ನಾನು ಯಾರು? ಎಂದು ಮತ್ತದೆ ಮಹಾನಗರಿಗೆ ಬಂದು ಪ್ರಶ್ನೆ ಕೇಳುವ, ಉತ್ತರವ ಹುಡುಕಿ ಹೊರಡುವ ಕಾಲ ಬಂದಿದೆ. ಬದುಕು ಒಂದಷ್ಟು ವರುಷಗಳ ನಂತರ ಮತ್ತೆ ಎಲ್ಲಿಂದ ನನ್ನ ಅಸ್ತಿತ್ವವ ಹುಡುಕ ಹೊರಟಿದ್ದೆನೋ ಅಲ್ಲಿಗೆ ತಂದು ನಿಲ್ಲಿಸಿದೆ.
ಇಲ್ಲಿ ನಂಗೆ ನಾನು, ಪ್ರಶ್ನೆ ಕೇಳುತ್ತ, ಉತ್ತರವ ಹುಡುಕುತ್ತ, ಅಥವಾ ಉತ್ತರವ ಹುಡುಕುವ ನೆಪದಲ್ಲಿ ಬದುಕುತ್ತ, ನಡೆಯುತ್ತ, ಜೀವಂತಿಕೆಯನ್ನು ಕಂಡವಳು ನಾನು. ನಂಗೆ ಬದುಕುವ ಹುಚ್ಚು ಮತ್ತು ಬದುಕಿನೆಡೆಗೆ ಅತೀವ ಕುತೂಹಲ ಎರಡು ಇದೆ ಮತ್ತು, ಇದೇ ನನ್ನನ್ನು ಸದಾಕಾಲಕ್ಕೂ ಬದುಕಿಸುತ್ತ ಜೀವಂತವಾಗಿಸುತ್ತ ಬಂದಿದೆ.
ಯಾಕೆ ಬದುಕಬೇಕು? ಎನ್ನುವ ಪ್ರಶ್ನೆಗೆ ನಂಗೆ ಉತ್ತರ ಯಾವಾಗಲು ನಾನೇ ಆಗಿದ್ದೇನೆ ಮತ್ತು ನನ್ನ ಬದುಕುವ ಹುಚ್ಚಿಗೆ ಕಾರಣವೂ ನಾನೇ ಆಗಿದ್ದೇನೆ.
ಆದರೆ, ಇಂದು ಅಸ್ತಿತ್ವದ ಹುಡುಕಾಟವಿಲ್ಲ ನಂಗೆ, ನಾನು ಯಾರು ಗೊತ್ತು. ಗಟ್ಟಿಯಾಗಬೇಕು, ಗೆಲ್ಲಬೇಕು, ಗೆದ್ದು ಯಾರಿಗೊ ಬದುಕನ್ನು ಉತ್ತರವಾಗಿ ನೀಡಬೇಕು ಎನ್ನುವ ಭಾವವಿಲ್ಲ. ನನ್ನ ಬದುಕು ಯಾರಿಗಾಗೊ ಅಲ್ಲ ಇಲ್ಲಿ ನಾನು ಮಾತ್ರ. ಸಾವಿನ ಬಗ್ಗೆ ಕುತೂಹಲವಾಗಲಿ, ಭಯವಾಗಲಿ ಇಲ್ಲ. ಬರುವಾಗ ಸಾವು ಬಂದು ಅಪ್ಪಬಹುದು. ನಾಳೆ ಸೋತರೆ!, ಯಾರೊ ನಕ್ಕಾರು ಎಂಬ ಭಯವಿಲ್ಲ ಸೋತಾಗ ಯಾರಿದ್ದರೆನು ಎಂಬ ಉಡಾಫೆ ಮನಕ್ಕೆ. ಮತ್ಯಾವ ಭಾವ ಕಾಡಲು ಸಾಧ್ಯ? ನನ್ನ ಕನಸುಗಳ? ಕನಸುಗಳು ಮರೆತುಹೋಗಿವೆ ಹಳೆಯ ನೆನಪುಗಳು ಉಳಿದಿಲ್ಲ. ಅಲ್ಲಿಗೆ ಬದುಕಿಗೆ ಇಂದು ಈ ಕ್ಷಣ ಮಾತ್ರ ಮುಖ್ಯ. ನಾನಿಲ್ಲಿ ನನ್ನ ಬದುಕಿನ ಏಳು ಬೀಳಿನ ಜೊತೆ ನಾನು ನಿಲ್ಲಬಲ್ಲೆನೆಂದರೆ ಅದು ಇಂದಿನ ಗೆಲುವು. ನೋವಿಗೆ ಕುಗ್ಗದೆ ಅತೀ ಭಾವುಕನಾಗೊ ಭಯಕ್ಕೆ ಬಿದ್ದೊ ಸಮಸ್ಯೆಯಿಂದ ಓಡಿಹೋಗದೆ ನಿಲ್ಲಬಲ್ಲೆನು ಎಂದರೆ ಈ ಕ್ಷಣದ ಗೆಲುವು.
