Tuesday, 24 February 2026

ಪ್ರೇಮವೆಂದರೆ

ಪರಿವೆಯಿಲ್ಲದೆ ಹರಿವ ನದಿ,
ನಿರಂತರ ನುಗ್ಗುವ ಹಸಿವು,
ಹೆಸರಿಲ್ಲದ ಹೆಜ್ಜೆಗೆ ಹಂಗಿನ ಭಯವಿಲ್ಲ.

ಗಾಳಿಯಂತೆ ಗೋಚರಿಸದ ಗಾನ,
ಹಿಡಿಯಲಾಗದ ಅನುಭವ,
ಹೃದಯವನ್ನು ಹಿಡಿಯುವ ಶಕ್ತಿ.

ಪ್ರೇಮವೆಂದರೆ
ಬದುಕಿನ ಬೆಳಕಿಗೆ ದಾರಿದೀಪ,
ಬಿಡಿಸಬೇಕಿಲ್ಲದ ಬಂಧನ,
ಮನದ ಗಾಯಕ್ಕೆ ಮಧುರವಾದ ಲೇಪನ.

ಪ್ರೇಮವೆಂದರೆ
ದೈವತ್ವದ ದರ್ಶನ,
ಕಂಡ ಕನಸಿನ ಸತ್ಯತೆ,
ಆಂತರ್ಯದ ಭದ್ರತೆ.

ಪ್ರೇಮವೆಂದರೆ
ನೀನು–ನಾನು,
ಹೆಸರಿನ ಹಂಗಿಲ್ಲ,
ಕಳೆದುಕೊಳ್ಳುವ ಭಯವಿಲ್ಲ.
ನಾವು ಪರಿಪೂರ್ಣರು,
ಪ್ರೇಮ ನಮ್ಮನ್ನು ತುಂಬಿಕೊಂಡಿದೆ,
ಹಂಚಲು ಮತ್ತೇನಿದೆ?

ನಿನ್ನ ರಾಧೆ ನಾನು,
ನನ್ನ ದೈವ ನೀನು,
ಪ್ರೇಮ ನಮ್ಮ ಶಕ್ತಿ —
ನಮ್ಮನ್ನು ಕಾಯುವ ದೈವ.


Tuesday, 9 December 2025

ನಗು ನಗು ಮಗಳಿಗೆ...

ಮಗಳೇ, 

ನಿಂಗೆ ಹೀಗೆಲ್ಲ ಹೇಳಬಹುದಾ ಗೊತ್ತಿಲ್ಲ. ಆದರೆ 

ಯಾರನ್ನೂ ತುಂಬಾ ಪ್ರೀತಿಸಬೇಡ - ಪ್ರೀತಿ ನಿನ್ನ ಬಲಹೀನತೆ ಅಲ್ಲ. 
ಯಾರನ್ನೂ ತುಂಬಾ ದ್ವೇಷಿಸಬೇಡ - ದ್ವೇಷದ ಕಿಡಿ ನಿನ್ನ ಒಳಗೊಳಗೇ ಸುಟ್ಟಿತು. 
ಯಾರನ್ನೂ ತುಂಬಾ ನೋಯಿಸಬೇಡ -ನಿನ್ನೊಳಗೊಂದು ಪಾಪ ಪ್ರಜ್ಞೆ ಕಾಡಿತು. 
ಯಾರ ಪ್ರೀತಿಯನ್ನೂ ತಿರಸ್ಕರಿಸಬೇಡ - ಬೇಕೆಂದಾಗ ಪ್ರೀತಿ ಸಿಗದೇ ಇರಬಹುದು  
ಯಾರನ್ನೋ ಮೆಚ್ಚಿಸುವ ಹುಚ್ಚಿಗೆ ಬೀಳಬೇಡ - ಅಲ್ಲಿ ನೀನೇ ಮರೆಯಾಗಬಹುದು.


ಅಮ್ಮ ಮತ್ತೆ ಹೇಗಿರಬೇಕು, 

ನೀನೊಂದು ಹಕ್ಕಿಯಂತೆ ಸ್ವಚ್ಚಂದವಾಗಿ ಇದ್ದುಬಿಡು- ಯಾವುದೂ ನಿನ್ನನ್ನು ನಿಲ್ಲಿಸದಿರಲಿ. 
ನಿನ್ನನ್ನು ಹೆಚ್ಚು ಪ್ರೀತಿಸು - ಪ್ರೀತಿ ನಿನ್ನ ಶಕ್ತಿಯಾಗಲಿ
ದ್ವೇಷದ ಯೋಚನೆಯೇ ಬೇಡ -ದ್ವೇಷದಿಂದ ನಿಂಗೇನೂ ಆಗುವುದಿಲ್ಲ. 
ಯಾರೋ ಪ್ರೀತಿಸಿದರೆ ಸುಮ್ಮನೆ ಆ ಕ್ಷಣಕ್ಕೆ ಅನುಭವಿಸಿಬಿಡು -ನಾಳೆಗಳು ನಿಂಗೆ ಗೊತ್ತಿಲ್ಲ.
ನಿನ್ನ ಶಕ್ತಿ ಮತ್ತು ಬಲಹೀನತೆ ನಿನ್ನೊಳಗೆ ಇರಲಿ - ಯಾರಿಗೂ ನಿನ್ನನ್ನು ಅರ್ಥಮಾಡಿಸುವ  ಅಗತ್ಯವಿಲ್ಲ.  
ನೀನು ನೀನಾಗು ನಿನ್ನ ಬದುಕು ಮಾತ್ರ ಮುಖ್ಯ ಇನ್ಯಾರು ಅಲ್ಲ. 


ಅಮ್ಮ ಇದು ಸ್ವಾರ್ಥವಲ್ಲವಾ?

ನಿನ್ನ ಪ್ರೀತಿಸಿದರೆ ಮಾತ್ರ ನೀನು ಬದುಕಬಲ್ಲೆ ನೀನೇ ಇಲ್ಲದೆ ಯಾರು ಪ್ರೀತಿಸಿದರೇನು? ನಿನ್ನ ಜೊತೆ ಎಲ್ಲ ಸಂದರ್ಭದಲ್ಲಿಯೂ ನೀ ಮಾತ್ರ ಇರಬಲ್ಲೆ.  
ನಿನ್ನ ಕಣ್ಣೀರ ಯಾರೋ ಒರೆಸುತ್ತಾರೆ ಎಂದು ಅಳುವ ಅಗತ್ಯವಿಲ್ಲ ಅಥವಾ ಯಾರೋ ಕಣ್ಣೀರ ನೋಡಿ ನಗುತ್ತಾರೆ ಎಂದು ಭಾವವನ್ನು ಮುಚ್ಚಿಡುವ ಅವಶ್ಯಕತೆಯೂ ಇಲ್ಲ.  ನೀನು ನೀನಾಗಿ ಇರು ನಿನ್ನ ಬದುಕು ನಿನ್ನಾಯ್ಕೆ ಅಷ್ಟೇ.  ಭಾವದ ಜೀವಂತಿಕೆ ಎಲ್ಲರಿಗೂ ಸಾಧ್ಯವಿಲ್ಲಾ. 


ಯಾರನ್ನೂ ಮೆಚ್ಚಿಸುವ ಹುಚ್ಚಿಗೆ ಬೀಳಬೇಡ ನೀನು ಕಳೆದು ಹೋಗುತ್ತೀಯಾ.. 


ಮಗು, 

ಹಕ್ಕಿಯಂತೆ ಹಾರಾಡು 
ಮೀನಿನಂತೆ ಈಜಾಡು 
ನವಿಲಿನಂತೆ ಗರಿ ಬಿಚ್ಚಿ ಕುಣಿ 
ಕೋಗಿಲೆಯಂತೆ ಮನ ಬಿಚ್ಚಿ ಹಾಡು 
ಮುಗಿಲಿನಂತೆ ಸುಮ್ಮನೆ ನಿಂತುಬಿಡು 
ಸೂರ್ಯನಂತೆ ಪ್ರಜ್ವಲಿಸು 
ನದಿಯಂತೆ ಹರಿದುಬಿಡು 
ಸಾಗರದಂತೆ ಘರ್ಜಿಸು 

ಏನಾದರೂ ಮಾಡು ಆದರೆ ನಿಂಗಾಗಿ ಮಾತ್ರ ಮಾಡು.... 


ನೆನಪಿರಲಿ ನೀನೆಂದರೆ ನಂಗೆ ಉಸಿರಿನಷ್ಟು ಪ್ರೀತಿ. 


Monday, 23 June 2025

ನನ್ನೊಳಗೊಂದು ಬೆಳಕು ಮೂಡಲಿ

ಹೇ ಮನವೇ,

ಬಿದ್ದಲ್ಲಿಂದ ಎದ್ದು ಬಂದೆ ಎನ್ನುವಷ್ಟರಲ್ಲಿ ಮತ್ತೆ ಬಿದ್ದಂತೆ ಭಾಸವಾಗುವ ಸೋಲಿನಲ್ಲಿ ಗೆಲುವ ಹುಡುಕುತ್ತ ಗೆಲುವಿನಲ್ಲಿ ಒಲವ ಹುಡುಕುತ್ತ, ನಿದ್ದೆ ಬರದ ರಾತ್ರಿಯಲ್ಲಿ ಹಗಲನ್ನು ದಣಿದ ಹಗಲಿನಲ್ಲಿ ರಾತ್ರಿಯನ್ನೂ, ಹುಡುಕುತ್ತ ಕಳೆಯುತ್ತಿರುವ ಬದುಕಿನಲ್ಲಿ. ಎಷ್ಟೊಂದು ಕಥೆಗಳು ಒಲವ ಬವಣೆಗಳು. 

 ಒಂದಕ್ಕೊಂದು ಸಿಗಲಾರದ ಸಿಕ್ಕಾಗ ಜೊತೆ ಇರಲಾರದ ಅತೀ ಮಳೆಯಾದರೂ ನೊವು ಪಡುವ ಮತ್ತು ಮಳೆಯಾಗದಿದ್ದರೆ ಬರಡಾಗುವ ಇದ್ದದ್ದನ್ನು ಬಿಡಲಾರದ ಮತ್ತು ಬಿಟ್ಟಿದ್ದಕ್ಕೆ ಕಾರಣವ ಹುಡುಕಲಾರದ ವಿರಹದ ಕವಿತೆ ಬರೆವ ಒಲವ ಮಳೆ ಮತ್ತು ಬರಡು ಭೂಮಿ.

ನಕ್ಕು ನಕ್ಕು ಮುಗಿದು, ಕಣ್ಣೀರಾಗುವ ದುಃಖದಲ್ಲಿ ಮುಳುಗಿ ಏಳಲಾಗದೆ, ಮುಳಗಲಾರದೆ ಉಸಿರ ಕಟ್ಟಿ ಉಸಿರ ಚೆಲ್ಲುವ ಅಸಹಾಯಕನ‌ ಭಾವದಲ್ಲಿ.

ಬದುಕುವ ಆಸೆಯ ಜೊತೆಗೆ ಬಂದಿಕ್ಕುವ ಭಯದಲ್ಲಿ, ಭಯದ ಹಿಂದೆಯೆ ನಿಂತು ನಗುವ ಬದುಕ‌ ಹಸಿವಲ್ಲಿ, ಒಮ್ಮೆಯಾದರೂ ಬದುಕಿಯೇ ಸತ್ತುಬಿಡುವ ಎನ್ನುವ ಮನದ ಬಿಳುಪಿನಲ್ಲಿ

ಮತ್ತೆ ಹಸಿರಾಗಲಿ ಕನಸುಗಳ ಕತ್ತಲಲ್ಲಿ ಬೆಳಕ ಉದಯವಾಗಲಿ ನನ್ನ ಮನದ ಅಂಗಳದಲ್ಲಿ.

Sunday, 6 April 2025

ಮೊದಲ ಸಲ ಬದುಕಿರುವೆ ಅನಿಸುತಿದೆ....!

ನನಗೆ,


ದಿನ ಒಂದು ಕಳೆದರೆ ಬದುಕಿನ ಮತ್ತೊಂದು ವರುಷ ಸಂಪೂರ್ಣ ಕಳೆದಂತೆ. ದಿನ ಕಳೆದಂತೆ ಕ್ಷಣ ಜಾರಿದಂತೆ ಬದುಕಿನ ಆಯಸ್ಸು ಕಡಿಮೆ ಆದರೂ ಅದನ್ನು ಲೆಕ್ಕದಲ್ಲಿ ಹುಡುಕುವುದು ವರುಷಗಳಲ್ಲೇ. 


ಬದುಕಿನ ಮತ್ತು ಬದುಕುವ ಮೂಲ ಆಶಯ ಇದುವರೆಗೂ ಗುರುತಿಸಿಕೊಳ್ಳುವುದು  ಪ್ರೀತಿಗಳಿಸುವುದು ಮಾತ್ರವೇ ಆಗಿತ್ತು ಬಹುಷಃ ಪ್ರತಿ ಮನುಷ್ಯನ ಬಯಕೆಯು ಅದೇ. ಆ ಗುರುತಿಸಿಕೊಳ್ಳುವುದು ಹುಟ್ಟಿನಿಂದ ಪ್ರಾರಂಭವಾಗಿ ನಂತರ ಅವರವರ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ ಮತ್ತು ಗುರುತಿಸಿಕೊಳ್ಳುವ ಬಯಕೆ ಸಂಪೂರ್ಣವಾಗದಿದ್ದರೆ ಕಡೆಗೆ ಬದುಕೇ ಬೇರೆಯವರ ಗಮನ ಸೆಳೆಯಲು ಆಗಿಬಿಡುತ್ತದೆ. 

ಇಂತದ್ದೇ ಒಂದು ಬದುಕು ಬದುಕುತ್ತಿದ್ದೇನೆ ಎಂದು ಅರ್ಥವಾಗಿದ್ದೆ ಈಗೊಂದು ವರುಷದ ಹಿಂದೆ, ಆಗಿನಿಂದ ನಂಗೊಸ್ಕರ ಕೇವಲ ನನ್ನ ಖುಷಿಗೋಸ್ಕರ ಮಾತ್ರ ಬದುಕುವ ಪ್ರಯತ್ನದಲ್ಲಿದ್ದೇನೆ. ಯಾರೇನೋ ಹೇಳುತ್ತಾರೆ, ಯಾರೋ ಸಿಟ್ಟಾಗುತ್ತಾರೆ ಮತ್ಯಾರೋ ಬಿಟ್ಟು ಹೋಗುತ್ತಾರೆ ಇನ್ಯಾರೋ ದೂರ ಮಾಡುತ್ತಾರೆ ಅಬ್ಬಾ ಎಷ್ಟೊಂದು ಭಯಗಳು! ಬದುಕಿಗೆ, ಎಲ್ಲವನ್ನು ಗೆದ್ದಿದ್ದೇನೆ ಅಂತಲ್ಲ ಆದರೆ ಇದು ಯಾಕೆ ಹೀಗೆ ಮತ್ತು ಇದರ ಕಾರಣ ನನ್ನೊಳಗೆ ಏನು ಎಂದು ಗುರುತಿಸಿಕೊಳ್ಳುವುದ  ಕಲಿತಿದ್ದೇನೆ. 

ಇಲ್ಲಿ ಬರೆದಿದ್ದೇನೆ ಅಷ್ಟೇ ನಾನು ನಂಗಾಗಿ ನನ್ನ ಬದುಕು ಅಂತೆಲ್ಲ, ಆದರೆ ನಿಜದ ನನ್ನ ಬದುಕನ್ನು ಬದುಕಲು ಈಗೊಂದು ಸ್ವಲ್ಪ ದಿನದಲ್ಲಿ ಪ್ರಾರಂಭಿಸಿದ್ದೇನೆ. 

ಖುಷಿಗಳೇ ಬದುಕಲ್ಲಿ ಅಂತೇನು ಇಲ್ಲ ಆದರೆ ನೋವಿಗೂ ನಲಿವಿಗೂ ಮೂಲ ಕಾರಣ ಹುಡುಕುವ ಮತ್ತು ಸಿಕ್ಕ ಕಾರಣಗಳನ್ನು ಒಪ್ಪಿಕೊಳ್ಳುವ ದಾರಿ ಸಿಕ್ಕಿದೆ. 


ತೀರಾ ಯಾರ ಬದುಕೂ ಸಮತೆಯಲ್ಲಿ ಇರುವುದಿಲ್ಲ ಆದರೆ ನಾವುಗಳು ನೋವುಗಳನೆಲ್ಲ ಬದಿಗಿಟ್ಟು ಮೇಲಿನಿಂದ ಒಂದು ಚಂದದ ಅಂಗಿ ಹಾಕಿ "ನಾನು ಖುಷಿ" ಎನ್ನುವ ಸುಳ್ಳು ಬದುಕನ್ನು ಬದುಕುತ್ತ ಅದನ್ನೇ ನಂಬುತ್ತಾ ಬದುಕುತ್ತೇವೆ, ಎಲ್ಲೋ ಏನೋ ಆದರೆ ನನ್ನ ಹಣೆಬರಹ ಇದು ಎನ್ನುತ್ತಾ ಮುಂದೆ ಹೋಗುವುದು. ಆ ಭಾವಗಳು ಹೊರಬರುವುದು ಯಾವುದೊ ರೂಪದಲ್ಲಿ ಕಡೆಗೆ ಯಾಕೆ ಎನ್ನುವ ಕಲ್ಪನೆಯೂ ಇರುವುದಿಲ್ಲ.  

