Monday, 11 November 2024

ಸುಮ್ಮನೆ ನಿಂತು ಬದುಕಿನೊಡುತ್ತ....

ಮನವೇ...,

ನಾನು ಯಾರು? ಎಂದು ಮತ್ತದೆ ಮಹಾನಗರಿಗೆ ಬಂದು ಪ್ರಶ್ನೆ ಕೇಳುವ, ಉತ್ತರವ ಹುಡುಕಿ ಹೊರಡುವ ಕಾಲ ಬಂದಿದೆ. ಬದುಕು ಒಂದಷ್ಟು ವರುಷಗಳ ನಂತರ ಮತ್ತೆ ಎಲ್ಲಿಂದ ನನ್ನ ಅಸ್ತಿತ್ವವ ಹುಡುಕ ಹೊರಟಿದ್ದೆನೋ ಅಲ್ಲಿಗೆ ತಂದು ನಿಲ್ಲಿಸಿದೆ.  

ಇಲ್ಲಿ ನಂಗೆ ನಾನು, ಪ್ರಶ್ನೆ ಕೇಳುತ್ತ, ಉತ್ತರವ ಹುಡುಕುತ್ತ, ಅಥವಾ ಉತ್ತರವ ಹುಡುಕುವ ನೆಪದಲ್ಲಿ ಬದುಕುತ್ತ, ನಡೆಯುತ್ತ, ಜೀವಂತಿಕೆಯನ್ನು ಕಂಡವಳು ನಾನು. ನಂಗೆ ಬದುಕುವ ಹುಚ್ಚು ಮತ್ತು ಬದುಕಿನೆಡೆಗೆ ಅತೀವ ಕುತೂಹಲ ಎರಡು ಇದೆ ಮತ್ತು, ಇದೇ ನನ್ನನ್ನು ಸದಾಕಾಲಕ್ಕೂ ಬದುಕಿಸುತ್ತ ಜೀವಂತವಾಗಿಸುತ್ತ ಬಂದಿದೆ. 

ಯಾಕೆ ಬದುಕಬೇಕು? ಎನ್ನುವ ಪ್ರಶ್ನೆಗೆ ನಂಗೆ ಉತ್ತರ ಯಾವಾಗಲು ನಾನೇ ಆಗಿದ್ದೇನೆ ಮತ್ತು ನನ್ನ ಬದುಕುವ ಹುಚ್ಚಿಗೆ ಕಾರಣವೂ ನಾನೇ ಆಗಿದ್ದೇನೆ. 

ಆದರೆ, ಇಂದು ಅಸ್ತಿತ್ವದ ಹುಡುಕಾಟವಿಲ್ಲ ನಂಗೆ, ನಾನು ಯಾರು ಗೊತ್ತು. ಗಟ್ಟಿಯಾಗಬೇಕು, ಗೆಲ್ಲಬೇಕು, ಗೆದ್ದು ಯಾರಿಗೊ ಬದುಕನ್ನು ಉತ್ತರವಾಗಿ ನೀಡಬೇಕು ಎನ್ನುವ ಭಾವವಿಲ್ಲ. ನನ್ನ ಬದುಕು ಯಾರಿಗಾಗೊ ಅಲ್ಲ ಇಲ್ಲಿ ನಾನು ಮಾತ್ರ. ಸಾವಿನ ಬಗ್ಗೆ ಕುತೂಹಲವಾಗಲಿ, ಭಯವಾಗಲಿ ಇಲ್ಲ. ಬರುವಾಗ ಸಾವು ಬಂದು ಅಪ್ಪಬಹುದು. ನಾಳೆ ಸೋತರೆ!, ಯಾರೊ ನಕ್ಕಾರು ಎಂಬ ಭಯವಿಲ್ಲ ಸೋತಾಗ ಯಾರಿದ್ದರೆನು ಎಂಬ ಉಡಾಫೆ ಮನಕ್ಕೆ. ಮತ್ಯಾವ ಭಾವ ಕಾಡಲು ಸಾಧ್ಯ? ನನ್ನ ಕನಸುಗಳ? ಕನಸುಗಳು  ಮರೆತುಹೋಗಿವೆ ಹಳೆಯ ನೆನಪುಗಳು ಉಳಿದಿಲ್ಲ. ಅಲ್ಲಿಗೆ ಬದುಕಿಗೆ ಇಂದು ಈ ಕ್ಷಣ ಮಾತ್ರ ಮುಖ್ಯ. ನಾನಿಲ್ಲಿ ನನ್ನ ಬದುಕಿನ ಏಳು ಬೀಳಿನ ಜೊತೆ ನಾನು ನಿಲ್ಲಬಲ್ಲೆನೆಂದರೆ ಅದು ಇಂದಿನ ಗೆಲುವು. ನೋವಿಗೆ ಕುಗ್ಗದೆ ಅತೀ ಭಾವುಕನಾಗೊ ಭಯಕ್ಕೆ ಬಿದ್ದೊ ಸಮಸ್ಯೆಯಿಂದ ಓಡಿಹೋಗದೆ ನಿಲ್ಲಬಲ್ಲೆನು ಎಂದರೆ ಈ ಕ್ಷಣದ ಗೆಲುವು. 

