗೆಲ್ಲ ಅದೆಷ್ಟೋ ಪರಿಚಯಗಳಾಗುತ್ತವೆ. ಕೆಲವೊಬ್ಬರು ತುಂಬಾ ಅಲ್ಪ ಕಾಲದಲ್ಲಿಯೇ ಇಷ್ಟವಾಗುತ್ತಾರೆ. ಪರಿಚಯಗಳ ಆರಂಭದಲ್ಲಿ ತುಂಬಾ ಮಾತನಾಡಬೇಕು ಎಂಬ ಬಯಕೆಯಾಗುತ್ತದೆ. ಬಯಕೆಯ ಕಾರಣ ವ್ಯಕ್ತಿಯೆಡೆಗಿನ ಕುತೂಹಲವೂ ಇರುತ್ತದೆ ಕೂಡ.  ಹಾಗಂತ ಪರಿಚಯಗಳೆಲ್ಲವೂ ಸಂಬಂಧಗಳಾಗಬೇಕು ಎಂಬ ಭಾವವೇ ಇದ್ದೀತು ಅಂತಲೂ ಅಲ್ಲ. ಬದುಕ ಪೂರ್ತಿ ಇರದಿದ್ದರೂ ಬದುಕಿಗೆ ಬೇಕು. ಒಂದಷ್ಟು ಕ್ಷಣಗಳ ಖುಷಿಯ ಕಾರಣಕ್ಕಾದರೂ.

ಹೊಸದು ಎಂಬುದರ ಆಕರ್ಷಣೆಯೇ ಹಾಗೆ ಅನ್ನಿಸುತ್ತೆ. ಅದು ವ್ಯಕ್ತಿಯಾಗಲಿ ವಸ್ತುವಾಗಲಿ. ಹೊಸದಾಗಿ ಮೊಬೈಲ್ ಕೈಗೆ ಬಂದಾಗ ನಿದ್ದೆಯೂ ಬರುವುದಿಲ್ಲ. ಎಲ್ಲವನ್ನೂ ಹುಡುಕಬೇಕು ತಿಳಿದುಕೊಳ್ಳಬೇಕು. ಎಲ್ಲೆಲ್ಲೊ ಇಡವುದಕ್ಕೂ ಭಯವೇ ಕಳೆದೊಗುತ್ತದೆ ಎಂದು. ಇದೆಷ್ಟು ಕಾಲ ಇರುತ್ತದೆ ? ಇರುವುದೆಲ್ಲವನ್ನೂ ಹುಡುಕಿ ತಿಳಿದುಕೊಳ್ಳುವಷ್ಟು ದಿನ ಮಾತ್ರ.
ಕೆಲವೊಂದು ಸಂಬಂಧಗಳಲ್ಲೂ ಹೀಗೆಯೇ ವರ್ತಿಸುತ್ತೇವಾ ನಾವುಗಳು? ಇರಬಹುದೇನೋ ಗೊತ್ತಿಲ್ಲ . ಅದ್ಯಾರೋ ಪರಿಚಯವಾಗುತ್ತಾರೆ. ತೀರಾ ಆಪ್ತರಾದ ಭಾವನೆ ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ನಾವೂ ಒಳ್ಳೆಯವರೆಂಬಂತೆ ಒಂದಷ್ಟು ಮುಖವಾಡ ಹಾಕಿಕೊಳ್ಳಬೇಕು. ಅವರು ನಮಗೆ ತೀರ ಆಪ್ತ ಎಂದು ನಮ್ಮನ್ನು ನಾವೇ ನಂಬಿಸಿಕೊಳ್ಳಬೇಕು. ಕಳೆದೊದರೆ ಎಂಬ ಭಯಕ್ಕೆ ಉಸಿರುಕಟ್ಟುವಷ್ಟು ಬಚ್ಚಿಡಬೇಕು.
ಬದುಕಿಗೆ ಬಂದ ಸಾವಿರ ಸಂಬಂಧಗಳಿಗಿಂತ ಇದೇ ಶ್ರೇಷ್ಠ ಎಂದುಕೊಳ್ಳಬೇಕು. ನಿಜವೆಷ್ಟಿರುತ್ತದೆಯೊ ಆದರೆ ಎಲ್ಲವನ್ನೂ  ಭಾವಿಸಿಕೊಳ್ಳುಬೇಕು.