ಯಾಕೆ ಹಣೆಬರಹ ಆಗಿದ್ದನ್ನೇ ಮತ್ತೆ ಮತ್ತೆ ಆಗುವಂತೆ ಮಾಡುತ್ತದೆ ಎಂದರೆ ಅದು ನಮ್ಮ ಬಾಲ್ಯ ನಮಗೆ ಕೊಟ್ಟ ಬರಹ ಆಗಿರುತ್ತದೆ. 


ಮನಸೇ,

ನಿನ್ನ ದಾರಿಯ ಹುಡುಕಿ-ಕೊಳ್ಳುವ ಮತ್ತು ಅದರಂತೆ ಬದುಕುವ ಎಲ್ಲ ಹಕ್ಕು ಮತ್ತು ಸ್ವಾತಂತ್ರ್ಯ ಎರಡು ನಿನಗಿದೆ.  ಈ ದಾರಿಯಲ್ಲಿ ತುಂಬಾ ಕಲ್ಲು ಮುಳ್ಳುಗಳಿವೆ ಎಷ್ಟೋ ಕವಲುಗಳು ಬರಬಹುದು ಎಷ್ಟೋ  ಪರಿಚಿತರು ಅಪರಿಚಿತರಾಗಬಹುದು. ಇನ್ಯಾರೋ ಏನು ಅಲ್ಲದ ಪ್ರೀತಿ ಒಂದು ನಿನ್ನ ತಬ್ಬಲೂಬಹುದು. ಎಲ್ಲವನ್ನು ಸ್ವೀಕರಿಸು ಎಲ್ಲವು ನಿನ್ನ ದಾರಿಯಷ್ಟೇ. ನಿನ್ನ ಗುರಿ ಬೇರೆಯದೇ ಮತ್ತದು ಕೇವಲ ನಿನ್ನದು, ಅಲ್ಲಿ ನಿನ್ನ ಎಲ್ಲ ಖುಷಿಗಳಿಗೂ, ಮಗುವಿನಂತೆ ಮಾತನಾಡಲು, ಬದುಕಲು, ಕೋಪಮಾಡಿಕೊಳ್ಳಲು ಮನ ಬಂದಂತೆ ನಗಲು ಎಲ್ಲದಕ್ಕೂ ಸ್ವಾತಂತ್ರ್ಯವಿದೆ. ಮತ್ತು ಇದು ನಿಂಗೆ ನೀನು ಕೊಡುವ ದೊಡ್ಡ ಉಡುಗೊರೆ. 
ಸಮತೆ ಎಂಬುದಿಲ್ಲ ಭಾವಗಳ ಜೀವಂತಿಕೆಯೇ ಬದುಕು, ಮುಖವಾಡ ಹೊತ್ತು ಯಾರನ್ನೂ ಗೆಲ್ಲಬೇಕಿಲ್ಲ, ಯಾರನ್ನೊ ಮೆಚ್ಚಿಸಲು ನಿನ್ನದಲ್ಲದ ಬದುಕ ಹೊತ್ತಿದ್ದು ಸಾಕಿನ್ನು.

ನಗುವೇ ಇರಬೇಕು ಅಂತೇನು ಇಲ್ಲ ಆದರೆ ಬೀಳುವ ಕಣ್ಣೀರು ಮತ್ತು ನಗುವ ನಗು ಎರಡು ನನ್ನದು ಮತ್ತು ನನಗಾಗೇ ಇರಲಿ ಅದೊಂದೇ ಆಶಯ. 
ಜೀವಂತಿಕೆಯ ಬದುಕು ನಿನ್ನದಾಗಲಿ. 

Monday, 11 November 2024

ಸುಮ್ಮನೆ ನಿಂತು ಬದುಕಿನೊಡುತ್ತ....

ಮನವೇ...,

ನಾನು ಯಾರು? ಎಂದು ಮತ್ತದೆ ಮಹಾನಗರಿಗೆ ಬಂದು ಪ್ರಶ್ನೆ ಕೇಳುವ, ಉತ್ತರವ ಹುಡುಕಿ ಹೊರಡುವ ಕಾಲ ಬಂದಿದೆ. ಬದುಕು ಒಂದಷ್ಟು ವರುಷಗಳ ನಂತರ ಮತ್ತೆ ಎಲ್ಲಿಂದ ನನ್ನ ಅಸ್ತಿತ್ವವ ಹುಡುಕ ಹೊರಟಿದ್ದೆನೋ ಅಲ್ಲಿಗೆ ತಂದು ನಿಲ್ಲಿಸಿದೆ.  

ಇಲ್ಲಿ ನಂಗೆ ನಾನು, ಪ್ರಶ್ನೆ ಕೇಳುತ್ತ, ಉತ್ತರವ ಹುಡುಕುತ್ತ, ಅಥವಾ ಉತ್ತರವ ಹುಡುಕುವ ನೆಪದಲ್ಲಿ ಬದುಕುತ್ತ, ನಡೆಯುತ್ತ, ಜೀವಂತಿಕೆಯನ್ನು ಕಂಡವಳು ನಾನು. ನಂಗೆ ಬದುಕುವ ಹುಚ್ಚು ಮತ್ತು ಬದುಕಿನೆಡೆಗೆ ಅತೀವ ಕುತೂಹಲ ಎರಡು ಇದೆ ಮತ್ತು, ಇದೇ ನನ್ನನ್ನು ಸದಾಕಾಲಕ್ಕೂ ಬದುಕಿಸುತ್ತ ಜೀವಂತವಾಗಿಸುತ್ತ ಬಂದಿದೆ. 

ಯಾಕೆ ಬದುಕಬೇಕು? ಎನ್ನುವ ಪ್ರಶ್ನೆಗೆ ನಂಗೆ ಉತ್ತರ ಯಾವಾಗಲು ನಾನೇ ಆಗಿದ್ದೇನೆ ಮತ್ತು ನನ್ನ ಬದುಕುವ ಹುಚ್ಚಿಗೆ ಕಾರಣವೂ ನಾನೇ ಆಗಿದ್ದೇನೆ. 

ಆದರೆ, ಇಂದು ಅಸ್ತಿತ್ವದ ಹುಡುಕಾಟವಿಲ್ಲ ನಂಗೆ, ನಾನು ಯಾರು ಗೊತ್ತು. ಗಟ್ಟಿಯಾಗಬೇಕು, ಗೆಲ್ಲಬೇಕು, ಗೆದ್ದು ಯಾರಿಗೊ ಬದುಕನ್ನು ಉತ್ತರವಾಗಿ ನೀಡಬೇಕು ಎನ್ನುವ ಭಾವವಿಲ್ಲ. ನನ್ನ ಬದುಕು ಯಾರಿಗಾಗೊ ಅಲ್ಲ ಇಲ್ಲಿ ನಾನು ಮಾತ್ರ. ಸಾವಿನ ಬಗ್ಗೆ ಕುತೂಹಲವಾಗಲಿ, ಭಯವಾಗಲಿ ಇಲ್ಲ. ಬರುವಾಗ ಸಾವು ಬಂದು ಅಪ್ಪಬಹುದು. ನಾಳೆ ಸೋತರೆ!, ಯಾರೊ ನಕ್ಕಾರು ಎಂಬ ಭಯವಿಲ್ಲ ಸೋತಾಗ ಯಾರಿದ್ದರೆನು ಎಂಬ ಉಡಾಫೆ ಮನಕ್ಕೆ. ಮತ್ಯಾವ ಭಾವ ಕಾಡಲು ಸಾಧ್ಯ? ನನ್ನ ಕನಸುಗಳ? ಕನಸುಗಳು  ಮರೆತುಹೋಗಿವೆ ಹಳೆಯ ನೆನಪುಗಳು ಉಳಿದಿಲ್ಲ. ಅಲ್ಲಿಗೆ ಬದುಕಿಗೆ ಇಂದು ಈ ಕ್ಷಣ ಮಾತ್ರ ಮುಖ್ಯ. ನಾನಿಲ್ಲಿ ನನ್ನ ಬದುಕಿನ ಏಳು ಬೀಳಿನ ಜೊತೆ ನಾನು ನಿಲ್ಲಬಲ್ಲೆನೆಂದರೆ ಅದು ಇಂದಿನ ಗೆಲುವು. ನೋವಿಗೆ ಕುಗ್ಗದೆ ಅತೀ ಭಾವುಕನಾಗೊ ಭಯಕ್ಕೆ ಬಿದ್ದೊ ಸಮಸ್ಯೆಯಿಂದ ಓಡಿಹೋಗದೆ ನಿಲ್ಲಬಲ್ಲೆನು ಎಂದರೆ ಈ ಕ್ಷಣದ ಗೆಲುವು. 

ಬದುಕು ಕಲಿಸಿದ ದೊಡ್ಡ ಪಾಠ ಅದುವೇ ನಿಲ್ಲಬೇಕು... ನಾನು ಇಲ್ಲೆ ನಿಲ್ಲಬೇಕು ಸುತ್ತಲಿನ ಪ್ರಪಂಚದಲ್ಲಿ ಏನೆ ಆಗುತ್ತಿದ್ದರೂ ನಾನು ಇಲ್ಲೆ ನಿಲ್ಲಬೇಕು. ಭಯಕ್ಕಲ್ಲ ನಿಂತಿದ್ದು, ಭಂಡ ಧೈರ್ಯಕ್ಕೆ ಏನಾಗುತ್ತದೆ ನೋಡೊಣ ಎಂಬ ಹುಚ್ಚಿಗೆ. 

ಮಹಾನಗರವನ್ನು ತುಂಬ ಪ್ರೀತಿಸುವ ನಂಗೆ ಇಂದು‌ ಅಸ್ತಿತ್ವದ ಹೋರಾಟದ ಹುಚ್ಚು ಇಲ್ಲ. ಸುಮ್ಮನೇ ಸೋಲುವ ಸುಸ್ತು ಇಲ್ಲ. ನಿಂತು ಸುಮ್ಮನೆ ನಿಂತು ಎಲ್ಲವನ್ನೂ ನೋಡಿಯೂ ಏನು ಅರಿಯದಂತೆ ಏನೂ ಅರ್ಥವಾಗದಂತೆ ನಗದಂತೆ ಅಳದಂತೆ ಸುಮ್ಮನೇ ನಾನು ನಾನಾಗಿ ನಿಂತುಬಿಡುವ ಆಸೆ‌. 

ಈ ಸುಮ್ಮನೆ ನಿಲ್ಲುವುದಿದೆಯಲ್ಲ, ಅದರಿಂದ ಎಷ್ಟೊಂದು ಹಿತವೆಂದು ಅರಿಯುವ ಆಸೆ ನಂಗೆ. ಯಾವ ಭಾವ ತೀವ್ರತೆಯು ಇಲ್ಲದೆ ಕೇವಲ ನಂಗೆ ನಾನಾಗಿ ಬದುಕುವ ದಾರಿ ಬಂದಂತೆ ಬದುಕ ಸ್ವೀಕರಿಸುವ ಸುಮ್ನನೆ ಬದುಕುವ ಆಸೆ ನಂಗೆ. ಮೊದಲೆಲ್ಲ ಅನಿಸುತ್ತಿತ್ತು, ಸುಮ್ಮನೆ ಬದುಕುವುದೆಂದರೆ ಸತ್ತಂತೆ ಭಾವ ತೀವ್ರತೆಯೆ ಬದುಕು ಎಂದು. ಆದರೆ ಬದುಕು ಕೊಟ್ಟ ಅತೀ ದೊಡ್ಡ ಪಾಠ ಸುಮ್ಮನೆ ನಿಂತುಬಿಡು ಬದುಕಿಗೂ ಸಮಯಬೇಕು ಬದುಕಲು... ಸಂತೆಯ ಮಧ್ಯದಲ್ಲಿ ನಿಂತಲ್ಲೆ ನಿಂತು ಓಡುವ ಬದುಕನ್ನು ನೋಡುತ್ತ ಬದುಕುವ ಆಸೆಯನ್ನೂ ಜೀವಂತಿಸಿಕೊಂಡಿದ್ದೇನೆ. ಮನಸೊಂದಷ್ಟು ದಿನ ಈ ಖಾಲಿತನವನ್ನು ತುಂಬಿಕೊಳ್ಳಲಿ...


ನಂಗೆ ನಾನು ಮತ್ತೆ ಮತ್ತೆ ಸಿಗಲಿ ಎಂಬುದೊಂದು ಆಸೆ.

ಅಭಿಸಾರಿಕೆ

Monday, 22 July 2024

ಬದುಕನ್ನು ಬದುಕಿ ನೋಡುವ ಸಮಯ

 ಹೇ, 

ತುಂಬಾ ದಿನಗಳ ಮೇಲೆ ಮತ್ತೆ ಬರೆಯುವ ಆಸೆಯಾಗಿದೆ. ಮೊದಲೆಲ್ಲ ಅಭಿಸಾರಿಕೆ ಎಂದರೆ ನನ್ನ ನೋವಿಗೆ ನಲಿವಿಗೆ ನನ್ನ ಒಂಟಿತನಕ್ಕೆ ನನ್ನ ಮನಸಿನ ಯಾವುದೇ ಭಾವಕ್ಕೂ ಕೇಳುವ ಕಿವಿ ಮತ್ತು ಸಮಾಧಾನದ ಮಡಿಲಾಗಿತ್ತು. ಒಂದಷ್ಟು ಕಾಲಗಳ ಕಾಲ ಇಲ್ಲಿ ಬರೆದು ನನ್ನೆಲ್ಲ ಭಾವಕ್ಕೆ ದಾರಿ ಮಾಡಿಕೊಟ್ಟೆ. ಒಂದಷ್ಟು ಕಾಲ ನಂಗ್ಯಾವ ಭಾವವು ಕಾಡುತ್ತಿಲ್ಲ ಎಂದು ಸುಳ್ಳು ಸಮಾಧಾನ ಮಾಡಿಕೊಂಡು ಮುಖವಾಡದ ಬದುಕ ಹೊತ್ತೆ, ಈ ಕ್ಷಣಕ್ಕೆ ಭಾವಗಳನ್ನ ಇದ್ದಂತೆಯೇ ಹೇಳಬಲ್ಲ ಮತ್ತು ಹೇಳಿದ್ದನ್ನು ಹೇಳಿದಂತೆಯೇ ಅರ್ಥೈಸಿಕೊಳ್ಳಬಲ್ಲ ಜಾಗ ಒಂದು ಸಿಕ್ಕಿದೆ ಅದೇ ನನ್ನ ಥೆರಪಿ ರೂಮ್. 

ಇಲ್ಲಿ ಹೇಳುವ ಮಾತನಾಡುವ ಯಾವುದು ನನ್ನ ಕಿವಿ ಥೆರಪಿಸ್ಟ್ ಕಿವಿ ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ ಅದಕ್ಕೆ ಅದು ಸುರಕ್ಷಿತ ಜಾಗ. 

ಸುಮಾರು ವರ್ಷಗಳ ಹಿಂದೆ ಮನಸು ಇಲ್ಲದ ಮಾರ್ಗ ಎನ್ನುವ ಒಂದು ಪುಸ್ತಕ ಒಂದಿದ್ದೆ, ಅದನ್ನು ಓದಿ ಒಂದಷ್ಟು ದಿನಗಳ ಕಾಲ ಸಿಟ್ಟೇ ಮಾಡಿಕೊಳ್ಳದೆ ಬದುಕಿದ್ದೇ. ಆದರೆ ನಿಜವಾದ ಥೆರಪಿ ಸಿಟ್ಟೇ ಬರದಂತೆ ತಡೆಯುವುದಿಲ್ಲ ನಾನು ನಾನಾಗಿ ಬದುಕಲು ಕಲಿಸುತ್ತದೆ. ಥೆರಪಿಗೆ ಹೋಗಲು ಮಾನಸಿಕ ಸಮಸ್ಯೆಯೆ ಬೇಕೆಂದಿಲ್ಲ. ಹಾಗೆ ನೋಡಿದರೆ ಎಲ್ಲರಿಗು ಒಂದಲ್ಲ ಒಂದು ಮಾನಸಿಕ ಸಮಸ್ಯೆ ಇದ್ದೆ ಇರುತ್ತದೆ. ಸ್ಥಿತ ಪ್ರಜ್ಞನಾಗಿರುವುದು ಎಂದರೆ ಅವರು ಮಾನಸಿಕ ಸಮಸ್ಯೆ ಇಂದ ಹೊರಬಂದವರು ಎಂದಲ್ಲ. ಬೇರೆಯವರು ಅಳುತ್ತಾರೆ ಮತ್ತು ಅಳುವದು ತಪ್ಪು ಎಂದು ಹೇಳುವವರಿಗೆ ಅಳುವುದು ಕಷ್ಟಸಾಧ್ಯ. ನಾವು ನಾವಾಗಿ ಬದುಕಬೇಕು ಆದರೆ ಎಷ್ಟೋ ಸಲ ನಮ್ಮ ಬದುಕು ಬೇರೆಯವರ ಬರಹವೇ ಆಗಿರುತ್ತದೆ. 

