Thursday, 6 April 2023

ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...

ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ ಎಂದುಕೊಳ್ಳುತ್ತಾ ಇರುವ ದಿನಗಳನ್ನು ಕಳೆಯುತ್ತಿರುವ ಇದೇ ಬದುಕಿನ ಮತ್ತೊಂದು ದಿನವಷ್ಟೆ ನಾಳೆಯೂ.. ಆದರೂ ಬರೆಯಬೇಕು.

ಈಗಾ ಅರ್ಥವಾಗಿದೆ ಬರೆಯಬೇಕು ಅಲ್ಲಿಂದಲೇ ಬದುಕಿಗೆ ಹೊಸ ಅರ್ಥಬರುವುದು. ಯೋಚನೆಗಳಿಗೆ, ಮಾತುಗಳಿಗೆ  ಜಾಗವೊಂದು ಬೇಕು ನಂಗೆ ಅದು "ಅಭಿಸಾರಿಕೆ". 

ಸಿಹಿ ನೆನಪುಗಳನ್ನು ಕೂಡಿಡಬೇಕಂತೆ ಆದರೆ, ಕೂಡಿಟ್ಟಿದ್ದು ಕೊಳೆಯುತ್ತದೆ. ಅಂದರೆ ಹರಿಬಿಡಬೇಕು, ಹರಿದಲೆಲ್ಲ ಹಸಿರು, ಹರಿದಷ್ಟು ಬದುಕು ತಿಳಿಯಾಗುತ್ತದೆ.

ಪ್ರೀತಿಗಿಂತ ಆಸ್ತಿಯಿಲ್ಲ, ಎಂಬುದು ಹೃದಯದ ಮಾತು. ಬದುಕಿನ ಕನಸುಗಳಿಗೆ, ಪ್ರೀತಿಗಿಂತ ದುಡ್ಡು ಬೇಕು ಎನ್ನುವುದು ಕಂಡುಕೊಂಡ ಸತ್ಯದ ಮಾತು.

ಆತ್ಮ ಶುದ್ಧಿಯೇ ಬದುಕಿನ ಗುರುತು ಎಂದ ಮನಸಿಗೆ ಬದುಕ ತತ್ವಗಳ ಹುಡುಕಾಟ.ಕನಸೆಂದರೆ ಹಠ ಗೆಲುವೆಂದರೆ ಬದುಕು ಎಂದು ಸಾಲು ಸಾಲು ಬರೆದ ಹುಚ್ಚಿಗೆ ಸೋಲುಗಳ ಕೈ ತುತ್ತು.

ಯಾರದೋ ಪ್ರೀತಿಯ ಮಾತುಗಳಿಗೆ ರೋಮಾಂಚನಗೊಂಡವಳಿಗೆ, ಪ್ರೀತಿಯ ಸವಿ ಹರಿಸಲು ಮಡಿಲಲ್ಲೊಂದು ನಗುವ ಹಸುಳೆ.

ಸುಮ್ಮನೆ ಬೇಸರವಾದಾಗಲೂ ಒಂದಷ್ಟು ದೂರ ನಡೆಯುತ್ತಿದ್ದವಳಿಗೆ ಸುಖಾಸುಮ್ಮನೆ ಕುಳಿತರೂ ಮೈಮನಕ್ಕೆಲ್ಲಾ ನೋವು.

೩೦ ಮುಗಿಯುತ್ತಿದ್ದಂತೆ ಬದುಕು ಎಷ್ಟೆಲ್ಲಾ ಬದಲಾಯಿತು ಏನೆಲ್ಲವನ್ನು ಕಲಿಸಿತು. ಮತ್ತೊಂದು ಪುಟಕ್ಕೆ ತೆರೆದುಕೊಳ್ಳುವ ಮುನ್ನ ನನ್ನೊಳಗೆ, ಒಂದಷ್ಟು ಆತ್ಮ ವಿಮರ್ಶೆಯಾಗಬೇಕು, ನನ್ನ ಜೊತೆ ನಾನು ಕೂತು ಮಾತನಾಡಬೇಕು, ನನ್ನ ಮಡಿಲಲ್ಲಿ ಮಲಗಿ ಒಂದಷ್ಟು ಸಾಂತ್ವನದ ಸವಿ‌ಸವಿಯಬೇಕು.  

೩೦ ವರುಷಗಳಿಂದಲೂ ನನ್ನೊಡನೆ ಬಂದ ಒಳಗಿನ ಮಗುವನ್ನು, ಹರೆಯದ ಕೂಸನ್ನು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಹೊರಟ ಹುಚ್ಚು ಹುಡುಗಿಯನ್ನ, ಒಲವ ಹೊಳೆಯಲ್ಲಿ ತಂಪಾದ ತಾಯಿಯನ್ನ ಒಮ್ಮೆ ನೊಡಿಕೊಳ್ಳಬೇಕು.

ನಗುವಿನ‌ ಹುಡುಕಾಟದ 
ಅದೇ ಅಭಿಸಾರಿಕೆ