Monday, 8 April 2019

ಮತ್ತೆ ಹುಟ್ಟಲಿ ಬದುಕು ಬಯಲಲ್ಲಿ

ಬಿತ್ತುವೆನು ಬೀಜವನು  ಬರಿದಾದ ಬದುಕಲ್ಲಿ
ಹುಟ್ಟಿಬಿಡಲಿ ಕನಸೊಂದು ನನ್ನೊಳಗೂ

ಪೊರೆಯುವೆನು ಬದುಕನ್ನು
ಕತ್ತಲ ದಾಟುವ ಹಾಗೆ
ಕಂಡ ಕತ್ತಲಿಗೆ ಹಸಿವಿಲ್ಲದ ಹಾಗೆ

ಬದುಕು ಬೆಳೆಯಲಿ ಹಸಿರಾಗಿ ಇನ್ನೊಮ್ಮೆ
ಬರಡಿಗೂ ಬಾಡದಿರಲಿ
ಛಲದ ಬಳ್ಳಿ

ಹಬ್ಬಿ ಬಿಡಲಿ ದೊಡ್ಡ ಮರವೊಂದಕ್ಕೆ
ಆಸರೆಯ ಬಯಸುವ ಬದಲು
ಕಾಯುವ ಕವಚವಾಗಿ

ಹುಟ್ಟಲಿ ನನ್ನೊಳಗೆ ನೋವಿರದ  ಹೂವೊಂದು
ಸತ್ತರೂ ಕಾಯಾಗುವ ತವಕದಲ್ಲಿ

ಹಣ್ಣಾಗುವೆ ನಾನು ಮತ್ತೆ ಮಣ್ಣ ಸೇರಲು
ಮತ್ತೊಮ್ಮೆ ಬದುಕ ಬಯಲಲ್ಲಿ ಹುಟ್ಟಲು.

-ಅಭಿಸಾರಿಕೆ







Sunday, 27 January 2019

ಸ್ಕಂದಗಿರಿ ಎಂಬ ಬೆಳಕ ಬೆಟ್ಟ...

ಮಾತು ಮರೆತಿದ್ದೆನಾ? ಅಥವಾ ಏನು ಮಾತಾಡಬೇಕೂ ಎಂತಲೇ ಮರೆತಿದ್ದೆನಾ ಗೊತ್ತಿಲ್ಲ. 
ಮಾತನಾಡಲು  ಏನಿದೆ ಎಂಬುದಷ್ಟೇ ಕಾಡುತ್ತಿತ್ತು.  ಈ ಮಹಾನಗರಿಯ ಮಾಯೆಯಲ್ಲಿ ಪದೇ ಪದೇ ಕಳೆದು ಹೋದಾಗ  ನನ್ನನ್ನು ಮತ್ತೆ ಮತ್ತೆ ಹುಡುಕಿ, ಕಾಡಿ, ಕೈ ಹಿಡಿದು  ಸಮಾಧಾನಿಸುವುದೆಂದರೆ ಕಡಲು, ನದಿ, ದಾರಿ ಮತ್ತು ಬಯಲು . 

ಕಡಲು ತನ್ನೊಡಲಲ್ಲಿ  ಒಳಿತು ಕೆಡಕುಗಳನ್ನೆಲ್ಲ ಬೇರ್ಪಡಿಸಿ ಒಳಿತನ್ನಷ್ಟೇ ಒಪ್ಪಿಕೊಂಡು ಕೆಡುಕನ್ನು ದೂರ ಎಸೆಯುವ ಹಾಗೆ. ಅದೆಲ್ಲೋ ಹುಟ್ಟಿ ಅದೆಷ್ಟೋ  ಕಷ್ಟದ ಕಲ್ಲು ದಾರಿಯ ಹಾದು, ನಿಷ್ಕರುಣಿ ಬೆಟ್ಟವ ಜೀಕಿ ಭಯವಿಲ್ಲದೇ, ದಾರಿಹೋಕರ ದಾಹ ತೀರಿಸಿ  ನದಿ ನಿಲ್ಲದೇ ಕಡಲು ಸೇರುವ ಪರಿ.  ಯಾರು ಬೈಯದೂ, ನಿಂತರೂ, ಮಲಗಿದರೂ ಮಧ್ಯದಲ್ಲೇ ಮಾಯವಾದರೂ ಸದಾಕಾಲಕ್ಕೂ ಮುಗಿಯದೇ ನಿರಂತರವಾಗಿ ಸಾಗುತ್ತಲೇ ಇರುವ ಮತ್ತು ನಡೆಯುವ ಹಸಿವಿಗೆ ಸಾಥಿಯಾಗುವ ದಾರಿ.  ಎಲ್ಲವನ್ನು ಕಂಡೂ, ಒಪ್ಪಿಕೊಂಡೂ,  ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನೆ ನಿಂತುಬಿಡುವ ಬಯಲು, ಇವು ನನ್ನ ಬದುಕಿನ ಬಲು ದೊಡ್ಡ ಕೌತುಕಗಳು. 

 ನೆನಪುಗಳ ಜೋಳಿಗೆ ಸೇರಿಸಲು ಗೆಲುವಿನ ಅರ್ಥ ಹುಡುಕಲೆಂದೇ ಹೊರಟಿದ್ದು ಸ್ಕಂದಗಿರಿ ಎಂಬ ಬೋಳು ಬೆಟ್ಟದ ತುದಿಗೆ ಸೂರ್ಯನನ್ನು ನೋಡಲು. ಯಾರೋ ಕೇಳಬಹುದು ಸೂರ್ಯನನ್ನು ನೋಡಲು ಅಲ್ಲಿಗೇ ಹೋಗಬೇಕಾ ಎಂದು? ಆದರೆ ಕಷ್ಟದ ದಾರಿ ಹತ್ತಿ, ಕಾಣುವ ಬೆಳಕಿದೆಯಲ್ಲ..! ಅದು ಸುಲಭದಲ್ಲಿ ಸಿಕ್ಕಂತಲ್ಲ. ಅದಕ್ಕೆ ತೀವ್ರತರದ ಶಕ್ತಿ ಇದೆ. 

ನಡುರಾತ್ರಿ ೩.೩೦ ಕ್ಕೆ ಆರಂಭವಾದ ನಮ್ಮ ಆರೋಹಣಕ್ಕೆ ಸಾಥಿಯಾಗಿದ್ದು ಪೂರ್ಣ ಚಂದಿರನ ಬೆಳಕು. ಒಂದು ಕಡೆ ಚಂದ್ರ ಎಂಬ ಬೆಳಕು ಇನ್ನೊಂದು ಕಡೆ ಮಾನವ ನಿರ್ಮಿತ ಬೆಳಕು. ಎಷ್ಟು ಹತ್ತಿದರೂ ಮುಗಿಯುತ್ತಲೇ ಇಲ್ಲವಲ್ಲ ಎಂಬ ಸಣ್ಣ ನಿರಾಸೆ. ದಾರಿಯ ತುಂಬೆಲ್ಲ ಯಾರದೋ  ಹೆಜ್ಜೆ ಗುರುತು.  ಎಷ್ಟೇ ಹೆಜ್ಜೆ ಗುರುತಾದರೂ ನಾನು ಕರಗಲಾರೆ ಎಂಬ ಕಲ್ಲಿನ ಒರಟು  ಮನಸು. ನಡೆದಷ್ಟೂ ದಾರಿ ಹತ್ತಿದಷ್ಟೂ ಬೆಟ್ಟ. ನಿರಾಸೆಗೆ ತಂಪೆರೆದು ಸಾಥಿಯಾದ ಚಳಿಯ ಗಾಳಿ. 

