Monday, 23 June 2025

ನನ್ನೊಳಗೊಂದು ಬೆಳಕು ಮೂಡಲಿ

ಹೇ ಮನವೇ,

ಬಿದ್ದಲ್ಲಿಂದ ಎದ್ದು ಬಂದೆ ಎನ್ನುವಷ್ಟರಲ್ಲಿ ಮತ್ತೆ ಬಿದ್ದಂತೆ ಭಾಸವಾಗುವ ಸೋಲಿನಲ್ಲಿ ಗೆಲುವ ಹುಡುಕುತ್ತ ಗೆಲುವಿನಲ್ಲಿ ಒಲವ ಹುಡುಕುತ್ತ, ನಿದ್ದೆ ಬರದ ರಾತ್ರಿಯಲ್ಲಿ ಹಗಲನ್ನು ದಣಿದ ಹಗಲಿನಲ್ಲಿ ರಾತ್ರಿಯನ್ನೂ, ಹುಡುಕುತ್ತ ಕಳೆಯುತ್ತಿರುವ ಬದುಕಿನಲ್ಲಿ. ಎಷ್ಟೊಂದು ಕಥೆಗಳು ಒಲವ ಬವಣೆಗಳು. 

 ಒಂದಕ್ಕೊಂದು ಸಿಗಲಾರದ ಸಿಕ್ಕಾಗ ಜೊತೆ ಇರಲಾರದ ಅತೀ ಮಳೆಯಾದರೂ ನೊವು ಪಡುವ ಮತ್ತು ಮಳೆಯಾಗದಿದ್ದರೆ ಬರಡಾಗುವ ಇದ್ದದ್ದನ್ನು ಬಿಡಲಾರದ ಮತ್ತು ಬಿಟ್ಟಿದ್ದಕ್ಕೆ ಕಾರಣವ ಹುಡುಕಲಾರದ ವಿರಹದ ಕವಿತೆ ಬರೆವ ಒಲವ ಮಳೆ ಮತ್ತು ಬರಡು ಭೂಮಿ.

ನಕ್ಕು ನಕ್ಕು ಮುಗಿದು, ಕಣ್ಣೀರಾಗುವ ದುಃಖದಲ್ಲಿ ಮುಳುಗಿ ಏಳಲಾಗದೆ, ಮುಳಗಲಾರದೆ ಉಸಿರ ಕಟ್ಟಿ ಉಸಿರ ಚೆಲ್ಲುವ ಅಸಹಾಯಕನ‌ ಭಾವದಲ್ಲಿ.

ಬದುಕುವ ಆಸೆಯ ಜೊತೆಗೆ ಬಂದಿಕ್ಕುವ ಭಯದಲ್ಲಿ, ಭಯದ ಹಿಂದೆಯೆ ನಿಂತು ನಗುವ ಬದುಕ‌ ಹಸಿವಲ್ಲಿ, ಒಮ್ಮೆಯಾದರೂ ಬದುಕಿಯೇ ಸತ್ತುಬಿಡುವ ಎನ್ನುವ ಮನದ ಬಿಳುಪಿನಲ್ಲಿ

ಮತ್ತೆ ಹಸಿರಾಗಲಿ ಕನಸುಗಳ ಕತ್ತಲಲ್ಲಿ ಬೆಳಕ ಉದಯವಾಗಲಿ ನನ್ನ ಮನದ ಅಂಗಳದಲ್ಲಿ.

Sunday, 6 April 2025

ಮೊದಲ ಸಲ ಬದುಕಿರುವೆ ಅನಿಸುತಿದೆ....!

ನನಗೆ,


ದಿನ ಒಂದು ಕಳೆದರೆ ಬದುಕಿನ ಮತ್ತೊಂದು ವರುಷ ಸಂಪೂರ್ಣ ಕಳೆದಂತೆ. ದಿನ ಕಳೆದಂತೆ ಕ್ಷಣ ಜಾರಿದಂತೆ ಬದುಕಿನ ಆಯಸ್ಸು ಕಡಿಮೆ ಆದರೂ ಅದನ್ನು ಲೆಕ್ಕದಲ್ಲಿ ಹುಡುಕುವುದು ವರುಷಗಳಲ್ಲೇ. 


