ನಿನ್ನನ್ನೆಲ್ಲೋ ಕಳೆದುಕೊಂಡು ಬಿಟ್ಟೆನೇನೋ ಎಂಬ ಭಯ ಕಾಡುತ್ತಿದೆ ಕಾರಣವಿಲ್ಲದೆ ದೂರ ಮಾಡುತ್ತಿರುವ ನೀನು ಮತ್ತು ಹತ್ತಿರ ಬರಬೇಕೆಂದಿದ್ದರೂ ಬರಲಾರದೆ ನನ್ನನ್ನೇ ವಂಚಿಸಿಕೊಳ್ಳುತ್ತಿರುವ ನಾನು. ನಾನೆಂದು ನನಗೇ ನಾನು ಮೋಸ ಮಾಡಿಕೊಂಡವಳಲ್ಲ. ನನಗೆ ಬೇಕಿರುವ ನನ್ನದು ಎಂದಾದ ಎಲ್ಲ ಮತ್ತು ಎಲ್ಲರ ಪ್ರೀತಿಯನ್ನು ಬಾಚಿ - ಬಳಿದುಕೊಳ್ಳಬಲ್ಲ ಮಹಾನ್ ಸ್ವಾರ್ಥಿ ನಾನು. ಆದರೂ, ನಿನ್ನೊಬ್ಬನ ಒಲವಲ್ಲಿ ಮಾತ್ರ ಆ ಮಟ್ಟಿನ ನಿಷ್ಟುರತೆ, ಸ್ವಾರ್ಥ ಮನೋಭಾವನೆ
ಸಾಧ್ಯವಾಗುತ್ತಿಲ್ಲ.
ನಿನ್ನ ಹೆಗಲ ಮೇಲೆ ತಲೆ ಇಟ್ಟು ಪ್ರಪಂಚದ ಪರಿವೆಯೇ ಇಲ್ಲದೆ ಮಲಗುವುದು ಬದುಕಿನ ದೊಡ್ಡ ಸಂಭ್ರಮ. ನಿನಗೆ ನಾನೇನು ಅಲ್ಲದೆ ಇರಬಹುದು ಆದರೂ ನಂಗೆ ನೀನೆಂದರೆ ಒಂದು ವಿಶಿಷ್ಟವಾದ ಮಧುರ ಭಾವ. ನನ್ನೀ ಪ್ರೀತಿನ ಹೇಳಬೇಕೆಂಬ ಬಯಕೆ ಸ್ವಲ್ಪವೂ ಇಲ್ಲ. ‘ನನ್ನ ಪ್ರೀತಿ ನನ್ನದು ನನ್ನ ಹಾಡು ನನ್ನದು’ ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುವ ಹುಡುಗಿ ನಾನು. ಹಾಗಂತ, ನಿನ್ನ ಸಾಂಗತ್ಯವೇ ಇಲ್ಲದೆ ಬದುಕಿ ಬಿಡುತ್ತೇನೆ ಎಂಬ ಹುಚ್ಚು ಹೊರಟು ಹೋಗಿದೆ. ನನ್ನೊಳಗೆ ತುಂಬಾ ಸುಸ್ತಾಗಿ ನಿನ್ನೆಡೆಗೆ ಬಂದಾಗ ನಿನ್ನದೊಂದು ಪ್ರೀತಿಯ ಸ್ಪರ್ಶಬೇಕು ನಂಗೆ.