ಪ್ರಕೃತಿ ಎಲ್ಲವನ್ನೂ ನೀಡಿದೆ ಆದರೆ ನಾವೇ ಪ್ರಕೃತಿಗಾಗಿ ಏನನ್ನೂ ಮಾಡಿಲ್ಲ. ಏನೆಲ್ಲಾ ಮಾಡಿಕೊಂಡೆವೋ ನಮಗಾಗಿ ಮಾತ್ರ. ಒಮ್ಮೊಮ್ಮೆ ಮನುಷ್ಯ ಸೃಷ್ಟಿಯ ಬಗ್ಗೆ ಹೆಮ್ಮೆಯಾಗುವ ನಂಗೆ  ಕೆಲವೊಮ್ಮೆ ಅಸಹ್ಯವೂ ಆಗುತ್ತದೆ. ಕೃತಕ ಬೆಳಕನ್ನು ಸೃಷ್ಟಿಸಿ ಕತ್ತಲೆಯ ಸೊಬಗನ್ನು ಮರೆತೆವು. ವಾಹನವ ಸೃಷ್ಟಿಸಿ ನಡಿಗೆಯ ಸುಖ ಮರೆತೆವು. ನಿಜ, ಕೆಲವೊಂದು ಅವಶ್ಯಕತೆಗಳು, ಆದರೂ..  ಹಗಲೂ-ರಾತ್ರಿ, ಸೋಲು-ಗೆಲುವು, ಕಷ್ಟ- ಸುಖಗಳ ಭೇದವಿಲ್ಲದ ಸ್ವರ್ಗಕ್ಕಿಂತ ಎಲ್ಲವೂ ಇರುವ ಭುವಿಯೇ ದೊಡ್ಡದಲ್ಲವಾ? ಉತ್ಸಾಹವೇ ಇಲ್ಲದ ಬದುಕಿನಿಂದ ಬಯಸುವುದಾರೂ ಏನನ್ನೂ? 

ಇಷ್ಟೆಲ್ಲಾ ಪ್ರಶ್ನೆಗಳ ಜೊತೆಗೇ ...  ೫. ೩೦ ಕ್ಕೆ ತುತ್ತತುದಿ ತಲುಪಿ ಸೂರ್ಯನಿಗಾಗಿ ಕಾಯುತ್ತಿದ್ದರೆ ಹೊಸ ಬದುಕೊಂದು ತೆರೆದುಕೊಂಡಂತಹ ಖುಷಿ. ಆಹಾ ಪ್ರತಿ ಸೂರ್ಯೋದಯಕ್ಕೂ ಹೀಗೆಯೇ ಕಾಯುವ ಬದುಕು ನನ್ನದಾಗಬಾರದಿತ್ತಾ ಎಂಬ ಭಾವ. ಅಂತೂ ೬. ೧೫ ರ ಸುಮಾರಿಗೆ ಬಂದನಪ್ಪ ಬಾಲ ಭಾಸ್ಕರ. ಅದೆಷ್ಟು ಬಣ್ಣ ಅವನಲ್ಲಿ ಜಗವ ಬೆಳಗುತ್ತೇನೆ ಎಂಬ ಅಹಂ ಕೂಡ ಇರಬಹುದು ಬೆಳೆದಂತೆ. ಮೋಡಗಳ ಮಧ್ಯದಿಂದ ಒಲವ ಸುರಿದಂತೆ ಹೊರಬಂದ ನೇಸರನಲ್ಲಿ ಮಗುವಿನ ನಗುವ ಕಂಡಂತಾಯಿತು.  ಈ ನಡುವೇ ಚಳಿ ನಾನೇನೂ ಕಡಿಮೆ ಎನ್ನುವ ಹಾಗೆ ತಿಂದು ಬಿಡುತ್ತಿತ್ತು. 

ಪ್ರಕೃತಿಯ ಮಡಿಲಿಗೆ ಹೋದಾಗ ಅದೇನೆಲ್ಲ ಹೇಳುತ್ತದೆ. ಒಂದು ದಿನವೂ ಸೂರ್ಯ ಸೋಮಾರಿಯಾಗುವುದಿಲ್ಲ ಒಂದು ನಿಮಿಷಕ್ಕೂ ಗಾಳಿ ಮಲಗುವುದಿಲ್ಲ. ಹರಿವ ನದಿ ಕಾಡುವ ಕಡಲು ಎಲ್ಲವು ಹಾಗೆಯೇ ಕರ್ತವ್ಯ ಲೋಪ ಎಂಬುದೇ ಇಲ್ಲ. ಅದೇನಿದ್ದರೂ ನಮಗೇ.... ಎಲ್ಲರಿಗೂ  ಇಷ್ಟೊಂದು ಉತ್ಸಾಹ, ಕೆಲಸದೆಡೆಗೆ ನಿಯತ್ತನ್ನು ಕೊಟ್ಟ ಸೃಷ್ಟಿಕರ್ತ ಮನುಷನಿಗೇಕೆ ಇದನೆಲ್ಲ ಕೊಟ್ಟೆ ಇಲ್ಲವೇನೋ!! ಬಹುಶಃ ಮನುಷ್ಯನಿಗೆ ಸ್ವಯಂ ಸ್ಫೂರ್ತಿಯನ್ನು ಸೃಷ್ಟಿಸಿಕೊಂಡು ಪ್ರತಿ ದಿನವನ್ನೂ ಹೊಸದಾಗಿ ನೋಡುವ ಅವಕಾಶವನ್ನು  ಕೊಟ್ಟಿರಬೇಕು. 

ಅದೇ ಖುಷಿಯಲ್ಲಿ ಬೆಟ್ಟ ಇಳಿದರೆ, ನನ್ನೊಳಗೇ  ಏನೋ  ಗೆದ್ದಂತ ಖುಷಿ. ಇಂತಹ ಬೆಟ್ಟವನ್ನ ನಾನು ಹತ್ತಿ ಬಂದೇನ ಎಂಬ ಭಾವ, ಇನ್ನೊಂದಿಷ್ಟು ದಿನ ಬದುಕಲು ಮತ್ತು ಇನ್ನೊಂದು ಬೆಟ್ಟ ಹತ್ತಲು ಹೊಸ ಸ್ಫೂರ್ತಿ ನೀಡುತ್ತದೆ. . 








ಚಾರಣದ ದೂರ : ೪ ಕಿ.ಮಿ.
ಸೂಕ್ತ ಸಮಯ : ಜನವರಿ ೧೪ ರ ಮೊದಲು.
ಮುಂಗಡ ಬುಕ್ಕಿಂಗ್ ಮಾಡಿಕೊಳ್ಳವುದು‌ ಕಡ್ಡಾಯ.

