Monday, 13 August 2018

ಗೆಲುವಿನ‌ ಹಸಿವಿಗೆ ಒಂದಷ್ಟು...

ಎಲ್ಲ ದಿನಗಳು ಒಂದೇ ರೀತಿ ಇರುವುದಿಲ್ಲ ಈ ನಡುವೆ ಪ್ರತಿ ಕ್ಷಣಕ್ಕೂ ಒಂದೊಂದು ಬಣ್ಣ. ಸ್ವಂತಿಕೆ ಇದೆ ಆದರೆ  ಸ್ವಂತಕ್ಕೆ ಸಮಯವಿಲ್ಲ ಹಾಗಂತ ಸಮಯ ಪರಾವಲಂಬಿಯಲ್ಲ ಸಂಪೂರ್ಣ ಸ್ವಂತಂತ್ರ. ತೀರಾ ತಿರುಗುವ ಬಣ್ಣದ ಕಮಾನಿನಂತಾಗಿದ್ದೇನೆ ಇಂತದೇ  ಬಣ್ಣವ....  ಹೇಳಲಾರೆ ಆದರೆ ಬರಿಯ ತಿರುಗಾಟ, ಗಟ್ಟಿ ನೆಲೆಯಿಲ್ಲ. ನೆಲೆಯ ದಕ್ಕಿಸಿಕೊಳ್ಳುವ ಬಯಕೆ ಇದೆಯಾ ಇದ್ದಂತಿಲ್ಲ. ಇದು ಗೊಂದಲವಾ? ಆನಂದವಾ? ಗೊತ್ತಿಲ್ಲ. ಸುಮ್ಮನೆ ಕಾಲಕ್ಕೆ ಉತ್ತರಿಸಲು ಬಿಡಬೇಕು. ಹೂವಿಗೆ ಹಣ್ಣಾಗುವ ಯೋಗ್ಯತೆ ಇದ್ದರೆ  ಆಗದೆ ಇದ್ದಿತಾ? ಯಾವ ಭ್ರಮರದ ಹಂಗಿಲ್ಲ.

ಕೆಲವೊಮ್ಮೆ ಸುನಾಮಿಯ ಭಯ ಕೆಲವೊಮ್ಮೆ ಬರಗಾಲದ ಬರ. ಯಾವುದಕ್ಕೂ ಹೊಂದಿಕೊಳ್ಳಲಾರೆ ಹಾಗಂತ ವಿಮುಖತೆಯೂ ಇಲ್ಲ. ಸುಮ್ಮನೆ ಕೂರಬೇಕು ಮನವೆಂಬ   ಕಡಲ ಮಧ್ಯದಲ್ಲಿ. ಯಾಕೋ ಮನಸು ಕಡಲ ದಡವಾಗುವುದು ಇಷ್ಟವಿಲ್ಲ. ದಡವೆಂದರೆ ಅಲೆಯೆಸೆದ ಕಸದ ಬಯಲು. ನಾನು ಕಡಲ ಮಧ್ಯ ಕೂರಬೇಕು ಯಾವ ಕಸದ ವಾಸನೆಯೂ ತಾಗಬಾರದು ಆದರೆ ಅಲೆಯ ಭಾವ ಕಾಡಬೇಕು.

ಮನಸೇ....

ನಕಾರಾತ್ಮಕತೆ ಎಂಬುದು ಕೀಟಾಣುವಿನಂತೆ. ಕಾಣದಂತೆ ನಿನ್ನ ಕೊಲ್ಲುತ್ತಲೇ ಇರುತ್ತದೆ. ಯಾರಿಗೂ ನಿನ್ನ ಮೇಲೆ ನಕಾರಾತ್ಮಕತೆಯ ದಾಳಿ ಮಾಡಲು ಬಿಡಬೇಡ. ಬದುಕು ಒಂದೇ ಅದಕ್ಕೆ ನೀನೇ ದೊರೆ. ದೊರೆಯ ಮಾತೇ  ಅಂತಿಮ ರಾಜ್ಯದಲ್ಲಿ, ನಿನ್ನ ನಿರ್ಧಾರಗಳಿಗೆ-ಕನಸುಗಳಿಗೆ ಯಾರದೂ ಒಪ್ಪಿಗೆಯ ಹಸ್ತಾಕ್ಷರ ಬೇಕಿಲ್ಲ. ಬದುಕ ಬರೆಯ ಹೊರಟ ನಿಂಗೆ ಕೊನೆಯ ಸಹಿಯನ್ನು ಮಾಡುವ ಅಧಿಕಾರ ಮತ್ತು ಹಕ್ಕು ಎರಡೂ ಇದೆ. ಮನಸನ್ನು ನ್ಯಾಯಾಲದಲ್ಲಿ ನಿಲ್ಲಿಸಿ ಪ್ರಶ್ನಿಸೋ ಹಕ್ಕು ನ್ಯಾಯಾಧೀಶನಿಗೆ ಮಾತ್ರ ಮತ್ತು ನೀನೆ ಬರೆದ ಈ ಕಾನೂನಿನಲ್ಲಿ ನಿನ್ನದೇ ಕಾಯ್ದೆ ಕೂಡ. ಹುಳವೊಂದು ಹೂವ ತಿಂದು ಬಿಡುತ್ತದೆ ಎಂದು ತಿಳಿದ ದಿನ ಹುಳವನ್ನು ಹುಡುಕಿ ಕೊಲ್ಲಬೇಕು. ಹೂವನ್ನಲ್ಲ. ನಗುವ ಹೂವಿಗೆ ಇನ್ನೂ ಕನಸಿದೆ ಆದರೆ ಹೂವ ನಗುವ ಕೊಲ್ಲುವ ಹುಳುವಿಗಲ್ಲ.
ಹಾಗೆಯೇ ನಕಾರಾತ್ಮಕತೆಗೂ... ಮತ್ತದನ್ನ ಹುಟ್ಟು ಹಾಕುವ ಮನಸುಗಳಿಗೂ.