ಬದುಕು ಕಲಿಸಿದ ದೊಡ್ಡ ಪಾಠ ಅದುವೇ ನಿಲ್ಲಬೇಕು... ನಾನು ಇಲ್ಲೆ ನಿಲ್ಲಬೇಕು ಸುತ್ತಲಿನ ಪ್ರಪಂಚದಲ್ಲಿ ಏನೆ ಆಗುತ್ತಿದ್ದರೂ ನಾನು ಇಲ್ಲೆ ನಿಲ್ಲಬೇಕು. ಭಯಕ್ಕಲ್ಲ ನಿಂತಿದ್ದು, ಭಂಡ ಧೈರ್ಯಕ್ಕೆ ಏನಾಗುತ್ತದೆ ನೋಡೊಣ ಎಂಬ ಹುಚ್ಚಿಗೆ. 

ಮಹಾನಗರವನ್ನು ತುಂಬ ಪ್ರೀತಿಸುವ ನಂಗೆ ಇಂದು‌ ಅಸ್ತಿತ್ವದ ಹೋರಾಟದ ಹುಚ್ಚು ಇಲ್ಲ. ಸುಮ್ಮನೇ ಸೋಲುವ ಸುಸ್ತು ಇಲ್ಲ. ನಿಂತು ಸುಮ್ಮನೆ ನಿಂತು ಎಲ್ಲವನ್ನೂ ನೋಡಿಯೂ ಏನು ಅರಿಯದಂತೆ ಏನೂ ಅರ್ಥವಾಗದಂತೆ ನಗದಂತೆ ಅಳದಂತೆ ಸುಮ್ಮನೇ ನಾನು ನಾನಾಗಿ ನಿಂತುಬಿಡುವ ಆಸೆ‌. 

ಈ ಸುಮ್ಮನೆ ನಿಲ್ಲುವುದಿದೆಯಲ್ಲ, ಅದರಿಂದ ಎಷ್ಟೊಂದು ಹಿತವೆಂದು ಅರಿಯುವ ಆಸೆ ನಂಗೆ. ಯಾವ ಭಾವ ತೀವ್ರತೆಯು ಇಲ್ಲದೆ ಕೇವಲ ನಂಗೆ ನಾನಾಗಿ ಬದುಕುವ ದಾರಿ ಬಂದಂತೆ ಬದುಕ ಸ್ವೀಕರಿಸುವ ಸುಮ್ನನೆ ಬದುಕುವ ಆಸೆ ನಂಗೆ. ಮೊದಲೆಲ್ಲ ಅನಿಸುತ್ತಿತ್ತು, ಸುಮ್ಮನೆ ಬದುಕುವುದೆಂದರೆ ಸತ್ತಂತೆ ಭಾವ ತೀವ್ರತೆಯೆ ಬದುಕು ಎಂದು. ಆದರೆ ಬದುಕು ಕೊಟ್ಟ ಅತೀ ದೊಡ್ಡ ಪಾಠ ಸುಮ್ಮನೆ ನಿಂತುಬಿಡು ಬದುಕಿಗೂ ಸಮಯಬೇಕು ಬದುಕಲು... ಸಂತೆಯ ಮಧ್ಯದಲ್ಲಿ ನಿಂತಲ್ಲೆ ನಿಂತು ಓಡುವ ಬದುಕನ್ನು ನೋಡುತ್ತ ಬದುಕುವ ಆಸೆಯನ್ನೂ ಜೀವಂತಿಸಿಕೊಂಡಿದ್ದೇನೆ. ಮನಸೊಂದಷ್ಟು ದಿನ ಈ ಖಾಲಿತನವನ್ನು ತುಂಬಿಕೊಳ್ಳಲಿ...