ಫೋಟೋ ಕೃಪೆ : ಜಗನ್ 

Monday, 13 August 2018

ಗೆಲುವಿನ‌ ಹಸಿವಿಗೆ ಒಂದಷ್ಟು...

ಎಲ್ಲ ದಿನಗಳು ಒಂದೇ ರೀತಿ ಇರುವುದಿಲ್ಲ ಈ ನಡುವೆ ಪ್ರತಿ ಕ್ಷಣಕ್ಕೂ ಒಂದೊಂದು ಬಣ್ಣ. ಸ್ವಂತಿಕೆ ಇದೆ ಆದರೆ  ಸ್ವಂತಕ್ಕೆ ಸಮಯವಿಲ್ಲ ಹಾಗಂತ ಸಮಯ ಪರಾವಲಂಬಿಯಲ್ಲ ಸಂಪೂರ್ಣ ಸ್ವಂತಂತ್ರ. ತೀರಾ ತಿರುಗುವ ಬಣ್ಣದ ಕಮಾನಿನಂತಾಗಿದ್ದೇನೆ ಇಂತದೇ  ಬಣ್ಣವ....  ಹೇಳಲಾರೆ ಆದರೆ ಬರಿಯ ತಿರುಗಾಟ, ಗಟ್ಟಿ ನೆಲೆಯಿಲ್ಲ. ನೆಲೆಯ ದಕ್ಕಿಸಿಕೊಳ್ಳುವ ಬಯಕೆ ಇದೆಯಾ ಇದ್ದಂತಿಲ್ಲ. ಇದು ಗೊಂದಲವಾ? ಆನಂದವಾ? ಗೊತ್ತಿಲ್ಲ. ಸುಮ್ಮನೆ ಕಾಲಕ್ಕೆ ಉತ್ತರಿಸಲು ಬಿಡಬೇಕು. ಹೂವಿಗೆ ಹಣ್ಣಾಗುವ ಯೋಗ್ಯತೆ ಇದ್ದರೆ  ಆಗದೆ ಇದ್ದಿತಾ? ಯಾವ ಭ್ರಮರದ ಹಂಗಿಲ್ಲ.

ಕೆಲವೊಮ್ಮೆ ಸುನಾಮಿಯ ಭಯ ಕೆಲವೊಮ್ಮೆ ಬರಗಾಲದ ಬರ. ಯಾವುದಕ್ಕೂ ಹೊಂದಿಕೊಳ್ಳಲಾರೆ ಹಾಗಂತ ವಿಮುಖತೆಯೂ ಇಲ್ಲ. ಸುಮ್ಮನೆ ಕೂರಬೇಕು ಮನವೆಂಬ   ಕಡಲ ಮಧ್ಯದಲ್ಲಿ. ಯಾಕೋ ಮನಸು ಕಡಲ ದಡವಾಗುವುದು ಇಷ್ಟವಿಲ್ಲ. ದಡವೆಂದರೆ ಅಲೆಯೆಸೆದ ಕಸದ ಬಯಲು. ನಾನು ಕಡಲ ಮಧ್ಯ ಕೂರಬೇಕು ಯಾವ ಕಸದ ವಾಸನೆಯೂ ತಾಗಬಾರದು ಆದರೆ ಅಲೆಯ ಭಾವ ಕಾಡಬೇಕು.

ಮನಸೇ....

ನಕಾರಾತ್ಮಕತೆ ಎಂಬುದು ಕೀಟಾಣುವಿನಂತೆ. ಕಾಣದಂತೆ ನಿನ್ನ ಕೊಲ್ಲುತ್ತಲೇ ಇರುತ್ತದೆ. ಯಾರಿಗೂ ನಿನ್ನ ಮೇಲೆ ನಕಾರಾತ್ಮಕತೆಯ ದಾಳಿ ಮಾಡಲು ಬಿಡಬೇಡ. ಬದುಕು ಒಂದೇ ಅದಕ್ಕೆ ನೀನೇ ದೊರೆ. ದೊರೆಯ ಮಾತೇ  ಅಂತಿಮ ರಾಜ್ಯದಲ್ಲಿ, ನಿನ್ನ ನಿರ್ಧಾರಗಳಿಗೆ-ಕನಸುಗಳಿಗೆ ಯಾರದೂ ಒಪ್ಪಿಗೆಯ ಹಸ್ತಾಕ್ಷರ ಬೇಕಿಲ್ಲ. ಬದುಕ ಬರೆಯ ಹೊರಟ ನಿಂಗೆ ಕೊನೆಯ ಸಹಿಯನ್ನು ಮಾಡುವ ಅಧಿಕಾರ ಮತ್ತು ಹಕ್ಕು ಎರಡೂ ಇದೆ. ಮನಸನ್ನು ನ್ಯಾಯಾಲದಲ್ಲಿ ನಿಲ್ಲಿಸಿ ಪ್ರಶ್ನಿಸೋ ಹಕ್ಕು ನ್ಯಾಯಾಧೀಶನಿಗೆ ಮಾತ್ರ ಮತ್ತು ನೀನೆ ಬರೆದ ಈ ಕಾನೂನಿನಲ್ಲಿ ನಿನ್ನದೇ ಕಾಯ್ದೆ ಕೂಡ. ಹುಳವೊಂದು ಹೂವ ತಿಂದು ಬಿಡುತ್ತದೆ ಎಂದು ತಿಳಿದ ದಿನ ಹುಳವನ್ನು ಹುಡುಕಿ ಕೊಲ್ಲಬೇಕು. ಹೂವನ್ನಲ್ಲ. ನಗುವ ಹೂವಿಗೆ ಇನ್ನೂ ಕನಸಿದೆ ಆದರೆ ಹೂವ ನಗುವ ಕೊಲ್ಲುವ ಹುಳುವಿಗಲ್ಲ.
ಹಾಗೆಯೇ ನಕಾರಾತ್ಮಕತೆಗೂ... ಮತ್ತದನ್ನ ಹುಟ್ಟು ಹಾಕುವ ಮನಸುಗಳಿಗೂ.

ಗೆಲುವಿನ ಕನಸು ಎಲ್ಲರಿಗೂ ಇದೆ. ಎಲ್ಲರಿಗೂ ಗೆಲುವುಬೇಕು, ಗೆಲುವನ್ನು ನೀರಿನಂತೆ ಕುಡಿದುಬಿಡುವ ಹಂಬಲ  ಮತ್ತು ಹಸಿವು. ಆದರೆ  ಮನವೇ, ಅರ್ಥೈಸಿಕೊ ಗೆಲುವೆಂಬುದು ಸಾಗರ ಅದೂ ಸಿಹಿನೀರ ಸಾಗರ ಇದ ಸೇರಲು ತುಂಬಾ ದೂರ ಚಲಿಸಬೇಕು. ಮಳೆಯ ನೀರಿನೊಂದಿಗೆ ಸೇರಿ ತುಂಬಾ ಅಬ್ಬರಿಸಿ ಕಡಲ ಸೇರುವ ತವಕಬೇಡ ನಿಂಗೆ. ಸುಡು ಬೇಸಿಗೆಯ ಬಿಸಿ ಧರೆಯ ಹಸಿವ  ಇಂಗಿಸಿ ನಿನ್ನದೇ ಆತ್ಮಶಕ್ತಿಯೊಟ್ಟಿಗೆ ನಿಲ್ಲದೆ ಹರಿದು ಸಾಗರವ ಅಪ್ಪಿಕೋ. ಯಾರ ಕರುಣೆಯ ಕಾಲುವೆಯೂ ಬೇಡ ಹಾಗೆಯೇ ಯಾರ ಕಿಚ್ಚಿನ ತಡೆ ಗೋಡೆಯೂ.

