Saturday, 7 December 2019

ಬದುಕ ಹುಚ್ಚಿಗೆ....

ಮನಸೇ,

ತೀರಾ ಸಾಮಾನ್ಯ ದಿನಗಳು. ಹೊಸದು ಎಂಬುದು ಏನೂ ಇಲ್ಲ. ಬದುಕುವ ಹುಚ್ಚಿಗೆ ಅಂಟಿಕೊಂಡ ನನಸಾಗದ ಆದರೂ ಬದಲಾಗದ ಕೆಲ ಕನಸುಗಳು. ಸೂರ್ಯ ಚಂದ್ರರಿಗೆ ವ್ಯತ್ಯಾಸವೇ ತಿಳಿಯದ ದಿನಗಳು. ಮಹಾನಗರಿಯ ಮಾಯಾವಿ ಬದುಕು.

ಬದುಕು‌ ಓಡು ಎಂದು ಕಾಲಿನ‌ ಮೇಲೆ ಹೊಡೆದು ಓಡಿಸುತ್ತದೆ. ಗುರಿ ತಲುಪಿತೆಂದು ನಿಲ್ಲಬೇಕಾ? ಇಲ್ಲ ನಡೆಯುವುದು ಇನ್ನೂ ಇದೆ ಎಂದು ಓಡಬೇಕಾ?ಗೊತ್ತಿಲ್ಲ!! ಹೊಸ ಮೈಲಿಗಲ್ಲುಗಳ ತಲುಪಬೇಕು, ಪ್ರತೀದಿನ. ಹಾಗೆಂದು ದಾಟಿದ ಕಲ್ಲುಗಳ ಎಣಿಸಬಾರದು.ಯಾಕೆಂದರೆ, ನಿಂಗೆ ದಾಟಿದ ಪ್ರತಿ ಕಲ್ಲೂ ಒಂದು ಪುಟ್ಟ ಗೆಲುವು, ದಾಟಬೇಕಿರುವ ದಾರಿಗೆ ಸ್ಪೂರ್ತಿ. ಪ್ರಪಂಚಕ್ಕೆ ನಿನ್ನ ಲೆಕ್ಕ ನಿನ್ನ ಅಹಂನ ಪ್ರತಿರೂಪ. 

ಎಲ್ಲೋ ಕಳೆದು ಹೋಗಿದ್ದೇನೆ ಅನಿಸುತ್ತದೆ‌ ನಂಗೆ. ಯಾವ ದ್ವಂದ್ವಗಳೂ ನನ್ನ ಕಾಡುತ್ತಿಲ್ಲ. ಇದು ಮನಸಿನ ಆಳಸಿತನವಾ ಇಲ್ಲ ಬದುಕು ಕಲಿಸಿದ ಪ್ರೌಢಿಮೆಯ ಗೊತ್ತಿಲ್ಲ. ಯಾರೋ ಏನನ್ನೂ ಯೋಚಿಸುತ್ತಿಲ್ಲ ಖಾಲಿಯಾಗಿದ್ದೇನೆ ಎಂದರೆ ನಂಬಿಕೆಯೇ ಇರಲಿಲ್ಲ. ನಾನು‌ ಅಂತದ್ದೊಂದು ಖಾಲಿತನ‌ವ ಅನುಭವಿಸದ ಹೊರತು. 

ನಂಗೆ ನನ್ನ ಬದುಕು ನನ್ನ ಕನಸುಗಳೇ ಇಂದಿಗೂ ಒಂದು ಜೀವಂತಿಕೆಯನ್ನ ತುಂಬುವುದು. ಯಾವಾಗಲೂ ಯಾರದೋ ಬದುಕೇ ಸ್ಪೂರ್ತಿಯಾಗಬೇಕು ಎಂದೇನು‌ ಇಲ್ಲ. ನಾನು‌ ನಿನ್ನೆಗಿಂತ ಇಂದು ಹೆಚ್ಚು ಸದೃಢವಾಗಿದ್ದೇನೆ ಎಂದಾದರೆ, ಅದೇ ನನ್ನ ನಾಳೆಗಳ ಬದುಕಿಸುತ್ತದೆ. 

ಯಾರದೋ ಎದುರು ನನ್ನ ನಾನು ಸಮರ್ಥಿಸಿಕೊಳ್ಳಲಾರದೇ ಅಸಹಾಯಕನಾದ ದಿನದಿಂದ ಅಲ್ಲೆ ಗೆದ್ದು ಹೇಳಿದವರಿಗೆ ಗೆಲುವನ್ನ ಉತ್ತರವಾಗಿಕೊಟ್ಟ ನನ್ನದೇ ಬದುಕು ನಂಗೆ ಯಾರದೋ ಬದುಕಿನ ಕಥೆ ಕಟ್ಟಿಕೊಡುವುದಕ್ಕಿಂತ ಹೆಚ್ಚು ಆತ್ಮವಿಶ್ವಾಸ ತುಂಬಿಕೊಡುತ್ತದೆ.

ಗೊತ್ತು, ಇದೇನು ನೊಬೆಲ್ ಪಾರಿತೋಷಕದ ಸಾಧನೆಯಲ್ಲ ಆದರೆ ನಿನ್ನ ನಿನ್ನೆಗಳ ಗೆಲ್ಲುವುದೇ ಗೆಲುವು ಅಲ್ಲವಾ?? ಕಳೆದ ದಿನಕ್ಕಿಂತ ಬರಲಿರುವ ದಿನಕ್ಕೆ ಪರಿಪೂರ್ಣನಾಗುವ ಪ್ರಯತ್ನವೇ ಅಲ್ಲವಾ  ಪ್ರಗತಿ ಎಂದರೆ.

ಹೇ,
ನಿನ್ನನ್ನು ಅಹಂಭಾವವೊಂದು ಬದುಕಿಸುತ್ತದೆ ಎಂದಾದರೆ ಅದರಿಂದ ಬೇರೆಯವರಿಗೆ ತೊಂದರೆ ಇಲ್ಲ ಎಂದಾದರೆ ಅದು ತಪ್ಪಲ್ಲ. ಅಹಂ ಎನ್ನುವುದು ನೋಡುವವರ ಭಾವ ಅಷ್ಟೇ. ನಿನ್ನ ಅಂತರಂಗವ ಶುದ್ಧಿಯಾಗಿಸುವ ನಿನ್ನಾತ್ಮದ ಬೆಳಕ ಬೆಳಗಿಸುವ ಎಲ್ಲವೂ ಸಮ್ಮತವೇ.

ಅಭಿಸಾರಿಕೆ ನೀನು ನಿನ್ನ ದಾರಿಗೆ ಕೊನೆಯಿಲ್ಲ. ಕೊನೆಯಿದೆ ಎಂದರೆ ನೀನು ದಾರಿಯ ಬದಲಿಸುವ ಕಾಲ ಬಂದಿದೆ ಎಂದೇ ಅರ್ಥ. ನಡೆಯುತ್ತಲೇ ಇರು ಬಯಲು ನಿನಗಾಗಿ ತೆರೆದುಕೊಂಡೀತು...