ನಂಗೆ ನಾನು ಮತ್ತೆ ಮತ್ತೆ ಸಿಗಲಿ ಎಂಬುದೊಂದು ಆಸೆ.

ಅಭಿಸಾರಿಕೆ

Monday, 22 July 2024

ಬದುಕನ್ನು ಬದುಕಿ ನೋಡುವ ಸಮಯ

 ಹೇ, 

ತುಂಬಾ ದಿನಗಳ ಮೇಲೆ ಮತ್ತೆ ಬರೆಯುವ ಆಸೆಯಾಗಿದೆ. ಮೊದಲೆಲ್ಲ ಅಭಿಸಾರಿಕೆ ಎಂದರೆ ನನ್ನ ನೋವಿಗೆ ನಲಿವಿಗೆ ನನ್ನ ಒಂಟಿತನಕ್ಕೆ ನನ್ನ ಮನಸಿನ ಯಾವುದೇ ಭಾವಕ್ಕೂ ಕೇಳುವ ಕಿವಿ ಮತ್ತು ಸಮಾಧಾನದ ಮಡಿಲಾಗಿತ್ತು. ಒಂದಷ್ಟು ಕಾಲಗಳ ಕಾಲ ಇಲ್ಲಿ ಬರೆದು ನನ್ನೆಲ್ಲ ಭಾವಕ್ಕೆ ದಾರಿ ಮಾಡಿಕೊಟ್ಟೆ. ಒಂದಷ್ಟು ಕಾಲ ನಂಗ್ಯಾವ ಭಾವವು ಕಾಡುತ್ತಿಲ್ಲ ಎಂದು ಸುಳ್ಳು ಸಮಾಧಾನ ಮಾಡಿಕೊಂಡು ಮುಖವಾಡದ ಬದುಕ ಹೊತ್ತೆ, ಈ ಕ್ಷಣಕ್ಕೆ ಭಾವಗಳನ್ನ ಇದ್ದಂತೆಯೇ ಹೇಳಬಲ್ಲ ಮತ್ತು ಹೇಳಿದ್ದನ್ನು ಹೇಳಿದಂತೆಯೇ ಅರ್ಥೈಸಿಕೊಳ್ಳಬಲ್ಲ ಜಾಗ ಒಂದು ಸಿಕ್ಕಿದೆ ಅದೇ ನನ್ನ ಥೆರಪಿ ರೂಮ್. 

ಇಲ್ಲಿ ಹೇಳುವ ಮಾತನಾಡುವ ಯಾವುದು ನನ್ನ ಕಿವಿ ಥೆರಪಿಸ್ಟ್ ಕಿವಿ ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ ಅದಕ್ಕೆ ಅದು ಸುರಕ್ಷಿತ ಜಾಗ. 