 ನೀರೆಂದರೆ ಹಂಬಲಿಸುವ ಭುವಿಯೂ ಒಂದು ಮಟ್ಟಿಗೆ ದಾಹ ತೀರಿದ ದಿನ ನೀರನ್ನು  ಹರಿಯಲು  ಬಿಟ್ಟು ಸುಮ್ಮನೆ ಬೆತ್ತಲಾಗಿ ನಿಂತು ಬಿಡುತ್ತದೆ. ಹಾಗೆಯೇ ನಿನ್ನ ಹಿಡಿಯ ಬಂದ ಬಂಧಗಳೂ. ಒಂದು ಸಮಯದ ನಂತರ ಎಲ್ಲ ತೀವ್ರತೆಯೂ ಕಡಿಮೆಯಾಗುತ್ತದೆ ಮತ್ತು ಅಂದು ನಿನ್ನ ಹರಿವಿನ ದಾರಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಸುಮ್ಮನೇ ನಗುತ್ತ ಎಲ್ಲವನ್ನೂ ನೋಡುತ್ತಿರು ನಿನ್ನ ಬದುಕ ದಾರಿ ಅದಾಗೇ ಸೃಷ್ಟಿಯಾದೀತು.


ಬದುಕು ಎಲ್ಲರ ಬಯಕೆ ಮತ್ತು ಬಯಕೆಗಳು ಎಲ್ಲರ ಬದುಕು, ನದಿಯ ಕನಸು ಸಾಗರವ ಸೇರುವುದೇ ಹೊರತು ಸಾಗರವೆಂದು ನದಿಯಾಗ ಬಯಸುವುದಿಲ್ಲ. ಎಲ್ಲವನ್ನೂ ನನ್ನ ಕಣ್ಣುಗಳಲ್ಲಿ ನೋಡುವುದು ಸುಖ ಬೇರೆಯವರ ಕಣ್ಣಾಗಿ ಇರುವುದೇ ಕಷ್ಟ. ಅದಕ್ಕೆ ನದಿ ಹರಿಯುತ್ತದೆ ಮತ್ತು ಅಲೆ  ಜಿಗಿಯುತ್ತದೆ. 


Sunday, 17 June 2018

ಕನಸಿನ ಹುಟ್ಟುಹಬ್ಬಕ್ಕೆ......

ನಾಲ್ಕು ವರುಷಗಳು ಸಂಪೂರ್ಣಗೊಂಡವು ಅಭಿಸಾರಿಕೆ ಎನ್ನುವ ನನ್ನ ಬದುಕಿನ ಕನಸಿಗೆ. ಪ್ರಾರಂಭಿಸಿದ ಹುರುಪು ಇಂದಿಲ್ಲವಾದರೂ ಖುಷಿಗಳಂತೂ ಹಾಗೆಯೇ ಇದೆ. 

ಕಾಲವೆಂಬುದು ಹಾಗೆಯೇ ಯಾರನ್ನೂ ಕೇಳದೆ ಸುಮ್ಮನೆ ಸರಿದುಬಿಡುತ್ತದೆ. ನಾವುಗಳು ಬದಲಾಗಬೇಕು ಅಷ್ಟೇ . ಆದರೆ, ಎಷ್ಟೋ ಸಲ ಅದೇ ಸೂರ್ಯ,ಅದೇ ಚಂದ್ರ, ಅದೇ ಭೂಮಿ ಬದಲಾವಣೆ ಹೇಗೆ ಸಾಧ್ಯ? ಎನಿಸಿಬಿಡುತ್ತದೆ. ಸತ್ಯವೆಂದರೆ, ಬದಲಾವಣೆಗೆ ಸಾವಿರ ಅರ್ಥ, ಹುಡುಕಬೇಕಷ್ಟೆ.  ಮೊದ ಮೊದಲು ನನ್ನ ಖಾಸಗಿ ಪಟ್ಟಿಯಲ್ಲಿ ಬರೆಯುತ್ತಿದೆ ಜೊತೆಗೆ ಯಾವುದೊ ಪುಟದ ಹಿಂಭಾಗದಲ್ಲಿ ಅನ್ನಿಸಿದ್ದನ್ನ ಸುಮ್ಮನೆ ಬರೆದೆಸೆಯುತ್ತಿದೆ. ಅದೆಲ್ಲಿಂದ ಹುಟ್ಟಿತೋ ಅಭಿಸಾರಿಕೆಯ ಕನಸು ಗೊತ್ತಿಲ್ಲ. ತಿಂಗಳಿಗೊಂದಾದರೂ ಬರೆಯಬೇಕು ಅಂತ ಅಂದುಕೊಂಡಿದ್ದೆ ಕೂಡ. 

ಇಲ್ಲಿ ನನ್ನದೇ ಬುದ್ಧಿಯೊಂದಿಗೆ,  ಭಾವದೊಂದಿಗೆ ಮಾತನಾಡಿದ ಮಾತುಗಳಿವೆ, ನನ್ನ ಮಡಿಲಿನಲ್ಲಿ ನಾನು ಮಲಗಿ ನಂಗೆ ಮಾಡಿಕೊಂಡ ಸಮಾಧಾನವಿದೆ.  ನನ್ನ ಗೊಂದಲಗಳು, ಬೇಸರಗಳು, ಅಪರಾಧಿ ಭಾವಗಳಿಗೆ ನಾನೆೇ  ಕಟ್ಟಿಕೊಂಡ ಸಮರ್ಥನೆಗಳಿವೆ  ಅಷ್ಟೇ. 

ಹೇಳಿಕೊಳ್ಳುವಷ್ಟೇನೂ ಬರೆದುಕೊಂಡಿಲ್ಲ,  ಬರಿ ಇಪ್ಪತ್ತ ಮೂರು ಬರಹಗಳು ಮಾತ್ರ ಈ ನಾಲ್ಕು  ವರುಷಗಳಲ್ಲಿ. ಇನ್ನೆಷ್ಟು ಬರೆಯುತ್ತೇನೆ ಎಂದರೆ ಗೊತ್ತಿಲ್ಲ. ನಂಗೇ ನನ್ನ ಬರಹಗಳು ಒಂದೇ ಸಾಮ್ಯತೆಯ ಬರಹಗಳಾಗಿ ಅನ್ನಿಸುತ್ತಿವೆ. ಹೊಸ ಬರಹಗಳು ನನ್ನನ್ನೇ ಸಮಾಧಾನಿಸುವಲ್ಲಿ ಸೋಲುತ್ತಿವೆ. 