ಥೆರಪಿಯಲ್ಲಿ ಪ್ರತಿ ಮಾತು ನನ್ನದಲ್ಲದ ಯಾರ  ಮಾತು ಎಂದು ಗೊತ್ತಾಗುತ್ತದೆ, ಯಾರೋ ಹೇಳಬಹುದು ನೀನು ಬದುಕಿನ ಹಿಂದಿನದನ್ನು ಹುಡುಕಹೊರಟಿದ್ದೀಯ ಅದಕ್ಕೆ ಎಲ್ಲವು ಅಸಮಂಜಸವಾಗಿದ್ದೆ ಕಾಣಿಸುತ್ತದೆ, ನಾವು ಮುಂದೆ ನೋಡಬೇಕು ಹಳೆಯದನ್ನು ಮರೆಯಬೇಕು ಎಂದು. ಆದರೆ ನಮ್ಮ ಬದುಕು ಏನೆಂದು ಮೊದಲ ೬-೭ ವರುಷದಲ್ಲಿಯೇ ನಿರ್ಧಾರವಾಗಿರುತ್ತದೆ. ಸ್ಕ್ರಿಪ್ಟ್ ತಯಾರಾಗುವುದು ಈ ಕಾಲದಲ್ಲಿಯೇ ಅಮೇಲಿನದೆಲ್ಲ ನಮ್ಮ ಅಭಿನಯ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ವ್ಯಕ್ತಿ ಜೊತೆಯಲ್ಲಿ ಮೊದಲಾಗಿರುವುದೇ ನಂತರವೂ ಆಗುವುದು. ಎಷ್ಟೋ ಬಾರಿ ನಾವು ಹೇಳುತ್ತೇವೆ ಯಾಕೆ ನನಗೆ ಯಾವಾಗಲೂ ಹೀಗೆ ಆಗುತ್ತದೆ ಎಂದು. ಯಾಕೆಂದರೆ ಅದು ನಮ್ಮ ಬದುಕಿನ ನಿರ್ಧಾರದ ದಿನಗಳಲ್ಲಿ ನಾವು ಅರ್ಥೈಸಿಕೊಂಡ ಬದುಕಿನ ಕಥೆ ಆಗಿರುತ್ತದೆ. 

ಮನಸು, ಮನಸಿನ ಸಮಸ್ಯೆ ಮಾನಸಿಕತೆ ಎಲ್ಲರಿಗು ಇದೆ ಅದನ್ನು ನೋಡುವ ಮತ್ತು ಗುಣಪಡಿಸಿಕೊಳ್ಳುವ ಧೈರ್ಯ ಬೇಕು. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.  ಖುಷಿಯನ್ನು ಖುಷಿಯಾಗಿ ನೋವನ್ನು ನೋವನ್ನಾಗಿ ನೋಡುವ ಈ ಹಾದಿ ಚಂದವಿದೆ. 

Thursday, 6 April 2023

ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...

ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ ಎಂದುಕೊಳ್ಳುತ್ತಾ ಇರುವ ದಿನಗಳನ್ನು ಕಳೆಯುತ್ತಿರುವ ಇದೇ ಬದುಕಿನ ಮತ್ತೊಂದು ದಿನವಷ್ಟೆ ನಾಳೆಯೂ.. ಆದರೂ ಬರೆಯಬೇಕು.

ಈಗಾ ಅರ್ಥವಾಗಿದೆ ಬರೆಯಬೇಕು ಅಲ್ಲಿಂದಲೇ ಬದುಕಿಗೆ ಹೊಸ ಅರ್ಥಬರುವುದು. ಯೋಚನೆಗಳಿಗೆ, ಮಾತುಗಳಿಗೆ  ಜಾಗವೊಂದು ಬೇಕು ನಂಗೆ ಅದು "ಅಭಿಸಾರಿಕೆ". 

ಸಿಹಿ ನೆನಪುಗಳನ್ನು ಕೂಡಿಡಬೇಕಂತೆ ಆದರೆ, ಕೂಡಿಟ್ಟಿದ್ದು ಕೊಳೆಯುತ್ತದೆ. ಅಂದರೆ ಹರಿಬಿಡಬೇಕು, ಹರಿದಲೆಲ್ಲ ಹಸಿರು, ಹರಿದಷ್ಟು ಬದುಕು ತಿಳಿಯಾಗುತ್ತದೆ.

ಪ್ರೀತಿಗಿಂತ ಆಸ್ತಿಯಿಲ್ಲ, ಎಂಬುದು ಹೃದಯದ ಮಾತು. ಬದುಕಿನ ಕನಸುಗಳಿಗೆ, ಪ್ರೀತಿಗಿಂತ ದುಡ್ಡು ಬೇಕು ಎನ್ನುವುದು ಕಂಡುಕೊಂಡ ಸತ್ಯದ ಮಾತು.

ಆತ್ಮ ಶುದ್ಧಿಯೇ ಬದುಕಿನ ಗುರುತು ಎಂದ ಮನಸಿಗೆ ಬದುಕ ತತ್ವಗಳ ಹುಡುಕಾಟ.ಕನಸೆಂದರೆ ಹಠ ಗೆಲುವೆಂದರೆ ಬದುಕು ಎಂದು ಸಾಲು ಸಾಲು ಬರೆದ ಹುಚ್ಚಿಗೆ ಸೋಲುಗಳ ಕೈ ತುತ್ತು.

ಯಾರದೋ ಪ್ರೀತಿಯ ಮಾತುಗಳಿಗೆ ರೋಮಾಂಚನಗೊಂಡವಳಿಗೆ, ಪ್ರೀತಿಯ ಸವಿ ಹರಿಸಲು ಮಡಿಲಲ್ಲೊಂದು ನಗುವ ಹಸುಳೆ.

ಸುಮ್ಮನೆ ಬೇಸರವಾದಾಗಲೂ ಒಂದಷ್ಟು ದೂರ ನಡೆಯುತ್ತಿದ್ದವಳಿಗೆ ಸುಖಾಸುಮ್ಮನೆ ಕುಳಿತರೂ ಮೈಮನಕ್ಕೆಲ್ಲಾ ನೋವು.

೩೦ ಮುಗಿಯುತ್ತಿದ್ದಂತೆ ಬದುಕು ಎಷ್ಟೆಲ್ಲಾ ಬದಲಾಯಿತು ಏನೆಲ್ಲವನ್ನು ಕಲಿಸಿತು. ಮತ್ತೊಂದು ಪುಟಕ್ಕೆ ತೆರೆದುಕೊಳ್ಳುವ ಮುನ್ನ ನನ್ನೊಳಗೆ, ಒಂದಷ್ಟು ಆತ್ಮ ವಿಮರ್ಶೆಯಾಗಬೇಕು, ನನ್ನ ಜೊತೆ ನಾನು ಕೂತು ಮಾತನಾಡಬೇಕು, ನನ್ನ ಮಡಿಲಲ್ಲಿ ಮಲಗಿ ಒಂದಷ್ಟು ಸಾಂತ್ವನದ ಸವಿ‌ಸವಿಯಬೇಕು.  

೩೦ ವರುಷಗಳಿಂದಲೂ ನನ್ನೊಡನೆ ಬಂದ ಒಳಗಿನ ಮಗುವನ್ನು, ಹರೆಯದ ಕೂಸನ್ನು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಹೊರಟ ಹುಚ್ಚು ಹುಡುಗಿಯನ್ನ, ಒಲವ ಹೊಳೆಯಲ್ಲಿ ತಂಪಾದ ತಾಯಿಯನ್ನ ಒಮ್ಮೆ ನೊಡಿಕೊಳ್ಳಬೇಕು.

ನಗುವಿನ‌ ಹುಡುಕಾಟದ 
ಅದೇ ಅಭಿಸಾರಿಕೆ


Sunday, 30 October 2022

ಮಗಳಿಗೆ...

ಮಗಳೆಂಬೊ ಮುದ್ದು ಗುಬ್ಬಿಗೆ..

ಶ್ರಾವಣದ ಕೊನೆಯ ಮಂಗಳವಾರ ಪುಟ್ಟ ದೇವತೆ ಒಬ್ಬಳು ಜನಿಸಿದಳು. ನನ್ನ ಬದುಕಿನ‌‌‌ ಅತೀ ಯಾತನೆಯ ಕ್ಷಣವೊಂದು ನಗುವಾಗಿ ಪರಿವರ್ತನೆಯಾಯಿತು. ಅಸಾಧ್ಯವಾದ ಗೆಲುವೊಂದು ದಕ್ಕಿದ ದಿನ‌‌ ಅದು. 

ಕಂದಾ...
ನೀನು ನನ್ನ ಜೀವನ‌ ಪ್ರೀತಿ, ಬದುಕುವ ಕಾರಣ. ನನ್ನ ಗೆಲ್ಲಿಸಿದಾಕೆ‌. ದಿನಗಳು ಕ್ಷಣಗಳಾಗಿ ಕಳೆಯುತ್ತಿವೆ. ನಿನ್ನ ಹೊರತಾಗಿ ಬದುಕಿಗೆ ಮತ್ತೇನು ಬೇಕಿಲ್ಲ ಎನಿಸುತ್ತಿದೆ. ಯಾವ ಸೋಲು‌ ಯಾವ‌‌ ಗೆಲುವು ದೊಡ್ಡದಲ್ಲ, ನಿನ್ನ ಅಳುವು ಮನಸ್ಸನ್ನು ತೀವ್ರವಾಗಿ ಸಂತೈಸುವ ಯಾವುದೋ‌ ಸಂಗೀತದಂತೆ. 
ಈಗೀಗಾ‌ ನೀನು ನಗುತ್ತಿಯಲ್ಲ‌ ಅದರಲ್ಲಿ ನನ್ನ ಉಸಿರೆ ಇದೆ ಎನಿಸುತ್ತಿದೆ. ನಿನಗಾಗಿ  ನನ್ನ ಉಸಿರ ಬಿಗಿ ಹಿಡಿದು ಬದುಕಿಬಿಡುವೆ ಬದುಕಿನೆಲ್ಲ ಏರಿಳಿತಗಳ ಹೊರತಾಗಿಯೂ...

ನಿನ್ನ ಬದುಕಿಗೆ ನೆರಳಾಗಿ ನಿನ್ನ ಕನಸಿಗೆ ಜೊತೆಯಾಗಿ, ನನ್ನ ಬದುಕ ಕೊನೆಯ ತನಕ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ. 

ನಿನ್ನ ಹೆಸರು ಸೀತೆಯ ಇನ್ನೊಂದು ಹೆಸರು ನೀನು ಅವಳಂತೆ ಎಂತಹ ಕಷ್ಟದಲ್ಲೂ ನೀನು ನೀನಾಗಿಯೆ ಇರಬೇಕು. 

ತುಂಬಾ ಪ್ರೀತಿ ‌ಮುದ್ದು ಮೈಥಿಲಿ...

Thursday, 5 May 2022

ಜೀವ ನಿನ್ನಾಸರೆಗೆ ಕಾಯುತಿಹುದು...

ನನ್ನೊಳಗಿನ ಪುಟ್ಟ ಹೃದಯವೇ... 

ನನ್ನ ಬದುಕಿನ ದೊಡ್ಡ ಕನಸು ನೀನು, ನನ್ನೊಳಗೆ ನಿನ್ನ ಹೃದಯ, ನಿನ್ನ ಉಸಿರಾಟ, ನಿನ್ನ ಪುಟ್ಟ ಪಾದಗಳ ಸ್ಪರ್ಶ ಸುಖ. ನೀನು ನನ್ನ ಪುಟ್ಟ ಕಂದ. 

ಇನ್ನೊಂದು ಸ್ವಲ್ಪ ದಿನವಾದರೆ ನಿನ್ನ ಅಳು ನಗುವಿನ ಮೆರವಣಿಗೆ ನನ್ನ ಬದುಕಿನ ಹಬ್ಬದ ದಿನಗಳು ಪ್ರಾರಂಭ.  

ಇಷ್ಟು ದಿನ ಬದುಕಿದ ಬದುಕಿಗೆ ಖುಷಿ, ಸಾರ್ಥಕತೆ ಎಂದರೆ  ಅದು ನೀನು ಬರುತ್ತೀಯ ಎಂದಾದ ಮೇಲಿನ ಈ ದಿನಗಳು.  ಬದುಕ ಗೆಲುವಿನ ಹಠಕ್ಕೆ ಬಿದ್ದ ತೀರಾ ಭಾವುಕ ಮನಕ್ಕೀಗ, ಬದುಕುವ ನಿಜ ಕಾರಣ ಸಿಕ್ಕದ ಖುಷಿ. ಈ ಕಾರಣಕ್ಕಿಂತ, ಇನ್ಯಾವ ಕಾರಣವೂ ಬೇಕಿಲ್ಲ ಬದುಕಲು ನಂಗೆ. 

ಏನೆಂದು ಬರೆದಿಡಲಿ ಇಲ್ಲಿ? ಆದರೆ ಬರೆಯಲೇ ಬೇಕು ನನ್ನ ಬದುಕಿನ ಎಲ್ಲ ದ್ವಂದ್ವಗಳಿಗೆ, ಕನಸುಗಳಿಗೆ, ಕಿವಿಯಾದ ಈ ಅಭಿಸಾರಿಕೆಯ ಮಡಿಲಲ್ಲಿ ನಿನ್ನ ಬಗ್ಗೆ ಹೇಳದಿದ್ದರೆ ತಪ್ಪಾದೀತು. 

ನಿನ್ನ ಹೃದಯ ಬಡಿತ ಕೇಳಿದ ದಿನಗಳಿಂದ ನಿನ್ನ ಪುಟ್ಟ ಪಾದ ಸ್ಪರ್ಶವಾಗುತ್ತಿರುವ ಈ ಘಳಿಗೆಗಳು ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಅಕ್ಷರಸಹ ಜೀವಿಸುತ್ತಿದ್ದೇನೆ ಈ ದಿನಗಳನ್ನು. 


ನಿನ್ನ ಬೆಳವಣಿಗೆಯಲ್ಲಿ ನಿನ್ನ ಕಲಿಕೆಯಲ್ಲಿ ನಾನು ಬದುಕುವ ಕಲಿಯುವ ಬಯಕೆ ಮನದ ತುಂಬಾ. ಆರೋಗ್ಯವಾಗಿರು ನನ್ನೊಳಗಿರುವ ಆ ಹೃದಯಲ್ಲಿ ನನ್ನ ಜೀವವೇ ಇದೆ. 

ಕಾಯುತ್ತಿರುವೆ ನಿನಗಾಗಿ....

Sunday, 13 June 2021

'ಅಭಿಸಾರಿಕೆ'ಯ ಹುಟ್ಟುಹಬ್ಬ..

ನಾನು‌ ಎಂಬುದು ನನ್ನ ಸದಾಕಾಲಕ್ಕೂ ಬದುಕಿಸುವ ಜೀವ ಗಂಗೆ.. ಬದುಕಿನ‌ ಎಲ್ಲದರಾಚೆಗೆ ನಂಗೆ ಕಾಡುವುದು ಮಡಿಲಾಗುವುದು ನೀ ಮಾತ್ರ. ನನ್ನ ಅಭಿಸಾರಿಕೆ ನನ್ನ ಭಾವದ ಬಯಲು. 

ತುಂಬಾ ಬರೆಯಬೇಕು ಎಂತಲೇ ನೀನೆಂಬ ಕನಸಿಗೆ ಹೆಸರು ಕೊಟ್ಟಿದ್ದು. ಬರೆದದ್ದು ತುಂಬಾ ಕಡಿಮೆ. ಆದರೆ ಬರೆದಷ್ಟೂ ನಿನ್ನ ಮಡಿಲಲ್ಲಿ ಬಂದು ಹೇಳಿಕೊಂಡಂತಹ ನನ್ನ ಬದುಕಿನ ಶುಧ್ಧ ಭಾವಗಳೇ...

ನಿಂಗೆ ಗೊತ್ತಾ, ತುಂಬಾ‌ ನೋವಿರುವ ಜಾಗದಿಂದಾಗಲಿ ಇಲ್ಲ ತುಂಬಾ ಖುಷಿಯಿರುವ ಜಾಗದಿಂದಾಗಲಿ ಅಷ್ಟು ‌ಸುಲಭಕ್ಕೆ‌‌ ಎದ್ದು ಬರಬಾರದು. ಭಾವವೊಂದು ಮನದಲ್ಲಿ ಹೊಕ್ಕು ತೀವ್ರವಾಗಿ ಕಾಡಲೇಬೇಕು, ಅಷ್ಟು ಕಾಲ ಕೊಡದಿದ್ದರೆನೇ, ಮನಸ್ಸು ಪಾಪಪ್ರಜ್ಞೆಗೆ
ಬೀಳುವುದು. 