ಸಣ್ಣ ಪುಟ್ಟ ಬೇಸರಗಳನ್ನೂ ಖುಷಿಗಳನ್ನೂ ಹೇಳಿಕೊಳ್ಳಬೇಕು. ಒಂದಷ್ಟು ಸಮಾಧಾನ ಹೇಳಬೇಕು, ನಮ್ಮ ಖುಷಿಗಳಿಗೆ ಅವರೂ ನಗಬೇಕು. ನಮ್ಮೊಳಗಿನ ಅಹಂನ ಹಸಿವಿಗೊಂದಷ್ಟು ಆಹಾರಬೇಕು. ಮಾಡಿದ್ದೆಲ್ಲವೂ ಸರಿ ಎನ್ನಬೇಕು. ತಪ್ಪು ಎಂದರೊ ಮುಗಿದಂತೆ. ಯಾಕೆ ಹೀಗೆಲ್ಲ ಆಗುತ್ತದೆ ನಮ್ಮ ಅವಶ್ಯಕತೆಗಳಿಗಾಗಿ ಸಂಬಂಧಗಳನ್ನು ಕಟ್ಟಿಕೊಂಡಿರುತ್ತೇವಾ? ಅಥವಾ ನಮ್ಮೊಡನಿರುವ ವ್ಯಕ್ತಿಗಳೆಂದರೆ ಹೀಗೆ ಇರಬೇಕು ಎಂಬ ಗಡಿ ರೇಖೆ ಎಳೆದುಕೊಂಡು ವಾಸ್ತವದ ಚಿಂತನೆಯನ್ನೇ ಮಾಡದೆ ಬದುಕುತ್ತೇವಾ?

ತಪ್ಪಾ ಸರಿಯಾ? ಒಳ್ಳೆಯವರಾ ಕೆಟ್ಟವರಾ? ಎಷ್ಟು ಬೇಕು ? ಬದುಕಿಗೆ ಆಯ್ಕೆಯಾ ಅವಶ್ಯಕತೆಯಾ? ಎಷ್ಟೋ ಪರಿಚಯಗಳು ಬಂಧವಾಗುವ ಕಾಲಕ್ಕೆ ಇದ್ಯಾವುದರ ಪರಿವೆಯೂ ಇಲ್ಲದೆಯೇ ಎಷ್ಟೆಲ್ಲ ಹತ್ತಿರಕ್ಕೆ ಹೋಗಿಬಿಡುತ್ತೇವೆ. ಒಟ್ಟಿನಲ್ಲಿ ಅದು ಆ ಕ್ಷಣದ ತೀವ್ರತೆ. ಮೋಸವಾಯಿತಾ? ಬೇಡಬಿಟ್ಟುಬಿಡಬೇಕು ಎನಿಸಿತಾ?  ಬಿಟ್ಟುಬಿಡಬಹುದು, ಯಾವುದೂ ಕಷ್ಟವಲ್ಲ ಯೋಚಿಸಿದರೆ. ಆದರೆ, ಅಲ್ಲಿ ನಿಜಕ್ಕೂ ನೋವಾಗುವುದು ಮೋಸವಾಯಿತು ಎಂಬ ಭಾವ, ಎಷ್ಟೊಂದು ಹಚ್ಚಿಕೊಂಡಿದ್ದೆ ಈಗ ಬಿಡಬೇಕಲ್ಲ ಎಂಬ ಭಾವ. ಅಲ್ಲಿಗೆ ಬದುಕ ವಾಸ್ತವವನ್ನ ಒಪ್ಪಿಕೊಳ್ಳಲಾಗುತ್ತಿಲ್ಲ, ಭವಿಷ್ಯಬೇಕಾಗಿಲ್ಲ. ಇತಿಹಾಸ ನೆನಪಾಗಿ ಕಾಡುತ್ತದೆ. ಮತ್ತದೇ ಗೊಂದಲ ಇನ್ನೊಂದಿಷ್ಟು ನೋವು.