ಆದರೆ , ಇಂದಿಗೂ ನನ್ನೊಳಗೆ ಅಭಿಸಾರಿಕೆ ಎಂಬ ಧ್ವನಿಯೇ ಒಂದು ಉತ್ಸಾಹವನ್ನ ಕೊಡುತ್ತದೆ. ಅವಳಿಗೆ ನಿರಂತರ ಚಲನೆ ಇದೆ ಮತ್ತು ಎಂದಿಗೂ ಸಾವಿಲ್ಲದ ಕನಸುಗಳಿವೆ ಎಂಬ ಪ್ರತಿಧ್ವನಿಯೇ ಹೊಸದೊಂದು ಕನಸಕಟ್ಟಿಬಿಡುತ್ತವೆ. ಅಭಿಸಾರಿಕೆ ಮಹಾನ್ ಸ್ವಾರ್ಥಿ ಮತ್ತವಳಿಗೆ ಆ ಸ್ವಾರ್ಥವೆಂದರೆ ತುಂಬಾ ಇಷ್ಟ. 


ನನ್ನದೆಷ್ಟಿವೆಯೋ ಗೊತ್ತಿಲ್ಲ ಆದರೆ ಒಂದಷ್ಟು ಜನ ಓದಿದ್ದಾರೆ. ಯಾರ ಭಾವವೇನೂ ಗೊತ್ತಿಲ್ಲ. 

ಖುಷಿಗಳಿಗಿಂತ ನೀರಿಕ್ಷೆಗಳಿಲ್ಲ ಬದುಕಿಗೆ.  ಮತ್ತೆ ಮತ್ತೆ ಹುಟ್ಟಲಿ ನನ್ನೊಳಗೆ ಅಭಿಸಾರಿಕೆ ಮುಗಿಯದ ದಾರಿ ನಿಲ್ಲದ ಪಯಣದಲ್ಲಿ. 

ಹುಟ್ಟುಹಬ್ಬದ ಶುಭಾಶಯಗಳು.... 

Tuesday, 13 March 2018

ಸುಮ್ಮನೆ‌ ನನ್ನೊಳಗಿನ ನಂಗೆ....

ಮನಸೇ,

ಎಷ್ಟೊಂದು ಹೊರಳುಗಳು ಬದುಕೆಂಬ ನಡಿಗೆಗೆ. ಎಷ್ಟೊಂದು ಕತ್ತಲು, ಎಷ್ಟೊಂದು ಭಯಗಳು ಎಷ್ಟೊಂದು ಖುಷಿಗಳು. ಪಡೆದುಕೊಂಡೆನೆಂದು ಮೆರೆಯುವ ಕಾಲಕ್ಕೆ ಕಳೆದುಕೊಳ್ಳಬಹುದೆಂಬ ಭಯ. ಇನ್ನೇನು ಬದುಕು ಮುಗಿದೇ ಹೋಯಿತೆಂಬ ಭಯಕ್ಕೆ ಬಿದ್ದಾಗ ಯಾವುದೋ ಭರವಸೆಯ ಬೆಳಕು....

ನೀನೆಂದರೆ ನನ್ನೊಳಗೆ ಒಂಥರಾ ಮುಗಿಯದ ಗೊಂದಲ, ಹೋರಾಟ. ಈ ನಡುವೆ ನನ್ನೊಳಗೆ ಮಾತಿಗಿಂತ ಮೌನ ಕಾಡಿದ್ದೆ ಹೆಚ್ಚು. ಅದೆಷ್ಟು ಹೂವುಗಳು ಬದುಕ ಬಯಲಲ್ಲಿ. ಆದರೆ ಅಸಹಾಯಕ ನಾನು ಯಾವುದನ್ನು ನೋಡಲಾರೆ. ಆದರೂ ಒಂಥರಾ ಭಯ, ಮುಳ್ಳುಗಳ ತಿರಸ್ಕರಿಸಬಹುದು ಆದರೆ ಹೂವುಗಳ ನೋಡದೆ ನಡೆಯಲಿ ಹೇಗೆ?

ಒಪ್ಪುತ್ತೇನೆ, ಎಲ್ಲ ಹೂವುಗಳು ಬದುಕ ಪೂರ್ತಿ ಬರಲಾರವು ಯಾಕೆಂದರೆ ಸಿಕ್ಕಿದ್ದು ಪ್ಲಾಸ್ಟಿಕ್ ಹೂವುಗಳಲ್ಲ ನಿಜದ ಭಾವದ ಪರಿಮಳ ತುಂಬಿದ ಒಲವ ಹೂವುಗಳು. ಅದೆಷ್ಟೋ ಕಾಲ ಮನಸು ಎಂಬುದೊಂದು ಇದೆ ಎಂಬ ನಂಬಿಕೆಯೇ ಇಲ್ಲದೆಯೇ ಬದುಕಿದ್ದೇನೆ ಹಾಗಂತ ಭಾವತೀವ್ರತೆ ಇರಲಿಲ್ಲ ಎಂತಲ್ಲ ಆದರೆ ವಾಸ್ತವದ ಪರಿಕಲ್ಪನೆ ಇತ್ತು.

ಆದರೆ ಈ ನಡುವೆ ಮನಸಿನ ಗೊಂದಲಗಳ ಪ್ರಶ್ನಿಸಲಾಗದೆ, ನಿಭಾಯಿಸಲಾಗದೆ  ನಂಗೆ ನಾನು ಅರ್ಥವಾಗದೆ ಒಂಥರಾ ಕಳೆದು ಹೋಗಿದ್ದೇನೆ.

ಅದೆಷ್ಟು ಸಲ ಹೇಳುವುದು ನಿಂಗೆ, ತಿರುವುಗಳು ಸಾವಿರ ಬರಬಹುದು ಆದರೆ ಪಯಣ ಮುಗಿಯುವುದಿಲ್ಲ. ಪ್ರತಿ ತಿರುವು ಹೊಸ ದಾರಿಯ ಪ್ರಾರಂಭ. ಈ ನಡುವೆ ನೀನು ನೀನಾಗಿಲ್ಲ, ಒಳಗೊಳಗೇ  ಕಳೆದುಹೋಗುತ್ತಿದ್ದಿಯ. ಭಾವಸ್ರಾವಕ್ಕೆ ಹೆದರಿ ಮರುಭೂಮಿಯಾಗುತ್ತಿದ್ದೀಯ. ಆದರೆ ನೆನಪಿಡು,  ಇಲ್ಲಿ ಪ್ರತಿ ದಿನಕ್ಕೂ ನಿಂಗಾಗೆ  ಅರಳುವ ನಿತ್ಯ ಮಲ್ಲಿಗೆಯಿದೆ. ದಿನವೂ ಸಾವಿರ ನಗೆಯ ಮಲ್ಲಿಗೆಯೇ ಅರಳದಿರಬಹುದು. ಆದರೆ ಯಾವಾಗಲಾದರೂ ಒಂದೋ ಎರಡೋ ಅರಳಬಹುದು.