ಪ್ರತಿ ದಿನವೂ ಬೆಳಕು ಮೂಡುತ್ತದೆ ಆದರೆ, ಕತ್ತಲೆಯೂ ಬೆಳಕ ಬೆನ್ನಲ್ಲೇ ಅಂಟಿರುತ್ತದೆ ಎನ್ನುವುದ ಮರೆಯಬೇಡ. ಯಾರು ಹೇಳಿದ್ದು ಮನುಷ್ಯನ ಸಾವು ಒಂದೇ ಸಲ ಎಂದು ಭಾವ ಸತ್ತಾಗಲೆಲ್ಲ ಮನುಷ್ಯ ಸಾಯುತ್ತಾನೆ ಆದರೆ ಸತ್ತು ಮತ್ತೆ ಹೊಸದಾಗಿ ಹುಟ್ಟುತ್ತಾನೆ.  ನೋವಿರದ ದೇಹದ ಸಾವಿಗಿಂತ ಭಾವಗಳ ಸಾವು ಹೆಚ್ಚು ನೋವಲ್ಲವಾ? 
ನೋವು,ನಲಿವು ಪಾಪಪ್ರಜ್ಞೆ,ಭಯ, ನನ್ನೊಳಗಿನ ತರ್ಕ ಎಲ್ಲವೂ ಇಲ್ಲಿವೆ. ತುಂಬಾ ಬರೆಯಲಿಲ್ಲವೆಂದರೆ ಮನಸ್ಸು ಸ್ಥಿತ ಪ್ರಜ್ಞವಾಗಿದೆ ಎಂದಲ್ಲ. ಯಾಕೊ ನಿನ್ನೊಡಲಲ್ಲಿ ಹೇಳಿಕೊಳ್ಳಲು ಪದಗಳು ಇರಲೇ ಇಲ್ಲ. ಮೌನ ಮಾತಿಗಿಂತ ಖುಷಿಕೊಡುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇನೆ ಎಂದರ್ಥವಾ? ಗೊತ್ತಿಲ್ಲ.

ನಿಜವೆಂದರೆ ನನ್ನೊಳಗಿನ ಗದ್ದಲವನ್ನು ಇಲ್ಲಿ ನಿನ್ನೊಡಲಿಗೆ ಇಳಿಸಿಬಿಟ್ಟರೆ ದೀರ್ಘ ಉಸಿರೊಂದನ್ನು ಬಿಟ್ಟಂತಹ ಸಮಾಧಾನ ನಂಗೆ.
ಅಭಿಸಾರಿಕೆ ಕೇವಲ ನನ್ನ ಭಾವ ಟಿಪ್ಪಣಿಯಾಗಲಿಲ್ಲ ನನ್ನ ನೋವಿಗೆ ಮಡಿಲಾಗಿ ಖುಷಿಗೆ ಪ್ರತಿಬಿಂಬವಾಗಿ ಬದುಕ ನೆನಪಿನ ಹೆಜ್ಜೆ ಗುರುತಾಗಿ ನನ್ನೊಂದಿಗಿದೆ.

 ನೀನೆಂದರೆ ತುಂಬಾ ಪ್ರೀತಿ ನಂಗೆ.
ಹುಟ್ಟಿದ ಹಬ್ಬದ ಶುಭಾಶಯಗಳು ಕಣೇ... ನಮ್ಮಿಬ್ಬ ಬೆಸುಗೆ ಗಾಢವಾಗಲಿ...ನಮ್ಮ ಹೂ ನಗೆಯ ಹುಡುಕಾಟ ನಿರಂತರವಿರಲಿ.

Friday, 15 May 2020

ನಿನ್ನ ನಾಳೆಗಳಿಗೆ....

ಅದ್ವಿತ್ ಕಂದಾ.......  




ನೀ ಹುಟ್ಟಿ ಇಂದಿಗೆ ಒಂದು ವರುಷ ಒಂಭತ್ತು ತಿಂಗಳು  ಕಳೆದು ಹೋದವು. ಆದರೆ ಇಂದಿನ ಪರಿಸ್ಥಿತಿ ಇದೆಯಲ್ಲ ನಾನುಬರೆಯಲೇಬೇಕು. 

ನಿಂಗೆ ಇದೆಲ್ಲ ಇಂದು  ಅರ್ಥವಾಗದು. ಗೊತ್ತು ನಂಗೆ, ಆದರೆ ನಿನ್ನ ಸುತ್ತಲಿರುವ ನಮ್ಮಗಳ ಇಂದಿನ ಬದುಕು ಇದುವೇ. 

ಇವತ್ತಿಗೆ ನಾವೆಲ್ಲ ಮನೆಯಲ್ಲೇ ಬಂಧಿತರಾಗಿ ಸರಿ ಸುಮಾರು ೬೦ ದಿನಗಳಾದವು. ಹಕ್ಕಿಗಳಂತೆ ಹಾರಡಿಕೊಂಡು ಯಾವ ಮಿತಿಗಳಿಲ್ಲದೆ ಬದುಕುತ್ತಿದ್ದ ನಮ್ಮಗಳಿಗೆ ನಿಜಕ್ಕೂ ಈ ಬಂಧನ ಒಂಥರಾ ಕಷ್ಟವೇ ಸರಿ. 

ಈ ವರುಷ, ಪ್ರಾರಂಭದಿಂದಲೂ ಒಂದಷ್ಟು ಭಯ, ನೋವು-ನಿರಾಸೆಯನ್ನೇ, ಹೊತ್ತು ಬಂದಿದೆ. ಈ ಸಂವತ್ಸರಕ್ಕೆ ಹೆಸರು ಶಾರ್ವರಿ ಅಂತ. ಅಂದರೆ ಕತ್ತಲೆ ಎಂದರ್ಥವಂತೆ. ಹೆಸರು ಚಂದವೇ, ಆದರೆ ಈ ಯುಗಾದಿಯ ಆಚೀಚೆಯ ಕ್ಷಣಗಳಿವೆಯಲ್ಲ, ಅದು ಭಯಂಕರ. ವಿಕಾರಿ ಸಂವತ್ಸರ ಕಳೆದು ಶಾರ್ವರಿ ಬಂದಿದೆ. ವಿಕಾರಿಯ ಹೋಗುವ  ದಿನಗಳು ಹುಟ್ಟಿಸಿದ್ದು ಸಾವಿನ ಭಯಗಳನ್ನ. 

ನಿನ್ನ ಮುದ್ದು ಭಾಷೆಯಲ್ಲಿ ಹೇಳುವುದಾದರೆ ಇದೊಂದು ಕಣ್ಣಿಗೆ ಕಾಣದ ಗುಮ್ಮಾ. ಅದರ ಹೆಸರು ಕೊರೊನ, ಭಯ ಭೀಕರವಾದದ್ದು. ಇದು ಚೀನಾ ದೇಶದಿಂದ ಬಂದ ಸಾವಿನ ಬುತ್ತಿ. ಕಣ್ಣಿಗೆ ಕಾಣದ, ಆದರೆ ಅದೆಷ್ಟೋ ಜೀವವನ್ನೇ ತಿನ್ನುತ್ತಿರುವ ಸಧ್ಯದ ನರಭಕ್ಷಕ. ಚಿಕಿತ್ಸೆ ಇಲ್ಲದ, ಇದಕ್ಕೆ ನಾವುಗಳು ಹೆದರಿ ಕುಳಿತಿದ್ದೇವೆ. 

ದಿನ ನಿತ್ಯ ನಿಲ್ಲಲೂ, ಜಾಗವಿಲ್ಲದಂತೆ ಇರುವೆಗಳಂತೆಯೇ ಗಿಜಿಗುಡುತ್ತ ಇದ್ದ ಈ ಮಹಾನಗರಿ ಇಂದು ಅಕ್ಷರಶಃ ಖಾಲಿಯಾಗಿದೆ. ಹೊಗೆ, ಗಾಳಿ, ವಾಹನಗಳ ಶಬ್ದಕ್ಕೆ ನಿರ್ಜೀವವಾಗಿದೆ. ಒಂಥರಾ ಭೂಮಿ ನಿಲ್ಲುವುದನ್ನೇ ಮರೆತಂತೆ ಭಾಸವಾಗುತ್ತಿದೆ.  ಈ ನಗರಿ ಇಂದು ಕಂಡಕಂಡಲ್ಲಿ ಹೂ ಬಿಟ್ಟು ಚಂದಗೆ ನಿಂತಿದೆ, ಆದರೆ ಈ ಸೌಂದರ್ಯವ ಸವಿಯುವವರು ಯಾರು. ಸಾವಿನ ಭಯ ಯಾವ ಸುಖವನ್ನು ಆಸ್ವಾದಿಸಲು ಬಿಡುವುದಿಲ್ಲ ಅಲ್ಲವಾ?

ಮೌನ ಮತ್ತು ಖಾಲಿತನವಿದೆಯಲ್ಲ, ಅದು ನಮ್ಮನ್ನು ತೀರಾ ಆಂತರಿಕವಾಗಿ ಸುಟ್ಟು  ಬಿಡುತ್ತದೆ.  ಅರ್ಥವಾಗಿದ್ದು ಏನು ಗೊತ್ತ?ಮನುಷ್ಯ ಬದುಕುವ ಖಾಯಿಲೆಗೆ ಬಿದ್ದು ತನ್ನ ತನವನ್ನೇ ಮರೆತುಬಿಟ್ಟಿದ್ದ. ಆದರೆ ಈ ಕ್ಷಣವಿದೆಯಲ್ಲ, ನಾವು ಯಾರು? ನಮ್ಮ ಮೂಲ ಬಯಕೆ ಏನು? ಎಂದು ಜ್ಞಾಪಿಸುತ್ತಿದೆ. ದುಡ್ಡು,ಕೆಲಸ ಅಂತೆಲ್ಲ ಯಾವುದರ ಹಿಂದೆ ಎಂದೇ ಗೊತ್ತಿಲ್ಲದೆ ಓಡುತ್ತಲೇ ಇದ್ದೇವೋ,  ಒಂದೇ ಸಮನೆ ನಿಂತಲ್ಲೇ ನಿಂತು ಬಿಟ್ಟಂತಾಗಿದೆ. ಆದರೆ ವಿಚಿತ್ರವೆಂದರೆ ಈ ಜ್ಞಾನೋದಯಕ್ಕೆ ಕಾರಣ ಜೀವ ಭಯ. ನಗರ ನಮ್ಮನ್ನು ಸೆಳೆಯುವುದೇ ಈ ಜೀವಂತಿಕೆಯ ಮುಖವಾಡದಿಂದ. ಆದರೆ ಇಂದು ಮುಖವಾಡಗಳಿಲ್ಲದೇ ತಲೆ ತಗ್ಗಿಸಿ ನಿಂತಿದೆ. 

ಮನುಷ್ಯನ ಬದುಕಿಗೆ ನೆಮ್ಮದಿ,ಪ್ರೀತಿ, ಸಹಬಾಳ್ವೆಯೇ ಮುಖ್ಯ. ದ್ವೇಷದಿಂದ,  ಅಸೂಯೆಯಿಂದ ಕಲಿಸಲಾಗದನ್ನು, ಈ ಕಾಲವೇ ಕಲಿಸಿದೆ. ಆದರೆ ನಾವುಗಳು ಎಷ್ಟು ಕಲಿಯುತ್ತೇವೆ? ಯಾರಿಗೆ ಗೊತ್ತು!!!

ಒಂದು ಕಡೆ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಇನ್ನೊಂದು ಕಡೆ ಸಾವಿನ ಸಂಖ್ಯೆಯೂ... ಆದರೆ ಮತ್ತೊಂದು ಕಡೆ ಜನ ಸಾವನ್ನು ಗೆದ್ದ ಮೃತ್ಯುಂಜಯರಂತೆ ಓಡಾಡಿಯುತ್ತ, ಮೈ ಮರೆಯುತ್ತಿದ್ದಾರೆ. ಸರ್ಕಾರ ಯೋಜನೆಯ ಹೆಸರಲ್ಲಿ, ಕಾನೂನಿನ ಹೆಸರಲ್ಲಿ,  ನಮ್ಮ ರಕ್ಷಣೆಗೆ ನಿಂತರೆ ನಾವಿಲ್ಲಿ ಜೀವದ ಹಂಗು ಇಲ್ಲದೆ ತಿರುಗುತ್ತಿದ್ದೇವೆ. 

ಕಂದಾ.. 

ಇದನಂತೂ ಹೇಳಲೇಬೇಕು. ಪೊಲೀಸರು, ಡಾಕ್ಟರ್, ಸ್ವಚ್ಛಮಾಡುವವರು, ಇಂದಿನ ನಿಜವಾದ ದೇವರು. ನಮ್ಮಗಳ ಬದುಕಿಗಾಗಿ, ನಮ್ಮ ನಾಳೆಗಳಿಗಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನ ನಾವು ನೆನೆಯಲೇಬೇಕು. 

ನಾವಿಲ್ಲಿ ಮನೆಯಲ್ಲೇ ಬಂಧಿತರಾಗಿದ್ದೇವೆ. ನಿಂಗೆ ಬೇಸರ ನಾಲ್ಕು ಗೋಡೆಯ ಮಧ್ಯೆ ಇದ್ದು ನಮಗೂ ಬೇಸರವೇ. ಹೇಳಿಕೊಳ್ಳಲು ಬಾರದ ನೀನು, ಮತ್ತೆ ಹೇಳುತ್ತಲೇ ಒಪ್ಪಿಕೊಂಡು ಬದುಕಬೇಕಾದ ನಾವುಗಳು. 

ಸತ್ತೇ ಹೋಗಿಬಿಡುತ್ತೇವೆ ಅಂತಲ್ಲ... ಆದರೆ ನಮ್ಮ ನಾವು ಕಾಯ್ದುಕೊಳ್ಳದಿದ್ದರೆ ಇಲ್ಲೇ ಎಲ್ಲೋ ಸುಳಿದಾಡುತ್ತಿರುವ ಸಾವು ಬಂದು ತಬ್ಬಿಯೇ ಬಿಡುತ್ತದೆ. 

ಯುದ್ಧದ ದಿನಗಳ ಕಾಣದ ನಾವು ಇದೊಂದು ಹೊಸ ದಿಗ್ಬಂಧನಕ್ಕೆ ಸಿಕ್ಕಿಕೊಂಡಿದ್ದೇವೆ.  

ನೀನು ದೊಡ್ಡವನಾದ ಮೇಲೆ ಇದನೆಲ್ಲ ಓದಲಿ ಮತ್ತು ನಿನ್ನ ತಲೆಮಾರಿಗೆ ಇದು ಇತಿಹಾಸದಲ್ಲಿ ಮಾತ್ರ ಇರಲಿ, ಎಂಬ ಆಶಯ ಅಷ್ಟೆ.  ಈ ಜೀವಭಯ ನಮ್ಮಗಳಿಗೇ ಮುಗಿದು ಹೋಗಲಿ ಮತ್ತು ಇಂದಿನ ನಮ್ಮ ಬದುಕಿನ ಪಾಠಗಳು ನಿನಗೆ ಕಲಿಕೆಯಾಗಲಿ ಅಂತಷ್ಟೇ. 




Wednesday, 22 April 2020

ಒಳಗಿನ ಕಿವಿಗೊಂದು ಕಿವಿಮಾತು

ಮನಸೇ... 

ಇದು ಅಂತ್ಯಂತ ಕಷ್ಟ ಕಾಲ ಮನುಷ್ಯ ಮನುಷ್ಯನ ಮುಖ ನೋಡಲು, ಪ್ರೀತಿಯ ಹಸ್ತ ನೀಡಲೂ ಭಯ ಪಡುತ್ತಿರುವ ಭಯಾನಕ ಕ್ಷಣಗಳು. ಎಲ್ಲವನ್ನೂ ಗೆದ್ದೇ ಎಂದು ಬೀಗುತ್ತಿದ್ದವನಿಗೆ ಸಾವನ್ನು ಗೆದ್ದಿಲ್ಲ ಎಂಬ ಆತ್ಮ ವಿಮರ್ಶೆಯ ಕಾಲ. 

ನಾವುಗಳು ಅದೆಷ್ಟು ಬೀಗುತ್ತಿದೆವು. ಎಲ್ಲವನ್ನೂ ಮುಷ್ಟಿಯಲ್ಲಿ ಬಿಗಿಹಿಡಿಯಬಲ್ಲೆವು ಎಂಬ ಭ್ರಮೆಯಲ್ಲಿ. ಯಾರೂ ಇಲ್ಲದೆಯೂ ಬದುಕಬಲ್ಲೆವು ಎಂಬ ಹುಚ್ಚು ಧೈರ್ಯದಲ್ಲಿ. ಗಗನಕ್ಕೆ ಹಾರುತ್ತೇವೆ ಎಂದು ಭುವಿಯೆಡೆಗೆ ನಿರ್ಲಕ್ಷ ತೋರುವಷ್ಟು, ಅದೆಷ್ಟು ಬ್ಯುಸಿ ಆಗಿದ್ದೆವು ಸಂಬಂಧಗಳ ಮರೆವಷ್ಟು, ಅದೆಷ್ಟು ಅಹಂ ಭಾವ. ಅಹಂ ಸರ್ವಂ. 


