Wednesday 6 August 2014

ಏನೂ ಆಗದೇ ಎಲ್ಲವೂ ಆಗಬಲ್ಲ ಗೆಳತನಕ್ಕೊಂದು.............

  
ಅದ್ಯಾವತ್ತೋ ಸ್ನೇಹಿತರ ದಿನ... ಹಬ್ಬಗಳ ಸಂತೆಯಲ್ಲಿ ಇದಕೊಂದಷ್ಟು ಜಾಗ... 
ಯಾಕೋ ನಕ್ಕುಬಿಟ್ಟಿದ್ದೆವು ನಾವು...

ಆ ನಗುವಲ್ಲೂ ಅರ್ಥವಿತ್ತು, ನಮ್ಮ ಸ್ನೇಹ ದಿನಕ್ಕೆ, ಆಚರಣೆಗೆ ಸೀಮಿತವಾಗಲು ಸಾಧ್ಯವಿಲ್ಲ...

ನಾವಿಬ್ಬರೂ ನಕ್ಕಾಗಲೆಲ್ಲ ಹಬ್ಬವೇ ಒಬ್ಬರನ್ನೊಬ್ಬರು ನೆನಪಿಸಿಕೊಂಡಾಗಲೆಲ್ಲ ಉತ್ಸವವೇ... ಅಂದರೆ ಕನಿಷ್ಠ ದಿನಕ್ಕೊಂದು ಹತ್ತು ಸಲವಾದರೂ ನನ್ನೊಳಗೆ ನಿನ್ನ ನೆನಪ ಮೆರವಣಿಗೆ, ನಿನ್ನ ಸ್ನೇಹದ ಜಾತ್ರೆ...

ನೀನೋ ಮಹಾನ್ ವಾಸ್ತವವಾದಿ, ನೇರವಾದಿ, ನಿನ್ನ ಅತೀ ನಿಷ್ಟುರವಾದಿ ಮಾತುಗಳು ತುಂಬಾನೇ ನೋವನ್ನು ತಂದದ್ದು ಕೆಲವೊಮ್ಮೆ ನಿಜವೇ, ಆದರೂ ಒಂದು ಸಲ ಜಗಳವಾಡಿ ನೀನು ಸಮಾಧಾನ ಮಾಡಿದ ಮೇಲೆ ಇಬ್ಬರಲ್ಲೂ ಮತ್ತದೇ ಸಮಾಧಾನ... 

ನಾವಿಬ್ಬರು ಜೊತೆ ಇದ್ದದ್ದು ಬೆರಳೆಣಿಕೆಯಷ್ಟು ದಿನ ಮಾತ್ರ... ಅದು ಬದುಕಿನ ಅತೀ ದೊಡ್ಡ ಖುಷಿಯ ಕ್ಷಣಗಳು... 
ನಾನು ಆ ಕ್ಷಣಗಳನ್ನು ಕಳೆದದ್ದೂ ನನ್ನ ಅದೇ ಹಠ, ಸಿಟ್ಟು, ಜಗಳಗಳಿಂದಲೇ ನೀ ಮಾತ್ರ ಎಂದೂ ಜಗಳ ಆಡಿದವನಲ್ಲ ಬಿಟ್ಟು ದೂರ ಹೋಗು ಎಂದಾಗಲೂ ನನ್ನ ಗೆಳತಿ ನಂಗೆ ಬೇಕು ಎಂದು ರಾಜಿ ಆಗಿಬಿಡುತ್ತಿದ್ದ ಜೀವದ ಗೆಳೆಯ ನೀನು...

ಜೊತೆ ಇರುವಾಗ ನೀನೊಂದು ದಿನ ಅದ್ಯಾಕೋ ಹೇಳಿದ್ದೆ... ಬಿಡು ಸ್ನೇಹಿತರೆಂದರೆ ಜೊತೆ ಇರುವುದಷ್ಟೇ ಅಲ್ಲಾ ಎಲ್ಲೇ ಎಷ್ಟೇ ದೂರವಿದ್ದರೂ ನನ್ನದೊಂದು ಪುಟ್ಟ ನೆನಪಾಗಿ ನೀ ನಕ್ಕರೆ ಸಾಕು ಈ ಸ್ನೇಹಿ ಮನ ಸುಖಿ ಎಂದು...