ನೆನಪಿಡು, ಬದುಕು ಅರಿತಷ್ಟೂ ವಿಸ್ಮಯದ ಸಿರಿ. ಖಾಲಿಯಾಗದ ಬೊಗಸೆ ಪ್ರೀತಿ ಮತ್ತು ಬಿದ್ದರೂ ಪ್ರಯತ್ನ ಬಿಡದ ಮಗುವಿನ ತೊದಲು ನುಡಿ ಮತ್ತು ಮೆದು ನಡಿಗೆ.

ನೋವುಗಳು, ಗೊಂದಲಗಳು, ಭಯಗಳು ಎಲ್ಲರ ದಿನನಿತ್ಯದ ಕಾಯಕಗಳು. ಆದರೆ ಯಾವ ಭಾವವೂ ತುಂಬಾ ಕಾಲ ನಮ್ಮ ಕಾಡಬಾರದು.
ಮನಸೇ, ನೀನು ಅತೀ ಭಾವುಕ. ಅದೇ ನಿನ್ನ ಬದುಕಿನ ದುರಂತಕ್ಕೆ ಕಾರಣವಾಗುತ್ತಿದೆ. ಈ ನಡುವೆ ಬದುಕುವ ಪ್ರಕ್ರಿಯೆಯೇ ಬದಲಾಗಿದೆ. ಬದಲಾಯಿಸಿಕೊಳ್ಳುವುದು ತುಂಬಾ ಇದೆ. ಕೆಲವೊಮ್ಮೆ ಅದೆಷ್ಟು ಬೇಸರವಾಗುತ್ತೆ ಎಂದರೆ ಕಣ್ಣ ಮುಂದೆ  ಬರಿಯ ಕತ್ತಲೆ ಕಾಣಿಸಿಬಿಡುತ್ತದೆ. ಯಾಕೋ ಬೆಳಕಿನ ಛಾಯೆಯನ್ನೇ,ಮರೆಯದಂತ ಭಯ ಕಾಡುತ್ತದೆ. ಗೊತ್ತು, ಕತ್ತಲ ಹಿಂದೆ ಬೆಳಕಿದೆ ಕತ್ತಲ ಭಾವವಿಲ್ಲದಿರೆ ಬೆಳಕಿಗೆ ಹೆಸರಿಲ್ಲ ಎಂದು. ಆದರೆ, ಸಾಮಾನ್ಯ ಮನುಷ್ಯ ಜನ್ಮ ನನ್ನದು, ಹಗಲು-ರಾತ್ರಿಗಳಿಗೆ ಸಮ ಪಾಲು ಇಲ್ಲಿ. ಆದರೂ, ಕತ್ತಲೆಂದರೆ ಭಯ. ಯಾಕೆಂದರೆ ಬೆಳಕು ಹುಚ್ಚು ಭರವಸೆಗಳ ಸೃಷ್ಟಿಸಿದೆ ಮತ್ತು ಹಗಲ ಕನಸುಗಳು ನನ್ನ ಸೃಷ್ಟಿ, ಮತ್ತದರ ಸಾಕ್ಷಾತ್ಕಾರ ಕೂಡ ನನ್ನದೇ ಆಯ್ಕೆ. ಆದರೆ ರಾತ್ರಿಯ ಕನಸುಗಳು ನನ್ನ ಆಯ್ಕೆ ಅಲ್ಲ. ನಂಗೆ ಕನಸೆಂದರೆ ಭಯ, ಅದು ನಿಜವಾದರೆ ಪಾಪ ಪ್ರಜ್ಞೆ.

ಮನವೇ, 

ಸುಮ್ಮನೆ ನನ್ನೊಳಗೆ ನನ್ನ ಮುಳುಗಿಸಿಬಿಡು, ನಡೆಸು, ಹಾರುವ  ಶಕ್ತಿ ನೀಡು  ಮತ್ತು ಸುಮ್ಮನೆ ಮಲಗುಕೊಳ್ಳುವ ನೆಮ್ಮದಿಕೊಡು,  ಅದೆಷ್ಟೊ  ದಿನದಿಂದ ಮನಸೆಂಬುದು ಒಂಥರಾ ಗೊಂದಲಗಳ ಗೂಡಾಗಿದೆ, ನಗುವೆಂಬುದು ಅಶಕ್ತವಾಗಿದೆ. ಸಾಕಿನ್ನು ಈ ಕ್ಷಣವೇ ಹೊಸ  ಬದುಕಿನ  ಯುದ್ಧಕ್ಕೆ ಮುನ್ನುಡಿ ನೀಡು ಮತ್ತು ಹಿನ್ನುಡಿಯಲ್ಲಿ ಬರೆದಿಡು "ಈ ಬದುಕಿನ್ನೂ ಮುಗಿದಿಲ್ಲ ಈಗಿನ್ನು ಶುರುವಾಗಿದೆ".

Sunday, 20 August 2017

ಮಹಾನಗರಿಯಲ್ಲಿ ಮೂರು ವರುಷ..‌

ಈ ಮನಸೆಂಬೋ ಸಾಗರದ ನಡು‌ ಮಧ್ಯ ನಿಂತು ಮಾತಾಡಬೇಕು ಎನಿಸುತ್ತಿದೆ. ಆ ಕಡೆ‌ ಒಂದಷ್ಟು ‌ಈ‌ ಕಡೆ‌ ಒಂದಷ್ಟು ‌ಉಪ್ಪುಪ್ಪು ನೀರು. ನಡು‌ಮಧ್ಯ‌ ನಿಂತ‌ ನಂಗೆ‌ ಸಿಹಿನೀರ ಬಯಕೆಯೇ ಇಲ್ಲ. ಬಯಕೆ‌ ದಡ‌ಸೇರುವ ಕನಸಿನದ್ದಾ‌ ಗೊತ್ತಿಲ್ಲ.

ಬೆಂಗಳೂರೆಂಬೋ ಮಹಾ‌ಗರ್ಭಕ್ಕೆ‌ ಬಂದು‌ಸೇರಿ‌ ಮೂರು‌ ವರುಷಗಳು‌ ಕಳೆದವು. ಇಲ್ಲಿ‌ಪಡೆದದ್ದು‌ ಕಳೆದದ್ದು ಎಲ್ಲವೂ‌ ಇದೆ. ಬದುಕಿಗೋಸ್ಕರ‌ ನಡೆಸುವ‌ ಹೋರಾಟವಿದೆ. ನನ್ನಂತದೇ‌ ಸಾವಿರ‌ಕನಸುಗಳ ಪರದಾಟವನ್ನೂ‌ ಕಂಡಿದ್ದೇನೆ. ಬದುಕೆಂದರೆ‌ ಹೊಟ್ಟೆ‌ತುಂಬಿಸಿಕೊಳ್ಳುವ‌ ಹೋರಾಟವಷ್ಟೇ‌ ಅಲ್ಲವಾ? ಮನಸು‌, ಪ್ರೀತಿ‌, ಭಾವನೆ‌ ಎಲ್ಲವೂ‌ ನಂತರ ಅನಿಸಿದೆ‌. ಆದರೆ‌ ಅದೆಷ್ಟೋ‌ ಬಾರಿ‌ ತರಕಾರಿ ಮಾರುವ‌ವ‌ ಬಿಸಿಲಲ್ಲ, ಬರಗಾಲಲ್ಲಿ ಮನೆ‌ಮನೆಯ‌ ಅಲೆಯುವುದು‌ ಮನೆಯಲ್ಲಿ‌ ಕಾಯುವ ಯಾರದೋ‌ ಮೇಲಿನ‌ ಪ್ರೀತಿಗೆ‌ ಅಲ್ಲವಾ‌ ಅಂತಲೂ ಎನಿಸಿದೆ.

