ಓ ಅರಿವೆಂಬ ಕಡಲೇ ನಿನ್ನೊಡಲಲ್ಲಿ ಮುಳುಗುವ ಬಯಕೆಯ ನದಿ ನಾನು...
ಸುಲಭವಲ್ಲ ಅರಿವಲ್ಲಿ ಮುಳುಗುವುದು. ಆದರೆ ಅಸಾಧ್ಯವೆಂಬುದು ನಿಜವೊ ಸುಳ್ಳೊ ನಿರ್ಧರಿಸುವವನೂ ನಾನೆ ತಾನೆ. ಶುದ್ಧ ನದಿಯಾಗಿ ಕಡಲ ಸೇರುವುದೆಂದರೆ ಹಾದಿಕಂಡಂತೆ ಹರಿವುದಲ್ಲ ದಾರಿ ಸೃಷ್ಟಿಸಿಕೊಂಡು ಹರಿಯಬೇಕು. ಅಂದರೆ ನನ್ನಲ್ಲಿ ನಿರಂತರ ಹರಿವಿರಬೇಕು - ನಿಲ್ಲದ ಸೊಲದ ಸಾಯದ ಹರಿವಿನ ಹಸಿವಿರಬೇಕು....
ಮನವೇ ,
ನಿನ್ನ ನಗುವಿನ ದಿನಗಳ ಉತ್ಪಾದಕ ನೀನೇ ಎಂಬುದು ನಿಜವಾದರೆ ನೀನೊಬ್ಬ ಅಪ್ಪಟ ಕಿವುಡನಾಗಬೇಕು - ನಿನ್ನೊಳಗಣ ಹಸಿವ ಕೊಲ್ಲುವ ಹೊರಗಿನ ಹಾಳು ಗದ್ದಲಗಳಿಗೆ. ನೀನೊಬ್ಬ ಮೂಗನಾಗಬೇಕು - ದಾರಿ ಬದಿಯ ಕುಹಕದ ಪ್ರಶ್ನೆಗಳಿಗೆ. ಕುರುಡನಾಗಿಬಿಡಬೇಕು - ತಡೆಗೋಡೆಯಾಗಬಲ್ಲ ದಾರಿಗಡ್ಡ ನಿಂತು ಸೆಳೆಯುವ ಬಣ್ಣದ ಆಟಗಳಿಗೆ. ಯಾರಿಗೂ ನಿನ್ನನ್ನ ನಿನ್ನ ನಡೆಯನ್ನು ವಿವರಿಸುವ ಅಗತ್ಯವಿಲ್ಲ - ನಿನ್ನ ಹರಿವಿನೆಡೆಗೆ ನಿಂಗೆ ಸ್ಪಷ್ಟ ನೋಟವಿರುವವರೆಗೆ. ಕಣ್ಣಿರುವುದು ಇಂದನ್ನು ಈ ಕ್ಷಣವನ್ನು ಅರಿಯಲು, ಬರುವ ಭವ್ಯ ಭವಿಷ್ಯದ ಕನಸ ಕಟ್ಟಲು. ಹೊರತು ಸತ್ತ ನಿನ್ನೆಗಳಿಗೆ ಅತ್ತು ಕೊರಗಲಲ್ಲ. ಬಾಗಿಲಿಲ್ಲದ ಭದ್ರ ಗೊಡೆ ಕಟ್ಟು - ಎಂಥಹ ನೋವಿನ ಬಿರುಗಾಳಿಯೂ ನಿನ್ನ ಸೋಕದಂತೆ. ನೀನೇ ಒಡೆದು ಕರೆಯದ ಹೊರತು ಯಾವ ನೋವೂ ನಿನ್ನ ಸೋಕದು ಎಂಬ ಸತ್ಯ ನಿನಗೆ ಅರಿವಾಗುವಂತೆ. ಯಾವುದು ನಿನ್ನೊಳಗೆ ಗೆಲುವ ಕಟ್ಟಲು ಯೋಗ್ಯವೋ ಅದನ್ನು ಉಪಯೋಗಿಸು. ನಿರುಪಯೋಗವಾದದನ್ನ ನಿನ್ನಿಂದ ಕಿತ್ತು ಹಾಕು. ಆಗ ನೀನೂ ಹಗುರಾಗಲು ಸಾಧ್ಯ. ಭಾರ ಹೊತ್ತು ನಡೆಯಲಾರದೆ ಬೀಳುವ ಹುಚ್ಚುತನವೇಕೆ?