ಆದರೆ ಈ ಕ್ಷಣ, ನಾಳೆಗಳ ಕಲ್ಪನೆಯೇ ಇಲ್ಲ ಕನಸುಗಳ ಕಾಣಲೂ ಭಯ, ಕನಸ ಕಟ್ಟಿಕೊಂಡು ಮಾಡುವುದೇನಿದೆ. ಇಂದು ಈ ಕ್ಷಣ ಅಂತ ಬದುಕಬೇಕು. ಯಾವ ಕ್ಷಣದಲ್ಲಿ ಯಾವ ರೋಗ ಬಂದು ಯಾರ ಬಲಿಪಡೆಯುತ್ತದೋ, ಕಂಡವರು ಯಾರು? ನಾವು ಬೀಗಿದ, ಖುಷಿಯಿಂದ ಓಡಾಡಿದ ರಸ್ತೆಗಳಲ್ಲಿಇಂದು  ನಡೆಯಲೂ ಹಿಂಜರಿಯಬೇಕು. ಇಷ್ಟೊಂದು ಜನಗಳ ಕಂಡು ಅಚ್ಚರಿ ಪಟ್ಟ ನನ್ನದೇ ಕಣ್ಣುಗಳೂ, ಇಂದಿನ ರಸ್ತೆಗಳ ಖಾಲಿತನಕ್ಕೆ, ಮೌನಕ್ಕೆ ಹೆದರಿ ನಡುಗಿ ಹೋಗಿದೆ. ಇದು ಇನ್ನೆಷ್ಟು ದಿನ ಎಂಬ ಉತ್ತರವಿಲ್ಲದ ಪ್ರಶ್ನೆಯ ಮತ್ತೆ ಮತ್ತೆ ಕೇಳಿಕೊಂಡು ಸೋತು ಹೋಗಿದೆ.ಎಷ್ಟೊಂದು ಮುಖವಾಡಗಳ ಹೊತ್ತು ಬದುಕುತ್ತಿದ್ದೆವು ನಾವು, ಇಂದು ಯಾವುದೂ ಇಲ್ಲ ಮನುಷ್ಯ ತನ್ನವರನ್ನು ಕಾಪಾಡಿಕೊಳ್ಳಲು ಅದೆಷ್ಟು ಹೋರಾಡುತಿದ್ದಾನೆ. ಯುಧ್ಧ, ಭಯೋತ್ಪಾದನೆಯಲ್ಲಿ ಇರದ ಜೀವ ಭಯವನ್ನು ಈ ರೋಗ ಹುಟ್ಟುಹಾಕಿದೆ. 

ಹೇ ನನ್ನೊಳಗಿನ ಕಿವಿಯೇ... 

ಇದರಿಂದ ಒಂದಷ್ಟು ಬದುಕ ಪಾಠ ಕಲಿಯಬೇಕು ನೀನು. 

ನೆನಪಿಟ್ಟುಕೋ ನೀನು ಒಂದು ಪುಟ್ಟ ಜೀವ ಇಲ್ಲಿ ನಿನಗಿಂತ ಅವಶ್ಯಕವಾಗಿದ್ದು ಸಾವಿರವಿದೆ.  ಅಷ್ಟಕ್ಕೂ, ನೀನು ಭುವಿಗೆ ಅವಶ್ಯಕತೆಯೇ ಅಲ್ಲ. ಇಲ್ಲಿ ಇರುವಷ್ಟೂ ದಿನ ಪ್ರೀತಿ ಸ್ನೇಹಗಳ ನೀಡುಕೈಯಾಗಿರು ನಾನೇನು ಪಡೆದೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ, ಯಾಕೆಂದರೆ ನಿನ್ನ ಹುಟ್ಟು ಪಡೆಯಲಲ್ಲ, ಕೊಡಲು. ನಿನ್ನ ಕೈಲಾದ ಸಹಾಯ ಮಾಡು.  ಹಾ,! ಸಹಾಯವೆಂದರೆ ಬರಿಯ ದುಡ್ಡಿನದಲ್ಲ. ನೊಂದವನಿಗೆ ಬರಿಯ ದುಡ್ಡಿನ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದಿತು. ಮರು ಪ್ರೀತಿಯ ಹಂಬಲವಿಲ್ಲದೇ ಪ್ರೀತಿ ಕೊಡು, ಇಲ್ಲಿ ಕೊಟ್ಟ ಪ್ರೀತಿ ಇನ್ನೆಲ್ಲಿಂದಲೋ ನಿನ್ನೆಡೆಗೆ ಅನಾಯಾಸ ಹರಿದು ಬಂದೀತು, ಬರುತ್ತೆ.  ಎಲ್ಲೋ ಸಿಗುವ ಯಾರನ್ನೋ ಪ್ರೀತಿಸಬೇಕಂತಲ್ಲ, ಕಡೆಗೆ ನಿನ್ನವರನ್ನ ನಿನ್ನ ಸುತ್ತಲಿರುವವರನ್ನು ಪ್ರೀತಿಸುವ ಶ್ರೀಮಂತಿಕೆ  ಬರಲಿ.

ಹೊರಗೆ ಕಾಲಿಟ್ಟರೆ ರೋಗ ಅಂಟುವ ಈ ದಿನಗಳಲ್ಲಿ ಮನೆಯಲ್ಲೇ ಕುಳಿತು ದಿನಗಳ ಲೆಕ್ಕಹಾಕುತ್ತಿರುವ ನಿಂಗೆ ಮನಸಿನ ರೋಗ ಅಂಟದಿರಲಿ ನಿನ್ನೊಳಗಿನ ಭಾವ ಗಂಗೆ ಪ್ರೇಮದ ರೂಪ ಪಡೆದು ಧುಮ್ಮಿಕ್ಕಲಿ. 

Sunday, 22 March 2020

ಒಳಗಿನಲೆ.....

ಹೇ ಆತ್ಮಸಖನೇ.. 

ಒಂದಷ್ಟು ಪ್ರಶ್ನೆಗಳಿವೆ ನಂಗೆ....

ಹುಟ್ಟಿದೊಡನೆಯೇ ಸಾವೂ ನಿಶ್ಚಯ, ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೂ ಯಾಕೆ ಈ ನೋವು ನಲಿವಿನ ಹುಡುಕಾಟದ ಹುಚ್ಚು. ಯಾಕೆ ಉಸಿರಿರುವ ತನಕ ಸುಮ್ಮನೆ ಬದುಕಲಾಗದು.  ಅಮೃತವನ್ನ  ಕುಡಿದು ಬಂದವರಂತೆ  ಬದುಕುವ ಆಸೆ ಯಾಕೆ? ಆತ್ಮಕ್ಕೆ ಸಾವಿಲ್ಲವಂತೆ ಅಂದರೆ ದೇಹದ ಕಾಳಜಿ ಏಕೆ? ಆತ್ಮ ಅಶುದ್ಧವಾಗದಂತಲ್ಲವಾ ಕಾಯ್ದುಕೊಳ್ಳಬೇಕಾಗಿರುವುದು. ಉಸಿರು ಹೋದಮೇಲೆ ಸುಟ್ಟು  ಬಿಡುವ ದೇಹದ ಬಗ್ಗೆ ಈ ಪರಿಯ ಕಾಳಜಿ ಯಾಕೆ?  

ನಾವುಗಳು ಇಷ್ಟೊಂದು ಪ್ರೀತಿಸುತ್ತೇವೆ ಎಂದಾದರೆ ಅತ್ಮಕ್ಕಿಂತ ದೇಹವೇ ಮುಖ್ಯವಾ? ಇಲ್ಲವೆಂದಾದರೆ ಯಾಕೆ ವ್ಯಕ್ತಿಯನ್ನು ಆತ್ಮಶುದ್ಧಿಯಿಂದ ಅಳೆಯದೇ ಬರಿಯ ದೇಹದ ಸೌಂದರ್ಯದಿಂದ ಮೆಚ್ಚಿಕೊಳ್ಳುವುದು. 

ಒಂದಿನ ಹಿಂಗೊಂದು ಪ್ರಶ್ನೆ ಕೇಳಿದ್ದೆ ಗುರುಗಳಲ್ಲಿ, ಧರ್ಮರಾಜ ಸತ್ಯವಂತ,ನೀತಿವಂತ ಮಾತಿಗೆ ತಪ್ಪದವ, ತಪ್ಪನ್ನೇ ಮಾಡದವ ಆದರೆ ಕೃಷ್ಣನ ಆಪ್ತ ಗೆಳೆಯ ಪಾರ್ಥ. ಕೃಷ್ಣ ಹೇಳಿದಂತೆ ಕೃಷ್ಣ ತನ್ನನ್ನು ಕಂಡುಕೊಂಡಿದ್ದು ಒಬ್ಬ  ಸಾಮಾನ್ಯ ಕೋಪ-ತಾಪಗಳಿರುವ, ಅತೀ ಸಾಮಾನ್ಯ ಮನುಷ್ಯನಾದ ಅರ್ಜುನನಲ್ಲಿ. ಅಂದರೆ ದೈವತ್ವವಿರಿದು ಧರ್ಮಜನಲ್ಲೋ ಅಥವಾ ಅರ್ಜುನನಲ್ಲೋ? 

ಒಬ್ಬ ಮನುಷ್ಯನ ಸಾಮಾನ್ಯ ಗುಣಗಳು ಎಂದರೆ ಏನು?  ಧರ್ಮಜನಂತೆ ಸಮಚಿತ್ತದ ಮನಸಾ?  ತಪ್ಪೇ ಮಾಡದ ಯಾವುದಕ್ಕೂ ಭಾವನಾತ್ಮಕವಾಗಿ ಅಭಿವ್ಯಕ್ತಿಯೇ ಇಲ್ಲದ ಯುಧಿಷ್ಠಿರನ? ಇಲ್ಲ   ಅರ್ಜುನನಂತೆ ಸಿಟ್ಟು ಸೆಡವು ಪ್ರೀತಿಯ ಸಾಮಾನ್ಯ ಗುಣಗಳ? 

ಇನ್ನು ಅರ್ಜುನನಂತೆ ಭಾವಗಳ ಜೊತೆ ಬದುಕುವುದೇ ದೇವರ ಸ್ವರೂಪ ಎಂದಾದರೆ ನಾವುಗಳು ಸತ್ಯ ಧರ್ಮದ ಹುಡುಕಾಟ ಮಾಡುತ್ತ ಅದರ ಪರಿಮಿತಿಯಲ್ಲಿ ಮನುಷ್ಯನನ್ನು  ಒಳ್ಳೆಯವನು ಕೆಟ್ಟವನು ಎಂದು ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ?

ಕೃಷ್ಣ ರಾಧೆಯನ್ನು ಮದುವೆ ಆಗಬೇಕು‌ ಎಂದಾಗ ಅವನ‌‌ ಗುರುಗಳು ಹೇಳಿದ್ದರಂತೆ, ನಿನ್ನ ಹುಟ್ಟಿನ ಕಾರಣ ಬೇರೆಯೇ ಇದೆ. ನೀನು ಪ್ರಪಂಚದ ಪ್ರೇಮವಾಗಬೇಕು ಬರಿಯ ರಾಧೆಗೆ ಸೀಮಿತವಾಗಬಾರದು ಎಂದು. ಬರಿಯ ಕೃಷ್ಣನ‌ ಹುಟ್ಟಿಗೊಂದೇ ಕಾರಣಗಳಿರಲಾರದು ನಮ್ಮಂತ ಸಾಮಾನ್ಯ ಜೀವಿಯ ಸೃಷ್ಟಿಗೂ ಕಾರಣಗಳಿರಬಹುದು ಅಲ್ಲವಾ? ತಪ್ಪು ಸರಿಗಳೆರಡನ್ನೂ ನಮ್ಮಿಂದಲೇ ನಡೆಯುತ್ತವೆ ಎಂದಾದರೆ ಇದೂ ಸೃಷ್ಟಿಯ ಕಾರಣಗಳೇ ಇರಬಹುದಾ?

ದೈವವೇ...

ಪ್ರಶ್ನೆಗಳು ಸಾವಿರ ನನ್ನೊಳಗೆ ಆದರೆ ನಿನ್ನೆಡೆಗಿನ‌ ನಂಬಿಕೆ ನನ್ನನ್ನು ಮಡಿಲಲ್ಲಿ ಮಲಗಿಸಿ ಸಮಾಧಾನ‌ ಮಾಡಿಬಿಡುತ್ತದೆ.ಬಹುಶಃ ದ್ವಂದ್ವಗಳಿಗೆಲ್ಲ ಉತ್ತರ ನಿನ್ನ ಸ್ಮರಣೆ ಮಾತ್ರ‌ ಇರಬಹುದು.

ಈ ಸರಿ ತಪ್ಪುಗಳ ಪ್ರಪಂಚದಲ್ಲಿ ಮನುಷ್ಯನನ್ನು ಇದ್ದಂತೆ ಒಪ್ಪಿಕ್ಕೊಳ್ಳದೇ ಒಳ್ಳೆಯವನು ಕೆಟ್ಟವನು ಎಂದೆಲ್ಲ ಯೋಚಿಸುತ್ತ ನಿಜ ಸ್ವಭಾವನ್ನೇ ಮರೆತು ಬದುಕುವುದು ಎಷ್ಟು ಸರಿ?


Tuesday, 18 February 2020

ಒಂದು ಭಿನ್ನಹ.......

ನನ್ನೊಳಗೆ ಸೋಜಿಗವಾಗಿ ಕುಳಿತ ಮನಸ್ಸೆಂಬ ನಿನಗೆ,

ಈ ಮಹಾನಗರದಲ್ಲಿ ನನ್ನನ್ನು ಹುಡುಕುತ್ತಲೇ ಪ್ರತಿ ಕ್ಷಣವೂ ಕಳೆದು ಹೋಗುತ್ತಿದ್ದೇನೆ. ಇಲ್ಲಿ ಬಂದು ಸುಮಾರು ೬ ವರುಷಗಳಾದರೂ ನಗರ ನನ್ನೊಳಗೆ  ಮಹಾ ಸೋಜಿಗವೊಂದನ್ನ ಪ್ರತಿ ದಿನವೂ ಸೃಷ್ಟಿಸುತ್ತಿದೆ. ನಾಲ್ಕೇ ಮನೆಗಳ ಪುಟ್ಟ ಹಳ್ಳಿ ಇಂದ ಬಂದ ಮಹಾನ್ ಹಠಮಾರಿ ನಾನು. ನಿಜಕ್ಕೂ ಒಂದು ಕನಸಿನಂತೆ ಕಾಣುತ್ತದೆ ನಗರ ನನ್ನೊಳಗೆ. 

ಜನಸಂಖ್ಯೆಯ ಪುಸ್ತಕದಲ್ಲಿ ಓದಿದ್ದೆನಾದರೂ ಇಲ್ಲಿ ಇರುವ ಜನಗಳನ್ನು ನೋಡಿದರೆ ಎಲ್ಲೋ ಭ್ರಮೆಯ ಸ್ಟಷ್ಟಿಯೇನೋ, ಎನಿಸಿಬಿಡುತ್ತದೆ. ನಂಗೆ ಯಾರು ಆಗದ, ಆದರೆ ದಾರಿಯ ಪ್ರತಿ ತಿರುವಿನಲ್ಲೂ ಸಿಗುವ ನನ್ನಂತಹುದೇ ಜೀವಿಯ ಬದುಕು ವಿಸ್ಮಯವಾಗುತ್ತದೆ ನಂಗೆ. 

ಯಾಕೆ? ದೇವರೆಂದು ಹೆಸರಿಟ್ಟುಕೊಂಡು, ಯಾರಿಗೂ ಕಾಣದ ಜಾಗದಲ್ಲಿ ಇದ್ದರೂ, ಇಲ್ಲದಂತೆ ಇಲ್ಲದೆಯೂ, ಇದ್ದಂತೆ ನಾಟಕವಾಡುವ ನೀನು ಮನುಷ್ಯನನ್ನು ವಿಶೇಷವಾಗಿ ಸೃಷ್ಟಿಸಿದ ಕಾರಣವಾದರೂ ಏನು? ನಿನ್ನ ಪೂಜಿಸುವ ಜೀವವೊಂದು ಬೇಕು ಎನ್ನುವ ಸ್ವಾರ್ಥವ? ಇಲ್ಲ, ನಿನ್ನ ಸೃಷ್ಟಿಯ ಗರ್ವದ ಸಂಕೇತವಾ? 