ಇಲ್ಲಿ‌ ಬಂದಾಗಿನಿಂದ‌ ಪ್ರತಿ‌ ನಿತ್ಯವೂ ಬದುಕ ಹೊಸ ಹೊಸ ಪಾಠ ಕಲಿಯುತ್ತಿದ್ದೇನೆ. ಕಾಲು ನೋಯುವಷ್ಟು‌ ನಡೆದಿದ್ದೇನೆ.  ಕಾಲು ನೋವೆಂದು‌ ನಡೆಯಲೂ‌ ಆಗದೇ‌ ಮಲಗಿದ್ದೇನೆ. ಕೊಟ್ಟ ದುಡ್ಡಿಗೆ‌ ಚಿಲ್ಲರೆ‌‌ ಕೊಡದೇ ಮೋಸ‌ಮಾಡಿದ‌‌ವನಿಂದ‌‌ ಹಿಡಿದು, ನಡೆಯಲೂ‌ ಕಷ್ಟಪಡುವ  ಯಾರೋ ಮಹಾ‌ತಾಯಿ ಅದ್ಯಾವುದೋ ದಾರಿ‌ ತೋರಿಸಿದ್ದೂ‌‌ ಇದೆ.

ಕಣ್ಣು‌ಹಾಯಿಸಿದಷ್ಟೂ‌ ದೂ‌ರಕ್ಕೆ‌ ಮನುಷ್ಯರೇ‌ ಕಾಣುವ‌ ಇಲ್ಲಿ ತೀರಾ‌ಕಾಡಿದ್ದು ಒಂಟಿತನದ ಹಸಿವು. ಯಾವಾಗಲೂ ಓಡಾಡುತ್ತಲೇ ಇರುವ ಮನುಷ್ಯ ಸಾಗುತ್ತಿರುವ ದಾರಿ ಮತ್ತು ಸೇರುವ ಗುರಿ ಮಾತ್ರ ನಿಗೂಢವೇ ಸರಿ. ಮಾತು ಬರದ ಸಾವಿರ ಮರಗಳು  ಸುತ್ತ ಇದ್ದರೆ‌ ಬರದ ಒಂಟಿತನ ಮಾತು ಬರುವ ಹತ್ತು ಜನ ಸುತ್ತ ಇದ್ದರೆ ಹೆಚ್ಚುತ್ತದೆ. ಮನುಷ್ಯ ಒಂಟಿತನವ ಕಳೆಯಲು ಸಂಬಂಧಗಳ ಕಟ್ಟಿಕೊಂಡ ಮತ್ತು ಕಟ್ಟಿಕೊಂಡ ಸಂಬಂಧಗಳಿಂದ ಒಂಟಿತನವ ಸುತ್ತಿಕೊಂಡ. ಮನುಷ್ಯ ‌ಒಂಟಿಯಾದಷ್ಟು‌ ಕನಸುಗಾರನಾಗುತ್ತಾನೆ. ತನ್ನ ತಾನು ಪ್ರೀತಿಸಿಕೊಂಡಷ್ಟು ಕ್ರೀಯಾಶೀಲನಾಗುತ್ತಾನೆ. ಕ್ರೀಯಾಶೀಲತೆ ಮತ್ತಷ್ಟು ‌ಪ್ರೀತಿಸಿಕೊಳ್ಳುವಂತೆ ಮಾಡುತ್ತದೆ.

ಮಹಾನಗರಿಯಲ್ಲಿ ಮನೆ ಕಟ್ಟುವುದು‌, ಮನೆ ಒಡೆಯುವುದು ಎರಡು ಬಹು‌‌ಸುಲಭ ಹಾಗೆಯೇ ಮನಸುಗಳನ್ನೂ.... ಆದರೆ ಮಾತು‌, ಮುತ್ತಷ್ಟು‌ ಸುಲಭವಲ್ಲ ಇಲ್ಲಿ. ಮುತ್ತು‌ಸಿಕ್ಕಷ್ಟು‌ ಸುಲಭವಲ್ಲ ಮುತ್ತಿನಂಥ‌ ಮಾತು‌ಸಿಗುವುದು. ಮನಸು‌ ಗೆಲ್ಲುವುದು‌ ಕಷ್ಟವಲ್ಲ ಅಷ್ಟಕ್ಕೂ‌ ಮನಸಿಗೆ‌ ಅರ್ಥವಿಲ್ಲ. ಗೆಲುವಿಗೆ ಬೆಲೆಯಿಲ್ಲ.

ನದಿ ಹರಿಯುವಾಗ‌ ಮಾತ್ರ ಅದಕ್ಕೆ ಅದರದ್ದೆ  ಹೆಸರು‌.  ಹಾದಿಬೀದಿಯವರೆಲ್ಲ ಅದನ್ನು‌ಹೊಗಳಿದ್ದೆ‌. ಆದರೆ ಅದು‌‌ ಯಾವತ್ತು‌ ಸಾಗರನ ಸೇರಿಕೊಂಡಿತೋ ಅದರ ಅಸ್ತಿತ್ವಕ್ಕೆ ‌ಬೆಲೆಯಿಲ್ಲ ಕಡೆಗೆ ಅದು‌ ಸಾಗರನ ಸೇರಿದ್ದರ ಕುರುಹೂ‌ ಇಲ್ಲ. ಮಹಾನಗರಿಯೂ‌ ಹೀಗೆಯೇ.

ಸಾವಿರ‌ ನದಿಗಳು‌ ಸೇರಿಯೇ ಸಾಗರವಾಗಿದ್ದು ಆದರೆ‌ ಒಮ್ಮೆ ಸಾಗರವ ಸೇರಿದ‌ ಮೇಲೆ‌ ನದಿಗೆ ಅದರ ಮೂಲ ಹರಿವಿಲ್ಲ, ಬಣ್ಣವಿಲ್ಲ ಮತ್ತು ರುಚಿಯೂ ಇಲ್ಲ. ಮೂ‌ಲ  ಸ್ವಭಾವವೇ ಉಳಿಯದ ಮೇಲೆ‌ ಅದು ನದಿಯಾಗಿ‌ ಉಳಿಯುವುದಾದರೂ‌ ಹೇಗೆ?
ಮಹಾನಗರಿಯೂ ಅಷ್ಟೇ, ವೇಷಭೂಷಣದಿಂದ‌ ಹಿಡಿದು ಯೋಚಿಸುವ ರೀತಿಯನ್ನೇ‌ ಬದಲಾಯಿಸುತ್ತದೆ. ಬದಲಾಯಿಸಿಕೊಳ್ಳಲು‌ ಯಾರೂ ಹೇಳಿಲ್ಲ ಆದರೂ ಬದಲಾವಣೆ‌ ಇಲ್ಲಿಯ‌ ನಿಯಮ. 
ಬದಲಾಗಿದ್ದಕ್ಕೆ ಬೇಸರವಿಲ್ಲ ಹಾಗೆಯೇ,‌ ಅಸ್ತಿತ್ವದ‌ ಹುಡುಕಾಟಕ್ಕೂ.  ಬಾಹ್ಯ ಬದಲಾವಣೆಯೇ ಬದುಕ ಬದಲಾವಣೆಯಲ್ಲ. ಮಹಾನಗರಿ ಆಂತರಿಕ ಬದಲಾವಣೆಯನ್ನೂ ಮಾಡುತ್ತಲೇ ಇರುತ್ತದೆ.