ನನ್ನೊಳಗಿನ ನೀ ಎಂದರೆ ಇಂದಿಗೂ, ತಿರುವುಗಳ ಕಲ್ಪನೆಯೂ ಇಲ್ಲದ ದಾರಿಯಲ್ಲಿ
ಕಿರುಬೆರಳ ಹಿಡಿದು ಸುಮ್ಮನೆ ಅದೆಷ್ಟೋ ದೂರ ನಡೆಸಿದ ಬರಿಗೈ ಫಕೀರ, ಬೆಳ್ಳಂಬೆಳಗ್ಗೆ
ನನ್ನೊಲವ ರಾಗದ ಆಲಾಪಕ್ಕೆ ಸಾಥಿಯಾಗುವ ಷಡ್ಜ ಭಾವ, ರಾತ್ರಿಗಳಲ್ಲಿ ಚಂದ್ರನಿಗೂ ಹೊಟ್ಟೆ
ಕಿಚ್ಚಾಗುವಷ್ಟು ಗಟ್ಟಿ ಬಿಗಿದಪ್ಪಿ ಲಾಲಿ ಹಾಡ ಹಾಡಿ ಕನಸುಗಳ ಕಟ್ಟಿಕೊಟ್ಟ ಬೆಳದಿಂಗಳ
ಚೆಲುವ, ನಿನ್ನೆಡೆಗಿನ ಹುಚ್ಚು ಕನಸುಗಳ ಜಾತ್ರೆಯಲ್ಲಿ ನನ್ನೊಳಗೆ ನಾ ಕಳೆದು ಹೋದಾಗ
"ಮಿಂಚಿ ಮುಳುಗುತಿಹ ನಶ್ವರನೆದೆಯಲಿ ಶಾಶ್ವತನೆಂದರೆ ನೀನೆ " ಎಂದು ಪಿಸುಗುಟ್ಟಿ
ಭರವಸೆಯ ಬೆಳಕತಂದ ಒಲವ ಧ್ರುವತಾರೆ, ಸುಮ್ಮನೆ ಪ್ರೀತಿ ಬಂದಿತೆಂದು ಮುದ್ದಿಸಿ ಹೋಗುತ್ತಿದ್ದ
ಪ್ರೀತಿಯ ಬಕಾಸುರ, ಇನ್ನೂ ಏನೇನೋ........
ಅದೆಲ್ಲಿಂದ ತರುತ್ತಿಯೋ ಹಸಿರು ಹಸಿರು ನೆನಪುಗಳನ್ನು ಬದುಕ ಕಟ್ಟಿಕೊಡಲಾರದವನೇ......
ನಿನ್ನ ಪ್ರೀತಿಯ ನೆನಪು ಅದೆಷ್ಟಿದ್ದರೂ ಸಂತೃಪ್ತಳಲ್ಲ ನಾನು. ನನ್ನೊಳಗಿನ ಪ್ರೀತಿಯ ದಾಹ ಸಮುದ್ರದಂಥ ದೊಡ್ಡ ಮಟ್ಟಿನದು, ಅದಷ್ಟು ಸುಲಭಕ್ಕೆ ಇಂಗುವುದಿಲ್ಲ. ಹಾಗೆಯೇ, ಇನ್ನೊಂದು ಕಡೆ ಸಮುದ್ರದಷ್ಟು ದೊಡ್ಡ ಪ್ರೀತಿಗೆ ಪರಿತಪಿಸಿದರೆ ಎಲ್ಲಿ ಪುಟ್ಟ ಕೊಳದ ನೀರಿನಷ್ಟು ಪ್ರೀತಿಯೂ ಇಲ್ಲದಂತಾಗಿ ಬಿಟ್ಟೀತು ಎಂಬ ಭಯ. ನಿನ್ನನ್ನೆಂದು ಸಮುದ್ರವಾಗು ಸಮುದ್ರದಂಥ ಪ್ರೀತಿ ನೀಡು ಎಂದು ಕೇಳಲಿಲ್ಲ ನಾನು. ಗೊತ್ತು, ಸಮುದ್ರ ಎಂದು ಯಾರ ದಾಹವನ್ನು ತಣಿಸದು ಎಂದು ಅದೂ ಈ ಪರಿಯ ದಾಹವನ್ನು. ಅದಕ್ಕೆ ಕೊಳವಾಗು, ಕೊಳದ ನೀರಿನಷ್ಟೇ ಪ್ರೀತಿಯನ್ನಾದರೂ ನೀಡು ಎಂದರೆ ಅದಕ್ಕೂ ಒಪ್ಪದ ನಿನ್ನೀ ಉತ್ತರದ ಮೇಲೆ ಯಾಕೋ ಮುನಿಸು......
