ಹೇ,
ತುಂಬಾ ದಿನಗಳ ಮೇಲೆ ಮತ್ತೆ ಬರೆಯುವ ಆಸೆಯಾಗಿದೆ. ಮೊದಲೆಲ್ಲ ಅಭಿಸಾರಿಕೆ ಎಂದರೆ ನನ್ನ ನೋವಿಗೆ ನಲಿವಿಗೆ ನನ್ನ ಒಂಟಿತನಕ್ಕೆ ನನ್ನ ಮನಸಿನ ಯಾವುದೇ ಭಾವಕ್ಕೂ ಕೇಳುವ ಕಿವಿ ಮತ್ತು ಸಮಾಧಾನದ ಮಡಿಲಾಗಿತ್ತು. ಒಂದಷ್ಟು ಕಾಲಗಳ ಕಾಲ ಇಲ್ಲಿ ಬರೆದು ನನ್ನೆಲ್ಲ ಭಾವಕ್ಕೆ ದಾರಿ ಮಾಡಿಕೊಟ್ಟೆ. ಒಂದಷ್ಟು ಕಾಲ ನಂಗ್ಯಾವ ಭಾವವು ಕಾಡುತ್ತಿಲ್ಲ ಎಂದು ಸುಳ್ಳು ಸಮಾಧಾನ ಮಾಡಿಕೊಂಡು ಮುಖವಾಡದ ಬದುಕ ಹೊತ್ತೆ, ಈ ಕ್ಷಣಕ್ಕೆ ಭಾವಗಳನ್ನ ಇದ್ದಂತೆಯೇ ಹೇಳಬಲ್ಲ ಮತ್ತು ಹೇಳಿದ್ದನ್ನು ಹೇಳಿದಂತೆಯೇ ಅರ್ಥೈಸಿಕೊಳ್ಳಬಲ್ಲ ಜಾಗ ಒಂದು ಸಿಕ್ಕಿದೆ ಅದೇ ನನ್ನ ಥೆರಪಿ ರೂಮ್.
ಇಲ್ಲಿ ಹೇಳುವ ಮಾತನಾಡುವ ಯಾವುದು ನನ್ನ ಕಿವಿ ಥೆರಪಿಸ್ಟ್ ಕಿವಿ ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ ಅದಕ್ಕೆ ಅದು ಸುರಕ್ಷಿತ ಜಾಗ.
ಸುಮಾರು ವರ್ಷಗಳ ಹಿಂದೆ ಮನಸು ಇಲ್ಲದ ಮಾರ್ಗ ಎನ್ನುವ ಒಂದು ಪುಸ್ತಕ ಒಂದಿದ್ದೆ, ಅದನ್ನು ಓದಿ ಒಂದಷ್ಟು ದಿನಗಳ ಕಾಲ ಸಿಟ್ಟೇ ಮಾಡಿಕೊಳ್ಳದೆ ಬದುಕಿದ್ದೇ. ಆದರೆ ನಿಜವಾದ ಥೆರಪಿ ಸಿಟ್ಟೇ ಬರದಂತೆ ತಡೆಯುವುದಿಲ್ಲ ನಾನು ನಾನಾಗಿ ಬದುಕಲು ಕಲಿಸುತ್ತದೆ. ಥೆರಪಿಗೆ ಹೋಗಲು ಮಾನಸಿಕ ಸಮಸ್ಯೆಯೆ ಬೇಕೆಂದಿಲ್ಲ. ಹಾಗೆ ನೋಡಿದರೆ ಎಲ್ಲರಿಗು ಒಂದಲ್ಲ ಒಂದು ಮಾನಸಿಕ ಸಮಸ್ಯೆ ಇದ್ದೆ ಇರುತ್ತದೆ. ಸ್ಥಿತ ಪ್ರಜ್ಞನಾಗಿರುವುದು ಎಂದರೆ ಅವರು ಮಾನಸಿಕ ಸಮಸ್ಯೆ ಇಂದ ಹೊರಬಂದವರು ಎಂದಲ್ಲ. ಬೇರೆಯವರು ಅಳುತ್ತಾರೆ ಮತ್ತು ಅಳುವದು ತಪ್ಪು ಎಂದು ಹೇಳುವವರಿಗೆ ಅಳುವುದು ಕಷ್ಟಸಾಧ್ಯ. ನಾವು ನಾವಾಗಿ ಬದುಕಬೇಕು ಆದರೆ ಎಷ್ಟೋ ಸಲ ನಮ್ಮ ಬದುಕು ಬೇರೆಯವರ ಬರಹವೇ ಆಗಿರುತ್ತದೆ.
ಥೆರಪಿಯಲ್ಲಿ ಪ್ರತಿ ಮಾತು ನನ್ನದಲ್ಲದ ಯಾರ ಮಾತು ಎಂದು ಗೊತ್ತಾಗುತ್ತದೆ, ಯಾರೋ ಹೇಳಬಹುದು ನೀನು ಬದುಕಿನ ಹಿಂದಿನದನ್ನು ಹುಡುಕಹೊರಟಿದ್ದೀಯ ಅದಕ್ಕೆ ಎಲ್ಲವು ಅಸಮಂಜಸವಾಗಿದ್ದೆ ಕಾಣಿಸುತ್ತದೆ, ನಾವು ಮುಂದೆ ನೋಡಬೇಕು ಹಳೆಯದನ್ನು ಮರೆಯಬೇಕು ಎಂದು. ಆದರೆ ನಮ್ಮ ಬದುಕು ಏನೆಂದು ಮೊದಲ ೬-೭ ವರುಷದಲ್ಲಿಯೇ ನಿರ್ಧಾರವಾಗಿರುತ್ತದೆ. ಸ್ಕ್ರಿಪ್ಟ್ ತಯಾರಾಗುವುದು ಈ ಕಾಲದಲ್ಲಿಯೇ ಅಮೇಲಿನದೆಲ್ಲ ನಮ್ಮ ಅಭಿನಯ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ವ್ಯಕ್ತಿ ಜೊತೆಯಲ್ಲಿ ಮೊದಲಾಗಿರುವುದೇ ನಂತರವೂ ಆಗುವುದು. ಎಷ್ಟೋ ಬಾರಿ ನಾವು ಹೇಳುತ್ತೇವೆ ಯಾಕೆ ನನಗೆ ಯಾವಾಗಲೂ ಹೀಗೆ ಆಗುತ್ತದೆ ಎಂದು. ಯಾಕೆಂದರೆ ಅದು ನಮ್ಮ ಬದುಕಿನ ನಿರ್ಧಾರದ ದಿನಗಳಲ್ಲಿ ನಾವು ಅರ್ಥೈಸಿಕೊಂಡ ಬದುಕಿನ ಕಥೆ ಆಗಿರುತ್ತದೆ.
ಮನಸು, ಮನಸಿನ ಸಮಸ್ಯೆ ಮಾನಸಿಕತೆ ಎಲ್ಲರಿಗು ಇದೆ ಅದನ್ನು ನೋಡುವ ಮತ್ತು ಗುಣಪಡಿಸಿಕೊಳ್ಳುವ ಧೈರ್ಯ ಬೇಕು. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಖುಷಿಯನ್ನು ಖುಷಿಯಾಗಿ ನೋವನ್ನು ನೋವನ್ನಾಗಿ ನೋಡುವ ಈ ಹಾದಿ ಚಂದವಿದೆ.