ಸುಮಾರು ವರ್ಷಗಳ ಹಿಂದೆ ಮನಸು ಇಲ್ಲದ ಮಾರ್ಗ ಎನ್ನುವ ಒಂದು ಪುಸ್ತಕ ಒಂದಿದ್ದೆ, ಅದನ್ನು ಓದಿ ಒಂದಷ್ಟು ದಿನಗಳ ಕಾಲ ಸಿಟ್ಟೇ ಮಾಡಿಕೊಳ್ಳದೆ ಬದುಕಿದ್ದೇ. ಆದರೆ ನಿಜವಾದ ಥೆರಪಿ ಸಿಟ್ಟೇ ಬರದಂತೆ ತಡೆಯುವುದಿಲ್ಲ ನಾನು ನಾನಾಗಿ ಬದುಕಲು ಕಲಿಸುತ್ತದೆ. ಥೆರಪಿಗೆ ಹೋಗಲು ಮಾನಸಿಕ ಸಮಸ್ಯೆಯೆ ಬೇಕೆಂದಿಲ್ಲ. ಹಾಗೆ ನೋಡಿದರೆ ಎಲ್ಲರಿಗು ಒಂದಲ್ಲ ಒಂದು ಮಾನಸಿಕ ಸಮಸ್ಯೆ ಇದ್ದೆ ಇರುತ್ತದೆ. ಸ್ಥಿತ ಪ್ರಜ್ಞನಾಗಿರುವುದು ಎಂದರೆ ಅವರು ಮಾನಸಿಕ ಸಮಸ್ಯೆ ಇಂದ ಹೊರಬಂದವರು ಎಂದಲ್ಲ. ಬೇರೆಯವರು ಅಳುತ್ತಾರೆ ಮತ್ತು ಅಳುವದು ತಪ್ಪು ಎಂದು ಹೇಳುವವರಿಗೆ ಅಳುವುದು ಕಷ್ಟಸಾಧ್ಯ. ನಾವು ನಾವಾಗಿ ಬದುಕಬೇಕು ಆದರೆ ಎಷ್ಟೋ ಸಲ ನಮ್ಮ ಬದುಕು ಬೇರೆಯವರ ಬರಹವೇ ಆಗಿರುತ್ತದೆ. 

ಥೆರಪಿಯಲ್ಲಿ ಪ್ರತಿ ಮಾತು ನನ್ನದಲ್ಲದ ಯಾರ  ಮಾತು ಎಂದು ಗೊತ್ತಾಗುತ್ತದೆ, ಯಾರೋ ಹೇಳಬಹುದು ನೀನು ಬದುಕಿನ ಹಿಂದಿನದನ್ನು ಹುಡುಕಹೊರಟಿದ್ದೀಯ ಅದಕ್ಕೆ ಎಲ್ಲವು ಅಸಮಂಜಸವಾಗಿದ್ದೆ ಕಾಣಿಸುತ್ತದೆ, ನಾವು ಮುಂದೆ ನೋಡಬೇಕು ಹಳೆಯದನ್ನು ಮರೆಯಬೇಕು ಎಂದು. ಆದರೆ ನಮ್ಮ ಬದುಕು ಏನೆಂದು ಮೊದಲ ೬-೭ ವರುಷದಲ್ಲಿಯೇ ನಿರ್ಧಾರವಾಗಿರುತ್ತದೆ. ಸ್ಕ್ರಿಪ್ಟ್ ತಯಾರಾಗುವುದು ಈ ಕಾಲದಲ್ಲಿಯೇ ಅಮೇಲಿನದೆಲ್ಲ ನಮ್ಮ ಅಭಿನಯ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ವ್ಯಕ್ತಿ ಜೊತೆಯಲ್ಲಿ ಮೊದಲಾಗಿರುವುದೇ ನಂತರವೂ ಆಗುವುದು. ಎಷ್ಟೋ ಬಾರಿ ನಾವು ಹೇಳುತ್ತೇವೆ ಯಾಕೆ ನನಗೆ ಯಾವಾಗಲೂ ಹೀಗೆ ಆಗುತ್ತದೆ ಎಂದು. ಯಾಕೆಂದರೆ ಅದು ನಮ್ಮ ಬದುಕಿನ ನಿರ್ಧಾರದ ದಿನಗಳಲ್ಲಿ ನಾವು ಅರ್ಥೈಸಿಕೊಂಡ ಬದುಕಿನ ಕಥೆ ಆಗಿರುತ್ತದೆ. 

ಮನಸು, ಮನಸಿನ ಸಮಸ್ಯೆ ಮಾನಸಿಕತೆ ಎಲ್ಲರಿಗು ಇದೆ ಅದನ್ನು ನೋಡುವ ಮತ್ತು ಗುಣಪಡಿಸಿಕೊಳ್ಳುವ ಧೈರ್ಯ ಬೇಕು. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.  ಖುಷಿಯನ್ನು ಖುಷಿಯಾಗಿ ನೋವನ್ನು ನೋವನ್ನಾಗಿ ನೋಡುವ ಈ ಹಾದಿ ಚಂದವಿದೆ.