ಜೊತೆ ಇರುವಾಗ ಇಂಥ ಮಾತುಗಳು ಚಂದವೇ ಆದರೆ ನಿಜಕ್ಕೂ ದೂರವಾದಾಗಲೇ ಆ ಮಾತಿನ ಆಚರಣೆ ಎಷ್ಟು ಕಷ್ಟ ಎಂದು ಅರಿವಾಗುವುದು... ಅದು ಎಷ್ಟೇ ಪೂರ್ವ ನಿರ್ಧರಿತವಾದರೂ ಅಳುವಾಗ ನಿನ್ನ ನೆನಪಾಗದ ದಿನವಿಲ್ಲ - ನಿನ್ನ ಮಡಿಲ ನೆನಪಾದಾಗ ಅಳದ ದಿನವಿಲ್ಲ...

ನಾನೂ ಎಷ್ಟು ದಿನ ಅಂತ ಅತ್ತೇನು? ರಾತ್ರಿ ಕಳೆದು ಬೆಳಕು ಹರಿವಂತೆ ನಿನ್ನ ಕಳೆದುಕೊಂಡ ನೆನಪ ನೋವಿನಿಂದ ಹೊರಬಂದು ದೇವರೆದುರು ಹೋಗಿ ಸ್ಪರ್ಧೆಗೆ ನಿಂತಿದ್ದೆ... ನನ್ನ ಸ್ನೇಹ ನಿಜವಾದರೆ, ನಾವಿಬ್ಬರೂ ಸ್ನೇಹಕ್ಕೆ ಯೋಗ್ಯರಾದರೆ, ಕೊಟ್ಟುಬಿಡು ನನ್ನ ಸ್ನೇಹವನ್ನು ಇಲ್ಲ ನಾನೇ ಸ್ನೇಹಕ್ಕೆ ಅಸಮರ್ಥ ಎಂದು ತಿಳಿದು ಇನ್ಯಾವತ್ತು ಏನನ್ನೂ  ಕೇಳಲಾರೆ ಎಂದು...

ಇದಾಗಿ  ಸುಮಾರು ಎರಡು ವರುಷಗಳ ನಂತರ ಅನಿರೀಕ್ಷಿತವಾಗಿ, ನಂಬಲು ಅಸಾಧ್ಯವಾದ ರೀತಿಯಲ್ಲಿ ನೀ ನನಗೆ ಮತ್ತೆ ಸಿಕ್ಕಿದ್ದೆ... ಆಗಲೇ “ಪ್ರೀತಿಸುವುದಾದರೆ ಪ್ರೀತಿಸಿಬಿಡು ದೇವರಿಗೂ ದೂರಾಗಿಸಲು ಕಾರಣ ಸಿಗದಂತೆ” ಎಂಬ ನನ್ನದೇ ಮನದ ಮಾತಿನೆಡೆಗೆ ನಂಗೆ ಮತ್ತೆ ನಂಬಿಕೆ ಮೂಡಿದ್ದು... ನಿಜಕ್ಕೂ ಆ ಕ್ಷಣ ನಮ್ಮ ಸ್ನೇಹದೆದುರು ದೇವರೂ ಸೋತಿದ್ದ... ಅಂದಿನ ಹತ್ತೇ ನಿಮಿಷದ ನಮ್ಮ ಭೇಟಿಯಲ್ಲಿ ಹಂಚಿಕೊಳ್ಳಲು ಇಬ್ಬರಲ್ಲೂ ಮಾತಿರಲಿಲ್ಲ ಖುಷಿಯನ್ನು ಬಿಟ್ಟು... ಅವತ್ತು ಹಿಂತಿರುಗಿ ಹೋಗುವಾಗ ಇಬ್ಬರ ಕಣ್ಣಲ್ಲೂ ಸಣ್ಣ ನೀರಿತ್ತು... ಇನ್ನೀಗ ಈ ಸ್ನೇಹ ಚಿರಂತನ - ನಿನ್ನ ಸ್ಥಾನ ನನ್ನ ಮನದರಮನೆಯಲ್ಲಿ ಶಾಶ್ವತ ಎಂಬ ಸಂದೇಶವಿತ್ತು....

ಈಗಲೂ ನೀನು ನನ್ನ ಜೊತೆಗಿಲ್ಲ, ಅತ್ತಾಗೆಲ್ಲ ನಿನ್ನ ಮಡಿಲು ಸಿಗುವುದೂ ಇಲ್ಲ...  
ಆದರೆ ನಾನೀಗ ಅಳುವುದೇ ಇಲ್ಲ... ಕಾರಣ ಅತ್ತಾಗ ನೀ ಇರದಿದ್ದರೂ ನಿನ್ನದೊಂದು ಕೈ ನನ್ನ ಕಣ್ಣಿರು ಒರೆಸಲಿದೆ ಎಂಬ ಭರವಸೆಯ ಭಾವ ನನ್ನ ಕಣ್ಣಿರನ್ನೇ ಒಣಗಿಸಿಬಿಡುತ್ತದೆ...