ಯಾರದೊ ನೆನಪು ಕಾಡುತ್ತೆ, ಮರೆಯಲು ಸಾಧ್ಯವೇ ಇಲ್ಲ ಎಂದು ಕೊರಗುತ್ತೇವೆ. ಆದರೆ ನಿಜವಾದ ಕಾರಣ ನಾವು ಮತ್ತು ನಾವು ಯೋಚಿಸುವ ರೀತಿ ಮಾತ್ರವೇನೋ. ಮರೆತರೆ ಹಚ್ಚಿಕೊಂಡದ್ದೆ ಸುಳ್ಳೆಂದು ನಮ್ಮೊಳಗೆ ಯಾರೋ ಕೇಳಿದಂಥದ್ದೊಂದು ಭಯ. ಮತ್ತಲ್ಲಿಗೆ ಮರೆತಿಲ್ಲ ಮರೆಯಲಾಗುತ್ತಿಲ್ಲ ಎಂಬ ಕಾರಣ ಕಟ್ಟಿಕೊಂಡು ಬದುಕಬೇಕು.

ನಿಜ, ತೀವ್ರತೆ ಕಡಿಮೆಯಾಯಿತೆಂದರೆ ಬಂಧ ಹಳಸಿತೆಂದಲ್ಲ. ಒಡನಾಟದ ಅವಶ್ಯಕತೆಗಳನ್ನೂ ಮೀರಿ ಸಲಹಿಕೊಳ್ಳುವ ಶಕ್ತಿಬಂದಿದೆ ಎಂದೊ ಒಂದಷ್ಟು ಪ್ರಬುದ್ಧತೆಯೂ ಬಂದಿದೆ ಎಂದೊ ಇರಬಹುದು. ಎಷ್ಟೋ ಸಲ ಇದೂ ಕೂಡ ನಮಗೆ ನಾವೇ ಮಾಡಿಕೊಳ್ಳುವ ಸಮಾಧಾನ. ಅಥವಾ ವ್ಯಕ್ತಿ ಬೇಡ ನೆನಪುಗಳಲ್ಲಿಯೆ ಬದುಕುತ್ತೇನೆ ಎಂದರೆ ಆಪ್ತತೆಯಿರುವುದು ಸಂಬಂಧದ ಒಡನಾಟದಲಲ್ಲ, ಅದರ ಸುತ್ತ ಹೆಣೆದಿರುವ ಕಲ್ಪನೆಯದ್ದು ಎಂದು. ಅಲ್ಲಿಗೆ ಹಚ್ಚಿಕೊಂಡಿರುವುದು ವ್ಯಕ್ತಿಯನ್ನಲ್ಲ ಅವನೆಡೆಗೆ ಆಪ್ತತೆ ಇದೆ ಎಂಬ ಭಾವವನ್ನು ಮಾತ್ರ.

ಬೆಳಕಿದ್ದಷ್ಟೆ ಕಾಣುವುದು ಕತ್ತಲಲ್ಲೂ ಬೆಳಕಲ್ಲಿ ಕಂಡಷ್ಟೇ ಸ್ಪಷ್ಟವಾಗಿ ಕಾಣುತ್ತದೆ ಎನ್ನುವುದು ಭ್ರಮೆಯಷ್ಟೆ. ಬಂಧಗಳೂ ಅಷ್ಟೇ  ಭಾವಿಸಿಕೊಂಡಷ್ಟೆ ದಕ್ಕುವುದು. ಎಷ್ಟು ಭಾವಿಸಿಕೊಳ್ಳಬೇಕು ಎನ್ನುವುದು ನಮ್ಮ ನಮ್ಮ ಮನಸ್ಥಿತಿಗೆ ಬಿಟ್ಟದ್ದು. ಯಾರು ಯಾರನ್ನೂ ಬಿಟ್ಟೋಗುವುದಿಲ್ಲ, ಯಾರೂ ಯಾರ ಜೊತೆಯಿರುವುದೂ ಇಲ್ಲ. ಎಲ್ಲ ನಮ್ಮ ನಮ್ಮ ಭಾವನೆ ಆಕ್ಷಣದ ನಮ್ಮ ಅವಶ್ಯಕತೆ ಮತ್ತು ಅಭಿವ್ಯಕ್ತಿ ಅಷ್ಟೇ.