ನಂಬುತ್ತಾಳೆ.
ಕನಸು ಕಟ್ಟುತ್ತಾಳೆ. ಪ್ರೀತಿಸುತ್ತಾಳೆ, ಕನಸಿನಿಂದ ಎಚ್ಚೆತ್ತವಳಂತೆ ಬೀಳುತ್ತಾಳೆ.
ಅವಳಿಗೆ ಪೆಟ್ಟಾಗುತ್ತದೆ.
ನಂಬಿಕೆ ಸತ್ತು ಹೋಗುತ್ತದೆ
ಹೃದಯ ಒಡೆದು ಹೋಗುತ್ತದೆ
ಕನಸು ಕಮರಿ ಹೋಗುತ್ತದೆ
ಸೋಲೋ ಸಾವೋ ಗೊತ್ತಾಗದಷ್ಟು ಆಘಾತವಾಗುತ್ತದೆ.
ಅಳುತ್ತಾಳೆ.
ಕುಸಿದು ಬೀಳುತ್ತಾಳೆ.
ಮುಂದಿನ ದಾರಿ ಕಾಣದೆ, ಕಗ್ಗತ್ತಲಲ್ಲಿ ಕಳೆದುಹೋಗುತ್ತಾಳೆ.
ಆಗೆಲ್ಲ ಒಳಗಿನ ಅವಳ ಮಾತು ಕೇಳುತ್ತದೆ-
"ನೆನಪಿದೆಯಾ ನೀನು ಕಾಲು ನೋವಾಗುವವರೆಗೂ ನಡೆದವಳು?
ಸೋಲೂ ಸೋಲುವಂತೆ ಪ್ರೀತಿಸಿದವಳು?
ಕನಸೂ ಶರಣಾಗುವಂತೆ ಬದುಕಿದವಳು?
ನೀನು ನದಿಯಂತವಳು, ನಿಲ್ಲದೆ ಓಡುವವಳು.
ನೀನು ಸಾಗರದ ಮನಸ್ಸಿನವಳು, ಕದಡಿದ ನೀರನ್ನು ಕಡೆದು ಹೊಲಸನ್ನು ಆಚೆ ಎಸೆದು ನಿರಂತರ ಭೋರ್ಗರೆಯುವವಳು.
ನೀನು ಕನಸಿನ ಕಣ್ಣವಳು
ಬೆಳಕ ಹುಡುಕುವ ಚೈತನ್ಯದವಳು,
ಕತ್ತಲೀಗೇಕೆ ಭಯ?
ಬಿದ್ದಾಗಲೆಲ್ಲ ಎದ್ದು ನಿಂತವಳು.
ಸತ್ತಿಲ್ಲವಲ್ಲ ಸೋತಿದ್ದೀಯ, ಎದ್ದು ನಿಲ್ಲು ನಿನಗೇನಾಗಿದೆ?" ಎಂದು ಕೇಳುತ್ತಾಳೆ.
ಮತ್ತೆ ಅವಳು ಏಳುತ್ತಾಳೆ, ನಡೆಯುತ್ತಾಳೆ.
ಬಯಲಿನ ಬಯಕೆಯವಳು.
ಕಟ್ಟುಪಾಡಿನ ಭಯವಿಲ್ಲ.
ಸಂಬಂಧದ ಅಣೆಕಟ್ಟೂ ಇಲ್ಲ.
ಅವಳ ಗುರಿ ಬರಿ ಸಾಗರವನ್ನು ಸೇರುವುದಲ್ಲ.
ಈಗ ಅವಳೊಂದು ಪ್ರವಾಹ..
ಸಾಗುತ್ತಲೇ ಇರುತ್ತಾಳೆ, ಸೋಲಿಲ್ಲದವಳು, ಸಾವೂ ಬಳಿ ಸುಳಿಯಲಾರದವಳು.