ಕೆಲವೊಮ್ಮೆ ಸೋಜಿಗವಾಗುತ್ತದೆ, ಕೆಲವೊಮ್ಮೆ ಅಸಹ್ಯವೂ....  ಏನೆಲ್ಲಾ ಮಾಡಿದ ಮನುಷ್ಯ ಜೀವಿ...  ನದಿಯ ಆಳಕ್ಕೆ ಇಳಿಯಬಲ್ಲ, ಮುಗಿಲೆತ್ತರಕ್ಕೆ ಹಾರಬಲ್ಲ, ಏನೇನೂ ಕಲ್ಪಿಸಿಕೊಳ್ಳಬಲ್ಲ, ತರಂಗಗಳಲ್ಲಿ ಮಾತನ್ನು ಹರಿಬಿಡಬಲ್ಲ, ಎಲ್ಲೋ ಇರುವುದನ್ನು ಇಲ್ಲೇ ಇರುವಂತೆ ತೋರಿಸಬಲ್ಲ. ತಂತ್ರಜ್ಞಾನದ ಸಾಧನೆಯ ನೆನೆದರೆ ನಾನೂ ಇದೇ ಜಾತಿಗೆ ಸೇರಿರುವ ಜೀವಿಯೇ ಎಂದು ಹೆಮ್ಮೆ ನಂಗೆ. 

ಹಾಗೆಯೆ, ಕೆಲವೊಂದು ಸೂಕ್ಷ್ಮತೆಯ ಅರಿಯದೇ ಕಂಡ ಕಂಡಲ್ಲಿ ಹೊಲಸು ಮಾಡುವ, ತನ್ನ ಇರುವಿಗೆಯ ಸಾರ್ಥಕತೆಯ, ಯೋಚನೆಯೇ ಇಲ್ಲದೆ, ಭಾವನೆಗಳ ಬೆಂಕಿಯಲ್ಲಿ ದಿನವೂ  ತನ್ನ ತಾನು ಸುಟ್ಟುಕೊಳ್ಳುತ್ತಾ ಬದುಕುವುದ ಕಂಡರೆ ಅಸಹ್ಯವೂ ಬರುತ್ತದೆ.

ದೇವರೇ.. 

ಮನುಷ್ಯನ ಸೃಷ್ಟಿಯ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಅದಕ್ಕೆ ಅವಶ್ಯಕತೆ ಎಂದಾಗಲಿ,ಮನೋರಂಜನೆ ಎಂದಾಗಲಿ ಏನೋ ನಾವು ಹೆಸರನ್ನೂ ಇಟ್ಟುಕೊಂಡಿದ್ದೇವೆ. ಆದರೆ, ನಿನ್ನ ಸೃಷ್ಟಿಯಾದ ನಮ್ಮ ಇರುವಿಕೆಗೆ ಕಾರಣವೇನು? ಸುಮ್ಮನೆ ಉಸಿರಾಡಿ, ತಿಂದುಂಡು ಬದುಕನ್ನು ರಾಡಿ ಮಾಡಿಕೊಂಡು, ಒಂದಷ್ಟು ಪ್ರೀತಿ-ಬೇಸರ, ಕಣ್ಣೀರು-ನಗು ಎಲ್ಲವನ್ನೂ ಅನುಭವಿಸಿ ಸತ್ತು ಪ್ರಕೃತಿಯ ಮಡಿಲ ಸೇರಲಿಯೆಂದ?

ನಿಂಗೆ ನಾವುಗಳೂ ಮನರಂಜನೆಯ ಅವಶ್ಯಕತೆಗಳ? ಗೊತ್ತಿಲ್ಲ ನಂಗೆ.... 


ಬಯಕೆಯೊಂದೇ... 
ಪ್ರತಿ ಉಸಿರಿಗೂ ಒಂದಷ್ಟು ಕಾರಣಗಳ ಸೃಷ್ಟಿಸು, ಕಾರಣಗಳಿಲ್ಲದೇಯೂ ಬದುಕುವ ಅವಶ್ಯಕತೆಗಳ ಸೃಷ್ಟಿಸು. ಇರುವೆ ಗೂಡಂತೆ ಕಾಣುವ ನನ್ನಂತಹುದೇ ಜೀವಿಯ ಇರುವಿಕೆಗೆ ಕಾರಣಗಳ ಕೊಡು. ಒಂದಷ್ಟು ಸೂಕ್ಷ್ಮ ಭಾವನೆಗಳ ಕೊಡು. ಎಲ್ಲರೆಡೆಗೆ ಪ್ರೀತಿ ಸ್ನೇಹವನ್ನು ಇನ್ನಷ್ಟು ಕೊಡು. 

ಮನುಷ್ಯರು ನಾವು ಪ್ರತಿ ವಸ್ತುವನ್ನು ಹೊಸ ಆವೃತ್ತಿಯಲ್ಲಿ ಹೊರತರುವಾಗ ಇನ್ನು ವಿಶೇಷವಾಗಿ ತಪ್ಪುಗಳನ್ನು  ತಿದ್ದಿ ಪರಿಚಯಿಸುತ್ತೇವೆ.ಹಾಗೆಯೇ ನಮ್ಮ ಹೊಸ ದಿನಗಳನ್ನು ಇನ್ನು ಪರಿಷ್ಕರಿಸಿ ಇನ್ನಷ್ಟು ಮಾನವೀಯತೆಯನ್ನು, ದೈವಿಕತೆಯನ್ನು,ಪ್ರೀತಿ ಸ್ನೇಹವನ್ನೂ ತುಂಬು ಎಂದು ಕತ್ತಲು ಮುಗಿದು ಇನ್ನೊಂದು ಬೆಳಕಿಗೆ ಕಾಯುತ್ತಿರುವ ಈ ಅಭಿಸಾರಿಕೆಯ ಪ್ರಾಥನೆ..... 

Saturday, 7 December 2019

ಬದುಕ ಹುಚ್ಚಿಗೆ....

ಮನಸೇ,

ತೀರಾ ಸಾಮಾನ್ಯ ದಿನಗಳು. ಹೊಸದು ಎಂಬುದು ಏನೂ ಇಲ್ಲ. ಬದುಕುವ ಹುಚ್ಚಿಗೆ ಅಂಟಿಕೊಂಡ ನನಸಾಗದ ಆದರೂ ಬದಲಾಗದ ಕೆಲ ಕನಸುಗಳು. ಸೂರ್ಯ ಚಂದ್ರರಿಗೆ ವ್ಯತ್ಯಾಸವೇ ತಿಳಿಯದ ದಿನಗಳು. ಮಹಾನಗರಿಯ ಮಾಯಾವಿ ಬದುಕು.

ಬದುಕು‌ ಓಡು ಎಂದು ಕಾಲಿನ‌ ಮೇಲೆ ಹೊಡೆದು ಓಡಿಸುತ್ತದೆ. ಗುರಿ ತಲುಪಿತೆಂದು ನಿಲ್ಲಬೇಕಾ? ಇಲ್ಲ ನಡೆಯುವುದು ಇನ್ನೂ ಇದೆ ಎಂದು ಓಡಬೇಕಾ?ಗೊತ್ತಿಲ್ಲ!! ಹೊಸ ಮೈಲಿಗಲ್ಲುಗಳ ತಲುಪಬೇಕು, ಪ್ರತೀದಿನ. ಹಾಗೆಂದು ದಾಟಿದ ಕಲ್ಲುಗಳ ಎಣಿಸಬಾರದು.ಯಾಕೆಂದರೆ, ನಿಂಗೆ ದಾಟಿದ ಪ್ರತಿ ಕಲ್ಲೂ ಒಂದು ಪುಟ್ಟ ಗೆಲುವು, ದಾಟಬೇಕಿರುವ ದಾರಿಗೆ ಸ್ಪೂರ್ತಿ. ಪ್ರಪಂಚಕ್ಕೆ ನಿನ್ನ ಲೆಕ್ಕ ನಿನ್ನ ಅಹಂನ ಪ್ರತಿರೂಪ. 

ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತದೆ‌ ನಂಗೆ. ಯಾವ ದ್ವಂದ್ವಗಳೂ ನನ್ನ ಕಾಡುತ್ತಿಲ್ಲ. ಇದು ಮನಸಿನ ಆಳಸಿತನವಾ ಇಲ್ಲ ಬದುಕು ಕಲಿಸಿದ ಪ್ರೌಢಿಮೆಯ ಗೊತ್ತಿಲ್ಲ. ಯಾರೋ ಏನನ್ನೂ ಯೋಚಿಸುತ್ತಿಲ್ಲ ಖಾಲಿಯಾಗಿದ್ದೇನೆ ಎಂದರೆ ನಂಬಿಕೆಯೇ ಇರಲಿಲ್ಲ. ನಾನು‌ ಅಂತದ್ದೊಂದು ಖಾಲಿತನ‌ವ ಅನುಭವಿಸದ ಹೊರತು. 

ನಂಗೆ ನನ್ನ ಬದುಕು ನನ್ನ ಕನಸುಗಳೇ ಇಂದಿಗೂ ಒಂದು ಜೀವಂತಿಕೆಯನ್ನ ತುಂಬುವುದು. ಯಾವಾಗಲೂ ಯಾರದೋ ಬದುಕೇ ಸ್ಪೂರ್ತಿಯಾಗಬೇಕು ಎಂದೇನು‌ ಇಲ್ಲ. ನಾನು‌ ನಿನ್ನೆಗಿಂತ ಇಂದು ಹೆಚ್ಚು ಸದೃಢವಾಗಿದ್ದೇನೆ ಎಂದಾದರೆ, ಅದೇ ನನ್ನ ನಾಳೆಗಳ ಬದುಕಿಸುತ್ತದೆ. 

ಯಾರದೋ ಎದುರು ನನ್ನ ನಾನು ಸಮರ್ಥಿಸಿಕೊಳ್ಳಲಾರದೇ ಅಸಹಾಯಕನಾದ ದಿನದಿಂದ ಅಲ್ಲೆ ಗೆದ್ದು ಹೇಳಿದವರಿಗೆ ಗೆಲುವನ್ನ ಉತ್ತರವಾಗಿಕೊಟ್ಟ ನನ್ನದೇ ಬದುಕು ನಂಗೆ ಯಾರದೋ ಬದುಕಿನ ಕಥೆ ಕಟ್ಟಿಕೊಡುವುದಕ್ಕಿಂತ ಹೆಚ್ಚು ಆತ್ಮವಿಶ್ವಾಸ ತುಂಬಿಕೊಡುತ್ತದೆ.

ಗೊತ್ತು, ಇದೇನು ನೊಬೆಲ್ ಪಾರಿತೋಷಕದ ಸಾಧನೆಯಲ್ಲ ಆದರೆ ನಿನ್ನ ನಿನ್ನೆಗಳ ಗೆಲ್ಲುವುದೇ ಗೆಲುವು ಅಲ್ಲವಾ?? ಕಳೆದ ದಿನಕ್ಕಿಂತ ಬರಲಿರುವ ದಿನಕ್ಕೆ ಪರಿಪೂರ್ಣನಾಗುವ ಪ್ರಯತ್ನವೇ ಅಲ್ಲವಾ  ಪ್ರಗತಿ ಎಂದರೆ.

ಹೇ,
ನಿನ್ನನ್ನು ಅಹಂಭಾವವೊಂದು ಬದುಕಿಸುತ್ತದೆ ಎಂದಾದರೆ ಅದರಿಂದ ಬೇರೆಯವರಿಗೆ ತೊಂದರೆ ಇಲ್ಲ ಎಂದಾದರೆ ಅದು ತಪ್ಪಲ್ಲ. ಅಹಂ ಎನ್ನುವುದು ನೋಡುವವರ ಭಾವ ಅಷ್ಟೇ. ನಿನ್ನ ಅಂತರಂಗವ ಶುದ್ಧಿಯಾಗಿಸುವ ನಿನ್ನಾತ್ಮದ ಬೆಳಕ ಬೆಳಗಿಸುವ ಎಲ್ಲವೂ ಸಮ್ಮತವೇ.

ಅಭಿಸಾರಿಕೆ ನೀನು ನಿನ್ನ ದಾರಿಗೆ ಕೊನೆಯಿಲ್ಲ. ಕೊನೆಯಿದೆ ಎಂದರೆ ನೀನು ದಾರಿಯ ಬದಲಿಸುವ ಕಾಲ ಬಂದಿದೆ ಎಂದೇ ಅರ್ಥ. ನಡೆಯುತ್ತಲೇ ಇರು ಬಯಲು ನಿನಗಾಗಿ ತೆರೆದುಕೊಂಡೀತು...

Wednesday, 22 May 2019

ಅಸಂಬದ್ಧ ಯೋಚನೆಗಳು

ನನ್ನೊಳಗಿನ ಮನಸೇಂಬ ಭ್ರಮೆಗೆ. 

ಮನಸು ಎಂಬುದೊಂದು ಇದೆ ಎಂಬ ನಂಬಿಕೆಯೇ ಇಲ್ಲದೆ ಬದುಕಿದವಳು ನಾನು. ಬೇರೆಯವರಿಗೆ ಕಿವಿಯಾಗಿದ್ದಕ್ಕಿಂತ ನಾನು ನನ್ನನ್ನೇ ಕಂಡಿದ್ದು ಕೇಳಿದ್ದು ಜಾಸ್ತಿ. ಈ ಅಭಿಸಾರಿಕೆಯೂ ಅದರಲ್ಲೇ ಒಂದು. 

ಕಾಲು ಇಟ್ಟಲ್ಲೆಲ್ಲ ಬಣ್ಣದ ಹೂವುಗಳ ನಗುವೇ, ನಾನೆೇ...  ಎಷ್ಟೋ ಬಾರಿ ಯಾವುದನ್ನೂ ನೋಡಲಾರೆ.  ಸುಮ್ಮನೆ ನಿಂತಲ್ಲೇ ನಿಂತು ಕಣ್ಮುಚ್ಚಿ ಬಿಡುತ್ತೇನೆ. ಒಂದು ಕಡೆ ಧಾನ್ಯಸ್ತ ಸ್ಥಿತಿ ಇನ್ನೊಂದು ಕಡೆ ಬುಧವಾರದ ಸಂತೆಯ ಗಲಿಬಿಲಿ ಮನದಲ್ಲಿ. ಈ ಮಹಾನಗರಿಯಲ್ಲಿ ಸೋತೆನಾ ಗೆದ್ದೆನಾ? ಸೋತದ್ದಾದರೆ ಏನನ್ನು? ಗೆಲುವು ಎಂದರೇನು? ಜಾಸ್ತಿ ಸಿಕ್ಕಿದ್ದು ಈ ಪ್ರಶ್ನಾರ್ಥಕ ಚಿನ್ಹೆಗಳೇ.. !

ಬರೆದದ್ದು ಎಲ್ಲವು ಒಂದೇ ನನ್ನೊಳಗಿನ ಗೆಲುವ ಹುಡುಕುವ ಹುಂಬು ಮನಸಿಗೆ. ಅದಕ್ಕೆ ಎಲ್ಲವೂ ಒಂದೇ ರೀತಿ. ನನ್ನ ಸಮಾಧಾನಿಸುವ ಹೊಸ ತಂತ್ರ ಕಂಡೆ ಇಲ್ಲ ನಂಗೆ. ಹಳೆಯ ತಂತ್ರಗಳು ಮನಸಿಗೂ ಬೇಸರ ತಂದಿದೆ. ಆದರೂ ಇದು ನನಗಾಗಿಯೇ ತಾನೇ?  ನನ್ನ ಖುಷಿಯ ಖಜಾನೆಯ ಕೀಲಿ ಕೈ ನನ್ನ ಬಳಿಯೇ ಅಲ್ಲವಾ ಇರುವುದು. 

ಇನ್ನು ಕ್ಷಮೆ ಮತ್ತು ಸೋಲುವುದು ಎಂಬುದು, ಸ್ವಾಭಿಮಾನ ಮತ್ತು ದುರಭಿಮಾನ ಎರಡನ್ನೂ ಒಳಗೊಂಡ ತೀರಾ ಪರಿಚಿತ ಭಾವ. ಯಾರನ್ನು ಕ್ಷಮಿಸಬೇಕು. ಯಾರಿಗೆ ಸೋಲಬೇಕು? ಕ್ಷಮಿಸುವುದರಿಂದಲೇ ನಾನು ಸೋತದ್ದಾ? ಅಥವಾ ಸೋತಿದ್ದಕ್ಕೇ ಕಳೆದುಕೊಂಡಿದ್ದಾ? ಗೊತ್ತಿಲ್ಲ!! 
ಆದರೆ, ಎಷ್ಟು ದಿನ ಇದೆಲ್ಲ ನಾನೇನು ಅಮೃತವ ಕುಡಿದು ಬಂದಿಲ್ಲ.  ಸೋತರೂ, ಗೆಲುವು ಸಿಕ್ಕಿತೆಂದರೆ ಸೋಲನ್ನು ಒಮ್ಮೆ ತಬ್ಬಿಬಿಡುವ. ಅಷ್ಟಕ್ಕೂ ಸಂಬಂಧಗಳಲ್ಲಿನ ಸೋಲು ಸಾವಿಗಿಂತ ಶ್ರೇಷ್ಠವಾದದ್ದಲ್ಲವಾ? ಇರುವ ನಾಲ್ಕು ದಿನ ಎಲ್ಲರೂ ಪ್ರೀತಿಸುತ್ತಾರೆ ಎಂಬ ಅಹಂನ ಭ್ರಮೆಯಲ್ಲಿ ನಾನು ಬದುಕಿಬಿಡಲೇ? 