ಬಿದ್ದು ಬಿದ್ದು ಬುದ್ಧಿ ಬೆಳೆಯುತ್ತದೆ ಎಂಬುದು ಮಾತಿಗಷ್ಟೇ. ಬೀಳದೆಯೂ ಬುದ್ದಿ ಕಲಿಯಬಹುದು. ಯಾವುದೂ ಅಭ್ಯಾಸವಾಗಬಾರದು. ಬೀಳುವುದು, ಸೋಲುವುದು ಯಾವುದೂ. ಜಾರದೆಯೇ ಬೆಳೆಯುವುದೂ ಬೆಳವಣಿಗೆಯೇ. ಇನ್ನೂ ಚಂದದ ಬೆಳವಣಿಗೆ ಅದು. ಕಡಿದರೆ ಮರ ಹೊಸದಾಗಿ ಚಿಗುರುತ್ತದೆ ನಿಜ. ಹೊಸತನವೂ ಒಂದು ದಿನ ಹಳೆಯದಾಗುತ್ತದೆ. ಹೊಸ ಚಿಗುರಾಗಿ ಬೆಳೆಯುವುದಕಿಂತ ಬಲಿಷ್ಟವಾಗಿ ಬೆಳೆಯುವುದು ಮುಖ್ಯವಾಗಲಿ. ಅಂತೆಯೂ ಕೈಮೀರಿದ ಘಳಿಗೆಯಲಿ ಮುರಿದದ್ದೇ ಆದರೆ ಆಗ ಹೊಸದಾಗಿ ಚಿಗುರುವ ಬಗ್ಗೆ ಯೋಚಿಸಬಹುದು. ಆಗಲೂ ಇಂದಿನ ಬಲಿಷ್ಠ ಬೇರಿನ ಬೆಂಬಲ ಇದ್ದೇ ಇರುತ್ತೆ. ಯಾವುದಕ್ಕೇ ಇರಲಿ ಅಂಟಿಕೊಳ್ಳಬೇಡ, ಅಂಟಿಕೊಂಡರೆ ಅಂಟಿಕೊಂಡಷ್ಟು ದಿನ ಬಿಡಿಸಿಕೊಳ್ಳುವ ಬಯಕೆ. ಬಿಡಿಸಿಕೊಂಡರೆ ಬಿಡಿಸಿಕೊಂಡ ಅಂಟಿನದೆ ಕನವರಿಕೆ. ಆಮೆಯಂತೆ ಬದುಕಿಬಿಡು ನೀರಲ್ಲಿದ್ದರೂ ಒದ್ದೆಯಾಗದೆ ಬಿಸಿಲಲ್ಲಿದ್ದರೂ ಬೇಯದೆ ಯಾವುದಕ್ಕೂ ಅಂಟದೆ ನಡೆಯುತ್ತಲೇ ಇರು ಬದುಕು ಬಯಲಾಗಲಿ.
ಬೆಟ್ಟಕ್ಕಿಂತ ಬಯಲಲ್ಲಿ ಆಯ್ಕೆ ಜಾಸ್ತಿ ಎತ್ತನೊಡಿದರೂ ದಾರಿಯೇ. ಯಾವ ದಿಕ್ಕಿಗೆ ನಡೆಯಬೇಕು ಎಂಬುದ ನಡೆಯಲು ಪ್ರಾರಂಭಿಸುವ ಮೊದಲು ಯೋಚಿಸು ಒಮ್ಮೆ. ಒಮ್ಮೆ ಆಯ್ದುಕೊಂಡೆಯೋ ಆಮೇಲೆ ದಾಟಿದ ತಿರುವುಗಳ ನೆನಪೂ ಬೇಡ. ಆಯಾಸ ಎಂಬುದು ದೇಹದ ಅನಿಸಿಕೆ ಮಾತ್ರ. ಮನೊವೇಗಕ್ಕೆ ಮಾಪಕವಿಲ್ಲ. ನಿಲ್ಲದೇ ನಡೆಯುತ್ತಿರು ನಿನ್ನಿಷ್ಟದ ದಾರಿ ಸೃಷ್ಟಿಯಾದೀತು.
ನಿಂತವರ ನೋಡಲೂಬೇಡ, ನೀ ನಿಂತಲ್ಲೇ ನಿಂತು ಇಂಗಿಬಿಡುತ್ತೀಯ. ಬೆಳೆವಣಿಗೆ ಎಂದರೆ ಇಂಗುವುದಲ್ಲ ಹರಿಯುವುದು. ಹಾಗಂತ ಹರಿಯುವ ಹುಚ್ಚಿಗೆ ಬಿದ್ದು ಆತ್ಮ ಶುದ್ಧಿಯ ಜೊತೆ ರಾಜಿಯಾಗಬೇಡ - ರಾಡಿಯಾಗಿಬಿಡುತ್ತೀಯ. ನಿನ್ನ ಬದಲಾಯಿಸುವ ಅವಕಾಶವನ್ನು ಯಾರಿಗೂ ಕೊಡಬೇಡ. ಅದು ನಿನ್ನ ಹಕ್ಕು ಮಾತ್ರ. ಅವರಿವರ ತಪ್ಪು ಒಪ್ಪುಗಳು ನಿನ್ನ ದಾರಿಗೆ ಇನ್ನಷ್ಟು ಸ್ಪಷ್ಟತೆ ತರುವುದೆನಿಸಿದರೆ ಆಗ ಒಂದು ಕಡೆಗಣ್ಣ ನೋಟ ಸಾಕು ಆ ಕಡೆಗೆ. ಆದರೆ ಅವರಿವರ ದಾರಿಯೇ ನಿನ್ನದೂ ಆಗದಿರಲಿ. ನಡೆಯಲ್ಲಿ ಸಮತೆಯಿರಲಿ, ನಿರಂತರತೆಯಿರಲಿ, ನಿನಗೆ ಸಂತೃಪ್ತಿಯಿರಲಿ. ಸಾವಿರದ ನಡೆ ನಿನ್ನದಾಗಲಿ. ಸೋಲೂ ನಿನಗೆ ಸೋತೀತು. ಬೆಟ್ಟವೂ ಬಯಲಾದೀತು. ತನ್ನೊಳಗೆ ಸೇರಲು ಸಮುದ್ರವೂ ಮತ್ತೆ ಮತ್ತೆ ಕರೆತಂದೀತು.