ಸುಲಭವಿರಲಿಲ್ಲ, ಕಾಡಿನಲ್ಲಿ ಒಂಟಿಯಾಗಿ
ಹರಿವಾಗ‌ ಸಿಕ್ಕ ಹೆಸರನ್ನು ಉಳಿಸಿಕೊಳ್ಳುವುದು. ಅಲ್ಲಿದ್ದಾಗ ಮಾತ್ರ ಕಾವೇರಿ,ಗೋಧಾವರಿ,ಕಾಳಿ‌ ಸಾಗರವ‌ ಸೇರಿದ‌ ಮೇಲೆ ಅದು‌ ಸಾಗರ‌ ಅಷ್ಟೇ.  ಇಲ್ಲೂ ಅಷ್ಟೇ ಒಮ್ಮೆ ಗುಂಪ ಸೇರಿದೆಯೋ ನೀನೂ‌ ಗುಂಪಿನ‌ ಒಬ್ಬ ಸದಸ್ಯ ಮಾತ್ರ. ಆದರೆ ಗುಂಪಿನ  ಸದಸ್ಯತ್ವವೂ ಒಂಥರ ಖುಷಿಯೇ. ಬದಲಾವಣೆಗೆ ಹಸ್ತ‌ ಚಾಚುವ ನಗರಿ‌ ಬದಲಾಗಲಾರೆ‌ ಎಂದರೆ‌ ಅಲ್ಲೇ ಇರು‌ ಎಂದು‌ ಮುಂದೆ ‌ಸಾಗುತ್ತದೆ.
ನಾನು‌ ಎಂಬುದಕ್ಕೆ‌ ಸಾವಿರ‌ ಅರ್ಥ. ಕಳೆದೋದೆ ಎಂದರೆ ಶೂನ್ಯ ಭಾವ, ಬದಲಾದೆ ಎಂದರೆ‌ ಪ್ರಗತಿಯ ಸಂಕೇತ.

ನಾನೇನೂ ಮಹಾನಗರಿಯ ದ್ವೇಷಿ‌ ಅಲ್ಲ. ಇಲ್ಲಿ ನನ್ನ ಬದುಕಿಗೊಂದು‌ ಸ್ವಾಭಿಮಾನ ‌ಸಿಕ್ಕಿದೆ. ಸಂಬಳ ಬಂದ ದಿನದ‌ ಖುಷಿಯೇ ತಿಂಗಳ ಪೂರ್ತಿ ಇರಲಾರದು‌ ಆದರೆ‌ ಮತ್ತೆ ಖುಷಿಪಡುವ ದಿನ‌ ಬಂದೇ ಬರುತ್ತದೆ.  ಈ ಬಕಾಸುರನಂಥ ಬೆಂಗಳೂರಲ್ಲಿ ಪ್ರತಿ ಕ್ಷಣವೂ ನನ್ನನ್ನ ಹುಡುಕಿಕೊಳ್ಳುವ ಖುಷಿಯಿದೆ. ಸೋತರು‌ ಗೆದ್ದರೂ ನಂಗೆ ನಾನು‌ ಸಂಪೂರ್ಣ ‌ದಕ್ಕಿದ್ದೇನೆ. ಗೆಲುವಿನ ಅರ್ಥ ವಿಶಾಲವಾಗಿದೆ. ಇಷ್ಟಕ್ಕೂ ಬದುಕು ಮತ್ತು ಗೆಲುವು ಯಾರೋ ವ್ಯಾಖ್ಯಾನಿಸಿ ಬರೆದಿಟ್ಟ ಸಂವಿಧಾನದ ಸಾಲುಗಳಲ್ಲ. ಪ್ರತಿದಿನಕ್ಕೂ ನಮ್ಮೊಳಗೆ ಹುಟ್ಟಿ ಹೊಸ ಅರ್ಥ ಕೊಡುವ ಕಾವ್ಯದ ಹಾಗೇ ಅಲ್ಲವಾ??

Wednesday, 5 July 2017

ನಾನು.....!?

ನಾನು ಕಡಲಾಗಬೇಕಿತ್ತು
ನೋವುಗಳ ದಡಕೆಸೆದು ಶುಭ್ರವಾಗಬಹುದಿತ್ತು
ಹೊಸ ಹೊಸ ಅಲೆಯಾಗಿ ಮುನ್ನುಗ್ಗಬಹುದಿತ್ತು
ನನ್ನದೇ ಅಂತರಂಗವ ಮಂಥಿಸಿಕೊಂಡು ನಿರಾಳವಾಗಬಹುದಿತ್ತು.

ನಾನು ಮರವಾಗಬೇಕಿತ್ತು.
ದಿನ ದಿನವೂ ಹಸಿರ ಕನಸ ಚಿಗುರಿಸಬಹುದಿತ್ತು
ಕಳೆದ ನೋವುಗಳ ಎಲೆಗಳಾಗಿ ಉದುರಿಸಿಬಿಡಬಹುದಿತ್ತು.
ಎಲ್ಲವೂ ತಿಳಿದೂ ಯಾವುದಕ್ಕೂ ಸ್ಪಂದಿಸದೇ ನಿಂತುಬಿಡಬಹುದಾಗಿತ್ತು.

ಸುಮ್ಮನೆ ಬೇಕೆನಿಸಿದಾಗ ಓದುವ ಪತ್ರಿಕೆಯಾಗಬೇಕಿತ್ತು.
ಇಂದಿನದನ್ನ ಇಂದಿಗೆ ಅರ್ಥೈಸಿಕೊಳ್ಳಬಹುದಿತ್ತು.
ನಿನ್ನೆಗಳ ಹರಿದೆಸೆಯಬಹುದಿತ್ತು
ಯಾರದೋ ಭಾವಕ್ಕೆ ಅಕ್ಷರವಾಗಬಹುದಿತ್ತು.

ಆದರೆ ನಾನು ಕೇವಲ ನಾನಾದೆ ಮತ್ತು ನನ್ನೊಳಗಿನ‌ ನನ್ನ ಹುಡುಕಿಕೊಳ್ಳುವ ಹಠಕ್ಕೆ ಶರಣಾದೆ.