ಹೊಸದೊಂದು ದಾರಿ ಹುಡುಕಿ ಹೊರಟಿದ್ದೇನೆ. ಅಭಿಸಾರಿಕೆ ನಾನು ನನ್ನ ಕನಸಿಗೆ ಎಂದೂ ಕೊನೆಯಿಲ್ಲ ಏನೇ ಸಿಕ್ಕಿದರೂ ಅದು ಬರಿಯ ಒಂದು ದಾರಿಯ ತಿರುವು ಅಥವಾ ಒಂದು ಪುಟ್ಟ ಮೆಟ್ಟಿಲು ಅಷ್ಟೇ. ನಿರೀಕ್ಷೆಗಳಿರಬಾರದಂತೆ ಬದುಕಿನಿಂದ. ನಂಬಿಕೆ, ನಿರೀಕ್ಷೆಗಳಿಲ್ಲದೇ ನೀನೇನು ಆಗಲು ಹೊರಟಿದ್ದು? ಹುಚ್ಚಿಯಂತೆ ಕನಸಕಟ್ಟು ಹತ್ತರಲ್ಲಿ ಒಂದಲ್ಲದಿದ್ದರೂ ಸಾವಿರದಲ್ಲೊಂದು ನಿಜವಾದೀತು. 

ನಿಲ್ಲಬಾರದೆಂದೇ ನಡೆಯ ಹೊರಟವಳು ನೀನು ನಿಂಗ್ಯಾವ ದಾರಿಯ ಹಂಗು. ನಡೆಯುವುದಷ್ಟೇ ನಿನ್ನ ಕೆಲಸ, ಗಮ್ಯದ ಬಯಕೆಬೇಡ.  ಗೆಲುವಿನ ದಿನಗಳ ಲೆಕ್ಕಬೇಡ, ಸಂಖ್ಯೆ ಹೆಚ್ಚಾದರೆ ಅಹಂ ಭಾವ ನಿನ್ನ ಕಾಡೀತು.  

ಎಲ್ಲರ ಬದುಕೂ ಒಂದು ಪುಸ್ತಕವಾಗಬಹುದು ಆದರೆ ಬದುಕುವುದು ಹೇಗೆಂದು ಯಾರೂ ಪುಸ್ತಕ ಬರೆಯಲಾರರೆನೋ. ನೀನೇ ನಿನ್ನ ಬದುಕ ಹಾಳೆಯಲ್ಲಿ ಬರೆದುಕೊ ನಿನ್ನ ಬದುಕೆಂದರೆ ಹೀಗೆಂದು. ಯಾರೋ ಓದಲಿ ಎಂಬ ಹುಚ್ಚು ಬೇಡ. ಬರೆದಮೇಲೆ ನಿಂಗೆ ಆಗುವುದೇನಿದೆ? 

ಯಾರೋ ನೀನೆಂದರೆ ಹೀಗೆಂದು ವ್ಯಾಖ್ಯಾನಿಸಲು ಬಂದರೆ ಸುಮ್ಮನೆ ನಕ್ಕುಬಿಡು ಬೇರೆಯವರ ವ್ಯಾಖ್ಯಾನಿಸುವವ ನಾನೇನೆಂದು ಯಾವತ್ತೂ ಯೋಚಿಸುವುದಿಲ್ಲ. ತನ್ನನ್ನೇ ಅರಿಯದವನಿಗೆ ಬೇರೆಯವರ ಬಗ್ಗೆ ಯೋಚಿಸುವ ಯೋಗ್ಯತೆ ಎಲ್ಲಿಂದ ಬಂದೀತು. 

Monday, 8 April 2019

ಮತ್ತೆ ಹುಟ್ಟಲಿ ಬದುಕು ಬಯಲಲ್ಲಿ

ಬಿತ್ತುವೆನು ಬೀಜವನು  ಬರಿದಾದ ಬದುಕಲ್ಲಿ
ಹುಟ್ಟಿಬಿಡಲಿ ಕನಸೊಂದು ನನ್ನೊಳಗೂ

ಪೊರೆಯುವೆನು ಬದುಕನ್ನು
ಕತ್ತಲ ದಾಟುವ ಹಾಗೆ
ಕಂಡ ಕತ್ತಲಿಗೆ ಹಸಿವಿಲ್ಲದ ಹಾಗೆ

ಬದುಕು ಬೆಳೆಯಲಿ ಹಸಿರಾಗಿ ಇನ್ನೊಮ್ಮೆ
ಬರಡಿಗೂ ಬಾಡದಿರಲಿ
ಛಲದ ಬಳ್ಳಿ

ಹಬ್ಬಿ ಬಿಡಲಿ ದೊಡ್ಡ ಮರವೊಂದಕ್ಕೆ
ಆಸರೆಯ ಬಯಸುವ ಬದಲು
ಕಾಯುವ ಕವಚವಾಗಿ

ಹುಟ್ಟಲಿ ನನ್ನೊಳಗೆ ನೋವಿರದ  ಹೂವೊಂದು
ಸತ್ತರೂ ಕಾಯಾಗುವ ತವಕದಲ್ಲಿ

ಹಣ್ಣಾಗುವೆ ನಾನು ಮತ್ತೆ ಮಣ್ಣ ಸೇರಲು
ಮತ್ತೊಮ್ಮೆ ಬದುಕ ಬಯಲಲ್ಲಿ ಹುಟ್ಟಲು.

-ಅಭಿಸಾರಿಕೆ







Sunday, 27 January 2019

ಸ್ಕಂದಗಿರಿ ಎಂಬ ಬೆಳಕ ಬೆಟ್ಟ...

ಮಾತು ಮರೆತಿದ್ದೆನಾ? ಅಥವಾ ಏನು ಮಾತಾಡಬೇಕೂ ಎಂತಲೇ ಮರೆತಿದ್ದೆನಾ ಗೊತ್ತಿಲ್ಲ. 
ಮಾತನಾಡಲು  ಏನಿದೆ ಎಂಬುದಷ್ಟೇ ಕಾಡುತ್ತಿತ್ತು.  ಈ ಮಹಾನಗರಿಯ ಮಾಯೆಯಲ್ಲಿ ಪದೇ ಪದೇ ಕಳೆದು ಹೋದಾಗ  ನನ್ನನ್ನು ಮತ್ತೆ ಮತ್ತೆ ಹುಡುಕಿ, ಕಾಡಿ, ಕೈ ಹಿಡಿದು  ಸಮಾಧಾನಿಸುವುದೆಂದರೆ ಕಡಲು, ನದಿ, ದಾರಿ ಮತ್ತು ಬಯಲು . 

ಕಡಲು ತನ್ನೊಡಲಲ್ಲಿ  ಒಳಿತು ಕೆಡಕುಗಳನ್ನೆಲ್ಲ ಬೇರ್ಪಡಿಸಿ ಒಳಿತನ್ನಷ್ಟೇ ಒಪ್ಪಿಕೊಂಡು ಕೆಡುಕನ್ನು ದೂರ ಎಸೆಯುವ ಹಾಗೆ. ಅದೆಲ್ಲೋ ಹುಟ್ಟಿ ಅದೆಷ್ಟೋ  ಕಷ್ಟದ ಕಲ್ಲು ದಾರಿಯ ಹಾದು, ನಿಷ್ಕರುಣಿ ಬೆಟ್ಟವ ಜೀಕಿ ಭಯವಿಲ್ಲದೇ, ದಾರಿಹೋಕರ ದಾಹ ತೀರಿಸಿ  ನದಿ ನಿಲ್ಲದೇ ಕಡಲು ಸೇರುವ ಪರಿ.  ಯಾರು ಬೈಯದೂ, ನಿಂತರೂ, ಮಲಗಿದರೂ ಮಧ್ಯದಲ್ಲೇ ಮಾಯವಾದರೂ ಸದಾಕಾಲಕ್ಕೂ ಮುಗಿಯದೇ ನಿರಂತರವಾಗಿ ಸಾಗುತ್ತಲೇ ಇರುವ ಮತ್ತು ನಡೆಯುವ ಹಸಿವಿಗೆ ಸಾಥಿಯಾಗುವ ದಾರಿ.  ಎಲ್ಲವನ್ನು ಕಂಡೂ, ಒಪ್ಪಿಕೊಂಡೂ,  ಏನೂ ಆಗಿಯೇ ಇಲ್ಲವೆಂಬಂತೆ ಸುಮ್ಮನೆ ನಿಂತುಬಿಡುವ ಬಯಲು, ಇವು ನನ್ನ ಬದುಕಿನ ಬಲು ದೊಡ್ಡ ಕೌತುಕಗಳು. 

 ನೆನಪುಗಳ ಜೋಳಿಗೆ ಸೇರಿಸಲು ಗೆಲುವಿನ ಅರ್ಥ ಹುಡುಕಲೆಂದೇ ಹೊರಟಿದ್ದು ಸ್ಕಂದಗಿರಿ ಎಂಬ ಬೋಳು ಬೆಟ್ಟದ ತುದಿಗೆ ಸೂರ್ಯನನ್ನು ನೋಡಲು. ಯಾರೋ ಕೇಳಬಹುದು ಸೂರ್ಯನನ್ನು ನೋಡಲು ಅಲ್ಲಿಗೇ ಹೋಗಬೇಕಾ ಎಂದು? ಆದರೆ ಕಷ್ಟದ ದಾರಿ ಹತ್ತಿ, ಕಾಣುವ ಬೆಳಕಿದೆಯಲ್ಲ..! ಅದು ಸುಲಭದಲ್ಲಿ ಸಿಕ್ಕಂತಲ್ಲ. ಅದಕ್ಕೆ ತೀವ್ರತರದ ಶಕ್ತಿ ಇದೆ. 

ನಡುರಾತ್ರಿ ೩.೩೦ ಕ್ಕೆ ಆರಂಭವಾದ ನಮ್ಮ ಆರೋಹಣಕ್ಕೆ ಸಾಥಿಯಾಗಿದ್ದು ಪೂರ್ಣ ಚಂದಿರನ ಬೆಳಕು. ಒಂದು ಕಡೆ ಚಂದ್ರ ಎಂಬ ಬೆಳಕು ಇನ್ನೊಂದು ಕಡೆ ಮಾನವ ನಿರ್ಮಿತ ಬೆಳಕು. ಎಷ್ಟು ಹತ್ತಿದರೂ ಮುಗಿಯುತ್ತಲೇ ಇಲ್ಲವಲ್ಲ ಎಂಬ ಸಣ್ಣ ನಿರಾಸೆ. ದಾರಿಯ ತುಂಬೆಲ್ಲ ಯಾರದೋ  ಹೆಜ್ಜೆ ಗುರುತು.  ಎಷ್ಟೇ ಹೆಜ್ಜೆ ಗುರುತಾದರೂ ನಾನು ಕರಗಲಾರೆ ಎಂಬ ಕಲ್ಲಿನ ಒರಟು  ಮನಸು. ನಡೆದಷ್ಟೂ ದಾರಿ ಹತ್ತಿದಷ್ಟೂ ಬೆಟ್ಟ. ನಿರಾಸೆಗೆ ತಂಪೆರೆದು ಸಾಥಿಯಾದ ಚಳಿಯ ಗಾಳಿ. 

ಪ್ರಕೃತಿ ಎಲ್ಲವನ್ನೂ ನೀಡಿದೆ ಆದರೆ ನಾವೇ ಪ್ರಕೃತಿಗಾಗಿ ಏನನ್ನೂ ಮಾಡಿಲ್ಲ. ಏನೆಲ್ಲಾ ಮಾಡಿಕೊಂಡೆವೋ ನಮಗಾಗಿ ಮಾತ್ರ. ಒಮ್ಮೊಮ್ಮೆ ಮನುಷ್ಯ ಸೃಷ್ಟಿಯ ಬಗ್ಗೆ ಹೆಮ್ಮೆಯಾಗುವ ನಂಗೆ  ಕೆಲವೊಮ್ಮೆ ಅಸಹ್ಯವೂ ಆಗುತ್ತದೆ. ಕೃತಕ ಬೆಳಕನ್ನು ಸೃಷ್ಟಿಸಿ ಕತ್ತಲೆಯ ಸೊಬಗನ್ನು ಮರೆತೆವು. ವಾಹನವ ಸೃಷ್ಟಿಸಿ ನಡಿಗೆಯ ಸುಖ ಮರೆತೆವು. ನಿಜ, ಕೆಲವೊಂದು ಅವಶ್ಯಕತೆಗಳು, ಆದರೂ..  ಹಗಲೂ-ರಾತ್ರಿ, ಸೋಲು-ಗೆಲುವು, ಕಷ್ಟ- ಸುಖಗಳ ಭೇದವಿಲ್ಲದ ಸ್ವರ್ಗಕ್ಕಿಂತ ಎಲ್ಲವೂ ಇರುವ ಭುವಿಯೇ ದೊಡ್ಡದಲ್ಲವಾ? ಉತ್ಸಾಹವೇ ಇಲ್ಲದ ಬದುಕಿನಿಂದ ಬಯಸುವುದಾರೂ ಏನನ್ನೂ? 

ಇಷ್ಟೆಲ್ಲಾ ಪ್ರಶ್ನೆಗಳ ಜೊತೆಗೇ ...  ೫. ೩೦ ಕ್ಕೆ ತುತ್ತತುದಿ ತಲುಪಿ ಸೂರ್ಯನಿಗಾಗಿ ಕಾಯುತ್ತಿದ್ದರೆ ಹೊಸ ಬದುಕೊಂದು ತೆರೆದುಕೊಂಡಂತಹ ಖುಷಿ. ಆಹಾ ಪ್ರತಿ ಸೂರ್ಯೋದಯಕ್ಕೂ ಹೀಗೆಯೇ ಕಾಯುವ ಬದುಕು ನನ್ನದಾಗಬಾರದಿತ್ತಾ ಎಂಬ ಭಾವ. ಅಂತೂ ೬. ೧೫ ರ ಸುಮಾರಿಗೆ ಬಂದನಪ್ಪ ಬಾಲ ಭಾಸ್ಕರ. ಅದೆಷ್ಟು ಬಣ್ಣ ಅವನಲ್ಲಿ ಜಗವ ಬೆಳಗುತ್ತೇನೆ ಎಂಬ ಅಹಂ ಕೂಡ ಇರಬಹುದು ಬೆಳೆದಂತೆ. ಮೋಡಗಳ ಮಧ್ಯದಿಂದ ಒಲವ ಸುರಿದಂತೆ ಹೊರಬಂದ ನೇಸರನಲ್ಲಿ ಮಗುವಿನ ನಗುವ ಕಂಡಂತಾಯಿತು.  ಈ ನಡುವೇ ಚಳಿ ನಾನೇನೂ ಕಡಿಮೆ ಎನ್ನುವ ಹಾಗೆ ತಿಂದು ಬಿಡುತ್ತಿತ್ತು. 

ಪ್ರಕೃತಿಯ ಮಡಿಲಿಗೆ ಹೋದಾಗ ಅದೇನೆಲ್ಲ ಹೇಳುತ್ತದೆ. ಒಂದು ದಿನವೂ ಸೂರ್ಯ ಸೋಮಾರಿಯಾಗುವುದಿಲ್ಲ ಒಂದು ನಿಮಿಷಕ್ಕೂ ಗಾಳಿ ಮಲಗುವುದಿಲ್ಲ. ಹರಿವ ನದಿ ಕಾಡುವ ಕಡಲು ಎಲ್ಲವು ಹಾಗೆಯೇ ಕರ್ತವ್ಯ ಲೋಪ ಎಂಬುದೇ ಇಲ್ಲ. ಅದೇನಿದ್ದರೂ ನಮಗೇ.... ಎಲ್ಲರಿಗೂ  ಇಷ್ಟೊಂದು ಉತ್ಸಾಹ, ಕೆಲಸದೆಡೆಗೆ ನಿಯತ್ತನ್ನು ಕೊಟ್ಟ ಸೃಷ್ಟಿಕರ್ತ ಮನುಷನಿಗೇಕೆ ಇದನೆಲ್ಲ ಕೊಟ್ಟೆ ಇಲ್ಲವೇನೋ!! ಬಹುಶಃ ಮನುಷ್ಯನಿಗೆ ಸ್ವಯಂ ಸ್ಫೂರ್ತಿಯನ್ನು ಸೃಷ್ಟಿಸಿಕೊಂಡು ಪ್ರತಿ ದಿನವನ್ನೂ ಹೊಸದಾಗಿ ನೋಡುವ ಅವಕಾಶವನ್ನು  ಕೊಟ್ಟಿರಬೇಕು. 