ನಿನಗಿಂತ ವಿಶಾಲವಾದದ್ದೇನನ್ನೋ ಸೇರಿಕೊಂಡೆ ಎಂದರೆ ಅದೇ ಸಮುದ್ರವೆಂದು ಭ್ರಮಿಸಿ ನಿಂತುಬಿಡಬೇಡ. ಗೆಲುವಿನ ವೈರಿ ಒಂದಿದೆ ಅದೇ ಸಂತೃಪ್ತಿ. ಹೊಟ್ಟೆ ತುಂಬಿದವ ಹೊದ್ದು ಮಲಗುತ್ತಾನೆ. ಹಸಿವಿನ ಖಾಯಿಲೆಗೆ ಬಿದ್ದವ ನಡೆಯುತ್ತಲೇ ಇರುತ್ತಾನೆ. ನಿಂತವಗೆ, ನಿಲ್ಲುವ ಬಯಕೆ ಇರುವವನಿಗೆ ಇದು ಸುಖ. ನಿಲ್ಲುವ ಅವಶ್ಯಕತೆಯೇ ಇಲ್ಲದ ನಿಂಗೆ ಈ ಸುಖದ ಅವಶ್ಯಕತೆಯೂ ಇಲ್ಲ. ಕಾರಣ ನೀ ಸೇರಬೇಕಿರುವುದು ಕಡಲಿನ ಒಡಲನ್ನ - ದಡವನ್ನಲ್ಲ. ಕಡಲನ್ನು ಸೇರಿ ಆಳಕ್ಕಿಳಿಯಬೇಕು ಅರಿವಿನೊಡಲಲ್ಲಿ ನೀನೇ ಕಡಲಾಗಿ ಮಾರ್ಪಾಡಾಗಬೇಕು. ಇಷ್ಟಕ್ಕೆ ಪಯಣ ಮುಗಿಯುವುದಿಲ್ಲ. ಅಲ್ಲಿಂದಲೂ ಹೊಸ ಪಯಣ ಹುಟ್ಟುತ್ತದೆ. ಒಡಲ ಆಳಕಿಳಿಯುವ ದಾರಿ ಸೃಷ್ಟಿಸಿಕೊ. ನಡೆಯುತ್ತಲಿರು ಮತ್ತೂ ಆಳಕ್ಕೆ ಬದುಕೂ ಕಡಲಾಗಲಿ. ಅಶುದ್ದತೆಯನ್ನು ದಡಕ್ಕೆಸೆದು ಶುಭ್ರವಾಗಲಿ.
ಕೊನೆಯಿರದ ದಾರಿಯಿದು - ಇದಕ್ಕೆ ಆರಂಭ ಮಾತ್ರವಿದೆ. ಸಿಗಬಾರದ, ಸಿಗಲಾರದ ಕೊನೆಯನ್ನು ಹುಡುಕಿ ಹೊರಡು ಕಳೆದುಕೊಂಡವನಂತೆ. ಕಳೆದುಕೊಂಡವ ಮಾತ್ರ ಹುಡುಕುವುದು - ಹುಡುಕಿದವಗೆ ಮಾತ್ರ ತನ್ನನ್ನು ತಾನು ಪಡೆದುಕೊಳ್ಳುವ ಅವಕಾಶ ಸಿಗುವುದು.
ಅಲೆಯುತ್ತಲೇ ಇರು ನಿಂಗೆ ನೀ ಸಂಪೂರ್ಣ ಸಿಕ್ಕುವವರೆಗೆ ನಿಂಗೆ ನೀನಾಗಿ ದಕ್ಕುವವರೆಗೆ. ಸುಸ್ತೆನಿಸಿದಾಗಲೊಮ್ಮೆ ಸತ್ತಂತೆ ನಟಿಸುವ ಕನಸುಗಳಿಗೆ ಆತ್ಮ ಶಕ್ತಿಯ ನೀರು ಸುರಿದು ಎಚ್ಚರಿಸು. ಗೆಲ್ಲಲೇ ಬೇಕು ಬದುಕನ್ನು ಒಂದು ಬಾರಿಯಾದರೂ - ಒಂದೇ ಒಂದು ಕ್ಷಣದ ಮಟ್ಟಿಗಾದರೂ.