ಬದುಕಿನ ಮತ್ತು ಬದುಕುವ ಮೂಲ ಆಶಯ ಇದುವರೆಗೂ ಗುರುತಿಸಿಕೊಳ್ಳುವುದು  ಪ್ರೀತಿಗಳಿಸುವುದು ಮಾತ್ರವೇ ಆಗಿತ್ತು ಬಹುಷಃ ಪ್ರತಿ ಮನುಷ್ಯನ ಬಯಕೆಯು ಅದೇ. ಆ ಗುರುತಿಸಿಕೊಳ್ಳುವುದು ಹುಟ್ಟಿನಿಂದ ಪ್ರಾರಂಭವಾಗಿ ನಂತರ ಅವರವರ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ ಮತ್ತು ಗುರುತಿಸಿಕೊಳ್ಳುವ ಬಯಕೆ ಸಂಪೂರ್ಣವಾಗದಿದ್ದರೆ ಕಡೆಗೆ ಬದುಕೇ ಬೇರೆಯವರ ಗಮನ ಸೆಳೆಯಲು ಆಗಿಬಿಡುತ್ತದೆ. 

ಇಂತದ್ದೇ ಒಂದು ಬದುಕು ಬದುಕುತ್ತಿದ್ದೇನೆ ಎಂದು ಅರ್ಥವಾಗಿದ್ದೆ ಈಗೊಂದು ವರುಷದ ಹಿಂದೆ, ಆಗಿನಿಂದ ನಂಗೊಸ್ಕರ ಕೇವಲ ನನ್ನ ಖುಷಿಗೋಸ್ಕರ ಮಾತ್ರ ಬದುಕುವ ಪ್ರಯತ್ನದಲ್ಲಿದ್ದೇನೆ. ಯಾರೇನೋ ಹೇಳುತ್ತಾರೆ, ಯಾರೋ ಸಿಟ್ಟಾಗುತ್ತಾರೆ ಮತ್ಯಾರೋ ಬಿಟ್ಟು ಹೋಗುತ್ತಾರೆ ಇನ್ಯಾರೋ ದೂರ ಮಾಡುತ್ತಾರೆ ಅಬ್ಬಾ ಎಷ್ಟೊಂದು ಭಯಗಳು! ಬದುಕಿಗೆ, ಎಲ್ಲವನ್ನು ಗೆದ್ದಿದ್ದೇನೆ ಅಂತಲ್ಲ ಆದರೆ ಇದು ಯಾಕೆ ಹೀಗೆ ಮತ್ತು ಇದರ ಕಾರಣ ನನ್ನೊಳಗೆ ಏನು ಎಂದು ಗುರುತಿಸಿಕೊಳ್ಳುವುದ  ಕಲಿತಿದ್ದೇನೆ. 

ಇಲ್ಲಿ ಬರೆದಿದ್ದೇನೆ ಅಷ್ಟೇ ನಾನು ನಂಗಾಗಿ ನನ್ನ ಬದುಕು ಅಂತೆಲ್ಲ, ಆದರೆ ನಿಜದ ನನ್ನ ಬದುಕನ್ನು ಬದುಕಲು ಈಗೊಂದು ಸ್ವಲ್ಪ ದಿನದಲ್ಲಿ ಪ್ರಾರಂಭಿಸಿದ್ದೇನೆ. 

ಖುಷಿಗಳೇ ಬದುಕಲ್ಲಿ ಅಂತೇನು ಇಲ್ಲ ಆದರೆ ನೋವಿಗೂ ನಲಿವಿಗೂ ಮೂಲ ಕಾರಣ ಹುಡುಕುವ ಮತ್ತು ಸಿಕ್ಕ ಕಾರಣಗಳನ್ನು ಒಪ್ಪಿಕೊಳ್ಳುವ ದಾರಿ ಸಿಕ್ಕಿದೆ. 