ಗೆಲುವಿನ ಕನಸು ಎಲ್ಲರಿಗೂ ಇದೆ. ಎಲ್ಲರಿಗೂ ಗೆಲುವುಬೇಕು, ಗೆಲುವನ್ನು ನೀರಿನಂತೆ ಕುಡಿದುಬಿಡುವ ಹಂಬಲ  ಮತ್ತು ಹಸಿವು. ಆದರೆ  ಮನವೇ, ಅರ್ಥೈಸಿಕೊ ಗೆಲುವೆಂಬುದು ಸಾಗರ ಅದೂ ಸಿಹಿನೀರ ಸಾಗರ ಇದ ಸೇರಲು ತುಂಬಾ ದೂರ ಚಲಿಸಬೇಕು. ಮಳೆಯ ನೀರಿನೊಂದಿಗೆ ಸೇರಿ ತುಂಬಾ ಅಬ್ಬರಿಸಿ ಕಡಲ ಸೇರುವ ತವಕಬೇಡ ನಿಂಗೆ. ಸುಡು ಬೇಸಿಗೆಯ ಬಿಸಿ ಧರೆಯ ಹಸಿವ  ಇಂಗಿಸಿ ನಿನ್ನದೇ ಆತ್ಮಶಕ್ತಿಯೊಟ್ಟಿಗೆ ನಿಲ್ಲದೆ ಹರಿದು ಸಾಗರವ ಅಪ್ಪಿಕೋ. ಯಾರ ಕರುಣೆಯ ಕಾಲುವೆಯೂ ಬೇಡ ಹಾಗೆಯೇ ಯಾರ ಕಿಚ್ಚಿನ ತಡೆ ಗೋಡೆಯೂ.

 ನೀರೆಂದರೆ ಹಂಬಲಿಸುವ ಭುವಿಯೂ ಒಂದು ಮಟ್ಟಿಗೆ ದಾಹ ತೀರಿದ ದಿನ ನೀರನ್ನು  ಹರಿಯಲು  ಬಿಟ್ಟು ಸುಮ್ಮನೆ ಬೆತ್ತಲಾಗಿ ನಿಂತು ಬಿಡುತ್ತದೆ. ಹಾಗೆಯೇ ನಿನ್ನ ಹಿಡಿಯ ಬಂದ ಬಂಧಗಳೂ. ಒಂದು ಸಮಯದ ನಂತರ ಎಲ್ಲ ತೀವ್ರತೆಯೂ ಕಡಿಮೆಯಾಗುತ್ತದೆ ಮತ್ತು ಅಂದು ನಿನ್ನ ಹರಿವಿನ ದಾರಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಸುಮ್ಮನೇ ನಗುತ್ತ ಎಲ್ಲವನ್ನೂ ನೋಡುತ್ತಿರು ನಿನ್ನ ಬದುಕ ದಾರಿ ಅದಾಗೇ ಸೃಷ್ಟಿಯಾದೀತು.


ಬದುಕು ಎಲ್ಲರ ಬಯಕೆ ಮತ್ತು ಬಯಕೆಗಳು ಎಲ್ಲರ ಬದುಕು, ನದಿಯ ಕನಸು ಸಾಗರವ ಸೇರುವುದೇ ಹೊರತು ಸಾಗರವೆಂದು ನದಿಯಾಗ ಬಯಸುವುದಿಲ್ಲ. ಎಲ್ಲವನ್ನೂ ನನ್ನ ಕಣ್ಣುಗಳಲ್ಲಿ ನೋಡುವುದು ಸುಖ ಬೇರೆಯವರ ಕಣ್ಣಾಗಿ ಇರುವುದೇ ಕಷ್ಟ. ಅದಕ್ಕೆ ನದಿ ಹರಿಯುತ್ತದೆ ಮತ್ತು ಅಲೆ  ಜಿಗಿಯುತ್ತದೆ.