ಅದೇ ಖುಷಿಯಲ್ಲಿ ಬೆಟ್ಟ ಇಳಿದರೆ, ನನ್ನೊಳಗೇ  ಏನೋ  ಗೆದ್ದಂತ ಖುಷಿ. ಇಂತಹ ಬೆಟ್ಟವನ್ನ ನಾನು ಹತ್ತಿ ಬಂದೇನ ಎಂಬ ಭಾವ, ಇನ್ನೊಂದಿಷ್ಟು ದಿನ ಬದುಕಲು ಮತ್ತು ಇನ್ನೊಂದು ಬೆಟ್ಟ ಹತ್ತಲು ಹೊಸ ಸ್ಫೂರ್ತಿ ನೀಡುತ್ತದೆ. . 








ಚಾರಣದ ದೂರ : ೪ ಕಿ.ಮಿ.
ಸೂಕ್ತ ಸಮಯ : ಜನವರಿ ೧೪ ರ ಮೊದಲು.
ಮುಂಗಡ ಬುಕ್ಕಿಂಗ್ ಮಾಡಿಕೊಳ್ಳವುದು‌ ಕಡ್ಡಾಯ.

ಫೋಟೋ ಕೃಪೆ : ಜಗನ್ 

Monday, 13 August 2018

ಗೆಲುವಿನ‌ ಹಸಿವಿಗೆ ಒಂದಷ್ಟು...

ಎಲ್ಲ ದಿನಗಳು ಒಂದೇ ರೀತಿ ಇರುವುದಿಲ್ಲ ಈ ನಡುವೆ ಪ್ರತಿ ಕ್ಷಣಕ್ಕೂ ಒಂದೊಂದು ಬಣ್ಣ. ಸ್ವಂತಿಕೆ ಇದೆ ಆದರೆ  ಸ್ವಂತಕ್ಕೆ ಸಮಯವಿಲ್ಲ ಹಾಗಂತ ಸಮಯ ಪರಾವಲಂಬಿಯಲ್ಲ ಸಂಪೂರ್ಣ ಸ್ವಂತಂತ್ರ. ತೀರಾ ತಿರುಗುವ ಬಣ್ಣದ ಕಮಾನಿನಂತಾಗಿದ್ದೇನೆ ಇಂತದೇ  ಬಣ್ಣವ....  ಹೇಳಲಾರೆ ಆದರೆ ಬರಿಯ ತಿರುಗಾಟ, ಗಟ್ಟಿ ನೆಲೆಯಿಲ್ಲ. ನೆಲೆಯ ದಕ್ಕಿಸಿಕೊಳ್ಳುವ ಬಯಕೆ ಇದೆಯಾ ಇದ್ದಂತಿಲ್ಲ. ಇದು ಗೊಂದಲವಾ? ಆನಂದವಾ? ಗೊತ್ತಿಲ್ಲ. ಸುಮ್ಮನೆ ಕಾಲಕ್ಕೆ ಉತ್ತರಿಸಲು ಬಿಡಬೇಕು. ಹೂವಿಗೆ ಹಣ್ಣಾಗುವ ಯೋಗ್ಯತೆ ಇದ್ದರೆ  ಆಗದೆ ಇದ್ದಿತಾ? ಯಾವ ಭ್ರಮರದ ಹಂಗಿಲ್ಲ.

ಕೆಲವೊಮ್ಮೆ ಸುನಾಮಿಯ ಭಯ ಕೆಲವೊಮ್ಮೆ ಬರಗಾಲದ ಬರ. ಯಾವುದಕ್ಕೂ ಹೊಂದಿಕೊಳ್ಳಲಾರೆ ಹಾಗಂತ ವಿಮುಖತೆಯೂ ಇಲ್ಲ. ಸುಮ್ಮನೆ ಕೂರಬೇಕು ಮನವೆಂಬ   ಕಡಲ ಮಧ್ಯದಲ್ಲಿ. ಯಾಕೋ ಮನಸು ಕಡಲ ದಡವಾಗುವುದು ಇಷ್ಟವಿಲ್ಲ. ದಡವೆಂದರೆ ಅಲೆಯೆಸೆದ ಕಸದ ಬಯಲು. ನಾನು ಕಡಲ ಮಧ್ಯ ಕೂರಬೇಕು ಯಾವ ಕಸದ ವಾಸನೆಯೂ ತಾಗಬಾರದು ಆದರೆ ಅಲೆಯ ಭಾವ ಕಾಡಬೇಕು.

ಮನಸೇ....

ನಕಾರಾತ್ಮಕತೆ ಎಂಬುದು ಕೀಟಾಣುವಿನಂತೆ. ಕಾಣದಂತೆ ನಿನ್ನ ಕೊಲ್ಲುತ್ತಲೇ ಇರುತ್ತದೆ. ಯಾರಿಗೂ ನಿನ್ನ ಮೇಲೆ ನಕಾರಾತ್ಮಕತೆಯ ದಾಳಿ ಮಾಡಲು ಬಿಡಬೇಡ. ಬದುಕು ಒಂದೇ ಅದಕ್ಕೆ ನೀನೇ ದೊರೆ. ದೊರೆಯ ಮಾತೇ  ಅಂತಿಮ ರಾಜ್ಯದಲ್ಲಿ, ನಿನ್ನ ನಿರ್ಧಾರಗಳಿಗೆ-ಕನಸುಗಳಿಗೆ ಯಾರದೂ ಒಪ್ಪಿಗೆಯ ಹಸ್ತಾಕ್ಷರ ಬೇಕಿಲ್ಲ. ಬದುಕ ಬರೆಯ ಹೊರಟ ನಿಂಗೆ ಕೊನೆಯ ಸಹಿಯನ್ನು ಮಾಡುವ ಅಧಿಕಾರ ಮತ್ತು ಹಕ್ಕು ಎರಡೂ ಇದೆ. ಮನಸನ್ನು ನ್ಯಾಯಾಲದಲ್ಲಿ ನಿಲ್ಲಿಸಿ ಪ್ರಶ್ನಿಸೋ ಹಕ್ಕು ನ್ಯಾಯಾಧೀಶನಿಗೆ ಮಾತ್ರ ಮತ್ತು ನೀನೆ ಬರೆದ ಈ ಕಾನೂನಿನಲ್ಲಿ ನಿನ್ನದೇ ಕಾಯ್ದೆ ಕೂಡ. ಹುಳವೊಂದು ಹೂವ ತಿಂದು ಬಿಡುತ್ತದೆ ಎಂದು ತಿಳಿದ ದಿನ ಹುಳವನ್ನು ಹುಡುಕಿ ಕೊಲ್ಲಬೇಕು. ಹೂವನ್ನಲ್ಲ. ನಗುವ ಹೂವಿಗೆ ಇನ್ನೂ ಕನಸಿದೆ ಆದರೆ ಹೂವ ನಗುವ ಕೊಲ್ಲುವ ಹುಳುವಿಗಲ್ಲ.
ಹಾಗೆಯೇ ನಕಾರಾತ್ಮಕತೆಗೂ... ಮತ್ತದನ್ನ ಹುಟ್ಟು ಹಾಕುವ ಮನಸುಗಳಿಗೂ.

ಗೆಲುವಿನ ಕನಸು ಎಲ್ಲರಿಗೂ ಇದೆ. ಎಲ್ಲರಿಗೂ ಗೆಲುವುಬೇಕು, ಗೆಲುವನ್ನು ನೀರಿನಂತೆ ಕುಡಿದುಬಿಡುವ ಹಂಬಲ  ಮತ್ತು ಹಸಿವು. ಆದರೆ  ಮನವೇ, ಅರ್ಥೈಸಿಕೊ ಗೆಲುವೆಂಬುದು ಸಾಗರ ಅದೂ ಸಿಹಿನೀರ ಸಾಗರ ಇದ ಸೇರಲು ತುಂಬಾ ದೂರ ಚಲಿಸಬೇಕು. ಮಳೆಯ ನೀರಿನೊಂದಿಗೆ ಸೇರಿ ತುಂಬಾ ಅಬ್ಬರಿಸಿ ಕಡಲ ಸೇರುವ ತವಕಬೇಡ ನಿಂಗೆ. ಸುಡು ಬೇಸಿಗೆಯ ಬಿಸಿ ಧರೆಯ ಹಸಿವ  ಇಂಗಿಸಿ ನಿನ್ನದೇ ಆತ್ಮಶಕ್ತಿಯೊಟ್ಟಿಗೆ ನಿಲ್ಲದೆ ಹರಿದು ಸಾಗರವ ಅಪ್ಪಿಕೋ. ಯಾರ ಕರುಣೆಯ ಕಾಲುವೆಯೂ ಬೇಡ ಹಾಗೆಯೇ ಯಾರ ಕಿಚ್ಚಿನ ತಡೆ ಗೋಡೆಯೂ.

 ನೀರೆಂದರೆ ಹಂಬಲಿಸುವ ಭುವಿಯೂ ಒಂದು ಮಟ್ಟಿಗೆ ದಾಹ ತೀರಿದ ದಿನ ನೀರನ್ನು  ಹರಿಯಲು  ಬಿಟ್ಟು ಸುಮ್ಮನೆ ಬೆತ್ತಲಾಗಿ ನಿಂತು ಬಿಡುತ್ತದೆ. ಹಾಗೆಯೇ ನಿನ್ನ ಹಿಡಿಯ ಬಂದ ಬಂಧಗಳೂ. ಒಂದು ಸಮಯದ ನಂತರ ಎಲ್ಲ ತೀವ್ರತೆಯೂ ಕಡಿಮೆಯಾಗುತ್ತದೆ ಮತ್ತು ಅಂದು ನಿನ್ನ ಹರಿವಿನ ದಾರಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಸುಮ್ಮನೇ ನಗುತ್ತ ಎಲ್ಲವನ್ನೂ ನೋಡುತ್ತಿರು ನಿನ್ನ ಬದುಕ ದಾರಿ ಅದಾಗೇ ಸೃಷ್ಟಿಯಾದೀತು.


ಬದುಕು ಎಲ್ಲರ ಬಯಕೆ ಮತ್ತು ಬಯಕೆಗಳು ಎಲ್ಲರ ಬದುಕು, ನದಿಯ ಕನಸು ಸಾಗರವ ಸೇರುವುದೇ ಹೊರತು ಸಾಗರವೆಂದು ನದಿಯಾಗ ಬಯಸುವುದಿಲ್ಲ. ಎಲ್ಲವನ್ನೂ ನನ್ನ ಕಣ್ಣುಗಳಲ್ಲಿ ನೋಡುವುದು ಸುಖ ಬೇರೆಯವರ ಕಣ್ಣಾಗಿ ಇರುವುದೇ ಕಷ್ಟ. ಅದಕ್ಕೆ ನದಿ ಹರಿಯುತ್ತದೆ ಮತ್ತು ಅಲೆ  ಜಿಗಿಯುತ್ತದೆ. 


Sunday, 17 June 2018

ಕನಸಿನ ಹುಟ್ಟುಹಬ್ಬಕ್ಕೆ......

ನಾಲ್ಕು ವರುಷಗಳು ಸಂಪೂರ್ಣಗೊಂಡವು ಅಭಿಸಾರಿಕೆ ಎನ್ನುವ ನನ್ನ ಬದುಕಿನ ಕನಸಿಗೆ. ಪ್ರಾರಂಭಿಸಿದ ಹುರುಪು ಇಂದಿಲ್ಲವಾದರೂ ಖುಷಿಗಳಂತೂ ಹಾಗೆಯೇ ಇದೆ. 

ಕಾಲವೆಂಬುದು ಹಾಗೆಯೇ ಯಾರನ್ನೂ ಕೇಳದೆ ಸುಮ್ಮನೆ ಸರಿದುಬಿಡುತ್ತದೆ. ನಾವುಗಳು ಬದಲಾಗಬೇಕು ಅಷ್ಟೇ . ಆದರೆ, ಎಷ್ಟೋ ಸಲ ಅದೇ ಸೂರ್ಯ,ಅದೇ ಚಂದ್ರ, ಅದೇ ಭೂಮಿ ಬದಲಾವಣೆ ಹೇಗೆ ಸಾಧ್ಯ? ಎನಿಸಿಬಿಡುತ್ತದೆ. ಸತ್ಯವೆಂದರೆ, ಬದಲಾವಣೆಗೆ ಸಾವಿರ ಅರ್ಥ, ಹುಡುಕಬೇಕಷ್ಟೆ.  ಮೊದ ಮೊದಲು ನನ್ನ ಖಾಸಗಿ ಪಟ್ಟಿಯಲ್ಲಿ ಬರೆಯುತ್ತಿದೆ ಜೊತೆಗೆ ಯಾವುದೊ ಪುಟದ ಹಿಂಭಾಗದಲ್ಲಿ ಅನ್ನಿಸಿದ್ದನ್ನ ಸುಮ್ಮನೆ ಬರೆದೆಸೆಯುತ್ತಿದೆ. ಅದೆಲ್ಲಿಂದ ಹುಟ್ಟಿತೋ ಅಭಿಸಾರಿಕೆಯ ಕನಸು ಗೊತ್ತಿಲ್ಲ. ತಿಂಗಳಿಗೊಂದಾದರೂ ಬರೆಯಬೇಕು ಅಂತ ಅಂದುಕೊಂಡಿದ್ದೆ ಕೂಡ. 

ಇಲ್ಲಿ ನನ್ನದೇ ಬುದ್ಧಿಯೊಂದಿಗೆ,  ಭಾವದೊಂದಿಗೆ ಮಾತನಾಡಿದ ಮಾತುಗಳಿವೆ, ನನ್ನ ಮಡಿಲಿನಲ್ಲಿ ನಾನು ಮಲಗಿ ನಂಗೆ ಮಾಡಿಕೊಂಡ ಸಮಾಧಾನವಿದೆ.  ನನ್ನ ಗೊಂದಲಗಳು, ಬೇಸರಗಳು, ಅಪರಾಧಿ ಭಾವಗಳಿಗೆ ನಾನೆೇ  ಕಟ್ಟಿಕೊಂಡ ಸಮರ್ಥನೆಗಳಿವೆ  ಅಷ್ಟೇ. 

ಹೇಳಿಕೊಳ್ಳುವಷ್ಟೇನೂ ಬರೆದುಕೊಂಡಿಲ್ಲ,  ಬರಿ ಇಪ್ಪತ್ತ ಮೂರು ಬರಹಗಳು ಮಾತ್ರ ಈ ನಾಲ್ಕು  ವರುಷಗಳಲ್ಲಿ. ಇನ್ನೆಷ್ಟು ಬರೆಯುತ್ತೇನೆ ಎಂದರೆ ಗೊತ್ತಿಲ್ಲ. ನಂಗೇ ನನ್ನ ಬರಹಗಳು ಒಂದೇ ಸಾಮ್ಯತೆಯ ಬರಹಗಳಾಗಿ ಅನ್ನಿಸುತ್ತಿವೆ. ಹೊಸ ಬರಹಗಳು ನನ್ನನ್ನೇ ಸಮಾಧಾನಿಸುವಲ್ಲಿ ಸೋಲುತ್ತಿವೆ. 

ಆದರೆ , ಇಂದಿಗೂ ನನ್ನೊಳಗೆ ಅಭಿಸಾರಿಕೆ ಎಂಬ ಧ್ವನಿಯೇ ಒಂದು ಉತ್ಸಾಹವನ್ನ ಕೊಡುತ್ತದೆ. ಅವಳಿಗೆ ನಿರಂತರ ಚಲನೆ ಇದೆ ಮತ್ತು ಎಂದಿಗೂ ಸಾವಿಲ್ಲದ ಕನಸುಗಳಿವೆ ಎಂಬ ಪ್ರತಿಧ್ವನಿಯೇ ಹೊಸದೊಂದು ಕನಸಕಟ್ಟಿಬಿಡುತ್ತವೆ. ಅಭಿಸಾರಿಕೆ ಮಹಾನ್ ಸ್ವಾರ್ಥಿ ಮತ್ತವಳಿಗೆ ಆ ಸ್ವಾರ್ಥವೆಂದರೆ ತುಂಬಾ ಇಷ್ಟ. 


ನನ್ನದೆಷ್ಟಿವೆಯೋ ಗೊತ್ತಿಲ್ಲ ಆದರೆ ಒಂದಷ್ಟು ಜನ ಓದಿದ್ದಾರೆ. ಯಾರ ಭಾವವೇನೂ ಗೊತ್ತಿಲ್ಲ. 

ಖುಷಿಗಳಿಗಿಂತ ನೀರಿಕ್ಷೆಗಳಿಲ್ಲ ಬದುಕಿಗೆ.  ಮತ್ತೆ ಮತ್ತೆ ಹುಟ್ಟಲಿ ನನ್ನೊಳಗೆ ಅಭಿಸಾರಿಕೆ ಮುಗಿಯದ ದಾರಿ ನಿಲ್ಲದ ಪಯಣದಲ್ಲಿ. 

ಹುಟ್ಟುಹಬ್ಬದ ಶುಭಾಶಯಗಳು....