ನೀನು ನನಗೆ ಅತೀ ಆತ್ಮಿಯ ಯಾಕೆ ಎನ್ನಲು ಕಾರಣವಿಲ್ಲ, ಕಾರಣಗಳ ಹುಡುಕಿ ಹೋಗುವ ಮನಸ್ಸೂ ಇಲ್ಲ, ಅವಶ್ಯಕತೆಯೂ ಇಲ್ಲ... ನಿನ್ನನ್ನು ಕಳೆದುಕೊಳ್ಳುವ ಭಯವಿಲ್ಲ, ನಮ್ಮ ಸ್ನೇಹದಲ್ಲಿ ಕಳ್ಳಾಟವಿಲ್ಲ, ಒಡನಾಟದ ಹುಚ್ಚು ಬಯಕೆಗಳಿಲ್ಲ, ಹೊಟ್ಟೆಕಿಚ್ಚಿಲ್ಲ, ಪ್ರಪಂಚಕ್ಕೆ ಕೂಗಿ ಹೇಳಿ ಸಮರ್ಥಿಸಿಕೊಳ್ಳುವ ಅಗತ್ಯವೇನೂ ಇಲ್ಲ... 
ಮಾತಿಲ್ಲದಿದ್ದರೆ ಸತ್ತು ಹೋದೀತು ಎಂಬ ಭಾವಕ್ಕಿಲ್ಲಿ ಅವಕಾಶವೇ ಇಲ್ಲ... 

ಗೊತ್ತು ನನಗೆ, ನಿನ್ನ ನೇರ ಮಾತುಗಳಲ್ಲೊಂದಷ್ಟು ಪ್ರೀತಿ ಇದೆ, ಅತೀ ವಾಸ್ತವಿಕತೆಯಲ್ಲಿ ನನಗೊಂದಷ್ಟು ಬದುಕನ್ನು ಕಲಿಸುವ ತವಕವಿದೆ, ನಿಷ್ಟುರವಾಗಿ ತಪ್ಪುನ್ನು ಹೇಳಿದರೂ ಅದನ್ನು ತಿದ್ದುವ ಮನಸ್ಸಿದೆ, ಕ್ಷಮಿಸುವಷ್ಟು ಮಮತೆಯಿದೆ... 

ಮರಳಿನ ಮೂರ್ತಿಯಷ್ಟೇ ಸ್ನೇಹ ಅಂದುಕೊಂಡವಳಿಗೆ ಮರಳು ಭೂಮಿಯನ್ನೇ ತೋರಿಸಿ ಇದು ಸ್ನೇಹ ಎಂದವನು ನೀನು... 

ಜೊತೆ ಇಲ್ಲದಿದ್ದಾಗಲೂ ಒಂಟಿಯಾಗಿಸದವ ಮತ್ತು ಮಾತಿಲ್ಲದಾಗಲೂ ನನ್ನನ್ನು ಮೌನಿಯಾಗಿಸದವ ನೀನು.. 

ನನ್ನೆಲ್ಲ ನೋವ ತಗ್ಗಿಸಿ, ನಲಿವ ಹಿಗ್ಗಿಸಿ, ಏನೂ ಆಗದೆಯೇ ಎಲ್ಲವೂ ಆಗಬಲ್ಲ ನಿನಗೆ ಏನ ಹೇಳಲಿ.... ಒಂದಷ್ಟು ಪ್ರೀತಿಯನ್ನು ಬಿಟ್ಟು ಮತ್ತೇನ ನೀಡಲಿ?

ನಂದಾದೀಪದ ಬೆಳಕಲ್ಲಿ 
ನಗಿಸುವ ಸ್ನೇಹದ ನೆನಪಲ್ಲಿ 
ಗೆಳೆತನದ ಸಾರ್ಥಕತೆ ನೀಡಿದ ಎಲ್ಲರ ಬದುಕೂ ಬಂಗಾರವಾಗಲಿ ಎಂಬ ಸದಾಶಯದೊಂದಿಗೆ......... 


ಚಿತ್ರ : ನನ್ನ ಕಲ್ಪನೆಯಿಂದ ನಾನೇ ಬಿಡಿಸಿದ್ದು.