ತೀರಾ ಯಾರ ಬದುಕೂ ಸಮತೆಯಲ್ಲಿ ಇರುವುದಿಲ್ಲ ಆದರೆ ನಾವುಗಳು ನೋವುಗಳನೆಲ್ಲ ಬದಿಗಿಟ್ಟು ಮೇಲಿನಿಂದ ಒಂದು ಚಂದದ ಅಂಗಿ ಹಾಕಿ "ನಾನು ಖುಷಿ" ಎನ್ನುವ ಸುಳ್ಳು ಬದುಕನ್ನು ಬದುಕುತ್ತ ಅದನ್ನೇ ನಂಬುತ್ತಾ ಬದುಕುತ್ತೇವೆ, ಎಲ್ಲೋ ಏನೋ ಆದರೆ ನನ್ನ ಹಣೆಬರಹ ಇದು ಎನ್ನುತ್ತಾ ಮುಂದೆ ಹೋಗುವುದು. ಆ ಭಾವಗಳು ಹೊರಬರುವುದು ಯಾವುದೊ ರೂಪದಲ್ಲಿ ಕಡೆಗೆ ಯಾಕೆ ಎನ್ನುವ ಕಲ್ಪನೆಯೂ ಇರುವುದಿಲ್ಲ.  

ಯಾಕೆ ಹಣೆಬರಹ ಆಗಿದ್ದನ್ನೇ ಮತ್ತೆ ಮತ್ತೆ ಆಗುವಂತೆ ಮಾಡುತ್ತದೆ ಎಂದರೆ ಅದು ನಮ್ಮ ಬಾಲ್ಯ ನಮಗೆ ಕೊಟ್ಟ ಬರಹ ಆಗಿರುತ್ತದೆ. 


ಮನಸೇ,

ನಿನ್ನ ದಾರಿಯ ಹುಡುಕಿ-ಕೊಳ್ಳುವ ಮತ್ತು ಅದರಂತೆ ಬದುಕುವ ಎಲ್ಲ ಹಕ್ಕು ಮತ್ತು ಸ್ವಾತಂತ್ರ್ಯ ಎರಡು ನಿನಗಿದೆ.  ಈ ದಾರಿಯಲ್ಲಿ ತುಂಬಾ ಕಲ್ಲು ಮುಳ್ಳುಗಳಿವೆ ಎಷ್ಟೋ ಕವಲುಗಳು ಬರಬಹುದು ಎಷ್ಟೋ  ಪರಿಚಿತರು ಅಪರಿಚಿತರಾಗಬಹುದು. ಇನ್ಯಾರೋ ಏನು ಅಲ್ಲದ ಪ್ರೀತಿ ಒಂದು ನಿನ್ನ ತಬ್ಬಲೂಬಹುದು. ಎಲ್ಲವನ್ನು ಸ್ವೀಕರಿಸು ಎಲ್ಲವು ನಿನ್ನ ದಾರಿಯಷ್ಟೇ. ನಿನ್ನ ಗುರಿ ಬೇರೆಯದೇ ಮತ್ತದು ಕೇವಲ ನಿನ್ನದು, ಅಲ್ಲಿ ನಿನ್ನ ಎಲ್ಲ ಖುಷಿಗಳಿಗೂ, ಮಗುವಿನಂತೆ ಮಾತನಾಡಲು, ಬದುಕಲು, ಕೋಪಮಾಡಿಕೊಳ್ಳಲು ಮನ ಬಂದಂತೆ ನಗಲು ಎಲ್ಲದಕ್ಕೂ ಸ್ವಾತಂತ್ರ್ಯವಿದೆ. ಮತ್ತು ಇದು ನಿಂಗೆ ನೀನು ಕೊಡುವ ದೊಡ್ಡ ಉಡುಗೊರೆ. 
ಸಮತೆ ಎಂಬುದಿಲ್ಲ ಭಾವಗಳ ಜೀವಂತಿಕೆಯೇ ಬದುಕು, ಮುಖವಾಡ ಹೊತ್ತು ಯಾರನ್ನೂ ಗೆಲ್ಲಬೇಕಿಲ್ಲ, ಯಾರನ್ನೊ ಮೆಚ್ಚಿಸಲು ನಿನ್ನದಲ್ಲದ ಬದುಕ ಹೊತ್ತಿದ್ದು ಸಾಕಿನ್ನು.

ನಗುವೇ ಇರಬೇಕು ಅಂತೇನು ಇಲ್ಲ ಆದರೆ ಬೀಳುವ ಕಣ್ಣೀರು ಮತ್ತು ನಗುವ ನಗು ಎರಡು ನನ್ನದು ಮತ್ತು ನನಗಾಗೇ ಇರಲಿ ಅದೊಂದೇ ಆಶಯ. 
ಜೀವಂತಿಕೆಯ ಬದುಕು ನಿನ್ನದಾಗಲಿ.