ನಾನೆಂತಹ ಮಳ್ಳು ಹುಡುಗಿ ಎಂದರೆ ನಾಳೆಗಳ ಪರಿವೆಯೇ ಇಲ್ಲದೆ ನನ್ನೆಲ್ಲ ನಾಳೆಗಳಿಗೆ ನೀನು ಬೇಕು ಎಂಬ ಸಣ್ಣ ಆಸೆಯ ತೀವ್ರತೆಯನ್ನೂ ನಿನಗೆ ತಿಳಿಯಕೊಡದೆ, ನನ್ನ ನಾಳೆಗಳಿಗೆ ನಿನ್ನೊಡನೆಯ ನೆನಪ ಪೇರಿಸುತ್ತ, ಈ ಕ್ಷಣ ನಿನ್ನಾಸರೆಯ ನೆನಪಲ್ಲಿ, ನಿನ್ನ ಪ್ರೀತಿಯ ತಂಪಲ್ಲಿ ನಾನೇ ಪರಮ ಸುಖಿ ಎಂದು ಬದುಕುತ್ತಿದ್ದೇನೆ. ನನ್ನ ಈ ಮಟ್ಟಿನ ಹುಚ್ಚು ಪ್ರೀತಿಯ ಸಣ್ಣ ಪರಿವೆಯೂ ಇಲ್ಲದೆ ನೀ ಕೊಟ್ಟ ಆ ಅಪರಿಮಿತ ಪ್ರೀತಿಯಲ್ಲಿ ಮತ್ತೆ ಮತ್ತೆ ಪುಳಕಿತನಾಗುತ್ತಾ ನನ್ನೀ ಬಾಳನ್ನು ಧನ್ಯವಾಗಿಸಿಕೊಂಡಿದ್ದೇನೆ...

ಬಹುಷಃ ನಿನ್ನಲ್ಲೂ ಎಲ್ಲೋ
ಭಯ ಕಾಡುತ್ತಿರಬಹುದು ಕೊಳದ ನೀರಿನಷ್ಟು ಪ್ರೀತಿ ಕೇಳುತ್ತಿರುವವಳೆಲ್ಲಿ ಸಮುದ್ರದ ಹಠಕ್ಕೆ ಬಿದ್ದುಬಿಟ್ಟರೆ ಎಂದು ಮೊದಲೇ ಸಮುದ್ರದಂಥ ಪ್ರೀತಿಯ ದಾಹವಿರುವ ಹುಡುಗಿ ಸುಲಭವೇನಲ್ಲ ಅಂತಹ ದಾಹ ತಣಿಸುವುದು. ಅದಕ್ಕೆ, ನನ್ನೊಳಗಿನ ದಾಹಕ್ಕೆ ಕೊಳದ ನೀರಾಗಲೂ ಮನಸ್ಸುಮಾಡದೆ ಇದ್ದಾಂಗೆ ಇರಲಿ ಎಂದು ಸುಮ್ಮನಾದೆಯೇನೋ?
ಆಗೊಮ್ಮೆ ಈಗೊಮ್ಮೆ ಜೊತೆ ನಡೆವ ನೀನು, ನನ್ನೊಲವ ಭಾವಗೀತೆ, ಜೊತೆಗೆ ನನ್ನೊಳಗೆ ನೀನೇ ಮೀಟಿದ ಪ್ರೀತಿಯ ಆಲಾಪ ಇಷ್ಟೇ ಸಾಕು. ಇದರಿಂದ ಪೂರ್ಣ ಪ್ರಮಾಣದ ದಾಹ ತಣಿದೀತೆಂಬ ಭ್ರಮೆ ನನಗೂ ಇಲ್ಲ. ನಿನ್ನ ಪ್ರೀತಿಯಿಂದ ನನ್ನಲ್ಲೊಂದು ಸಂತೃಪ್ತಿಯ ಭಾವ ಮೂಡಿದರೆ ಆ ಮಟ್ಟಿನ ಸಾರ್ಥಕತೆ ನನ್ನೀ ಬದುಕಿನದ್ದು. ಅದಕ್ಕೆ, ಬೊಗಸೆಯಷ್ಟಾದರೂ ನಿನ್ನೊಲವ ಸಿಹಿ ನೀರ ನೀಡಿ ಇಂಗಿಸೋ ಈ ಅಭಿಸಾರಿಕೆಯನ್ನ......