ಬದುಕು ಕಲಿಸಿದ ದೊಡ್ಡ ಪಾಠ ಅದುವೇ ನಿಲ್ಲಬೇಕು... ನಾನು ಇಲ್ಲೆ ನಿಲ್ಲಬೇಕು ಸುತ್ತಲಿನ ಪ್ರಪಂಚದಲ್ಲಿ ಏನೆ ಆಗುತ್ತಿದ್ದರೂ ನಾನು ಇಲ್ಲೆ ನಿಲ್ಲಬೇಕು. ಭಯಕ್ಕಲ್ಲ ನಿಂತಿದ್ದು, ಭಂಡ ಧೈರ್ಯಕ್ಕೆ ಏನಾಗುತ್ತದೆ ನೋಡೊಣ ಎಂಬ ಹುಚ್ಚಿಗೆ.
ಮಹಾನಗರವನ್ನು ತುಂಬ ಪ್ರೀತಿಸುವ ನಂಗೆ ಇಂದು ಅಸ್ತಿತ್ವದ ಹೋರಾಟದ ಹುಚ್ಚು ಇಲ್ಲ. ಸುಮ್ಮನೇ ಸೋಲುವ ಸುಸ್ತು ಇಲ್ಲ. ನಿಂತು ಸುಮ್ಮನೆ ನಿಂತು ಎಲ್ಲವನ್ನೂ ನೋಡಿಯೂ ಏನು ಅರಿಯದಂತೆ ಏನೂ ಅರ್ಥವಾಗದಂತೆ ನಗದಂತೆ ಅಳದಂತೆ ಸುಮ್ಮನೇ ನಾನು ನಾನಾಗಿ ನಿಂತುಬಿಡುವ ಆಸೆ.
ಈ ಸುಮ್ಮನೆ ನಿಲ್ಲುವುದಿದೆಯಲ್ಲ, ಅದರಿಂದ ಎಷ್ಟೊಂದು ಹಿತವೆಂದು ಅರಿಯುವ ಆಸೆ ನಂಗೆ. ಯಾವ ಭಾವ ತೀವ್ರತೆಯು ಇಲ್ಲದೆ ಕೇವಲ ನಂಗೆ ನಾನಾಗಿ ಬದುಕುವ ದಾರಿ ಬಂದಂತೆ ಬದುಕ ಸ್ವೀಕರಿಸುವ ಸುಮ್ನನೆ ಬದುಕುವ ಆಸೆ ನಂಗೆ. ಮೊದಲೆಲ್ಲ ಅನಿಸುತ್ತಿತ್ತು, ಸುಮ್ಮನೆ ಬದುಕುವುದೆಂದರೆ ಸತ್ತಂತೆ ಭಾವ ತೀವ್ರತೆಯೆ ಬದುಕು ಎಂದು. ಆದರೆ ಬದುಕು ಕೊಟ್ಟ ಅತೀ ದೊಡ್ಡ ಪಾಠ ಸುಮ್ಮನೆ ನಿಂತುಬಿಡು ಬದುಕಿಗೂ ಸಮಯಬೇಕು ಬದುಕಲು... ಸಂತೆಯ ಮಧ್ಯದಲ್ಲಿ ನಿಂತಲ್ಲೆ ನಿಂತು ಓಡುವ ಬದುಕನ್ನು ನೋಡುತ್ತ ಬದುಕುವ ಆಸೆಯನ್ನೂ ಜೀವಂತಿಸಿಕೊಂಡಿದ್ದೇನೆ. ಮನಸೊಂದಷ್ಟು ದಿನ ಈ ಖಾಲಿತನವನ್ನು ತುಂಬಿಕೊಳ್ಳಲಿ...
ನಂಗೆ ನಾನು ಮತ್ತೆ ಮತ್ತೆ ಸಿಗಲಿ ಎಂಬುದೊಂದು ಆಸೆ.
ಅಭಿಸಾರಿಕೆ